SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!ದೆಹಲಿಯ ಬೀದಿಯಲ್ಲಿ ಕಂಡ ಯುವಶಕ್ತಿ

Date:

ಇಮ್ಯೂನಿಟಿ (Immunity) ಎಂಬ ಆಂಗ್ಲಭಾಷೆಯ ಪದವನ್ನು ಜನರು ಹೆಚ್ಚಾಗಿ ಕೊರೊನಾ ಕಾಲದ ಸಂಕಟದ ದಿನಗಳಲ್ಲಿ ಬಳಸುತ್ತಿದ್ದರು. ರೋಗ ನಿರೋಧಕ ಶಕ್ತಿ ಶರೀರದಲ್ಲಿ ಕಡಿಮೆಯಾದಾಗ ವೈರಸ್‌ ಗಳು ದೇಹವನ್ನು ಆಕ್ರಮಿಸುತ್ತವೆ. ಅದರಿಂದ ರಕ್ಷಣೆ ಪಡೆಯುವ ಅರ್ಥದಲ್ಲಿ ಆ ಪದವನ್ನು ಬಳಸಲಾಗುತ್ತಿತ್ತು. ಈಗ ಅದೇ ಪದ ಬೇರೆ ಅರ್ಥದಲ್ಲಿ ಚಾಲ್ತಿಗೆ ಬಂದಿದೆ. SIR (ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಅಸಂವಿಧಾನಾತ್ಮಕ ಚಟುವಟಿಕೆಗಳ ಬಗ್ಗೆ ಸೆಪ್ಟೆಂಬರ್‌ 23ರಂದು ದ ಇಂಡಿಯನ್‌ ಎಕ್ಸ್‌ ಪ್ರೆಸ್‌ ಪತ್ರಿಕೆ ಸ್ಪೋಟಕ ಸುದ್ದಿಯೊಂದನ್ನು ಪ್ರಕಟಿಸಿತು. ಅದರಲ್ಲಿ ಪ್ರಮುಖವಾಗಿ ಮುಖ್ಯ ಚುನಾವಣಾ ಕಮಿಷನರ್‌ ಗ್ಯಾನೇಶ್‌ ಕುಮಾರ್‌, ಸಮಾನ ಅರ್ಹತೆಯ ಉಳಿದ ಇಬ್ಬರು ಕಮೀಷನರ್‌ ಗಳ ಭಿನ್ನಾಭಿಪ್ರಾಯಗಳನ್ನು ಪರಿಗಣಿಸದೆ ತೆಗೆದುಕೊಂಡ ನಿರ್ಧಾರಗಳ ಕುರಿತ ತನಿಖಾ ವರದಿ ಅದಾಗಿತ್ತು. ಇದನ್ನು ಆಧರಿಸಿ ಹಲವು ಕೇಸುಗಳು ಸುಪ್ರೀಮ್‌ ಕೋರ್ಟ್‌ ನಲ್ಲಿ ದಾಖಲಿಸಲಾಗಿದೆ. ವಿಚಾರಣೆ ನಡೆಯುತ್ತಿದೆ.

ವಿಚಾರಣೆಯಲ್ಲಿ ಮುಖ್ಯವಾಗಿ, ಕೇಂದ್ರ ಸರ್ಕಾರವು ಜಾರಿಗೆ ತಂದ ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಶರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 16 ರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಅಥವಾ ಇತರ ಆಯುಕ್ತರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆಯ ವೇಳೆ ಕೈಗೊಳ್ಳುವ ಯಾವುದೇ ನಿರ್ಧಾರಗಳ ವಿರುದ್ಧ ನ್ಯಾಯಾಲಯಗಳು ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವಂತಿಲ್ಲ ಅಥವಾ ವಿಚಾರಣೆಗೆ ಸ್ವೀಕರಿಸುವಂತಿಲ್ಲ. ಈ ರಕ್ಷಣೆ ಅವರು ಹುದ್ದೆಯಿಂದ ನಿವೃತ್ತರಾದ ಮೇಲೂ ಜೀವಾವಧಿ ಅನ್ವಯಿಸುತ್ತದೆʼ ಎಂಬ ವಿಷಯದ ಬಗ್ಗೆ ಕೋರ್ಟಿನಲ್ಲೂ ಮತ್ತು ಸಾರ್ವಜನಿಕವಾಗಿಯೂ ಚರ್ಚೆ ನಡೆಯುತ್ತಿದೆ. ಆಯುಕ್ತ ಗ್ಯಾನೇಶ್‌ ಕುಮಾರ್‌ ಅನ್ನು ಬಚಾವು ಮಾಡಲು ಅಂದರೆ ಸುರಕ್ಷತೆ ಕೊಡಲು ತಂದ ಕಾನೂನಿನ ಈ ತಿದ್ದುಪಡಿಯನ್ನೇ ಇಮ್ಯೂನಿಟಿ ಎಂದು ಕರೆಯುತ್ತಿರುವುದು.

ಸೆಪ್ಟೆಂಬರ್ 24

ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸಂಸ್ಥಾಪಕ ಅಭಿಜಿತ್‌ ದೀಪ್ಕೆ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದ ಹಾಗೂ ಕೋಟ್ಯಂತರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಕೈಬಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿದರು. ರಾಜೀನಾಮೆಗೆ 48 ಗಂಟೆಗಳ ಗಡುವನ್ನು ನಿಗದಿ ಮಾಡಿದರು. ತಪ್ಪಿದಲ್ಲಿ ದೇಶಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಜಂತರ್‌ ಮಂತರ್‌ 2.0 ಎಂಬ ಈ ಪ್ರತಿಭಟನೆಯನ್ನು ದೆಹಲಿಯಲ್ಲಿ ಮಾಡುವುದಕ್ಕೆ ಮುಂಚಿತವಾಗಿ ದೇಶದ ಇತರೆ ನಗರಗಳಲ್ಲಿ ಆಯೋಜಿಸಿ ಕೊನೆಗೆ ಜಂತರ್‌ ಮಂತರ್‌ ನಲ್ಲಿ ಸತ್ಯಾಗ್ರಹ ಹೂಡುವುದಾಗಿ ಘೋಷಿಸಲಾಯಿತು.

ಅಕ್ಟೋಬರ್‌ ̄2

ಬಾಪು ಜಯಂತಿಯಂದು, ಹೋರಾಟವನ್ನು ಮುಂಬೈನ ಶಿವಾಜಿ ಪಾರ್ಕಿನಿಂದ ಆರಂಭಿಸುವುದಾಗಿ ಸಿಜೆಪಿ ನಿರ್ಧರಿಸಿತು. ಅದಕ್ಕೆ ಬಿಜೆಪಿ ಆಡಳಿತದ ಮಹಾರಾಷ್ಟ್ರ ಸರಕಾರ ಶಿವಾಜಿ ಪಾರ್ಕ್‌ ನಲ್ಲಿ ಅನುಮತಿ ನಿರಾಕರಿಸಿ ಪ್ರತಿಭಟನೆಯನ್ನು ತಡೆಯಲು ಪ್ರಯತ್ನಿಸಿತು. ಆದರೆ, ಪಾರ್ಕಿನ ಹೊರಗಡೆ ಲಾರಿಯೊಂದರ ಮೇಲೆ ವೇದಿಕೆಯನ್ನು ನಿರ್ಮಿಸಿದ ಸಿಜೆಪಿಯ ಮುಂದಾಳುಗಳು ಪ್ರತಿಭಟನಾ ಕಾರ್ಯಕ್ರಮವನ್ನು ಮುನ್ನಡೆಸಿದರು. ನಿರೀಕ್ಷೆಗಿಂತ ಸಾವಿರಾರು ಸಂಖ್ಯೆಯಲ್ಲಿ ಜನರು, ಹೆಚ್ಚಾಗಿ ಯುವಜನರು ಭಾಗವಹಿಸಿದ ಆ ಪ್ರತಿಭಟನೆ ಯಶಸ್ವಿಯಾಯಿತು. ಶಾಂತಿ ಪೂರ್ಣವಾಗಿ ಮುಕ್ತಾಯಗೊಂಡಿತು. ಆದರೆ, ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಚಿತ್ರಣಗಳು ಇದಕ್ಕೆ ವ್ಯತಿರಿಕ್ತವಾಗಿದ್ದವು. ಬಾಪು ಹುಟ್ಟಿದ ದಿನವೇ ಪೊಲೀಸರ ಹಿಂಸಾತ್ಮಕ ನಡೆ, ಯುವಜನರ ಮೇಲೆ ನಡೆಸಿದ ಬರ್ಬರತೆಗೆ ರಾಜಧಾನಿ ಸಾಕ್ಷಿಯಾಯಿತು.

ಸಿಜೆಪಿಯ ಪ್ರತಿಭಟನೆ ಘೋಷಣೆಗೆ ಹಲವು ದಿನಗಳ ಮೊದಲೇ ಜಂತರ್‌ ಮಂತರ್‌ ಪ್ರತಿಭಟನಾ ಸ್ಥಳವನ್ನು ನಿರ್ಬಂಧಿಸಲಾಗಿತ್ತು. ಏಳೆಂಟು ಸಾಲುಗಳ ಕಬ್ಬಿಣದ ಬ್ಯಾರಿಕೇಡುಗಳನ್ನು ಹಾಕಿ, ಜನಸ್ತೋಮ ಅವನ್ನು ಮುರಿಯಲಾರದಂತೆ, ಒಂದಕ್ಕೊಂದನ್ನು ವೆಲ್ಡ್‌ ಮಾಡಿದ್ದಲ್ಲದೆ, ನೆಲದಲ್ಲಿ ಕೀಲುಗಳನ್ನು ಜಡಿದು, ಬ್ಯಾರಿಕೇಡುಗಳು ಒಂದಿಂಚು ಅಲುಗಾಡದಂತೆ ಗಟ್ಟಿ ಮಾಡಲಾಗಿತ್ತು. ಇಷ್ಟು ಸಾಲುಗಳ ಬ್ಯಾರಿಕೇಡುಗಳಾಚೆ, ನೂರಾರು ಸಂಖ್ಯೆಯಲ್ಲಿ ದೆಹಲಿ ಪೊಲೀಸರ ಪಡೆಯಲ್ಲದೆ, ದೇಶದ ಎಲ್ಲಾ ರಕ್ಷಣೆ ವ್ಯವಸ್ಥೆಯ ರಕ್ಷಣಾ ಸಿಬ್ಬಂದಿಗಳನ್ನು (ದೇಶದೊಳಗೆ ಉಗ್ರರ ನಿಗ್ರಹ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ CRPF, ಗಡಿ ಕಾಯ ಬೇಕಾದ BSF, ಭಾರತ ಮತ್ತು ಚೀನಾ ಗಡಿ ಭಾಗಗಳನ್ನು ಕಾಯಬೇಕಾದ ITBP, ಪ್ರಮುಖ ನಾಗರಿಕ ವಿಮಾನ ನಿಲ್ದಾಣಗಳ ಒಳಭಾಗದ ಭದ್ರತೆ ಕಾಯಬೇಕಾದ CISF) ಸಾಲುಗಟ್ಟಿ ನಿಲ್ಲಿಸಲಾಯಿತು. ಇಷ್ಟೇ ಅಲ್ಲದೆ – ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿ ಜಂತರ್‌ ಮಂತರ್ ಗೆ ಸೇರುವ ಎಲ್ಲಾ ರಸ್ತೆಗಳ ಆರಂಭದಲ್ಲೇ ಬ್ಯಾರಿಕೇಡುಗಳನ್ನು ಹಾಕಿ, ಪೊಲೀಸ್‌ ಪಡೆಗಳನ್ನು ಯಥೇಚ್ಚ ನಿಲ್ಲಿಸಿ, ಒಬ್ಬನೇ ಒಬ್ಬ ವ್ಯಕ್ತಿ ಪ್ರೊಟೆಸ್ಟ್‌ ಸೈಟಿನತ್ತ ಕಾಲಿಡಲು ಸಾಧ್ಯವಾಗದಂತೆ ದಿಗ್ಬಂಧನ ಹಾಕಲಾಯಿತು. ಐವರಿಗಿಂತ ಹೆಚ್ಚು ಮಂದಿ ಸೇರುವುದನ್ನು ನಿಷೇಧಿಸುವ ಬಿಎನ್‌ ಎಸ್‌ ಎಸ್ ಸೆಕ್ಷನ್ 163 ನಿಷೇದಾಜ್ಞೆಯ ಜಾರಿ, ಪೊಲೀಸ್‌ ಬಂದೋಬಸ್ತನ್ನು ಲೆಕ್ಕಿಸದೆ ಯುವಜನರು, ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಜಂತರ್‌ ಮಂತರ್‌ ನತ್ತ ಹಲವು ದಿಕ್ಕಿನಲ್ಲಿ ಸಾಗಿದ್ದರು. ಆದರೆ, ನಿಷೇದಾಜ್ಞೆಯ ನೆಪವೊಡ್ಡಿದ ಪೊಲೀಸರು ಐವರಲ್ಲ, ಒಬ್ಬ ವ್ಯಕ್ತಿ ಕಂಡರೂ ಬಿಡದೆ ಹಿಡಿದು ಬಸ್ಸಿಗೆ ತುಂಬುತ್ತಿದ್ದರು. ಪ್ರತಿಭಟನೆಗೆ ಸಂಬಂಧಪಡದ, ರಸ್ತೆಯಲ್ಲಿ ನಡೆದು ಹೋಗುವ ಸಾರ್ವಜನಿಕರನ್ನು ಕೂಡ ಬಂಧಿಸಲಾಯಿತು.

ಜಂತರ್‌ ಮಂತರ್‌ 1.0 ರಲ್ಲಿ, ಲಾಠಿ ಬೀಸಿ, ಟಿಯರ್‌ ಗ್ಯಾಸ್‌ ಸಿಡಿಸಿ, ಪಲೆಟ್ ಗನ್‌ ಬಳಸಿದ್ದರಿಂದ ದೆಹಲಿ ಪೊಲೀಸರ ಮೇಲೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಪೊಲೀಸರ ದೌರ್ಜನ್ಯದ ವಿರುದ್ಧ ಹಲವು ಕೇಸುಗಳು ಸುಪ್ರೀಮ್‌ ಕೋರ್ಟಿನಲ್ಲಿ ಮಂಡಿಸಲಾಗಿತ್ತು. ಆ ಕಾರಣಕ್ಕೆ ಪೊಲೀಸರು ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಲಾಠಿ ಬೀಸುತ್ತಿರಲಿಲ್ಲ. ಬದಲಿಗೆ ತೋಳ್ಬಲ ಬಳಸಿ ಪ್ರತಿಭಟನಾಕಾರರು, ಗಂಡು ಹೆಣ್ಣು ಎಂಬುದನ್ನು ನೋಡದೆ, ಕೈಕಾಲುಗಳನ್ನು ಹಿಡಿದೆತ್ತಿ ಬಸ್ಸಿನೊಳಗೆ ತುರುಕುತ್ತಿದ್ದರು. ಹಠಾತ್ ಬದಲಾದ ಪೊಲೀಸರ ಕ್ರಮಗಳನ್ನು ಗಮನಿಸಿದ ಸಿಜೆಪಿ, ದೇಶಾದ್ಯಂತ ಪ್ರತಿಭಟನೆ ಮಾಡಿ, ಜನಾಭಿಪ್ರಾಯ ರೂಪಿಸಿ, ಕೊನೆಗೆ ಜಂತರ್‌ ಮಂತರ್‌ ನಲ್ಲಿ ಸತ್ಯಾಗ್ರಹ ಹೂಡುವ ಯೋಜನೆಯನ್ನು ಕೈಬಿಟ್ಟು, ಅಕ್ಟೋಬರ್‌ 10 ರಂದು ನೇರವಾಗಿ ಜಂತರ್‌ ಮಂತರ್ ‌ನಲ್ಲಿಯೇ ಪ್ರತಿಭಟಿಸುವುದಾಗಿ ಘೋಷಿಸಿತು. ಜಂತರ್‌ ಮಂತರ್‌ 2.0 ಆಂದೋಲನ ಸೂಚನೆ ನೀಡಿ, ಯುವಜನ ವಿದ್ಯಾರ್ಥಿಗಳಿಗೆ ʼದೆಹಲಿ ಚಲೋʼ ಕರೆ ಕೊಟ್ಟಿತ್ತು.

