ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ‌ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!

Date:

ಅಧಿಕಾರಸ್ಥರು ಈ ‘ಡಿಜಿಟಲ್ ಆಕ್ರೋಶ’ವನ್ನು ಆನ್‌ಲೈನ್ ಟ್ರೆಂಡ್ ಎಂದು ಭ್ರಮಿಸಿ, ನೈಜ ಸಮಸ್ಯೆಗಳಿಗೆ ಪಾರದರ್ಶಕ ಪರಿಹಾರ ನೀಡದಿದ್ದರೆ, ಇತಿಹಾಸದ ಪುಟಗಳು ಭಾರತದಲ್ಲೂ ಹೊಸದೊಂದು ಅಧ್ಯಾಯ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ!

- Advertisement -

ಇತಿಹಾಸದಲ್ಲಿ ಕ್ರಾಂತಿಗಳೆಂದರೆ ನೆನಪಾಗುವುದು ರಷ್ಯಾದ ಬೊಲ್ಶೆವಿಕ್ ಕ್ರಾಂತಿ, ಫ್ರೆಂಚ್ ಕ್ರಾಂತಿ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಇತ್ಯಾದಿ. ಈ ಕ್ರಾಂತಿಗಳ ಹಿಂದೆ ಒಬ್ಬ ಪ್ರಭಾವಿ ನಾಯಕ, ಒಂದು ನಿರ್ದಿಷ್ಟ ಸಿದ್ಧಾಂತ ಅಥವಾ ಬಲಿಷ್ಠ ಸಂಘಟನೆ ಇರುತ್ತಿತ್ತು. ಆದರೆ, 21ನೇ ಶತಮಾನದ 3ನೇ ದಶಕಕ್ಕೆ ಕಾಲಿಡುತ್ತಿರುವ ಇಂದಿನ ದಿನಮಾನಗಳಲ್ಲಿ ಕ್ರಾಂತಿಯ ಸ್ವರೂಪವೇ ಬದಲಾಗಿ ಹೋಗಿದೆ. ಈಗಿನ ಹೋರಾಟಗಳಿಗೆ ಯಾವುದೇ ಮುಖವಿರಲ್ಲ, ಕಚೇರಿಗಳಿರಲ್ಲ, ಅಧಿಕೃತ ನಾಯಕನೂ ಇರಲ್ಲ. ಇಂದಿನ ಕ್ರಾಂತಿಕಾರಿಗಳ ಕೈಯಲ್ಲಿರುವ ಒಂದು ಸ್ಮಾರ್ಟ್‌ಫೋನ್ ಸಾಮ್ರಾಜ್ಯಗಳನ್ನೇ ನಡುಗಿಸುತ್ತಿದೆ! ಎಂದರೆ ಆಶ್ಚರ್ಯವಿಲ್ಲ. ನೇಪಾಳದ ರಾಜಕೀಯ ತಲ್ಲಣಗಳು ಮತ್ತು ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಮಂಡಿಯೂರಿಸಿದ ‘ಜೆನ್ ಝೀ’ (Gen Z) ಯುವಶಕ್ತಿಯ ಆರ್ಭಟ ಭಾರತದಲ್ಲೂ ಮುಂದುವರೆಯುವ ಎಲ್ಲ ಮುನ್ಸೂಚನೆಗಳನ್ನು ಸದ್ಯ ಸಂಚಲನ ಮೂಡಿಸುತ್ತಿರುವ ‘ಕಾಕ್ರೋಚ್ ಪಾರ್ಟಿ’ ನೀಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಏನಿದು ‘ಕಾಕ್ರೋಚ್’ ತಂತ್ರ?

ಬಾಂಗ್ಲಾದೇಶ ಸೇರಿದಂತೆ ನೆರೆಹೊರೆಯ ದೇಶಗಳಲ್ಲಿ ಯುವಕರು ಸಂಘಟಿತರಾದ ಶೈಲಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಕಾಕ್ರೋಚ್ ಥಿಯರಿ’ ಅಥವಾ ಜಿರಳೆ ತಂತ್ರ ಎಂದೇ ಬಣ್ಣಿಸಲಾಗುತ್ತಿದೆ. ಜಿರಳೆಗಳನ್ನು ಜಗತ್ತಿನ ಅತ್ಯಂತ ʼಚೇತೋಹಾರಿʼ ಕೀಟಗಳೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಎಷ್ಟೇ ಹತ್ತಿಕ್ಕಿದರೂ, ಅಣುಬಾಂಬ್ ದಾಳಿಯಾದರೂ ಬದುಕುಳಿಯುವ ಸಾಮರ್ಥ್ಯ ಅವುಗಳಿಗಿದೆ.

