ಮೋ-ಶಾಗಾಗಿ ಇಡೀ ವ್ಯವಸ್ಥೆಯ ದುರ್ಬಳಕೆ, SIR ಅಕ್ರಮ, ಗ್ಯಾನೇಶ್‌ ಷಡ್ಯಂತ್ರ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಐಎಎಸ್‌ ಆರ್‌ಕೆ ಸಿಂಗ್‌

Date:

1950ರ ಪ್ರಜಾಪ್ರತಿನಿಧಿ ಕಾಯಿದೆಯ (RP Act) ಸೆಕ್ಷನ್ 21ರ ಪ್ರಕಾರ ವಿಶೇಷ ಪರಿಷ್ಕರಣೆಯನ್ನು ಕೆಲವು ನಿರ್ದಿಷ್ಟ ಮತ್ತು ಸಕಾರಣ ಸಂದರ್ಭಗಳಲ್ಲಿ, ಕೇವಲ ಒಂದು ಕ್ಷೇತ್ರ ಅಥವಾ ಕ್ಷೇತ್ರದ ಭಾಗಕ್ಕೆ ಮಾತ್ರ ಕೈಗೊಳ್ಳಲು ಅವಕಾಶವಿದೆ. ಆದರೆ, ವಿನಾಯಿತಿಯ ಹೆಸರಿನಲ್ಲಿ ಎಸ್‌ಐಆರ್‌ಅನ್ನು ಇಡೀ ದೇಶಕ್ಕೆ ಅನ್ವಯಿಸಿದ್ದು ಸಂಪೂರ್ಣ ಕಾನೂನುಬಾಹಿರ. ಈ ಎಸ್‌ಐಆರ್ ಪ್ರಕ್ರಿಯೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಆದೇಶವೂ ದೋಷಪೂರಿತ ಎಂದು ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಆರ್‌.ಕೆ ಸಿಂಗ್‌ ವಿವರಿಸಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆಯನ್ನು ಖಂಡಿಸಿದ್ದಾರೆ.

- Advertisement -

ಭಾರತೀಯರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿರುವ ಆರ್‌.ಕೆ ಸಿಂಗ್‌ ಅವರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಮತ್ತು ಆಡಳಿತಾರೂಢ ಬಿಜೆಪಿ ಎಸ್‌ಐಆರ್‌ ಹೆಸರಿನಲ್ಲಿ ನಡೆಸಿರುವ ಸಾವಿಂಧಾನಿಕ ಉಲ್ಲಂಘಟನೆಗಳು, ಕಾನೂನುಬಾಹಿರ ನಿರ್ಧಾರಗಳು ಹಾಗೂ ತಾಂತ್ರಿಕೆಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನಾಗರಿಕರು ತಕ್ಷಣವೇ ಜಾಗೃತರಾಗಬೇಕೆಂದು ಕರೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಆರ್‌.ಕೆ ಸಿಂಗ್‌ ಅವರ ಪತ್ರದ ಸಾರ ಇಲ್ಲಿದೆ;

ಆರ್‌ಪಿ ಕಾಯ್ದೆಯ ಸೆಕ್ಷನ್ 21ರ ಪ್ರಕಾರ ಮತಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪ್ರಕಟಗೊಂಡು, ಪರಿಷ್ಕರಣೆ ನಡೆದು, ಅದಕ್ಕೆ ಸಂಬಂಧಿಸಿದ ಎಲ್ಲ ಮೇಲ್ಮನವಿಗಳು ಇತ್ಯರ್ಥವಾಗುವವರೆಗೆ ಹಳೆಯ ಮತದಾರರ ಪಟ್ಟಿಯೇ ಜಾರಿಯಲ್ಲಿರಬೇಕು. ಎಲ್ಲ ಮೇಲ್ಮನವಿಗಳು ಇತ್ಯರ್ಥಗೊಂಡ ನಂತರವಷ್ಟೇ ಹೊಸ ಪಟ್ಟಿ ಪೂರ್ಣಗೊಳ್ಳುತ್ತದೆ. ಆದರೆ, ಲಕ್ಷಾಂತರ ಮತದಾರರ ಮೇಲ್ಮನವಿಗಳು ಇತ್ಯರ್ಥವಾಗದೆ ಬಾಕಿ ಇದ್ದರೂ ಸಹ, ಅರ್ಹರ ಹೆಸರುಗಳನ್ನು ತೆಗೆದುಹಾಕಲಾದ ಹೊಸ ಎಸ್‌ಐಆರ್‌ ಪಟ್ಟಿಯನ್ನೇ ಬಳಸಿ ಇತ್ತೀಚಿನ ಚುನಾವಣೆಗಳನ್ನು ನಡೆಸಿರುವುದು ಗಂಭೀರ ಕಾನೂನುಬಾಹಿರ ಕೃತ್ಯ.

ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ಕೇವಲ ಮತದಾರರ ನೋಂದಣಾಧಿಕಾರಿಗೆ (ERO) ಮಾತ್ರ ಸೂಕ್ತ ವಿಚಾರಣೆ ನಡೆಸಿ, ಸಂಬಂಧಪಟ್ಟ ವ್ಯಕ್ತಿಗೆ ತಮ್ಮ ವಾದ ಮಂಡಿಸಲು ನ್ಯಾಯಯುತ ಅವಕಾಶ ನೀಡಿ, ಮೇಲ್ಮನವಿಗಳು ಮುಕ್ತಾಯಗೊಂಡ ಮೇಲಷ್ಟೇ ಹೆಸರು ತೆಗೆದುಹಾಕುವ ಅಧಿಕಾರವಿರುತ್ತದೆ. ಆದರೆ, ಜ್ಞಾನೇಶ್ ಕುಮಾರ್ ಅವರು 2003ರ ನಂತರ ಇಆರ್‌ಒಗಳಿಂದ ಪಟ್ಟಿಗೆ ಸೇರ್ಪಡೆಯಾಗಿದ್ದ ಕೋಟ್ಯಂತರ ಮತದಾರರ ಹೆಸರುಗಳನ್ನು ಯಾವುದೇ ಆಧಾರ, ವಿಚಾರಣೆ ಅಥವಾ ನೋಟಿಸ್ ನೀಡದೆ ಏಕಾಏಕಿ ತೆಗೆದುಹಾಕಿದ್ದಾರೆ.

ಹೀಗೆ ಅನ್ಯಾಯವಾಗಿ ಹೆಸರು ಕಳೆದುಕೊಂಡ ನಾಗರಿಕರು ತಾವೇ ಅರ್ಹರು ಎಂದು ಸಾಬೀತುಪಡಿಸಲು ‘ಫಾರ್ಮ್-6’ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮಾಡಲಾಗಿದೆ. ಇದು ‘ಲಾಲ್ ಬಾಬು ಹುಸೇನ್ vs ಮತದಾರರ ನೋಂದಣಾಧಿಕಾರಿ (1995)’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಒಬ್ಬ ಮತದಾರ ಅನರ್ಹ ಎಂದು ಸಾಬೀತುಪಡಿಸುವ ಜವಾಬ್ದಾರಿ ವಿಚಾರಣಾಧಿಕಾರಿ ಅಥವಾ ಆಕ್ಷೇಪಣೆ ಎತ್ತಿದ ವ್ಯಕ್ತಿಯ ಮೇಲಿರುತ್ತದೆಯೇ ಹೊರತು ಮತದಾರನ ಮೇಲಲ್ಲ. ಆಯೋಗವು ಈ ‘ಪುರಾವೆಯ ಜವಾಬ್ದಾರಿಯನ್ನು’ ಮತದಾರರ ಮೇಲೆಯೇ ಉಲ್ಟಾ ಹೇರಿ ಕಾನೂನನ್ನು ಗಾಳಿಗೆ ತೂರಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ, ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಪ್ರಕ್ರಿಯೆಯ ಬದಲಿಗೆ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ‘ಹಕ್ಕುಚ್ಯುತಿ ಆಂದೋಲನ’ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ನಡೆಯುತ್ತಿದೆ.