- Advertisement -
WhatsApp Image 2026 11 23 at 8.54.51 AM

ಹಲವು ಇಂಡಿಪೆಂಡೆಂಟ್‌ ಸುದ್ದಿ ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ, ಪ್ರಸಾರವಾಗುತ್ತಿದ್ದ ವಿಡಿಯೊಗಳನ್ನು ಪ್ರತಿದಿನ ಗಮನಿಸುತ್ತಿದ್ದವನಿಗೆ ತಳಮಳ ಹೆಚ್ಚಾಗುತ್ತಿತ್ತು. ಅಕ್ಟೋಬರ್‌ 10ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೇ ಬೇಕೆಂದು ನಿರ್ಧರಿಸಿದೆ. ಆದರೆ, ಆ ನಿರ್ಧಾರ ಸುಲಭದ್ದಾಗಿರಲಿಲ್ಲ. ಜಂತರ್‌ ಮಂತರ್‌ ಸೈಟಿನ ಸುತ್ತ ಬಹುದೂರದಲ್ಲೇ ಕಾಣ ಸಿಗುವ ಓರ್ವ ಯುವಕನನ್ನು ಬಿಡದೆ ಬಂಧಿಸುವ ಪೊಲೀಸರ ದುರ್ವರ್ತನೆ ಆತಂಕದ ಜೊತೆಗೆ ಅಂಜಿಕೆ ಉಂಟು ಮಾಡುವಂತಿತ್ತು. ಕರ್ನಾಟಕ ಭವನದಲ್ಲಿ ಉಳಿದುಕೊಂಡರೆ ಜಂತರ್‌ ಮಂತರ್‌ ಗೆ ಹತ್ತಿರವಾಗುತ್ತದೆ. ಜೊತೆಗೆ, ಅಲ್ಲಿ ರೆಸ್ಟೋರೆಂಟ್‌ ಇರುವುದರಿಂದ ಊಟತಿಂಡಿಗೆ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರೇ ಇರುವ ಜಾಗದಲ್ಲಿ ಸುರಕ್ಷಿತವಾಗಿರಬಹುದು ಎಂದೆನಿಸಿತು. ಆದರೆ, ಪರಿಚಿತರಿಂದ ತಿಳಿದು ಬಂದಿದ್ದು ವಿಐಪಿಗಳಿಗೆ ಆದ್ಯತೆ ಕೊಡುವುದರಿಂದ ಅಲ್ಲಿ ರೂಮು ಸಿಗುವ ಸಾಧ್ಯತೆ ಕಡಿಮೆ. ಸೈಟಿನ ಹತ್ತಿರವಿರುವ ಹೊಟೇಲ್‌ ಗಳು ದುಬಾರಿಯಾಗಿತ್ತಾದ್ದರಿಂದ, ಕಳೆದ ಬಾರಿ ಉಳಿದ ಪಹಲ್ಗಂಜ್ ಪ್ರದೇಶದ ಕೃಷ್ಣಮಾರ್ಕೆಟ್‌ ನಲ್ಲಿದ್ದ ಹೊಟೇಲ್‌ ಒಂದರಲ್ಲಿ ಉಳಿಯುವುದೆಂದು ನಿರ್ಧರಿಸಿದೆ.

ದೆಹಲಿ ಚಲೋ ಪ್ರತಿಭಟನೆಗೆ ಒಂದು ದಿನ ಮುಂಚಿತವಾಗಿ ಹೋದರೆ ಅಲ್ಲಿಯ ವಾತಾವರಣವನ್ನು ಅರಿಯಲು ಅನುಕೂಲವಾಗುತ್ತದೆ ಎಂದು ಅಕ್ಟೋಬರ್‌ 8ರಂದೇ ದೆಹಲಿಗೆ ಹೊರಡಲು ಸಿದ್ದನಾದೆ. ಆದರೆ, ದೆಹಲಿ ಪೊಲೀಸರ ದುರ್ವತನೆ ಕಣ್ಮುಂದೆ ಸುಳಿದು ಆತಂಕ ಮೂಡಿಸುತ್ತಿತ್ತು. ಕಳೆದ ಬಾರಿಯ ಪ್ರತಿಭಟನೆಯಲ್ಲಿ, ಬ್ಯಾರಿಕೇಡ್‌ ಹಾರಿ ಬಂದ ವಿದ್ಯಾರ್ಥಿಗಳನ್ನು ಹಿಡಿದು ಪೊಲೀಸ್‌ ಬಸ್ಸಿಗೆ ತುರುಕುತ್ತಿದ್ದ ಹೊತ್ತಲ್ಲಿ, ವಿಡಿಯೊ ಮಾಡುತ್ತಿದ್ದಾಗ ಪೊಲೀಸ್‌ ಇನ್ಸ್‌ ಪೆಕ್ಟರ್ ಒಬ್ಬರು ಧಮಕಿ ಹಾಕುತ್ತ ಸೈಟಿನಲ್ಲಿ ಇರುವುದನ್ನು ಪ್ರಶ್ನಿಸಿದ್ದ ನೆನಪು ಹಸಿಯಾಗಿತ್ತು. ಕನ್ನಡ ಪ್ರಮುಖ ಆನ್‌ ಲೈನ್‌ ಸುದ್ದಿ ಪತ್ರಿಕೆಯೊಂದರಲ್ಲಿ ಆಗಾಗ ಲೇಖನಗಳನ್ನು ಬರೆಯುತ್ತಿದ್ದೆ. ಅಲ್ಲಿಯ ಅನೇಕ ಪತ್ರಕರ್ತರು ಪರಿಚಿತರೇ ಆಗಿದ್ದರು. ಅವರಲ್ಲಿ ನನ್ನ ಆತಂಕವನ್ನು ನಿವೇದಿಸಿಕೊಂಡೆ. ಮಾತಿಗೆ ಸ್ಪಂದಿಸಿದ ಅವರು ನಾಗರೀಕ ವರದಿಗಾರ ಅಂದರೆ Citizen Journalist ಎಂಬ ಐಡೆಂಟಿಟಿ ಕಾರ್ಡನ್ನು ಕೊಟ್ಟು, ಗ್ರೌಂಡ್‌ ರಿಪೋರ್ಟ್‌ ಮಾಡಲು ಹೇಳಿದರು. ಈ ಮೊದಲು ವಿದ್ಯಾರ್ಥಿ ಪ್ರತಿಭಟನೆಯ ಜಂತರ್‌ ಮಂತರ್‌ ನಲ್ಲಿ ಆಗುತ್ತಿದ್ದ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹಂಚಿಕೊಂಡಿದ್ದೆ. ಅದಕ್ಕೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದರು. ಹಾಗಾಗಿ ಘಟನಾವಳಿಗಳ ವಿಡಿಯೊ, ಫೋಟೊಗಳನ್ನು ಸುದ್ದಿಗಾಗಿ ಕಳುಹಿಸುವುದು ಹೊರೆ ಎನಿಸಲಿಲ್ಲ. ಆದರೆ, ಸ್ವತಂತ್ರ ಭಾರತದ ಪ್ರಜೆಯಾಗಿ‌ ರಾಜಧಾನಿ ದೆಹಲಿಗೆ ಹೋಗಲು ಇಷ್ಟೆಲ್ಲಾ ಪಡಿಪಾಟಲು ಪಡಬೇಕಾಗಿರುವುದು, ದೇಶಕ್ಕೆ ಉಸಿರುಗಟ್ಟಿಸುವ ಪರಿಸ್ಥಿತಿ ಒದಗಿದ್ದು ಬೇಸರ, ನೋವು ತಂದಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ...

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ...

“ನಾನು ಬಿಜೆಪಿಯ ಗುಲಾಮನಲ್ಲ, ಅಂಬೇಡ್ಕರ್‌ವಾದಿ”- ರಾಮದಾಸ್‌ ಅಠಾವಳೆ ಹೇಳಿಕೆಯ...

ತಾವು ಬಿಜೆಪಿಯ ಸದಸ್ಯರಲ್ಲ, ಕೇವಲ ಅಂಬೇಡ್ಕರ್‌ವಾದಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಸೇರಿದೆ ಎನ್ನುತ್ತಾರೆ...

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಅಕ್ಟೋಬರ್‌ 8

ಇಂದಿರಾ ಗಾಂಧಿ ಏರ್‌ ಪೋರ್ಟ್‌ನಲ್ಲಿ ಇಳಿದು, ಪಹಲ್ಗಂಜ್ ನ ಕೃಷ್ಣಮಾರ್ಕೆಟ್‌ ನತ್ತ ಹೊರಟಾಗ ರಾತ್ರಿ ಸುಮಾರು 9 ಗಂಟೆ ಸಮಯವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿದ್ದರಿಂದ‌, ಸುತ್ತಿ ಬಳಸಿ ಕ್ಯಾಬ್‌ ಸಣ್ಣಗಲ್ಲಿಯೊಂದರ ಮೂಲಕ ಕಾರು ಸಾಗುತ್ತಿತ್ತು.‌ ಅದು ಕನ್ನಾಟ್‌ ಪ್ಲೇಸ್‌ ನ ಅಂಗಡಿಗಳು ಹೆಚ್ಚಿರುವ ವಾಣಿಜ್ಯ ಪ್ರದೇಶ. ಅಶರೀರವಾಣಿ ಕೇಳಿದಂತಾಗಿ ಡ್ರೈವರ್‌ ಗೆ ತಟ್ಟನೆ ಕಾರು ನಿಲ್ಲಿಸಲು ಹೇಳಿದೆ. “ಕೃಪಯಾ…ಧ್ಯಾನ್‌ ದೇ… ಕೃಪಯಾ…ಧ್ಯಾನ್‌ ದೇ…” ಎಂದು ಕಂಬವೊಂದಕ್ಕೆ ಕಟ್ಟಿದ ಲೌಡ್‌ ಸ್ಪೀಕರ್‌ ನಿಂದ ಹೆಣ್ಣು ಧ್ವನಿಯೊಂದು ಕೇಳಿ ಬರುತ್ತಿತ್ತು. ಅದು ಪ್ರತಿಭಟನೆಯ ಕುರಿತು ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದ ಮಾತುಗಳಾಗಿದ್ದವು. ʼಈ ಪ್ರದೇಶದಲ್ಲಿ ನಿಷೇದಾಜ್ಞೆ166 ಜಾರಿಯಲ್ಲಿದೆ. ಯಾವುದೇ ವ್ಯಕ್ತಿ ಪೊಲೀಸರೊಂದಿಗೆ ಹೊಡೆದಾಟ ಮಾಡುವುದು, ಅವರ ಕೆಲಸಕ್ಕೆ ಅಡ್ಡಿ ಪಡಿಸುವುದು, ಬ್ಯಾರಿಕೇಡನ್ನು ಮುರಿಯುವುದು, ಸರ್ಕಾರದ ಸಂಪತ್ತನ್ನು ನಷ್ಟ ಮಾಡಿದರೆ, ಅಂಥವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು…..ʼ ಹೀಗೆ ಖಡಕ್‌ ದನಿಯ ಮಾತುಗಳು ಪುನರಾವರ್ತನೆಯಾಗುತ್ತಿದ್ದವು. ಆ ಜಾಗ ಜಂತರ್‌ಮಂತರ್‌ ಸೈಟಿನಿಂದ ಬಹು ದೂರವಿದ್ದು, ಪ್ರತಿಭಟನೆಕಾರರು ಅಲ್ಲಿಗೆ ಹೋಗುವ ಅವಶ್ಯಕತೆಯಾಗಲಿ, ಸಾಧ್ಯತೆಯಾಗಲಿ ಇರಲಿಲ್ಲ. ಮುಂದೆ ಸಾಗಿದಂತೆ ಎಲ್ಲಾ ರಸ್ತೆಗಳಲ್ಲೂ ಇದೇ ತೆರನಾದ ಮುದ್ರಿತ ಮಾತುಗಳು ಸ್ಪೀಕರ್‌ಗಳಿಂದ ಕೇಳಿಬರುತ್ತಿದ್ದವು. ಈ ಮಾತುಗಳು ಪೊಲೀಸರೇ ಪ್ರತಿಭಟನೆಯ ಬಲಿಪಶುಗಳು ಎಂದು ಸಾರ್ವಜನಿಕರ ಮನದಲ್ಲಿ ಬಿಂಬಿಸುವ ತಂತ್ರವಾಗಿ ಕಂಡಿತು.

ಅಂದು – ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಅಮೇರಿಕದಿಂದ ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಬಂದಾಗ, ಖುದ್ದು ಮೋದಿ ಸರ್ಕಾರವೇ ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಅನುಮತಿಸಿತ್ತು. ಮುಂದೆ ಅದು ಬೃಹತ್‌ ವಿದ್ಯಾರ್ಥಿ ಆಂದೋಲನವಾಗಿ ರಾಜೀನಾಮೆ ಕೊಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಕೇಂದ್ರ ಸರ್ಕಾರಕ್ಕೆ ಅನಿರೀಕ್ಷಿತವಾಗಿತ್ತು. ಆದ್ದರಿಂದ, ಈ ಬಾರಿ ಅಂತಹ ಪ್ರತಿರೋಧದ ವಾತಾವರಣ ನಿರ್ಮಾಣವಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಿರುವುದು ಢಾಳಾಗಿ ಕಾಣುತ್ತಿತ್ತು. ಆದರೆ, ಬಾಂಗ್ಲಾದೇಶಿಯರನ್ನು ಹೊರಗಟ್ಟುತ್ತೇವೆಂದು ಆರಂಭಿಸಿದ ಎಸ್‌ ಐ ಆರ್‌ ಪ್ರಕ್ರಿಯೆಯಲ್ಲಿ ದೇಶದ 13 ಕೋಟಿ ಜನರನ್ನು ಮತಪಟ್ಟಿಯಿಂದ ಹೊರಗಿಟ್ಟಿರುವಾಗ, ಅವರಲ್ಲಿ ಎಷ್ಟು ಜನ ವಿದೇಶಿಯರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸದೆ, ಪ್ರತಿಭಟನೆಯನ್ನು ಹತ್ತಿಕ್ಕಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳು ಮೋದಿ ಸರ್ಕಾರದ ಫ್ಯಾಸಿಸ್ಟ್‌ ಮನೋಭಾವವನ್ನು ನಿಚ್ಚಳವಾಗಿ ಕಂಡರಿಸಿತ್ತು. ಜನರ ಆಕ್ರೋಶದ ದನಿಗೆ ಎಷ್ಟು ಹೆದರಿಕೊಂಡಿದೆ ಎಂಬುದು ಸಾಬೀತಾಗಿತ್ತು.

ಅಕ್ಟೋಬರ್‌ 9

ಜಂತರ್‌ ಮಂತರ್‌ ಗೆ ಹೊರಡಲು ಸಿದ್ಧನಾದವನು ಹೊಟೇಲ್‌ ರೂಮಿನಿಂದ ಕಾಲಿಡಲು ಎದೆಗುಂದಿದೆ. ಸ್ವಲ್ಪಹೊತ್ತು ಕೂತು ಯೋಚಿಸಿ, ಕಳೆದ ಬಾರಿ ಪರಿಚಯವಾಗಿದ್ದ ನಕುಲ್‌ ಸಿಂಗ್‌ ಆಟೋದಲ್ಲೇ ಸುತ್ತಾಡಬೇಕೆಂದು ನಿರ್ಧರಿಸಿದೆ. ಫೋನ್‌ ಮಾಡಿ ಅವನು ಬರುವವರೆಗೂ ಕಾದೆ. ನನ್ನನ್ನು ಮತ್ತೆ ಕಂಡವನು ಖುಷಿಯಾದ. ಆಟೋ ಹತ್ತಿ ಜಂತರ್‌ ಮಂತರ್‌ ಕಡೆ ಹೊರಟೆ.

