ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಒಂದು ಬಹಿರಂಗ ಪತ್ರ

Date:

ಮಾನ್ಯ ಗೃಹ ಸಚಿವರ ಸನ್ನಿಧಾನಕ್ಕೆ,

ಭ್ರಷ್ಟಾಚಾರ ವಿಶ್ವವ್ಯಾಪಿಯಾಗಿದೆ. ಅದರೊಂದಿಗೆ ದಬ್ಬಾಳಿಕೆಯೂ ಸೇರಿಕೊಂಡು ಬಿಟ್ಟರೆ ನಿರಂಕುಶಾಧಿಕಾರ ತನಗೆ ತಾನೇ ಜಾರಿಯಾಗಿಬಿಡುತ್ತದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಆಗುತ್ತಿರುವುದೂ ಇದೇ ಆಗಿದೆ. ಭ್ರಷ್ಟಾಚಾರದ ಶ್ರೇಯಾಂಕದಲ್ಲಿ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದ್ದರೆ, ಪೊಲೀಸ್ ಇಲಾಖೆ ಎರಡನೆ ಸ್ಥಾನದಲ್ಲಿದೆ. ಆದರೆ, ಒಂದೇ ವ್ಯತ್ಯಾಸವೆಂದರೆ, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದೊಂದಿಗೆ ದರ್ಪ, ದೌರ್ಜನ್ಯ, ಸ್ವಜನಪಕ್ಷಪಾತ, ದಬ್ಬಾಳಿಕೆ ಮನೋಭಾವ ಕೂಡಾ ಅನೂಚಾನವಾಗಿ ನಡೆದು ಬಂದಿದೆ. ಹೀಗಾಗಿ ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ಅವ್ಯಕ್ತ ಭಯ ಮಾತ್ರವಲ್ಲದೆ, ತಿರಸ್ಕಾರವೂ ಮನೆ ಮಾಡತೊಡಗಿದೆ.

ಹಾಗೆಂದು ಇಡೀ ಪೊಲೀಸ್ ಇಲಾಖೆ ಜನವಿರೋಧಿತನ, ಭ್ರಷ್ಟತೆ, ದರ್ಪ, ದಬ್ಬಾಳಿಕೆ ಮನೋಭಾವವನ್ನು ಮೈಗೂಡಿಸಿಕೊಂಡಿಲ್ಲ. ಅನೇಕ ಜನಪರ, ಪ್ರಾಮಾಣಿಕ, ದಕ್ಷ ಪೊಲೀಸ್ ಅಧಿಕಾರಿಗಳು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಿರುವ ಕಾರಣ: ಇಂತಹ ಜನಪರ ಪೊಲೀಸ್ ಅಧಿಕಾರಿಗಳನ್ನು ಕಾರ್ಯಕಾರಿಯೇತರ (Non Executive) ಹುದ್ದೆಗಳಿಗೆ ನಿಯೋಜಿಸಿ, ಭ್ರಷ್ಟ, ಅದಕ್ಷ, ಜನಪೀಡಕ ಅಧಿಕಾರಿಗಳನ್ನು ಕಾರ್ಯಕಾರಿ (Executive) ಹುದ್ದೆಗಳಿಗೆ ನಿಯೋಜಿಸುವ ರಾಜಕಾರಣಿಗಳ ಮನಸ್ಥಿತಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೇವಲ ಒಂದು ದಶಕದ ಹಿಂದೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿದ್ದ ನಿಮಗೆ ಈಗ ಇಂತಹ ಜನಪೀಡಕ ಇಲಾಖೆಯನ್ನು ರಿಪೇರಿ ಮಾಡಬೇಕಾದ ಗುರುತರ ಹೊಣೆಗಾರಿಕೆ ದೊರೆತಿದೆ. ನಿಮಗಿರುವ ಆಡಳಿತಾನುಭವದ ಹಿನ್ನೆಲೆಯಲ್ಲಿ ಈ ಜವಾಬ್ದಾರಿ ನಿಮಗೆ ಖಂಡಿತ ಹೊರೆಯಾಗಬಾರದು, ಬದಲಿಗೆ ಸವಾಲಿನ ಕೆಲಸವಾಗಬೇಕು. ಈ ಸಮಾಜಕ್ಕೆ ದಲಿತರು ಎಂತಹುದೇ ಉನ್ನತ ಹುದ್ದೆಗಳನ್ನು ನಿಭಾಯಿಸಲು ಅರ್ಹರು ಎಂಬ ಗಟ್ಟಿ ಸಂದೇಶವನ್ನು ನೀವು ಗೃಹ ಸಚಿವರಾಗಿಯೇ ರವಾನಿಸಬೇಕಾದ ಸಂಕೀರ್ಣ ಸವಾಲು ನಿಮ್ಮ ಮುಂದಿದೆ. ಆದರೆ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವುದು ನಿಜಕ್ಕೂ ಸವಾಲಿನ ಕೆಲಸವಲ್ಲ; ರಾಜಕೀಯ ಇಚ್ಛಾಶಕ್ತಿ ಇದ್ದರೆ ಅದು ಚಿಟಿಕೆ ಹೊಡೆಯುವಷ್ಟು ಸುಲಭದಲ್ಲಿ ನಡೆದು ಹೋಗುತ್ತದೆ– ಪೊಲೀಸ್ ಇಲಾಖೆಯನ್ನು ಪುನಾರಚನೆ ಮಾಡುವ ಮೂಲಕ.