ಗ್ಯಾನೇಶ್ ಕುಮಾರ್ ಅವರು ಶಾಸನಬದ್ಧ ನಿಯಮಗಳಿಗೆ ವಿರುದ್ಧವಾಗಿ ಫಾರ್ಮ್-6ಕ್ಕೆ ಹೊಸ ‘ಉಪಪ್ರಶ್ನೆ’ವನ್ನು (Appendix) ಸೇರಿಸಿದ್ದಾರೆ. ಆಯೋಗದ ಯಾವುದೇ ನಿರ್ಧಾರವು ಸರ್ವಸಮ್ಮತ ಅಥವಾ ಬಹುಮತದಿಂದ ನಡೆಯಬೇಕು. ಆದರೆ, ಉಳಿದ ಇಬ್ಬರು ಚುನಾವಣಾ ಆಯುಕ್ತರು ಈ ಹೊಸ ಉಪಪ್ರಶ್ನೆ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಬಹುಮತದ ನಿಲುವನ್ನುಧಿಕ್ಕರಿಸಿ ಗ್ಯಾನೇಶ್ ಕುಮಾರ್ ಅವರು ಇದನ್ನು ಸೇರಿಸಿದ್ದಾರೆ. ಯಾರ ಆದೇಶದ ಮೇರೆಗೆ ಈ ಕಾನೂನುಬಾಹಿರ ಕೆಲಸ ನಡೆಯಿತು.

ಈ ಹೊಸ ಉಪಪ್ರಶ್ನೆಯಲ್ಲಿ, 18 ವರ್ಷದ ಯುವ ಮತದಾರರು ತಮ್ಮ ಪೋಷಕರ ಹೆಸರುಗಳು 2002ರ ಮತದಾರರ ಪಟ್ಟಿಯಲ್ಲಿದ್ದ ಕ್ರಮಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 2026ರ ಪ್ರಸ್ತುತ ಅವಧಿಯಲ್ಲಿ ಸಾಮಾನ್ಯ ಯುವಜನರೊಬ್ಬರು 2002ರ ಪಟ್ಟಿಯನ್ನು ಹುಡುಕಿ ತೆಗೆಯುವುದು ಅಸಾಧ್ಯದ ಮಾತು. ಯುವ ಮತದಾರರು ತಮ್ಮ ವಿರುದ್ಧ ಮತ ಚಲಾಯಿಸುತ್ತಾರೆ ಎಂಬ ಭಯದಿಂದ ಬಿಜೆಪಿಗಾಗಿ ಯುವಜನರ ನೋಂದಣಿಯನ್ನೇ ತಡೆಯಲು ಈ ತಂತ್ರ ಹೆಣೆಯಲಾಗಿದೆ.

ಈ ಲೇಖನ ಓದಿದ್ದೀರಾ?: ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಅಷ್ಟೇ ಅಲ್ಲದೆ, ಫಾರ್ಮ್-7ರ ಮೂಲಕ ಮತದಾರರ ಹೆಸರುಗಳನ್ನು ಕೈಬಿಡಲು ಗುಂಪು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳಿಗೆ ಸಹಿ ಮಾಡಿದ ವ್ಯಕ್ತಿಗಳೇ ವಿಚಾರಣೆಗೆ ಹಾಜರಾಗದಿದ್ದರೂ ಆ ಅರ್ಜಿಗಳನ್ನು ಆಯೋಗ ಅಂಗೀಕರಿಸಿದೆ. ಪಶ್ಚಿಮ ಬಂಗಾಳದಲ್ಲಿ ಇಆರ್‌ಒಗಳಿಂದ ಅರ್ಹರೆಂದು ದೃಢಪಟ್ಟಿದ್ದ 16 ಲಕ್ಷ ಮತದಾರರನ್ನು ಆಯೋಗವೇ ಮೇಲ್ಮನವಿ ಸಲ್ಲಿಸಿ ತಡೆಹಿಡಿದಿದೆ. ಆದರೆ, ಇಬ್ಬರು ಆಯುಕ್ತರು ತಾವು ಅಂತಹ ಯಾವುದೇ ಮೇಲ್ಮನವಿಗೆ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಆಯೋಗದ ಹೆಸರಿನಲ್ಲಿ ಮೇಲ್ಮನವಿ ಸಲ್ಲಿಸಿ 26 ಲಕ್ಷ ಜನರ ಮತದಾನ ತಡೆದದ್ದು ಯಾರು? ಚುನಾವಣಾ ಆಯೋಗ ಹಾಗೂ ನಿರ್ದಿಷ್ಟ ರಾಜಕೀಯ ಪಕ್ಷದ ಪ್ರತಿನಿಧಿಗಳು ಒಳಸಂಚು ನಡೆಸಿ ಈ ನಕಲಿ ಫಾರ್ಮ್-7 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮೇಲ್ಮನವಿಗಳು ಇತ್ಯರ್ಥಗೊಂಡಾಗ ಹೊರಬಿದ್ದ ಸತ್ಯವೆಂದರೆ, ಹೊರಗಿಡಲಾಗಿದ್ದ 90% ರಷ್ಟು ಮತದಾರರು ನಿಜವಾದ ಅರ್ಹ ನಾಗರಿಕರಾಗಿದ್ದರು.