WhatsApp Image 2026 11 23 at 8.36.57 AM

ಎಲ್ಲೆಡೆ ವಾಹನ ಸಂಚಾರ ಸರಾಗವಾಗಿ ಸಾಗಿತ್ತು. ಜನರ ಓಡಾಟ, ತೆರೆದ ಅಂಗಡಿಗಳು, ನವದೆಹಲಿಯ ಜನಜೀವನ ಎಂದಿನಂತೆ ಇರುವುದು ಕಂಡಿತು. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳು, ಪೊಲೀಸರ ದಂಡು ನಾಳೆಯ ಪ್ರತಿಭಟನೆಯನ್ನು ಎದುರಿಸಲು ಸಜ್ಜಾಗುತ್ತಿತ್ತು. ಆದರೆ, ಜಂತರ್‌ ಮಂತರ್‌ ಹತ್ತಿರ ಬರುತ್ತಿದ್ದಂತೆ ದೂರದಲ್ಲೇ ಎಲ್ಲಾ ರಸ್ತೆಗಳನ್ನು ಮುಚ್ಚಿದ್ದರು. ಪ್ರೊಟೆಸ್ಟ್‌ ಸೈಟಿಗೆ ಸೇರುವ ಕೂಡುರಸ್ತೆಗಳ ಪರಿಸ್ಥಿತಿ ಒಂದೊಂದಾಗಿ ನೋಡಲು ಆಟೋದಲ್ಲೇ ಮುಕ್ತ ಸಂಚಾರವುಳ್ಳ ರಸ್ತೆಗಳಲ್ಲಿ ಸುತ್ತು ಹೊಡೆದವು. ಮೊದಲಿಗೆ ಜನಪಥ್‌ ರಸ್ತೆಗೆ ಬಂದರೆ, ಜನಪಥ್ ಮೆಟ್ರೊ ಸ್ಟೇಷನ್‌ನಲ್ಲಿ ಜನರ ಓಡಾಟ ಮಾಮೂಲಿನಂತಿತ್ತು. ಅದರ ಪ್ರವೇಶದ ಪಕ್ಕದಲ್ಲೇ ಇರುವ ಕೂಡುರಸ್ತೆಯನ್ನು ಬ್ಯಾರಿಕೇಡ್‌ ಗಳಿಂದ ಮುಚ್ಚಿ ಪ್ಯಾರಾ ಮಿಲಿಟರಿ, ದೆಹಲಿ ಪೊಲೀಸರು ಕಾಯುತ್ತಿದ್ದರು. ಕಂಬಕ್ಕೆ ತಗಲು ಹಾಕಿದ್ದ ಸ್ಪೀಕರ್‌ ನಿಂದ “ಕೃಪಯಾ ಧ್ಯಾನ್‌ ದೇ…”ಎಚ್ಚರಿಕೆ ಮೊಳಗುತ್ತಿತ್ತು. ಅಲ್ಲಿಂದ ಹೊರಟು ಕನ್ನಾಟ್‌ ಪ್ಲೇಸ್‌ ಮಾರ್ಕೆಟ್‌ ಇರುವ ಜಾಗಕ್ಕೆ ಬಂದೆವು. ಅದು ಅಂಗಡಿಮುಂಗಟ್ಟುಗಳಿರುವ ವ್ಯಾಪಾರ ವಹಿವಾಟು ಹೆಚ್ಚಿರುವ ಜಾಗ. ಅಲ್ಲಿಂದ ಜಂತರ್‌ ಮಂತರ್‌ ಮುಕ್ಕಾಲು ಕಿಲೋಮೀಟರ್‌ ದೂರ. ಅಲ್ಲೂ ಬ್ಯಾರಿಕೇಡ್‌ ಇದ್ದರೂ ಜನರ ಓಡಾಟ ಸಹಜವಾಗಿತ್ತು. ಆದರೆ, ರ್ಯಾಪಿಡ್‌ ಆಕ್ಷನ್‌ ಪೊಲೀಸರ ಗುಂಪು ಯುವಕರು ಬಂದರೆ ಪ್ರಶ್ನಿಸಿ ಬಿಡುತ್ತಿದ್ದರು. ಮುಂದೆ ಬಂಗ್ಲಾ ಸಾಹೀಬ್‌ ಲೇನ್‌ ರಸ್ತೆಯಲ್ಲಿ ಸಾಗಿ – ಪಟೇಲ್‌ ಚೌಕ್‌, ಕನ್ನಾಟ್‌ ಪ್ಲೇಸ್‌, ಜನಪಥ್‌ ಮಾರ್ಗ್‌ಗಳು ಕೂಡುವ ಸಂಸತ್‌ ಮಾರ್ಗ್ ಗೆ‌ ಸೇರುವ ಸರ್ಕಲ್ಲಿಗೆ ಬಂದೆವು. ಅದು ಕೇಂದ್ರ ಗೃಹ ಇಲಾಖೆ, ಎಸ್‌ ಬಿ ಎಮ್‌ ಕಚೇರಿ, ದೆಹಲಿ ನಗರ ಪಾಲಿಕಾ ಎತ್ತರದ ಕಟ್ಟಡಗಳಿರುವ ಪ್ರಮುಖ ಸ್ಥಳ. ಅಲ್ಲಿಂದ ಜಂತರ್‌ ಮಂತರ್‌ ಪ್ರತಿಭಟನಾ ಸೈಟ್‌ ಕೇವಲ ಒಂದಿನ್ನೂರು ಮೀಟರ್‌ ದೂರದಲ್ಲಿದೆ. ಅಲ್ಲಿಯೂ ಎಲ್ಲೆಡೆಯಂತೆ ಬ್ಯಾರಿಕೇಡ್‌ ಗಳ ಸಾಲು ಇದ್ದು, ಪೊಲೀಸರ ದಂಡು ಯುವಕರನ್ನು ತಡೆಯಲು ಸಜ್ಜಾಗಿದ್ದವು. ಬ್ಯಾರಿಕೇಡ್‌ ಪಕ್ಕದಲ್ಲಿ ನಿಂತು ಕ್ಯಾಮೆರಾ ಹಿಡಿದರೆ ಸಾಕು ದೂರ ಹೋಗುವಂತೆ ದಬಾಯಿಸುತ್ತಿದ್ದರು. ವಿಶಲ್‌ ಊದುತ್ತಿದ್ದರು. ನೀಟ್‌ ಪರೀಕ್ಷೆಯ ಅವಾಂತರಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇದೇ ಸರ್ಕಲ್ಲಿನಲ್ಲಿ, ಬಗೆಬಗೆಯ ಪೋಸ್ಟರ್‌ ಹಿಡಿದು, ಹಾಡು ಹೇಳುತ್ತ, ಧಿಕ್ಕಾರದ ಘೋಷಣೆ ಕೂಗುತ್ತ ಕಾಲಿಡಲು ಜಾಗವಿಲ್ಲದಂತೆ ಯುವ ಸಮೂಹ ನೆರೆದಿತ್ತು. ಆದರೆ, ಈಗ ಪ್ರತಿಭಟನಾಕಾರರು ಅಷ್ಟಾಗಿ ಕಾಣಲಿಲ್ಲ. ಸಂಜೆ ಕಳೆದು ಕತ್ತಲಾಗುತ್ತ ಬೀದಿ ಲೈಟುಗಳು ಹೊತ್ತಿಕೊಂಡ ಹೊತ್ತಲ್ಲಿ, ಒಂದಷ್ಟು ಯುವಜನರು ಕಲೆಯ ತೊಡಗಿದರು. ಅವರು ಪ್ರತಿಭಟನೆಗೆ ಬಂದಂತೆ ಕಂಡರೂ ಯಾರೂ ಘೋಷಣೆ ಕೂಗುತ್ತಿರಲಿಲ್ಲ. ಸುಮಾರು ನಲವತ್ತರಷ್ಟಿದ್ದ ಅವರು, ಮತ್ತಷ್ಟು ಜನರು ಬರುವುದನ್ನು ಎದುರು ನೋಡುತ್ತಿದ್ದಂತೆ ಕಂಡಿತು. ಇಂಡಿಪೆಂಡೆಟ್‌ ಸೋಷಿಯಲ್‌ ಮೀಡಿಯಾ ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವರು ಗುಂಪುಗೂಡಿ ಮಾತುಕತೆಯಲ್ಲಿ ತೊಡಗಿದ್ದರು. ರಾಜಕೀಯ ವಾಗ್ವಾದ ಜೋರಾಗಿಯೇ ಸಾಗಿತ್ತು. ಅಷ್ಟರಲ್ಲಿ ಕೈಲಿ ಪುಟ್ಟ ಮೈಕಿಡಿದು ಒಬ್ಬರು ಪ್ರತ್ಯಕ್ಷರಾದರು. ಆರಡಿ ಎತ್ತರದ, ನೀಳ ಕೂದಲಿನ ಅವರು ಅನ್ಯಲಿಂಗಿಯಂತೆ ಕಂಡರು. ಅವರನ್ನು ಜಂತರ್‌ ಮಂತರ್‌ 1.0ರಲ್ಲಿಯೂ ನೋಡಿದ್ದೆ. ಆಗ, ಮೋದಿ ಮತ್ತು ಬಿಜೆಪಿಯನ್ನು ಕುತರ್ಕದಿಂದ ಸಮರ್ಥಿಸುವಾಗ ಅವಳನ್ನು ಸೈಟಿನಿಂದ ವಿದ್ಯಾರ್ಥಿಗಳು, ಯುವಜನರು ಹೊರಗೆ ಸಾಗ ಹಾಕುತ್ತಿದ್ದರು. ಈಗಲೂ ಅವರಿಂದ ಮೋದಿ ಗುಣಗಾನ ಆರಂಭವಾಗಿ, ಪ್ರತಿಭಟನೆಯ ನಿರರ್ಥಕತೆ ಬಗ್ಗೆ ಹೇಳುತ್ತ ಪ್ರತಿಭಟನೆಯನ್ನು ಪ್ರಶ್ನಿಸತೊಡಗಿದರು. ಕೆಲ ಹೊತ್ತು ಸಹನೆಯಿಂದ ಕೇಳುತ್ತಿದ್ದ ಯುವಕರು “ಗೋದಿ ಮೀಡಿಯಾ…” ಎಂದು ಛೇಡಿಸುತ್ತ ಕೂಗ ತೊಡಗಿದರು. ಎಚ್ಚೆತ್ತ ಪೊಲೀಸರು ವಿಶಲ್‌ ಊದಲು ಶುರು ಮಾಡಿದರು.

WhatsApp Image 2026 11 23 at 7.58.58 AM

ಸಂಖ್ಯೆಯಲ್ಲಿ ಯುವಕರ ಗುಂಪಿಗಿಂತ ಪೊಲೀಸರು ನಾಲ್ಕಾರು ಪಟ್ಟು ಹೆಚ್ಚಿದ್ದರು. ಪೀ…ಪೀ… ವಿಶಲ್‌ ಜೋರಾಗಿ ಊದುತ್ತಲೇಅವರನ್ನು ನಿಲ್ಲಲು ಬಿಡದೆ ದೂಡಿಕೊಂಡು, ಕಾಲು ಕಿಲೋಮೀಟರ್‌ ದೂರದ ಕನ್ನಾಟ್‌ ಪ್ಲೇಸ್‌ವರೆಗೂ ತಂದು, ಅಲ್ಲಿದ್ದ ಬ್ಯಾರಿಕೇಡ್‌ನಿಂದ ಹೊರ ಹಾಕಿದರು. ಓರ್ವ ಯುವಕ – ಅವನು ಪಾದಚಾರಿಯೊ? ಪ್ರತಿಭಟನೆಗೆಂದು ಬಂದವನೊ? ಕಾಲರ್‌ ಪಟ್ಟಿ ಹಿಡಿದು ಪೊಲೀಸ್‌ ಬಸ್ಸೊಳಗೆ ತುರುಕಿದರು. ಲಾಠಿ ಪ್ರಯೋಗ ಕೈಬಿಟ್ಟ ಪೊಲೀಸರು, ಕಿವಿ ತಮಟೆ ಹರಿಯುವಂತೆ ಜೋರಾಗಿ ವಿಶಲ್‌ ಊದಿ ಗುಂಪನ್ನು ಚದುರಿಸುವ ಹೊಸ ತಂತ್ರ ಕಂಡು ಕೊಂಡಿದ್ದರು. ಹಾಗೆ ಟಾಲ್‌ ಸ್ಟಾಯ್‌ ಮಾರ್ಗದಿಂದ ಯುವಕರನ್ನು ದೂಡಿಕೊಂಡು ಬಂದ ಗುಂಪಲ್ಲಿ ಬ್ಯಾಗೊಂದನ್ನು ಬೆನ್ನಿಗೇರಿಸಿದ್ದ ಬಾಲಕನೊಬ್ಬ ಕಾಣಿಸಿದ. ಕುತೂಹಲದಿಂದ ಅವನನ್ನು ಮಾತಿಗೆಳೆದೆ.

“ಏನು ನಿಮ್ಮ ಹೆಸರೇನು? ಎಲ್ಲಿಂದ ಬಂದಿದ್ದೀರಿ?”
“ನನ್ನ ಹೆಸರು ಬಾಬು ಸಾಹೇಬ್. ನಳಂದ…ಬಿಹಾರದಿಂದ ಒಬ್ಬನೇ ಬಂದಿದ್ದೇನೆ”
“ಒಬ್ಬನೇ!! ಸ್ಕೂಲಲ್ಲಿ ಓದುತ್ತಿದ್ದೀರೊ? ಕಾಲೇಜಿನಲ್ಲೋ?”
“ಸ್ಕೂಲಲ್ಲಿ ಓದುತ್ತಿದ್ದೇನೆ…ಒಂಭತ್ತನೇ ಕ್ಲಾಸ್. ಹದಿನೈದು ವರ್ಷ”
ನನಗೆ ಆಶ್ಚರ್ಯ, ಗಾಬರಿಯಾಯಿತು. “ಹದಿನೈದು ವರ್ಷ!! ಇಲ್ಲೇನು ಮಾಡುತ್ತಿದ್ದೀರ?”
“ಹದಿನೈದು ವರ್ಷದ ಹುಡುಗ ಕೂಡ ಪ್ರೊಟೆಸ್ಟ್‌ ನಲ್ಲಿ ಭಾಗವಹಿಸಲೇ ಬೇಕಾಗಿದೆ”
“ಯಾಕೆ?”
“ಸರಕಾರ ಕೇಳಿಸಿಕೊಳ್ಳುತ್ತಿಲ್ಲ!”
“ಯಾಕೆ ಕೇಳಿಸಿಕೊಳ್ಳುತ್ತಿಲ್ಲ? ಏನನ್ನು ಕೇಳಿಸಿಕೊಳ್ಳಬೇಕು?”

“ಎಲ್ಲಾ ಜನಗಳ ಮಾತನ್ನು ಕೇಳಿಸಿಕೊಳ್ಳಬೇಕು. ಬದಲಿಗೆ ಲಾಠಿಯಿಂದ ಹೊಡೆಯುತ್ತಿದ್ದಾರೆ”
“ಲಾಠಿಯಿಂದ ಏಕೆ ಹೊಡೆಯುತ್ತಿದ್ದಾರೆ? ಪ್ರೊಟೆಸ್ಟ್‌ ಯಾಕೆ ನಡೆಯುತ್ತಿದೆ?”
“ಗ್ನಾನೇಶ್‌ ಕುಮಾರ್‌ ರಾಜೀನಾಮೆ ಕೊಡಬೇಕು. ಅವರು ಗೊಟಾಲ (ಹಗರಣ) ಮಾಡಿದ್ದಾರೆ”
“ಯಾವ ಹಗರಣ ಮಾಡಿದ್ದಾರೆ?”
“ಬಿಜೆಪಿಗೆ ಯಾರು ಓಟು ಹಾಕಿರಲಿಲ್ಲವೊ ಅವರ ಓಟನ್ನು ಕಟ್‌ ಮಾಡಿದ್ದಾರೆ”
“ಓಹ್…ನಿಮ್ಮ ಅಪ್ಪ ಅಮ್ಮ ಅಥವಾ ಯಾರಾದಾದರೂ ಹೆಸರನ್ನು ಓಟರ್‌ ಲಿಸ್ಟಿಂದ ತೆಗೆದಿದ್ದಾರ?”
“ನಮ್ಮ ಪರಿವಾರದಲ್ಲಿ ಅಜ್ಜಿಯ ಹೆಸರನ್ನು ತೆಗೆದಿದ್ದಾರೆ”
“ನಿಮಗಿಂತ ದೊಡ್ಡವರು ಅಂದರೆ ಹದಿನೆಂಟು ವರ್ಷದವರಿಗೆ…ಜೆನ್‌ ಜಿಗಳಿಗೂ ಈ ಸಮಸ್ಯೆ ಇದೆಯಾ?”
“ಹೌದು…ಹದಿನೆಂಟು ವರ್ಷದವರು ಓಟ್‌ ಮಾಡಲು ಆಗದಂತೆ ಮಾಡುತ್ತಿದ್ದಾರೆ”
“ನಿಮ್ಮ ಊರು ನಳಂದ ಎಂದಿರಿ. ಅಲ್ಲಿಂದ ಹೇಗೆ ಬಂದಿರಿ? ರೈಲು, ಬಸ್ಸು…ʼ
“ರೈಲಿನಲ್ಲಿ ಬಂದಿದ್ದೇನೆ. ಟಿಕೇಟ್‌ ಪಡೆದು ಬಂದಿದ್ದೇನೆ”
“ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿ ಬಂದಿದ್ದೀರ? ಅಥವಾ ಹಾಗೆ ಬಂದಿದ್ದೀರ?”
“ಹೇಳಿಯೇ ಬಂದಿದ್ದೇನೆ. ಅವರು ಹೋಗು ಮಗನೇ…ಭಗತ್‌ ಸಿಂಗ್‌ ನಂತೆ ದೇಶಕ್ಕಾಗಿ ಹೋರಾಡು ಎಂದು ಕಳುಹಿಸಿದ್ದಾರೆ. ಗಾಂಧೀಜಿ ಕೂಡ ಹೋರಾಡಿದರು. ಲಾಠಿ ಏಟು ತಿಂದರು. ಅದಕ್ಕಾಗಿ ನಾನು ಭಗತ್‌ ಸಿಂಗ್‌ ನಂತೆ ಆಗುತ್ತೇನೆ. ಈ ಸರಕಾರ ಬ್ರಿಟಿಷರಿಗಿಂತಕ್ರೂರವಾಗಿ ನಡೆದುಕೊಳ್ಳುತ್ತಿದೆ. ನಮ್ಮದೇ ಜನರ ಮೇಲೆ ಲಾಠಿ ಚಲಾಯಿಸುತ್ತಾರೆ. ಮೊದಲು ಬ್ರಿಟಿಷರ ಗುಲಾಮಗಿರಿ ಮಾಡಿದರು…ಈಗ..ಈಗ..” ಎನ್ನುವ ಹೊತ್ತಿಗೆ ಹಿಂದಿನಿಂದ ಬರುತ್ತಿದ್ದ ಪೊಲೀಸರ ಜೋರಾಟಕ್ಕೆ ಅವನು ಮಾತನ್ನು ನಿಲ್ಲಿಸಿ ಟಾಟಾ ಮಾಡಿ ಹೊರಟ. ಜಂತರ್‌ ಮಂತರ್‌ 1.0 ರಲ್ಲಿ ಕೂಡ ಇದೇ ಹರೆಯದ ಹುಡುಗರು ಶಾಲಾ ಸಮವಸ್ತ್ರದಲ್ಲಿಯೇ ಬಂದಿದ್ದರು. ʼಮೋದಿ…ಚಹಾ ಬೇಕಾದರೆ ಮಾಡು ಆದರೆ, ಜನರನ್ನು ಮೂರ್ಖರನ್ನಾಗಿ ಮಾಡಬೇಡʼ ಎಂಬ ಪೋಸ್ಟರ್‌ ಪ್ರಿಂಟ್‌ ಹಾಕಿಸಿ ತಂದಿದ್ದರು. ಶಾಲೆಗೆ ಚಕ್ಕರ್‌ ಹಾಕಿ ಬಂದಿದ್ದೀರ? ಎಂದು ಕೇಳಿದರೆ, ಸಂಕೋಚದಿಂದ ಉತ್ತರ ಕೊಟ್ಟಿರಲಿಲ್ಲ. ಆದರೆ, ಬಾಬು ಸಾಹೇಬ್‌ ಮಾತಾಡಿದ ರೀತಿ – ಆತನ ಧೈರ್ಯ, ವಿಚಾರ ಸ್ಪಷ್ಟತೆ, ವಿಷಯದ ಗಹನತೆಯ ಅರಿವು ದಂಗು ಬಡಿಸುವಂತಿತ್ತು. ಇದೇ ರೀತಿ
ಸ್ಥಿತಿವಂತರು ತಮ್ಮ ಮಕ್ಕಳಲ್ಲಿ ಯಾರನ್ನಾದರೂ ಒಬ್ಬರೇ ಹೋಗಲು ಅನುಮತಿಸುವರೇ? ಎನಿಸಿತು. ರಾತ್ರಿ ಹೊಟೇಲ್‌ ರೂಮಿನಲ್ಲಿ ಉಂಡು ಮಲಗಿದರೆ, ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಸ್ಪೀಕರ್‌ ನಿಂದ ಬರುತ್ತಿದ್ದ”ಕೃಪಯಾ ಧ್ಯಾನ್‌ ದೇ…” ಎಚ್ಚರಿಕೆಯ ಹೆಣ್ಣಿನ ಧ್ವನಿ ಮತ್ತು ಪೊಲೀಸರ “ಪೀ…ಪೀ” ಸೀಟಿಯ ಸದ್ದು ಬೇಡವೆಂದರೂ ಕಿವಿಯಲ್ಲಿ ಮಾರ್ದನಿಸುತ್ತಿತ್ತು. ಶತಾಯಗತಾಯ ಪ್ರತಿಭಟನೆಯನ್ನು ತಡೆಯುವ ಕಂಕಣ ತೊಟ್ಟಂತೆ, ಮೋದಿ ಸರ್ಕಾರ ನಿಷೇಧಾಜ್ಞೆ ಜೊತೆಗೆ ಅಕ್ಟೋಬರ್‌ ಹತ್ತರಂದು, ಐವತ್ತಕ್ಕೂ ಮಿಕ್ಕು ಮೆಟ್ರೊ ಸ್ಟೇಷನ್‌ ಗಳನ್ನು ಬಂದ್‌ ಮಾಡಿದ ಮತ್ತು ದೇಶದ ಮೂಲೆಮೂಲೆಯಿಂದ ದೆಹಲಿಗೆ ಬರುವ ಎಲ್ಲಾ ರೈಲುಗಳನ್ನು ತಡೆದಿರುವ ಸುದ್ದಿ ಬಂದಿತ್ತು.

