​ಶಿವಕುಮಾರ್ ಆಡಳಿತಕ್ಕೆ 100 ದಿನ: ವೇಗ, ಮಹತ್ವಾಕಾಂಕ್ಷೆ, ತಪ್ಪು ತಿದ್ದಿಕೊಂಡ ಜಾಣ್ಮೆ, ಯೋಜನೆಗಳ ಜಾರಿಯದ್ದೇ ಅಸಲಿ ಸವಾಲು

Date:

ಡಿ.ಕೆ. ಶಿವಕುಮಾರ್ ಸರ್ಕಾರದ ನೂರು ದಿನಗಳ ಆಡಳಿತವು ರಾಜಕೀಯವಾಗಿ ಕೆಲವು ಏರಿಳಿತಗಳನ್ನು ಕಂಡಿದ್ದರೂ, ತನ್ನ ತಪ್ಪುಗಳನ್ನು ಬೇಗನೆ ತಿದ್ದಿಕೊಳ್ಳುವ ಜಾಣ್ಮೆ ತೋರುವ ಮೂಲಕ ಭರವಸೆ ಮೂಡಿಸಿದೆ. ಆದರೆ, ನೂರು ದಿನಗಳ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಈ ಹತ್ತಾರು ‘ಮಹತ್ವಾಕಾಂಕ್ಷಿ ಘೋಷಣೆಗಳು’ ಕೇವಲ ಕಾಗದದ ಮೇಲಿನ ಪ್ರಚಾರದ ಸರಕಾಗದೆ ವಾಸ್ತವದಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತವೆ ಎಂಬುದು ಅತಿಮುಖ್ಯ ಪ್ರಶ್ನೆಯಾಗಿದೆ. ಈ ಎಲ್ಲಾ ಬೃಹತ್ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಬೇಕಾದ ಆಡಳಿತಾತ್ಮಕ ಇಚ್ಛಾಶಕ್ತಿ ಹಾಗೂ ಅಪಾರ ಆರ್ಥಿಕ ಸಂಪನ್ಮೂಲವನ್ನು ಒದಗಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಈ ಯೋಜನೆಗಳು ಕಟ್ಟಕಡೆಯ ಮನುಷ್ಯನಿಗೆ ತಲುಪಿದಾಗ ಮಾತ್ರ ಈ ನವೀನ ಸರ್ಕಾರದ ನೈಜ ಯಶಸ್ಸು ನಿರ್ಧಾರವಾಗಲಿದೆ.

- Advertisement -

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ, ಆಡಳಿತದ ಒಟ್ಟಾರೆ ವೇಗ ಹಾಗೂ ಅಭಿವೃದ್ಧಿಯ ಮಹತ್ವಾಕಾಂಕ್ಷೆಗಳು ಎದ್ದು ಕಾಣುತ್ತಿದ್ದವು. ‘ದೃಢ ಕರ್ನಾಟಕದ ಸಂಕಲ್ಪ’ ಎಂಬ ಘೋಷವಾಕ್ಯದಡಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ನೂರು ದಿನಗಳ ಸಂಭ್ರಮದ ಕಾರ್ಯಕ್ರಮದಲ್ಲಿ, ಸರ್ಕಾರವು ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳಿಗೆ ಸಂಬಂಧಿಸಿದಂತೆ ಭರಪೂರ ಹೊಸ ಯೋಜನೆಗಳನ್ನೂ ಘೋಷಿಸಿದೆ. ರಾಜಕೀಯವಾಗಿ ಪ್ರಾಥಮಿಕ ಹಂತದ ಯಶಸ್ಸು ಸಾಧಿಸಿರುವ ಸರ್ಕಾರ, ಇದೀಗ ಆಡಳಿತಾತ್ಮಕವಾಗಿ ದೊಡ್ಡ ಹೆಜ್ಜೆಗಳನ್ನಿಡಲು ಮುಂದಾಗಿದೆ. ಆದರೆ, ಕಾಗದದ ಮೇಲಿರುವ ಮತ್ತು ವೇದಿಕೆಯ ಮೇಲೆ ಘೋಷಣೆಯಾಗಿರುವ ಇಷ್ಟೊಂದು ಬೃಹತ್ ಯೋಜನೆಗಳು ವಾಸ್ತವಿಕ ನೆಲೆಯಲ್ಲಿ ಎಷ್ಟರಮಟ್ಟಿಗೆ ಜಾರಿಯಾಗುತ್ತವೆ ಎಂಬ ಪ್ರಶ್ನೆಯಂತೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...


