ಗುಜರಾತಿನ ಹಿಂದು ಮಹಿಳೆಯ ಕಿಡ್ನಿ ಮುಸ್ಲಿಂ ವ್ಯಕ್ತಿಗೆ ಮತ್ತು ಮುಸ್ಲಿಂ ಮಹಿಳೆಯ ಕಿಡ್ನಿ ಹಿಂದೂ ವ್ಯಕ್ತಿಗೆ ದಾನ ಮಾಡಲಾಗಿದೆ. ಈ ಘಟನೆ ಸಮಾಜದ ಕಣ್ಣು ತೆರೆಸುವ ದೀವಟಿಗೆಯಾಗಿದೆ. ಕೋಮು ದ್ವೇಷದ ಕಿಡಿ ಹೊತ್ತಿಸಿ ಲಾಭ ಗಿಟ್ಟಿಸಿಕೊಳ್ಳುವ ರಾಜಕೀಯ ಧುರೀಣರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ವಿಷ ಕಾರುವ ಶಕ್ತಿಗಳಿಗೆ ಈ ಇಬ್ಬರು ಮಹಿಳೆಯರ ಸೌಹಾರ್ದತೆಯ ನಡೆ, ಎಂದಿಗೂ ಮರೆಯಲಾಗದ ಸಾಂಸ್ಕೃತಿಕ ಹಾಗೂ ಮಾನವೀಯ ಕಪಾಳಮೋಕ್ಷ!
ಹಲವಾರು ವರ್ಷಗಳಿಂದ ದೇಶದಲ್ಲಿ ಕೋಮುದ್ವೇಷವನ್ನು ಹರಡುವ ಕಾರ್ಯ ಯಥೇಚ್ಛವಾಗಿ ನಡೆಯುತ್ತಿದೆ. ಅದರಲ್ಲೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರಕ್ಕೆ ಧರ್ಮದ ವಿಷ ಬೀಜ ಬಿತ್ತುವುದೇ ಖಾಯಂ ಕೆಲಸ. ಈ ಕೋಮು ವೈಷಮ್ಯಗಳ ಹೆಸರಿನಲ್ಲಿ ಇಂದು ಸಮಾಜ ಮಾನವೀಯತೆಯನ್ನೇ ಮರೆಯುತ್ತಿದೆ. ಇವೆಲ್ಲವುದರ ನಡುವೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಒಂದು ಘಟನೆ ಸೌಹಾರ್ದತೆಯನ್ನು ನೆನಪಿಸಿದೆ. ತೀವ್ರ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇಬ್ಬರು ವ್ಯಕ್ತಿಗಳ ಪ್ರಾಣ ಉಳಿಸಲು, ಅವರ ಪತ್ನಿಯರು ಧರ್ಮದ ಬೇಲಿಗಳನ್ನು ಬದಿಗೊತ್ತಿ ಪರಸ್ಪರರ ಗಂಡಂದಿರಿಗೆ ತಮ್ಮ ಕಿಡ್ನಿ ದಾನ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ನೈಜ ಅರ್ಥ ಕಲ್ಪಿಸಿದ್ದಾರೆ.
ಅಹ್ಮದಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಹಿಂದೂ ಕುಟುಂಬದ ವ್ಯಕ್ತಿಯೊಬ್ಬರು ಮತ್ತು ಮುಸ್ಲಿಂ ಕುಟುಂಬದ ವ್ಯಕ್ತಿಯೊಬ್ಬರು ಕಳೆದ ಕೆಲವು ಸಮಯದಿಂದ ತೀವ್ರ ರೀತಿಯ ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರಿಗೂ ತುರ್ತಾಗಿ ಕಿಡ್ನಿ ಕಸಿ (Kidney Transplant) ಮಾಡುವ ಅಗತ್ಯವಿತ್ತು. ಆದರೆ, ವೈದ್ಯಕೀಯ ತಪಾಸಣೆಯ ವೇಳೆ ಇಬ್ಬರ ಪತ್ನಿಯರು ತಮ್ಮ ಪತಿಯಂದಿರಿಗೆ ಕಿಡ್ನಿ ನೀಡಲು ಮುಂದಾದಾಗ ‘ಬ್ಲಡ್ ಗ್ರೂಪ್’ (ರಕ್ತದ ಗುಂಪು) ಹೊಂದಾಣಿಕೆಯಾಗದೇ ವಿಫಲವಾಗಿತ್ತು.
