ಬಾಗಲಕೋಟೆ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಕಾರಗೊಂಡಿದ್ದು, ಇದೇ ಅಕ್ಟೋಬರ್ 15ರಿಂದ ತರಗತಿಗಳು ಆರಂಭವಾಗಲಿವೆ ಎಂದು ಶಾಸಕ ಉಮೇಶ ಎಚ್. ಮೇಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವನಗರ ಯೂನಿಟ್-1ರ ಸೆಕ್ಟರ್ ನಂ.1 ಮತ್ತು 13ರಲ್ಲಿ ಸುಮಾರು 44 ಎಕರೆ ಜಮೀನನ್ನು ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸ್ವಂತ ಕಟ್ಟಡ ಪೂರ್ಣಗೊಳ್ಳುವವರೆಗೆ ನವನಗರ ಯೂನಿಟ್-2ರ ಸೆಕ್ಟರ್ ನಂ.88ರಲ್ಲಿರುವ ಬಿಟಿಡಿಎ ಕಟ್ಟಡದಲ್ಲಿ ಕಾಲೇಜು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 100 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ತಲಾ 35 ವಿದ್ಯಾರ್ಥಿಗಳಂತೆ ಮೂರು ಬ್ಯಾಚ್‌ಗಳಲ್ಲಿ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ತರಗತಿ ಕೊಠಡಿ, ಸಂಶೋಧನಾ ಕೊಠಡಿಗಳು ಹಾಗೂ ವಿವಿಧ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಮುಖ್ಯ ಕಟ್ಟಡದ ಆಧುನೀಕರಣ ಕಾಮಗಾರಿಯನ್ನು ಪರಿಶೀಲಿಸಲಾಗಿದ್ದು, ಅಕ್ಟೋಬರ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜಿನ ಆರಂಭಕ್ಕಾಗಿ ದಕ್ಷ ಅಧಿಕಾರಿ ಡಾ. ಬಿ.ಎಚ್ ನಾರಾಯಣಿ ವಿಶೇಷಾಧಿಕಾರಿಯಾಗಿ ನೇಮಕವಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ.
“ಗ್ರಾಮೀಣ ಹಾಗೂ ಪ್ರತಿಭಾವಂತ ಮಕ್ಕಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಬೇಕೆಂಬ ತಮ್ಮ ತಂದೆ ದಿ. ಎಚ್.ವೈ ಮೇಟಿ ಅವರ ದೂರದೃಷ್ಟಿಯ ಯೋಜನೆ ಇದೀಗ ಸಾಕಾರಗೊಳ್ಳುತ್ತಿದ್ದು, ಅಕ್ಟೋಬರ್‌ನಿಂದ ಕಾಲೇಜು ಅಧಿಕೃತವಾಗಿ ಆರಂಭವಾಗುತ್ತಿರುವುದು ಸಂತಸ ತಂದಿದೆ” ಎಂದು ಶಾಸಕ ಉಮೇಶ ಮೇಟಿ ಹೇಳಿದ್ದಾರೆ.
ನವನಗರ ಯೂನಿಟ್-2ರ ಸೆಕ್ಟರ್ ನಂ.88ರಲ್ಲಿ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳೊಂದಿಗೆ ಶಾಸಕ ಉಮೇಶ ಮೇಟಿ ಚರ್ಚೆ ನಡೆಸಿದರು. ಹೊಸದಾಗಿ ಆರಂಭಗೊಳ್ಳುತ್ತಿರುವ ಕಾಲೇಜಿನಲ್ಲಿ ಮೊದಲ ಬ್ಯಾಚ್ ವಿದ್ಯಾರ್ಥಿಗಳಾಗಿ ಪ್ರವೇಶ ದೊರೆತಿರುವುದು ಸಂತಸ ತಂದಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಡಾ. ನಾರಾಯಣಿ ಹಾಗೂ ಪಕ್ಷದ ಪ್ರಮುಖರೊಂದಿಗೆ ಕಟ್ಟಡದ ಆಧುನೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಮೇಟಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ರಜಾಕ ಬೇನೂರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಬರ್ ಮುಲ್ಲಾ, ಎಸ್.ಎನ್ ರಾಂಪುರ, ಪ್ರಮುಖರಾದ ಹೊಳಬಸು ಶೆಟ್ಟರ, ಮಲ್ಲಿಕಾರ್ಜುನ ಮೇಟಿ, ನಿಂಗಣ್ಣ ಕೋಟಿ, ನಾರಾಯಣ ದೇಸಾಯಿ, ಗಣಪತಸಾ ದಾನಿ, ಶಿವಕುಮಾರ ನಂದಿಕೋಲಮಠ, ದ್ಯಾಮಣ್ಣ ಗಾಳಿ, ಹಾಜಿಸಾಬ ದಂಡಿನ, ಶಂಕರ ಮಂಕಣಿ, ದೇವಿಪ್ರಸಾದ ನಿಂಬಲಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