ಅನೇಕ ಜನಪರ, ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಪತ್ರ ವ್ಯವಹಾರ, ಕಡತ ಸಿದ್ಧತೆ ಹಾಗೂ ಪೊಲೀಸ್ ತರಬೇತಿಯಂತಹ Non executive ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಿ, ಅಂಥವರನ್ನೆಲ್ಲ Executive ಹುದ್ದೆಗಳಿಗೆ ನಿಯೋಜಿಸಬೇಕು. ತಮ್ಮ ಸೇವಾವಧಿಯಲ್ಲಿ ಭ್ರಷ್ಟಾಚಾರ, ದೌರ್ಜನ್ಯ, ಜನಪೀಡಕ ಇತಿಹಾಸ ಹೊಂದಿರುವ ಅಧಿಕಾರಿಗಳನ್ನು Non executive ಹುದ್ದೆಗಳಿಗೆ ಎತ್ತಂಗಡಿ ಮಾಡಬೇಕು. ಇದರಿಂದ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯಲ್ಲಿ ಹೆಚ್ಚಳವಾಗಿ, ಜನರು ಧೈರ್ಯವಾಗಿ ತಮ್ಮ ವಿರುದ್ಧದ ದೌರ್ಜನ್ಯಗಳ ವಿರುದ್ಧ ದೂರು ನೀಡಲು ಸಾಧ್ಯವಾಗಲಿದೆ. ತಮ್ಮ ದೂರುಗಳಿಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಅವರಲ್ಲಿ ಮೂಡಲಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ ಹೊಸ ಮನುಷ್ಯರಾಗುವರೇ?

Executive ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಯಾವುದೇ ಅಧಿಕಾರಿಯ ಪ್ರಾಮಾಣಿಕ, ದಕ್ಷ ಹಾಗೂ ಜನಾನುರಾಗಿ ಪೂರ್ವೇತಿಹಾಸವೇ ಮುಖ್ಯವಾಗಬೇಕು. ಅದಕ್ಕಾಗಿ ಸೇವಾ ದಾಖಲಾತಿಗಳನ್ನು ಅಗತ್ಯವಾಗಿ ಅವಲಂಬಿಸಬೇಕು. ಸೇವಾ ದಾಖಲಾತಿಗಳಲ್ಲಿ ಭ್ರಷ್ಟಾಚಾರ, ದೌರ್ಜನ್ಯ, ಸುಲಿಗೆಯಂತಹ ವಿಚಾರಗಳಿಗೆ ಅಮಾನತುಗೊಂಡಿರುವ ಅಥವಾ ತನಿಖೆಯನ್ನು ಎದುರಿಸಿರುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ Executive ಹುದ್ದೆಗಳಿಗೆ ನೇಮಿಸಕೂಡದು. ಅದಕ್ಕಾಗಿ ಯಾವ ಸರಕಾರವೂ ತಿದ್ದುಪಡಿ ಮಾಡಲಾಗದ ಮಾನದಂಡವನ್ನು ರಚಿಸಲು ನೀವು ಮುಂದಾಗಬೇಕು.

ಪೊಲೀಸ್ ಇಲಾಖೆಯಲ್ಲಿ ಇಂತಹ ಪುನಾರಚನೆ ಯಾಕೆ ಅಗತ್ಯವೆಂದರೆ, ಪೊಲೀಸ್ ಇಲಾಖೆ ಯಾವಾಗಲೂ ನಿರಂಕುಶಾಧಿಕಾರದ ಬಹು ಮುಖ್ಯ ಸಾಧನವಾಗಿರುತ್ತದೆ. ಇದು ಜರ್ಮನಿ, ಇರಾನ್, ರಷ್ಯಾ, ಚೀನಾ ಮುಂತಾದ ಸರ್ವಾಧಿಕಾರಿ ದೇಶಗಳಲ್ಲಿ ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ. ಇನ್ನು ಜಾತಿ ಪ್ರಣೀತ ಭಾರತದಲ್ಲಿ ಪೊಲೀಸ್ ಇಲಾಖೆಯೇನಾದರೂ ನಿರಂಕುಶಾಧಿಕಾರದ ಸಾಧನವಾಗಿ ಬಳಕೆಯಾಗಿಬಿಟ್ಟರೆ, ಅದರ ಮೊದಲ ಸಂತ್ರಸ್ತರೇ ದಲಿತರು, ದಮನಿತರು ಹಾಗೂ ಶ್ರಮಿಕ ಸಮುದಾಯಗಳಾಗಿರುತ್ತವೆ. ಹಾಗಾದ ದಿನವೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕನಸಿದ್ದ ಸರ್ವರಿಗೂ ಸಮಾನ ನ್ಯಾಯ ಎಂಬ ಪರಿಸ್ಥಿತಿಯೇ ಇಲ್ಲವಾಗಿಬಿಡುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಬೇಕಿರುವುದು ಕೇವಲ ಜನರ ದೃಷ್ಟಿಯಿಂದ ಮಾತ್ರವಲ್ಲ; ಅಂಬೇಡ್ಕರ್ ಅವರ ಅಮೂಲ್ಯ ಸಂವಿಧಾನವನ್ನು ಕಾಪಿಡಲೂ ಸಹ ಅತ್ಯಗತ್ಯವಾಗಿದೆ.

ಕೊನೆಯ ಮಾತು

ಕೆಲಸ ಹಾಗೂ ಬಾಹ್ಯ ಒತ್ತಡಗಳಿಂದ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅದರಿಂದಾಗಿಯೇ ಜನಸಾಮಾನ್ಯರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವುದನ್ನೇ ಬಹುತೇಕ ಮರೆತು ಬಿಟ್ಟಿದ್ದಾರೆ. ಇದರಿಂದಾಗಿ ಜನರಿಗೆ ಪೊಲೀಸ್ ಇಲಾಖೆಯ ಬಗ್ಗೆ ತಿರಸ್ಕಾರ ಮತ್ತು ಅಸಹನೆ ಮನೆ ಮಾಡತೊಡಗಿದೆ. ಈ ತಿರಸ್ಕಾರ ಮತ್ತು ಅಸಹನೆಯೇನಾದರೂ ಸ್ಪೋಟಗೊಂಡರೆ, ಅದು ಬಹು ದೊಡ್ಡ ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟಾಗಿ ಉದ್ಭವಿಸಲಿದೆ. ಹೀಗಾಗಿ ನಿಮ್ಹಾನ್ಸ್ ನ ತಜ್ಞ ವೈದ್ಯರಿಂದ ಪ್ರತಿ ವಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾನಸಿಕ ಒತ್ತಡವನ್ನು ತಗ್ಗಿಸಲು, ಸಾಮಾಜಿಕ ವರ್ತನೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಆಪ್ತ ಸಮಾಲೋಚನಾ ಶಿಬಿರಗಳನ್ನು ಏರ್ಪಡಿಸಿ. ಇದರಿಂದ ಪೊಲೀಸ್ ಠಾಣೆಗೆ ಬರುವ ಎಲ್ಲರೂ ಆರೋಪಿಗಳು ಹಾಗೂ ಅಪರಾಧಿಗಳೇ ಆಗಿರುತ್ತಾರೆ ಎಂಬ ಏಕತಾನ ಮನೋಭಾವ ಅವರಲ್ಲಿ ಕಾಣೆಯಾಗಿ, ನಿಜ ಸಂತ್ರಸ್ತರನ್ನು ಗುರುತಿಸಿ, ಅವರಿಗೆ ನೆರವು ಒದಗಿಸುವ ಸೇವಾ ಮನೋಭಾವ ಬೆಳೆಯಲು ಸಾಧ್ಯವಾಗಲಿದೆ.