ಇದೇ ಮಾದರಿಯಲ್ಲಿ ಇಂದಿನ ಯುವ ಪೀಳಿಗೆ ಇನ್‌ಸ್ಟಾಗ್ರಾಮ್, ಟ್ವಿಟರ್, ಟೆಲಿಗ್ರಾಮ್, ಸಿಗ್ನಲ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಅನಾಮಧೇಯವಾಗಿ ಹೋರಾಟಗಳನ್ನು ರೂಪಿಸುತ್ತಿದೆ. ಸರ್ಕಾರಗಳು ಇಂಟರ್ನೆಟ್ ಬಂದ್ ಮಾಡಲಿ ಅಥವಾ ಒಬ್ಬ ನಾಯಕನನ್ನು ಜೈಲಿಗೆ ತಳ್ಳಲಿ ಈ ಹೋರಾಟ ನಿಲ್ಲುವುದಿಲ್ಲ. ಏಕೆಂದರೆ ಈ ಕ್ರಾಂತಿಗೆ ಒಬ್ಬನೇ ನಾಯಕನಿರುವುದಿಲ್ಲ, ಬೀದಿಗಿಳಿಯುವ ಪ್ರತಿಯೊಬ್ಬ ಯುವಕನೂ ತಾನೇ ನಾಯಕನಾಗಿರುತ್ತಾನೆ. ಒಂದು ಜಿರಳೆಯನ್ನು ಕೊಂದರೆ ಮತ್ಯಾವುದೋ ಮೂಲೆ ಮುಡುಕಿನಿಂದ ನೂರಾರು ಜಿರಳೆಗಳು ಹೊರಬರುವಂತೆ, ಈ ಯುವ ಪಡೆ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತದೆ. ಇದೇ ʼಕಾಕ್ರೋಚ್‌ ತಂತ್ರʼ ಅಥವಾ ʼಕಾಕ್ರೋಚ್‌ ಥಿಯರಿʼ!

ಬಾಂಗ್ಲಾದ ಜೆನ್-ಝೀ ಕ್ರಾಂತಿ ಹೇಗಿತ್ತು?

2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಜೆನ್‌-ಝೀ ಕ್ರಾಂತಿ ಇಡೀ ಪ್ರಪಂಚವನ್ನು ತನ್ನತ್ತ ತಿರುಗಿಸಿಕೊಂಡಿತ್ತು. ಕ್ರಾಂತಿಗೆ ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಯೋಧರ ವಂಶಸ್ಥರಿಗೆ ನೀಡಲಾಗಿದ್ದ ಶೇಕಡಾ 30 ರಷ್ಟು ಮೀಸಲಾತಿಯೇ ಪ್ರಮುಖ ಕಾರಣವಾಗಿತ್ತು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಜಾರಿಯಾದ ಈ ನಿಯಮದ ವಿರುದ್ಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡಲಾರಂಭಿಸಿದರು. ಆದರೆ, ಅಂದಿನ ಪ್ರಧಾನಿ ಶೇಖ್ ಹಸೀನಾ , ಪ್ರತಿಭಟನಾಕಾರರನ್ನು ದೇಶದ್ರೋಹಿಗಳಿಗೆ ಹೋಲಿಸಿ ಮಾತನಾಡಿದ್ದು ಯುವಕರ ಪಿತ್ತ ನೆತ್ತಿಗೇರಿಸಿತ್ತು.

