ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮೇಲಿನ ನೂತನ ನಿರ್ಬಂಧ ಮಸೂದೆಗೆ ಸಹಿ ಹಾಕಿದ್ದು, ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ. 100ರಷ್ಟು ದಂಡದ ಸುಂಕ ವಿಧಿಸುವ ಅಧಿಕಾರವನ್ನು ಇದು ಅಮೆರಿಕ ಆಡಳಿತಕ್ಕೆ ನೀಡಿದೆ. ಇದರಿಂದಾಗಿ ರಷ್ಯಾದ ಪ್ರಮುಖ ತೈಲ ಗ್ರಾಹಕ ರಾಷ್ಟ್ರಗಳಾದ ಭಾರತ ಹಾಗೂ ಚೀನಾ ಭಾರಿ ಆರ್ಥಿಕ ಹೊರೆ ಎದುರಿಸುವ ಆತಂಕ ನಿರ್ಮಾಣವಾಗಿದೆ.
ಈ ಕಾಯ್ದೆಯನ್ವಯ, ರಷ್ಯಾದ ಕಚ್ಚಾತೈಲ ಅಥವಾ ಅನಿಲ ಆಮದು ಮಾಡಿಕೊಳ್ಳುವ ಅಗ್ರ ಐದು ರಾಷ್ಟ್ರಗಳಿಂದ ಬರುವ ಸರಕುಗಳ ಮೇಲೆ 30 ದಿನಗಳೊಳಗೆ ಶೇ. 100ರಷ್ಟು ಸುಂಕ ವಿಧಿಸಲು ಟ್ರಂಪ್‌ಗೆ ಅವಕಾಶವಿದೆ. ರಷ್ಯಾಗೆ ನಿರ್ಬಂಧಗಳಿಂದ ನುಣುಚಿಕೊಳ್ಳಲು ನೆರವಾಗುವ ಅಥವಾ ಹೊಸದಾಗಿ ತೈಲ ಖರೀದಿಸುವ ರಾಷ್ಟ್ರಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಪಟ್ಟಿಯಲ್ಲಿ ಯಾವುದೇ ದೇಶಗಳ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸದ ಕಾರಣ, ಯಾರ ಮೇಲೆ ಸುಂಕ ವಿಧಿಸಬೇಕೆಂಬುದನ್ನು ನಿರ್ಧರಿಸುವ ವಿವೇಚನಾಧಿಕಾರ ಟ್ರಂಪ್ ಆಡಳಿತಕ್ಕಿದೆ.
ಅಮೆರಿಕ ಕಾಂಗ್ರೆಸ್ ಅಂಗೀಕರಿಸಿರುವ ಈ ಮಸೂದೆಯು ರಷ್ಯಾದ ಇಂಧನ, ರಕ್ಷಣಾ ವಲಯ ಮತ್ತು ನಿರ್ಬಂಧ ಮೀರಿ ತೈಲ ಸಾಗಿಸುವ ಅದರ ‘ನೆರಳು ಹಡಗುಗಳ’ (shadow fleet) ಮೇಲೆ ಗುರಿಯಿಟ್ಟಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸುಂಕ ಮನ್ನಾ ಮಾಡುವ ವಿಶೇಷ ಅಧಿಕಾರವನ್ನೂ ಇದು ಅಧ್ಯಕ್ಷರಿಗೆ ನೀಡಿದೆ. ಚೀನಾ ಅಧ್ಯಕ್ಷರೊಂದಿಗಿನ ಮುಂಬರುವ ಭೇಟಿಯ ವೇಳೆ ಟ್ರಂಪ್‌ಗೆ ಹೆಚ್ಚಿನ ಚೌಕಾಸಿ ಶಕ್ತಿ ಒದಗಿಸಲು ಇದನ್ನು ತ್ವರಿತವಾಗಿ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.
ಯಾವ ದೇಶಗಳ ಮೇಲೆ ಈ ಸುಂಕ ಪ್ರಯೋಗವಾಗಲಿದೆ ಎಂಬ ಅನಿಶ್ಚಿತತೆ ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದೆ. ಭಾರತ, ಜಪಾನ್, ಬ್ರೆಜಿಲ್ ಹಾಗೂ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇದರ ಬಲೆಗೆ ಬೀಳುವ ಸಾಧ್ಯತೆಯಿದೆ. ಅಮೆರಿಕದ ಈ ನೂತನ ಸುಂಕ ನೀತಿಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಭಾರತ ಎಚ್ಚರಿಸಿದರೆ, ಅಂತಾರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲದ ಇಂತಹ ಏಕಪಕ್ಷೀಯ ಅಧಿಕಾರ ವ್ಯಾಪ್ತಿಯನ್ನು ಚೀನಾ ತೀವ್ರವಾಗಿ ವಿರೋಧಿಸಿದೆ.
ತೈಲ ಆಮದು ರಾಷ್ಟ್ರಗಳ ಮೇಲೆ ಕಠಿಣ ಸುಂಕ ವಿಧಿಸಿದರೆ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿ, ಬೆಲೆ ಏರಿಕೆ ಹಾಗೂ ಹಣದುಬ್ಬರಕ್ಕೆ ಕಾರಣವಾಗಬಹುದು. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಹುದೆಂಬ ಕಾರಣಕ್ಕೆ, ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿಸಲು ತಕ್ಷಣವೇ ಈ ಸುಂಕ ವಿಧಿಸಲು ಟ್ರಂಪ್ ಹಿಂದೇಟು ಹಾಕುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2025ರ ಜನವರಿಯಲ್ಲಿ ಮರಳಿ ಅಧಿಕಾರಕ್ಕೇರಿದ ನಂತರ ಟ್ರಂಪ್ 80ಕ್ಕೂ ಹೆಚ್ಚು ದೇಶಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ್ದರು. ಆದರೆ ಅಮೆರಿಕದ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಪ್ರಸ್ತುತ ಹೊಸ ಕಾಯ್ದೆಯ ಮೂಲಕ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕದ ಕಾಂಗ್ರೆಸ್ ನೇರವಾಗಿ ಅಧ್ಯಕ್ಷರಿಗೆ ನೀಡಿರುವುದರಿಂದ, ಈ ಬಾರಿ ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದು ಕಷ್ಟಕರ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.




