ಮಲಗುಂಡಿಗಳ ನೀರು ನದಿಯನ್ನಷ್ಟೇ ಅಲ್ಲ ದಕ್ಷಿಣ ಕನ್ನಡದ ಜನರ ಮನೆ ಮನೆಯ ಬಾವಿಗಳನ್ನು ಸೇರುತ್ತಿದೆ, ಜಲಚರಗಳಷ್ಟೇ ಅಲ್ಲದೆ, ಈ ಎಲ್ಲಾ ದುಷ್ಕೃತ್ಯಗಳ ಕಾರಣೀಕರ್ತನಾದ ಮನುಷ್ಯನೂ ತನ್ನ ನೀಚತನದ ಪರಿಣಾಮವನ್ನು ಉಣ್ಣುತ್ತಿದ್ದಾನೆ.
ಅಂಡಾಕಾರದ ದೇಹ, ಚರ್ಮದ ಮೇಲೆಲ್ಲ ಹೊಳೆವ ಮುತ್ತಿನ ಮಣಿಗಳಂತಹ ಬಿಳಿ ಚುಕ್ಕೆ, ಸಣ್ಣ ಮೂತಿಯ ಸುತ್ತ ನೀಲಿ ಮಿಶ್ರಿತ ಹಸಿರು ವರ್ತುಲ, ಜಾರು ಮೈ ತುಂಬಾ ಬೂದು ಹಸಿರಿನ ನಾಲ್ಕೈದು ಪಟ್ಟಿ ಇದು ಮತ್ಸ್ಯ ಪ್ರಪಂಚದಲ್ಲಿ ಪರ್ಲ್ ಸ್ಪಾಟ್(pearl spot) ಎಂದೇ ಕರೆಸಿಕೊಳ್ಳುವ ಆಕರ್ಷಕ ‘ಗ್ರೀನ್ ಕ್ರೊಮೈಡ್’ನ (Green Chromide) ಮೈ ಚಹರೆ. ಈ ಮೀನಿನ ವೈಜ್ಞಾನಿಕ ಹೆಸರು ಎಟ್ರೊಪ್ಲಸ್ ಸುರಾಟೆನ್ಸಿಸ್ (Etroplus suratensis) ತುಳುವರ ʼಇರ್ಪೆʼ, ಕೇರಳದ ರಾಜ್ಯ ಮತ್ಸ್ಯ ಈ ʼಕರಿಮೀನ್ʼ.
ಸಿಹಿನೀರಿನ ನದಿಗಳು ಸಮುದ್ರ ಸಂಧಿಸುವೆಡೆ ಇವುಗಳ ವಾಸ. ಸಾಮಾನ್ಯವಾಗಿ ನೀರಿನಾಳದಲ್ಲಿ ಜೀವಿಸುವ ಪರ್ಲ್ ಸ್ಪಾಟ್ ನೀರಿನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದು ವಿರಳ, ಕಾಯಿಲೆಗೆ ಒಳಗಾದರೆ, ನೀರಿನಾಳದಲ್ಲಿ ಅಹಿತ ವಾತಾವರಣ ಸೃಷ್ಟಿಯಾದರೆ ಮಾತ್ರವೇ ಮೇಲ್ಮೈಗೆ ಈಜುತ್ತವೆ. ಉಪ್ಪು ಮಿಶ್ರಿತ ಸಿಹಿನೀರಿನಲ್ಲಿ ಸುಮಾರು 10 ವರ್ಷದ ಆಯಸ್ಸು ಹೊಂದಿರುವ ಇರ್ಪೆ ಮೀನು ಸಿಹಿನೀರಿನಲ್ಲಿ ಹೆಚ್ಚು ಕಾಲ ಬದುಕಲಾರವು. ಹಾಗಾಗಿಯೇ ಸಿಹಿನೀರು ಕಡಲಿಗೆ ಸೇರುವ ನದಿ ಪಾತ್ರಗಳಲ್ಲಿ ಗ್ರೀನ್ ಕ್ರೊಮೈಡ್ ವಾಸಿಸುತ್ತವೆ. ಭಾರತದ ಕೇರಳ, ಒಡಿಶಾ, ತಮಿಳುನಾಡು, ಗೋವಾ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಡಲತ್ತ ಸೇರುವ ಫಲ್ಗುಣಿ, ನೇತ್ರಾವತಿ, ಕುಮಾರಧಾರ ನದಿಗಳ ಜಲಾನಯನ ಪ್ರದೇಶದ ಜೌಗುಗಳಲ್ಲಿ ವಾಸಿಸಿ ನದಿ ತಳದ ಕಲ್ಲು ಬಂಡೆ, ಮರದ ಬಡ್ಡೆಗಳ ಮೇಲೆ ಮೊಟ್ಟೆ ಇರಿಸುತ್ತದೆ.