ರೈಲಿನಲ್ಲಿ ಪಯಣಿಸುತ್ತಿದ್ದ ಯುವಕರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಹೊರಟವರೆಂಬ ಸುಳಿವು ಸಿಕ್ಕರೆ, ದೆಹಲಿಗೆ ತಲುಪುವ ಮುಂಚೆಯೇ ಅವರನ್ನು ಪೊಲೀಸರು ಬಂಧಿಸುತ್ತಿದ್ದರು. ದೆಹಲಿ ನಗರದೊಳಗೆ ರಾತ್ರಿ ಇಡೀ – ವಿದ್ಯಾರ್ಥಿಗಳಿರುವ ಹಾಸ್ಟೆಲ್‌, ಪೇಯಿಂಗ್‌ ಗೆಸ್ಟ್‌ ತಾಣಗಳಲ್ಲಿ ತಪಾಸಣೆ ನಡೆಸಿ ಯುವಕರನ್ನು ವಶಕ್ಕೆ ಪಡಿಸಿಕೊಳ್ಳುತ್ತಿದ್ದರು. ಪ್ರತಿಪಕ್ಷಗಳ ಕಚೇರಿಯಲ್ಲೂ ವಿಚಾರಣೆ ನಡೆಸಿದ್ದರು. ಸೆಂಟ್ರಲ್‌ ಡೆಲ್ಲಿಯಲ್ಲಿ ಯುದ್ಧದಂತ ವಾತಾವರಣ ನಿರ್ಮಾಣವಾಗುತ್ತಿತ್ತು.

ಅಕ್ಟೋಬರ್‌ 10

ಬೆಳಿಗ್ಗೆ ಹೋಟೆಲ್ ನಿಂದ ಹೊರ ಬಿದ್ದಾಗ ಎಲ್ಲಿಗೆ ಹೋಗುವುದೆಂಬ ಗೊಂದಲ ಉಂಟಾಯಿತು. ಜಂತರ್‌ ಮಂತರ್‌ಗೆ ತಲುಪದಂತೆ ದೂರದಲ್ಲೇ ಪೊಲೀಸರ ಚಕ್ರವ್ಯೂಹ ರಚಿಸಿ ತಡೆಯೊಡ್ಡಿದ್ದರು. ಆದದ್ದಾಗಲಿ ಎಂದು ನಕುಲ್‌ ಸಿಂಗ್‌ ಆಟೊ ಹತ್ತಿ ಹೊರಟೆ. ಪಹಲ್ಗಂಜ್‌ ನ ಕೃಷ್ಣ ಮಾರ್ಕೆಟ್‌ ನಿಂದ ರಾಮಕೃಷ್ಣ ಆಶ್ರಮ ಮೆಟ್ರೊ ಸ್ಟೇಷನ್‌ ಕಡೆ ಬರುತ್ತಲೇ, ಸಾರ್ವಜನಿಕರು ಮುಖ್ಯರಸ್ತೆಗೆ ಹೋಗದಂತೆ ಎರಡು ಸಾರಿಗೆ ಬಸ್ಸುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ತಡೆಯೊಡ್ಡಲಾಗಿತ್ತು. ಆ ಪ್ರದೇಶ ಬೆಂಗಳೂರಿನ ಬಳೇಪೇಟೆ, ಚಿಕ್ಕಪೇಟೆಯಂತಹ ಇಕ್ಕಟ್ಟಿನ ಪ್ರದೇಶ. ತಳ್ಳುಗಾಡಿ, ಗೂಡಂಗಡಿ ಕೆಳವರ್ಗದ ವ್ಯಾಪಾರಿಗಳು ಇರುವ, ಜಂತರ್‌ ಮಂತರ್‌ ನಿಂದ ಸುಮಾರು ನಾಲ್ಕೈದು ಕಿಲೋ ಮೀಟರ್‌ ದೂರದ ಜಾಗ. ಅಂದೇ ದುಡಿದು ಅಂದೇ ಉಣ್ಣುವ ಅಲ್ಲಿಯ ಕೂಲಿ ಕಾರ್ಮಿಕರಿಗೂ ಪ್ರತಿಭಟನೆಗೂ ಯಾವ ಸಂಬಂಧವು ಇರಲಿಲ್ಲ. ಅಲ್ಲದೆ, ಪ್ರತಿಭಟನೆ ಬಗ್ಗೆ ಮಾಹಿತಿ, ಆಸಕ್ತಿ ಎಲ್ಲಕ್ಕಿಂತ ಹೆಚ್ಚಾಗಿ ಅವಶ್ಯಕತೆ ಅಲ್ಲಿರುವವರಿಗೆ ಬೇಕಿರಲಿಲ್ಲ. ಆದರೆ, ಪ್ರತಿಭಟನೆಗೆ ಕಿಂಚಿತ್ತೂ ಆಸ್ಪದ ಕೊಡದಿರಲು ಮೋದಿ ಸರ್ಕಾರ ನಿರ್ಧರಿಸಿದಂತಿತ್ತು. ಬ್ಯಾರಿಕೇಡ್‌ ಮುಕ್ತ ರಸ್ತೆಯನ್ನು ಹುಡುಕುತ್ತ ಆಟೋ ಸಾಗಿತ್ತು. ಅಡ್ಡರಸ್ತೆಗಳು ಮುಚ್ಚಲ್ಪಟ್ಟಿದ್ದರಿಂದ ಯುಟರ್ನ್‌ ಮಾಡುವುದು ಮತ್ತೊಂದು ರಸ್ತೆಯನ್ನು ಎಡತಾಕುತ್ತ, ಆಟೋ ಎತ್ತೆತ್ತಲೋ ಗಿರಕಿ ಹೊಡೆಯುತ್ತಿತ್ತು. ಪೊಲೀಸರ ಕಣ್ಗಾವಲಿನಲ್ಲಿ ಮುಖ್ಯರಸ್ತೆಗಳಲ್ಲಿ ಮಾತ್ರ ವಾಹನ ಸಂಚಾರವಿತ್ತು. ಅಲ್ಲೂ ಯುವಜನರು ಕಂಡರೆ, ಸಾರ್ವಜನಿಕರೇ ಆಗಿರಲಿ ಬಿಡುತ್ತಿರಲಿಲ್ಲ.

ಕೊರಳಲ್ಲಿ ಪತ್ರಕರ್ತನ ಐಡಿ ಕಾರ್ಡ್‌ ಇದ್ದುದರಿಂದ ಅದರ ಮೇಲೆ ಒಮ್ಮೆ ಕಣ್ಣಾಯಿಸಿ ನಮ್ಮನ್ನು ಬಿಡುತ್ತಿದ್ದರು. ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸೆಂಟ್ರಲ್‌ ದೆಹಲಿ ಸಂಪೂರ್ಣ ಬಂದ್‌ ಆಚರಿಸುತ್ತಿತ್ತು. ಅಂಗಡಿಗಳವರೇ ಮುಚ್ಚಿದ್ದರೋ ಅಥವಾ ಸರ್ಕಾರವೇ ಬಲವಂತವಾಗಿ ಮುಚ್ಚಿಸಿತ್ತೋ ತಿಳಿಯಲಿಲ್ಲ. ಆ ವಾತಾವರಣ ಕೊರೊನಾ ಕಾಲದ ಚಿತ್ರಣವನ್ನು ನೆನಪಿಸುತ್ತಿತ್ತು. ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಹರಿಯಾಣದಿಂದ ಬಂದಿದ್ದವರ ಕಾರಿನ ಡ್ರೈವರ್‌, ನಮ್ಮಂತೆ ಎಲ್ಲೆಡೆ ಸುತ್ತು ಹೊಡೆದು ಗಮ್ಯ ಸ್ಥಾನಕ್ಕೆ ಹೋಗಲಾಗದೆ ಹತಾಶೆಗೊಂಡಿದ್ದ. ನಕುಲ್‌ ಸಿಂಗ್‌ನನ್ನು ದಾರಿಗಾಗಿ ವಿಚಾರಿಸಿದ. ತಡೆಯೊಡ್ಡಿದ ಎಲ್ಲಾ ರಸ್ತೆಗಳನ್ನು ಹೀಗಾಗಲೇ ಹಾದು ಬಂದಿದ್ದರಿಂದ ನಕುಲ್‌ ಸಲಹೆ ನಿರುಪಯುಕ್ತವಾಗಿತ್ತು. ದೆಹಲಿಯ ನಿವಾಸಿಗಳಾಗಿ ಹೊರಗೆ ಹೋಗಿ ಬಂದವರು, ದೆಹಲಿಗೆ ಮೊದಲ ಬಾರಿ ಬಂದವರು ಮನೆ ತಲುಪಲಾರದೆ ಒದ್ದಾಡುತ್ತಿದ್ದರು.

ಸಂದಿಗೊಂದಿಗಳಲ್ಲಿ ಸುತ್ತಾಡಿ ಕೊನೆಗೆ ಕನ್ನಾಟ್‌ ಪ್ಲೇಸ್‌ ಸಮೀಪಕ್ಕೆ ಬಂದೆವು. ಎಲ್ಲಿ ನೋಡಿದರೂ ಪೊಲೀಸರು, ಪ್ಯಾರಾ ಮಿಲಿಟರಿ ಪಡೆಗಳು. ಆಟೋ ಒಂದೆಡೆಯೇ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವಿದ್ದರಿಂದ, ನಕುಲ್‌ ಗೆ ಸುರಕ್ಷಿತ ಜಾಗದಲ್ಲಿ ಪಾರ್ಕಿಂಗ್‌ ಮಾಡಲು ಹೇಳಿ ಕಾಲ್ನಡಿಗೆಯಲ್ಲಿ ಮಾರ್ಕೆಟ್‌ ಏರಿಯಾಕ್ಕೆ ಬಂದೆ. ಅಲ್ಲಿ ಒಂದಷ್ಟು ಸೋಷಿಯಲ್‌ ಮೀಡಿಯಾ ಜರ್ನಲಿಸ್ಟ್‌ಗಳು ಬಿಟ್ಟರೆ ಪ್ರತಿಭಟನಾಕಾರರು ಕಾಣಲಿಲ್ಲ. ಸ್ವಲ್ಪ ಹೊತ್ತಿಗೆ – ʼಓಟ್‌ ಚೋರ್‌ ಗದ್ದಿ ಚೋಡ್…ಗ್ಯಾನೇಶ್‌ ಕುಮಾರ್‌ ಇಸ್ತಿಫಾ ದೊʼ ಎಂಬ ಘೋಷಣೆಗಳು ಎಲ್ಲಿಂದಲೋ ಕೇಳಿಬರುತ್ತಿತ್ತು! ಅದೆಲ್ಲಿಂದ ಬಂದರೋ? ಧಿಕ್ಕಾರ ಹಾಕುತ್ತ ಜಂತರ್‌ ಮಂತರ್‌ ಕಡೆ ಹೋಗುವ ರಸ್ತೆಯತ್ತ ಯುವಜನರು ಓಡಿ ಹೋಗುತ್ತಿದ್ದರು. ಕೈಬೆರಳೆಣಿಕೆಯಷ್ಟಿದ್ದ ಅವರನ್ನು ಪೊಲೀಸರು ಅನಾಯಾಸವಾಗಿ, ನಿರ್ದಯವಾಗಿ ಹಿಡಿದು ವ್ಯಾನಿಗೆ ತುಂಬಿದರು. ನೂರಾರು ಪೊಲೀಸರ ದಂಡಿನ ನಡುವೆ ಡೆಪ್ಯೂಟಿ ಕಮೀಷನರ್‌ ಆಫ್‌ ಪೊಲೀಸ್‌ ಸಚ್ಚಿನ್‌ ಶರ್ಮ ನಿಂತಿದ್ದರು. ಕಚೇರಿಯಲ್ಲಿದ್ದು ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ಖುದ್ದಾಗಿ ರಸ್ತೆಯಲ್ಲಿ ನಿಂತು ಪ್ರತಿಭಟನೆಯ ನಿಯಂತ್ರಣದಲ್ಲಿ ತೊಡಗಿದ್ದು, ಮೋದಿ ಅಮಿತ್‌ ಶಾರ ಪ್ರತಿನಿಧಿಯಂತೇ ಕಾಣುತ್ತಿದ್ದರು.

ಸ್ವಲ್ಪ ಹೊತ್ತು ವಿರಾಮ. ಮತ್ತೆ ಧುತ್ತೆಂದು ಪ್ರತ್ಯಕ್ಷವಾಗುವ ಪ್ರತಿಭಟನಾಕಾರರು. ಮತ್ತೆ ಬಂಧನ. ಮತ್ತದೇ ವಿಶಲ್‌ ನ ಸಿಳ್ಳೆಯ ಅಬ್ಬರ…ಮತ್ತದೇ ಸ್ಪೀಕರ್‌ ನಲ್ಲಿ ʼಕೃಪಯಾ…ಧ್ಯಾನ್‌ ದೇ…ಕೃಪಾಯಾ….” ಪುನರಾವರ್ತನೆಯಾಗುತ್ತಿತ್ತು. ಕನ್ನಾಟ್‌ ಪ್ಲೇಸ್‌ ನ ಸೆಂಟ್ರಲ್‌ ಪಾರ್ಕಿನಲ್ಲಿರುವ ಧ್ವಜ ಸ್ತಂಭ 200 ಅಡಿಯಷ್ಟು ಎತ್ತರದ್ದು! ಅಲ್ಲಿ ಹಾರಾಡುವ ತ್ರಿವರ್ಣ ಬಾವುಟದ ಅಳತೆಯೇ ಬೆರಗಾಗುವಂತಾದ್ದು – 90 ಅಡಿ ಉದ್ದ 60 ಅಡಿ ಅಗಲ. ಒಂದೆಡೆ – ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿದು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಂಕೇತವಾಗಿ ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ ಬಾವುಟ, ಮತ್ತೊಂದೆಡೆ ಅದರಡಿಯಲ್ಲಿ ಈ ದೇಶದ ಭವಿಷ್ಯವಾದ ಯುವಜನರ ಬಾಯನ್ನು ಪ್ರಶ್ನಿಸದಂತೆ ಕಟ್ಟಿ, ಪಶುಗಳಂತೆ ವ್ಯಾನಿಗೆ ತುಂಬುತ್ತಿರುವ ಮೋದಿ, ಅಮಿತ್‌ ಶಾ ಬಿಜೆಪಿ ಪೊಲೀಸರ ಕ್ರೌರ್ಯ, ಎರಡು ದೃಶ್ಯಗಳು ವಿರೋಧಾಭಾಸವಾಗಿ ಕಾಣುತ್ತಿತ್ತು.