ಭಾರತದ ಗ್ರಾಮೀಣ ಮತ್ತು ಬಡ ಜನರ ವಾಸ್ತವದ ಅರಿವಿಲ್ಲದೆ ‘ತಾರ್ಕಿಕ ವ್ಯತ್ಯಾಸ’ ಎಂಬ ವಿಚಿತ್ರ ನಿಯಮವನ್ನು ಜಾರಿಗೆ ತರಲಾಗಿದೆ. ದೇಶದ ಬಡವರ ಮಕ್ಕಳು ಆಸ್ಪತ್ರೆಗಳಲ್ಲಿ ಜನಿಸುವುದಿಲ್ಲ, ಅವರ ಬಳಿ ಜನನ ಪ್ರಮಾಣಪತ್ರಗಳಾಗಲಿ ಅಥವಾ ಮನೆಗಳಲ್ಲಿ ಕ್ಯಾಲೆಂಡರ್‌ಗಳಾಗಲಿ ಇರುವುದಿಲ್ಲ. ಬಿಎಲ್‌ಒಗಳು ಬಂದಾಗ ಅವರು ಅಂದಾಜು ಜನ್ಮವರ್ಷವನ್ನು ನೀಡಿರುತ್ತಾರೆ. ಆಯೋಗದಲ್ಲಿದ್ದ ಅಧಿಕಾರಿಗಳು ತಂದೆ ಮತ್ತು ಮಕ್ಕಳ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆಯಿದ್ದರೆ ಅದನ್ನು ‘ತಾರ್ಕಿಕ ವ್ಯತ್ಯಾಸ’ ಎಂದು ವರ್ಗೀಕರಿಸಿ, ಯಾವುದೇ ವಿಚಾರಣೆ ಇಲ್ಲದೆ ಕೋಟ್ಯಂತರ ಹೆಸರುಗಳನ್ನು ಹೊರಹಾಕಿದ್ದಾರೆ.

ಈ ಪ್ರಕ್ರಿಯೆಯಿಂದ ಅತಿ ಹೆಚ್ಚು ಹಾನಿಗೊಳಗಾದವರು ಬಡವರು, ಶೋಷಿತರು ಹಾಗೂ ದಿನಗೂಲಿ ಕಾರ್ಮಿಕರು. ಹೊಟ್ಟೆಪಾಡಿಗಾಗಿ ದೂರದ ಊರುಗಳಲ್ಲಿ ಕೆಲಸ ಮಾಡುವ ಈ ಕಾರ್ಮಿಕರು ಒಂದು ತಿಂಗಳ ಕೂಲಿ ಬಿಟ್ಟು, ಸಂಕೀರ್ಣ ಫಾರ್ಮ್‌ಗಳನ್ನು ತುಂಬಲು ಮತ್ತು ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ. ಅತ್ತ ಅಕ್ರಮ ವಲಸಿಗರು ಭಾರತಕ್ಕೆ ಬಂದ ತಕ್ಷಣವೇ ಆಧಾರ್, ರೇಷನ್ ಕಾರ್ಡ್ ದಾಖಲೆಗಳನ್ನು ಮಾಡಿಸಿಕೊಳ್ಳುವುದರಿಂದ ಅವರಿಗೆ ಯಾವುದೇ ತೊಂದರೆಯಾಗಿಲ್ಲ; ಬದಲಾಗಿ, ದೇಶದ ಮೂಲ ಬಡ ನಾಗರಿಕರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ.

ಗ್ಯಾನೇಶ್ ಕುಮಾರ್ ಅವರು ತಾವೇ ಒಂದು ಡಿಜಿಟಲ್ ಮತದಾರರ ಪಟ್ಟಿಯನ್ನು ರೂಪಿಸಿ, ‘ತಾರ್ಕಿಕ ವ್ಯತ್ಯಾಸ’ದ ನೆಪದಲ್ಲಿ ಹೆಸರುಗಳನ್ನು ತಿರಸ್ಕರಿಸುವ ಅಧಿಕಾರವನ್ನು ಸಾಫ್ಟ್‌ವೇರ್‌ಗೆ ನೀಡಿದ್ದಾರೆ. ಕಾಯಿದೆಯ ಪ್ರಕಾರ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡುವ ಏಕೈಕ ಅಧಿಕಾರ ಇಆರ್‌ಒಗೆ ಮಾತ್ರ ಇದೆ. ಆದರೆ, ಈ ಅಧಿಕಾರವನ್ನು ಕಸಿದುಕೊಂಡು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಕೇಂದ್ರೀಕರಿಸಲಾಗಿದೆ.

