ಟ್ರಂಪ್‌ಗೆ ಸೆಡ್ಡು ಹೊಡೆದ ಕೊಲಂಬಿಯಾ; “ಧೈರ್ಯವಿದ್ದರೆ ನಮ್ಮನ್ನು ಮುಟ್ಟಿ” ಎಂದ ಅಧ್ಯಕ್ಷ ಪೆತ್ರೋ

Date:

ಅಮೆರಿಕ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ಅಹಂಕಾರದ ಪ್ರತೀಕ. ತನ್ನ ಸುತ್ತಮುತ್ತಲಿನ ದೇಶಗಳು ತನ್ನ ಇಚ್ಛೆಗೆ ಕುಣಿಯುವ ‘ಗೊಂಬೆ’ ಗಳಾಗಿರಬೇಕು ಎಂಬುದು ಶ್ವೇತಭವನದ ಹಳೆಯ ಚಾಳಿ. ಆದರೆ, ಲ್ಯಾಟಿನ್‌ ಅಮೆರಿಕದ ದ್ವಾರಬಾಗಿಲು ಎಂದೇ ಕರೆಯಲ್ಪಡುವ ಕೊಲಂಬಿಯಾದಲ್ಲಿ ಈಗ ಕೇಳಿ ಬರುತ್ತಿರುವುದು ಶರಣಾಗತಿಯ ಸ್ವರವಲ್ಲ, ಬದಲಾಗಿ  ಸ್ವಾಭಿಮಾನದ ಸಿಂಹಘರ್ಜನೆ.

- Advertisement -

ಜಗತ್ತಿನ ದೊಡ್ಡಣ್ಣ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ಅಮೆರಿಕಕ್ಕೆ, ತನ್ನ ನೆರೆಹೊರೆಯ ದಕ್ಷಿಣದ ದೇಶಗಳಲ್ಲಿ ಎಡಪಂಥೀಯ ಸಿದ್ಧಾಂತದ ನಾಯಕರು ಅಧಿಕಾರಕ್ಕೆ ಬಂದರೆ ಅರಗಿಸಿಕೊಳ್ಳಲಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆತ್ರೋ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವಾಕ್ಸಮರ. ಕೊಲಂಬಿಯಾದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಎಡಪಂಥೀಯ ನಾಯಕ ಪೆತ್ರೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಟ್ರಂಪ್‌ ಆಡಳಿತವು ಒಳಸಂಚು ರೂಪಿಸುತ್ತಿದೆ ಎಂಬ ವರದಿಗಳು ಈಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಆದರೆ, ಅಮೆರಿಕದ ಬೆದರಿಕೆಗೆ ಜಗ್ಗದ ಪೆತ್ರೋ, “ನನ್ನನ್ನು ಮುಟ್ಟಲು ಬನ್ನಿ ನೋಡೋಣ, ಧೈರ್ಯವಿದ್ದರೆ ಬನ್ನಿ” ಎಂದು ಬಹಿರಂಗ ಸವಾಲು ಹಾಕುವ ಮೂಲಕ ಅಮೆರಿಕದ ದಾದಾಗಿರಿಗೆ ಸೆಡ್ಡು ಹೊಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಲ್ಯಾಟಿನ್ ಅಮೆರಿಕವನ್ನು ಅಮೆರಿಕ ಮೊದಲಿನಿಂದಲೂ ತನ್ನ ‘ಹಿತ್ತಲು’ ಎಂದೇ ಭಾವಿಸಿದೆ. ಈ ಭಾಗದ ದೇಶಗಳಲ್ಲಿ ತನ್ನ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಪೂರಕವಾದ ಸರ್ಕಾರಗಳಿರಬೇಕು, ಇಲ್ಲದಿದ್ದರೆ ಅಲ್ಲಿ ಅರಾಜಕತೆ ಸೃಷ್ಟಿಸಿ, ಸೇನಾ ದಂಗೆಯೆಬ್ಬಿಸಿ ಸರ್ಕಾರಗಳನ್ನು ಉರುಳಿಸುವುದು ಅಮೆರಿಕದ ವಿದೇಶಾಂಗ ನೀತಿಯ ಕರಾಳ ಮುಖ. ಚಿಲಿಯ ಸಾಲ್ವಡಾರ್ ಅಲೆಂಡೆಯಿಂದ ಹಿಡಿದು ವೆನೆಜುವೆಲಾದ ಮಧುರೋವರೆಗೂ ಅಮೆರಿಕ ನಡೆಸಿದ ಕುತಂತ್ರಗಳಿಗೆ ಇತಿಹಾಸ ಸಾಕ್ಷಿಯಾಗಿದೆ.

