‘ಭಾರತೀಯ ಮುಸ್ಲಿಮರು ಸ್ಥಿತಿವಂತರು’; ನಿರ್ಮಲಾ ಹೇಳಿಕೆಗೆ ವಾಸ್ತವ ಚಿತ್ರಣ ತೆರೆದಿಟ್ಟ ಪತ್ರಕರ್ತರು

Date:

ಭಾರತದಲ್ಲಿ ಮುಸ್ಲಿಂ ಸಮುದಾಯದ ತಪ್ಪು ಚಿತ್ರಣವನ್ನು ಪಾಶ್ಚಾತ್ಯ ಮಾಧ್ಯಮಗಳು ಹರಡುತ್ತಿದ್ದು, ಭಾರತೀಯ ಮುಸ್ಲಿಮರು ಸಮೃದ್ಧವಾಗಿ ಬೆಳೆದಿದ್ದಾರೆ ಎನ್ನುವ ನಿರ್ಮಲಾ ಸೀತಾರಾಮನ್‌ ಹೇಳಿಕೆಗೆ ಪತ್ರಕರ್ತರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆ ವ್ಯಾಪಕವಾಗಿ ವರದಿಯಾಗಿ, ಬಲಪಂಥೀಯರಿಂದ ಪ್ರಶಂಸೆ ಗಳಿಸುತ್ತಿದೆ. ಆದರೆ, ಭಾರತೀಯ ಮುಸ್ಲಿಮರು ಸಮೃದ್ಧರಾಗಿದ್ದಾರೆಂದು ತೋರಿಸಲು ನಿರ್ಮಲಾ ಸೀತಾರಾಮನ್ ಮುಂದಿಟ್ಟಿರುವ ಮಾನದಂಡ ಇದೀಗ ಟೀಕೆಗೆ ಗುರಿಯಾಗಿದೆ. ಅವರ ವಾದ ಸುಳ್ಳೆಂದು ಭಾರತೀಯ ರಾಜಕಾರಣಿಗಳು ಮತ್ತು ಪತ್ರಕರ್ತರೇ ಟ್ವಿಟರ್ ಮೂಲಕ ಉತ್ತರ ನೀಡುತ್ತಿದ್ದಾರೆ.

ನಿರ್ಮಲಾ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಜೊತೆಗೆ ಹೋಲಿಸಿ ಮಾತನಾಡಿದ್ದು, “ಭಾರತದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ 1947ರಿಂದೀಚೆಗೆ ಏರುತ್ತಲೇ ಇದೆ. ಆದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಅಲ್ಲಿ ಅಲ್ಪಸಂಖ್ಯಾತರಿಗೆ ಕ್ಷುಲ್ಲಕ ಕಾರಣಗಳಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಧರ್ಮನಿಂದನೆ ಆರೋಪದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದರು.

ವಿಶ್ವಗುರು ಮತ್ತು ಪಾಕಿಸ್ತಾನದ ಹೋಲಿಕೆ ಪ್ರಶ್ನೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿರ್ಮಲಾ ಸೀತಾರಾಮನ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪಾಕಿಸ್ತಾನದ ಜೊತೆಗೆ ದೇಶವನ್ನು ಹೋಲಿಸಿರುವುದನ್ನು ಪ್ರಶ್ನಿಸಿದ ಅಸಾದುದ್ದೀನ್ ಒವೈಸಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿ, “ವಿಶ್ವಗುರು ಭಾರತದ ಹಣಕಾಸು ಸಚಿವರ ಮಾನದಂಡ ಪಾಕಿಸ್ತಾನ! ಭಾರತದ ಮುಸ್ಲಿಮರು ಸಂಘ ಪರಿವಾರದ ಸಂವಿಧಾನ ವಿರೋಧಿ ಸಿದ್ಧಾಂತಗಳ ಹೊರತಾಗಿಯೂ ಸ್ವಯಂ ಶ್ರಮದಿಂದ ಅಭಿವೃದ್ಧಿ ಹೊಂದಿದ್ದಾರೆ; ಸಂಘ ಪರಿವಾರದಿಂದಾಗಿ ಅಲ್ಲ” ಎಂದು ಹೇಳಿದ್ದಾರೆ. ಅಲ್ಲದೆ ಸರಣಿ ಟ್ವೀಟ್‌ಗಳಲ್ಲಿ ನಿರ್ಮಲಾ ಅವರ ಹೇಳಿಕೆಯ ವಾಸ್ತವವನ್ನು ಪ್ರಶ್ನಿಸಿದ್ದಾರೆ. 

