ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ: ಶಶಿ ತರೂರ್‌

Date:

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ ಕೊಡದಿದ್ದರೆ, ವಿರೋಧ ಪಕ್ಷಗಳು ಅವರ ವಿರುದ್ಧ ಇಂಪೀಚ್‌ಮೆಂಟ್ ನಿರ್ಣಯ ತಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸಿದ್ಧತೆ ನಡೆಸಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಇದು "ಇಂಡಿಯಾ ಟುಡೇ" ನಡೆಸಿದ ಸಂದರ್ಶನದ ಆಯ್ದ ಭಾಗ.

ಸಂದರ್ಶನದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು, ಅಕ್ರಮವಾಗಿ ತೆಗೆದುಹಾಕಲಾಗಿರುವ ಮತದಾರರ ಹೆಸರುಗಳನ್ನು ಮತ್ತೆ ಸೇರಿಸಬೇಕು ಮತ್ತು ಇದಕ್ಕೆ ಬಳಸುತ್ತಿರುವ ಸಾಫ್ಟ್‌ವೇರ್ ಅನ್ನು ಮರುಪರಿಶೀಲಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ ಎಂದರು.

- Advertisement -

“ಮೊದಲನೆಯದಾಗಿ, ಅವರಿಗೆ (ಗ್ಯಾನೇಶ್ ಕುಮಾರ್) ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ. 2023ರ ಕೊನೆಯಲ್ಲಿ ಈ ಬಿಜೆಪಿ ಸರ್ಕಾರ ಜಾರಿಗೆ ತಂದ ಕಾನೂನಿನ ಮೂಲಕ ಅವರಿಗೆ ರಕ್ಷಣೆ ಸಿಕ್ಕಿದೆ ಅಷ್ಟೇ,” ಎಂದರು. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡದಂತೆ ಆಜೀವ ರಕ್ಷಣೆ ನೀಡುವ, 2023ರ ಸಿಇಸಿ ಕಾಯ್ದೆಯ ನಿಯಮವನ್ನು ಅವರು ಇಲ್ಲಿ ಉಲ್ಲೇಖಿಸಿದರು. ಜೊತೆಗೆ ಇದು ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆಗೊಳಗಾಗಿದೆ ಎಂಬುದನ್ನೂ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ...

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ ತಮ್ಮ ಆರೋಪಗಳನ್ನು ಸಮರ್ಥಿಸುವ ಹೊಣೆಗಾರಿಕೆ ಇದೆ. ರಾಜಕೀಯ ಲಾಭಕ್ಕಾಗಿ ಗಂಭೀರ ಆರೋಪಗಳನ್ನು ಮುಂದಿಡುವುದು ಮತ್ತು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು ಬೇಡ್ತಿ-ಧರ್ಮ-ವರದಾ ನದಿ ಜೋಡಣೆ ಎಂಬ ಅವಳಿ ಗುಮ್ಮಗಳು ಎದ್ದು ಕುಳಿತು ಬೆಚ್ಚಿ ಬೀಳಿಸಿವೆ. ಸ್ವರ್ಣವಲ್ಲೀ ಸ್ವಾಮಿ, ಎಂಪಿ ಕಾಗೇರಿ ಮತ್ತು...

ಇಡೀ ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಿದ್ದ ಸಮಯದಲ್ಲಿ, ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನನ್ನು ತರಲಾಗಿತ್ತು ಎಂದು ತರೂರ್ ಆರೋಪಿಸಿದರು. “ನಮ್ಮ ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ. ವಿರೋಧ ಪಕ್ಷಗಳು ಸದ್ಯ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ” ಎಂದು ಅವರು ಹೇಳಿದರು.

