ಬಂಗಾಳದ ಸಂಸ್ಕೃತಿಯಲ್ಲಿ ಮೀನನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮದುವೆ ಶಾಸ್ತ್ರಗಳು ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೀನು ಅತ್ಯಗತ್ಯ. ಬಂಗಾಳಿಗಳ ಅತಿದೊಡ್ಡ ಹಬ್ಬವಾದ ದುರ್ಗಾ ಪೂಜೆಯೂ ಮಾಂಸಾಹಾರಿ ಖಾದ್ಯಗಳಿಲ್ಲದೆ ಅಪೂರ್ಣ.
‘ಮಾಛೆ ಭಾಟೆ ಬಂಗಾಳಿ’ (ಮೀನು-ಅನ್ನದಿಂದಲೇ ಬಂಗಾಳಿ) – ಶತಮಾನಗಳಷ್ಟು ಹಳೆಯದು ಈ ಗಾದೆ. ಇದರರ್ಥ ‘ಮೀನು ಮತ್ತು ಅನ್ನ ಬಂಗಾಳಿ ಅಸ್ಮಿತೆಯ ಅವಿಭಾಜ್ಯ ಅಂಗ’. ಸದ್ಯ, ಈ ಗಾದೆಯು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪ್ರಚಲಿತದಲ್ಲಿದೆ. ಪ್ರಸ್ತುತ ಚುನಾವಣೆಯು ಕೇವಲ ಬೀದಿಗಳಲ್ಲಿ ಮಾತ್ರವಲ್ಲದೆ, ಬಂಗಾಳಿಗಳ ಊಟದ ತಟ್ಟೆಯ ಮೇಲೆಯೂ ನಡೆಯಲಿದೆ ಎಂಬುದನ್ನು ಸೂಚಿಸುತ್ತಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿಯನ್ನು ‘ಸಸ್ಯಾಹಾರ’ವನ್ನು ಹೇರುವ ಪಕ್ಷವೆಂದು ಬಿಂಬಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳಿಗಳ ಆಹಾರ ಪದ್ಧತಿಯಲ್ಲಿ ಹಸ್ತಕ್ಷೇಪ ಮಾಡಲಿದೆ. ಮೀನು-ಮಾಸಂವನ್ನು ನಿಷೇಧಿಸಲಿದೆ. ಬಿಜೆಪಿ ‘ಹೊರಗಿನ ಶಕ್ತಿ’ ಎಂದು ಟಿಎಂಸಿ ಆರೋಪಿಸುತ್ತಿದೆ. ಆಹಾರ ಕುರಿತಾದ ಟಿಎಂಸಿಯ ಆರೋಪಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿಗಳು ಸಂದರ್ಶನಗಳ ವೇಳೆ ಮೀನು ಸವಿಯುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಭ್ಯರ್ಥಿಯೊಬ್ಬರು ಬಂಗಾಳಿಗಳ ನೆಚ್ಚಿನ ‘ಕಾಟ್ಲಾ’ ಮೀನನ್ನು ಕೈಯಲ್ಲಿ ಹಿಡಿದುಕೊಂಡೇ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಬಂಗಾಳಿ ಮತದಾರರು ತಮ್ಮ ಸಂಸ್ಕೃತಿ ಮತ್ತು ಆಹಾರ ಪದ್ಧತಿ ಮೇಲೆ ಬಹಳ ಮಮತೆ ಹೊಂದಿದ್ದಾರೆ ಎಂಬುದು ಬಿಜೆಪಿಗೂ ತಿಳಿದಿದೆ. ಆದ್ದರಿಂದಲೇ, ಟಿಎಂಸಿ ಮಾಡುತ್ತಿರುವ ಆರೋಪಗಳನ್ನು ಎದುರಿಸಲು ಚುನಾವಣಾ ಸಮಯದಲ್ಲಿ ಬಿಜೆಪಿಗರು ಮೀನಿನ ಮೇಲೆ ಪ್ರೀತಿಯ ಪ್ರದರ್ಶನ ಮಾಡುತ್ತಿದ್ದಾರೆ. ಆದಾಗ್ಯೂ, ಬಿಜೆಪಿಗೆ ‘ಹೊರಗಿನವರು’ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ತಂತ್ರಗಳನ್ನು ಹೆಣೆಯುತ್ತಿದೆ. ಸದ್ಯಕ್ಕೆ, ಆಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮತದಾರರ ಕೆಂಗಣ್ಣಿಗೆ ಗುರಿಯಾಗದೇ ಇರಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ.