ಇದನ್ನೂ ಓದಿ ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ
ಶಾಂತ ಸ್ವಭಾವದ ಯಾರೊಂದಿಗೂ ತಾನಾಗಿಯೇ ಜಗಳ ಕಾಯದ ಈ ಮೀನು ಸಂತಾನೋತ್ಪತಿಯ ಸಂದರ್ಭದಲ್ಲಿ ಮಾತ್ರ ಕೊಂಚ ಆಕ್ರಮಣಕಾರಿ ಸ್ವಭಾವ ತೋರುತ್ತದೆ. ಮೊಟ್ಟೆಯೊಡೆದ ಕೆಲವು ಗಂಟೆಗಳ ಕಾಲ ನದಿ ತಳದ ಮಣ್ಣಿನಲ್ಲಿ ಸಣ್ಣ ಕುಳಿಗಳನ್ನು ತೋಡಿ ಅದರೊಳಗೆ ತನ್ನ ಮರಿಗಳನ್ನು ಅಡಗಿಸಿಡುತ್ತದೆ. ಮರಿಗಳು 8 ರಿಂದ 10 ಸೆಂಟಿ ಮೀಟರ್ ಬೆಳೆದೊಡನೆ ತಾವಾಗಿಯೇ ಕುಳಿಗಳಿಂದ ಆಚೆ ಬಂದು ಜೋಡಿ ಜೋಡಿಯಾಗಿ ಈಜಲು ಶುರುವಿಡುತ್ತವೆ. ಒಂದು ಗುಂಪಿನ ಪ್ರೌಢ ಮೀನುಗಳು ಇನ್ನೊಂದು ಗುಂಪನ್ನು ಸೇರವುದಿಲ್ಲ ಎನ್ನುವುದು ಇರ್ಪೆಯ ಮತ್ತೊಂದು ವಿಶೇಷ.
ಭಾರತೀಯರ ಅಚ್ಚುಮಚ್ಚಿನ ಮತ್ಸ್ಯ ಖಾದ್ಯವಾದರಿಂದ ಹೆಚ್ಚು ಬೆಲೆ ಮತ್ತು ಕಡಿಮೆ ಲಭ್ಯತೆ ಹೊಂದಿರುವ ಇರ್ಪೆ ಸಾಮಾನ್ಯ ಮಲಿನವೆಲ್ಲಾ ಅರಗಿಸಿ ಬದುಕುವ ತಾಕತ್ತಿರುವ ಮೀನು. ವಾಸಿಸುವುದೇ ಉಪ್ಪು ನೀರಿನಲ್ಲಾದರಿಂದ ಪಿ ಹೆಚ್ ಮಟ್ಟ ಸುಮಾರು 8.5 ರಿಂದ 9 ರವರೆಗಿದ್ದರೂ ಹೇಗೋ ಬದುಕಿಕೊಳ್ಳುವ ಇವು ಅದಕ್ಕಿಂತ ಹೆಚ್ಚಾದಾಗ ಕಿವಿರುಗಳಿಗೆ ಹಾನಿಯುಂಟಾಗಿ ಉಸಿರಾಟದ ಸಮಸ್ಯೆಗೆ ಒಳಗಾಗುತ್ತವೆ. ಜೀರ್ಣಿಸಿಕೊಳ್ಳಲಾಗದಷ್ಟು ವಿಷ ಪುಟ್ಟ ಒಡಲಿಗೆ ಬೆರೆತಾಗ ಉಸಿರುಗಟ್ಟಿ ಸಾಯುತ್ತವೆ.
