ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ ಫಾರ್ಮ್-7 ಮೂಲಕ ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಿಕೊಂಡು, ಮತಪಟ್ಟಿಯಲ್ಲಿ ಅವರ ಹೆಸರುಗಳನ್ನು ಡಿಲೀಟ್ ಮಾಡುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂಬುದು ಈಗ ಬಟಾಬಯಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಇಂತಹ ಷಡ್ಯಂತ್ರ ಎಸಗಿದ್ದ ಹಲವಾರು ಬಿಜೆಪಿ ಬಿಎಲ್‌ಎಗಳು ಸಿಕ್ಕಿಬಿದ್ದಿದ್ದಾರೆ.
ರಾಜಕೀಯ ಲಾಭದ ದುಷ್ಟ ಉದ್ದೇಶದಿಂದ, ಅಲ್ಪಸಂಖ್ಯಾತ ಸಮುದಾಯದ, ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮ್ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲು ಪೂರ್ವ ಮುದ್ರಿತ ‘ಫಾರ್ಮ್-7’ ಅರ್ಜಿಗಳನ್ನು ಬಳಸಿ ಬಿಜೆಪಿ ಬಿಎಲ್‌ಎಗಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಗುಂಪು-ಗುಂಪಾಗಿ ಮತದಾರರ ಹೆಸರನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬ್ಯಾಡಗೊಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 21ರಲ್ಲಿ ಇಂತಹದೊಂದು ಕುತಂತ್ರ ಬೆಳಕಿಗೆ ಬಂದಿದೆ. ಅಲ್ಲಿ ಸೆಪ್ಟೆಂಬರ್ 23 ರಂದು ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 63 ಮುಸ್ಲಿಮ್ ಮತದಾರರನ್ನು ಗುರಿಯಾಗಿಸಿಕೊಂಡು ಫಾರ್ಮ್-7 ಅರ್ಜಿಗಳನ್ನು ಬಿಎಲ್‌ಒಗೆ ಬಿಎಲ್‌ಎ ಸಲ್ಲಿಸಿದ್ದಾರೆ.
ಆ ಅರ್ಜಿಗಳಲ್ಲಿ ಮತದಾರರ ಹೆಸರು, ವಿಳಾಸ ಹಾಗೂ ಎಪಿಕ್ (EPIC) ಸಂಖ್ಯೆಗಳನ್ನು ಮುಂಚಿತವಾಗಿಯೇ ಕಂಪ್ಯೂಟರ್‌ನಲ್ಲಿ ಮುದ್ರಿಸಿ ಸಿದ್ಧಪಡಿಸಲಾಗಿತ್ತು. ಈ ಅರ್ಜಿಗಳನ್ನು ತಂದಿಟ್ಟ ಬಿಜೆಪಿ ಕಾರ್ಯಕರ್ತರನ್ನು ವರದಿಗಾರರು ವಿಚಾರಿಸಿದಾಗ, ಈ ಮುದ್ರಿತ ಫಾರ್ಮ್-7 ‘ಟೂಲ್ ಕಿಟ್’ಗಳನ್ನು ಸೋಮವಾರಪೇಟೆಯ ಬಿಜೆಪಿ ಕಚೇರಿಯಿಂದ ನೀಡಲಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಬಿಎಲ್‌ಎಗಳು ಒಪ್ಪಿಕೊಂಡಿದ್ದಾರೆ.
ಬ್ಯಾಡಗೊಟ್ಟದ ಬೂತ್ ಸಂಖ್ಯೆ 21ರಲ್ಲಿ ‘ಮತದಾರರು ‘ಸ್ಥಳದಲ್ಲಿ ಲಭ್ಯವಿಲ್ಲ’ ಅಥವಾ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಸುಳ್ಳು ಕಾರಣಗಳನ್ನು ಉಲ್ಲೇಖಿಸಿ ಬಿಜೆಪಿ ಬಿಎಲ್‌ಎಗಳಾದ ರಜಿನಿ ಯು.ಎಲ್ ಮತ್ತು ಯು.ಎಚ್.ಲೋಕೇಶ್ ಅವರು ತಲಾ ಹತ್ತು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಬಿಜೆಪಿಯ ಇತರರೂ ಸೇರಿ ಸುಮಾರು 50 ಫಾರ್ಮ್-7 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದಾಗಿ ಸ್ವತಃ ಯು.ಎಚ್ ಲೋಕೇಶ್ ಅವರೇ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಅರ್ಜಿಗಳು ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿಕೊಂಡಿವೆ ಎಂಬುದು ವಾಸ್ತವ ಸಂಗತಿ. ಅಂದರೆ, ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣದಿಂದ, ಅವರನ್ನು ಮತಪಟ್ಟಿಯಿಂದಲೇ ಹೊರಹಾಕುವ ವ್ಯವಸ್ಥಿತ ಸಂಚು ನಡೆದಿದೆ.