ಪ್ರತಿಭಟನೆಯನ್ನು ಹತ್ತಿಕ್ಕಲು ಹಸೀನಾ ಸರ್ಕಾರ ಇಡೀ ದೇಶದಲ್ಲಿ ಕರ್ಫ್ಯೂ ಹೇರಿ, ಇಂಟರ್ನೆಟ್ ಸ್ಥಗಿತಗೊಳಿಸಿ, ಮಿಲಿಟರಿಯನ್ನು ಬೀದಿಗಿಳಿಸಿತು. ಪೊಲೀಸರು ನಡೆಸಿದ ಭೀಕರ ದಮನಕಾರಿತನ ಮತ್ತು ಗುಂಡಿನ ದಾಳಿಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಲಿಯಾದಾಗ, ಈ ಹೋರಾಟ ಅಕ್ಷರಶಃ ಕ್ರಾಂತಿಯಾಗಿ ರೂಪಾಂತರಗೊಂಡಿತು. ವಿದ್ಯಾರ್ಥಿಗಳ ಜೊತೆಗೆ ದೇಶದ ಸಾಮಾನ್ಯ ನಾಗರಿಕರೂ ಕೈಜೋಡಿಸಿದ್ದರಿಂದ ಜನಸಾಮಾನ್ಯರ ದಂಗೆಯಾಗಿ ಮಾರ್ಪಟ್ಟಿತು.

WhatsApp Image 2026 05 25 at 4.57.19 PM

ಕೊನೆಗೆ ಲಕ್ಷಾಂತರ ಯುವಕರ ದಂಡು ಕರ್ಫ್ಯೂ ಲೆಕ್ಕಿಸದೆ ರಾಜಧಾನಿ ಢಾಕಾದಲ್ಲಿದ್ದ ಪ್ರಧಾನಿ ನಿವಾಸದ ಕಡೆಗೆ ನುಗ್ಗಿ ಬಂದಿತು. ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿರುವುದನ್ನು ಮತ್ತು ಸೇನೆಯು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ನಿರಾಕರಿಸಿದ್ದನ್ನು ಅರಿತ ಹಸೀನಾ, ತಮ್ಮ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ರಾಜೀನಾಮೆ ನೀಡಿ ಮಿಲಿಟರಿ ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪಲಾಯನ ಮಾಡಿದರು. ತಂತ್ರಜ್ಞಾನ ಮತ್ತು ಒಗ್ಗಟ್ಟಿನ ಬಲದಿಂದ ಯುವ ಪೀಳಿಗೆ ಇಡೀ ಸರ್ವಾಧಿಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಈ ಘಟನೆ ಜಾಗತಿಕ ರಾಜಕಾರಣದಲ್ಲಿ ಅತ್ಯಂತ ರೋಚಕ ಅಧ್ಯಾಯವಾಗಿ ದಾಖಲಾಯಿತು.

ನೆರೆಯ ನೇಪಾಳದಲ್ಲೂ ನಡೆದಿತ್ತು ಕ್ರಾಂತಿ!

ನೇಪಾಳದಲ್ಲಿ ನಡೆದ ಯುವ ಕ್ರಾಂತಿಯು ರಾಜಪ್ರಭುತ್ವ ಮತ್ತು ಹಳೆಯ ರಾಜಕೀಯ ನಾಯಕರ ಸರ್ವಾಧಿಕಾರಿ ಧೋರಣೆಯ ವಿರುದ್ಧದ ದೀರ್ಘಕಾಲದ ಆಕ್ರೋಶದ ಫಲವಾಗಿತ್ತು. ಶತಮಾನಗಳ ಇತಿಹಾಸವಿದ್ದ ರಾಜಪ್ರಭುತ್ವವನ್ನು ಕಿತ್ತೊಗೆಯಲು ಮತ್ತು ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟ ಹಳೇ ರಾಜಕಾರಣಿಗಳನ್ನು ಮೂಲೆಗುಂಪು ಮಾಡಲು ಅಲ್ಲಿನ ಯುವ ಸಮೂಹ ಮುಂಚೂಣಿಯಲ್ಲಿ ನಿಂತಿತು. ನೇಪಾಳದಲ್ಲಿ 2006ರಲ್ಲಿ ನಡೆದ ‘ಜನ ಆಂದೋಲನ-2’ ಯುವ ಕ್ರಾಂತಿಯ ಮೊದಲ ಮೈಲಿಗಲ್ಲು. ಅಂದು ರಾಜ ಜ್ಞಾನೇಂದ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರದ್ದುಗೊಳಿಸಿ, ಸಂಪೂರ್ಣ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಾಗ ನೇಪಾಳದ ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಬೀದಿಗಿಳಿದು ಭೀಕರ ಪ್ರತಿಭಟನೆ ಆರಂಭಿಸಿತು. 19 ದಿನಗಳ ಕಾಲ ನಡೆದ ಈ ಯುವ ಕ್ರಾಂತಿಯ ತೀವ್ರತೆಗೆ ಹೆದರಿದ ರಾಜ, ಅಂತಿಮವಾಗಿ ಸಂಸತ್ತನ್ನು ಮರುಸ್ಥಾಪಿಸಬೇಕಾಯಿತು. ಇದು ಮುಂದೆ 240 ವರ್ಷಗಳಷ್ಟು ಹಳೆಯದಾದ ನೇಪಾಳದ ರಾಜಪ್ರಭುತ್ವ ಸಂಪೂರ್ಣವಾಗಿ ಅಂತ್ಯಗೊಂಡು, ದೇಶವು ಗಣರಾಜ್ಯವಾಗಲು (Republic) ಭದ್ರ ಬುನಾದಿ ಹಾಕಿತು.

