ಉದ್ಯಾನ ಪರಭಾರೆ: ಅರಸು ಮಾಡಿದ್ದೇನು, ಡಿಕೆ ಮಾಡುತ್ತಿರುವುದೇನು?

Date:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 1ರಂದು ಉದ್ಯಾನ ಪರಭಾರೆ ವಿಧೇಯಕವನ್ನು ಮರುಪರಿಶೀಲಿಸಲು ಮತ್ತು ಚರ್ಚೆಗಾಗಿ ಸದನದಲ್ಲಿ ಮತ್ತೆ ಮಂಡಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಇದು ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ತಕ್ಷಣದ ತಂತ್ರವಾಗದೆ, ಅಂದು ಅರಸು ಮಾಡಿದಂತೆ, ಇಂದು ಡಿಕೆ ಕೂಡ ಉದ್ಯಾನ ಪರಭಾರೆ ಕೈಬಿಟ್ಟರೆ- ಮುಂದಿನ ತಲೆಮಾರು ಡಿ.ಕೆ. ಶಿವಕುಮಾರ್ ಅವರನ್ನು ಸ್ಮರಿಸಲಿದೆ.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಕಳೆದ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026 ಅನ್ನು ಆಗಸ್ಟ್ 24, 2026 ರಂದು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಯಾವುದೇ ವಿಸ್ತೃತ ಚರ್ಚೆ ಇಲ್ಲದೆ, ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಅಂಗೀಕರಿಸಲಾಯಿತು.

- Advertisement -

ಈ ವಿಧೇಯಕವು ಸರ್ಕಾರಿ ಉದ್ಯಾನವನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ. 5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಅಥವಾ ಸಾರ್ವಜನಿಕ ಉಪಯುಕ್ತತಾ ಯೋಜನೆಗಳಿಗೆ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಇಲ್ಲಿ ‘ಪರಭಾರೆ’ ಎಂದರೆ ಕೇವಲ ಮಾರಾಟವಲ್ಲ, ಅದರ ವ್ಯಾಪ್ತಿಯಲ್ಲಿ ಮಾರಾಟ, ಲೀಸ್/ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಮತ್ತು ಇತರ ರೀತಿಯ ವರ್ಗಾವಣೆಯನ್ನೂ ಒಳಗೊಂಡಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಇದು ಖಾಸಗಿ ವ್ಯಕ್ತಿ ಅಥವಾ ರಿಯಲ್ ಎಸ್ಟೇಟ್ ಕಂಪನಿಗೆ ಉದ್ಯಾನದ ಜಾಗ ಕೊಡುವ ಮುಕ್ತ ಅವಕಾಶ ಎಂದು ಸರ್ಕಾರ ಹೇಳುತ್ತಿಲ್ಲ. ವಿಧೇಯಕದ ಪ್ರಕಾರ ಮುಖ್ಯವಾಗಿ, ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಉಪಯುಕ್ತತೆ ಅಥವಾ ಮೂಲಸೌಕರ್ಯ ಯೋಜನೆಗಳಿಗಾಗಿ ಈ ಜಾಗವನ್ನು ಬಳಸಬಹುದು ಎನ್ನುತ್ತದೆ. ಉದಾಹರಣೆಗೆ ಸಾರ್ವಜನಿಕ ಉಪಯೋಗದ ರಸ್ತೆ, ಸೇತುವೆ, ಸುರಂಗ ರಸ್ತೆ, ಮೇಟ್ರೊ, ಮೇಲ್ಸೇತುವೆ ಯೋಜನೆಗಳಿಗಾಗಿ ಎಂಬ ಕಾರಣವನ್ನು ಮುಂದಿಡಬಹುದು.