ನಿರ್ಮಲಾ ಸೀತಾರಾಮನ್ ಅವರು, “ಭಾರತದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಪಾಶ್ಚಾತ್ಯ ಕಲ್ಪನೆ ನಕಾರಾತ್ಮಕವಾಗಿರುವುದು ವಿದೇಶಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹೂಡಿಕೆದಾರರು ಇತರರ ಗ್ರಹಿಕೆ ಮತ್ತು ಅಭಿಪ್ರಾಯಗಳನ್ನು ಕೇಳುವ ಬದಲಾಗಿ, ಸ್ವತಃ ದೇಶಕ್ಕೆ ಭೇಟಿ ನೀಡಿ ಮುಸ್ಲಿಮರು ಎಷ್ಟು ಸಮೃದ್ಧವಾಗಿ ನೆಲೆಸಿದ್ದಾರೆ ಎನ್ನುವುದನ್ನು ಗಮನಿಸಬೇಕು. ಭಾರತಕ್ಕೆ ಭೇಟಿ ಕೊಡದವರೂ ಇಲ್ಲಿನ ಮುಸ್ಲಿಂ ಸಮುದಾಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ” ಎಂದು ಹೇಳಿದ್ದರು.

ಅವರ ಮಾತಿಗೆ ಪ್ರತಿಕ್ರಿಯೆಯಾಗಿ ಪತ್ರಕರ್ತೆ ರಾಣಾ ಅಯ್ಯೂಬ್, “ಭಾರತದ ಆಡಳಿತ ಸರ್ಕಾರದಲ್ಲಿ ಸ್ವಾತಂತ್ರ್ಯಾನಂತರ ಮೊತ್ತ ಮೊದಲ ಬಾರಿಗೆ ಮುಸ್ಲಿಂ ಸಂಸದರಿಲ್ಲ” ಎನ್ನುವ ವಿವರವಿರುವ ದಿನಪತ್ರಿಕೆಯ ಸುದ್ದಿಯ ಸ್ಕ್ರೀನ್ ಶಾಟ್ ಲಗತ್ತಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರಿಗೆ ವಾಸ್ತವ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಪಾಶ್ಚಾತ್ಯ ಪತ್ರಿಕೆಯೆಂದು ನಿರ್ಮಲಾ ಉಲ್ಲೇಖಿಸಿರುವ ಪತ್ರಿಕೆಗಳಲ್ಲಿ ಒಂದಾಗಿರುವ ‘ಗಾರ್ಡಿಯನ್’ ಪತ್ರಿಕೆಯ ಬರಹಗಾರ ಕೌಶಿಕ್ ರಾಜ್ ಪ್ರತಿಕ್ರಿಯಿಸಿ, ಅಮಾನತು ಹೊಂದಿರುವ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಮಾಡಿರುವ ಕೋಮುವಾದಿ ಭಾಷಣದ ತುಣುಕನ್ನು ನಿರ್ಮಲಾ ಸೀತಾರಾಮನ್‌ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. “ಭಾರತದ ಮುಸ್ಲಿಮರು ಅತ್ಯುತ್ತಮ ಅವಧಿಯನ್ನು ಕಳೆಯುತ್ತಿದ್ದಾರೆ ಎಂದು ತೋರಿಸಲು ನಿರ್ಮಲಾ ಅವರು ಇಂತಹ ಭಾಷಣದ ತುಣುಕುಗಳನ್ನು ವಿಶ್ವಮಟ್ಟದ ವೇದಿಕೆಗಳಲ್ಲಿ ಹಂಚಬೇಕು” ಎಂದು ಅವರು ತಮ್ಮ ಟ್ವೀಟ್ ಜೊತೆಗೆ ಬರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸುದ್ದಿವಿವರ | ‘ಡಿಜಿಟಲ್ ಕೊಲೆ’ಗೆ ಹಕ್ಕು ನೀಡುವ ಏಕಪಕ್ಷೀಯ ಫ್ಯಾಕ್ಟ್‌ಚೆಕ್ ವಿಭಾಗ

ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರಿಗೆ ಭದ್ರತೆ

ವಾಷಿಂಗ್ಟನ್ ಡಿಸಿಯಲ್ಲಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಪೀಟರ್ಸನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮಾತನಾಡಿದ ನಿರ್ಮಲಾ, “ಪಾಕಿಸ್ತಾನದ ವಿಷಯಕ್ಕೇ ಬಂದರೆ, ಅದು ಭಾರತದ ಜೊತೆಗೇ ಹುಟ್ಟಿಕೊಂಡರೂ ಇಸ್ಲಾಮಿಕ್ ದೇಶವಾಯಿತು. ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಹೇಳಿದ ಮಾತು ಸುಳ್ಳಾಯಿತು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗುತ್ತಲೇ ಹೋಗಿದೆ. ಕೆಲವೊಂದು ಮುಸ್ಲಿಂ ವರ್ಗವನ್ನೂ ದಮನಿಸಲಾಗಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ” ಎಂದು ನಿರ್ಮಲಾ ಹೇಳಿದ್ದರು.

ಮುಂದುವರಿದು, “ಪಾಕಿಸ್ತಾನದಲ್ಲಿ ಮುಜಾಹಿರರು ಮತ್ತು ಶಿಯಾ ಮತ್ತು ಮುಖ್ಯವಾಹಿನಿಯಲ್ಲಿ ಒಪ್ಪಿಕೊಳ್ಳಲಾಗದ ಪ್ರತೀ ಎರಡನೇ ವ್ಯಕ್ತಿಯ ಮೇಲೆ ಹಿಂಸೆಯಾಗುತ್ತಿದೆ. ಆದರೆ ಭಾರತದಲ್ಲಿ ಮುಸ್ಲಿಂ ಸಮುದಾಯದ ಪ್ರತೀ ಎಳೆಯೂ ಉದ್ಯಮ ಮಾಡುತ್ತಿದೆ. ಅವರ ಮಕ್ಕಳು ಶಿಕ್ಷಿತರಾಗಿದ್ದಾರೆ. ಸರ್ಕಾರ ಅವರಿಗೆ ಫೆಲೋಶಿಪ್ ಕೊಡುತ್ತಿದೆ. ಹೀಗಾಗಿ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹಿಂಸೆಯಾಗುತ್ತಿದೆ ಎನ್ನುವುದು ಸುಳ್ಳು ನಿರೂಪಣೆ. ಸರ್ಕಾರದ ಮೇಲಿನ ಆರೋಪ ನಿಜವಾದರೆ, 2014ರ ನಂತರ ಮುಸ್ಲಿಂ ಸಮುದಾಯದ ಸಂಖ್ಯೆ ಕಡಿಮೆಯಾಗಿದೆಯೆ? ಒಂದು ಸಮುದಾಯದಲ್ಲಿ ಮರಣ ಅತಿಯಾಗಿರುವ ಉದಾಹರಣೆ ಇದೆಯೆ? ಭಾರತದ ಬಗ್ಗೆ ವರದಿ ಬರೆಯುವವರಿಗೆ ನಾನೇ ಆತಿಥ್ಯ ನೀಡುತ್ತೇನೆ. ಭಾರತಕ್ಕೆ ಬಂದು ನನ್ನ ಮಾತು ಸುಳ್ಳೆಂದು ಸಾಬೀತುಮಾಡಲಿ” ಎಂದು ನಿರ್ಮಲಾ ವಾದಿಸಿದ್ದರು.