ವಿರೋಧ ಪಕ್ಷಗಳು ಇವರ ಮೇಲೆ ನಂಬಿಕೆ ಕಳೆದುಕೊಂಡಿರುವಾಗ, ಇಂತಹ ಸಿಇಸಿ ನಡೆಸುವ ಚುನಾವಣೆಗಳು ಹೇಗೆ ವಿಶ್ವಾಸಾರ್ಹವಾಗಿರಲು ಸಾಧ್ಯ? ಗ್ಯಾನೇಶ್ ಕುಮಾರ್ ಅವರು ನೈತಿಕ ಹೊಣೆ ಹೊತ್ತು ತಾವಾಗಿಯೇ ರಾಜೀನಾಮೆ ನೀಡಬೇಕು ಎಂದು ತಿರುವನಂತಪುರಂ ಸಂಸದರಾದ ತರೂರ್ ಆಗ್ರಹಿಸಿದರು. “ನಮ್ಮ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾನೇ ಗೌರವಯುತವಾಗಿ ಕೆಳಗಿಳಿಯುವುದು ಲೇಸು ಎಂದು ಕುಮಾರ್ ಅವರೇ ಸ್ವತಃ ನಿರ್ಧರಿಸಬೇಕಿತ್ತು” ಎಂದರು.

ಇದನ್ನು ಓದಿದ್ದೀರಾ?: ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಸಿಇಸಿ ರಕ್ಷಣೆ ಬಗ್ಗೆ ಕಾನೂನು ಏನು ಹೇಳುತ್ತದೆ?
2023ರ ಸಿಇಸಿ ಕಾಯ್ದೆಯ ಸೆಕ್ಷನ್ 16ರ ಪ್ರಕಾರ, ಅಧಿಕಾರದಲ್ಲಿರುವ ಅಥವಾ ನಿವೃತ್ತರಾದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ತಮ್ಮ ಅಧಿಕೃತ ಕರ್ತವ್ಯದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ನ್ಯಾಯಾಲಯಗಳು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆ ನಡೆಸುವಂತಿಲ್ಲ. ಈ ನಿಯಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇದೇ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು. ಆದರೆ ಈ ನಿಯಮಕ್ಕೆ ತಡೆ ನೀಡಲು ನಿರಾಕರಿಸಿತ್ತು.

ಸಂವಿಧಾನದ 324(5) ನೇ ವಿಧಿಯ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ರೀತಿಯಲ್ಲೇ ಮತ್ತು ಅದೇ ಆಧಾರಗಳ ಮೇಲಷ್ಟೇ ಸಿಇಸಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಾಧ್ಯ (ಇಂಪೀಚ್‌ಮೆಂಟ್‌ ). ಇನ್ನುಳಿದ ಚುನಾವಣಾ ಆಯುಕ್ತರನ್ನು ಸಿಇಸಿ ಅವರ ಶಿಫಾರಸಿಲ್ಲದೆ ತೆಗೆಯುವಂತಿಲ್ಲ.

ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ತರೂರ್ ಆರೋಪಗಳು
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು, ತೆಗೆದುಹಾಕಲಾದ ಮತದಾರರನ್ನು ಮತ್ತೆ ಸೇರಿಸಬೇಕು, ಬಳಸುತ್ತಿರುವ ಸಾಫ್ಟ್‌ವೇರ್ ಅನ್ನು ಮರುಪರಿಶೀಲಿಸಬೇಕು ಮತ್ತು ಫಾರ್ಮ್ 6 ಹಾಗೂ ಫಾರ್ಮ್ 7 ರಲ್ಲಿ ತಂದಿರುವ ಬದಲಾವಣೆಗಳನ್ನು ರದ್ದುಪಡಿಸಬೇಕು ಎಂದು ತರೂರ್ ಒತ್ತಾಯಿಸಿದರು. (ಫಾರ್ಮ್ 6 ಹೊಸದಾಗಿ ಮತದಾರರ ಪಟ್ಟಿಗೆ ಸೇರಲು, ಮತ್ತು ಫಾರ್ಮ್ 7 ಹೆಸರನ್ನು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ಬಳಕೆಯಾಗುತ್ತದೆ).

ತಪ್ಪಾಗಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳಿಗೇ (ಇಆರ್‌ಒ) ಅನಿಸಿದರೂ, ಅದನ್ನು ಸರಿಪಡಿಸಲು ಈ ಸಾಫ್ಟ್‌ವೇರ್ ಬಿಡುತ್ತಿಲ್ಲ ಎಂದು ಅವರು ಆರೋಪಿಸಿದರು. ಇದಕ್ಕೆ ಉದಾಹರಣೆಯಾಗಿ ಗೋವಾದಲ್ಲಿ ನಡೆದ 97 ಪ್ರಕರಣಗಳ ಬಗ್ಗೆ ʻದಿ ಇಂಡಿಯನ್ ಎಕ್ಸ್‌ಪ್ರೆಸ್ʼ ನಡೆಸಿದ ತನಿಖಾ ವರದಿಯನ್ನು ಅವರು ಉಲ್ಲೇಖಿಸಿದರು.