ನಕುಲ್‌ಗೆ ಮೊಬೈಲ್‌ ಕರೆ ಮಾಡಿ ಎಲ್ಲಿ ಆಟೋ ನಿಲ್ಲಿಸಿದ್ದಾರೆಂದು ತಿಳಿದುಕೊಂಡು, ಪಟೇಲ್‌ ಚೌಕ್‌ ಗೆ ಹೋಗಲು ನಿರ್ಧರಿಸಿದೆ. ಜಂತರ್‌ ಮಂತರ್‌ 1.0ರಲ್ಲಿ ಆ ದೊಡ್ಡ ಸರ್ಕಲ್‌ ಪ್ರತಿಭಟನೆಯ ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಮತ್ತೆ ನಿರಾಶೆಯಾಯಿತು! ಜೈ ಸಿಂಗ್‌ ಮಾರ್ಗ್‌, ಅಶೋಕ ರೋಡ್‌, ಸಂಸತ್‌ ಮಾರ್ಗ್‌… ಪಟೇಲ್‌ ಚೌಕ್‌ ಗೆ ಸೇರುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರು. ಮತ್ತೇನು ಮಾಡುವುದು? ಹಾಗೆ ಬೇರೆ ಬ್ಯಾರಿಕೇಡ್‌ ಮುಕ್ತ ರಸ್ತೆಗಳನ್ನು ಹುಡುಕುತ್ತ ಬಾಬಾ ಕಡಕ್‌ ಸಿಂಗ್‌ (baba kharak singh road) ರೋಡ್‌ ಗೆ ಬಂದೆವು. ದೂರದಲ್ಲಿ ಪ್ರತಿಭಟನಾಕಾರರ ಗುಂಪು ಕಂಡಿತು. ಪಕ್ಕದಲ್ಲಿದ್ದ ಗಲ್ಲಿಯ ಮರೆಯಲ್ಲಿ ಆಟೋ ಪಾರ್ಕ್‌ ಮಾಡಿ ಕಾಯಲು ನಕುಲ್‌‌ಗೆ ಹೇಳಿ ಗುಂಪಿನತ್ತ ಧಾವಿಸಿದೆ. ಮೋದಿ ಸರಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ದ ಗುಂಪಿನಲ್ಲಿ ಸಿಖ್‌ ಯುವಕರು ಹೆಚ್ಚಿದ್ದರು. ಅದಾಗಲೇ ಪ್ರತಿಭಟನಾಕಾರರನ್ನು ತುಂಬಿಸಿದ್ದ ಬಸ್ ಅನ್ನು ಅಲ್ಲಿಂದ ಹೋಗದಂತೆ ತಡೆಯೊಡ್ಡಿ, ಸಂಗಾತಿಗಳನ್ನು ಬಿಡುವಂತೆ ಕೂಗುತ್ತಿದ್ದರು. ಪ್ರತಿಭಟನಾಕಾರರು ಹೆಚ್ಚೇ ಇದ್ದರಿಂದ, ಪೊಲೀಸರು ಬಸ್ಸನ್ನು ಹಿಂದಕ್ಕೆ ತೆಗೆಯಲು ಡ್ರೈವರ್‌ಗೆ ಹೇಳುತ್ತಿದ್ದರು. ಅಷ್ಟೊತ್ತಿಗೆ – ಘಟನೆಯ ಬಗ್ಗೆ ಮಾಹಿತಿ ಪಡೆದ ಡಿಸಿಪಿ ಸಚ್ಚಿನ್‌ ಶರ್ಮ ನೇತೃತ್ವದ ಪೊಲೀಸರ ಪಡೆ ದೂರದಲ್ಲಿ ಬರುತ್ತಿರುವುದು ಕಾಣಿಸಿತು. ಅವರು ಗುಂಪನ್ನು ಅಟ್ಟಿಸಿಕೊಂಡು ಹೋದಾಗ ಯುವಕರು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದರು. ಕೈಗೆ ಸಿಕ್ಕ ಅಮಾಯಕ ಯುವಕರನ್ನು ಬಂಧಿಸತೊಡಗಿದರು. ಬಂಧನಕ್ಕೆ ಕೊಸರಾಡಿದರೆ ಕೈಕಾಲುಗಳನ್ನು ಹಿಡಿದು, ಅನಾಮತ್ತಾಗಿ ಎತ್ತಿಕೊಂಡು ಬಸ್ಸಿಗೆ ತುರುಕುತ್ತಿದ್ದರು. ಒಬ್ಬ ಡಿಸಿಪಿ ಹೀಗೆ ರಸ್ತೆಗೆ ಇಳಿದು ಯುವಕರನ್ನು ಗುರಿ ಮಾಡಿ ಆರೆಸ್ಟ್‌ ಗೆ ನಿಂತರೆ, ಕೆಳದರ್ಜೆಯ ಪೇದೆಗಳು ಸುಮ್ಮನಿರುತ್ತಾರೆಯೇ? ಅವರು ಹೆಚ್ಚು ಜನರನ್ನು ಬಂಧಿಸಿ ತಮ್ಮ ನಿಷ್ಠೆ, ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದರು.

“ನಮ್ಮ ಓಟು ನಮ್ಮ ಅಧಿಕಾರ. ಅದನ್ನು ಕಿತ್ತು ಕೊಳ್ಳುತ್ತಿದ್ದಾರೆ.‌ ನರೇಂದರ್‌ ಮೋದಿಕು ಕ್ಯೂ ರಕ್ಕಾ ಹೇ…ಮೋದಿ ಹಟಾವ್‌…ದೇಶ್‌ ಬಚಾವ್” ಪೊಲೀಸರು ಅಟ್ಟಿಸಿಕೊಂಡು ಬಂದಾಗ, ಎದ್ದು ಬಿದ್ದು ತಪ್ಪಿಸಿಕೊಂಡ ಒಬ್ಬ ಯುವಕ ದೂರ ಓಡಿ ಬಂದು ಏದುಸಿರು ಬಿಡುತ್ತ, ಯಾವ ಅಂಜಿಕೆ ಇಲ್ಲದೆ ಪೊಲೀಸರಿದ್ದ ಬಸ್ಸನ್ನು ತೋರುತ್ತ ಆಕ್ರೋಶದಿಂದ ಕೂಗುತ್ತಿದ್ದ. ಆ ಯುವಕನನ್ನು ಮಾತಿಗೆಳೆದೆ.
“ಎಲ್ಲಿಂದ ಬಂದಿದ್ದೀರಿ?”
“ಜೈಪುರ್‌ ನಿಂದ”
“ಬಸ್ಸು ಟ್ರೈನು ಎಲ್ಲಾ ನಿಲ್ಲಿಸಿದ್ದಾರೆ. ಹೇಗೆ ಬಂದೀರಿ?”
“ಟ್ರೈನಲ್ಲೇ ಬಂದೆ. ಹೇಗೆ ಬರುವುದು ಗೊತ್ತು, ಈ ಮೊದಲು ಜಂತರ್‌ ಮಂತರ್‌ ಗೆ ಬಂದಿದ್ದೆ. ಈ ತಾನಾಶಾಹಿ ಮೋದಿ ಸರ್ಕಾರ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದೆ ನೋಡಿ. ( ಅಷ್ಟರಲ್ಲಿ ಬಾಗೊ ಎಂದು ಕೂಗುತ್ತ ಒಂದಷ್ಟು ಯುವಕರು ಓಡಿ ಬಂದರು. ನಾವು ಓಡಿದೆವು. ಓಡುತ್ತಿದ್ದವರನ್ನು ತೋರಿ…) ಇವರೆಲ್ಲಾ ನಮ್ಮ ಅಕ್ಕತಂಗಿಯರು…ಅಣ್ಣತಮ್ಮಂದಿರು…ಈ ಪೊಲೀಸರು ಹೇಗೆ ನಮ್ಮನ್ನು ಓಡಿಸುತ್ತಿದ್ದಾರೆ ನೋಡಿ!…ನನ್ನ ಪಕ್ಕದ ಮನೆಯ ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದಳು. ಈಗ ಅವಳ ಹೆಸರನ್ನು ತೆಗೆದಿದ್ದಾರೆ. ನಾವು ಈಗ ಮಾತಾಡದಿದ್ದರೆ ಮೋದಿ ಸರ್ವಾಧಿಕಾರದ ಆಡಳಿತ ಮುಂದುವರೆಯುತ್ತದೆ. ಅಕ್ಕಪಕ್ಕದ ಮನೆಯವರ ಹೆಸರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ನೀವೇ ಹೇಳಿ ಸರ್…(ಅಲ್ಲಿ ಬೈಕಲ್ಲಿ ಕೂತಿದ್ದ ಪೊಲೀಸನ್ನು ತೋರುತ್ತ) ಇವರೆಲ್ಲಾ ಮೋದಿ ಶಾರನ್ನು ಪ್ರಶ್ನಿಸುವುದಿಲ್ಲ. ನಮ್ಮ ಮೇಲೆ ಬೀಳುತ್ತಾರೆ. ಮೋದಿ, ಮೈ ಡಿಯರ್‌ ಫ್ರೆಂಡ್ಸ್‌ ಅನ್ನುತ್ತಾರೆ. ಇಲ್ಲಿ ನೋಡಿದರೆ ಹೇಗೆ ನಡೆಸಿಕೊಳ್ಳುತ್ತಿದ್ದಾರೆ. ಯುವಜನರು ಈ ದೇಶದ ಭವಿಷ್ಯವಲ್ಲವೇ? ಅವರ ಮಾತನ್ನು ಯಾಕೆ ಕೇಳಿಸಿಕೊಳ್ಳುವುದಿಲ್ಲ? ಎಲೆಕ್ಷನ್ ಕಮೀಷನರ್‌ ಆಯ್ಕೆ ಮಾಡಲು ಮೊದಲು ಚೀಫ್‌ ಜಸ್ಟಿಸ್‌ ಇದ್ದರು. ಅವರನ್ನು ತೆಗೆದರು. ಈಗ ಮೋದಿ…ಶಾ ಹೇಳಿದಂತೆ ನಡೆಯುತ್ತೆ…”

ಅವನು ಹೇಳುತ್ತಲೇ ಇದ್ದ…ಮಧ್ಯೆ ಮಧ್ಯೆ ಪೊಲೀಸರು ವಿಶಲ್‌ ಊದುತ್ತ ಓಡಿಸುವುದು ನಡೆದಿತ್ತು. ಕೊನೆಗೆ ನಮ್ಮ ಮೇಲೂ ಪೊಲೀಸರು ಬಿದ್ದಾರು ಎಂದು ಮಾತು ಮುಗಿಸಲು ಅವನ ಹೆಸರು ಕೇಳಿದೆ. ಸಿದ್ದಾರ್ಥ ಎಂದ. ಅಲ್ಲಿಂದ ಕಾಲ್ತೆಗೆದೆವು. ಪೊಲೀಸರ ಸಮ್ಮುಖದಲ್ಲೇ, ಅವರನ್ನು ದಿಟ್ಟಿಸಿ, ತಮ್ಮ ಸಿಟ್ಟನ್ನು ಹೊರ ಹಾಕುವ ಯುವಕನ ಎದೆಗಾರಿಕೆ ದಂಗು ಬಡಿಸುವಂತಿತ್ತು. ಸಿಟಿಜನ್‌ ವರದಿಗಾರ ಎಂಬ ಬಾಡ್ಜ್‌ ಇದ್ದರೂ ವ್ಯಾನಿಗೆ ತಳ್ಳಿ, ದೂರದ, ಯಾವುದೋ ಗೊತ್ತಿಲ್ಲದ ಜಾಗದಲ್ಲಿ ಬಿಟ್ಟರೆ ಗತಿಯೇನು? ಎಂಬ ಅಳುಕು ಕಾಡುತ್ತಿತ್ತು. ಗಲ್ಲಿಯ ಕಟ್ಟಡದ ಮರೆಯಲ್ಲಿ ನಿಲ್ಲಿಸಿದ್ದ ಆಟೋ ಹತ್ತಿ (ಅವಿತು) ಕುಳಿತೆ. ಯುವಕರ ಗುಂಪನ್ನು ಚದುರಿಸಿ ಬಂದ ಪ್ಯಾರಾ ಮಿಲಿಟರಿ ಪಡೆ ಏರಿಯಾ ಸುತ್ತ ಗಸ್ತು ತಿರುಗುತ್ತ ಆಟೋ ಪಕ್ಕದಲ್ಲೇ ಹಾದು ಹೋಯಿತು. ನಿರ್ಜನವಾಗಿದ್ದ ಬಿಲ್ಡಿಂಗ್‌ ಕಾಂಪ್ಲೆಕ್ಸ್‌ ನಿಂದ ಒಬ್ಬ ಯುವಕ ಬರುತ್ತಿದ್ದ. ಅವನನ್ನು ಹಿಡಿದರು. ಗಾಬರಿಗೊಂಡವನು
“ಸಾರ್…ನಾನು ಈ ಕಟ್ಟಡದಲ್ಲಿಯೇ ಇರೋದು. ಬಹಿರ್ದೆಶೆಗೆಂದು ಹೊರಗೆ ಬಂದೆ” ಎಂದ. ಬಿಟ್ಟು ಬಿಟ್ಟರು. ಅವನ ಹಿಂದೆಯೇ ಮತ್ತೊಬ್ಬ ಓಡಿ ಬರುತ್ತಿದ್ದ, ಅವನನ್ನು ಬಂಧಿಸಿ, ಮಾತಾಡಲು ಅವಕಾಶ ಕೊಡದೆ ಕರೆದೊಯ್ದರು. ಈ ಬಾರಿ ಪೊಲೀಸರ ಕಾರ್ಯತಂತ್ರ ನಿಚ್ಚಳವಾಗಿತ್ತು. ಯುವಜನರು ಒಟ್ಟು ಕೂಡಿದರೆ ಅವರನ್ನು ನಿಭಾಯಿಸುವುದು ಸಾಧ್ಯವಿಲ್ಲದ ಮಾತು. ಆ ಕಾರಣಕ್ಕೆ ಒಟ್ಟಾಗಿ ಇರಲು ಅವಕಾಶ ಕೊಡದೆ ಚದುರಿಸುವ ಇಲ್ಲಾ ಬಂಧಿಸುವ ಕುಟಿಲ ಮಾರ್ಗೋಪಾಯವನ್ನು ಕಂಡುಕೊಂಡಿದ್ದರು.

ಪ್ರತಿಭಟನೆಗೆ ಎಲ್ಲಾ ಜಾಗಗಳನ್ನು ನಿಷೇಧಿಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲಾರದಂತೆ ನಿರ್ಬಂಧ ಹೇರಿರುವಾಗ ಎಲ್ಲಿಗೆ ಹೋಗುವುದು? ಮುಂದೇನು ಮಾಡುವುದು? ಆಟೋದಲ್ಲಿ ಕುಳಿತೇ ಮೊಬೈಲ್‌ ನೋಡುತ್ತಿದ್ದೆ. ಮತ್ತೊಂದು ಕೆಟ್ಟ ಸುದ್ದಿ ಕಂಡಿತು. ದೆಹಲಿಯ ಏರ್‌ ಪೋರ್ಟಲ್ಲಿ ಸಿಜೆಪಿಯ ಸಂಚಾಲಕರಾದ ಅಭಿಜಿತ್‌ ದೀಪ್ಕೆ, ಸೌರಭ್‌ ದಾಸ್‌ ಮತ್ತು ಅಶುತೋಶ್‌ ರಂಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಮಾನ ಇಳಿದು ಏರ್‌ ಪೋರ್ಟನ್ನು ಪ್ರವೇಶಿಸುವವರೆಗೂ ಕಾಯದೆ ಏಕಾಏಕಿ ವಿಮಾನದಲ್ಲೇ, ಅದೂ ಮಹಿಳಾ ಪೊಲೀಸ್‌ ಅಧಿಕಾರಗಳಿಂದ ಬಂಧಿಸಿದ್ದು ಹಲವು ಅನುಮಾನಗಳನ್ನು ಮನದಲ್ಲಿ ಮೂಡಿಸಿತು. ಅಷ್ಟರಲ್ಲಿ ಬೆಂಗಳೂರಿನ ಆನ್‌ ಲೈನ್‌ ಪತ್ರಿಕೆಯ ಪರಿಚಿತ ಯುವ ವರದಿಗಾರ ಫೋನ್‌ ಮಾಡಿದ. “ಸರ್…ಎಲ್ಲಿದ್ದೀರಿ? ಪಟೇಲ್‌ ಚೌಕಿಗೆ ಬನ್ನಿ. ರಿಪೋರ್ಟರ್ಸ್‌ ಎಲ್ಲಾ ಇಲ್ಲೇ ಇದ್ದಾರೆ. ಸೇಫ್‌ ಪ್ಲೇಸ್ ” ಅಂದ. ನನಗೆ
ಆಶ್ಚರ್ಯವಾಯಿತು.

“ಅಲ್ಲ ಗೆಳೆಯ. ಅಲ್ಲಿಗೆ ಯಾರನ್ನು ಬಿಡುತ್ತಿಲ್ಲ. ನೀನು ಹೇಗೆ ಅಲ್ಲಿಗೆ ಹೋದೆ?”
“ಸರ್…ಪತ್ರಕರ್ತರನ್ನ ಬಿಡ್ತಾರೆ, ಬನ್ನಿ. ಇಲ್ಲೇ ಎಲ್ಲಿಗೆ ಹೋಗೋದು ಅಂತ ಪ್ಲಾನ್‌ ಮಾಡೋಣ” ಅಂದ. ಪಟೇಲ್‌ ಚೌಕಿಗೆ ಹೋಗುವುದು ಖುಷಿಯ ವಿಷಯವೇ. ಜಂತರ್‌ ಮಂತರ್‌ 1.0ರಲ್ಲಿ ಪ್ರತಿಭಟನೆಯ ಸಂಭ್ರಮವನ್ನು ನೋಡಿದ್ದ ಜಾಗವದು. ಪಟೇಲ್‌ ಚೌಕ್‌ ಗೆ ಬಂದಾಗ ನಕುಲ್‌ ಗೆ, “ಇಲ್ಲಿ ತಡವಾಗಬಹುದು. ನೀವು ಕಾಯುವುದು ಬೇಡ. ನಾನೇ ಬರುತ್ತೇನೆ” ಎಂದು ಅವರನ್ನು ಕಳುಹಿಸಿದೆ.

