ಬಿಜೆಪಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಆದರೆ ಕಾಂಗ್ರೆಸ್ ಸಾರ್ವಜನಿಕ ಸಮಸ್ಯೆಗಳನ್ನು ಬಿಟ್ಟು ತೆರಳುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅವರು, 2024ರ ಚುನಾವಣೆಯಲ್ಲಿ ನಾವು ದೇಶದ ಸಮಸ್ಯೆಗಳನ್ನು ಎತ್ತಿಕೊಂಡು ಜನರ ಬಳಿ ಹೋಗುತ್ತೇವೆ. ನಿರುದ್ಯೋಗಿ ಯುವಕರಿಗಾಗಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಹಣದುಬ್ಬರ ನಿವಾರಣೆಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ಗಡಿಯಲ್ಲಿ ಚೀನಾ ಅತಿಕ್ರಮಿಸಿರುವುದಕ್ಕೆ ಏನು ಹೇಳುತ್ತದೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
“ನಮ್ಮ ಕಾಳಜಿಯೇನಿದ್ದರೂ ದಲಿತರು, ಬುಡಕಟ್ಟು ಸಮಾಜದವರು, ಹಿಂದುಳಿದ ವರ್ಗದವರು ಹಾಗೂ ಸಮಾಜದ ಬಡ ಜನರ ಮೇಲೆ. ಬಿಜೆಪಿ ಇದರ ಬಗ್ಗೆ ಯೋಚಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯ ಆಹ್ವಾನ ನಿರಾಕರಿಸಿದ ವಿಷಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ನಾನು ಈ ಬಗ್ಗೆ ಜನವರಿ 6ರಂದೆ ತಿಳಿಸಿದ್ದೇನೆ. ಬಿಜೆಪಿ ಮತ್ತೆ ಮತ್ತೆ ಏಕೆ ಈ ವಿಷಯ ಕೆದಕುತ್ತಿದೆ? ಭಗವಾನ್ ರಾಮನ ಭಕ್ತರಾಗಿರುವ ಯಾರಾದರೂ ಅವರು ಬಯಸಿದಾಗ ತೆರಳುತ್ತಾರೆ. ಬಿಜೆಪಿಯವರು ಷಡ್ಯಂತ್ರಗಳನ್ನು ಹರಡುತ್ತಿದ್ದು, ಅದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.