ರಾಜಪ್ರಭುತ್ವ ಅಂತ್ಯಗೊಂಡ ನಂತರವೂ ನೇಪಾಳದ ಹಿರಿಯ ರಾಜಕಾರಣಿಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಆರ್ಥಿಕ ವೈಫಲ್ಯದಿಂದ ದೇಶವನ್ನು ಕಾಡತೊಡಗಿದರು. ಉದ್ಯೋಗಾವಕಾಶಗಳಿಲ್ಲದೆ ಲಕ್ಷಾಂತರ ಯುವಕರು ದೇಶ ಬಿಟ್ಟು ವಿದೇಶಗಳಿಗೆ ವಲಸೆ ಹೋಗಬೇಕಾಯಿತು. ಇದರಿಂದ ಬೇಸತ್ತ ‘ಜೆನ್-ಝೀ’ (Gen Z) ಪೀಳಿಗೆ, ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಅಭಿಯಾನವನ್ನೇ ಆರಂಭಿಸಿತು. ಯುವಕರು ಸಂಘಟಿತರಾದರು.

ನೇಪಾಳದ ಯುವಕರು ತಮ್ಮ ಆಕ್ರೋಶವನ್ನು ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡರು. ಫಲವಾಗಿ 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತು ಇತ್ತೀಚಿನ ಸ್ಥಳೀಯ ಚುನಾವಣೆಗಳಲ್ಲಿ ಇತಿಹಾಸ ಸೃಷ್ಟಿಯಾಯಿತು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಮಾಜಿ ಪತ್ರಕರ್ತ ರಬಿ ಲಮಿಚ್ಚಾನೆ ನೇತೃತ್ವದ ಯುವಕರ ಪಕ್ಷ (RSP) ಮತ್ತು ಕಠ್ಮಂಡುವಿನ ಮೇಯರ್ ಆಗಿ ಆಯ್ಕೆಯಾದ ಯುವ ಇಂಜಿನಿಯರ್ ಬಾಲೇನ್ ಶಾ ಅವರಂತಹ ಹೊಸ ತಲೆಮಾರಿನ ನಾಯಕರು ಸಾಂಪ್ರದಾಯಿಕ ರಾಜಕೀಯ ದಿಗ್ಗಜರನ್ನು ಸೋಲಿಸಿ ಅಧಿಕಾರ ಹಿಡಿದರು. ಈ ಮೂಲಕ ನೇಪಾಳದ ಯುವ ಸಮೂಹ ರಕ್ತಪಾತವಿಲ್ಲದೆಯೂ ಕ್ರಾಂತಿಯ ಮೂಲಕ ವ್ಯವಸ್ಥೆಯನ್ನು ಬದಲಾಯಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತು.

WhatsApp Image 2026 05 25 at 4.58.09 PM

ಭಾರತದ ‘ಜೆನ್ ಝೀ’ ಮನಸ್ಥಿತಿ ಹೇಗಿದೆ?

ಸದ್ಯ ಭಾರತದ ಯುವ ಜನರಲ್ಲಿ ಭಾರೀ ಪ್ರಮಾಣದ ಆಕ್ರೋಶ ಹೊಗೆಯಾಡುತ್ತಿರುವುದಕ್ಕೆ, ಆಗಾಗ ಅದು ಕಿಡಿಕಾರುತ್ತಿರುವುದಕ್ಕೆ ನೂರಾರು ಕಾರಣಗಳನ್ನೇ ನೀಡಬಹುದು.

