ಉತ್ತರ ಪ್ರದೇಶದ ಮತದಾರರ ಪಟ್ಟಿಗೆ ನಿಗೂಢವಾಗಿ ಸೇರ್ಪಡೆಯಾಗಿರುವ 16.18 ಲಕ್ಷ ಮತದಾರರ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಈ ಕುರಿತು ಪ್ರಶ್ನಿಸಿದಾಗ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (UP CEO) ಕೇಂದ್ರ ಚುನಾವಣಾ ಆಯೋಗದ (ECI) ಸೂಚನೆಯಂತೆ ತಾನು ನಡೆದುಕೊಂಡಿರುವುದಾಗಿ ಹೇಳಿ ಆಯೋಗದ ಮೇಲೆಯೇ ಗೂಬೆ ಕೂರಿಸಿದ್ದಾರೆ. ಆದರೆ, ಯುಪಿ ಸಿಇಒ ನವದೀಪ್ ರಿನ್ವಾ ಅವರ ಈ ಸಮರ್ಥನೆ ಸಂಪೂರ್ಣ ಸುಳ್ಳು ಎಂಬುದನ್ನು ತನಿಖಾ ಪತ್ರಿಕೋದ್ಯಮ ಸಂಸ್ಥೆ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ (The Reporters’ Collective) ಸಾಕ್ಷ್ಯ ಸಮೇತ ಬಯಲಿಗೆಳೆದಿದೆ.
ನಿಯಮಗಳ ಪ್ರಕಾರ, ಕರಡು ಮತದಾರರ ಪಟ್ಟಿಯಿಂದ (Draft voter list) ಹೆಸರು ಕೈಬಿಡಲಾದ ಮತದಾರರು ಕರಡು ಪಟ್ಟಿ ಬಿಡುಗಡೆಯಾದ ಬಳಿಕವಷ್ಟೇ ‘ಹಕ್ಕು ಮತ್ತು ಆಕ್ಷೇಪಣೆಗಳ’ ಸಲ್ಲಿಕೆಯ ಹಂತದಲ್ಲಿ ‘ನಮೂನೆ 6’ (Form 6) ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ, ಯುಪಿ ಸಿಇಒ ಅವರು ಕರಡು ಪಟ್ಟಿ ಸಿದ್ಧವಾಗುವ ಮುನ್ನವೇ ಬರೋಬ್ಬರಿ 16.18 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಕರಡು ಪಟ್ಟಿ ಬಿಡುಗಡೆಯಾಗುವ ಮುನ್ನವೇ, ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂಬುದು ನೈಜ ಮತದಾರರಿಗೆ ತಿಳಿಯಲು ಹೇಗೆ ತಾನೇ ಸಾಧ್ಯ? ಎಂಬ ಗಂಭೀರ ಪ್ರಶ್ನೆ ಈಗ ಎದುರಾಗಿದೆ.
ಕರಡು ಪಟ್ಟಿ ಪ್ರಕಟವಾಗುವ ಮುನ್ನವೇ ಸಲ್ಲಿಕೆಯಾಗಿದ್ದ ಈ 16.18 ಲಕ್ಷ ಅರ್ಜಿಗಳ ವಿವರಗಳನ್ನು ಯುಪಿ ಸಿಇಒ ಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ. ಈ ಕುರಿತು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ (TRC) ಇತ್ತೀಚೆಗೆ ತನಿಖಾ ವರದಿ ಪ್ರಕಟಿಸಿತ್ತು. ಎಸ್‌ಐಆರ್ (SIR) ಪ್ರಕ್ರಿಯೆಯಡಿ ಉತ್ತರ ಪ್ರದೇಶದಲ್ಲಿ ಶೇ. 96.27ರಷ್ಟು ಅರ್ಜಿಗಳನ್ನು ಒಪ್ಪಿಕೊಳ್ಳಲಾಗಿದೆ; ಇದು ಬೇರೆ ಯಾವುದೇ ರಾಜ್ಯದಲ್ಲೂ ಕಂಡುಬರದ ಅಚ್ಚರಿಯ ಅಂಕಿ-ಅಂಶ ಎಂದು ವರದಿ ಮಾಡಿತ್ತು. ವರದಿ ಪ್ರಕಟವಾದ ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಸಿಇಒ ರಿನ್ವಾ ಅವರು, “2025ರ ಅಕ್ಟೋಬರ್ 27ರಂದು ಕೇಂದ್ರ ಚುನಾವಣಾ ಆಯೋಗ ನೀಡಿದ್ದ ಸೂಚನೆಯಂತೆಯೇ ಫಾರ್ಮ್‌ಗಳನ್ನು ಸಂಗ್ರಹಿಸಲಾಗಿದೆ. ಕರಡು ಪಟ್ಟಿ ಪ್ರಕಟವಾದ ನಂತರ ಬಂದ ಅರ್ಜಿಗಳನ್ನು ಮಾತ್ರ ಸಾರ್ವಜನಿಕಗೊಳಿಸುವಂತೆ ಆಯೋಗದ ನಿಯಮಗಳಿದ್ದು, ಆ ಕಾರಣಕ್ಕಾಗಿಯೇ ಈ 16.18 ಲಕ್ಷ ಅರ್ಜಿಗಳ ವಿವರಗಳನ್ನು ಬಹಿರಂಗಪಡಿಸಿಲ್ಲ” ಎಂದು ಸಮರ್ಥಿಸಿಕೊಂಡಿದ್ದರು.