ಈಗ ಒಂದು ವಾರದ ಹಿಂದೆ ಫಲ್ಗುಣಿ ನದಿಯಲ್ಲಿ ರಾಶಿ ರಾಶಿ ಇರ್ಪೆ ಮೀನುಗಳ ಕಳೇಬರ ತೇಲುತ್ತಾ ದಡದಂಚಿನಲ್ಲಿ ಗುಡ್ಡೆಯಾಗಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದು ನಿಜಕ್ಕೂ ಅಪಾಯದ ಮುನ್ಸೂಚನೆ ಎನ್ನುತ್ತಾರೆ ಪರಿಸರವಾದಿಗಳು.
ಫಲ್ಗುಣಿಯ ಆಮ್ಲೀಯ ಮೌಲ್ಯ 9 ಅಂಕಿ ದಾಟಿ ನೀರು ಕ್ಷಾರವಾಗಿದ್ದರಿಂದ ಹಲವು ಪ್ರಭೇದದ ಮೀನುಗಳ ಮಾರಣ ಹೋಮಕ್ಕೆ ದಕ್ಷಿಣ ಕನ್ನಡದ ಜೀವನದಿ ಜೀವಂತ ಸಾಕ್ಷಿಯಾದಳು. ನದಿಯೊಂದು ಇಷ್ಟರ ಮಟ್ಟಿಗೆ ಮಲಿನವಾಗಲು ಕಾರಣ ಕಣ್ಮುಂದೆಯೇ ಇತ್ತು, ಸ್ಮಾರ್ಟ್ ಸಿಟಿಯ ಕನಸಿನ ಹಿಂದೆ ಬಿದ್ದ ಮಂಗಳೂರು ಮಹಾನಗರ ಪಾಲಿಕೆ ಯಾವ ನಿರ್ಬಂಧವನ್ನು ಹೇರದೆಯೇ ಕೊಳತಿನಿಗಳಂತೆ ತಲೆಯೆತ್ತುತ್ತಿರುವ ದೈತ್ಯ ರೆಸಾರ್ಟ್‌ಗಳನ್ನು ಪೋಷಿಸುತ್ತಿದೆ, ಜತೆಗೆ ಕೈಗಾರಿಕೆಗಳ ತಾಜ್ಯ ನೀರನ್ನು ಸಂಸ್ಕರಿಸದೆ ನದಿಯೊಡಲಿಗೆ ಹರಿಸಿ ಸರಣಿ ಅನಾಹುತಗಳಿಗೆ ಪೀಠ ಸಿದ್ಧಪಡಿಸಿದೆ.
ಮಲಗುಂಡಿಗಳ ತ್ಯಾಜ್ಯ ನದಿಯನ್ನು ಸೇರುತ್ತದೆ– ಕಲ್ಮಾಡಿ
ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಪರಿಸರವಾದಿ ಪ್ರೇಮಾನಂದ ಕಲ್ಮಾಡಿ, “ಈ ಹಿಂದೆ ಕರಾವಳಿ ನಿಯಂತ್ರಣ ವಲಯ ಮತ್ತು ಕರಾವಳಿ ನಿರ್ವಹಣಾ ವಲಯದ ಪರಿಧಿಯೊಳಗೆ ಯೋಜನೆಗಳ ಅನುಷ್ಠಾನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಕಾಮಗಾರಿಗಳನ್ನು ನಿರ್ಭಂದಿಸಲಾಗುತ್ತಿತ್ತು. ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವತ್ತ ತೀವ್ರ ಆಸಕ್ತಿ ವಹಿಸಿರುವ ಮಹಾನಗರ ಪಾಲಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿಆರ್‌ಝೆಡ್ 3 ಪರಿಧಿಗೆ ಸೇರಿದ್ದ ಮಂಗಳೂರು ಉಡುಪಿ ಪ್ರದೇಶಗಳನ್ನು ಆದಾಯದ ಲಾಬಿಗೆ ಬಿದ್ದು ಸಿಆರ್‌ಝೆಡ್2 ವ್ಯಾಪ್ತಿಗೆ ಸೇರಿಸಿತು. ಈ ಮೂಲಕ ಅವೈಜ್ಞಾನಿಕ ರಸ್ತೆ ಕಾಮಗಾರಿ, ಅಪಾರ್ಟ್‌ಮೆಂಟ್, ಕೈಗಾರಿಕೆಗಳ ಸ್ಥಾಪನೆಗೆ ಕಡಲು ಮತ್ತು ನದಿ ತೀರಗಳನ್ನು ಬಳಸಿಕೊಳ್ಳುವ ಸ್ವೇಚ್ಛೆಗೆ ಬಿದ್ದಿದೆ” ಎಂದು ಆರೋಪಿಸಿದರು.