“ತೀರಿಕೊಂಡವರ, ಊರು ಬಿಟ್ಟು ಹೋದವರ ಹೆಸರನ್ನು ಪಟ್ಟಿಯಿಂದ ತೆಗೆಯುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ, ಅದು ಸಾಮಾನ್ಯ ಜ್ಞಾನ. ಆದರೆ ಚುನಾವಣಾ ಆಯೋಗ ಅನುಸರಿಸುತ್ತಿರುವ ರೀತಿ, ಮತದಾರರನ್ನು ಪಟ್ಟಿಯಿಂದ ಕಿತ್ತುಹಾಕಲು ತೋರಿಸುತ್ತಿರುವ ಆತುರ, ಮತ್ತು ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಇರುವ ಮೇಲ್ಮನವಿ ಪ್ರಕ್ರಿಯೆಗೆ ತೋರುತ್ತಿರುವ ವಿಳಂಬ ನೀತಿ ಇವು ಇಲ್ಲಿಯ ದೊಡ್ಡ ಸಮಸ್ಯೆ,” ಎಂದು ತರೂರ್ ಹೇಳಿದರು.

Shashi Tharoor1

ಹೆಸರು ಅಳಿಸಿಹಾಕಿದ ನಂತರ, “ನಾನು ಮತ ಚಲಾಯಿಸಲು ಅರ್ಹ” ಎಂದು ಸಾಬೀತುಪಡಿಸುವ ಹೊಣೆಯನ್ನು ಪ್ರಜೆಗಳ ಮೇಲೆಯೇ ಹಾಕಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು. “ಮತದಾರನಿಗೆ ನೀನೇ ಸಾಬೀತುಪಡಿಸು ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರಗಳಾಗಲಿ ಅಥವಾ ವ್ಯವಸ್ಥೆಯಾಗಲಿ ಹಿಂದೆಂದೂ ಈ ರೀತಿ ಮಾಡಿರಲಿಲ್ಲ” ಎಂದರು.

ಇದಕ್ಕೆ ಉದಾಹರಣೆಯಾಗಿ 94 ವರ್ಷದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಪ್ರಕರಣವನ್ನು ತರೂರ್ ಪ್ರಸ್ತಾಪಿಸಿದರು: “ನಿಮ್ಮ ತಾಯಿ ನಿಮಗಿಂತ ಕೇವಲ 15 ವರ್ಷ ಮಾತ್ರವೇ ದೊಡ್ಡವರಾಗಿರಲು ಹೇಗೆ ಸಾಧ್ಯ ಎಂದು ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಲಾಗಿದೆ. ಹಿಂದಿನ ತಲೆಮಾರಿನಲ್ಲಿ ಬಾಲ್ಯವಿವಾಹಗಳು ಮತ್ತು ಚಿಕ್ಕ ವಯಸ್ಸಿಗೆ ಮಕ್ಕಳಾಗುವುದು ಸಹಜವಾಗಿತ್ತು. 2026ರಲ್ಲಿ ನಿಂತು ಇದ್ದಕ್ಕಿದ್ದಂತೆ ಇದು ‘ತಾರ್ಕಿಕ ತಪ್ಪು’ ಎಂದು ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ.”

ಹಾಗೆಯೇ ಭಾರತವನ್ನು ವಿದೇಶಗಳಲ್ಲಿ ಪ್ರತಿನಿಧಿಸಿದ ಗಣ್ಯರಿಗೂ ಇಂತಹ ನೋಟಿಸ್‌ಗಳನ್ನು ನೀಡಿ ಅವರ ಮತದಾನದ ಅರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕುತ್ತಿರುವುದನ್ನು ಪ್ರಶ್ನಿಸಿದ ಅವರು, “ವಿಶ್ವ ದಾಖಲೆಯೆಂಬಂತೆ ಬರೋಬ್ಬರಿ 13 ಕೋಟಿ (130 ಮಿಲಿಯನ್) ಜನರ ಹೆಸರುಗಳನ್ನು ಪಟ್ಟಿಯಿಂದ ಕಿತ್ತುಹಾಕಿದರೆ, ಆಯೋಗಕ್ಕೆ ಯಾವ ನೈತಿಕತೆ ಅಥವಾ ವಿಶ್ವಾಸಾರ್ಹತೆ ಉಳಿಯುತ್ತದೆ?” ಎಂದು ಕೇಳಿದರು.