ನಿಮ್ಮನ್ನು ಅಸಮರ್ಥ ಗೃಹ ಸಚಿವ ಎಂದು ಬಿಂಬಿಸಲು ನಿಮ್ಮ ರಾಜಕೀಯ ವಿರೋಧಿಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಅಂಥವರ ಸುಳ್ಳು ಪ್ರಚಾರವನ್ನು ಹುಸಿಗೊಳಿಸಿ, ನೀವೊಬ್ಬ ಸಮರ್ಥ ಆಡಳಿತಗಾರ ಎಂದು ಬಿಂಬಿಸುವ ಸುವರ್ಣಾವಕಾಶ ನಿಮಗೆ ಗೃಹ ಖಾತೆಯ ಮೂಲಕ ದೊರೆತಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು, ಪೊಲೀಸ್ ಇಲಾಖೆಯು ದಲಿತ ಸಚಿವರೊಬ್ಬರ ಅಧಿಕಾರಾವಧಿಯಲ್ಲೇ ಅತ್ಯಂತ ಜನಪರವಾಗಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಷ್ಟರ ಮಟ್ಟಿಗೆ ಪೊಲೀಸ್ ಇಲಾಖೆಯನ್ನು ಸುಧಾರಿಸಿ. ಆ ಮೂಲಕ ನಿಮ್ಮ ಸುತ್ತಲಿನ ಷಡ್ಯಂತ್ರಗಳನ್ನು ಸಮರ್ಥವಾಗಿ ಪುಡಿಗಟ್ಟಿ, ನಾನೂ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಅರ್ಹ ಎಂಬ ಸಂದೇಶವನ್ನು ರಾಜ್ಯಕ್ಕೆ ರವಾನಿಸಿ ಎಂದು ಈ ಮೂಲಕ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ.

ಇಂತಿ,
ವಂದನೆಗಳೊಂದಿಗೆ,
ಸದಾನಂದ ಗಂಗನಬೀಡು

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯ ಇಲಾಖೆ | 8 ವರ್ಷಗಳ ಬಳಿಕ ಕೌನ್ಸಲಿಂಗ್ ಮೂಲಕ ವರ್ಗಾವಣೆ ಜಾರಿಗೊಳಿಸಿದ ಸಚಿವ ಗುಂಡೂರಾವ್

ವರ್ಗಾವಣೆ ಕೌನ್ಸಲಿಂಗ್ ಸುತ್ತೋಲೆ ಪ್ರಕಟ ಜುಲೈ ತಿಂಗಳ ಅಂತ್ಯದೊಳಗೆ ಕೌನ್ಸಲಿಂಗ್...

ಬಕ್ರೀದ್ ಹಬ್ಬ | ಹಜ್ಜ್‌ಗೆ ತೆರಳುವ ಮುಸಲ್ಮಾನ ‘ಹಾಜಿ’ಯಾಗುತ್ತಾನೆ; ಹಾಜಿ ಹೇಗಿರಬೇಕು?

ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ...

ಇಂಧನ ದರ ಇಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ; ಖಾಸಗಿ ಸಾರಿಗೆ ಸಂಘಟನೆಗಳ ಎಚ್ಚರಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ...

ಬೆಂಗಳೂರು | 15 ದಿನದ ಮಗುವಿಗೆ ‘ಹಾರ್ಟ್ ಆಪರೇಷನ್’ ಮಾಡಿ ಯಶಸ್ವಿಯಾದ ಸರ್ಕಾರಿ ಆಸ್ಪತ್ರೆ ವೈದ್ಯರು

ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 15 ದಿನದ...