10-12 ವರ್ಷಗಳಲ್ಲಿ ಜೈಲಿನಲ್ಲೇ ಇರಿಸಿ ಬಳಿಕ ಕೋರ್ಟ್ 'ನಿರ್ದೋಷಿ' ಎಂದು ಬಿಡುಗಡೆ ಮಾಡಿದರೂ ಕಳೆದುಹೋದ ಗೌರವ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿಯನ್ನು ಮರಳಿ ನೀಡಲು ಈ ಸರ್ಕಾರಗಳಿಗೆ ಸಾಧ್ಯವೇ? "ಬೆಂಕಿಯಿಲ್ಲದೆ ಹೊಗೆ ಆಡುವುದಿಲ್ಲ", "ಏನೋ ತಪ್ಪು ಮಾಡಿಯೇ ಜೈಲಿಗೆ ಹೋಗಿರಬೇಕು" ಎಂಬ ಸಮಾಜದ ಸಂಶಯದ ದೃಷ್ಟಿ ಈ ನಿರ್ದೋಷಿಗಳನ್ನು ಜೀವಮಾನವಿಡೀ ಕಾಡುತ್ತಲೇ ಇರುತ್ತದೆ. ಇವೆಲ್ಲವುದರಿಂದಾಗುವ ಮಾನಸಿಕ ಆಘಾತಕ್ಕೆ ಹೊಣೆ ಯಾರು?
ದೇಶದಲ್ಲಿ ಭಯೋತ್ಪಾದನೆ ಅಥವಾ ದೇಶದ್ರೋಹದಂತಹ ಗಂಭೀರ ಆರೋಪಗಳ ಮೇಲೆ ಬಂಧಿತರಾಗಿ, ದಶಕಗಳ ಕಾಲ ತಮ್ಮ ಜೀವನದ ಅಮೂಲ್ಯವಾದ ಬದುಕನ್ನು ಜೈಲಿನಲ್ಲಿ ಕಳೆದ ಬಳಿಕ ಕೋರ್ಟ್‌ನಿಂದ ‘ನಿರ್ದೋಷಿ’ ಎಂದು ಖುಲಾಸೆಗೊಳ್ಳುವ ಪ್ರಕರಣಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ದೇಶದ ಕಾನೂನು ಪ್ರಕಾರ ಯುಎಪಿಎ ಅಥವಾ ದೇಶದ್ರೋಹದಂತಹ ಕಾಯ್ದೆಗಳಡಿ ಬಂಧನಕ್ಕೊಳಗಾದಾಗ ಜಾಮೀನು ಸಿಗುವುದು ಅತಿ ಕಷ್ಟ, ವಿರಳ. ಇದರ ಪರಿಣಾಮದಿಂದಾಗಿಯೇ ಅದೆಷ್ಟೋ ನಿರಪರಾಧಿಗಳ ಇಡೀ ತಾರುಣ್ಯ ಜೈಲಿನಲ್ಲೇ ಕರಗಿಹೋಗುತ್ತದೆ.
ಅದರಲ್ಲೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ವಿರೋಧಿಸಿದ ಕಾರಣಕ್ಕೆ, ಮುಸ್ಲಿಂ ಆದ ಕಾರಣಕ್ಕೆ ದೇಶದ್ರೋಹದ ಹಣೆಪಟ್ಟಿ ಪಡೆಯುವ ಈ ಕಾಲದಲ್ಲಿ ಉಮರ್ ಖಾಲಿದ್, ಇಮಾಮ್‌ನಂತೆ ಅದೆಷ್ಟೋ ಯುವಕರ ಜೀವನ ಸೆರೆವಾಸದಲ್ಲೇ ಕಳೆದುಹೋಗುತ್ತಿದೆ. ತನಿಖಾ ಸಂಸ್ಥೆಗಳ ವೈಫಲ್ಯ, ಪುರಾವೆಗಳ ಕೊರತೆ, ಕೇವಲ ಶಂಕೆಯ ಆಧಾರದಲ್ಲಿ ನಡೆಯುವ ಬಂಧನಗಳು ಒಬ್ಬ ವ್ಯಕ್ತಿಯ ಮತ್ತು ಆತನ ಇಡೀ ಕುಟುಂಬದ ಬದುಕನ್ನು ಧ್ವಂಸಗೊಳಿಸುತ್ತವೆ ಎಂಬುದಕ್ಕೆ ಒಡಿಶಾ ನ್ಯಾಯಾಲಯ ಇತ್ತೀಚಿಗೆ ಒಡಿಶಾ ನ್ಯಾಯಾಲಯ ತೀರ್ಪು ನೀಡಿದ ಅಬ್ದುರ್ ರಹಮಾನ್ ಅಲಿ ಖಾನ್ ಪ್ರಕರಣ ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ.