ಬಂಗಾಳಿಗಳ ಆಹಾರ ಪದ್ದತಿಯಲ್ಲಿ ಮೀನು ಅವಿಭಾಜ್ಯ ಅಂಗವಾಗಿದೆ. ಬಂಗಾಳಿಗಳು ಮೀನನ್ನು ತಮ್ಮ ಸಂಸ್ಕೃತಿಗೆ ಆರಿಸಿಕೊಂಡಿದ್ದಲ್ಲ; ಅಲ್ಲಿನ ಭೂಗೋಳವೇ ಅದನ್ನು ನೀಡಿದೆ. ಇಂದಿನ ಬಂಗಾಳವು ವಿಶ್ವದ ಅತಿದೊಡ್ಡ ನದಿ ಮುಖಜ ಭೂಮಿಯಲ್ಲಿ ಭಾಗವಾಗಿದೆ. ಅಲ್ಲಿ ಹೇರಳವಾಗಿ ಮೀನು ಸಿಗುತ್ತದೆ. ಸಹಜವಾಗಿಯೇ ಮೀನು ಅಲ್ಲಿನ ಪ್ರಮುಖ ಬೆಳೆಯಾದ ಅಕ್ಕಿಯೊಂದಿಗೆ ದೈನಂದಿನ ಆಹಾರವಾಗಿದೆ. ಪ್ರೋಟೀನ್ (ಮೀಸು) ಮತ್ತು ಕಾರ್ಬೋಹೈಡ್ರೇಟ್ (ಅಕ್ಕಿ)ಗಳನ್ನು ಒಳಗೊಂಡ ಈ ಆಹಾರವು ಅಲ್ಲಿನ ಆರ್ದ್ರ ಹವಾಮಾನಕ್ಕೆ ಸೂಕ್ತವೂ ಆಗಿದೆ.
ಆದಾಗ್ಯೂ, ಬಂಗಾಳದಲ್ಲಿ ಮೀನಿನ ಪಾತ್ರ ಕೇವಲ ಊಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬಂಗಾಳದ ಸಂಸ್ಕೃತಿಯಲ್ಲಿ ಮೀನನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮದುವೆ ಶಾಸ್ತ್ರಗಳು ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೀನು ಅತ್ಯಗತ್ಯ. ಬಂಗಾಳಿಗಳ ಅತಿದೊಡ್ಡ ಹಬ್ಬವಾದ ದುರ್ಗಾ ಪೂಜೆಯೂ ಮಾಂಸಾಹಾರಿ ಖಾದ್ಯಗಳಿಲ್ಲದೆ ಅಪೂರ್ಣ. ಹಿಂದು ಹಬ್ಬಗಳ ಸಮಯದಲ್ಲಿ ಮಾಂಸಾಹಾರ ಸೇವನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಗಳು ನಡೆದರೂ, ಬಂಗಾಳಿಗಳಿಗೆ ಇದು ಅವರ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಬೆರೆತುಹೋಗಿದೆ.
ಆದ್ದರಿಂದಲೇ, ಮಾಂಸಾಹಾರವನ್ನು ಅಶುಭವೆಂದು ಪ್ರಚಾರ ಮಾಡುವ ಬಿಜೆಪಿಯನ್ನು ಬಗ್ಗುಬಡಿಯಲು ಮಮತಾ ಮತ್ತು ಅವರ ಟಿಎಂಸಿ, ಬಿಜೆಪಿಗರನ್ನು ಹೊರಗಿನವರು ಮತ್ತು ಬಂಗಾಳ ಸಂಸ್ಕೃತಿಯ ಮೇಲೆ ಸನಾತನವನ್ನು ಹೇರುವವರು ಎಂದು ಬಿಂಬಿಸುತ್ತಿದೆ. ಬಿಜೆಪಿ ಬಂಗಾಳದ ಸಾಂಸ್ಕೃತಿಕ ಪರಿಸರವನ್ನು ಅರ್ಥಮಾಡಿಕೊಳ್ಳದ ಹೊರಗಿನ ಶಕ್ತಿ ಎಂದು ಮಮತಾ ಬ್ಯಾನರ್ಜಿ ದಿನನಿತ್ಯ ಆರೋಪಿಸುತ್ತಲೇ ಇದ್ದಾರೆ, ವಾಗ್ದಾಳಿ ನಡೆಸುತ್ತಿದ್ದಾರೆ.
ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಗೋಮಾಂಸದಂತಹ ನಿರ್ದಿಷ್ಟ ಮಾಂಸಗಳನ್ನು ನಿಷೇಧಿಸಿದೆ. ಜೊತೆಗೆ, ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರ ‘ಮಾಂಸ ಮಾರಾಟ ನಿಷೇಧ’ದ ಹೇಳಿಕೆಗಳನ್ನು ನೀಡಿದ್ದಾರೆ. ಈ ಘಟನಾವಳಿಗಳನ್ನು ಉಲ್ಲೇಖಿಸುತ್ತಿರುವ ಟಿಎಂಸಿ, “ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳಿಗಳ ಆಹಾರ ಪದ್ಧತಿಯನ್ನು ಹತ್ತಿಕ್ಕಬಹುದು. ಅವರು ಬಂಗಾಳದಲ್ಲಿ ಮೀನು ಮತ್ತು ಮಾಂಸವನ್ನು ನಿಷೇಧಿಸುತ್ತಾರೆ. ಬಂಗಾಳ ಬದುಕುವುದು ಮೀನು ಮತ್ತು ಅನ್ನದ ಮೇಲೆಯೇ. ಆದರೆ, ಅದನ್ನೇ ಬಿಜೆಪಿ ಕಿತ್ತುಕೊಳ್ಳುತ್ತದೆ” ಎಂದು ದೂರುತ್ತಿದೆ.
2024ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಅಭಿಷೇಕ್ ಬ್ಯಾನರ್ಜಿ ಅವರು, “ನಾನು ದಿನಕ್ಕೆ ಎರಡು ಬಾರಿ ಮೀನು ತಿನ್ನುತ್ತೇನೆ. ನಮ್ಮ ದುರ್ಗಾ ಪೂಜೆ ಮತ್ತು ಕಾಳಿ ಪೂಜೆಗಳು ಮೀನು ಮತ್ತು ಮಾಂಸವಿಲ್ಲದೆ ನಡೆಯುವುದಿಲ್ಲ. ನಮ್ಮ ಬಂಗಾಳದ ಸಂಸ್ಕೃತಿ ಬಿಜೆಪಿಗೆ ಅರ್ಥವಾಗುವುದಿಲ್ಲ” ಎಂದು ಟೀಕಿಸಿದ್ದರು. ಈಗ ವಿಧಾನಸಭಾ ಚುನಾವಣೆಯಲ್ಲಿಯೂ ಟಿಎಂಸಿ ಇದೇ ಆಹಾರ ಪದ್ಧತಿಯ ಮೇಲಿನ ದಾಳಿಯ ಆತಂಕವನ್ನು ಮತದಾರರ ಮುಂದಿಡುತ್ತಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾಗೆ ಮತ್ತೆ ಅಧಿಕಾರ: ಸಮೀಕ್ಷಾ ವರದಿ
2021ರ ಚುನಾವಣೆಯಲ್ಲಿ ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಈ ಬಾರಿ ಹೇಗಾದರೂ ಮಾಡಿ ಅಧಿಕಾರಕ್ಕೇರಲು ಹವಣಿಸುತ್ತಿದೆ. ಅದಕ್ಕಾಗಿ, ಪಕ್ಷವು ತನ್ನ ಸಂವಹನ ಶೈಲಿಯನ್ನು ಬದಲಿಸಿಕೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಶಮೀಕ್ ಭಟ್ಟಾಚಾರ್ಯ ಅವರು ಟಿಎಂಸಿ ಆರೋಪಕ್ಕೆ ಉತ್ತರಿಸುತ್ತಾ, “ಬಂಗಾಳಿಗಳು ಮೀನಿಲ್ಲದೆ ಇರಲು ಸಾಧ್ಯವೇ? ಬಂಗಾಳದಲ್ಲಿ ಮೀನು ಮತ್ತು ಮಾಂಸ ಇದ್ದೇ ಇರುತ್ತದೆ” ಎಂದಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಮಾಂಸದ ಮುಕ್ತ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನೂ ಹೇಳುತ್ತಿದ್ದಾರೆ.
