ಗೊಡ್ಲುಮನೆ ಹೆಚ್.ಹೆಚ್. ರಮೇಶ್ ಗೌಡ ಹಾಗೂ ಹೆಚ್.ಆರ್. ಜಯಲಕ್ಷ್ಮಿ ದಂಪತಿಯ ಹಿರಿಯ ಪುತ್ರ ಡಾ. ಚೇತನ್ ಗೊಡ್ಲುಮನೆ ರಮೇಶ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಯ 26ನೇ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ.
ಕುದುರೆಮುಖ ದ ಗಿರಿಜ್ಯೋತಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಜೆಇಎಂ ಶಾಲೆ, ಕಳಸದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿ, ತರಗತಿಯಲ್ಲಿ ಅಗ್ರಸ್ಥಾನ ಗಳಿಸುತ್ತಿದ್ದರು. ಬಳಿಕ ಉಜಿರೆಯ ಎಸ್‌ಡಿಎಂ ರೆಸಿಡೆನ್ಷಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಅವರು, ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಐಟಿ)ಯಲ್ಲಿ ಬಿಇ ಹಾಗೂ ಎಂಟೆಕ್ ಪದವಿಗಳನ್ನು ಪಡೆದಿದ್ದಾರೆ.
ಉನ್ನತ ಶಿಕ್ಷಣದ ಬಳಿಕ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು, ಅಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧನೆ, ಸಂಶೋಧನೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.
ಡಾ. ಎಂ.ಎಸ್. ಗೋವಿಂದೇಗೌಡ ಅವರ ಮಾರ್ಗದರ್ಶನದಲ್ಲಿ ವಿಟಿಯು ರಿಸರ್ಚ್ ರಿಸೋರ್ಸ್ ಸೆಂಟರ್ (ಆರ್‌ಆರ್‌ಸಿ), ಬೆಳಗಾವಿಯಲ್ಲಿ ಡಾಕ್ಟರೇಟ್ ಸಂಶೋಧನೆ ಕೈಗೊಂಡ ಡಾ. ಚೇತನ್ ಅವರು “Experimental Investigation on Performance of Shell-and-Tube Heat Exchanger for EGR Cooler” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಡೀಸೆಲ್ ಎಂಜಿನ್‌ಗಳಿಂದ ಹೊರಸೂಸುವ ಹಾನಿಕಾರಕ ನೈಟ್ರೋಜನ್ ಆಕ್ಸೈಡ್ (NOx) ಪ್ರಮಾಣವನ್ನು ಕಡಿಮೆ ಮಾಡಲು ಬಳಸುವ ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್ (EGR) ಕೂಲರ್‌ಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಸುಧಾರಣೆ ಈ ಸಂಶೋಧನೆಯ ಪ್ರಮುಖ ಉದ್ದೇಶವಾಗಿದೆ. ಶೆಲ್-ಆ್ಯಂಡ್-ಟ್ಯೂಬ್ ಹೀಟ್ ಎಕ್ಸ್‌ಚೇಂಜರ್‌ನ ವಿನ್ಯಾಸ, ಕಂಪ್ಯೂಟೇಷನಲ್ ಫ್ಲೂಯಿಡ್ ಡೈನಾಮಿಕ್ಸ್ (CFD) ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಪರಿಣಾಮಕಾರಿ ಮತ್ತು ಕಾಂಪ್ಯಾಕ್ಟ್ EGR ಕೂಲಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗಿದೆ.
ಹೀಟ್ ಟ್ರಾನ್ಸ್‌ಫರ್, CFD, ಫ್ಲೂಯಿಡ್ ಮೆಕ್ಯಾನಿಕ್ಸ್, ಥರ್ಮಲ್ ಎಂಜಿನಿಯರಿಂಗ್ ಹಾಗೂ ಕಾಂಪೋಸಿಟ್ ಮೆಟೀರಿಯಲ್ಸ್ ಕ್ಷೇತ್ರಗಳಲ್ಲಿ ಡಾ. ಚೇತನ್ ಅವರಿಗೆ ವಿಶೇಷ ಆಸಕ್ತಿ ಇದೆ. ವಿವಿಧ ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ತಾಂತ್ರಿಕ ವೇದಿಕೆಗಳಲ್ಲಿಯೂ ಭಾಗವಹಿಸಿದ್ದಾರೆ.
ಪ್ರಸ್ತುತ ಅವರು ಓಮನ್ ಸಲ್ತನತ್‌ನ ಇಬ್ರಾದಲ್ಲಿರುವ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆ್ಯಂಡ್ ಅಪ್ಲೈಡ್ ಸೈನ್ಸಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಬೋಧನೆ, ಎಂಜಿನಿಯರಿಂಗ್ ಸಂಶೋಧನೆ ಹಾಗೂ ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಡಾ. ಚೇತನ್ ಅವರು ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದು, ಓಮನ್ ಡಿವಿಷನ್ ಕ್ರಿಕೆಟ್‌ನಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಓಮನ್ ಕ್ರಿಕೆಟ್‌ನ ಲೆವೆಲ್-1 ಪ್ರಮಾಣೀಕೃತ ಅಂಪೈರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್
ತಮ್ಮ ಪಿಎಚ್‌ಡಿ ಸಾಧನೆಗೆ ತಂದೆ-ತಾಯಿ, ಶಿಕ್ಷಕರು, ಸಂಶೋಧನಾ ಮಾರ್ಗದರ್ಶಕರು, ಮಾರ್ಗದರ್ಶಕರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಡಾ. ಚೇತನ್ ಕೃತಜ್ಞತೆ ಸಲ್ಲಿಸಿದ್ದಾರೆ. ವಿಶೇಷವಾಗಿ ಪತ್ನಿ ಸಿಂಧು ಹಾಗೂ ಪುತ್ರಿ ಆರವಿ ಅವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲವನ್ನು ಸ್ಮರಿಸಿದ್ದಾರೆ. “ನನ್ನ ಯಶಸ್ಸಿನ ಬುನಾದಿಯಾಗಿರುವ ತಂದೆ-ತಾಯಿ, ಶಿಕ್ಷಕರು, ಕುಟುಂಬಸ್ಥರು ಹಾಗೂ ಹಿತೈಷಿಗಳ ಆಶೀರ್ವಾದ ಮತ್ತು ಬೆಂಬಲಕ್ಕೆ ಈ ಸಾಧನೆಯನ್ನು ಸಮರ್ಪಿಸುತ್ತೇನೆ” ಎಂದು ಡಾ. ಚೇತನ್ ತಿಳಿಸಿದ್ದಾರೆ.




