‘ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಇನ್ನು ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ. ಆದರೆ ರಾಜಕೀಯದಲ್ಲಿ ಇರುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. 50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ನನ್ನಲ್ಲಿ ಇಲ್ಲ. ಹೀಗಾಗಿ ಚುನಾವಣೆಯಿಂದ ಸ್ಪರ್ಧಿಸುವುದಿಲ್ಲ” ಎಂದು ಹೇಳಿದರು.
“ಪೋಕ್ಸೊ ಕೇಸ್ ಎದುರಿಸುತ್ತಿರುವವರಿಗೆ ಅಭಿಮಾನೋತ್ಸವ ನಡೆಸುತ್ತಿರುವುದು ಮತ್ತು ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರೇ ಬರುತ್ತಿರುವುದು ಹಾಸ್ಯಸ್ಪದ ಹಾಗೂ ಇದೊಂದು ದುರಂತ” ಎಂದು ಬೇಸರ ಕುಟುಕಿದರು.
“ಪೋಕ್ಸೋ ಕಾಯ್ದೆ ಅಪ್ರಾಪ್ತೆಯರ ರಕ್ಷಣೆಗಾಗಿ ಜಾರಿಯಾಗಿದೆ. ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಕಾನೂನನ್ನೇ ವೀಕ್ ಮಾಡಲು ಹೊರಟಿದ್ದಾರೆ. ಇದು ಇಡೀ ಆಡಳಿತ ವ್ಯವಸ್ಥೆಗೆ ಮಸಿ ಬಳಿದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯ, ʼನಾನು ಲಾಯರ್ ಓದಿದ್ದೇನೆʼ ಅಂತಾರೆ. ಪೋಕ್ಸೊ ಕೇಸ್ ಅರ್ಥವಾಗದ ನೀವು ಯಾವ ಸೀಮೆಯ ಲಾಯರ್?” ಎಂದು ಕಿಡಿಕಾರಿದರು.
ʼಕಚೇರಿಯಲ್ಲೇ ಮಹಿಳೆ ಜೊತೆ ರಾಸಲೀಲೆʼ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಬಳಿಕ ಅಮಾನತಾಗಿದ್ದ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ವಾಪಸ್ ಪಡೆದ ಸರ್ಕಾರದ ವಿರುದ್ದ ಹರಿಹಾಯ್ದ ಇವರು, “ರಾಜ್ಯದ ಮಾನ ಕಳೆದ ರಾಮಚಂದ್ರರಾವ್ ಅಮಾನತನ್ನು ರಿವೋಕ್ ಮಾಡಿದ್ದಾರೆ. ರಿವೋಕ್ ಆಗಬೇಕಾದರೆ ಕಿಕ್ ಬ್ಯಾಕ್ ಎಷ್ಟಿರಬೇಕು ಅಲ್ಲವೇ..?” ಎಂದರು.
“ಹಣದ ವ್ಯವಹಾರವಿಲ್ಲದೇ ಇದು ಅಷ್ಟು ಸುಲಭವಾಗಿ ರಿವೋಕ್ ಆಗಿರುವುದಿಲ್ಲ. ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ? ನಮಗೆ ರಕ್ಷಣೆ ಕೊಡಬೇಕಾದ ಇಲಾಖೆಯಲ್ಲೇ ಹೀಗಾದರೇ ಹೇಗೆ? ಈಗಾಗಲೇ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಹಾಳಾಗಿವೆ. ನೀವು ಯಾವ ಸೀಮೆಯ ಅಧಿಕಾರ ನಡೆಸುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಾನವ–ಕಾಡಾನೆ ಸಂಘರ್ಷ ನಿಯಂತ್ರಣ: ಸರ್ಕಾರ ಯಶಸ್ವಿಯಾಗಿದೆ; ಸಂಸದ ಶ್ರೇಯಸ್ ಪಟೇಲ್
“ರಾಜ್ಯದ ಯುವಜನರು ಇದೆಲ್ಲವನ್ನೂ ಯೋಚಿಸಬೇಕು. ತಮಿಳುನಾಡಿನಲ್ಲಿ ಯುವಜನರು ಗೆದ್ದು ಇಡೀ ರಾಜಕೀಯ ವ್ಯವಸ್ಥೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲೂ ಕೂಡ ಯುವಜನರು ಎದ್ದೇಳಬೇಕು. ಕರ್ನಾಟಕದಲ್ಲೂ ಈ ಬದಲಾವಣೆ ತರಬೇಕು” ಎಂದು ಸಲಹೆ ನೀಡಿದರು.