ಇದನ್ನು ಓದಿದ್ದೀರಾ? ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್‌ ಸರದಿ?

ಈಗ ಟ್ರಂಪ್ ಕಣ್ಣು ಕೊಲಂಬಿಯಾದ ಮೇಲಿದೆ. ಕಾರಣ ಸರಳ; ಗುಸ್ತಾವೊ ಪೆತ್ರೋ ಕೊಲಂಬಿಯಾದ ಇತಿಹಾಸದಲ್ಲೇ ಆಯ್ಕೆಯಾದ ಮೊದಲ ಎಡಪಂಥೀಯ ಅಧ್ಯಕ್ಷ. ಮಾಜಿ ಗೆರಿಲ್ಲಾ ಹೋರಾಟಗಾರನಾಗಿದ್ದ ಪೆತ್ರೋ, ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುವ ವ್ಯಕ್ತಿಯಲ್ಲ. ಅಮೆರಿಕದ ಬಂಡವಾಳಶಾಹಿ ನೀತಿಗಳು, ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ ಕೈಗಾರಿಕಾ ನೀತಿಗಳು ಮತ್ತು ಡ್ರಗ್ಸ್ ವಿರುದ್ಧದ ಹೆಸರಿನಲ್ಲಿ ಕೊಲಂಬಿಯಾದ ರೈತರ ಮೇಲೆ ನಡೆಸುವ ದೌರ್ಜನ್ಯವನ್ನು ಪೆತ್ರೋ ಕಟುವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಈ ನೇರ ನಡೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯೇ ಈಗ ಟ್ರಂಪ್ ಆಡಳಿತಕ್ಕೆ ಕಂಟಕವಾಗಿ ಪರಿಣಮಿಸಿದೆ. ಪೆತ್ರೋ ಅವರನ್ನು ಅಧಿಕಾರದಿಂದ ಇಳಿಸಲು ಅಮೆರಿಕವು ಕೊಲಂಬಿಯಾದ ಬಲಪಂಥೀಯ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ.

Colombia president 2

ಏನಿದು ಕೊಲಂಬಿಯಾದ ವೈಶಿಷ್ಟ್ಯ?

ದಕ್ಷಿಣ ಅಮೆರಿಕದ ಈ ದೇಶ ಕೇವಲ ರಾಜಕೀಯ ರಣರಂಗವಲ್ಲ, ಇದೊಂದು ಪ್ರಕೃತಿಯ ವಿಸ್ಮಯ. ಫೆಸಿಫಿಕ್‌ ಮಹಾಸಾಗರ ಮತ್ತು ಕೆರಿಬಿಯನ್‌ ಸಮುದ್ರ – ಹೀಗೆ ಎರಡೂ ಕರಾವಳಿಗಳನ್ನು ಹೊಂದಿರುವ ದಕ್ಷಿಣ ಅಮೆರಿಕದ ಏಕೈಕ ದೇಶವಿದು. ಆಂಡಿಸ್ ಪರ್ವತ ಶ್ರೇಣಿಯ ಗಾಂಭೀರ್ಯ, ಅಮೆಜಾನ್‌ ಕಾಡುಗಳ ಹಸಿರು ಹೊದಿಕೆ ಮತ್ತು ಜಗತ್ತಿನ ಶ್ರೇಷ್ಠ ಕಾಫಿಯ ಘಮಲು ಕೊಲಂಬಿಯಾದ ಅಸ್ಮಿತೆ. ಜಗತ್ತಿನ ಅತಿ ಹೆಚ್ಚು ಜೀವವೈವಿಧ್ಯ ಹೊಂದಿರುವ ದೇಶಗಳಲ್ಲಿ ಕೊಲಂಬಿಯಾ ಕೂಡ ಒಂದು. ಆದರೆ, ಈ ಪ್ರಾಕೃತಿಕ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಪಾಶ್ಚಿಮಾತ್ಯ ಕಂಪನಿಗಳು ಅಲ್ಲಿನ ಸಂಪನ್ಮೂಲಗಳನ್ನು ಲೂಟಿ ಮಾಡಲು ಹಪಹಪಿಸುತ್ತಿವೆ. ಅದಕ್ಕೆ ಅಡ್ಡಿಯಾಗಿರುವುದು ಪೆತ್ರೋ ಅವರ ಪರಿಸರ ನಿಲುವುಗಳು. ತೈಲ ಮತ್ತು ಕಲ್ಲಿದ್ದಲು ಗಣಿಗಾರಿಕೆಯನ್ನು ಕಡಿಮೆ ಮಾಡಿ, ಹಸಿರು ಇಂಧನದತ್ತ ಹೊರಳಬೇಕು ಎಂಬ ಪೆತ್ರೋ ಅವರ ಕನಸು, ಅಮೆರಿಕದ ಬಹುರಾಷ್ಟ್ರೀಯ ತೈಲ ಕಂಪನಿಗಳಿಗೆ ಇದು ನುಂಗಲಾರದ ತುತ್ತಾಗಿದೆ.

