ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಒಂದು ದೇಶದ ಆರ್ಥಿಕ ಸಾಮಾಜಿಕ ಸ್ಥಿತಿಯ ಜೊತೆಜೊತೆಗೆ ಕಲೆ ಮತ್ತು ಸಂಸ್ಕೃತಿಯು ಆ ದೇಶದ ಸ್ಥಾನಮಾನವನ್ನು ನಿರ್ಧರಿಸುತ್ತದೆ. ಕಲೆ ಮತ್ತು ಸಂಸ್ಕೃತಿಯಿಂದ ವಿಶೇಷ ಸ್ಥಾನ ಪಡೆದ ದೇಶಗಳು, ರಾಜ್ಯಗಳು, ಜಿಲ್ಲೆಗಳು, ಊರುಗಳು- ನಮ್ಮ ನಡುವೆ ಇವೆ. ಕಲೆಯು ಒಂದು ದೇಶದ ಶ್ರೀಮಂತಿಕೆ ಹೇಗೋ, ಹಾಗೆಯೇ ನಮ್ಮ ಬದುಕಿನ ನಿಜವಾದ ಶ್ರೀಮಂತಿಕೆಯೂ ಕಲೆಯೇ ಆಗಿದೆ.
ಹೀಗೆ ಕಲೆಯನ್ನು ಮೈಗೂಡಿಸಿಕೊಂಡು ತನ್ನ ಬದುಕಿನ ಹಾಗೂ ನಾಡಿನ ಶ್ರೀಮಂತಿಕೆಯನ್ನು ಎತ್ತಿ ಹಿಡಿದ ಆಶಾರಾಣಿ ಬಿ.ನಡೋಣಿಯವರು ನಮ್ಮ ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ 8 ಜುಲೈ 1977ರಲ್ಲಿ ಜನಿಸಿದರು. ಇವರ ತಂದೆ ಬಸವರಾಜು, ತಾಯಿ ಶೋಭಾರಾಣಿ. ಚಿಕ್ಕವರಿದ್ದಾಗಲೇ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ತಂದೆ ತಾಯಿಯರ ಪ್ರೋತ್ಸಾಹದಿಂದ ಹಾಸನದ ಶಾಂತಲಾ ಲಲಿತಕಲಾ ಕಾಲೇಜಿನಲ್ಲಿ ಎಎಂಜೆಡಿ ಫೈನ್ ಆರ್ಟ್, ಗದಗಿನ ವಿಜಯ ಕಲಾಮಂದಿರದಲ್ಲಿ, ಬಿಎಫ್‌ಎಂ ಪದವಿ ಹಾಗೂ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎಫ್‌ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವ್ಯಾಸಂಗ ಮುಗಿಸಿದ ನಂತರ ಬೇಲೂರು ತಾಲ್ಲೂಕಿನ ಅಡಗೂರು ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆಗೆ ಸೇರಿ, ಹತ್ತು ತಿಂಗಳ ಕಾಲ ಸೇವೆ ಸಲ್ಲಿಸಿದ ಇವರು ಪ್ರಸ್ತುತ ರಾಯಭಾಗ ತಾಲ್ಲೂಕಿನ ಮೇಖಳಿ ಗ್ರಾಮದ ಆದರ್ಶ ವಿದ್ಯಾಲಯ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬುದ್ದ, ಬಸವ, ಸಾವಿತ್ರಿ ಬಾ ಫುಲೆ, ಅಂಬೇಡ್ಕರ್‌ರವರ ತತ್ವಗಳಲ್ಲಿ ನಂಬಿಕೆ ಇರುವ ಆಶಾರಾಣಿ ಅವರು 25 ವರ್ಷಗಳ ಹಿಂದೆಯೇ ಅಂತರ್ಜಾತಿಯ ವಿವಾಹ ಮಾಡಿಕೊಂಡ ಧೈರ್ಯವಂತ, ವಿಚಾರವಂತ ಮಹಿಳೆ. ರಾಷ್ಟ್ರಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಚಿತ್ರಕಲಾವಿದರಾದ, ಬಹುಮುಖ ಪ್ರತಿಭಾವಂತರಾದ ಬಾಬುರಾವ್ ನಡೋಣಿಯವರ, ಪ್ರೀತಿಯ ಮಡದಿಯಾದ ಆಶಾರಾಣಿ ನಡೋಣಿಯವರದು ಅಪರೂಪದ ದಾಂಪತ್ಯ. ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ನಿರ್ಮಿತವಾಗಿರುವ ಇವರ ಮನೆ, ಕಲಾಕೃತಿಗಳ ಆಗರ, ಕಲೆಯ ಸಾಗರ. ಅಲ್ಲಿ ಆಶಾರಾಣಿ ನಡೋಣಿ ಹಾಗೂ ಬಾಬುರಾವ್ ನಡೋಣಿ ಎಂಬ ಎರಡು ನದಿಗಳು ಮೆಕ್ಕಲ ಮಣ್ಣು ಹರವಿವೆ! ಈ ಮಣ್ಣಿನಲ್ಲಿ ಬೆಳೆದ ಕಲಾಕೃತಿಗಳು- ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಪ್ಲಾಸ್ಟಿಕ್ ಹೂಗಳು ಹೇಗೆ ಸುಗಂಧ ಸೂಸಲಾರವೋ ಮೌಲ್ಯದ ಹಿನ್ನೆಲೆ ಇಲ್ಲದ ಚಿತ್ರಗಳು ಹಾಗೆಯೇ ಎನ್ನುವ ಇವರಿಗೆ, ಚಿತ್ರಕಲೆ ಎನ್ನುವುದು ಪ್ರವೃತ್ತಿ ಅಷ್ಟೇ ಅಲ್ಲ, ಅದು ಬದುಕು ಕೂಡ ಹೌದು.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಆಶಾ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು- ಮೈಸೂರು ಪೀಕಾಕ್ ಆರ್ಟ್ ಗ್ಯಾಲರಿ, ಮೀರಜ್(ಮಹಾರಾಷ್ಟ್ರ), ಮಾತುಂಗ(ಮುಂಬೈ) ಹರ್ಷದ ಆರ್ಟ್ ಗ್ಯಾಲರಿ, ಪಣಜಿ(ಗೋವಾ) ರವೀಂದ್ರ ಕಲಾಭವನ, 2019ರಲ್ಲಿ ಅಮೇಜಿಂಗ್ ಗೊನೇಟಿವ್ ಕಲಾ ಪ್ರದರ್ಶನ, 2019ರಲ್ಲಿ ಯುರೋಪಿನ ಹಂಗೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ, ಅಲ್ಲದೇ ಪೂನಾ, ಶಹಬಾದ್, ತುಮಕೂರು, ಗದಗ, ಬಿಜಾಪುರ, ಹಾಸನ, ಬೆಂಗಳೂರು ಹೀಗೆ ಅನೇಕ ಕಡೆ ಆಶಾ ಅವರು ತಮ್ಮ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆಸಿದ್ದಾರೆ. 2023ರಲ್ಲಿ ಆರ್ಟ್ ಅಂಡ್ ಇಂಟೆರಾಕ್ಷನ್ ಚಿತ್ರಕಲಾ ಪ್ರದರ್ಶನ, ಪ್ಯಾಗ್‌ನಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ, ಪಣಜಿಯ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ, ಸಿಮ್ಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ, ನೇಪಾಳದ ಕಟ್ಮಂಡುವಿನಲ್ಲಿ ನಡೆದ ಆರ್ಟ್ ಫೆಸ್ಟ್ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಹಾಗೂ ಇಂದೋರ್‌ನಲ್ಲಿ 2024ರಲ್ಲಿ ನಡೆದ ಆರ್ಟ್ ಎಕ್ಸ್‌ಪ್ಲೋರ್ ರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಪ್ರದರ್ಶನವಾಗಿವೆ ಇವೆಲ್ಲವೂ ಅವರ ಸಾಮರ್ಥ್ಯ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿದೆ. ಸಾಮೂಹಿಕ ಕಲಾಕೃತಿ ಪ್ರದರ್ಶನಗಳಂತೂ ನೂರಾರು ನಡೆದಿವೆ.
