ರಾಮಮಂದಿರದ ಭಾವನಾತ್ಮಕ ಅಲೆ ಚುನಾವಣೆಯಲ್ಲಿ ತಣಿಯುತ್ತಿದ್ದಂತೆ, 'ಮೋಶಾ' ಜೋಡಿ 2029ಕ್ಕಾಗಿ ಸಮಾನ ನಾಗರಿಕ ಸಂಹಿತೆ ಮತ್ತು ಕ್ಷೇತ್ರ ಪುನರ್ವಿಂಗಡಣೆಯಂತಹ ಹೊಸ ರಾಜಕೀಯ ಅಸ್ತ್ರಗಳನ್ನು ಮಸೆದು ಹರಿತಗೊಳಿಸುವ ಸಂಚಿಗೆ ಸಿದ್ಧವಾಗುತ್ತಿದೆ.
2024ರ ಲೋಕಸಭೆ ಚುನಾವಣೆಯ ಫಲಿತಾಂಶ ಭಾರತೀಯ ರಾಜಕೀಯದಲ್ಲಿ ಒಂದು ಪ್ರಮುಖ ಬದಲಾವಣೆಯ ಸುಳಿವು ನೀಡಿತು. ಅಯೋಧ್ಯೆಯ ರಾಮಮಂದಿರದಿಂದಾಗಿ ನಮಗೆ ಬಹುಮತಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಎಂಬುದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅನಿಸಿಕೆಯಾಗಿತ್ತು. ಅದಕ್ಕಾಗಿ ‘ಚಾರ್ ಸೌ ಪಾರ್‘ (400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ) ಎಂಬ ಘೋಷಣೆ ಕೂಗುತ್ತಿದ್ದರು. ಆದರೆ ಚುನಾವಣೆ ಫಲಿತಾಂಶ ಎಲ್ಲವನ್ನೂ ಬುಡಮೇಲು ಮಾಡಿತು. ರಾಮಮಂದಿರ ನಿರ್ಮಾಣದಂತಹ ದಶಕಗಳ ಭರವಸೆ ಈಡೇರಿದ ಮೇಲೂ, ಮತದಾರರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡದೆ ಮೈತ್ರಿ ಸರ್ಕಾರ ರಚನೆಗೆ ತಳ್ಳಿದರು.
ಹಿಂದುತ್ವದ ಅತ್ಯಂತ ಶಕ್ತಿಶಾಲಿ ‘ಬ್ರಹ್ಮಾಸ್ತ್ರ’ ಎಂದೇ ಬಿಂಬಿತವಾಗಿದ್ದ ರಾಮಮಂದಿರ ವಿಚಾರವು ರಾಜಕೀಯವಾಗಿ ಅಪೇಕ್ಷಿತ ಫಲಿತಾಂಶ ನೀಡಲು ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ, ಆಡಳಿತಾರೂಢ ‘ಮೋಶಾ’ (ಮೋದಿ-ಶಾ) ಜೋಡಿ ಮುಂದಿನ 2029ರ ಸಾರ್ವತ್ರಿಕ ಚುನಾವಣೆಗೆ ಹೊಸ ಕಾರ್ಯತಂತ್ರಗಳ ಅನ್ವೇಷಣೆಗೆ ಧುಮುಕಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2029ರ ವೇಳೆಗೆ ಎನ್‌ಡಿಎ ಆಡಳಿತವಿರುವ 21 ರಾಜ್ಯಗಳಲ್ಲಿ ‘ಸಮಾನ ನಾಗರಿಕ ಸಂಹಿತೆ’ (ಯುಸಿಸಿ) ಜಾರಿಗೊಳಿಸುವ ಗಡುವನ್ನು ಘೋಷಿಸಿದ್ದಾರೆ. ಈ ಪ್ರಕಟಣೆಯು ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಲ್ಲ, ಬದಲಿಗೆ ಭವಿಷ್ಯದ ಚುನಾವಣೆಗಾಗಿ ಸಿದ್ಧಪಡಿಸಲಾಗುತ್ತಿರುವ ಒಂದು ಕಾರ್ಯತಂತ್ರದ ಭಾಗ ಎಂಬುದು ಸ್ಪಷ್ಟ.
ಇದನ್ನೂ ಓದಿ: ಅಯೋಧ್ಯೆ ಬಳಿಕ ಬದ್ರಿನಾಥದಲ್ಲೂ ಬಿಜೆಪಿ ಸೋಲು
ಉತ್ತರಾಖಂಡದಲ್ಲಿ ಈಗಾಗಲೇ ಮಾದರಿಯಾಗಿ ಜಾರಿಯಾಗಿರುವ ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ನೇತೃತ್ವದ ಎಲ್ಲಾ ರಾಜ್ಯಗಳಲ್ಲಿ ವಿಸ್ತರಿಸುವ ಯೋಜನೆ ಇದಾಗಿದೆ. ಇದು ಮೇಲ್ನೋಟಕ್ಕೆ ‘ಏಕರೂಪದ ಕಾನೂನು’ ಎಂದು ಕಂಡರೂ, ಇದರ ಹಿಂದೆ ಹಿಂದು-ಮುಸ್ಲಿಂ ಧ್ರುವೀಕರಣವನ್ನು ಜೀವಂತವಾಗಿಡುವ ರಾಜಕೀಯ ಉದ್ದೇಶವಿದೆ. ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ತಿದ್ದುಪಡಿ ತರುವ ಮೂಲಕ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಮತ್ತೆ ತನ್ನತ್ತ ಸೆಳೆಯುವ ಪ್ರಯತ್ನವಿದು.
ಬಹುವಿಧ ಅಸ್ತ್ರಗಳ ಪ್ರಯೋಗ: ಎಸ್‌ಐಆರ್ ಮತ್ತು ಕ್ಷೇತ್ರ ಪುನರ್ವಿಂಗಡಣೆ
2024ರ ಫಲಿತಾಂಶವು ಒಂದೇ ಒಂದು ಭಾವನಾತ್ಮಕ ವಿಚಾರವನ್ನು ನೆಚ್ಚಿಕೊಂಡು ಚುನಾವಣೆ ಎದುರಿಸುವುದು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿದೆ. ಹೀಗಾಗಿ, ಕೇವಲ ಯುಸಿಸಿಗೆ ಸೀಮಿತವಾಗದೆ, ಇತರ ಸಾಂಸ್ಥಿಕ ಹಾಗೂ ತಾಂತ್ರಿಕ ಅಸ್ತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದೆಡೆ ಕ್ಷೇತ್ರ ಪುನರ್ವಿಂಗಡಣೆಯು ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆಸುವ ಮೂಲಕ, ಉತ್ತರ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿ ರಾಜಕೀಯವಾಗಿ ಮೇಲುಗೈ ಸಾಧಿಸುವ ತಂತ್ರ ನಡೆಸಲಾಗುತ್ತಿದೆ.
ಹೊಸ ಜನಗಣತಿ ಆಧಾರಿತ ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ, ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಈ ರಾಜ್ಯಗಳು ಸಾಂಪ್ರದಾಯಿಕವಾಗಿ ಬಿಜೆಪಿಯ ಪ್ರಬಲ ಕೋಟೆಗಳಾಗಿದ್ದರಿಂದ, ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅವರಿಗೆ ಸುಲಭವಾಗುತ್ತದೆ.
ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳ ಲೋಕಸಭಾ ಸ್ಥಾನಗಳ ಅನುಪಾತವು ಕಡಿಮೆಯಾಗುವ ಅಥವಾ ಉತ್ತರ ಭಾರತಕ್ಕೆ ಹೋಲಿಸಿದರೆ ಶಕ್ತಿಹೀನವಾಗುವ ಭೀತಿ ಇದೆ. ನೂತನ ಸಂಸತ್ ಭವನದಲ್ಲಿ ಸಂಸದರ ಆಸನ ಸಾಮರ್ಥ್ಯವನ್ನು (888 ಸ್ಥಾನಗಳು) ಹೆಚ್ಚಿಸಿರುವುದು ಈ ಸೀಮಾ ನಿರ್ಣಯ ಪ್ರಕ್ರಿಯೆಗೆ ಪೂರ್ವಭಾವಿ ಸಿದ್ಧತೆಯಾಗಿದೆ. 2029ರ ವೇಳೆಗೆ ಕ್ಷೇತ್ರಗಳ ಸಂಖ್ಯೆ ಹೆಚ್ಚಿದರೆ, ಬಿಜೆಪಿ ಮೈತ್ರಿಕೂಟಕ್ಕೆ ಸರಳ ಬಹುಮತ ಪಡೆಯುವ ರಾಜಕೀಯ ಹಾದಿ ಮತ್ತಷ್ಟು ಸರಳವಾಗಲಿದೆ.