“ನದಿ ಮತ್ತು ಸಮುದ್ರ ತೀರದ 500 ಮೀಟರ್ ಅಂತರವನ್ನು ಹೈ ಟೈಡ್ ಲೈನ್ ಎಂದು ಘೋಷಿಸಲಾಗಿತ್ತು. ಈ ನಿಯಮದ ಪ್ರಕಾರ 500 ಮೀಟರ್ ಒಳಗೆ ಮೀನುಗಾರರ ವಸತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಂಗಡಿ, ಮಳಿಗೆಗಳು, ಹೋಮ್ ಸ್ಟೇ, ರೆಸಾರ್ಟ್‌ಗಳು ಈ ನಿಷೇಧಿತ ವ್ಯಾಪ್ತಿಯಲ್ಲಿ ಬೀಡುಬಿಟ್ಟಿವೆ. ಇಲ್ಲಿಯ ಮಲಗುಂಡಿಗಳ ತ್ಯಾಜ್ಯ ನದಿಯನ್ನು ಸೇರುತ್ತದೆ. ಜೊತೆಗೆ ಸಂಸ್ಕರಿಸದ ಕೊಳಚೆ ನೀರನ್ನು ಫಲ್ಗುಣಿಗೆ ವಿಸರ್ಜಿಸುತ್ತಿದ್ದಾರೆ. ಇರ್ಪೆ ಎಂತಹ ಮಲಿನದಲ್ಲೂ ಬದುಕಬಲ್ಲ ಮೀನು ಅವುಗಳ ಮಾರಣ ಹೋಮವೆಂದರೆ ನೀರು ಮುಟ್ಟಲೂ ಯೋಗ್ಯವಲ್ಲದಷ್ಟು ಕಲುಷಿತವಾಗಿರುವುದರ ಸಂಕೇತ” ಎಂದು ಅಭಿಪ್ರಾಯಿಸಿದರು.
ಮಲಗುಂಡಿಗಳ ನೀರು ನದಿಯನ್ನಷ್ಟೇ ಅಲ್ಲ ದಕ್ಷಿಣ ಕನ್ನಡದ ಜನರ ಮನೆ ಮನೆಯ ಬಾವಿಗಳನ್ನು ಸೇರುತ್ತಿದೆ. ಜಲಚರಗಳಷ್ಟೇ ಅಲ್ಲದೆ, ಈ ಎಲ್ಲಾ ದುಷ್ಕೃತ್ಯಗಳ ಕಾರಣೀಕರ್ತನಾದ ಮನುಷ್ಯನೂ ತನ್ನ ನೀಚತನದ ಪರಿಣಾಮವನ್ನು ಉಣ್ಣುತ್ತಿದ್ದಾನೆ.