ಸಂಸತ್ತಿಗೆ ಹೋಗುವ ರಸ್ತೆ ಸೇರಿ ಹಲವು ಪ್ರಮುಖ ರಸ್ತೆಗಳು ಕೂಡುವ ಆ ಸರ್ಕಲ್ಲಿನಲ್ಲಿ ಎಲ್ಲಾ ರಸ್ತೆಗೂ ಬ್ಯಾರಿಕೇಡ್‌ ಹಾಕಿ, ಪೊಲೀಸ್‌ ನಿಗಾ ಇಟ್ಟಿದ್ದರು. ಪೊಲೀಸರೇನೊ ಬಿಟ್ಟರು. ಆದರೆ, ಅಲ್ಲಿಗೆ ಯಾವ ಪ್ರತಿಭಟನಾಕಾರರು ಬರುವ ಅವಕಾಶವೇ ಇರಲಿಲ್ಲ. ಪಾರ್ಕ್‌ನಂತಹ ಸರ್ಕಲ್ಲಿನಲ್ಲಿ ಹಲವು ಸೋಷಿಯಲ್‌ ಮೀಡಿಯಾ ಪತ್ರಕರ್ತರು ನೆರೆದು, ಚರ್ಚೆಯಲ್ಲಿ ತೊಡಗಿದ್ದರು. ಸ್ಥಳೀಯ ಪತ್ರಕರ್ತರೊಬ್ಬರು ಪ್ರತಿಷ್ಠಿತ ಪ್ರತಿಕೆಯ ವರದಿಗಾರರನ್ನು ಸಹಿತ ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದನ್ನು ಹೇಳಿ “ಈ ಮೋದಿ ಸರ್ಕಾರ ಫ್ಯಾಸಿಸ್ಟ್‌ ಸರ್ಕಾರ. ಇಷ್ಟೊಂದು ಸೆಕ್ಯುರಿಟಿ ಯಾಕೆ ಬೇಕಿತ್ತು? ಯುವಜನರು ಪ್ರೊಟೆಸ್ಟ್‌ ಮಾಡಲು ಬಿಡಬೇಕಿತ್ತು. ಅಲ್ಲದೆ ಎಲ್ಲೆಡೆ ಇಂಟರ್‌ ನೆಟ್‌ ತೆಗೆದಿದ್ದಾರೆ…ಎಷ್ಟು ಜನರಿಗೆ ತೊಂದರೆ!” ಎಂದು ಅಸಮಾಧಾನದಿಂದ ನುಡಿದರು. ಒಂದಷ್ಟು ಹೊತ್ತು ಇದ್ದ ಮೇಲೆ ಅಲ್ಲಿ ಕೂತು ಏನು ಮಾಡವುದು? ಅನಿಸಿತು. ಬಿಸಿಲಲ್ಲಿ ಓಡಾಡಿ ಆಯಾಸವಾಗಿತ್ತು. ತಂದಿದ್ದ ಚಾಕೊಲೆಟ್‌, ವಿಟಮಿನ್‌ ಬಾರ್‌ ಖಾಲಿಯಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಗೆಳೆಯನಿಗೆ ಹೊಟೇಲಿಗೆ ಹೋಗುತ್ತೇನೆಂದೆ. ಆದರೆ ಹೇಗೆ ಹೋಗುವುದು? ನಕುಲ್‌ ನನ್ನು ಕಳುಹಿಸಿ ಬಿಟ್ಟು ತಪ್ಪು ಮಾಡಿದೆ ಅನಿಸಿತು. ಸ್ವಲ್ಪ ಹೊತ್ತಿಗೆ ಆಟೋವೊಂದು ಕಾಣಿಸಿತು. ಮೂರು ಪಟ್ಟು ಹೆಚ್ಚಿಗೆ ಬಾಡಿಗೆ ಕೇಳಿದ. ಸ್ಥಳೀಯ ಪತ್ರಕರ್ತರು ಮಾತಾಡಿ ಒಂದಷ್ಟು ಕಡಿಮೆ ಮಾಡಿಸಿದರು.

ಬ್ಯಾರಿಕೇಡ್‌ ಹಾಕಿದ್ದ ರಸ್ತೆಗಳನ್ನು ತಪ್ಪಿಸುತ್ತ ಗಲ್ಲಿಸೊಂದಿಗಳ ಗುಂಡಿಗಳಲ್ಲಿ ಇಳಿಸಿ ಏರಿಸಿ, ರಾಕೆಟ್‌ ಸ್ಪೀಡ್‌ ನಲ್ಲಿ ಆಟೋ ಓಡುತ್ತಿತ್ತು. ಬ್ಯಾರಿಕೇಡ್‌ ಇದ್ದಲ್ಲಿ, ಅವುಗಳ ಮಧ್ಯೆದಲ್ಲಿ ಆಟೋವನ್ನು ನಾಜೂಕಾಗಿ ತೂರಿಸುತ್ತಿದ್ದ ಡ್ರೈವಿಂಗ್‌ ನಿಪುಣತೆ ಮೆಚ್ಚುವಂತಿತ್ತು. ಮಧ್ಯೆ ಮಧ್ಯೆ ʼಬಾಡಿಗೆ ಕೊಡಲು ಚೌಕಾಶಿ ಮಾಡಿದ್ರಿ…ಈಗ ನೋಡಿ ಎಲ್ಲಾ ರಸ್ತೆ ಬಂದ್‌ ಆಗಿದೆʼ ಎಂದು ಗೊಣಗುತ್ತಿದ್ದ. ಅದೆಲ್ಲೆಲ್ಲಿ ಆಟೋ ಓಡುತ್ತಿತ್ತೊ…ಒಂದೆಡೆ, ಮುಖ್ಯರಸ್ತೆ ಪೂರ್ತಿ ಅಡ್ಡಾದಿಡ್ಡಿ ವಾಹನಗಳು ಕಿಲೋಮೀಟರ್‌ ಉದ್ದ ನಿಂತಿತ್ತು. “ಸಾಹಬ್… ಆಗೇ ನಹೀಂ ಜಾ ಸಕ್ತೇ… ಆಪ್ ಯಹೀಂ ಉತರಿಯೇ” ಎಂದ. ಎದೆ ಧಸ್ಸಕ್ಕೆಂದಿತು. ಅದು ಯಾವ ಜಾಗ…ಅಲ್ಲಿಂದ ಪಹಲ್ಗಂಜ್‌ ನ ಹೊಟೇಲ್‌ ಗೆ ಹೇಗೆ ತಲುಪುವುದು? ಸಾಧ್ಯವಿರಲಿಲ್ಲ. ಟ್ರಾಫಿಕ್‌ ಕಡಿಮೆಯಾಗುವವರೆಗೆ ಕಾಯುತ್ತೇನೆಂದರೂ, ಪಹಲ್ಗಂಜ್‌ ಹತ್ತಿರದಲ್ಲೇ ಇದೆ ರೈಲ್ವೇ ಸ್ಟೇಷನ್ನಿನ ಸೇತುವೆಯನ್ನು ದಾಟಿ ಹೋಗಿ ಎಂದು ಇಳಿಯಲು ಒತ್ತಾಯಿಸಿದ.

ಅದು ನ್ಯೂ ಡೆಲ್ಲಿ ರೈಲ್ವೇ ಸ್ಟೇಷನ್. ದೆಹಲಿಗೆ ಬರುವ ರೈಲುಗಳನ್ನು ನಿಲ್ಲಿಸಿದ್ದರಿಂದ ಆ ಬಗ್ಗೆ ವಿಚಾರಿಸೋಣ ಎಂದು ಸ್ಟೇಷನ್‌ ಒಳಗೆ ಬಂದೆ. ವಿಶಾಲವಾದ ನಿಲ್ದಾಣದಲ್ಲಿ ಜನವೋ ಜನ. ಬಹಳಷ್ಟು ಜನ ನೆಲದಲ್ಲೇ ಕುಳಿತು ತಮ್ಮ ರೈಲಿಗಾಗಿ ಕಾಯುತ್ತಿದ್ದಂತೆ ಕಂಡಿತು. ಅಲ್ಲಿದ್ದ ರೈಲ್ವೇ ಸಿಬ್ಬಂದಿಯನ್ನು ತಡೆ ಹಿಡಿಯಲಾದ ರೈಲುಗಳ ಬಗ್ಗೆ ವಿಚಾರಿಸಿದೆ. ಅವನು ಮಾಹಿತಿ ನೀಡಲು ನಿರಾಕರಿಸಿ, ವಿಚಾರಣೆ ಕೌಂಟರಿನಲ್ಲಿ ಕೇಳಿ ಅಂದ. ಜೊತೆಗೆ, ʼಪತ್ರಕರ್ತರಾದರೂ ಇಲ್ಲಿ ವಿಡಿಯೋ ಮಾಡುವ ಹಾಗಿಲ್ಲ. ಮೊದಲು ಕ್ಯಾಮೆರಾ ಶೂಟಿಂಗ್‌ ಬಂದ್‌ ಮಾಡಿ. ವಿಡಿಯೊ ಡಿಲೀಟ್‌ ಮಾಡಿʼ ಅಂದ. ಮರು ಮಾತಾಡದೆ ಆಚೆ ಬಂದೆ. ಮತ್ತೊಂದು ಆಟೋ ಹಿಡಿದು ಹೇಗೊ ಹೊಟೇಲ್‌ ಗೆ ತಲುಪಿ, ಸಿಕ್ಕಿದ್ದನ್ನು ತಿಂದು, ಎಲ್ಲಿಗೆ ಹೋಗುವುದು ಎಂದು ಚಿಂತಿಸುತ್ತ ಕೂತಾಗ ಕೈಕಾಲುಗಳನ್ನು ಕಟ್ಟಿದಂತೆ ಭಾಸವಾಗುತ್ತಿತ್ತು. ಜಂತರ್‌ ಮಂತರ್‌, ಕನ್ನಾಟ್‌ ಪ್ಲೇಸ್‌ ನಲ್ಲಿ ಪ್ರತಿಭಟಿಸಲು ನಿರ್ಬಂಧಿಸಿರುವಾಗ, ದೆಹಲಿಯ ಸುತ್ತಮುತ್ತ ಅಲ್ಲಲ್ಲಿ ಪ್ರತಿಭಟನೆಗಳು ಬಿಡಿಬಿಡಿಯಾಗಿ ನಡೆಯುತ್ತಿರುವ ಮತ್ತು ನೂರಾರು ಯುವಜನರ ಬಂಧನದ ಸಮಾಚಾರ ಸಿಗುತ್ತಿತ್ತು.ಸಂಜೆಯ ಹೊತ್ತಿಗೆ – ಹೊಟೇಲ್‌ಗೆ ತಲುಪಿದ್ದ ಯುವ ಪತ್ರಕರ್ತ ಮಿತ್ರ ʼಸಫ್ದಾರ್‌ ಜಂಗ್‌ ರೋಡ್‌ ಗೆ ಹೋಗೋಣ. ಅಲ್ಲಿ ಯೋಗೇಂದ್ರ ಯಾದವ್‌ ಅವರು ಪ್ರತಿಭಟಿಸುತ್ತಿದ್ದಾರೆʼ ಎಂದ. ಸಂಚಾರಕ್ಕೆಂದು ಅವಲಂಬಿತವಾಗಿದ್ದ ನಕುಲ್‌ ಸಿಂಗ್‌ಗೆ ಅಲ್ಲಿಗೆ ಹೋಗೋಣ ಎಂದರೆ, ಜೋರಾಗಿ ನಕ್ಕ.

“ಸಾಬ್…ಸಫ್ದಾರ್‌ ಜಂಗ್‌…ವಿವಿಐಪಿ ಲೋಗ್…ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಗಡ್ಕರಿ ಅಂತವರು ಇರೋ ಜಾಗ…ಇಲ್ಲಿ ಗೂಡಂಗಡಿ ಕ್ಯಾಂಟೀನ್‌ ಅನ್ನು ಬಿಡದೆ ಬಂದ್‌ ಮಾಡಿದ್ದಾರೆ. ಅಂತದ್ದರಲ್ಲಿ ಸಫ್ದಾರ್‌ ಜಂಗ್‌ ನ ಹತ್ತಿರಕ್ಕೂ ನಾವು ಹೋಗುವುದು ಸಾಧ್ಯವಿಲ್ಲದ ಮಾತು. ರಸ್ತೆಗಳೆಲ್ಲವನ್ನೂ ಮುಚ್ಚಿರುತ್ತಾರೆ” ಅವನು ಸರಿಯಾಗಿ ಹೇಳಿದ್ದ. ನಾವಿದ್ದ ಪಹಲ್ಗಂಜ್‌ ನ ನೆಹರು ಬಜಾರ್ (ಬೆಂಗಳೂರಿನ ಕಲಾಸಿ ಪಾಳ್ಯ, ಅವಿನ್ಯೂ ರಸ್ತೆಯಂತಹ ಪ್ರದೇಶ) ಬಡಬಗ್ಗರು, ಕೂಲಿಕಾರ್ಮಿಕರು ಹೆಚ್ಚಿರುವ ಜಾಗ. ಅದನ್ನೇ ಸಂಪೂರ್ಣ ಬಂದ್‌ ಮಾಡಿ, ಬ್ಯಾರಿಕೇಡ್‌ ಹಾಕಿದ ರಸ್ತೆಗಳನ್ನು ಪ್ಯಾರಾ ಮಿಲಿಟರಿ ಪೊಲೀಸರು ಕಾಯುತ್ತಿದ್ದರು. ಮಕ್ಕಳೊಂದಿಗಿದ್ದ ಸ್ಥಳೀಯ ನಿವಾಸಿಗಳು, ತಿಂಡಿತಿನಿಸು ಸರಬರಾಜು ಮಾಡುವ ಗಿಗ್‌ ಸವಾರರು…ಯಾರನ್ನೂ ಬಜಾರ್‌ ಒಳಗೆ ಬಿಡುತ್ತಿರಲಿಲ್ಲ. ಇಡೀ ದೆಹಲಿ ಜೈಲಿನಂತಾಗಿತ್ತು. ಆದರೆ, ಯಾರೊಬ್ಬ ಸಾರ್ವಜನಿಕರು ಅದನ್ನು ಪ್ರಶ್ನಿಸುವ, ಪೊಲೀಸರೊಂದಿಗೆ ಘರ್ಷಣೆ ಇಳಿದ ಸನ್ನಿವೇಶಗಳು ಕಾಣಲಿಲ್ಲ. ಚುನಾವಣಾ ಆಯೋಗದ ಆವಾಂತರಗಳಿಂದ ದೆಹಲಿಯ ಅರ್ಧದಷ್ಟು ಜನರನ್ನು ಮತಪಟ್ಟಿಯಿಂದ ಹೊರ ಹಾಕಲಾಗಿದೆ. ಅದು ಇರಲಿ… ಬಂದ್‌ನಿಂದಾಗಿ ದಿನನಿತ್ಯದ ಬದುಕು ಹೈರಾಣನಾಗಿದೆ. ಆದರೂ, ಇಲ್ಲಿಯ ಜನರ ಸೈರಣೆ ಅಚ್ಚರಿ ಜೊತೆಗೆ ಆತಂಕವನ್ನು ಉಂಟು ಮಾಡುವಂತಿತ್ತು. ಅಕ್ಟೋಬರ್‌ 11ರ ಬೆಳಿಗ್ಗೆ – ಹಿಂದಿನ ದಿನ ದೆಹಲಿಯಲ್ಲಿ ಸುಮಾರು 7000 ಜನರನ್ನು ಬಂಧಿಸಿರುವ ಸುದ್ದಿ ಬಂದಿತ್ತು. ಆದರೂ, ಯವಜನತೆಯ ಪ್ರತಿರೋಧಕ್ಕೆ, ಪ್ರತಿಭಟನೆಯ ಉತ್ಸಾಹಕ್ಕೆ ಭಂಗ ಬಂದಿರಲಿಲ್ಲ