ಮುಖ್ಯವಾಗಿ ಶಿಕ್ಷಣ ಮತ್ತು ನಿರುದ್ಯೋಗ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಪದವಿ ಪಡೆದ ಯುವಕರಿಗೆ ಅವರ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ನಿರುದ್ಯೋಗದ ಜತೆಗೆ ಓದಿಗೆ ಬೆಲೆಯಿಲ್ಲದಂತಾಗಿರುವ ಪರಿಸ್ಥಿತಿಗಳು ಯುವ ಪೀಳಿಗೆಯನ್ನು ತೀವ್ರ ಹತಾಶೆಗೆ ತಳ್ಳಿವೆ. ಇತ್ತೀಚಿಗೆ ನಡೆದ ನೀಟ್ (NEET) ಪರೀಕ್ಷಾ ಹಗರಣಗಳು, ವಿವಿಧ ಸರ್ಕಾರಿ ಉದ್ಯೋಗ ನೇಮಕಾತಿಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನೇ ತೆಗೆದುಕೊಳ್ಳಿ, ಈ ಪ್ರಕರಣಗಳು ಯುವಕರಲ್ಲಿ ವ್ಯವಸ್ಥೆಯ ಮೇಲಿದ್ದ ನಂಬಿಕೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿವೆ. ಈ ಹತಾಶೆ, ಅಸಹಾಯಕತೆಯೇ ಅವರು ರೊಚ್ಚಿಗೇಳುವಂತೆ ಮಾಡಿರುವುದು ನಿಜ.

ಜಾತಿ, ಧರ್ಮ, ಭಾಷೆ ಅಥವಾ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ನಡೆಯುವ ಹೊಲಸು ರಾಜಕೀಯಕ್ಕೆ ಜೆನ್‌-ಝೀ ಸೊಪ್ಪು ಹಾಕುವುದಿಲ್ಲ. ಅವರಿಗೆ ಬೇಕಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕ ಭದ್ರತೆ ಮತ್ತು ಉತ್ತಮ ಜೀವನಮಟ್ಟ. ರಾಜಕಾರಣಿಗಳ ಪೊಳ್ಳು ಭರವಸೆಗಳು ಇವರನ್ನು ಸುಲಭವಾಗಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.

ಭಾರತದಲ್ಲಿ ‘ಬಾಂಗ್ಲಾ ಮಾದರಿ’ ಪತನ ಅಷ್ಟು ಸುಲಭವಲ್ಲ ಏಕೆ?

ಬಾಂಗ್ಲಾದೇಶ ಅಥವಾ ನೇಪಾಳದಂತೆ ಭಾರತದಲ್ಲಿ ತಕ್ಷಣಕ್ಕೆ ಸರ್ಕಾರವನ್ನು ಉರುಳಿಸುವಂತಹ ದಂಗೆಗಳು ನಡೆಯುವುದು ತೀರಾ ವಿರಳ. ಅದಕ್ಕೆ ಭಾರತದ ಪ್ರಜಾಪ್ರಭುತ್ವದ ವಿಶಿಷ್ಟ ರಚನೆಯೇ ಕಾರಣ.

ಬಾಂಗ್ಲಾದೇಶದಲ್ಲಿ ವಿರೋಧ ಪಕ್ಷಗಳೇ ಇರಲಿಲ್ಲ ಮತ್ತು ಮುಕ್ತ ಚುನಾವಣೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಜನರಿಗೆ ಬೀದಿಗೆ ಇಳಿಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಆದರೆ ಭಾರತದಲ್ಲಿ ಯುವಕರು ತಮ್ಮ ಆಕ್ರೋಶವನ್ನು ತೀರಿಸಿಕೊಳ್ಳಲು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣಾ ವ್ಯವಸ್ಥೆಯಿದೆ. ಸಾರ್ವತ್ರಿಕ ಮತ್ತು ರಾಜ್ಯಗಳ ಚುನಾವಣೆಗಳಲ್ಲೇ ಯುವ ಮತದಾರರು ಆಡಳಿತಾರೂಢ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಿ, ತಮ್ಮ ಶಕ್ತಿಯನ್ನು ಪ್ರದರ್ಶಿಸಬಹುದು. ಆದರೆ, ಸದ್ಯಕ್ಕೆ ಅದು ನಡೆಯುತ್ತಿರುವಂತೆ ಕಾಣುತ್ತಿಲ್ಲ.