ಇದೇ ಸಂದರ್ಭದಲ್ಲಿ ಸರ್ಕಾರ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 16.75 ಕಿಲೋಮೀಟರ್ ಉದ್ದದ ಅವಳಿ ಸುರಂಗ ರಸ್ತೆ ಯೋಜನೆಗೆ ಮುಂದಾಗಿದೆ. ಆ ಸುರಂಗ ರಸ್ತೆ ನಿರ್ಮಿಸಲು ಬೆಂಗಳೂರಿನ ಹೆಮ್ಮೆಯ ಪ್ರಕೃತಿ ತಾಣಗಳಾದ ಲಾಲ್‌ಬಾಗ್ ಮತ್ತು ಸ್ಯಾಂಕಿ ಕೆರೆಯ ಶೇ. 5ರಷ್ಟು ಭೂಮಿಯನ್ನು ಮೂಲಸೌಕರ್ಯದ ನೆಪದಲ್ಲಿ ಬಳಸಿಕೊಳ್ಳುವುದಕ್ಕಾಗಿಯೇ ಆತುರಾತುರವಾಗಿ ವಿಧೇಯಕವನ್ನು ಪಾಸು ಮಾಡಿಕೊಳ್ಳಲಾಗಿದೆ ಎಂಬುದು ವಿರೋಧ ಪಕ್ಷಗಳ ದೂರು ಆಗಿದೆ.

ಇದನ್ನು ಓದಿದ್ದೀರಾ?: ಸರ್ಕಾರ ಸುರಂಗ ರಸ್ತೆಯತ್ತ; ನಾಗರಿಕರ ಚಿತ್ತ ಪರಿಸರ ಸಂರಕ್ಷಣೆಯತ್ತ

ಸರ್ಕಾರದ ಉದ್ಯಾನ ಪರಭಾರೆ ವಿಧೇಯಕದಂತೆ ಲಾಲ್‌ಬಾಗ್ ಉದ್ಯಾನದ ಶೇ. 5ರಷ್ಟು ಭೂಮಿಯನ್ನು ಸುರಂಗ ರಸ್ತೆ ನಿರ್ಮಾಣಕ್ಕಾಗಿ ಬಳಸಿಕೊಳ್ಳುವುದು ಎಂದಾದರೆ… ನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್ ಉದ್ಯಾನವನದ ಸದ್ಯದ ವಿಸ್ತೀರ್ಣ 240 ಎಕರೆ. ಸರ್ಕಾರದ ವಿಧೇಯಕದ ಪ್ರಕಾರ ಉದ್ಯಾನದ ಶೇ.5 ಭೂಮಿ ಪರಭಾರೆ ಎಂದರೆ 12 ಎಕರೆ. ನಗರದ ಹೃದಯ ಭಾಗದಲ್ಲಿ 12 ಎಕರೆ ಜಾಗ, ಅದರ ಬೆಲೆ- ಸಾಮಾನ್ಯನ ಊಹೆಗೂ ನಿಲುಕದ್ದು. ಅದನ್ನು ಗೇಣಿ, ದೇಣಿಗೆ, ಮಾರಾಟ ಮಾಡಿದರೆ- ಮತ್ತೆ ಸಾರ್ವಜನಿಕರ ಸ್ವತ್ತಾಗುವುದು ಕನಸಿನ ಮಾತು.

ಈಗಾಗಲೇ ಬೆಂಗಳೂರು ನಗರ ವಲಸಿಗರಿಂದ ತುಂಬಿ ಆಸ್ಫೋಟಿಸುವ ಹಂತಕ್ಕೆ ಬಂದುನಿಂತಿದೆ. ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ನಗರ, ಸುಮಾರು ಒಂದು ಕೋಟಿ ಇಪ್ಪತ್ತೈದು ಲಕ್ಷ ವಾಹನಗಳನ್ನು ಹೊಂದಿದೆ. ನಿತ್ಯ ಸಂಚಾರ ದಟ್ಟಣೆ, ಹೊಗೆ, ಧೂಳು ಹೆಚ್ಚಾಗಿ ಉತ್ತಮ ಗಾಳಿಗೇ ಗಂಡಾಂತರ ಬಂದಿದೆ. ಉಸಿರಾಟವೇ ಕಷ್ಟವಾಗಿದೆ. ಇದರಿಂದಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಬಡವರು, ಕಾರ್ಮಿಕರು, ಮಧ್ಯಮವರ್ಗದವರು ಬದುಕುವುದೇ ಕಷ್ಟವಾಗುತ್ತಿದೆ.