ಕನ್ನಾಟ್‌ ಪ್ಲೇಸ್‌ ಸುತ್ತಮುತ್ತ ಹಲವು ಕಮ್ಯೂನಿಸ್ಟ್‌ ಪಾರ್ಟಿಗಳಿಂದ ಪ್ರತಿಭಟನೆಗಳು ನಡೆಯುವ ಸಂಭವವಿದೆ ಎಂಬ ಸಮಾಚಾರ ಸಿಕ್ಕಿತ್ತು. ವಿಶಾಲ ಪ್ರದೇಶದ ಸುತ್ತಲೂ ಕಣ್ಣು ಹಾಯಿಸುತ್ತ 1ನೇ ನಂಬರ್‌ ರೇಡಿಯಲ್‌ ರೋಡ್‌ ಗೆ ಬಂದಾಗ ಅಲ್ಲಿ ಪೊಲೀಸರು ಜಮಾಯಿಸಿದ್ದರು. ಇಂಡಿಪೆಂಡೆಟ್‌ ಮೀಡಿಯಾದ ಹಲವು ವರದಿಗಾರರು ನೆರೆದಿದ್ದರು. ಯಥಾ ಪ್ರಕಾರ ಸ್ಪೀಕರ್‌ ನಲ್ಲಿ ” ಕೃಪಯಾ…ಧ್ಯಾನ್‌ ದೇ… ಕೃಪಯಾ…ಧ್ಯಾನ್‌ ದೇ…” ಮೋದಿ ಸರಕಾರದ ವೀರ ಕಹಳೆ ಮೊಳಗುತ್ತಿತ್ತು. ಪ್ರತಿಭಟನಾಕಾರರನ್ನು ತುಂಬಿಕೊಂಡು ಹೋಗಲು ಬಸ್ಸುಗಳು ಸಾಲಾಗಿ ನಿಂತಿದ್ದವು. ನಿರೀಕ್ಷಿಸಿದಂತೆ ಹತ್ತು ಹನ್ನೆರಡು ಯುವಕರ ಗುಂಪು ತ್ರಿವರ್ಣ ಬಾವುಟ ಹಿಡಿದು “ತಾನಾಶಾಹಿ ಮೋದಿ ಮುರ್ದಾಬಾದ್…ಗ್ಯಾನೇಶ್‌ ಕುಮಾರ್ ಇಸ್ತೀಫಾ ದೋ” ಕೂಗುತ್ತಾ ಓಡಿಬಂದರು. ಸಿದ್ಧವಾಗಿ ನಿಂತಿದ್ದ ಪೊಲೀಸರು ಒಬ್ಬ ಪ್ರತಿಭಟನಾಕಾರನಿಗೆ ಹತ್ತು ಮಂದಿಯಂತೆ ಮುತ್ತಿಗೆ ಹಾಕಿ, ಕೈಕಾಲು ಹಿಡಿದು ಅನಾಮತ್ತಾಗಿ ಬಸ್ಸಿಗೆ ತುಂಬಿದರು. ಯುವತಿಯರನ್ನು ಬಂಧಿಸುವಾಗ, ಮಹಿಳಾ ಪೊಲೀಸರು ಕೂಡ ಹೆಚ್ಚು ಆಕ್ರಮಣಕಾರಿಯಾಗಿ ನಡೆದು ಕೊಳ್ಳುತ್ತಿದ್ದರು. ಬಂಧನವಾದ ಮೇಲೆ ಎಂದಿನ ರಿವಾಜು, ವಿಶಲ್‌ ಜೋರಾಗಿ ಊದುತ್ತ ಎಲ್ಲರನ್ನೂ ಚದುರಿಸುವುದು ಪುನರಾವರ್ತನೆಯಾಗುತ್ತಿತ್ತು. ಬಂಧನವಾಗಲು ಕೈಯಲ್ಲಿ ದೇಶದ ಬಾವುಟ, ಒಂದು ಪ್ರತಿರೋಧದ ಕೂಗು ಸಾಕಿತ್ತು.

ಅಷ್ಟೊತ್ತಿಗೆ – ಭಾನುವಾರ ರಜಾದಿನವಾದರೂ, ಸುಪ್ರೀಮ್‌ ಕೋರ್ಟಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕುರಿತ ಕೇಸು ಮುಗಿದಿದ್ದು, ಹಲವರು ಮುಖ್ಯ ನ್ಯಾಯಾಧೀಶರ ಆರ್ಡರ್‌ ಗೆ ಕಿವಿಯಾಗಿ ಅಲ್ಲಿಗೆ ಬಂದರು. ಕೇರಳಮ್‌ ರಾಜ್ಯದ ಸಂಸದ ಜಾನ್‌ ಬ್ರಿಟ್ಟಾಸ್‌ ಪತ್ರಕರ್ತರೊಬ್ಬರಿಗೆ ಕೋರ್ಟಲ್ಲಿ ನಡೆದ ವಿದ್ಯಮಾನಗಳ ಕುರಿತು ಮಾಹಿತಿ ನೀಡುತ್ತಿದ್ದರು. ನಿಧಾನವಾಗಿ ಅಲ್ಲಿದ್ದ ಎಲ್ಲಾ ವರದಿಗಾರರು ಅವರನ್ನು ಸುತ್ತುವರಿದು, ತಮ್ಮ ಮೈಕನ್ನು ಹಿಡಿಯಲು ಗುಂಪಿನಲ್ಲಿ ಸಾಧ್ಯವಾಗದೆ ಒದ್ದಾಡುತ್ತಿದ್ದರು. “…..ಪ್ರತಿಭಟನಾ ನಿರತ ಯುವಜನರನ್ನು ಹಿಡಿದು ಥಳಿಸುತ್ತಿದ್ದಾರೆ. ಹೊಡೆದು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ರಜಾದಿನವೇ ಕಲಾಪ ನಡೆಸಿದ ಸುಪ್ರೀಮ್‌ ಕೋರ್ಟ್‌ ಈಗ ಏನು ಹೇಳುತ್ತಿದೆ? ಎಲ್ಲಾ ಬ್ಯಾರಿಕೇಡ್‌ ಗಳನ್ನು ತಕ್ಷಣವೇ ತೆರವು ಗೊಳಿಸಬೇಕು. ನಿಲ್ಲಿಸಿದ ಇಂಟರ್‌ ನೆಟ್‌ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸಬೇಕು. ಎಲ್ಲರಿಗೂ ಶಾಂತಿಯುತವಾಗಿ ಪ್ರತಿಭಟಿಸಲು ಹಕ್ಕಿದೆ. ಮತ್ತೆ…ಈಗೇನು ಬಿ ಎನ್ ಎಸ್‌ 163 ನಿಷೇದಾಜ್ಞೆ ಹೇರಿದ್ದಾರೆ… ಅದನ್ನು ತೆಗೆಯಬೇಕು…. ಹೀಗೆ ನಾಲ್ಕೈದು ಮುಖ್ಯ ತೀರ್ಪುಗಳನ್ನು ಸುಪ್ರೀಮ್‌
ಕೋರ್ಟ್‌ ನೀಡಿದೆ…”

John Brittas

ಚುನಾವಣಾ ಆಯೋಗದ ಕಮೀಷನರ್‌ ಮತ್ತು ಮೋದಿ ಸರಕಾರದ ವಿರುದ್ಧ ಸಿಟ್ಟಿನಿಂದ ಮಾತಾಡುತ್ತಿದ್ದ ಜಾನ್‌ ಬ್ರಿಟ್ಟಾಸ್‌ ಅವರ ಹಿಂದೆ ಒಂದಿಬ್ಬರು ಪ್ಯಾರಾ ಮಿಲಿಟರಿ ಪೊಲೀಸರು ಬಂದು ನಿಂತರು. ಅವರು ಮಾತಾಡುತ್ತಲೇ ಇದ್ದರು. ಇದ್ದಕ್ಕಿದ್ದಂತೆ ಪತ್ರಕರ್ತರನ್ನು ದೂಕಿ ಗುಂಪಿನೊಳಗೆ ಬಂದ ಪೊಲೀಸರು ಬ್ರಿಟ್ಟಾಸ್‌ ಅವರ ರಟ್ಟೆ ಹಿಡಿದು ವಶಕ್ಕೆ ಪಡೆಯಲು ಅವಸರಿಸಿದರು. ಅಚಾನಕ್ಕಾಗಿ ಆದ ಪೊಲೀಸರ ನಡೆಯಿಂದ ಗಲಿಬಿಲಿಗೊಂಡ ಬ್ರಿಟ್ಟಾಸ್ ಕೋಪದಿಂದ ಪ್ರತಿಕ್ರಯಿಸಿ ಬಂಧನವನ್ನು ವಿರೋಧಿಸಿದರು. ಆದರೆ, ಹೆಚ್ಚು ಸಂಖ್ಯೆಯಲ್ಲಿದ್ದ ಪೊಲೀಸರು, ಅವರ ಕೈಕಾಲುಗಳನ್ನು ಹಿಡಿದು, ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಸ್ಸಿಗೆ ತುರುಕಿದರು. ಅವರು ಬಸ್ಸಿನೊಳಗೂ ಧಿಕ್ಕಾರ ಕೂಗುತ್ತಲೇ ಇದ್ದರು. ಬಸ್ಸಿಗೆ ಅಡ್ಡ ನಿಂತ ಎಲ್ಲರನ್ನೂ ದೂರ ಸರಿಸಿದ ಪೊಲೀಸರು ಬಸ್‌ ಅಲ್ಲಿಂದ ಹೊರಡಲು ಅನುವು ಮಾಡಿಕೊಟ್ಟರು. ಮಾಧ್ಯಮಗಳೊಂದಿಗೆ ಸಂವಾದ ಮಾಡುತ್ತಿದ್ದ ಕಾರಣಕ್ಕೇ, ಒಂದು ರಾಜ್ಯದ ಹಾಲಿ ಸಂಸದನನ್ನು ಈ ರೀತಿ ಪೊಲೀಸರು ಅಮಾನುಷವಾಗಿ ನಡೆಸಿಕೊಂಡರೆ, ಇನ್ನು ಸಾಮಾನ್ಯ ಯುವಜನರ ಪಾಡನ್ನು ಊಹಿಸಿಕೊಳ್ಳಬಹುದು. ದೆಹಲಿ ಪೊಲೀಸರ ಈ ಬರ್ಬರ ಕೃತ್ಯ, ತುರ್ತುಪರಿಸ್ಥಿತಿಯ ಕರಾಳ ದಿನದ ಕಹಿನೆನಪುಗಳಂತೆ ಈ ನೆಲದ ನೆನಪಲ್ಲಿ ಅಚ್ಚಳಿಯದೆ ಉಳಿಯುವಂತದ್ದು. ದೆಹಲಿ ಪೊಲೀಸರು ಪ್ರತಿಭಟನಾಕಾರರು ಒಂದೆಡೆ ಒಗ್ಗೂಡದಂತೆ ಕಾರ್ಯತತ್ಪರರಾಗಿರುವಾಗ, ಯುವಜನರು ಮಿಂಚಿನಂತೆ (ಫ್ಲಾಶ್‌ ಪ್ರೊಟೆಸ್ಟ್‌) ಕಾಣಿಸಿಕೊಂಡು ಪ್ರತಿರೋಧಿಸುವ ಬಗೆಯನ್ನು ಕಂಡುಕೊಂಡಿದ್ದರು. ಒಂದಷ್ಟು ಜನರು ಬರುವುದು ಧಿಕ್ಕಾರ ಕೂಗುವುದು, ಬಂಧನವಾಗುವುದು ನಡೆದಿತ್ತು. ಆಗ – 1930ರ ಬ್ರಿಟಿಷ್‌ ಆಳ್ವಿಕೆಯಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ನಡೆದಾಗ ಸತ್ಯಾಗ್ರಹಿಗಳು ಸಾವಿರಾರು ಸಂಖ್ಯೆಯಲ್ಲಿ ಬರುವ ಬದಲು ಸಣ್ಣ ಸಣ್ಣ ಗುಂಪುಗಳಾಗಿ, ಸಾಲಾಗಿ ಬಂದು, ಪೊಲೀಸರು ಉಕ್ಕಿನ ತುದಿಯುಳ್ಳ ಲಾಠಿಗಳಿಂದ ಹೊಡೆದರೂ, ಪ್ರತಿರೋಧ ತೋರದೆ ಪೆಟ್ಟು ತಿಂದು ಕೆಳಗೆ ಬೀಳುತ್ತಿದ್ದರು. ಅವರನ್ನು ಸ್ವಯಂ ಸೇವಕರು ಪ್ರಥಮ ಚಿಕಿತ್ಸೆ ಮಾಡಲು ಒಯ್ಯುತ್ತಿದ್ದರು.

ಈಗ – 2026ರಲ್ಲಿ ಮೋದಿ ಸರ್ಕಾರದ ನಡೆಯೂ, ಸಣ್ಣ ಗುಂಪುಗಳಲ್ಲಿ ಬಂದು ಅಹಿಂಸಾತ್ಮಕವಾಗಿ ಪ್ರತಿಭಟಿಸುವ ಯುವಜನರನ್ನು ತದುಕಿ, ಬ್ರಿಟಿಷ್‌ ಸರಕಾರದಂತೆ ಬಂಧನ ಮಾಡುತ್ತಿದೆ. ಹಿಂದಿನ ದಿನ ಟಾಲ್‌ ಸ್ಟಾಯ್‌ ಮಾರ್ಗ್‌ದಲ್ಲಿ ಗೋದಿ ಮೀಡಿಯಾದ ಒಬ್ಬ ಅನ್ಯಲಿಂಗಿಯು ಅಪಪ್ರಚಾರ ಮಾಡುವುದನ್ನು ನೋಡಿದ್ದೆ. ಇಂದು ಕೂಡ ಆಕೆ ಅಲ್ಲಿದ್ದ ಪೊಲೀಸರಿಗೆ ಪ್ರತಿಭಟನೆಗೆ ಬಂದ ಯುವಕರ ಬಗ್ಗೆ ಚಿತಾವಣೆ ಮಾಡುತ್ತಿದ್ದಳು. ಅವಳು ತೋರುತ್ತಿದ್ದ ಯುವಕ/ಯುವತಿಯರನ್ನು ಗುಂಪಿನಿಂದ ಹೆಕ್ಕಿ, ಸಣ್ಣ ವಯಸ್ಸನ್ನು ಲೆಕ್ಕಿಸದೆ ಪೊಲೀಸ್‌ ಇನ್ಸ್‌ ಪೆಕ್ಟರ್‌ ವಶಕ್ಕೆ ಪಡೆಯುತ್ತಿದ್ದರು. ಹಾಗೆ ಸುಮಾರು ಹದಿನೈದು ವರ್ಷದ ಪುಟ್ಟಹುಡುಗಿಯನ್ನು ಲೇಡಿ ಪೊಲೀಸರು ವಶಕ್ಕೆ ಪಡೆದು ಬಸ್ಸಿನತ್ತ ಹೊರಟರು. ಹೊಟ್ಟೆ ಚುರುಕ್ಕೆಂದಿತು. ಲೇಡಿ ಪೊಲೀಸರಲ್ಲಿಗೆ ಹೋಗಿ “ಮೇಡಂ… ಉಸ್ಕೋ ಛೋಡ್ ದೀಜಿಯೇ… ವೋ ಬಹುತ್ಛೋ ಟೀ ಹೈ… ಪ್ಲೀಸ್ ಛೋಡ್ ದೀಜಿಯೇ. ” ಎಂದು ಕೇಳಿಕೊಂಡೆ. ಅವರಿಗೆ ಏನು ಅನ್ನಿಸಿತೋ? ಹಿಡಿತದಿಂದ ಬಿಟ್ಟು ಬಿಟ್ಟರು. “ಥ್ಯಾಂಕ್ಸ್‌ ಮೇಡಮ್”ಎಂದೆ. ಜಂತರ್‌ ಮಂತರ್‌ 1.0 ರಲ್ಲಿ ಪ್ರತಿಭಟನಾಕಾರರಿಂದ ತಿರಸ್ಕೃತಗೊಂಡು, ಬ್ರಿಟಿಷ್‌ ಸರಕಾರದಂತೆ ಛೀಮಾರಿ ಹಾಕಿಸಿಕೊಂಡಿದ್ದ ಗೋದಿ ಮೀಡಿಯಾ ಮತ್ತು ಮೋದಿ, ಬಿಜೆಪಿ, ಹಿಂದುತ್ವ ಬೆಂಬಲಿಗರಿಗೆ ಈಗ ಪೊಲೀಸರೇ ಸಹಕರಿಸುವುದು ನಡೆದಿತ್ತು. ಇದು ಆಳುವ ಮೋದಿ ಸರ್ಕಾರದ ಯೋಜಿತ ಕಾರ್ಯ(ಕು)ತಂತ್ರವಾಗಿ ಕಾಣುತ್ತಿತ್ತು. ಅಲ್ಲಲ್ಲಿ ಒಬ್ಬಂಟಿಗರಾಗಿ ಅಥವಾ ಗುಂಪುಗಳಲ್ಲಿ “ಭಾರತ್‌ ಮಾತಾಕೀ ಜೈ…ಗ್ಯಾನೇಶ್‌ ಕುಮಾರ್‌ ಜಿಂದಾಬಾದ್…ಕಾಕ್ರೋಚ್‌ ಪಾರ್ಟಿ ಮುರ್ದಾಬಾದ್”‌ ಎಂದು ಘೋಷಣೆ ಕೂಗುತ್ತಿದ್ದರು. ಒಬ್ಬ ಯುವಕ ನಿಂತರೂ ವಶಕ್ಕೆ ಪಡೆಯುವ ಪೊಲೀಸರು, ಗುಂಪುಗಳಾಗಿ ರೋಷದಿಂದ ಅರಚಾಡುತ್ತಿದ್ದ ಅವರತ್ತ ಕಣ್ಣೆತ್ತಿ ನೋಡುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಕನ್ನಾಟ್‌ ಪ್ಲೇಸ್‌ ನಲ್ಲಿ ಯುವಕರ ಫ್ಲಾಶ್‌ ಪ್ರೊಟೆಸ್ಟ್‌, ನಂಬರ್‌ ಒಂದನೇ ರೇಡಿಯಲ್ ರಸ್ತೆಯಿಂದ ಇಂದಿರಾ ಚೌಕ್‌ ಗೆ ಸೇರುವ 2ನೇ ನಂಬರ್ ರೇಡಿಯಲ್‌ ರಸ್ತೆಗೆ ವರ್ಗಾವಣೆ ಆದಂತೆ ಕಂಡಿತ್ತು. ಶಾಪಿಂಗ್‌ ಕಾಂಪ್ಲೆಕ್ಸ್‌ ಇರುವ ಆ ರಸ್ತೆ ಹೆಚ್ಚು ವಿಸ್ತಾರವಾದುದು. ಯುವಜನರು ಅಲ್ಲಿ ಕಲೆಯುತ್ತ ಹೋಗುವುದು ಹೆಚ್ಚಾಗುತ್ತಿತ್ತು. ಎಲ್ಲಿ ನೋಡಿದರೂ ಯುವಜನರು! ಮೊದಲ ಬಾರಿ ಪೊಲೀಸರ ಸಂಖ್ಯೆಗಿಂತ ಹೆಚ್ಚಿಗೆ ಕಂಡರು. ಕೆಲವು ಹಿಂದುತ್ವವಾದಿ ಮೋದಿ ಬೆಂಬಲಿಗರು, ಪತ್ರಕರ್ತರಂತೆ ಮೈಕ್‌ ಹಿಡಿದು ನಾಟಕವಾಡ ತೊಡಗಿದರು. ಒಬ್ಬಾತ ಕ್ಯಾಮೆರಾದ
ಮುಂದೆ ಮೈಕಿಡಿದು ʼSIR ಕಾರ್ಯಕ್ರಮವು ದೇಶದ ಅಭಿವೃದ್ಧಿ ಪೂರಕವಾದುದು. ಬಾಂಗ್ಲಾದೇಶಿಯರನ್ನು ಹೊರ ಹಾಕುವ ಮಾರ್ಗ…ʼ ಇತ್ಯಾದಿ ಹೇಳುತ್ತಲೇ, ಅಲ್ಲೇ ಕಂಡ ಮತ್ತೊಬ್ಬ ಮೈಕಿಡಿದ ಪತ್ರಕರ್ತನನ್ನು ಉದ್ದೇಶಿಸಿ “ನೀವು ಪತ್ರಕರ್ತರು. ಗ್ಯಾನೇಶ್‌ ಕುಮಾರರ ಓಟರ್‌ ಲಿಸ್ಟ್‌ ಶುದ್ಧಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ” ಎಂದು ಕೇಳಿದ. ಆ ಎರಡನೇ ಪತ್ರಕರ್ತ(?) ಮೋದಿಯನ್ನು ದೇವರ ಸಮಾನವಾಗಿ ಹೊಗಳಿ ಪ್ರತಿಭಟಿಸುತ್ತಿರುವ ಈ ಕಾಕ್ರೋಚ್‌ ಗಳು ದೇಶದ್ರೋಹಿಗಳು. ಇವರನ್ನು ದೇಶದಿಂದ ಓಡಿಸಬೇಕು … ಇತ್ಯಾದಿ ಆಕ್ರೋಶದಿಂದ ಪ್ರತಿಭಟನೆಯ ವಿರುದ್ಧ ಮಾತನಾಡತೊಡಗಿದ. ಇಬ್ಬರೂ ಒಬ್ಬರೇ! ಅವರ ಸಂಭಾಷಣೆಗಳನ್ನು ಗಮನಿಸಿದರೆ, ಆರ್‌ ಎಸ್‌ ಎಸ್‌ ಬೆಂಬಲಿಗರು ಆಡುತ್ತಿರುವ ಸ್ಟೇಜ್ಡ್‌ ಡ್ರಾಮಾ ಎಂದು ಯಾರಾದರೂ ಸುಲಭವಾಗಿ ಊಹಿಸಬಹುದಿತ್ತು.