ಭಾರತೀಯ ಮುಸ್ಲಿಮರ ಸಂಖ್ಯೆ ಕುಸಿತ

ನಿರ್ಮಲಾ ಸೀತಾರಾಮನ್ ಅವರ ಭಾರತೀಯ ಮುಸ್ಲಿಮರ ಸಂಖ್ಯೆ ಹೆಚ್ಚಳ ವಾದಕ್ಕೆ ಪ್ರತಿಕ್ರಿಯೆಯಾಗಿ ‘ದಿ ವೈರ್‌’ ವೆಬ್‌ತಾಣ ಪ್ರಕಟಿಸಿದ ವಿಶ್ಲೇಷಣಾತ್ಮಕ ಲೇಖನದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ವಿಪರೀತ ಹೆಚ್ಚಾಗಿಲ್ಲ ಎನ್ನುವ ವಿವರ ನೀಡಲಾಗಿದೆ. “2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಶೇ 96.62 ಕೋಟಿ ಜನಸಂಖ್ಯೆಯಲ್ಲಿ ಹಿಂದುಗಳ ಪ್ರಮಾಣ ಶೇ. 79.80ರಷ್ಟಿದ್ದರೆ, ಮುಸ್ಲಿಮರ ಪ್ರಮಾಣ ಶೇ. 14.23ರಷ್ಟು ಎನ್ನುವುದು ತಿಳಿದುಬಂದಿದೆ. ಮುಂದಿನ ಜನಗಣತಿಯ ಹೊತ್ತಿಗೆ ಮುಸ್ಲಿಂ ಜನಸಂಖ್ಯೆ ಇಳಿಮುಖವಾಗಲಿದೆ ಎಂದು ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದ ಮಾಜಿ ಅಧ್ಯಕ್ಷ ದೇವೇಂದ್ರ ಕೊಠಾರಿ ಹೇಳಿದ್ದರು” ಎಂದು ವೆಬ್‌ತಾಣ ವಿವರ ನೀಡಿದೆ.

“ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮುಂದಿನ ಜನಗಣತಿಯಲ್ಲಿ ಹಿಂದೂಗಳ ಸಂಖ್ಯೆ ಶೇ. 80.3ಕ್ಕೆ ಏರಬಹುದು ಮತ್ತು ಮುಸ್ಲಿಂ ಸಮುದಾಯದ ಪ್ರಮಾಣ ಇಳಿಯಲಿದೆ. 1952ರಲ್ಲಿ ಶೇ 9.8ರಷ್ಟಿದ್ದ ಮುಸ್ಲಿಮರ ಪ್ರಮಾಣ 2011ರಲ್ಲಿ ಶೇ 14.21ಕ್ಕೆ ಏರಿದೆ. ಅಂದರೆ ಕಳೆದ 60 ವರ್ಷಗಳಲ್ಲಿ ಅವರ ಪ್ರಮಾಣ ಶೇ 4.4ರಷ್ಟು ಮಾತ್ರವೇ ಏರಿಕೆಯಾಗಿದೆ” ಎಂದು ಕೊಠಾರಿ ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಈ ದಿನʼ ಸಮೀಕ್ಷೆ | ಬಿಗಡಾಯಿಸಿದ ನಿರುದ್ಯೋಗ ; ಮೋದಿ ಆಡಳಿತಕ್ಕೆ ಬೇಸರಗೊಂಡ ಮತದಾರ

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂಬ ಘೋಷಣೆಯನ್ನು ನರೇಂದ್ರ ಮೋದಿಯವರು...

ನೇಹಾ ಕನ್ನಡ ನಾಡಿನ ಮಗಳು, ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಬೇಡ: ಸುರ್ಜೇವಾಲ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ಅವರು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ...

ಕೋಟಕ್ ಮಹೀಂದ್ರ ಬ್ಯಾಂಕ್‌ನ ಹೊಸ ಗ್ರಾಹಕರ ಸೇರ್ಪಡೆ, ಕ್ರೆಡಿಟ್ ಕಾರ್ಡ್‌ಗೆ ನಿಷೇಧವೇರಿದ ಆರ್‌ಬಿಐ

ಕೋಟಕ್‌ ಮಹೀಂದ್ರ ಬ್ಯಾಂಕ್‌ ನ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ಗಳ ಮೂಲಕ...

‘ಈ ದಿನ’ ಸಮೀಕ್ಷೆ | ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಅಂತಾರೆ ಮತದಾರರು!

2014ರಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದು...