- ‘ನಂದಿನಿ ಮುಗಿಸಿ ಅಮುಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿ’
- ‘ನಾವು ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ’
ಕಾಂಗ್ರೆಸ್ ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವ ಮೊದಲು ನಾವು ಟಿಕೆಟ್ ನೀಡುತ್ತೇವೆ ಎನ್ನುವ ಭರವಸೆ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಬಳಿಕ ಪಕ್ಷದೊಳಗಿನ ಬೆಳವಣಿಗೆ ಕುರಿತು ಸದಾಶಿವನಗರ ನಿವಾಸದ ಬಳಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
“ಕಾಂಗ್ರೆಸ್ ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕಾದರೂ ನಾವು ಟಿಕೆಟ್ ನೀಡುತ್ತೇವೆ ಎನ್ನುವ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಬೇಕು ಎಂದು ಬಯಸುತ್ತೇವೆ” ಎಂದಿದ್ದಾರೆ.
“ರಾಜಕಾರಣ ಎಂದರೆ ಚದುರಂಗದಾಟ. ಬಿಜೆಪಿಯವರು ಅದನ್ನು ಆಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು 224 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
“ನಾವು ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಅಸಮಾಧಾನ ಇರುವವರನ್ನು ಕರೆದು ಮಾತನಾಡುತ್ತೇವೆ” ಎಂದಿದ್ದಾರೆ.
“ನಾವೆಲ್ಲ ಒಂದು ಕುಟುಂಬ, ಸಂಸಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಿ, ಸಮಾಧಾನ ಮಾಡಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೈಎಸ್‌ವಿ ದತ್ತಗೆ ತಪ್ಪಿದ ಕಾಂಗ್ರೆಸ್ ಟಿಕೆಟ್: ಅಭಿಮಾನಿಗಳಿಗೆ ಪತ್ರದ ಮೂಲಕ ಸಭೆಗೆ ಆಹ್ವಾನ
“ಮಹಾರಾಷ್ಟ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಆರೋಗ್ಯ ವಿಮೆ ಜಾರಿ ಮಾಡುವ ಮೂಲಕ ಪಾರುಪತ್ಯ ಸಾಧಿಸಲು ಮುಂದಾಗಿದೆ. ಈ ರಾಜ್ಯದ ಹಿತ ಕಾಯುವೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಕಿಡಿಕಾರಿದ್ದಾರೆ.
“ನಮ್ಮ ರಾಜ್ಯದ ಗಡಿ ಹಳ್ಳಿಗಳಿಗೆ ಶಿವಸೇನೆ ಸರ್ಕಾರ ತಮ್ಮ ಯೋಜನೆ ಜಾರಿ ಮಾಡುತ್ತಿದೆ. ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ. ನಮ್ಮ ಜನರಿಗೆ ಮಹಾರಾಷ್ಟ್ರ ಯೋಜನೆ ನೀಡಲು ಅವರು ಯಾರು? ನಮ್ಮಲ್ಲಿ ಸರ್ಕಾರ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಅಮುಲ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, “ನಂದಿನಿ ಮುಗಿಸಿ ಅಮುಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.