ದೇಶಾದ್ಯಂತ ನಡೆಸಲಾದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿಲಾಗಿದೆ. ಚುನಾವಣಾ ಆಯೋಗದ ಈ ಕೃತ್ಯದ ವಿರುದ್ಧ ಭಾರೀ ಆಕ್ರೋಶ, ಟೀಕೆ ಹಾಗೂ ಪ್ರತಿಭಟನೆಗಳು ನಡಯುತ್ತಿವೆ. ಈ ಬೆನ್ನಲ್ಲೇ, ಪರಿಷ್ಕರಣೆ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಟ್ಟಿಯಿಂದ ಬಿಟ್ಟುಹೋದ ಅರ್ಹ ಮತದಾರರನ್ನು ಮರಳಿ ಸೇರ್ಪಡೆಗೊಳಿಸಲು ಚುನಾವಣಾ ಆಯೋಗವು ‘ವಿಶೇಷ ಅಭಿಯಾನ’ ನಡೆಸುವುದಾಗಿ ಘೋಷಿಸಿದೆ.
ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಚುನವಣಾ ಆಯೋಗವು ಲಿಖಿತ ಸೂಚನೆ ನೀಡಿದೆ. ಅಲ್ಲದೆ, ಇತ್ತೀಚೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲೂ ಈ ನಿರ್ಧಾರದ ಬಗ್ಗೆ ವಿವರಿಸಿದೆ.
ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್‌ಐಆರ್ ಜಾರಿ ಸೇರಿದಂತೆ ಹಲವಾರು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಕೈಗೊಳ್ಳಲಾಗಿದೆ ಎಂದು ಆಕ್ಷೇಪಿಸಿ ಕಳೆದ 10 ತಿಂಗಳುಗಳಲ್ಲಿ ಸುಮಾರು 14 ಬಾರಿ ಪತ್ರ ಬರೆದಿದ್ದರು. ಮುಖ್ಯವಾಗಿ, ಹೊಸ ಮತದಾರರು ಭರ್ತಿ ಮಾಡುವ ‘ಫಾರ್ಮ್ 6’ನಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಇಡೀ ಪರಿಷ್ಕರಣೆ ಪ್ರಕ್ರಿಯೆ ನಡೆಯುವ ‘ಇಸಿಐ-ನೆಟ್’ ತಂತ್ರಾಂಶದ ಕೇಂದ್ರಿಕೃತ ನಿಯಂತ್ರಣದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಕುರಿತಾದ ತನಿಖಾ ವರದಿ ಪ್ರಕಟವಾದ ಬಳಿಕ, ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಮತ್ತು ಏಕಪಕ್ಷೀಯ ಧೋರಣೆಗಳ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಮೋದಿ-ಶಾ ಜೋಡಿಯ ಕೈಗೊಂಬೆಯಾಗಿ ವರ್ತಿಸುತ್ತಿರುವ ಗ್ಯಾನೇಶ್ ಕುಮಾರ್, ದೇಶದ 96 ಕೋಟಿ ಮತದಾರರನ್ನು ತೊಂದರೆ ದೂಡಿದ್ದಾರೆ. 13 ಕೋಟಿ ಅರ್ಹ ಮತದಾರರ ಮತದ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸಿ, ಬಂಧಿಸಬೇಕು ಎಂಬ ಆಗ್ರಹಗಳು ಹೆಚ್ಚಾಗಿವೆ.
ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಂದ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಹೆದರಿದ್ದಾರೆ. ಆದ್ದರಿಂದಲೇ, ಪರಿಷ್ಕರಣೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಬಿಟ್ಟುಹೋದ ಮತದಾರರು ಮತ್ತು ಹೊಸದಾಗಿ ಮತಪಟ್ಟಿಗೆ ನೋಂದಣಿಯಾಗಲಿರುವ ಯುವಜನರನ್ನು ಮತಪಟ್ಟಿಗೆ ಸೇರಿಸಲು ‘ವಿಶೇಷ ಅಭಿಯಾನ’ ನಡೆಸುವಂತೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಇಆರ್‌ಒಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಜುಲೈ ತಿಂಗಳಿನಲ್ಲಿ ಫಾರ್ಮ್ 6ಗೆ ಸೇರಿಸಲಾಗಿದ್ದ ಗೊಂದಲಮಯ ಪ್ರಶ್ನೆಯನ್ನು ಈಗ ತೆಗೆದುಹಾಕಲಾಗಿದೆ. ಈ ಹಿಂದೆ ಅರ್ಜಿದಾರರು ಅಥವಾ ಅವರ ಪೋಷಕರು ಕಳೆದ ಮತಪಟ್ಟಿ ಪರಿಷ್ಕರಣೆಯ ಪಟ್ಟಿಯಲ್ಲಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದರಿಂದ ಪೋಷಕರ ಹೆಸರು ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದರೆ, 18 ವರ್ಷ ತುಂಬಿದ ಯುವಜನರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ನಿಯಮಗಳಿಗೆ ತಿದ್ದುಪಡಿ ತರದೆ ಈ ರೀತಿ ಫಾರ್ಮ್ ಬದಲಾಯಿಸುವುದು ‘ಅನಧಿಕೃತ ಮತ್ತು ಕಾನೂನುಬಾಹಿರ’ ಎಂದು ಆಯುಕ್ತ ಸಂಧು ಆಕ್ಷೇಪಿಸಿದ್ದರು. ಹೀಗಾಗಿ, ಈಗ ಹಳೆಯ ಹಾಗೂ ಶಾಸನಬದ್ಧ ಸರಳ ‘ಫಾರ್ಮ್ 6’ ಅನ್ನೇ ಬಳಸಲು ಸೂಚಿಸಲಾಗಿದೆ.