ಕರಾವಳಿಯ ಪರಿಸರ ವ್ಯವಸ್ಥೆಯ ನಾಶದ ಮುನ್ಸೂಚನೆ– ಶಶಿಧರ ಶೆಟ್ಟಿ
ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಮಾತನಾಡಿ, “ವಿಷಯುಕ್ತ ನೀರಿನಿಂದ ಜಲಚರಗಳ ಮಾರಣ ಹೋಮ ಹೊಸದೇನಲ್ಲ. ಮೀನುಗಾರಿಕಾ ಇಲಾಖೆಗೆ ಹಲವು ಬಾರಿ ಈ ಕುರಿತು ಎಚ್ಚರಿಕೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ಸುಮಾರು 50,000 ಲೀಟರ್ ಸಂಸ್ಕರಿಸದ ಕೊಳಚೆ ನೀರು ನದಿ ಸೇರುತ್ತಿದೆ. ನೇತ್ರಾವತಿ, ಕುಮಾರಧಾರ ನದಿಗಳಿಗಿಂತಲೂ ಫಲ್ಗುಣಿ ಹೆಚ್ಚು ಕಲುಷಿತಗೊಂಡಿದೆ. ಕಾವೂರಿನ ಕೊಳಚೆ ನೀರು ಸಂಸ್ಕರಣಾ ಘಟಕ 80% ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ನದಿಗೆ ಹಾಯಿಸುತ್ತಿದೆ. ಹೀಗಾದರೆ ಜಲಚರಗಳ ಬದುಕು ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೂರಿ ನಡೆಸುವ ಇಂತಹ ಅವೈಜ್ಞಾನಿಕ ಕಾಮಗಾರಿಗಳು ಮತ್ತು ಕೈಗಾರಿಕಾ ನಿರ್ಲಕ್ಷ್ಯಗಳು ಕೇವಲ ʼಇರ್ಪೆʼಯಂತಹ ಜಲಚರಗಳ ಮಾರಣಹೋಮಕ್ಕೆ ಕೊನೆಯಾಗದು. ನದಿ ಮೂಲಗಳು ಕಲುಷಿತಗೊಂಡು, ಆಮ್ಲೀಯತೆ ಹೆಚ್ಚುತ್ತಿರುವುದು ಇಡೀ ಕರಾವಳಿಯ ಪರಿಸರ ವ್ಯವಸ್ಥೆಯ ನಾಶದ ಮುನ್ಸೂಚನೆಯಾಗಿದೆ. ಅದೇ ವಿಷಪೂರಿತ ನೀರು ನಾಳೆ ಮನುಷ್ಯನ ದೇಹ ಸೇರುತ್ತದೆ. ಪ್ರಕೃತಿಯ ನಾಶ ಎಂದರೆ ಅದು ಮಾನವನ ಸ್ವನಾಶಕ್ಕೆ ಬರೆದುಕೊಂಡ ಮುನ್ನುಡಿಯೇ ಸರಿ.
ಆದ್ದರಿಂದ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಸಿಆರ್‌ಝೆಡ್ ನಿಯಮಗಳ ಕಟ್ಟುನಿಟ್ಟಿನ ಜಾರಿ, ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕಗಳ (STP) ಸೂಕ್ತ ಮೇಲ್ವಿಚಾರಣೆ ತಕ್ಷಣವೇ ಆಗಬೇಕಿದೆ. ಫಲ್ಗುಣಿ, ನೇತ್ರಾವತಿಯಂತಹ ಜೀವನದಿಗಳನ್ನು ಉಳಿಸಿಕೊಳ್ಳುವುದು ಕೇವಲ ಪರಿಸರವಾದಿಗಳ ಹೋರಾಟವಾಗಷ್ಟೇ ಉಳಿಯದೆ, ಪ್ರತಿಯೊಬ್ಬ ನಾಗರಿಕನ ಹಾಗೂ ಸರ್ಕಾರದ ಜವಾಬ್ದಾರಿಯಾಗಬೇಕಿದೆ. ನದಿಗಳು ಜೀವಂತವಾಗಿದ್ದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯ ಬದುಕು ಸುರಕ್ಷಿತವಾಗಿರುತ್ತದೆ.





