ರಾಜಕೀಯ ರ‍್ಯಾಲಿಗಳಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರದ ತಾಯಂದಿರ ಕಣ್ಣೀರು ಕಾಣಿಸಲಿಲ್ಲ. ನಾಗರಿಕರ ರಕ್ಷಣೆಗಿಂತ ಚುನಾವಣಾ ಗೆಲುವು ಮತ್ತು ಧ್ರುವೀಕರಣದ ರಾಜಕಾರಣವೇ ಮುಖ್ಯವಾದಾಗ ದೇಶದ ಒಂದು ರಾಜ್ಯ ಹೇಗೆ ಹಿಂಸಾಚಾರದ ಬೀಡಾಗಬಹುದು ಎಂಬುದಕ್ಕೆ ಮಣಿಪುರವೇ ಸಾಕ್ಷಿ.
ಈಶಾನ್ಯ ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಮಣಿಪುರವೂ ಒಂದು. ಈಶಾನ್ಯ ಭಾರತದ ‘ಜ್ಯುವೆಲ್ಡ್ ಲ್ಯಾಂಡ್’ (ರತ್ನಗಳ ನಾಡು) ಎಂದೇ ಪ್ರಸಿದ್ಧವಾಗಿರುವ ಮಣಿಪುರವು ಪ್ರಕೃತಿಯ ಸೊಬಗು, ಹಚ್ಚಹಸಿರಿನ ಬೆಟ್ಟಗಳು, ಮತ್ತು ವಿಶಿಷ್ಟ ಸಂಸ್ಕೃತಿಯಿಂದಾಗಿ ಪ್ರವಾಸಿಗರ ಸ್ವರ್ಗ. ಆದರೆ ಕಳೆದ ಮೂರು ವರ್ಷಗಳಿಂದ ಮಣಿಪುರ ನಿರಂತರವಾಗಿ ಹಿಂಸಾಚಾರದ ಜ್ವಾಲೆಯಲ್ಲಿ ಬೇಯುತ್ತಿದೆ.
ಈ ಹಿಂಸಾಚಾರವು ಬರೀ ಎರಡು ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವಲ್ಲ. ಬದಲಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಆಡಳಿತಾತ್ಮಕ ವೈಫಲ್ಯ ಮತ್ತು ‘ಒಡೆದು ಆಳುವ’ ರಾಜಕೀಯದ ದಟ್ಟ ನೆರಳು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿಯ ರಾಜಕೀಯದಾಟವು ಸಾಮಾನ್ಯ ಜನರ ಬದುಕನ್ನು ನರಕವಾಗಿಸಿದೆ.
ಇದನ್ನು ಓದಿದ್ದೀರಾ? ಪ್ರಧಾನಿ ನರೇಂದ್ರ ಮೋದಿಯ ಮಣಿಪುರ ಭೇಟಿ ಕೇವಲ ಪ್ರಹಸನ: ಮಲ್ಲಿಕಾರ್ಜುನ ಖರ್ಗೆ
ಮಣಿಪುರದಲ್ಲಿ ಬಹುಸಂಖ್ಯಾತ ಕಣಿವೆ ಪ್ರದೇಶದ ಮೈತೇಯಿ ಮತ್ತು ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳಾದ ಕುಕಿ-ಜೋ ಹಾಗೂ ನಾಗಾ ಸಮುದಾಯಗಳ ನಡುವೆ ದಶಕಗಳಿಂದ ಭಿನ್ನಾಭಿಪ್ರಾಯಗಳಿವೆ. ಆದರೆ ಈ ಭಿನ್ನಾಭಿಪ್ರಾಯವು 250ಕ್ಕೂ ಅಧಿಕ ಮಂದಿಯ ಪ್ರಾಣವನ್ನು ಬಲಿ ಪಡೆಯುವಷ್ಟು ಮಟ್ಟಕ್ಕೆ ತಿರುಗಲು ಪ್ರಮುಖವಾಗಿ ಬಿಜೆಪಿಯ ರಾಜಕೀಯ ಪ್ರಚೋದನೆಯೇ ಕಾರಣ.
ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡುವ ಕುರಿತಾದ ಹೈಕೋರ್ಟ್ ಆದೇಶ ನೀಡಿತು. ಅದಕ್ಕೆ ರಾಜ್ಯದ ಬಿಜೆಪಿ ಸರ್ಕಾರ ತೋರಿದ ತರಾತುರಿಯ ಬೆಂಬಲವು ಬುಡಕಟ್ಟು ಸಮುದಾಯಗಳಲ್ಲಿ ತೀವ್ರ ಆತಂಕ ಮೂಡಿಸಿತು. ಈ ಹಿಂದೆಯೇ ಬುಡಕಟ್ಟು ಜನರ ವಿರುದ್ಧ ಕೈಗೊಂಡಿದ್ದ ಕೆಲವು ಒತ್ತುವರಿ ತೆರವು ಕಾರ್ಯಾಚರಣೆಗಳು ಜನಾಂಗೀಯ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿತು. ಇದರ ಬೆನ್ನಲ್ಲೇ 2023ರ ಮೇ 3ರಂದು ಬುಡಕಟ್ಟು ವಿದ್ಯಾರ್ಥಿ ಸಂಘಟನೆಯು (ATSUM) ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯು ಹಿಂಸಾಚಾರಕ್ಕೆ ತಿರುಗಿ, ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ದೊಡ್ಡ ಮಟ್ಟದ ಜನಾಂಗೀಯ ದಂಗೆ ನಡೆಯಿತು.
ಇವೆಲ್ಲವುದರ ನಡುವೆ ಗುಡ್ಡಗಾಡು ಪ್ರದೇಶಗಳಲ್ಲಿರುವ ನೈಸರ್ಗಿಕ ಸಂಪನ್ಮೂಲಗಳು ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ದಾರಿ ಮಾಡಿಕೊಡಲು ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಗಳನ್ನು ಬಿಜೆಪಿ ಸರ್ಕಾರ ನಡೆಸಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.
ಡಬಲ್ ಇಂಜಿನ್ ಸರ್ಕಾರ ಮಾಡಿದ್ದೇನು?
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಒಂದೇ ಪಕ್ಷದ (ಬಿಜೆಪಿ) ಆಡಳಿತವಿದ್ದರೆ ಅಭಿವೃದ್ಧಿ ಮತ್ತು ಭದ್ರತೆ ಸುಲಭವಾಗುತ್ತದೆ ಎಂಬ “ಡಬಲ್ ಇಂಜಿನ್ ಸರ್ಕಾರ”ದ ಘೋಷಣೆ ಮಣಿಪುರದಲ್ಲಿ ಸಂಪೂರ್ಣವಾಗಿ ಮಕಾಡೆ ಮಲಗಿದೆ. ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಅವಧಿಯಲ್ಲಿ ಜನಾಂಗೀಯ ಧ್ರುವೀಕರಣ ಹೆಚ್ಚಾಯಿತು. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯಿತು. ಇದೇ ಕಾರಣಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದರು. ಒಂದು ವರ್ಷಗಳ ಕಾಲ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವಿತ್ತು.