ಬಾಂಗ್ಲಾದೇಶವು ಕೇವಲ ಒಂದು ನಿರ್ದಿಷ್ಟ ಭಾಷೆ ಮತ್ತು ಸಣ್ಣ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ದೇಶ. ಅಲ್ಲಿನ ರಾಜಧಾನಿ ಢಾಕಾವನ್ನು ವಶಪಡಿಸಿಕೊಂಡರೆ ಇಡೀ ದೇಶವನ್ನು ನಿಯಂತ್ರಿಸಬಹುದು. ಆದರೆ ಭಾರತ ಬೃಹತ್ ದೇಶ. ಇಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಮಸ್ಯೆಗಳು, ಆದ್ಯತೆಗಳು ಮತ್ತು ರಾಜಕೀಯ ಸನ್ನಿವೇಶಗಳು ಬದಲಾಗುತ್ತವೆ. ಇಡೀ ದೇಶದ ಜೆನ್ ಝೀ ಒಟ್ಟಾಗಿ ಒಂದೇ ವಿಷಯದ ಪರವಾಗಿ ದಂಗೆ ಏಳುವುದು ಭೌಗೋಳಿಕವಾಗಿ ಅಸಾಧ್ಯ ಎನ್ನುವುದು ವಿಶ್ಲೇಷಕರ ವಾದ.

ಭಾರತದ ಯುವ ಪೀಳಿಗೆಯ ಒಂದು ವರ್ಗ ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದರೆ, ಇನ್ನೊಂದು ದೊಡ್ಡ ವರ್ಗ ರಾಷ್ಟ್ರೀಯತೆ, ಸನಾತನ, ಪ್ರಾದೇಶಿಕ ಅಸ್ಮಿತೆಯಂತ ಸಿದ್ಧಾಂತಗಳ ಆಧಾರದ ಮೇಲೂ ವಿಭಜನೆಗೊಂಡಿದೆ. ಹೀಗಾಗಿ ಎಲ್ಲರೂ ಒಮ್ಮತದಿಂದ ಒಂದೇ ಶತ್ರುವಿನ ವಿರುದ್ಧ ಹೋರಾಡುವುದು ಕಷ್ಟ.

ಇದನ್ನೂ ಓದಿ: ಬಟ್ಟೆ ಹೊಲಿಯೋಕೂ ರೋಬೋಟ್; ಗಾರ್ಮೆಂಟ್ಸ್‌ ಶ್ರಮಿಕರ ಬೆವರಿನ ಮೇಲೆ AI ಕಣ್ಣು!