ಪರಿಷ್ಕರಣೆಗೆ ಮುಂಚಿನ ಮತ್ತು ಪರಿಷ್ಕರಣೆಯ ನಂತರದ ಮತದಾರರ ಪಟ್ಟಿಗಳನ್ನು ಹೋಲಿಸಿ ನೋಡಿ, ಬಿಟ್ಟುಹೋದ ಅರ್ಹರನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಕಲಿ ದಾಖಲೆ ಹೊಂದಿಲ್ಲದ, ಬೇರೆಡೆ ನೋಂದಣಿಯಾಗದ ಹಾಗೂ ಮೃತಪಡದ ಮತದಾರರ ಮನೆಗಳಿಗೆ ನೇರವಾಗಿ ಭೇಟಿ ನೀಡಿ, ಅವರ ಬಳಿ ಫಾರ್ಮ್ 6 ಭರ್ತಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮತ್ತು ಬೂತ್ ಮಟ್ಟದ ಏಜೆಂಟರ (ಬಿಎಲ್‌ಎ) ನೆರವು ಪಡೆಯಲು ಸೂಚಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಇವಿಎಂ vs ಬ್ಯಾಲೆಟ್ ಪೇಪರ್: ಯಾಕೀ ವಿವಾದ?
ಗೋವಾದಲ್ಲಿ ಇಆರ್‌ಒಗಳಿಂದ ಅರ್ಹರೆಂದು ದೃಢಪಟ್ಟಿದ್ದರೂ ತಂತ್ರಾಂಶದ ಸಮಸ್ಯೆಯಿಂದಾಗಿ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದ 97 ಮತದಾರರಂತೆ, ಬಿಟ್ಟುಹೋದ ಪ್ರತಿಯೊಬ್ಬರಿಗೂ ಫಾರ್ಮ್ 6 ಮೂಲಕವೇ ಮರಳಿ ಅವಕಾಶ ಕಲ್ಪಿಸಲಾಗುತ್ತಿದೆ. ಕಾನೂನಿನ ಪ್ರಕಾರ, ಮತದಾರರ ಪಟ್ಟಿಯ ಸಂಪೂರ್ಣ ಜವಾಬ್ದಾರಿ ಇಆರ್‌ಒ, ಡಿಇಒ ಹಾಗೂ ಸಿಇಒಗಳ ಮೇಲಿರುತ್ತದೆ. ಆದರೆ, ಎಸ್‌ಐಆರ್‌ನಲ್ಲಿ ಸಾಫ್ಟ್‌ವೇರ್ ನಿಯಂತ್ರಣದ ಮೂಲಕ ದೆಹಲಿಯ ಕೇಂದ್ರ ಕಚೇರಿಯ ಐಟಿ ವಿಭಾಗವು ಮತಪಟ್ಟಿಯನ್ನು ನಿಯಂತ್ರಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಇದೀಗ, ಈ ತಾಂತ್ರಿಕ ತೊಡಕುಗಳನ್ನು ಪರಿಶೀಲಿಸಿ, ಅದನ್ನೂ ಸರಿಯಾಗಿ ನಿರ್ವಹಿಸಲು ಐಐಟಿ ತಜ್ಞರನ್ನೊಳಗೊಂಡ ಸಮಿತಿಯನ್ನೂ ರಚಿಸುವುದಾಗಿ ಆಯೋಗ ಹೇಳಿಕೊಂಡಿದೆ.
ಇನ್ನು, ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಚಾಲ್ತಿಯಲ್ಲಿರುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ, ಯಾವುದೇ ಮತದಾರರ ಹೆಸರನ್ನು ಆತುರದಲ್ಲಿ ಪಟ್ಟಿಯಿಂದ ತೆಗೆದುಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂಬೈ ನಗರ ಮತ್ತು ಉಪನಗರದ ಅಧಿಕಾರಿಗಳಿಗೆ ರವಾನಿಸಲಾದ ಸುತ್ತೋಲೆಯಲ್ಲಿ, “ಮತದಾರರ ಹೆಸರು ಕೈಬಿಡುವ ಮುನ್ನ ಅವರಿಗೆ ಅಗತ್ಯ ದಾಖಲೆ ಸಲ್ಲಿಸಲು ಸೂಕ್ತ ಅವಕಾಶ ನೀಡಬೇಕು, ವಿಚಾರಣೆ ನಡೆಸಿ ಸ್ಪಷ್ಟ ಆದೇಶ ಹೊರಡಿಸಬೇಕು” ಎಂದು ತಿಳಿಸಲಾಗಿದೆ.
ದಾಖಲೆಗಳ ಪರಿಶೀಲನೆಗಾಗಿ ನೋಟಿಸ್ ನೀಡಲಾಗಿರುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ. ಬಿಎಲ್‌ಒಗಳು ಸ್ವತಃ ಮತದಾರರ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಈಗಾಗಲೇ ನೋಟಿಸ್ ಪಡೆದವರಿಗೆ ಫೋನ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಈ ವಿಷಯ ತಿಳಿಸಲು ಸೂಚಿಸಲಾಗಿದೆ. ಅಕ್ಟೋಬರ್ 3, 4, 10 ಮತ್ತು 11 ರಂದು ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದ್ದು, ಯಾವುದೇ ಅರ್ಹ ಪ್ರಜೆಯೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಮಹಾರಾಷ್ಟ್ರ ಚುನಾವಣಾ ಆಡಳಿತ ಸ್ಪಷ್ಟಪಡಿಸಿದೆ.