ಈ ಸರ್ಕಾರದ ಆರಂಭಿಕ ಹಾದಿಯನ್ನು ಹಿಂತಿರುಗಿ ನೋಡಿದಾಗ, ಅತ್ಯಂತ ಪ್ರಮುಖವಾದ ಮತ್ತು ಸಕಾರಾತ್ಮಕ ಬೆಳವಣಿಗೆ ಎಂದರೆ ನೂತನ ಮುಖ್ಯಮಂತ್ರಿಯವರಿಗೆ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆ. ಸಾಮಾನ್ಯವಾಗಿ ನೂತನ ಸರ್ಕಾರ ರಚನೆಯಾದಾಗ, ಅದರಲ್ಲಿಯೂ ನಾಯಕತ್ವ ಬದಲಾವಣೆಯಾದಾಗ ಕಾಣಿಸಿಕೊಳ್ಳುವ ರಾಜಕೀಯ ಭಿನ್ನಮತಗಳು ಅಥವಾ ಬಹಿರಂಗ ಕಚ್ಚಾಟಗಳು ಇಲ್ಲಿ ಎಲ್ಲಿಯೂ ವ್ಯಕ್ತವಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿದ ಅಪಾರ ರಾಜಕೀಯ ಪ್ರಬುದ್ಧತೆ ಹಾಗೂ ಸಹಕಾರದಿಂದಾಗಿ ಆಡಳಿತದ ಚುಕ್ಕಾಣಿ ಹಿಡಿಯುವ ಪ್ರಕ್ರಿಯೆ ಅತ್ಯಂತ ಸುಗಮವಾಗಿ ನೆರವೇರಿತು. ಅವರವರ ಮನಸ್ಸಿನಲ್ಲಿ ಯಾವ ಪ್ರಮಾಣದ ಅನುಮಾನ ಅಥವಾ ಸಿಟ್ಟು ಇದೆಯೋ ಹತ್ತಿರದಲ್ಲಿರಬಹುದಾದವರಿಗೆ ತಿಳಿದಿರುತ್ತದಾದರೂ, ಬಹಿರಂಗವಾಗಿ ಅಂಥದ್ದು ಕಂಡಿಲ್ಲ. ನೂರು ದಿನಗಳ ಸಾಧನೆಯ ಕಾರ್ಯಕ್ರಮವನ್ನು ಸ್ವತಃ ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದು ಆಡಳಿತ ಪಕ್ಷದ ಒಳಗಿನ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಮೂರು ವರ್ಷಗಳನ್ನು ಪೂರೈಸಿರುವ ಯಾವುದೇ ಸರ್ಕಾರದ ಮೇಲಾದರೂ ಬರುವ ಆಡಳಿತ ವಿರೋಧಿ ಅಲೆಯ ನಡುವೆಯೂ, ಜನರಲ್ಲಿ ಒಂದು ‘ಫ್ರೆಶ್ ಗವರ್ನಮೆಂಟ್’ (ನವೀನ ಸರ್ಕಾರ) ಎಂಬ ಭಾವನೆಯನ್ನು ಕಟ್ಟಿಕೊಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಆದರೆ, ಈ ನೂರು ದಿನಗಳ ಆಡಳಿತದ ಹಾದಿ ಸಂಪೂರ್ಣವಾಗಿ ಸುಗಮವಾಗಿರಲಿಲ್ಲ. ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿ, ದೊಡ್ಡ ಮಟ್ಟದ ರಾಜಕೀಯ ಸಂಚಲನ ಮೂಡಿಸಿದವು. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪ ಹೊತ್ತಿದ್ದ ಶಾಸಕ ಬಿ. ನಾಗೇಂದ್ರ ಅವರನ್ನು ದಿಢೀರನೆ ಸಚಿವರನ್ನಾಗಿ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಂಡಿದ್ದು ತೀವ್ರ ಟೀಕೆಗೆ ಗುರಿಯಾಯಿತು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಕಾರ, ತಕ್ಷಣವೇ ಎಚ್ಚೆತ್ತುಕೊಂಡು ಜನಾಭಿಪ್ರಾಯಕ್ಕೆ ಮಣಿಯಿತು. ಪರಿಣಾಮವಾಗಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೇವಲ 25 ದಿನಗಳಲ್ಲಿಯೇ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಬೇಕಾಗಿ ಬಂತು. ತನ್ನ ತಪ್ಪನ್ನು ಬೇಗನೆ ತಿದ್ದಿಕೊಳ್ಳುವ ಮೂಲಕ, ವಿರೋಧ ಪಕ್ಷಗಳ ಅಸ್ತ್ರವನ್ನು ಸರ್ಕಾರ ಮೊಟಕುಗೊಳಿಸಿತು.