ಚುನಾವಣೆಯಲ್ಲಿ ಸೋತಾಗ ಮಾತ್ರ ವಿರೋಧ ಪಕ್ಷಗಳು ಇಂತಹ ಪ್ರಶ್ನೆಗಳನ್ನು ಎತ್ತುತ್ತವೆ ಎಂಬ ಟೀಕೆಯನ್ನು ತಳ್ಳಿಹಾಕಿದ ಅವರು, ಮತ ಕಳೆದುಕೊಂಡ ಅಸಂಖ್ಯಾತ ನಾಗರಿಕರು ದೂರು ನೀಡುತ್ತಿರುವಾಗ ಅದನ್ನು ಪರಿಶೀಲಿಸುವುದು ಆಯೋಗದ ಕರ್ತವ್ಯ ಎಂದರು. ಮೇಲ್ಮನವಿ ಸಲ್ಲಿಸುವಲ್ಲಿ ಆಗುವ ವಿಳಂಬದಿಂದಾಗಿ ಜನರು ಹಲವು ಚುನಾವಣೆಗಳಲ್ಲಿ ಮತ ಹಾಕುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೇರಳದಲ್ಲಿ ವಿವಿಧ ಪಕ್ಷಗಳು ಎಚ್ಚರದಿಂದ ಇದ್ದುದರಿಂದ ಇಂತಹ ಅನಾಹುತಗಳು ಆಗುವುದಕ್ಕೆ ಸಾಧ್ಯವಾಗಿಲ್ಲ. ಪ.ಬಂಗಾಲ, ಬಿಹಾರದಲ್ಲಿ ಅಪಾರ ದೂರುಗಳಿವೆ. ಅವನ್ನು ಪರಿಶೀಲಿಸಬೇಕು.

ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಿಲ್ಲದು: ‘ಇಂಡಿಯಾ’ ಒಕ್ಕೂಟ ನಾಯಕರೊಂದಿಗೆ ರಾಹುಲ್ ಗಾಂಧಿ ಚಹಾಕೂಟ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಿರ್ಬಂಧಕ್ಕೆ ಆಕ್ಷೇಪ
ದೆಹಲಿಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ಸರ್ಕಾರದ ನಿರ್ಧಾರವನ್ನು ತರೂರ್ ಕಟುವಾಗಿ ಟೀಕಿಸಿದರು. ಪ್ರತಿಭಟನಾಕಾರರಿಗೆ ಪರ್ಯಾಯವಾಗಿ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನಗಳನ್ನು ನೀಡಲಾಗಿದೆ.

“ಇದು ನಾಚಿಕೆಗೇಡು. ಜನ ಯಾರಿಗೆ ತಮ್ಮ ಸಮಸ್ಯೆಗಳನ್ನು ಮುಟ್ಟಿಸಬೇಕೋ ಆ ಸರ್ಕಾರಿ ಅಧಿಕಾರಿಗಳ ಕಣ್ಣಿಗೆ, ಕಿವಿಗೆ ಬೀಳದಂತೆ ದೆಹಲಿಯ ಹೃದಯಭಾಗದಿಂದ ಪ್ರತಿಭಟನಾಕಾರರನ್ನು ದೂರ ತಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ,” ಎಂದರು.