ಬಿಜೆಪಿ ಅಧ್ಯಕ್ಷರ ಹೇಳಿಕೆಯ ಬೆನ್ನಲ್ಲೇ, ಅಭ್ಯರ್ಥಿಗಳು ಕ್ಯಾಮೆರಾದ ಮುಂದೆ ಮೀನು ಸವಿಯುವ ದೃಶ್ಯಗಳು ಕಂಡುಬರುತ್ತಿವೆ. ದಕ್ಷಿಣ ಕೋಲ್ಕತ್ತಾದ ರಾಶ್‌ಬೆಹರಿ ಕ್ಷೇತ್ರದ ಅಭ್ಯರ್ಥಿ ಸ್ವಪನ್ ದಾಸ್‌ಗುಪ್ತ ಅವರು ಮೀನು-ಊಟ ಸವಿಯುತ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇನ್ನು ಶಿಬ್‌ಪುರ ಅಭ್ಯರ್ಥಿ ರುದ್ರನಿಲ್ ಘೋಷ್ ಕೂಡ ಚುನಾವಣಾ ಪ್ರಚಾರದ ನಡುವೆ ಮೀನು-ಅನ್ನ ಊಟ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಬಿಧಾನನಗರದ ಬಿಜೆಪಿ ಅಭ್ಯರ್ಥಿ ಡಾ. ಶರದವತ್ ಮುಖೋಪಾಧ್ಯಾಯ ಅವರು ಕೈಯಲ್ಲಿ ದೊಡ್ಡ ‘ಕಾಟ್ಲಾ’ ಮೀನನ್ನು ಹಿಡಿದುಕೊಂಡೇ ಮನೆ-ಮನೆ ಪ್ರಚಾರಕ್ಕೆ ತೆರಳಿದ್ದಾರೆ. “ನಮ್ಮ ಬಗ್ಗೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನಾವು ನಮ್ಮಿಷ್ಟದಂತೆ ಮೀನು, ಮಾಂಸ ಮತ್ತು ಚಿಕನ್ ತಿನ್ನುತ್ತೇವೆ. ಬಂಗಾಳಿ ಮದುವೆಗಳಲ್ಲಿ ಹೆಣ್ಣಿನ ಮನೆಯವರು ಗಂಡಿನ ಮನೆಗೆ ಉಡುಗೊರೆಯಾಗಿ ಕಳುಹಿಸುವ ಅದೇ ಮೀನನ್ನು ನಾನು ಇಂದು ಪ್ರಚಾರಕ್ಕೆ ತಂದಿದ್ದೇನೆ” ಎಂದು ಅವರು ಹೇಳುತ್ತಿದ್ದಾರೆ.
ಈ ಚುನಾವಣೆಯಲ್ಲಿ ‘ಮಾಛೆ ಭಾಟೆ ಬಂಗಾಳಿ’ ಗಾದೆಯು ರಾಜಕೀಯ ಯುದ್ಧದ ಮುಖ್ಯ ಶಸ್ತ್ರವಾಗಿ ಬದಲಾಗಿದೆ. ಇದು ಬಂಗಾಳದ ರಾಜಕೀಯದಲ್ಲಿ ಸಂಸ್ಕೃತಿ ಮತ್ತು ಗುರುತಿನ ಎಷ್ಟು ಶಕ್ತಿಶಾಲಿ ಪಾತ್ರ ವಹಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಇದರ ಫಲ ಏನಾಗಲಿದೆ ಎಂಬುದು ಚುನಾವಣೆ ಮತ್ತು ಫಲಿತಾಂಶದಲ್ಲಿ ಗೊತ್ತಾಗಲಿದೆ.