44480

ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ತೆಗೆದುಕೊಂಡ ಮತ್ತೊಂದು ನಿರ್ಧಾರ ಭಾರಿ ಜನಾಕ್ರೋಶಕ್ಕೆ ಕಾರಣವಾಯಿತು. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ 17 ಕಿ.ಮೀ. ಉದ್ದದ ಸುರಂಗಮಾರ್ಗ (ಟನಲ್ ರೋಡ್) ನಿರ್ಮಾಣದ ಪ್ರಸ್ತಾವನೆ ಹಾಗೂ ಅದಕ್ಕಾಗಿ ಐತಿಹಾಸಿಕ ಲಾಲ್‌ಬಾಗ್‌ನ ಜಾಗವನ್ನು ಬಳಸಿಕೊಳ್ಳುವ ಸರ್ಕಾರದ ಚಿಂತನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಇದೇ ಕಾರಣಕ್ಕೆ ಶೇಕಡಾ 5ರಷ್ಟು ಉದ್ಯಾನವನಗಳ ಜಾಗವನ್ನು ಸಾರ್ವಜನಿಕ ಮೂಲಸೌಕರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ’ಯನ್ನು ಸರ್ಕಾರ ಮಂಡಿಸಿತ್ತು. ಇದರ ವಿರುದ್ಧ ಸಾವಿರಾರು ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. ಜನರ ಆಕ್ರೋಶಕ್ಕೆ ತಲೆಬಾಗಿದ ಸರ್ಕಾರ, ವಿವಾದಾತ್ಮಕ ಮಸೂದೆಯನ್ನು ಮತ್ತು ಉದ್ಯಾನವನಗಳ ಜಾಗವನ್ನು ವಶಪಡಿಸಿಕೊಳ್ಳುವ ನಿರ್ಧಾರವನ್ನು ಹಿಂಪಡೆಯುವ ಮೂಲಕ ಜನಪರ ನಿಲುವನ್ನು ಪ್ರದರ್ಶಿಸಿದೆ.

ಇದರ ಜೊತೆಗೆ, ರಾಮನಗರ ಜಿಲ್ಲೆಯಲ್ಲಿ ಪ್ರಸ್ತಾಪಿಸಲಾದ 9,600 ಎಕರೆ ವಿಸ್ತೀರ್ಣದ ಬೃಹತ್ ‘ಬಿಡದಿ ಟೌನ್‌ಶಿಪ್’ ನಿರ್ಮಾಣ ಯೋಜನೆ ಕೂಡ ಭಾರಿ ವಿರೋಧ ಹುಟ್ಟುಹಾಕಿತು. ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ರೈತರು ಬರೋಬ್ಬರಿ 540ಕ್ಕೂ ಹೆಚ್ಚು ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ರಾಜಕೀಯ ತಿರುವು ಪಡೆಯುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪತ್ರಿಕಾಗೋಷ್ಟಿ ನಡೆಸಿದರು. ರೈತರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ, ಬದಲಾಗಿ ಯಾರು ಸ್ವಯಂಪ್ರೇರಿತವಾಗಿ ಜಮೀನು ನೀಡುತ್ತಾರೋ ಅವರಿಂದ ಮಾತ್ರ ಪಡೆಯಲಾಗುವುದು ಎಂದು ಹೇಳಿದರು. ಯೋಜನೆಯನ್ನು ಕೈಬಿಡುವ ಯಾವುದೇ ಇರಾದೆ ತೋರದಿದ್ದರೂ, ವಿವಾದದ ತೀವ್ರತೆ ಹೆಚ್ಚಾಗುವ ಮುನ್ನವೇ ಸರ್ಕಾರ ತನ್ನ ನಿರ್ಧಾರವನ್ನು ಭಾಗಶಃ ಬದಲಿಸಿಕೊಂಡಿತು.