ಇದನ್ನೂ ಓದಿ: ಜೆನ್ ಝೀಗಳನ್ನು ಅರ್ಥಮಾಡಿಕೊಳ್ಳದೆ ಬಿಜೆಪಿ ‘ಔಟ್ ಡೇಟೆಡ್’ ಆಗುತ್ತಿದೆಯೇ?
ಪತಿಯಂದಿರ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಈ ಇಬ್ಬರು ಮಹಿಳೆಯರಿಗೆ ವೈದ್ಯರು ‘ಸ್ವಾಪ್ ಟ್ರಾನ್ಸ್‌ಪ್ಲಾಂಟ್’ (Swap Transplant – ಕಿಡ್ನಿ ವಿನಿಮಯ) ಪರಿಕಲ್ಪನೆಯನ್ನು ವಿವರಿಸಿದರು. ಅಂದರೆ, ಹಿಂದು ಮಹಿಳೆಯ ಕಿಡ್ನಿ ಮುಸ್ಲಿಂ ವ್ಯಕ್ತಿಗೆ ಮತ್ತು ಮುಸ್ಲಿಂ ಮಹಿಳೆಯ ಕಿಡ್ನಿ ಹಿಂದು ವ್ಯಕ್ತಿಗೆ ರಕ್ತದ ಗುಂಪಿನ ಆಧಾರದಲ್ಲಿ ಶೇ.100 ರಷ್ಟು ಪರ್ಫೆಕ್ಟ್ ಆಗಿ ಹೊಂದಾಣಿಕೆಯಾಗುತ್ತಿತ್ತು (Matching).
ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷದ ಬೆಂಕಿ ಉರಿಯುತ್ತಿರುವ ಈ ದಿನಗಳಲ್ಲಿ, ಇಬ್ಬರೂ ಮಹಿಳೆಯರು ಕ್ಷಣ ಮಾತ್ರವೂ ಯೋಚಿಸದೆ ಈ ವಿನಿಮಯಕ್ಕೆ ತಕ್ಷಣವೇ ಸಮ್ಮತಿಸಿದರು. “ನಮಗೆ ನಮ್ಮ ಪತಿಯಂದಿರ ಜೀವ ಉಳಿವುದು ಮುಖ್ಯವಾಗಿತ್ತೇ ಹೊರತು, ದಾನ ಪಡೆಯುವವರ ಅಥವಾ ನೀಡುವವರ ಧರ್ಮವಲ್ಲ. ರಕ್ತ ಮತ್ತು ಜೀವಕ್ಕೆ ಯಾವುದೇ ಧರ್ಮದ ಬಣ್ಣವಿರುವುದಿಲ್ಲ,” ಎಂದು ಶಸ್ತ್ರಚಿಕಿತ್ಸೆಯ ನಂತರ ಇಬ್ಬರೂ ಮಹಿಳೆಯರು ಭಾವನಾತ್ಮಕವಾಗಿ ನುಡಿದಿದ್ದಾರೆ.
ಶಸ್ತ್ರಚಿಕಿತ್ಸೆಯು ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಪ್ರಸ್ತುತ ನಾಲ್ವರೂ ಚೇತರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಮಹಿಳೆಯರ ನಿರ್ಧಾರದಿಂದಾಗಿ ಇಂದು ಇಬ್ಬರು ಗಂಡಸರು ನವಜೀವನ ಪಡೆದುಕೊಂಡಿದ್ದಾರೆ.
ಇದೊಂದೇ ಘಟನೆಯಲ್ಲ. ದೇಶದ ವಿಭಿನ್ನತೆ ಹಾಗೂ ಪರಸ್ಪರ ಸಾಮರಸ್ಯಕ್ಕೆ ಸಾಕ್ಷಿಯಾಗಿ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಜನರು ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾದ ಹಲವಾರು ನೈಜ ಘಟನೆಗಳು ಇತಿಹಾಸದಲ್ಲೂ, ಇತ್ತೀಚಿನ ದಿನಗಳಲ್ಲೂ ನಡೆದಿವೆ.