ಚಿತ್ರಕಲೆಯಲ್ಲಿ ಸಾಂಪ್ರದಾಯಿಕ ಶೈಲಿಯಾದ ‘ಚಿಕಣಿ’ ಚಿತ್ರ ಶೈಲಿಯನ್ನು ಪಳಗಿಸಿಕೊಂಡಿರುವ ಆಶಾರಾಣಿಯವರು, ಸೃಜನಾತ್ಮಕ ಕಲೆಯಲ್ಲಿಯೂ ಎತ್ತಿದ ಕೈ. ತಮ್ಮ ಕಲಾಕೃತಿಗಳಲ್ಲಿ ಸದಾ ಹೊಸತನಕ್ಕಾಗಿ ಹಾತೊರೆಯುವ ಇವರು ಸದಾ ಪ್ರಯೋಗಶೀಲರು. ಹೊಸ ಹೊಸ ಅಭಿವ್ಯಕ್ತಿಗಾಗಿ ಹುಡುಕಾಡುತ್ತಿರುವವರು ಕೂಡ. ಒಂಟಿ ಹೆಣ್ಣಿನ ಮನದಾಳದ ಜಟಿಲತೆಯನ್ನು ಪ್ರತಿಬಿಂಬಿಸುವ ‘ರಿಫ್ಲೆಕ್ಷನ್ ಆಫ್ ಮೂಡ್ಸ್’, ಸ್ತ್ರೀ ಸಂವೇದನೆಯ ಇವರ ಕಲಾಕೃತಿಗಳು ತಮ್ಮ ವಿಶಿಷ್ಟ ತಂತ್ರಗಾರಿಕೆ ಹಾಗೂ ವರ್ಣ ಸಂಯೋಜನೆ ಮತ್ತು ಸೊಗಸಾದ ಮೇಳೈಕೆಗಳಿಂದ ಪ್ರಸಿದ್ಧ ವಿಮರ್ಶಕರುಗಳ ಮೆಚ್ಚುಗೆ ಪಡೆದಿವೆ.
ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ
ಇವರ ಕಲಾಕೃತಿಗಳು ಓರಿಯನ್ ಆರ್ಟಿಸ್ಟ್ ಗ್ರೂಪ್ ಮೈಸೂರು, ಕಾರಿಡಾರ್ ಆಫ್ ಕಲರ್ಸ್ ಬೆಂಗಳೂರು, ವೈಜಯಂತಿ ಕಲಾಶಾಲೆ ಮೈಸೂರು, ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು, ಕೇರಳ ಲಲಿತಕಲಾ ಅಕಾಡೆಮಿ ಇನ್ನೂ ಮುಂತಾದ ಕಡೆ ಸಂಗ್ರಹವಾಗಿದೆ. ಅನೇಕ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ, ಹೊಯ್ಸಳ ಮಹೋತ್ಸವಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಸಕಲೇಶಪುರದಲ್ಲಿ 1999ರಲ್ಲಿ ನಡೆದ ರಾಜ್ಯಮಟ್ಟದ ‘ಕಾರ್ಗಿಲ್ ಒಂದು ನೆನಪು’ ಚಿತ್ರಕಲಾ ಶಿಬಿರದ ನಿರ್ದೇಶಕಿಯಾಗಿ, ಇನ್ನೂ ಅನೇಕ ಚಿತ್ರಕಲಾ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.

ಆಶಾರಾಣಿಯವರ ಕಲಾಸೇವೆಗಾಗಿ ದೊರೆತಿರುವ ಪ್ರಶಸ್ತಿಗಳು ಹತ್ತಾರು. 2019ರಲ್ಲಿ ಬೆಳಗಾವಿಯಲ್ಲಿ ಡಾ.ನಾಗಾಲೋಟಿಮಠ ಅವರ ಹೆಸರಿನಲ್ಲಿ ನೀಡುವ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ದೆಹಲಿಯಲ್ಲಿ 2009ರಲ್ಲಿ ಸಾವಿತ್ರಿ ಬಾ ಫುಲೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಜ್ಯ ಲಲಿತಾಕಲಾ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ತಿಲಕ್ ಸ್ಮಾರಕದ ವಿವಿ ಓಕ್ ಪ್ರಶಸ್ತಿ, ನಾಗಪುರದ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ರಾಷ್ಟ್ರೀಯ ಮೆರಿಟ್ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ… ಹೀಗೆ ಇನ್ನು ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಸನ್ಮಾನಗಳಂತೂ ನೂರಾರು.
ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ
ಪ್ರಸ್ತುತ ರಾಜ್ಯ ಲಲಿತಾ ಕಲಾ ಅಕಾಡೆಮಿಯ ಸದಸ್ಯೆಯಾಗಿರುವ ಇವರು ಪರಿಸರ ಪ್ರೇಮಿ ಕೂಡ ಹೌದು. ‘ಹೂ ಚಿಟ್ಟೆ ಆಕಾಶಗಳಲ್ಲಿ ಮೂಡುವ ನೈಸರ್ಗಿಕ ಬಣ್ಣಗಳನ್ನು ನೋಡಲು ನಮಗೆ ಅವಕಾಶ ಸಿಕ್ಕಿರುವುದೇ ಮಹಾಯೋಗ’ ಎನ್ನುತ್ತಾರೆ. ಅನ್ಯಾಯ ಕಂಡಲ್ಲಿ ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ದಿಟ್ಟ ಮಹಿಳೆ. ರಾಯಭಾಗ ತಾಲೂಕು ಹಾಲಶಿರಗೂರು ಗ್ರಾಮದ ಶ್ರೀ ಬಿಪಿ ಬಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲಿ ಅಷ್ಟೂ ಮಕ್ಕಳ ಶುಲ್ಕವನ್ನು ಇವರೇ ತುಂಬುತ್ತಿದ್ದರಲ್ಲದೆ 9 ಮತ್ತು 10ನೆಯ ತರಗತಿಯ ಸುಮಾರು 15 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತಿದ್ದರು. ಇದು ಇವರ ಪರೋಪಕಾರ, ಸೇವಾ ಮನೋಭಾವ, ಮಾನವೀಯ ಮೌಲ್ಯಕ್ಕೆ ಹಿಡಿದ ಕನ್ನಡಿ. ಇವರ ತಂದೆ ಉಪನ್ಯಾಸಕರಾಗಿದ್ದು ಅವರು ತೀರಿಕೊಂಡ ನಂತರ ಅವರ ನೆನಪಿಗಾಗಿ ಪ್ರತಿ ವರ್ಷವೂ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಜೀವನದ ಕೊನೆಯವರೆಗೂ ಈ ಸೇವೆಯನ್ನು ಮುಂದುವರಿಸುವೆ ಎಂದು ಹೇಳುತ್ತಾರೆ ಆಶಾರಾಣಿಯವರು.
ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು
ಇವರು ಕೇವಲ ಕಲಾವಿದೆ ಅಷ್ಟೇ ಅಲ್ಲ. ಒಬ್ಬ ಆದರ್ಶ ಗೃಹಿಣಿ ಕೂಡ. ಅತಿಥಿಸೇವೆಯಲ್ಲಿ ಇವರದು ಎತ್ತಿದ ಕೈ. ಉತ್ತರ ಕರ್ನಾಟಕ ಪ್ರವಾಹ ಪೀಡಿತವಾದ ಸಂದರ್ಭದಲ್ಲಿ, ನೆರೆ ಪೀಡಿತ ಪ್ರದೇಶಗಳ ಜನರ ಸಹಾಯಕ್ಕಾಗಿ ತೆರಳಿದ್ದ ಹಳೇಬೀಡಿನ ಒಂದು ದೊಡ್ಡ ತಂಡಕ್ಕೆ, ಹತ್ತು ದಿನಗಳ ಕಾಲ ಅವರು ನೀಡಿದ ಅತಿಥಿಸೇವೆಯನ್ನು ಆ ತಂಡ ಇಂದಿಗೂ ನೆನಪಿಸಿಕೊಳ್ಳುತ್ತದೆ. ಹೀಗೆ ಆಶಾರಾಣಿ ನಡೋಣಿ ಅವರು ರಾಷ್ಟ್ರಮಟ್ಟದ ಶ್ರೇಷ್ಠ ಕಲಾವಿದೆ ಮಾತ್ರ ಅಲ್ಲದೆ, ಅಪಾರ ಅಂತಃಕರಣವುಳ್ಳ ಸಮಾಜಮುಖಿ ವ್ಯಕ್ತಿತ್ವವುಳ್ಳವರು. ಪ್ರಸ್ತುತ ಲಲಿತಾ ಕಲಾ ಅಕಾಡೆಮಿಯ ಸದಸ್ಯೆಯಾಗಿ ಎಲೆಮರೆ ಕಾಯಂತೆ ಚಿತ್ರಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವ ಔದಾರ್ಯ ಇವರದು. ಇವರ ಕಲಾ ಬದುಕು ಮತ್ತಷ್ಟು ಔನತ್ಯಕ್ಕೇರಲಿ ಎಂಬುದೇ ಹಾರೈಕೆ.
-ಮಮತಾ ಪ್ರಭು