ಇತ್ತೀಚೆಗೆ 2026ರ ಆರಂಭದಲ್ಲಿ ಯೂಮ್ನಮ್ ಖೇಮ್ಚಂದ್ ಸಿಂಗ್ ನೇತೃತ್ವದ ಹೊಸ ಬಿಜೆಪಿ ಸರ್ಕಾರ ರಚನೆಯಾಗಿದೆ. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಮಹತ್ತರ ಬದಲಾವಣೆ ಬಂದಿಲ್ಲ. ಕೇವಲ ಮುಖಗಳು ಬದಲಾಗಿವೆಯೇ ಹೊರತು ಆಡಳಿತದ ನೀತಿಗಳು ಬದಲಾಗಿಲ್ಲ. 2026ರ ಮಣಿಪುರ ಸರ್ಕಾರದಲ್ಲಿ ಮೈತೇಯಿ ಸಮುದಾಯದವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕುಕಿ ಸಮುದಾಯದ ವಿರೋಧವಿದೆ. ಇನ್ನೊಂದೆಡೆ ತಮ್ಮ ಬೇಡಿಕೆಗಳು ಈಡೇರಿಸುವವರೆಗೂ ಸರ್ಕಾರ ರಚನೆಗೆ ನಮ್ಮ ಒಮ್ಮತವಿಲ್ಲ ಎಂದು ಸಂಘಟನೆಗಳು ಹೇಳಿವೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮಕಾಡೆ ಮಲಗಿದ ಬಿಜೆಪಿ
ಇಷ್ಟು ದೊಡ್ಡ ಮಟ್ಟದ ಮಾನವೀಯ ದುರಂತ ಸಂಭವಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಉದಾಸೀನತೆ ಅಸಮರ್ಥನೀಯ. 2023ರಲ್ಲಿ ಹಿಂಸಾಚಾರ ನಡೆದಿದ್ದರೂ ಪ್ರಧಾನಿ ಮೋದಿ ಮಾತ್ರ 2025ರವರೆಗೂ ಒಂದೇ ಒಂದು ಬಾರಿ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ, ಜನರ ನೋವಿಗೆ ಸ್ಪಂದಿಸಿರಲಿಲ್ಲ. ತುಟಿಯೂ ಬಿಚ್ಚಿರಲಿಲ್ಲ. ಈ ವಿಚಾರದಲ್ಲೇ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ರಾಜಕೀಯ ರ‍್ಯಾಲಿಗಳಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ಮೋದಿ ಅವರಿಗೆ ಮಣಿಪುರದ ತಾಯಂದಿರ ಕಣ್ಣೀರು ಕಾಣಿಸಲಿಲ್ಲ. ಹಿಂಸಾಚಾರ ಆರಂಭವಾಗಿ ಎರಡು ವರ್ಷಗಳ ನಂತರ ವಿಪಕ್ಷಗಳ ಒತ್ತಡಕ್ಕೆ ಮಣಿದು 2025ರ ಸೆಪ್ಟೆಂಬರ್ 13ರಂದು ಮೊದಲ ಬಾರಿಗೆ ಮಣಿಪುರಕ್ಕೆ ಅಧಿಕೃತ ಭೇಟಿ ನೀಡಿದ್ದರು.
ಜನರ ಮೇಲಾದ ಭೀಕರ ಪರಿಣಾಮ
ಬಿಜೆಪಿಯ ರಾಜಕೀಯ ಮತ್ತು ಸರ್ಕಾರದ ನಿಷ್ಕ್ರಿಯತೆಯು ಮಣಿಪುರದ ಪ್ರತಿ ನಾಗರಿಕನ ಬದುಕನ್ನೂ ಛಿದ್ರಗೊಳಿಸಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ ಈ ಸಂಘರ್ಷದಲ್ಲಿ 250ಕ್ಕೂ ಅಧಿಕ ಅಮಾಯಕರು ಜೀವ ಕಳೆದುಕೊಂಡಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಮಣಿಪುರವು ಪ್ರಸ್ತುತ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಮೂರು ಭಾಗಗಳಾಗಿ ಒಡೆದು ಹೋಗಿದೆ. ಕುಕಿ ಹೋಮ್‌ಲ್ಯಾಂಡ್, ನಾಗಾ ಪ್ರದೇಶ ಮತ್ತು ಮೈತೇಯಿ ಕಣಿವೆ ಎಂದು ವಿಭಜನೆಯಾಗಿದ್ದು ಸಮುದಾಯಗಳ ನಡುವೆ ಇದ್ದ ಸಾಮರಸ್ಯ ಸಂಪೂರ್ಣವಾಗಿ ಕಣ್ಮರೆಯಾಗಿದೆ.