ಆದರೆ, ಸಿಇಒ ಅವರ ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಇದೀಗ ಮತ್ತೆ ಟಿಆರ್‌ಸಿ (TRC) ವರದಿ ಮಾಡಿದೆ. ಕೇಂದ್ರ ಚುನಾವಣಾ ಆಯೋಗದ ಆಂತರಿಕ ಸುತ್ತೋಲೆಗಳನ್ನು ಕೆದಕಿ ತೆಗೆದಿರುವ ಪತ್ರಕರ್ತರು, ಆಯೋಗದ ನಿಯಮಗಳು ಬಹಳ ಸ್ಪಷ್ಟವಾಗಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆಯೋಗದ ಸ್ಪಷ್ಟ ಸೂಚನೆಯ ಪ್ರಕಾರ, ‘ನಮೂನೆ 6’ರ ಮೂಲಕ ಸಲ್ಲಿಕೆಯಾಗುವ ಪ್ರತಿಯೊಂದು ಸೇರ್ಪಡೆ ಅರ್ಜಿಯನ್ನೂ ಸಾರ್ವಜನಿಕಗೊಳಿಸುವುದು ಕಡ್ಡಾಯವಾಗಿದೆ (ಬೂತ್ ಮಟ್ಟದ ಅಧಿಕಾರಿಗಳು ನಮೂನೆ 9ರ ಮೂಲಕ ಇದನ್ನು ಬಹಿರಂಗಪಡಿಸಬೇಕು). ಅಲ್ಲದೆ, ಕರಡು ಪಟ್ಟಿ ಪ್ರಕಟವಾದ ನಂತರವಷ್ಟೇ ಈ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಇದರಲ್ಲಿ ಉತ್ತರ ಪ್ರದೇಶಕ್ಕೆ ಯಾವುದೇ ವಿನಾಯಿತಿ ನೀಡಿಲ್ಲ.
ಚುನಾವಣಾ ಆಯೋಗದ ಈ ಆಂತರಿಕ ದಾಖಲೆಗಳು ಹಾಗೂ ಕೈಪಿಡಿಗಳನ್ನು ಸಾರ್ವಜನಿಕರಿಂದ ಮುಚ್ಚಿಡಲಾಗಿತ್ತು. ಈ ರಹಸ್ಯದ ಲಾಭ ಪಡೆದ ಅಧಿಕಾರಿಗಳು, ಸುಲಭವಾಗಿ ಪರಿಶೀಲಿಸಲು ಸಾಧ್ಯವಿಲ್ಲದ ಇಂತಹ ಸುಳ್ಳು ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಆದರೆ, ಆಂತರಿಕ ದಾಖಲೆಗಳನ್ನು ಹೊರತರುವ ಮೂಲಕ ಅಧಿಕಾರಿಗಳ ಸುಳ್ಳನ್ನು ಬಯಲು ಮಾಡಲಾಗಿದೆ ಎಂದು ವರದಿ ಬೆಟ್ಟು ಮಾಡಿದೆ. ಈ ವಿರೋಧಾಭಾಸದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಿಇಒ ರಿನ್ವಾ ಅವರಿಗೆ ಪ್ರಶ್ನೆಗಳನ್ನು ಕಳುಹಿಸಲಾಗಿದ್ದು, ಅವರಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ.
ಈ ಬೃಹತ್ ಅಕ್ರಮವನ್ನು ಆಳವಾಗಿ ಅಧ್ಯಯನ ಮಾಡಿ, ಸಾಕ್ಷ್ಯಗಳ ಸಮೇತ ಜನರೆದುರು ಇಟ್ಟಿರುವುದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ (The Reporters’ Collective – TRC) ಎಂಬ ಸ್ವತಂತ್ರ ತನಿಖಾ ಪತ್ರಿಕೋದ್ಯಮ ಸಂಸ್ಥೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಆಳವಾದ ತನಿಖೆ ನಡೆಸಿ, ಅಧಿಕಾರಶಾಹಿಗಳು ಮುಚ್ಚಿಡಲು ಯತ್ನಿಸುವ ಸತ್ಯಗಳನ್ನು ಹೊರತರುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಪತ್ರಕರ್ತರಾದ ಆಯುಷಿ ಕರ್ ಮತ್ತು ಸುಮೇಧಾ ಮಿತ್ತಲ್ ಅವರು ಈ ವರದಿಯನ್ನು ಸಿದ್ಧಪಡಿಸಿದ್ದು, ನಿತಿನ್ ಸೇಥಿ ಅವರು ಇದನ್ನು ಸಂಪಾದಿಸಿದ್ದಾರೆ. ಜನಸಾಮಾನ್ಯರ ಪರವಾಗಿ ನಿಂತು, ನಿರ್ಭೀತಿಯಿಂದ ಸತ್ಯವನ್ನು ಹೊರತರುವ ಪತ್ರಿಕೋದ್ಯಮದ ಮಾದರಿಯನ್ನು ಈ ಸಂಸ್ಥೆ ಅನುಸರಿಸುತ್ತಿದೆ.