ಇದನ್ನು ಓದಿದ್ದೀರಾ? BREAKING NEWS | ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ
ಏನಿದು ಅಬ್ದುರ್ ರಹಮಾನ್ ಅಲಿ ಖಾನ್ ಪ್ರಕರಣ?
ನಿಷೇಧಿತ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ 2015ರಲ್ಲಿ ಒಡಿಶಾದ ಕಟಕ್ ಮೂಲದ ಮೌಲ್ವಿ ಅಬ್ದುರ್ ರಹಮಾನ್ ಅಲಿ ಖಾನ್ ಎಂಬಾತನನ್ನು ಬಂಧಿಸಲಾಗಿತ್ತು. ಅಲಿ ಖಾನ್ ಯುವಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಲು ಯತ್ನಿಸುತ್ತಿದ್ದಾನೆ, ದೇಶವಿರೋಧಿ ಕೃತ್ಯಗಳಿಗಾಗಿ ನಿಧಿ ಸಂಗ್ರಹಿಸುತ್ತಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಒಡಿಶಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
2015ರಿಂದ ಈವರೆಗೆ ಅಂದರೆ ಈಗ 2026ರವರೆಗೆ ಸುದೀರ್ಘ ವಿಚಾರಣೆ ನಡೆದಿದೆ. ಇದೀಗ ಒಡಿಶಾದ ಸಲ್ಪುರ್ ಜೆಎಂಎಫ್‌ಸಿ (JMFC) ನ್ಯಾಯಾಲಯವು ಅಬ್ದುರ್ ರಹಮಾನ್‌ನನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿದೆ. ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಅತ್ಯಂತ ಕಟು ಶಬ್ದಗಳನ್ನು ಬಳಸಿದ್ದಾರೆ. “ಆರೋಪಿಯ ವಿರುದ್ಧ ಅಲ್ ಖೈದಾಗೆ ನಿಧಿ ಸಂಗ್ರಹಿಸಿದ ಅಥವಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಒಂದೇ ಒಂದು ಎಳೆಯಷ್ಟೂ ಪುರಾವೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೆಯೇ ಕೇವಲ ಶಂಕೆಯ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ದೀರ್ಘಕಾಲ ಜೈಲಿನಲ್ಲಿಡುವುದು ಕಾನೂನುಬಾಹಿರ ಎಂದು ಕೋರ್ಟ್ ಸಾರಿದೆ.
ಆದರೆ ಇದೊಂದೇ ಪ್ರಕರಣವಲ್ಲ ಇತರೆ ಪ್ರಕರಣಗಳಲ್ಲಿಯೂ ಇದೇ ರೀತಿ ಅದೆಷ್ಟೋ ಮಂದಿ ಅತ್ತ ವಿಚಾರಣೆಯೂ ನಡೆಯದೆ, ಇತ್ತ ಜಾಮೀನೂ ಸಿಗದೆ ಜೈಲಿನಲ್ಲಿ ಕಳೆಯುತ್ತಿದ್ದಾರೆ. ಈ ಹಿಂದೆ ಭಯೋತ್ಪಾದನೆಯಲ್ಲಿ ತೊಡಗಿರಬಹುದು ಎಂಬ ಶಂಕೆಗೆ ಎಷ್ಟೋ ನಿರಪರಾಧಿ ಮುಸ್ಲಿಂ ಯುವಕರ ಬದುಕು ಬಲಿಯಾಗಿದೆ.