ಸುಮಾರು 60,000ಕ್ಕೂ ಹೆಚ್ಚು ಮಂದಿ ತಮ್ಮ ಸ್ವಂತ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಪುನರ್ವಸತಿಗೆ ಸರ್ಕಾರವು ದೃಢವಾದ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅದೆಷ್ಟೋ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಇಂಟರ್ನೆಟ್‌ನ ದೀರ್ಘಾವಧಿಯ ನಿಷೇಧ, ಪದೇ ಪದೇ ಜಾರಿಯಾಗುವ ಕರ್ಫ್ಯೂಗಳು ವ್ಯಾಪಾರ-ವಹಿವಾಟನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಶಾಲಾ-ಕಾಲೇಜುಗಳು ಮುಚ್ಚಿರುವುದರಿಂದ ಒಂದು ಇಡೀ ಪೀಳಿಗೆಯ ಭವಿಷ್ಯವೇ ಕತ್ತಲಿಗೆ ತಳ್ಳಲ್ಪಟ್ಟಿದೆ.
ಇಂದು ಈ ಹಿಂಸಾಚಾರವು ಕೇವಲ ಮೈತೇಯಿ ಮತ್ತು ಕುಕಿ ಸಮುದಾಯಗಳಿಗೆ ಸೀಮಿತವಾಗಿ ಉಳಿದಿಲ್ಲ. ನಾಗಾ ಸಮುದಾಯದ ಜನರ ಅಪಹರಣ ಮತ್ತು ಕೊಲೆಗಳ ಘಟನೆಗಳು ಸಂಭವಿಸುತ್ತಿದೆ. ಇದರಿಂದಾಗಿಸಂಘರ್ಷದ ಬೆಂಕಿ ಮತ್ತಷ್ಟು ವ್ಯಾಪಿಸುತ್ತಿದೆ. ಡ್ರಗ್ಸ್ ಸಾಗಣೆಯ ಮಾರ್ಗಗಳು, ಗಡಿ ಭದ್ರತೆಯ ಲೋಪಗಳು ಮತ್ತು ಉಗ್ರಗಾಮಿ ಗುಂಪುಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸುಲಭವಾಗಿ ಸಿಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಿವಿಲ್ ಸೊಸೈಟಿ ಗುಂಪುಗಳಾದ ‘ಕೋಕೋಮಿ’ (COCOMI) ಮುಂತಾದವುಗಳು ಈಗ ಬಿಜೆಪಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಬಾಯ್ಕಾಟ್ ಘೋಷಿಸಿ ಬೀದಿಗಿಳಿದಿವೆ.
ನಾಗರಿಕರ ರಕ್ಷಣೆಗಿಂತ ಚುನಾವಣಾ ಗೆಲುವು ಮತ್ತು ಧ್ರುವೀಕರಣದ ರಾಜಕಾರಣವೇ ಮುಖ್ಯವಾದಾಗ ದೇಶದ ಒಂದು ರಾಜ್ಯ ಹೇಗೆ ಹಿಂಸಾಚಾರದ ಬೀಡಾಗಬಹುದು ಎಂಬುದಕ್ಕೆ ಮಣಿಪುರವೇ ಸಾಕ್ಷಿ. ಮಣಿಪುರಕ್ಕೆ ಈಗ ತುರ್ತಾಗಿ ಬೇಕಿರುವುದು ಕೇವಲ ಸೈನಿಕರ ನಿಯೋಜನೆಯಲ್ಲ. ಬದಲಿಗೆ ಪಕ್ಷಪಾತವಿಲ್ಲದ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ. ಸರ್ವಪಕ್ಷಗಳ ಮತ್ತು ಎಲ್ಲ ಸಮುದಾಯಗಳ ನಾಯಕರನ್ನು ಒಳಗೊಂಡ ಶಾಂತಿ ಮಾತುಕತೆ ನಡೆಸದ ಹೊರತು ಈ ಈಶಾನ್ಯದ ಸುಂದರ ಕಣಿವೆಯಲ್ಲಿ ಶಾಂತಿ ಮರುಕಳಿಸುವುದು ಅಸಾಧ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