ಆದಾಗ್ಯೂ, ಬಿಎಲ್‌ಒಗಳು ನಡೆಸಿದ ಸ್ಥಳೀಯ ಪರಿಶೀಲನೆಯಲ್ಲಿ ಆ ಎಲ್ಲ ಮತದಾರರೂ ಹಲವು ದಶಕಗಳಿಂದ ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಅರ್ಹ ಮತದಾರರೆಂದು ಸಾಬೀತಾಗಿದೆ. ಆದ್ದರಿಂದ, ಅವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯದೆ, ಉಳಿಸಿಕೊಳ್ಳಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದ 120 ರಿಂದ 128ನೇ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮುಸ್ಲಿಮ್ ಮತದಾರರ ವಿರುದ್ಧ ಸುಮಾರು 380 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಒಟ್ಟಾರೆಯಾಗಿ ಕ್ಷೇತ್ರಾದ್ಯಂತ 600ಕ್ಕೂ ಹೆಚ್ಚು ಮತದಾರರ ಹೆಸರು ಅಳಿಸುವಿಕೆಗೆ ಅರ್ಜಿಗಳನ್ನು ತಂದು ಸುರಿಯಲಾಗಿತ್ತು ಎಂಬುದು ‘ಮತ ಕಾವಲು ಸಮಿತಿ’ ನಡೆಸಿದ ಪರಿಶೀಲನೆಯಲ್ಲಿ ಕಂಡುಬಂದಿದೆ.
ಇವೆಲ್ಲವೂ ಬಿಜೆಪಿ ಕಚೇರಿಯ ಸೂಚನೆಯಂತೆಯೇ ನಡೆದಿದೆ ಎಂದು ಸ್ಥಳೀಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳ ಮರುಪರಿಶೀಲನೆಯ ನಂತರ ಆ ಅರ್ಜಿಗಳನ್ನು ತಡೆಹಿಡಿಯಲಾಗಿದೆ.
ಅದೇ ರೀತಿ, ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು 1,600ಕ್ಕೂ ಹೆಚ್ಚು ನಮೂನೆ-7 ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ವಿಷಯ ತೀವ್ರ ಸ್ವರೂಪ ಪಡೆದುಕೊಂಡು ಅಕ್ರಮ ಬಯಲಾಗುವ ಭೀತಿ ಎದುರಾಗುತ್ತಿದ್ದಂತೆ, ತಾವು ಪಕ್ಷದ ಆದೇಶದಂತೆ ಅರ್ಜಿ ಸಲ್ಲಿಸಿದ್ದಾಗಿ ಮತ್ತು ಆ ಅರ್ಜಿಗಳನ್ನು ಹಿಂಪಡೆಯುವುದಾಗಿ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದುಕೊಟ್ಟು ಜಾರಿಕೊಳ್ಳಲು ಯತ್ನಿಸಿದ್ದಾರೆ.
ಶಿವಮೊಗ್ಗದ ಶಿವಂ ಹುಳ್ಳಿಯಲ್ಲಿ ಬಿಜೆಪಿ ಏಜೆಂಟ್‌ಗಳು ಸಲ್ಲಿಸಿದ ನಕಲಿ ಅರ್ಜಿಗಳು ಹಾಗೂ ಭಾಲ್ಕಿ ಕ್ಷೇತ್ರದಲ್ಲಿ ಒಬ್ಬನೇ ವ್ಯಕ್ತಿ 30ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವುದು ಪತ್ತೆಯಾಗಿರುವುದು ಈ ಸಂಚಿನ ಭೀಕರತೆಯನ್ನು ಬಿಚ್ಚಿಡುತ್ತದೆ.
ಈ ರೀತಿಯ ಅಕ್ರಮ ಆಕ್ಷೇಪಣಾ ಅರ್ಜಿ ಸಲ್ಲಿಕೆಗಳು ರಾಜ್ಯಾದ್ಯಂತ ನಡೆದಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವಂತೆ, ರಾಜ್ಯದಲ್ಲಿ ಒಟ್ಟು 45ರಿಂದ 50 ಲಕ್ಷ ಮತದಾರರನ್ನು ಡಿಲೀಟ್ ಮಾಡಲು ಫಾರ್ಮ್-7 ಅರ್ಜಿಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ.
ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಸಚಿವ-ಶಾಸಕರು ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಿದ್ದಾರೆ. ಅಕ್ರಮವಾಗಿ ಫಾರ್ಮ್-7 ಸಲ್ಲಿಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದ್ದರು. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದ ರಾಜ್ಯ ಚುನಾವಣಾ ಆಯುಕ್ತರು ಎಲ್ಲ ಇಆರ್‌ಒಗಳಿಗೆ ಸುತ್ತೋಲೆ ಹೊರಡಿಸಿದ್ದು, ‘ಅಕ್ರಮವಾಗಿ, ನಿಯಮಬಾಹಿರವಾಗಿ ಫಾರ್ಮ್-7 ಅರ್ಜಿ ಸಲ್ಲಿಸಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.