ಒಂದು ದೇಶದ ಅತಿ ದೊಡ್ಡ ಯುವ ಸಮೂಹ ತನ್ನ ಹತಾಶೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮೀಮ್‌ ಹಂಚಿಕೊಳ್ಳುವ ಮೂಲಕ ಹೊರಹಾಕುತ್ತಿದೆ ಎಂದರೆ, ವ್ಯವಸ್ಥೆ ಹಳ್ಳ ಹಿಡಿದಿದೆ ಎಂದರ್ಥ. ದೊಡ್ಡ ರಾಜಕೀಯ ಪಕ್ಷಗಳನ್ನ, ಕೋಟ್ಯಂತರ ಫಾಲೋವರ್ಸ್‌ ಹೊಂದಿರುವ ಬಲಿಷ್ಠ ಸಂಘಟನೆಗಳನ್ನ ಬೆಂಬಲಿಸುವ ಯುವಕರಿಗಿಂತ ಆನ್‌ಲೈನ್ ಬೇಸ್ಡ್‌ ʼಪಾರ್ಟಿʼಯನ್ನು ಬೆಂಬಲಿಸುವ ಯುವಕರ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಿದರೆ, ಈ ದೇಶದ ವ್ಯವಸ್ಥೆಯ ಕುರಿತು ಅಸಹಿಷ್ಣರಾಗಿರುವ ಯುವಕರು ಎಷ್ಟಿರಬಹುದೆಂಬ ಅಂದಾಜು ಸಿಗುತ್ತದೆ. ಇಂದಿನ ‘ಜೆನ್ ಝೀ’ (Gen Z) ಸಮೂಹವನ್ನು ಸಾಂಪ್ರದಾಯಿಕ ರಾಜಕೀಯದ ಚೌಕಟ್ಟುಗಳಲ್ಲೋ ಅಥವಾ ಹಳೇ ತಲೆಮಾರಿನ ಸಿದ್ಧಾಂತಗಳಲ್ಲೋ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬುದು ಸದ್ಯ ಸುಸ್ಪಷ್ಟ. ಯುವಕರ ಉದ್ಯೋಗ, ಶಿಕ್ಷಣ ಮತ್ತು ಆತ್ಮಗೌರವದ ಪ್ರಶ್ನೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಎಂತಹ ಬಲಿಷ್ಠ ಸಾಮ್ರಾಜ್ಯಗಳೂ ಇಸ್ಪೀಟು ಎಲೆಗಳಂತೆ ಮಕಾಡೆ ಬೀಳುತ್ತವೆ ಎನ್ನುವ ಸತ್ಯವನ್ನು ನೆರೆಯ ಯುವ ಚಳವಳಿಗಳು ತೋರಿಸಿಕೊಟ್ಟಿವೆ.

ಯಾವಾಗ ಆನ್‌ಲೈನ್ ಆಧಾರಿತ ಅನಾಮಧೇಯ ‘ಕಾಕ್ರೋಚ್ ಪಾರ್ಟಿ’ ಅಥವಾ ಜಿರಳೆ ತಂತ್ರದ ಸಿದ್ಧಾಂತಗಳು ಯುವ ಮನಸ್ಸುಗಳನ್ನು ಆಕರ್ಷಿಸಲು ತೊಡಗಿತೋ, ಆಗಲೇ ವ್ಯವಸ್ಥೆಯ ವಿರುದ್ಧದ ದನಿಗಳಿಗೆ ಮೈಕ್‌ ಸಿಕ್ಕಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ವಿಷಯಗಳು ಯುವ ಜನಾಂಗದಲ್ಲಿ ನಿರಂತರವಾಗಿ ಹತಾಶೆಯನ್ನು ತುಂಬುತ್ತಿದ್ದರೆ, ಅದು ಯಾವ ಕ್ಷಣದಲ್ಲಾದರೂ ಕ್ರಾಂತಿಯಾಗಿ ಸ್ಫೋಟಗೊಳ್ಳಬಹುದು. ಅಧಿಕಾರಸ್ಥರು ಈ ‘ಡಿಜಿಟಲ್ ಆಕ್ರೋಶ’ವನ್ನು ಆನ್‌ಲೈನ್ ಟ್ರೆಂಡ್ ಎಂದು ಭ್ರಮಿಸಿ, ನೈಜ ಸಮಸ್ಯೆಗಳಿಗೆ ಪಾರದರ್ಶಕ ಪರಿಹಾರ ನೀಡದಿದ್ದರೆ, ಇತಿಹಾಸದ ಪುಟಗಳು ಭಾರತದಲ್ಲೂ ಹೊಸದೊಂದು ಅಧ್ಯಾಯ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಸಿಪಿಐಎಂ, ಎಸ್‌ಎಫ್‌ಐ ನಾಯಕರು ಮತ್ತು ವಕೀಲರ ಬಂಧನ

ಸಿಜೆಪಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯ ಜಂತರ್‌ ಮಂತರ್‌ಗೆ ತೆರಳುತ್ತಿದ್ದ...

ಚಿಕ್ಕಮಗಳೂರು | ಫಾರಂ-7 ದುರುಪಯೋಗ; ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಯತ್ನಕ್ಕೆ ತೀವ್ರ ವಿರೋಧ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಬಂಧನ

ದೆಹಲಿಯ ಜಂತರ್ ಮಂತರ್ ರಸ್ತೆಯಲ್ಲಿರುವ ಕೇರಳ ಭವನದ ಸಮೀಪ ಕೇರಳದ ಮಾಜಿ...