ಡ್ರಗ್ಸ್ ಯುದ್ಧ ಮತ್ತು ಅಮೆರಿಕದ ಇಬ್ಬಂದಿತನ

ಕೊಲಂಬಿಯಾವನ್ನು ಜಗತ್ತಿನ ಮುಂದೆ ‘ಕೊಕೇನ್ ಉತ್ಪಾದನಾ ಕೇಂದ್ರ’ ಎಂದು ಬಿಂಬಿಸಿ, ಅಲ್ಲಿನ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದು ಅಮೆರಿಕಕ್ಕೆ ವಾಡಿಕೆಯಾಗಿದೆ. ವಾಸ್ತವ ಏನಂದರೆ, ಕೊಲಂಬಿಯಾದಲ್ಲಿ ಉತ್ಪಾದನೆಯಾಗುವ ಕೊಕೇನ್‌ಗೆ ಅತಿ ದೊಡ್ಡ ಮಾರುಕಟ್ಟೆಯೇ ಅಮೆರಿಕ! ತಮ್ಮ ದೇಶದ ಜನರು ಡ್ರಗ್ಸ್ ಸೇವಿಸುವುದನ್ನು ತಡೆಯಲಾಗದ ಅಮೆರಿಕ, ಕೊಲಂಬಿಯಾದ ರೈತರ ಹೊಲಗಳಿಗೆ ಬೆಂಕಿ ಇಡುವ, ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸುವ ‘ಪ್ಲಾನ್‌ ಕೊಲಂಬಿಯಾ’ ದಂತಹ ಅಮಾನವೀಯ ಯೋಜನೆಗಳನ್ನು ಹೇರಿತ್ತು. ಪೆತ್ರೋ ಅವರು ಈ ವಿಫಲವಾದ ‘ಡ್ರಗ್ಸ್ ವಾರ್’ ನೀತಿಯನ್ನು ಬದಲಿಸಲು ಹೊರಟಿದ್ದಾರೆ. “ಬಲವಂತದ ನಿಗ್ರಹಕ್ಕಿಂತ, ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅವಕಾಶ ಮತ್ತು ಮಾರುಕಟ್ಟೆ ಒದಗಿಸಬೇಕು” ಎಂಬುದು ಅವರ ವಾದ. ಇದು ಅಮೆರಿಕದ ಭದ್ರತಾ ಏಜನ್ಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿಯೇ ಪೆತ್ರೋ ಅವರನ್ನು “ಅಪಾಯಕಾರಿ” ಎಂದು ಬಿಂಬಿಸಲು ವಾಷಿಂಗ್ಟನ್‌ ಯತ್ನಿಸುತ್ತಿದೆ.