dk shivakumar 22

ಈ ರೀತಿಯ ಸಕಾರಾತ್ಮಕ ಸ್ಪಂದನೆ ಮತ್ತು ತಪ್ಪು ತಿದ್ದಿಕೊಳ್ಳುವ ಪ್ರವೃತ್ತಿಯ ನಡುವೆಯೂ, ಸರ್ಕಾರದ ಕೆಲವು ಆರಂಭಿಕ ಆಡಳಿತಾತ್ಮಕ ವಿಳಂಬಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾದವು. ಇಂದು ಸರ್ಕಾರದಿಂದ ಬಿಡುಗಡೆಯಾಗಿರುವ ಜಾಹೀರಾತಿನಲ್ಲೂ ತನ್ನನ್ನು ʼಜನಾಭಿಪ್ರಾಯಕ್ಕೆ ಬೆಲೆ ಕೊಡುವ ಸರ್ಕಾರʼ ಎಂದು ಬಿಂಬಿಸಿಕೊಂಡಿದೆ. ಆ ಮೂಲಕ ಯೂ ಟರ್ನ್‌ ಸರ್ಕಾರ ಎಂಬುದಕ್ಕಿಂತ ಸಂವೇದನೆಯಿರುವ ಸರ್ಕಾರ ಎಂದು ಹೇಳುವುದು ಅವರ ಯೋಚನೆಯಿದ್ದಂತಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಬರೋಬ್ಬರಿ ಒಂದು ತಿಂಗಳು ವಿಳಂಬ ಮಾಡಿತು. ಆ ಬಳಿಕ ಖಾತೆ ಹಂಚಿಕೆ ಪ್ರಕ್ರಿಯೆ ಕೂಡ ಬಹಳ ತಡವಾಯಿತು. ಈ ಎಲ್ಲ ಪ್ರಮುಖ ರಾಜಕೀಯ ಮತ್ತು ಆಡಳಿತಾತ್ಮಕ ತೀರ್ಮಾನಗಳು ಕೇವಲ ದೆಹಲಿ ಮಟ್ಟದಲ್ಲಿಯೇ ನಿರ್ಧಾರವಾಗುತ್ತಿದ್ದವು. ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ಬದಲು ದೆಹಲಿ ನಾಯಕರ ಕೈಯಲ್ಲಿ ಅಧಿಕಾರ ಕೇಂದ್ರೀಕರಣವಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿ ವ್ಯಕ್ತವಾಯಿತು. ಇದು ಒಂದು ಹೊಸ ಮತ್ತು ಸ್ವತಂತ್ರ ಸರ್ಕಾರದ ಲಕ್ಷಣವಲ್ಲ ಎಂಬ ಭಾವನೆ ಮೂಡಲು ಈ ವಿಳಂಬ ಧೋರಣೆಯೇ ಪ್ರಮುಖ ಕಾರಣವಾಯಿತು.ಸಚಿವರ ಕಾರ್ಯವೈಖರಿಯನ್ನು ಕೂಲಂಕಷವಾಗಿ ಗಮನಿಸಿದಾಗ, ಸಂಪುಟದ ಕೆಲವು ಸಚಿವರ ಕೆಲಸಗಳು ಭಿನ್ನವಾಗಿ ಎದ್ದುಕಾಣುತ್ತಿವೆ. ಪ್ರಮುಖವಾಗಿ ಸಚಿವ ಕೃಷ್ಣ ಬೈರೇಗೌಡರು ‘ಬೆಂಗಳೂರು ಅಭಿವೃದ್ಧಿ’ ವಿಚಾರದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸರ್ಕಾರದ ಪಾಲಿಗೆ ದೊಡ್ಡ ಸಕಾರಾತ್ಮಕ ಬೆಳವಣಿಗೆಯಾಗಿದೆ.

DK Shivakumar new 1

ಸಾಮಾನ್ಯವಾಗಿ, ಹಿಂದಿನ ಸರ್ಕಾರಗಳಿಗೆ ‘ಬೆಂಗಳೂರು ನಗರದ ಅಭಿವೃದ್ಧಿ’ ಎಂಬುದು ಒಂದು ಬಹುದೊಡ್ಡ ದೌರ್ಬಲ್ಯವಾಗಿತ್ತು . ಆದರೆ, ಪ್ರಸ್ತುತ ಸರ್ಕಾರವು ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದು, ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸುವ ಕಡೆಗೆ ದಿಟ್ಟ ಹೆಜ್ಜೆ ಇಡುತ್ತಿದೆ. ಕೃಷ್ಣ ಬೈರೇಗೌಡರು ಪೌರ ಕಾರ್ಮಿಕರ ಸಮಸ್ಯೆಗಳ ನಿರ್ವಹಣೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಫುಟ್‌ಪಾತ್ ಮೇಲಿರುವ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯಂತಹ ವಿಚಾರಗಳಲ್ಲಿ ತಳೆದ ನಿಲುವು, ಟೀಕೆಗಳಿಗೆ ಗುರಿಯಾಗಿದ್ದರೂ ಸಹ ತಮ್ಮ ಛಾಪು ಮೂಡಿಸುವ ಯತ್ನದಲ್ಲಿದ್ದಾರೆ.