ಹುಬ್ಬಳ್ಳಿ ಪಿತೂರಿ ಪ್ರಕರಣ
2008ರಲ್ಲಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ 17 ಮುಸ್ಲಿಂ ಯುವಕರನ್ನು ದೇಶದ್ರೋಹ ಮತ್ತು ಉಗ್ರಗಾಮಿ ಸಂಚಿನ ಆರೋಪದ ಮೇಲೆ ಬಂಧಿಸಲಾಗಿತ್ತು. ನಿಷೇಧಿತ ಸಿಮಿ (SIMI) ಸಂಘಟನೆಯೊಂದಿಗೆ ಸಂಪರ್ಕ ಮತ್ತು ವಿಧ್ವಂಸಕ ಕೃತ್ಯಗಳ ಸಂಚು ನಡೆಸಿದ್ದಾರೆ ಎಂಬ ಆರೋಪವನ್ನು ಈ ವಿದ್ಯಾರ್ಥಿಗಳ ಮೇಲೆ ಮಾಡಲಾಗಿತ್ತು. ಈ ಬಂಧಿತರಲ್ಲಿ ಡಾ. ಆಸಿಫ್ ಇಕ್ಬಾಲ್, ಮಿರ್ಜಾ ತಾರಿಕ್ ಬೇಗ್ ಮೊದಲಾದ ಭವಿಷ್ಯದ ಭರವಸೆಯ ಯುವಕರಿದ್ದರು. ಮುಸ್ಲಿಮರು ಆರೋಪಿ ಸ್ಥಾನದಲ್ಲಿ ಕಾಣುತ್ತಿದ್ದಂತೆ ಮಾಧ್ಯಮಗಳು ಈ ಯುವಕರು ಪಿತೂರಿಯ ‘ಮಾಸ್ಟರ್ ಮೈಂಡ್ಸ್’ ಎಂದೆಲ್ಲ ಬಿಂಬಿಸಿ ಗಂಟೆಗಟ್ಟಲೇ ನ್ಯೂಸ್ ಓಡಿಸಿದ್ದವು.
ಇದನ್ನು ಓದಿದ್ದೀರಾ? ನ್ಯಾಯದ ಹೆಸರಲ್ಲಿ ಮುಸ್ಲಿಮರ ಮೇಲೆ ನಿರಂತರ ಅನ್ಯಾಯ; ಖುಲಾಸೆಗೊಂಡ ಪ್ರಕರಣಗಳೆಷ್ಟು ಗೊತ್ತೇ?
ಆದರೆ ಆಪಾದಿತರ ವಿರುದ್ಧ ಯಾವುದೇ ಸ್ಪಷ್ಟ ಪುರಾವೆಗಳು ಅಥವಾ ಬಾಂಬ್ ತಯಾರಿಸುವ ವಸ್ತುಗಳು ಪತ್ತೆಯಾಗದ ಕಾರಣ ಹುಬ್ಬಳ್ಳಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2015ರಲ್ಲಿ ಎಲ್ಲಾ 17 ಯುವಕರನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿತು. ಈ ಯುವಕರ 7 ಅಮೂಲ್ಯ ವರ್ಷಗಳು ಜೈಲು ಪಾಲಾದವು. ಅವರ ವೃತ್ತಿಜೀವನವೂ ಸಂಪೂರ್ಣ ನಾಶವಾಯಿತು. ಹೀಗೆ ಸುಳ್ಳು ಆರೋಪಗಳಿಂದಾಗಿ ಮುಗ್ಧ ಯುವಕರ ಜೀವನವೇ ಹಾಳಾಗಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ದೂರಿದವು.
ಗುಜರಾತ್‌ನ ಅಕ್ಷರಧಾಮ ದೇವಾಲಯದ ದಾಳಿ ಪ್ರಕರಣ
2002ರಲ್ಲಿ ಗುಜರಾತ್‌ನ ಗಾಂಧಿನಗರದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಉಗ್ರರ ದಾಳಿಗೆ ನೆರವು ನೀಡಿದ ಆರೋಪದಲ್ಲಿ ಪ್ರಕರಣದಲ್ಲಿ ಪೋಟ್ಲಾ (POTA) ಕಾಯ್ದೆಯಡಿ ಅದಂ ಭಾಯಿ ಸುಲೇಮಾನ್ ಅಜ್ಮೇರಿ ಮತ್ತು ಅಬ್ದುಲ್ ಕಯೂಮ್ ಸೇರಿದಂತೆ ಆರು ಜನರನ್ನು ಬಂಧಿಸಲಾಗಿತ್ತು. ಆರು ಮಂದಿಗೆ ಕೆಳ ನ್ಯಾಯಾಲಯ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು.