Delhi CJP protest

ʼಭಾರತ್‌ ಮಾತಾಕೀ ಜೈʼ ಎಂದು ಕೂಗುತ್ತಿದ್ದ ಗುಂಪೊಂದು ಗ್ಯಾನೇಶ್‌ ಕುಮಾರನ ಗುಣಗಾನದಲ್ಲಿದ್ದಾಗ ಒಬ್ಬ ಬಾಲಕ “ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ” ಅಂದ. ಅಷ್ಟಕ್ಕೆ ಧಾಂಡಿಗರಂತಿದ್ದ ಆ ವಯಸ್ಕರು “ತುಕ್ಡೇ ತುಕ್ಡೇ ಗ್ಯಾಂಗ್…ದೇಶದ್ರೋಹಿ…ಬಾಂಗ್ಲಾದೇಶಿ…ಟೆರರಿಸ್ಟ್‌” ಎಂದು ಅರಚಾಡುತ್ತ ಅವನ ಮೇಲೆ ಮುಗಿಬಿದ್ದರು. ಬಾಯಿ ಮುಚ್ಚಿಸಲು ನೋಡಿದರು. ಆದರೆ, ಬಾಲಕ ಎದೆಗುಂದದೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದ. ಅವನ ಬೆಂಬಲಕ್ಕೆ ಕೆಲ ಸೋಷಿಯಲ್‌ ಮೀಡಿಯಾದವರು ನಿಂತರು. ಗುಂಪಲ್ಲಿ ತಳ್ಳಾಟ, ಕೂಗಾಟ ಹೆಚ್ಚಾದಾಗ ವಿಶಲ್‌ ಊದುತ್ತ ಬಂದ ಲಾಠಿ ಹಿಡಿದ ಪೊಲೀಸರು ಎಲ್ಲರನ್ನು ಚದುರಿಸಿದರು. ಆರ್‌ ಎಸ್‌ ಎಸ್‌ ಅಥವಾ ಹಿಂದುತ್ವ ಸಂಘಟನೆಯ ಬೆಂಬಲಿಗರು ಪುಡಿರೌಡಿಗಳಂತೆ ಪ್ರತಿಭಟನಾಕಾರರ ಮೇಲೆ ಬೀಳುವ ದೃಶ್ಯ ಸಾಮಾನ್ಯವಾಗಿತ್ತು. ಅವರು ದೆಹಲಿ ಪೊಲೀಸರಿಗೆ ಜೈಕಾರ ಹಾಕುತ್ತ, ಜಾಗ ಖಾಲಿ ಮಾಡುವಂತೆ ಧಮಕಿ ಹಾಕುತ್ತಿದ್ದರು. ಇದು ಪೊಲೀಸರ ಮುಂದೆಯೇ ನಡೆಯುತ್ತಿದ್ದರೂ, ಪೊಲೀಸರು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅಂತಹ ಗುಂಪೊಂದನ್ನು ವಿಡಿಯೊ ಮಾಡುತ್ತ, “ಬಿಜೆಪಿ…ಆರ್‌ ಎಸ್ ಎಸ್‌ ಗೂಂಡಾಗಳು ಪ್ರತಿಭಟನೆಯಲ್ಲಿ ನುಸುಳಿದ್ದಾರೆ…” ಎಂದು ರೆಕಾರ್ಡ್‌ ಮಾಡುತ್ತಿದ್ದೆ. ತಟ್ಟನೆ ಅಲ್ಲಿದ್ದ ಒಬ್ಬ ಯುವತಿ “ಈತ ಭಾರತ ಮಾತೆಗೆ ಜೈಕಾರ ಹಾಕುವವರನ್ನು ಗೂಂಡಾಗಳು ಎನ್ನುತ್ತಿದ್ದಾನೆ!”ಎಂದು ಚೀರಾಡ ತೊಡಗಿದಳು. ಅವಳ ತಿರುಚಿದ ಮಾತಿಗೆ ಒಮ್ಮೆಗೆ ದಿಗಿಲಾಯಿತು. ಗುಂಪು ಅವಳ ಮಾತಿಗೆ ಸ್ಪಂದಿಸುವ ಮುಂಚೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ಧಿಕ್ಕಾರ ಕೂಗು ಎಲ್ಲೇ ಕೇಳಿ ಬರಲಿ, ವರದಿಗಾರರು ಆ ಧ್ವನಿ ಅರಸುತ್ತ ದೌಡಾಯಿಸುತ್ತಿದ್ದರು. ತುಸು ದೂರದ, ಸೆಂಟ್ರಲ್‌ ಪಾರ್ಕ್‌ ಗೆ ಹೋಗುವ ರಸ್ತೆಯಲ್ಲಿ ಜನರು ಗುಲ್ಲೆಬ್ಬಿಸುತ್ತಿದ್ದರು. ಓಡಿ ಹೋಗಿ ನೋಡಿದರೆ, ಹೋಗುತ್ತಿದ್ದ ಕಾರೊಂದನ್ನು ತಡೆದು ಪ್ರತಿಭಟನಾಕಾರರು ಕೂಗುತ್ತಿದ್ದರು. ಕಾರಿನ ಸುತ್ತ ಜನರು ಸುತ್ತುವರೆದಿದ್ದರಿಂದ ಕಾರು ಒಂದಿಂಚು ಮುಂದುವರೆಯುವ ಅವಕಾಶವಿರಲಿಲ್ಲ. ಈ ಮುಂಚೆ ಆ ಕಾರು ಶಾಪಿಂಗ್‌ ಕಾಂಪ್ಲೆಕ್ಸ್‌ ಮುಂದೆ ನಿಂತಿದ್ದನ್ನು ನೋಡಿದ್ದೆ. ಆಗ ಆ ಕಾರನ್ನು ತೋರುತ್ತ ಯುವಕನೊಬ್ಬ ಪೊಲೀಸರಿಗೆ ಏನನ್ನೋ ಹೇಳುತ್ತಿದ್ದ. ನಾನು ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. “ಕಾರನ್ನು ಹೋಗಲು ಬಿಡಬೇಡಿ. ಕಾರಿನ ತುಂಬಾ ಲಾಠಿ, ದೊಣ್ಣೆಗಳಿವೆ. ಆರ್‌ ಎಸ್‌ ಎಸ್‌ ಗೂಂಡಾಗಳು ಲಾಠಿಗಳನ್ನು ತಂದಿದ್ದಾರೆ” ಎಂದು ಓರ್ವ ಯುವಕ ಜೋರಾಗಿ ಕೂಗುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರು, ಯುವಕರು ʼಬಿಡಬೇಡಿʼ ಎಂದು ಎಷ್ಟೇ ಕೂಗುತ್ತಿದ್ದರೂ, ಅವರನ್ನು ಪಕ್ಕಕ್ಕೆ ತಳ್ಳುತ್ತ ಕಾರು ಹೋಗಲು ದಾರಿ ಮಾಡಿಕೊಟ್ಟರು. ಕಾರು ಬರ್ರೆಂದು ಹೊರಟೇ ಹೋಯಿತು. ಲಾಠಿ ತುಂಬಿದ್ದ ಕಾರನ್ನು ವಶಕ್ಕೆ ಪಡೆಯದೆ ಹೋಗಲು ಬಿಟ್ಟಿದ್ದಕ್ಕೆ ಯುವಕರು ದೆಹಲಿ ಪೊಲೀಸರಿಗೆ ʼಆರ್‌ ಎಸ್‌ ಎಸ್‌…ಬಿಜೆಪಿ ಡೆಲ್ಲಿ ಪೋಲಿಸ್‌ ಆಯ್‌ ಆಯ್ʼ ಎಂದು ಛೀಮಾರಿ ಹಾಕತೊಡಗಿದರು.

ಕತ್ತಲಾಗುತ್ತ ಬಂದಿದ್ದರಿಂದ ಹೊಟೇಲಿಗೆ ವಾಪಸ್ಸು ಹೋಗಲೇ ಬೇಕಿತ್ತು. ಏಕೆಂದರೆ ಬೆಳಕು ಹರಿಯುವ ಹೊತ್ತಿಗೆ ಬೆಂಗಳೂರಿಗೆ ತೆರಳಬೇಕಿತ್ತು. ಮನೆಯಲ್ಲಿನ ಸಂಗತಿಗಳಿಂದ ಕಳೆದ ಬಾರಿಯಂತೆ ಹೆಚ್ಚು ದಿನ ದೆಹಲಿಯಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಬೆಂಗಳೂರಿಗೆ ಹೊರಟಾಗ ಎದೆ ಭಾರವಾಗಿತ್ತು. ಚುನಾವಣಾ ಆಯೋಗದ ಕುತಂತ್ರದ ನಡೆಯಿಂದ ದೇಶದ ಜನರ ಮತದಾನದ ಹಕ್ಕನ್ನೇ ನಿರಾಕರಿಸಿದ್ದು ಅಕ್ಷಮ್ಯ ಅಪರಾಧ. ಚುನಾವಣಾ ಕಮೀಷನರ್‌ ಗ್ಯಾನೇಶ್‌ ಕುಮಾರನ ಅಸಂವಿಧಾನಾತ್ಮಕ ಕಾರ್ಯ ವೈಖರಿಗಳನ್ನು ಬಯಲಿಗೆಳೆದ ಪತ್ರಿಕಾ ತನಿಖಾ ವರದಿಗಳು ಮತ್ತು ಅದು ಎತ್ತಿದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ, ಆ ಉತ್ತರದಾಯಿತ್ವದಿಂದ ಚುನಾವಣಾ ಆಯೋಗ ತಪ್ಪಿಸಿಕೊಳ್ಳುತ್ತಿದೆ. ಇದನ್ನು ವಿರೋಧಿಸಿ ತಮ್ಮ ದೈನಂದಿನ ಬದುಕಿನ ಸುಖಗಳನ್ನು ತ್ಯಜಿಸಿ ಯುವಜನರು ಬೀದಿಗೆ ಬಿದ್ದಿದ್ದಾರೆ. ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌ ಎಸ್‌, ಹಿಂದುತ್ವವಾದಿಗಳ ಹಿಂದೆ ಅವಿತು ಭಾರತದ ಯುವಜನರ ಅತ್ಯಾಚಾರಕ್ಕೆ ಇಳಿದಿದೆ. ಗ್ಯಾನೇಶ್‌ ಕುಮಾರ್‌ ನನ್ನು ಮೋದಿ ಮತ್ತು ಅಮಿತ್‌ ಶಾ, ಶತಾಯಗತಾಯ ಬಚಾವು ಮಾಡಲು ಪ್ರಮುಖ ಎರಡು ಕಾರಣಗಳು ಇರಬಹುದು. ಒಂದು – ಯಃಕಶ್ಚಿತ್‌ ಜಿರಳೆಗಳೆಂದು ಕರೆದುಕೊಂಡ ಯುವಜನರ ದಿಟ್ಟ ಹೋರಾಟದಿಂದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಕೊಡಬೇಕಾಗಿದ್ದು. ಅದು ಮೋದಿ ಸರಕಾರಕ್ಕೆ ಮರ್ಮಾಘಾತದ ಸಂಗತಿ. ಅದರಿಂದ ಸರ್ವಾಧಿಕಾರಿ ಮನಸ್ಥಿತಿಯ ಮೋದಿಯ ಅಹಂಗೆ ಬಲವಾದ ಪೆಟ್ಟು ಬಿದ್ದಿದೆ. ಎರಡು – ಒಮ್ಮೆ ಗ್ಯಾನೇಶ್‌ ಕುಮಾರನ ತಪ್ಪುಗಳನ್ನು ಒಪ್ಪಿಕೊಂಡರೆಅದು ತಮ್ಮ ಬುಡಕ್ಕೆ ಬಂದು ನಿಲ್ಲುತ್ತದೆ ಎಂಬ ಹೆದರಿಕೆ.

ಅದೇನೇ ಇರಲಿ. ಕೊನೆಗೆ ಭಾರತದ ಜನರಿಗೆ ನ್ಯಾಯ ಸಿಗಬೇಕಿದ್ದು ಸುಪ್ರೀಮ್‌ ಕೋರ್ಟಿನಿಂದ. ಎಸ್‌ ಐ ಆರ್‌ ಕುರಿತ ಕಲಾಪಗಳನ್ನು ಗಮನಿಸಿದರೆ, ಸುಪ್ರೀಮ್‌ ಕೋರ್ಟ್‌ ಮೌಖಿಕವಾಗಿ ಚುನಾವಣಾ ಆಯೋಗದ ತಪ್ಪು ನಡೆಗಳನ್ನು ಗುರುತಿಸುತ್ತಿದೆ. ಆದರೆ, ಬರವಣಿಗೆಯಲ್ಲಿ ಆರ್ಡರ್‌ ಅನ್ನು ಪಾಸು ಮಾಡದೆ, ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ರೀತಿ ನಡೆದುಕೊಳ್ಳುತ್ತಿದೆ. SIR ವಿರುದ್ಧದ ಹೋರಾಟ ಕೇವಲ ಗ್ನಾನೇಂದ್ರ ಕುಮಾರ್‌ ರಾಜೀನಾಮೆಗೆ ಸೀಮಿತವಾಗಿಲ್ಲ. ಬ್ರಿಟಿಷರ ನಡೆಯನ್ನು ಅನುಸರಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಭಾರತದ ಜನತೆ ಎರಡನೇ ಸ್ವಾತಂತ್ರ್ಯ ಹೋರಾಟವನ್ನೇ ಮಾಡಬೇಕಾಗಿದೆ.

WhatsApp Image 2025 11 17 at 3.47.16 PM
ಚಂದ್ರಪ್ರಭ ಕಠಾರಿ
+ posts

ಸಿನಿಮಾಸಕ್ತ, ಲೇಖಕ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌ ರೈತನಿಗಿಲ್ಲ ಲಾಭ!

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ...

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ ಸ್ಥಿತಿ-ಗತಿ ಏನು?

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ...

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ ಮುರಿದ ಶಸ್ತ್ರ ಚಿಕಿತ್ಸೆ!

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’ ಯಾರು?

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು'...