ಸ್ಥಳೀಯ ಇಆರ್‌ಒ, ಡಿಇಒ ಮತ್ತು ಸಿಇಒಗಳಿಗೂ ಈ ಡಿಜಿಟಲ್ ವ್ಯವಸ್ಥೆಯನ್ನು ಪ್ರವೇಶಿಸಲು ಆಯೋಗ ಅವಕಾಶ ನೀಡುತ್ತಿಲ್ಲ ಎಂದು ಇಬ್ಬರು ಆಯುಕ್ತರು ಬಹಿರಂಗಪಡಿಸಿದ್ದಾರೆ. ಉದಾಹರಣೆಗೆ, ಗೋವಾದಲ್ಲಿ ಇಆರ್‌ಒಗಳು 97 ಮತದಾರರನ್ನು ಅರ್ಹರೆಂದು ಸಾಬೀತುಪಡಿಸಿ ಆದೇಶಿಸಿದ್ದರೂ, ಕೇಂದ್ರೀಕೃತ ಸಾಫ್ಟ್‌ವೇರ್‌ ದೋಷದಿಂದಾಗಿ ಅವರ ಹೆಸರುಗಳನ್ನು ಪಟ್ಟಿಗೆ ಸೇರಿಸಲು ಈವರೆಗೂ ಸಾಧ್ಯವಾಗಿಲ್ಲ. ಎನ್‌ಡಿಎಗೆ ವಿರುದ್ಧವಾಗಿ ಮತ ಚಲಾಯಿಸುವ ಬೂತ್‌ಗಳ ಮತದಾರರನ್ನು ಪಟ್ಟಿಯಿಂದ ಕತ್ತರಿಸಲು ಈ ಕೇಂದ್ರೀಕೃತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅರ್ಹ ಮತದಾರರ ಪರಿಶೀಲನೆಗೂ ಮುನ್ನವೇ ಅವರ ಹೆಸರುಗಳನ್ನು ತೆಗೆದುಹಾಕುವುದು ಗ್ಯಾನೇಶ್ ಕುಮಾರ್ ಅವರು ಎಸಗಿರುವ ಗಂಭೀರ ಅಪರಾಧ.

ಎಸ್‌ಐಆರ್ ಅಭಿಯಾನದ ಮೂಲಕ ಈವರೆಗೆ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದು ದೇಶದ ಒಟ್ಟು ಮತದಾರರ 13% ರಷ್ಟಾಗಿದೆ. ಇನ್ನೂ ಈ ಎಸ್‌ಐಆರ್‌ ಪ್ರಕ್ರಿಯೆ ಮುಗಿದಿಲ್ಲ. 2024 ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವಿದ್ದ ಮತಗಳ ಅಂತರ ಕೇವಲ 3% ಮಾತ್ರ. ಹೀಗಿರುವಾಗ, 13% ರಷ್ಟು ಮತಗಳನ್ನು ಡಿಲೀಟ್ ಮಾಡಿರುವುದು ಮುಂಬರುವ ಚುನಾವಣೆಗಳ ಫಲಿತಾಂಶದ ಮೇಲೆಯೇ ನೇರ ಮತ್ತು ನಿರ್ಣಾಯಕ ಪರಿಣಾಮ ಬೀರಲಿದೆ. ಸೆಪ್ಟೆಂಬರ್ 26ರಂದು ನಡೆದ ಆಯೋಗದ ಸಭೆಯ ಪ್ರಕಟಣೆಯೇ ಈ ಎಲ್ಲ ಅಕ್ರಮಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ದೋಷಾರೋಪಣೆ ತರುವುದಾಗಿ ವಿರೋಧ ಪಕ್ಷಗಳು ಹೇಳುತ್ತಿರುವುದು ವ್ಯರ್ಥ ಸಾಹಸ. ಏಕೆಂದರೆ ಅವರ ಬಳಿ ಸೂಕ್ತ ಸಂಖ್ಯಾಬಲವಿಲ್ಲ. ನಿಜವಾದ ಪರಿಹಾರ ಬೇಕಿದ್ದರೆ ವಿಪಕ್ಷಗಳು ಗ್ಯಾನೇಶ್ ಕುಮಾರ್ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು.