ಸ್ವಾಭಿಮಾನದ ಸವಾಲು

ಪೆತ್ರೋ ಅವರ “ಧೈರ್ಯವಿದ್ದರೆ ಬನ್ನಿ” ಎಂಬ ಹೇಳಿಕೆ ಕೇವಲ ಆವೇಶದ ಮಾತಲ್ಲ. ಅದು ಶತಮಾನಗಳಿಂದ ಅಮೆರಿಕದ ದಬ್ಬಾಳಿಕೆಗೆ ಒಳಗಾಗಿರುವ ಇಡೀ ಲ್ಯಾಟಿನ್‌ ಅಮೆರಿಕದ ಒಕ್ಕೊರಲ ಧ್ವನಿ. ಹಿಂದಿನ ಸರ್ಕಾರಗಳಂತೆ ವಾಷಿಂಗ್ಟನ್‌ನಿಂದ ಬರುವ ಫೋನ್‌ ಕರೆಗೆ ಹೆದರಿ ನಡುಗುವ ಕಾಲ ಹೋಯಿತು ಎಂಬುದನ್ನು ಪೆತ್ರೋ ಸಾಬೀತುಪಡಿಸಿದ್ದಾರೆ. ಟ್ರಂಪ್ ಅವರ ಹೊಸ ಆಡಳಿತವು ಹಳೆಯ ‘ಮನ್ರೋ ಸಿದ್ಧಾಂತ’ವನ್ನು ಮತ್ತೆ ಜಾರಿಗೆ ತರಲು ಹವಣಿಸುತ್ತಿದೆ. ಅಂದರೆ, ಲ್ಯಾಟಿನ್‌ ಅಮೆರಿಕ ಮೇಲೆ ಅಮೆರಿಕಕ್ಕೆ ಮಾತ್ರ ಹಕ್ಕಿದೆ ಎಂಬ ಅಹಂಕಾರದ ನೀತಿ. ಆದರೆ, ಜಗತ್ತು ಬದಲಾಗಿದೆ. ಚೀನಾ ಮತ್ತು ರಷ್ಯಾಗಳು ಈ ಭಾಗದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಕೊಲಂಬಿಯಾದಂತಹ ಪ್ರಮುಖ ದೇಶವನ್ನು ಎದುರು ಹಾಕಿಕೊಳ್ಳುವುದು ಅಮೆರಿಕಕ್ಕೆ ತಿರುಗುಬಾಣವಾಗಬಲ್ಲದು.

ಒಟ್ಟಿನಲ್ಲಿ, ಕೊಲಂಬಿಯಾದಲ್ಲಿ ನಡೆಯುತ್ತಿರುವುದು ಕೇವಲ ಪೆತ್ರೋ ಮತ್ತು ಟ್ರಂಪ್ ನಡುವಿನ ವೈಯಕ್ತಿಕ ಸಂಘರ್ಷವಲ್ಲ. ಇದು ಸಾರ್ವಭೌಮತೆ ಮತ್ತು ನವ – ವಸಾಹತುಶಾಹಿ ನಡುವಿನ ಹೋರಾಟ. ಪ್ರಜಾಪ್ರಭುತ್ವದ ಪಾಠವನ್ನು ಜಗತ್ತಿಗೆ ಹೇಳುವ ಅಮೆರಿಕ, ಬೇರೊಂದು ದೇಶದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುವುದು ಅದರ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ತನ್ನ ನೆಲದ ಸಂಪತ್ತು, ತನ್ನ ಜನರ ಘನತೆ ಮತ್ತು ತನ್ನ ಸರ್ಕಾರದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ನಿಂತಿರುವ ಕೊಲಂಬಿಯಾದ ಅಧ್ಯಕ್ಷರ ಧೈರ್ಯ, ಅಮೆರಿಕದ ದಾದಾಗಿರಿಗೆ ಇನ್ನು ಕಾಲಾವಕಾಶವಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಅಮೆರಿಕದ ಹದ್ದು, ಕೊಲಂಬಿಯಾದ ಆಕಾಶದಲ್ಲಿ ಹಾರಾಡಬಹುದು. ಆದರೆ ಅಲ್ಲಿನ ನೆಲವನ್ನು ಆಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಟ್ರಂಪ್ ಅರಿತುಕೊಳ್ಳಬೇಕಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...