ಮತ್ತೊಂದೆಡೆ, ಸಚಿವ ಸಂಪುಟದಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡುತ್ತಿರುವ ಮತ್ತೊಬ್ಬ ಸಚಿವರೆಂದರೆ ಪ್ರಿಯಾಂಕ್ ಖರ್ಗೆ. ಅವರು ಸಂಪೂರ್ಣವಾಗಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡಿದ್ದು, ವಿಶೇಷವಾಗಿ ಆರ್.ಎಸ್.ಎಸ್ (RSS) ಮತ್ತು ಇತರ ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳನ್ನು ಅತ್ಯಂತ ಆಕ್ರಮಣಕಾರಿಯಾಗಿ ಎದುರಿಸುತ್ತಿದ್ದಾರೆ. ಇವರ ಜೊತೆಗೆ, ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ನೂತನ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಯು.ಟಿ. ಖಾದರ್ ಅವರು ಕೂಡ ತಮ್ಮ ಇಲಾಖೆಯಲ್ಲಿ ಚುರುಕಿನಿಂದ ಕೆಲವು ಸಕಾರಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಎದ್ದು ಕಾಣುತ್ತಿದ್ದಾರೆ. ವಿಶೇಷವಾಗಿ, ಹೋಟೆಲ್‌ಗಳ ನೈರ್ಮಲ್ಯ, ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ನಿಟ್ಟಿನಲ್ಲಿ ಅವರು ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ಸಾರ್ವಜನಿಕರ ಗಮನ ಸೆಳೆದಿವೆ. ಈ ಮೂವರನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ಸಚಿವರುಗಳ ನೈಜ ಸಾಧನೆಗಳನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಇದು ಸರ್ಕಾರದ ಆಡಳಿತದ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿದೆ.

DK shivakumar bangalore

ಸರ್ಕಾರದ ಮೊದಲ ಮೂರು ತಿಂಗಳ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ಸಂಪೂರ್ಣವಾಗಿ ‘ನಗರ ಕೇಂದ್ರಿತ’ ಅಥವಾ ಕೇವಲ ‘ಬೆಂಗಳೂರು ಕೇಂದ್ರಿತ’ ಸರ್ಕಾರ ಎಂಬಂತೆ ಕಾಣುತ್ತಿತ್ತು. ಗ್ರಾಮೀಣ ಭಾಗವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಅಸಮಾಧಾನ ಶುರುವಾಗುವ ಸಾಧ್ಯತೆಯೂ ಇತ್ತು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ವಲಯವನ್ನು ಗುರಿಯಾಗಿಸಿಕೊಂಡು ಹಲವು ಯೋಜನೆಗಳನ್ನು ಪ್ರಕಟಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಯತ್ನ ಮಾಡಿದೆ. ತೀವ್ರ ಬರ ಕಾಡುವ ವರ್ಷದಲ್ಲಿ ಇದಿಷ್ಟೇ ಸಾಕೇ ಎಂಬ ಪ್ರಶ್ನೆ ಹೇಗೂ ಇದ್ದೇ ಇದೆ. ಇದೇ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಒತ್ತು ನೀಡಲಾಗಿದ್ದು, ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5ರಷ್ಟು ಮೀಸಲಾತಿ, 1,000 ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಅಭಿವೃದ್ಧಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಸಿಎಂ ವಿದ್ಯಾರ್ಥಿ ಸಹಾಯ ಹಸ್ತ’ ಯೋಜನೆಯಡಿ ಉಚಿತ ತರಬೇತಿಯನ್ನು ಘೋಷಿಸಲಾಗಿದೆ.