ರಾಮಲೀಲಾ ಮೈದಾನ ಬಹುತೇಕ ದಿನಗಳಲ್ಲಿ ಬುಕ್ ಆಗಿರುತ್ತದೆ, ಈ ವರ್ಷದಲ್ಲಿ ಕೇವಲ ಡಿಸೆಂಬರ್ 29 ರಿಂದ 31 ರವರೆಗೆ ಮಾತ್ರ ಅಲ್ಲಿ ದಿನಾಂಕ ಖಾಲಿ ಇದೆ. ಹೀಗಿರುವಾಗ ಜನ ಬುರಾರಿಗೋ ಅಥವಾ ಯಮುನಾ ನದಿಯ ಆಚೆಗೋ ಹೋಗಿ ಪ್ರತಿಭಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಉದ್ದೇಶವೇನು?
ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಮರುಸ್ಥಾಪಿಸುವುದು ಮತ್ತು ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಮಾಡುವುದೇ ಸದ್ಯಕ್ಕೆ ವಿರೋಧ ಪಕ್ಷಗಳ ಪ್ರಮುಖ ಉದ್ದೇಶ ಎಂದು ತರೂರ್ ಸ್ಪಷ್ಟಪಡಿಸಿದರು.

“ಎಲ್ಲರಿಗೂ ನ್ಯಾಯ ಒದಗಿಸುವ, ಸಮತೋಲಿತ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಚುನಾವಣಾ ಆಯೋಗ ನಮಗೆ ಬೇಕಿದೆ. ಅಂತಹ ಆಯೋಗವು ನ್ಯಾಯಯುತ ಚುನಾವಣೆಗಳನ್ನು ನಡೆಸಬೇಕು,” ಎಂದರು.

ಚುನಾವಣೆಗಳು ಪಾರದರ್ಶಕವಾಗಿ ನಡೆದರೆ, ಜನ ಬಿಜೆಪಿಯನ್ನೇ ಆರಿಸಿದರೂ ವಿರೋಧ ಪಕ್ಷಗಳು ಆ ತೀರ್ಪನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತವೆ ಎಂದು ಅವರು ಹೇಳಿದರು. “ಜನ ಮತ್ತೆ ಬಿಜೆಪಿಗೆ ಮತ ಹಾಕಲು ಬಯಸಿದರೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಯಲ್ಲಿ ಬರುವ ಆ ತೀರ್ಪನ್ನು ನಾವು ಖಂಡಿತ ಗೌರವಿಸುತ್ತೇವೆ. ಆದರೆ ಪ್ರಜೆಗಳಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಮೂಲಕ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಸಿಗಬೇಕು ಎಂಬುದೇ ನಮ್ಮ ದೀರ್ಘಕಾಲದ ಹೋರಾಟ,” ಎಂದು ತರೂರ್ ಮಾತು ಮುಗಿಸಿದರು.

ಕೃಪೆ: ಇಂಡಿಯಾ ಟುಡೇ, ಕನ್ನಡಕ್ಕೆ: ಟಿ.ಎಸ್.‌ ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಎಸ್‌ಎಸ್;‌ ʼಹಣತೆಯಿಂದ ಹಣತೆಗೆʼ ಸಂವಾದದಲ್ಲಿ ಮೇಷ್ಟ್ರು ನೆನಪು

ಒಂದು ಹಣತೆಯಿಂದ ಮತ್ತೊಂದು ಹಣತೆಯನ್ನು ಹಚ್ಚಿದಾಗ ಮೊದಲ ಹಣತೆಯ ಬೆಳಕು ಕಡಿಮೆಯಾಗುವುದಿಲ್ಲ,...

ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಿಲ್ಲದು: ‘ಇಂಡಿಯಾ’ ಒಕ್ಕೂಟ ನಾಯಕರೊಂದಿಗೆ ರಾಹುಲ್ ಗಾಂಧಿ ಚಹಾಕೂಟ

ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ದೊಡ್ಡ...

ಸಿಜೆಐಗೆ ವಿಪಕ್ಷಗಳು ಬರೆದ ಪತ್ರದಲ್ಲಿ ಏನಿದೆ?

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ...

ಬಾಗಲಕೋಟೆ | ಸಮಾಜದ ಪ್ರಗತಿಗೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ: ಅಶೋಕ ನಾರಾಯಣಿ

ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿ, ಜನರಲ್ಲಿ ಜಾಗೃತಿ ಮೂಡಿಸಿ ಅಭಿವೃದ್ಧಿಯ ಹಾದಿಗೆ ದಿಕ್ಸೂಚಿಯಾಗುವ...