ಜೊತೆಗೆ, ಎಲ್ಲ ವಿರೋಧ ಪಕ್ಷಗಳು ಒಂದಾಗಿ, ಸಿಇಸಿ ಮತ್ತು ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಮತ್ತು ಅವರ ಆಯ್ಕೆ ಪ್ರಕ್ರಿಯೆಯನ್ನು ಹಳೆಯ ಮಾದರಿಯಂತೆ (ಪ್ರಧಾನಮಂತ್ರಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳನ್ನೊಳಗೊಂಡ ತಟಸ್ಥ ಸಮಿತಿ) ನಡೆಸುವವರೆಗೆ ಯಾವುದೇ ಚುನಾವಣೆಯಲ್ಲೂ ಭಾಗವಹಿಸುವುದಿಲ್ಲ ಎಂದು ಬಹಿಷ್ಕರಿಸಬೇಕು. ಲಕ್ಷಾಂತರ ಮತದಾರರ ಮೇಲ್ಮನವಿಗಳು ಬಾಕಿ ಇರುವಾಗಲೇ ನಡೆದ ಎಲ್ಲ ರಾಜ್ಯಗಳ ಚುನಾವಣೆಗಳನ್ನು ರದ್ದುಗೊಳಿಸಿ, ಮರು ಚುನಾವಣೆ ನಡೆಸಬೇಕು. ಅಲ್ಲದೆ, ಯಾವುದೇ ಇವಿಎಂ ವ್ಯವಸ್ಥೆಯು ಹ್ಯಾಕಿಂಗ್‌ಗೆ ಒಳಗಾಗುವ ಅಪಾಯ ಇರುವುದಿರಂದ, ಹಲವು ದೇಶಗಳಂತೆ ಭಾರತದಲ್ಲೂ ಬ್ಯಾಲಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು.

ಎಸ್‌ಐಆರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅದರ ಗೌರವಕ್ಕೆ ಧಕ್ಕೆ ತಂದಿದೆ. ಇದು ತುರ್ತುಪರಿಸ್ಥಿತಿಯನ್ನು ಎತ್ತಿಹಿಡಿದ ಕರಾಳ ತೀರ್ಪಿಗೆ ಸಮಾನವಾಗಿದೆ. ಚುನಾವಣಾ ಆಯುಕ್ತರ ಆಯ್ಕೆ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಳಂಬ ಮಾಡುತ್ತಿರುವುದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ದೇಶದ ಸಮಸ್ತ ಪ್ರಜೆಗಳು ಮತ್ತು ರಾಜಕೀಯ ಪಕ್ಷಗಳು ತಕ್ಷಣವೇ ಒಂದಾಗಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಟಗುಪ್ಪ | ಜೆಜೆಎಂ, ರಾಜ್ಯ ಹೆದ್ದಾರಿ ಕಳಪೆ ಕಾಮಗಾರಿ ಖಂಡಿಸಿ ಬೇಮಳಖೇಡ ಗ್ರಾಮಸ್ಥರ ಪ್ರತಿಭಟನೆ

ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ...

ಔರಾದ್‌ | ಭಗತ್ ಸಿಂಗ್ ತ್ಯಾಗ, ದೇಶಪ್ರೇಮ ಯುವ ಜನಾಂಗಕ್ಕೆ ಆದರ್ಶ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಅಪ್ರತಿಮ ವೀರ...

ಟ್ರ್ಯಾಫಿಕ್ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ವಿದ್ಯುತ್ ಬಿಲ್‌ನೊಂದಿಗೆ ವಸೂಲಿ ಮಾಡಲು ಸುಪ್ರೀಂ ಸಲಹೆ

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ಇ-ಚಲನ್‌ಗಳ ಬಾಕಿ ಮೊತ್ತವನ್ನು ವಸೂಲಿ ಮಾಡಲು...

ಬೀದರ್‌ | ಪ್ರೇಕ್ಷಕರ ಮನಗೆದ್ದ ʼಸಣ್ಣಗೌಡಸಾನಿ’ ನಾಟಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುಮುಖಿ ಪ್ರತಿಭೆಯುಳ್ಳ ಸಾಹಿತಿ, ಲೇಖಕರು, ಕಲಾವಿದರಿದ್ದು, ಅವರಿಗೆ...