ಆದರೆ 11 ವರ್ಷಗಳ ಬಳಿಕ 2014ರಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ತನಿಖಾ ಸಂಸ್ಥೆಗಳ ಬೇಜವಾಬ್ದಾರಿತನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ನಿಜವಾದ ಅಪರಾಧಿಗಳನ್ನು ಹಿಡಿಯುವ ಬದಲು ತನಿಖಾ ಸಂಸ್ಥೆಗಳು ಮುಗ್ಧರನ್ನು ಸಿಲುಕಿಸಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿತು. ಹಾಗೆಯೇ ಸುಪ್ರೀಂ ಕೋರ್ಟ್ ಮರಣದಂಡನೆಗೆ ಒಳಗಾಗಿದ್ದವರೂ ಸೇರಿದಂತೆ ಎಲ್ಲ ಆರೋಪಿಗಳನ್ನು ಗೌರವಪೂರ್ವಕವಾಗಿ ಖುಲಾಸೆಗೊಳಿಸಿತು. ಅಬ್ದುಲ್ ಕಯೂಮ್ ಜೈಲಿನಿಂದ ಬಿಡುಗಡೆಯಾದ ಬಳಿಕ ತಮಗಾದ ಅನ್ಯಾಯದ ಕುರಿತು ‘ಗ್ಯಾರಂಟಿ ಆಫ್ ದಿ ಜೈಲ್ ಡೈರಿ’ ಎಂಬ ಪುಸ್ತಕ ಬರೆದರು.
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ-2006
2006ರ ಶಬ್ರಾತ್ ಹಬ್ಬದ ದಿನದಂದು ಮಾಲೆಗಾಂವ್ ಮಸೀದಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 37 ಜನರು ಸಾವನ್ನಪ್ಪಿದ್ದರು. ಮಹಾರಾಷ್ಟ್ರ ಎಟಿಎಸ್ ಒಂಬತ್ತು ಮುಸ್ಲಿಂ ಯುವಕರನ್ನು ಬಂಧಿಸಿ, ಅವರೇ ಈ ಸ್ಫೋಟದ ರೂವಾರಿಗಳು ಎಂದು ಆರೋಪಿಸಿತ್ತು. ತನಿಖೆ ವೇಳೆ ಈ ಮುಸ್ಲಿಮರ ಪಾತ್ರವಿಲ್ಲದಿರುವುದು ಸಾಬೀತಾಗಿ ಎಲ್ಲರೂ ಖುಲಾಸೆಯಾಗಿದ್ದಾರೆ. ತನಿಖೆಯನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಕೃತ್ಯದಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡವಿರುವುದನ್ನು ಪತ್ತೆ ಹಚ್ಚಿತು. ದೀರ್ಘ ವಿಚಾರಣೆಯ ನಂತರ 2026ರ ಏಪ್ರಿಲ್‌ನಲ್ಲಿ ಪ್ರಕರಣದ ಅಂತಿಮ ನಾಲ್ವರು ಮುಸ್ಲಿಂ ಆರೋಪಿಗಳನ್ನೂ ದೋಷಮುಕ್ತಗೊಳಿಸಲಾಗಿದೆ. ಹತ್ತು ವರ್ಷಗಳ ಕಾಲ ಕಾನೂನು ಹೋರಾಟದಲ್ಲೇ ಈ ಆರು ಮಂದಿ ಜೀವನ ಕಳೆಯುವಂತಾಗಿತ್ತು.
2008 ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲೂ ಮುಸ್ಲಿಮರನ್ನೇ ಗುರಿಯಾಗಿಸಲಾಗಿತ್ತು. 2008ರ ಸೆಪ್ಟೆಂಬರ್ 29ರಂದು ಮತ್ತೊಮ್ಮೆ ಮಾಲೆಗಾಂವ್‌ನಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲೂ ಪೊಲೀಸರು ಮುಸ್ಲಿಮರನ್ನೇ ಗುರಿಯಾಗಿಸಿ ಕೆಲವರನ್ನು ವಶಕ್ಕೆ ಪಡೆದಿದ್ದರು. ಆದರೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ತನಿಖಾಧಿಕಾರಿ ಹೇಮಂತ್ ಕರ್ಕರೆ ಅವರ ನೇತೃತ್ವದ ತನಿಖೆಯಲ್ಲಿ ಇದು ಬಲಪಂಥೀಯ ಸಂಘಟನೆಗಳ ಷಡ್ಯಂತ್ರ ಎಂದು ಬಹಿರಂಗವಾಯಿತು. ನಂತರ ಎನ್‌ಐಎ ನಡೆಸಿದ ತನಿಖೆಯಲ್ಲಿ ಬಂಧಿತ ಮುಸ್ಲಿಮರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಯಿತು.