1925ರ ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ನಮಗೆ ಕೇಳಿಬರುವ ಹೆಸರು ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್. ಇಬ್ಬರೂ ನಿಕಟ ಗೆಳೆಯರಾಗಿದ್ದವರು. ಬ್ರಿಟಿಷರು ಇವರಿಬ್ಬರ ಮಧ್ಯೆ ಧರ್ಮದ ಆಧಾರದಲ್ಲಿ ಒಡೆದು ಆಳುವ ಯತ್ನ ನಡೆಸಿದರೂ, ಇಬ್ಬರೂ ದೇಶಪ್ರೇಮದ ಮುಂದೆ ಧರ್ಮವನ್ನು ಗೌಣವಾಗಿಸಿದರು.
ಬಿಹಾರದ ನಳಂದಾದಲ್ಲಿ ಮಸೀದಿ ಕಾಯುತ್ತಿರುವ ಹಿಂದೂ ಕುಟುಂಬವೂ ನಮಗೆ ಒಂದು ಸೌಹಾರ್ದತೆಯ ಉದಾಹರಣೆ. ಈ ಗ್ರಾಮದಲ್ಲಿದ್ದ ಮುಸ್ಲಿಂ ಕುಟುಂಬಗಳು ಕಾಲಕ್ರಮೇಣ ಬೇರೆಡೆಗೆ ವಲಸೆ ಹೋದ ಬಳಿಕ 100 ವರ್ಷ ಹಳೆಯ ಮಸೀದಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆದ್ದರಿಂದ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಅನಿಲ್ ಪಾಸ್ವಾನ್ ಮತ್ತು ಅವರ ಕುಟುಂಬ ಮಸೀದಿಯನ್ನು ಸ್ವಚ್ಛಗೊಳಿಸಿ ಧೂಪ ಹಾಕಿ ನಿರ್ವಹಣೆ ಮಾಡುತ್ತಿದ್ದಾರೆ.
ಇವೆಲ್ಲವುದಕ್ಕೂ ಮುಖ್ಯವಾಗಿ ಇತ್ತೀಚೆಗೆ ಕೋವಿಡ್ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರು ಪರಸ್ಪರರು ಮೆರೆದ ಸೌಹಾರ್ದತೆಯನ್ನು ಕಂಡು ಬಿಜೆಪಿಗರು ತಮ್ಮ ತಂತ್ರವೆಲ್ಲ ಧ್ವಂಸಗೊಂಡಿದೆ ಎಂಬ ನಿರಾಶೆಗೆ ಇಳಿಯುವಂತಾಯಿತು. ತಮ್ಮ ದ್ವೇಷದ ದುಕಾನನ್ನು ಮತ್ತಷ್ಟು ಬಲಪಡಿಸಿ ಹಂಚಲು ಆರಂಭಿಸಿದರು. ಹಿಂದೂ ಕುಟುಂಬಗಳ ಕೊನೆಯ ಹಂತದ ಸಂಸ್ಕಾರಗಳನ್ನು ಮಾಡಲು ಯಾರೂ ಇಲ್ಲದಿದ್ದಾಗ, ಮುಸ್ಲಿಂ ಯುವಕರು ಮುನ್ನೆಲೆಗೆ ಬಂದು ಹಿಂದೂ ಆಚಾರ-ವಿಚಾರಗಳ ಪ್ರಕಾರವೇ ಅಂತಿಮ ಸಂಸ್ಕಾರ ನೆರವೇರಿಸಿದ ಘಟನೆಗಳು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಉತ್ತರಪ್ರದೇಶಗಳಲ್ಲಿ ದಾಖಲಾಗಿವೆ. ಅದೇ ರೀತಿ, ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೊಳಗಾದ ಮುಸ್ಲಿಂ ಕುಟುಂಬಗಳಿಗೆ ಅನೇಕ ಹಿಂದೂ ಸಂಸ್ಥೆಗಳು ಮತ್ತು ವ್ಯಕ್ತಿಗಳು ರಂಜಾನ್ ಸಮಯದಲ್ಲಿ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ತಲುಪಿಸಿ ಮಾನವೀಯತೆ ಮೆರೆದರು.