ಇನ್ನೊಂದೆಡೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ -ಎಸ್‌ಐಆರ್ ಮೂಲಕ ಮುಸ್ಲಿಮರು, ದಲಿತರು, ಪ್ರಮುಖವಾಗಿ ಅಲ್ಪಸಂಖ್ಯಾತರು, ಮಹಿಳೆಯರ ಮತದಾನದ ಹಕ್ಕನ್ನು ಕಸಿದುಕೊಂಡು ರಾಜಕೀಯ ಸಮೀಕರಣಗಳನ್ನು ಬಿಜೆಪಿ ತನಗೆ ಅನುಕೂಲಕರವಾಗಿ ಬದಲಾಯಿಸಿಕೊಳ್ಳುತ್ತಿದೆ. ಎಸ್‌ಐಆರ್ ಮೂಲಕ ಬಿಜೆಪಿ ತನಗೆ ಅನುಕೂಲವಲ್ಲದ ಅಥವಾ ವಿರೋಧಿ ಮತಬ್ಯಾಂಕ್‌ಗಳನ್ನು ಗುರುತಿಸಲು ಹಾಗೂ ಕಾನೂನಾತ್ಮಕವಾಗಿಯೇ ಅವುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ತಂತ್ರ ನಡೆಸಿದೆ.
ಹೀಗೆ ಅಯೋಧ್ಯೆಯ ರಾಮಮಂದಿರ ವಿಚಾರವು ಒಂದು ಸಾರಿ ನೀಡಿದ ರಾಜಕೀಯ ಲಾಭವು ನಿರಂತರವಲ್ಲ ಎಂಬುದು ಬಿಜೆಪಿಗೆ ಈಗ ಸ್ಪಷ್ಟವಾಗಿದೆ. ಹಾಗಾಗಿ ರಾಮಮಂದಿರದ ಬತ್ತಳಿಕೆ ಖಾಲಿಯಾದ ನಂತರ, ಬಿಜೆಪಿಯು ತನ್ನ ಸೈದ್ಧಾಂತಿಕ ಕಾರ್ಯಸೂಚಿಯನ್ನು ಕಾಪಾಡಿಕೊಳ್ಳಲು ಹಾಗೂ ಚುನಾವಣಾ ಮೇಲುಗೈ ಉಳಿಸಿಕೊಳ್ಳಲು ನೂತನ ತಂತ್ರಗಳನ್ನು ಶೂಲಕ್ಕೇರಿಸುತ್ತಿದೆ. ‘ಭಾವನಾತ್ಮಕ ಅಸ್ತ್ರಗಳ’ (ಯುಸಿಸಿ, ಹಿಂದು-ಮುಸ್ಲಿಂ ವಿಚಾರ) ಜೊತೆಗೆ, ‘ಸಾಂಸ್ಥಿಕ ನಿಯಂತ್ರಣದ ಅಸ್ತ್ರಗಳನ್ನು’ (SIR, ಕ್ಷೇತ್ರ ಪುನರ್ವಿಂಗಡಣೆ, ಒಂದು ದೇಶ ಒಂದು ಚುನಾವಣೆ) ಬೆಸೆದು 2029ರ ಚುನಾವಣಾ ಅಖಾಡವನ್ನು ಮೊದಲೇ ತನಗೆ ಸಂಪೂರ್ಣ ಅನುಕೂಲಕರವಾಗಿ ಸಿದ್ಧಪಡಿಸಿಕೊಳ್ಳುತ್ತಿದೆ. ಹೀಗಾಗಿ 2029ರ ಚುನಾವಣೆ ದೇಶದ ರಾಜಕೀಯ ಚಿತ್ರಣದಲ್ಲಿ ಮತ್ತಷ್ಟು ತೀವ್ರ ಧ್ರುವೀಕರಣ ಮತ್ತು ಸಾಂಸ್ಥಿಕ ಬದಲಾವಣೆಗಳಿಗೆ ಸಾಕ್ಷಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