ತನಿಖೆಯ ವೇಳೆ ಸ್ಫೋಟಕ್ಕೆ ಬಳಸಲಾಗಿದ್ದ ಮೋಟಾರ್ ಸೈಕಲ್ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಯಿತು. ಇದರ ಆಧಾರದ ಮೇಲೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಯಿತು.
ಇದನ್ನು ಓದಿದ್ದೀರಾ? ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?
ಈ ಎಲ್ಲ ಖುಲಾಸೆ ಪ್ರಕರಣಗಳು ದೇಶದ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ಮುಂದಿರುವ ಗಂಭೀರ ಪ್ರಶ್ನೆಗಳನ್ನು ಎತ್ತಿ ತೋರಿಸುತ್ತವೆ. ಮೊದಲನೆಯದಾಗಿ ಖಚಿತವಾಗಿ ಪುರಾವೆಗಳಿಲ್ಲದೆ, ಕೇವಲ ಶಂಕೆಯ ಆಧಾರದ ಮೇಲೆ ಬಂಧಿಸುವುದು ಸರಿಯೇ? ಅದರಲ್ಲೂ ಮೋದಿ ಸರ್ಕಾರದ ವಿರುದ್ಧ ಮಾತನಾಡಿದವರ ವಿರುದ್ಧವೇ ಯುಎಪಿಎ ಬಳಕೆ ಮಾಡಲಾಗುತ್ತಿಲ್ಲವೇ? ಈ ವೇಳೆ ಆರು ವರ್ಷಗಳಿಂದ ಅತ್ತ ವಿಚಾರಣೆಯೂ ಇಲ್ಲದೆ ಇತ್ತ ಜಾಮೀನೂ ಇಲ್ಲದೆ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಮತ್ತು ವಿದ್ಯಾರ್ಥಿ ನಾಯಕ ಶರ್ಜೀಲ್ ಇಮಾಮ್ ಅವರನ್ನು ನೆನೆಯಬೇಕಾಗಿದೆ. 10-12 ವರ್ಷಗಳಲ್ಲಿ ಜೈಲಿನಲ್ಲೇ ಇರಿಸಿ ಬಳಿಕ ಕೋರ್ಟ್ ‘ನಿರ್ದೋಷಿ’ ಎಂದು ಬಿಡುಗಡೆ ಮಾಡಿದರೂ ಕಳೆದುಹೋದ ಗೌರವ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿಯನ್ನು ಮರಳಿ ನೀಡಲು ಈ ಸರ್ಕಾರಗಳಿಗೆ ಸಾಧ್ಯವೇ?
ನಿರಪರಾಧಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಹತ್ತಾರು ವರ್ಷ ಕಳೆದು ಖುಲಾಸೆಗೊಂಡು ಹೊರ ಬಂದಾಗ ಅವರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಮಾಡಲು, ಉದ್ಯೋಗ ನೀಡಲು ಈ ಸರ್ಕಾರದಲ್ಲಿ ಯಾವುದೇ ನೀತಿಗಳೂ ಇಲ್ಲ. ಅಷ್ಟಕ್ಕೂ ಅಷ್ಟು ವರ್ಷಗಳ ಕಾಲ ಮಾಧ್ಯಮಗಳು ಆರೋಪಿಯನ್ನು ಅಪರಾಧಿ ಎಂದು ಬಿಂಬಿಸಿರುವಾಗ ನಿರಪರಾಧಿ ಎಂಬ ಸ್ಥಾನವನ್ನು ಈ ಸಮಾಜ ಒಪ್ಪಿಕೊಳ್ಳುತ್ತದೆಯೇ? “ಬೆಂಕಿಯಿಲ್ಲದೆ ಹೊಗೆ ಆಡುವುದಿಲ್ಲ”, “ಏನೋ ತಪ್ಪು ಮಾಡಿಯೇ ಜೈಲಿಗೆ ಹೋಗಿರಬೇಕು” ಎಂಬ ಸಮಾಜದ ಸಂಶಯದ ದೃಷ್ಟಿ ಈ ನಿರ್ದೋಷಿಗಳನ್ನು ಜೀವಮಾನವಿಡೀ ಕಾಡುತ್ತಲೇ ಇರುತ್ತದೆ. ಇವೆಲ್ಲವುದರಿಂದಾಗುವ ಮಾನಸಿಕ ಆಘಾತಕ್ಕೆ ಹೊಣೆ ಯಾರು?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