ಶಿಕ್ಷಣದ ಜೊತೆಗೆ ಕೃಷಿ ವಲಯಕ್ಕೂ ಇಂದಿನ ಕಾರ್ಯಕ್ರಮದಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ‘ರೈತರು, ಗ್ರಾಮ ಸಮೃದ್ಧಿ ಮತ್ತು ಕೃಷಿ’ ಪರಿಕಲ್ಪನೆಯಡಿ, ರೈತರ ಏಳಿಗೆಗಾಗಿ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ, ಗ್ರಾಮೀಣ ಬದುಕಿನ ನೈಜ ಪರಿಚಯಕ್ಕಾಗಿ ‘ಗ್ರಾಮಾನುಭವ’, ಹಾಗೂ ಕರಾವಳಿ-ಮಲೆನಾಡು ಭಾಗಕ್ಕೆ ‘ತೆಂಗಿನ ಸಿರಿ’ ಯೋಜನೆ ಪ್ರಕಟಿಸಲಾಗಿದೆ. ಆಧುನಿಕ ಕೃಷಿಗಾಗಿ ‘ಸಿಎಂ ರೈತ ಚೈತನ್ಯ – ಡಿಜಿಟಲ್ ಅಗ್ರಿ-ಟೆಕ್ ಮಿಷನ್’, ರಫ್ತಿಗೆ ಉತ್ತೇಜನ ನೀಡಲು ‘ಕೃಷಿ ರಫ್ತು ಮಿಷನ್ – KAPPEC ಪುನರ್ರಚನೆ’, ಹವಾಮಾನ ಆಧಾರಿತ ‘ಒಣಭೂಮಿ ಕೃಷಿ ನೀತಿ’ ಮತ್ತು ಪೌಷ್ಟಿಕಾಂಶ ವೃದ್ಧಿಗೆ ‘ಕರ್ನಾಟಕ ಪ್ರೋಟೀನ್ ಮಿಷನ್’ನಂತಹ ದೀರ್ಘಕಾಲೀನ ಯೋಜನೆಗಳನ್ನು ಘೋಷಿಸಲಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ, ಸೂರು ಇಲ್ಲದ ಬಡವರ ನೆರವಿಗಾಗಿ ‘ನಿವೇಶನ ರಹಿತ ಕುಟುಂಬಗಳಿಗೆ ಸೈಟ್’ ಒದಗಿಸುವ ಮಹತ್ವದ ಭರವಸೆಯನ್ನು ಸರ್ಕಾರ ನೀಡಿದೆ.

ಡಿ.ಕೆ. ಶಿವಕುಮಾರ್ ಸರ್ಕಾರದ ನೂರು ದಿನಗಳ ಆಡಳಿತವು ರಾಜಕೀಯವಾಗಿ ಕೆಲವು ಏರಿಳಿತಗಳನ್ನು ಕಂಡಿದ್ದರೂ, ತನ್ನ ತಪ್ಪುಗಳನ್ನು ಬೇಗನೆ ತಿದ್ದಿಕೊಳ್ಳುವ ಜಾಣ್ಮೆ ತೋರುವ ಮೂಲಕ ಭರವಸೆ ಮೂಡಿಸಿದೆ. ಆದರೆ, ನೂರು ದಿನಗಳ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಈ ಹತ್ತಾರು ‘ಮಹತ್ವಾಕಾಂಕ್ಷಿ ಘೋಷಣೆಗಳು’ ಕೇವಲ ಕಾಗದದ ಮೇಲಿನ ಪ್ರಚಾರದ ಸರಕಾಗದೆ ವಾಸ್ತವದಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತವೆ ಎಂಬುದು ಅತಿಮುಖ್ಯ ಪ್ರಶ್ನೆಯಾಗಿದೆ. ಈ ಎಲ್ಲಾ ಬೃಹತ್ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಬೇಕಾದ ಆಡಳಿತಾತ್ಮಕ ಇಚ್ಛಾಶಕ್ತಿ ಹಾಗೂ ಅಪಾರ ಆರ್ಥಿಕ ಸಂಪನ್ಮೂಲವನ್ನು ಒದಗಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಈ ಯೋಜನೆಗಳು ಕಟ್ಟಕಡೆಯ ಮನುಷ್ಯನಿಗೆ ತಲುಪಿದಾಗ ಮಾತ್ರ ಈ ನವೀನ ಸರ್ಕಾರದ ನೈಜ ಯಶಸ್ಸು ನಿರ್ಧಾರವಾಗಲಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...