ಇತ್ತೀಚೆಗೆ ಬಿಡುಗಡೆಯಾದ ಪಂಚಾಯತ್ ಮತದಾರರ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೆಸರು ಇಲ್ಲದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಅವರ ಹೆಸರನ್ನು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಚುನಾವಣಾ ಅಧಿಕಾರಿಗೆ ಪತ್ರ ಬರೆಯಲಾಗಿದೆ.
ಜಿಲ್ಲಾ ಚುನಾವಣಾ ಅಧಿಕಾರಿಗೆ ಸಲ್ಲಿಸಿರುವ ಪತ್ರದಲ್ಲಿ, ಸ್ಮೃತಿ ಇರಾನಿ ಅವರ ಖಾಯಂ ನಿವಾಸವು ಮೇದನಮವಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ ಮತ್ತು ಅವರು ಇಲ್ಲಿನ ಖಾಯಂ ನಿವಾಸಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ. ಅವರ ಹೆಸರು ಈಗಾಗಲೇ ವಿಧಾನಸಭಾ ಮತ್ತು ಲೋಕಸಭೆಯ ಎಸ್‌ಐಆರ್-2026 (SIR-2026) ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದರಿಂದ, ಸ್ಥಳೀಯ ಪಂಚಾಯತ್ ಮತದಾರರ ಪಟ್ಟಿಯಲ್ಲೂ ಅವರ ಹೆಸರನ್ನು ಸೇರಿಸುವುದು ಕಾನೂನುಬದ್ಧ ಮತ್ತು ನ್ಯಾಯೋಚಿತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪ್ರಧಾನ ಬಬಿತಾ ಮಿಶ್ರಾ ಅವರು ತಮ್ಮ ಪತ್ರದಲ್ಲಿ, ಸ್ಮೃತಿ ಇರಾನಿ ಅವರ ವಾಸಸ್ಥಳ ಮತ್ತು ವಸತಿ ವಿಳಾಸವು ಮೇದನಮವಯಿ ಗ್ರಾಮ ಪಂಚಾಯತ್‌ನಲ್ಲೇ ಇರುವುದರಿಂದ, ಅವರನ್ನು ಪಂಚಾಯತ್ ಮತದಾರರ ಪಟ್ಟಿಯಲ್ಲಿ ಸೇರಿಸುವುದು ಸಂಪೂರ್ಣವಾಗಿ ನಿಯಮಸಮ್ಮತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಅಗತ್ಯ ಪರಿಶೀಲನೆ ಹಾಗೂ ತನಿಖೆಯ ನಂತರ ಅವರ ಹೆಸರನ್ನು ಪಂಚಾಯತ್ ಮತದಾರರ ಪಟ್ಟಿ-2026ರಲ್ಲಿ ಆದಷ್ಟು ಬೇಗ ದಾಖಲಿಸಬೇಕು ಎಂದು ಅವರು ಜಿಲ್ಲಾ ಚುನಾವಣಾ ಅಧಿಕಾರಿಗೆ ವಿನಂತಿಸಿದ್ದಾರೆ.
ಇದನ್ನೂ ಓದಿ: ಸುದ್ದಿ ವಿವರ | ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದರೇನು? ಭಾರತಕ್ಕೂ ಈ ಸೀಮೆಗೂ ಏನು ಸಂಬಂಧ?
ಮತ್ತೊಂದೆಡೆ, ಪ್ರಧಾನ ಪ್ರತಿನಿಧಿ ತೀರಥ್ ರಾಜ್ ಮಿಶ್ರಾ ಅವರು ಮಾತನಾಡಿ, ಪಂಚಾಯತ್ ಪ್ರದೇಶದ ಕಾಯಂ ನಿವಾಸಿಯಾಗಿರುವ ಕಾರಣ ಸ್ಮೃತಿ ಇರಾನಿ ಅವರಿಗೂ ಗ್ರಾಮ ಪಂಚಾಯತ್ ಮತದಾರರಾಗಿ ಹಕ್ಕು ಸಿಗಬೇಕು. ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಅಧ್ಯಕ್ಷ ಶುಭಾಂಶು ಶುಕ್ಲಾ ಕೂಡ ಸ್ಮೃತಿ ಇರಾನಿ ಅವರ ಹೆಸರನ್ನು ಮರು ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಸೂಕ್ತ ದಾಖಲೆಗಳ ಪರಿಶೀಲನೆಯ ನಂತರ ಅವರ ಹೆಸರನ್ನು ಕೂಡಲೇ ಸೇರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿರುವುದಾಗಿ ಶುಕ್ಲಾ ಹೇಳಿದ್ದಾರೆ. ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರ ವಿರುದ್ಧ ಅಮೇಥಿ ಕ್ಷೇತ್ರದಲ್ಲಿ ಸೋತಿದ್ದರು.