ದ್ವೇಷದ ರಾಜಕೀಯಕ್ಕೆ ಮನುಷ್ಯತ್ವದ ಕಪಾಳಮೋಕ್ಷ
ಇಂದಿನ ಡಿಜಿಟಲ್ ಯುಗದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು ಧರ್ಮ, ಜಾತಿ, ಭಾಷೆಗಳ ಹೆಸರಿನಲ್ಲಿ ದ್ವೇಷದ ವಿಷಕಾರಿ ಸಂದೇಶಗಳು, ಸುಳ್ಳು ವದಂತಿಗಳು ಮತ್ತು ಕೋಮು ವೈಷಮ್ಯವನ್ನು ಹೆಚ್ಚಿಸುವ ಚರ್ಚೆಗಳೇ ವಿಜೃಂಭಿಸುತ್ತವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಮುತುವರ್ಜಿ ವಹಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ, ಮನಸ್ಸುಗಳ ನಡುವೆ ಗೋಡೆಗಳನ್ನು ಕಟ್ಟುವ ಕಾರ್ಯವನ್ನು ತಲ್ಲೀನರಾಗಿ ಮಾಡುತ್ತಿದ್ದಾರೆ!
‘ನಮ್ಮ ಧರ್ಮವೇ ಶ್ರೇಷ್ಠ, ಇನ್ನೊಂದನ್ನು ದ್ವೇಷಿಸಬೇಕು’ ಎಂದು ಪ್ರತಿಪಾದಿಸುವ ಈ ಅಂಧಭಕ್ತರಿಗೆ ಅಹಮದಾಬಾದ್ ಸೇರಿದಂತೆ ಇಂತಹುದ್ದೇ ಇತರೆ ಘಟನೆಗಳು ಪರೋಕ್ಷವಾದ ಕಪಾಳಮೋಕ್ಷ. ದೇಹದ ಅಂಗಾಂಗಗಳಿಗೆ, ಹರಿಯುವ ರಕ್ತಕ್ಕೆ, ಉಸಿರಾಡುವ ಗಾಳಿಗೆ ಯಾವ ಧರ್ಮದ ಸೀಮಿತವೂ ಇಲ್ಲ ಎಂಬುದನ್ನು ಈ ಇಬ್ಬರು ನಾರಿಯರು ನಿರೂಪಿಸಿದ್ದಾರೆ. ಸಂಕುಚಿತ ಮನೋಭಾವವನ್ನು ಬದಿಗಿಟ್ಟು ಜೀವ ರಕ್ಷಣೆಗಾಗಿ ಕೈಜೋಡಿಸಿದ ಈ ಹಿಂದೂ-ಮುಸ್ಲಿಂ ಕುಟುಂಬಗಳ ಮೈತ್ರಿ ಶ್ಲಾಘನಾರ್ಹ.
ಈ ಘಟನೆ ಸಮಾಜದ ಕಣ್ಣು ತೆರೆಸುವ ದೀವಟಿಗೆ. ಕೋಮು ದ್ವೇಷದ ಕಿಡಿ ಹೊತ್ತಿಸಿ ಲಾಭ ಗಿಟ್ಟಿಸಿಕೊಳ್ಳುವ ರಾಜಕೀಯ ಧುರೀಣರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ವಿಷ ಕಾರುವ ಶಕ್ತಿಗಳಿಗೆ ಈ ಇಬ್ಬರು ಮಹಿಳೆಯರ ಸೌಹಾರ್ದತೆಯ ನಡೆ, ಎಂದಿಗೂ ಮರೆಯಲಾಗದ ಸಾಂಸ್ಕೃತಿಕ ಹಾಗೂ ಮಾನವೀಯ ಕಪಾಳಮೋಕ್ಷ!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