ಇಂತಹ ಸಂದರ್ಭದಲ್ಲಿ ನಗರದ ಜನತೆಗೆ ಒಂಚೂರು ಉಸಿರಾಡಲು ಶುದ್ಧ ಗಾಳಿ ನೀಡುತ್ತಿರುವುದು ಕೆಲವೇ ಕೆಲವು ಉದ್ಯಾನಗಳು. ಈಗ ಸರ್ಕಾರ ಮೂಲಸೌಕರ್ಯದ ನೆಪದಲ್ಲಿ ಆ ಉದ್ಯಾನಗಳ ಭೂಮಿಗೂ ಬಾಯಿ ಹಾಕಲು ಯತ್ನಿಸುತ್ತಿದೆ. ಆ ಉದ್ಯಾನಗಳ ಮರಗಳ ಮಾರಣಹೋಮ ನಡೆಸಲು ಮುಂದಾಗಿದೆ. ಇದು ಭವಿಷ್ಯದಲ್ಲಿ ಹಸಿರು ಸಂಪತ್ತಿನ ನಾಶಕ್ಕೆ ದಾರಿ ಮಾಡಿಕೊಡುವ ಅಪಾಯಕಾರಿ ಹೆಜ್ಜೆಯಾಗಿದೆ.

lalbagh protest
ಉದ್ಯಾನವನ ಪರಭಾರೆ ವಿರುದ್ಧ ಪ್ರತಿಭಟಿಸಿದ ನಗರದ ನಾಗರಿಕರು

ಇದನ್ನು ವಿರೋಧಿಸಿ ಲಾಲ್‌ಬಾಗ್ ಉಳಿಸಿ ಅಭಿಯಾನ ಆರಂಭಿಸಲಾಗಿದೆ. ಕಳೆದ ಭಾನುವಾರ ಪರಿಸರ ತಜ್ಞರು, ಪರಿಸರವಾದಿಗಳು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ಕಾರ್ಯಕರ್ತರು, ಕಲಾವಿದರು, ಸಾರ್ವಜನಿಕರು ಲಾಲ್‌ಬಾಗ್‌ನ ಐತಿಹಾಸಿಕ ಕಲ್ಲು ಬಂಡೆಯನ್ನು ಅಪ್ಪಿ ಹಿಡಿದು ಸರ್ಕಾರದ ಪರಭಾರೆ ವಿದೇಯಕದ ವಿರುದ್ಧ ಪ್ರತಿಭಟಿಸಿದ್ದಾರೆ.

ನಗರದ ನಾಗರಿಕರ ಸ್ವಯಂಪ್ರೇರಿತ ಹೋರಾಟಕ್ಕೆ ವಿರೋಧ ಪಕ್ಷವಾದ ಬಿಜೆಪಿಯೂ ಕೈ ಜೋಡಿಸಿದೆ. ಜನರ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದ್ದು, ಅವರ ಜೊತೆಗೂಡಿದ್ದು ಮೆಚ್ಚಬೇಕಾದ ವಿಷಯವೇ. ಆದರೆ, ಅದೇ ಬಿಜೆಪಿ ಅರಾವಳಿ ಬೆಟ್ಟಗಳ ಬುಡದಲ್ಲಿ ಗಣಿಗಾರಿಕೆಗೆ ಉದ್ಯಮಿ ಗೌತಮ್ ಅದಾನಿಗೆ ಪರವಾನಗಿ ಕೊಟ್ಟ ವಿಚಾರದಲ್ಲಿ; ಬಿಹಾರ ಮತ್ತು ಮಹಾರಾಷ್ಟ್ರದ ಸಾವಿರಾರು ಮರಗಳನ್ನು ಕಡಿಯಲು ಅದಾನಿಗೆ ಅನುಮತಿಸಿರುವ ವಿಷಯದಲ್ಲಿ ಮೌನವಾಗಿದೆ. ಇಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂಬ ಕಾರಣಕ್ಕೆ ಪರಿಸರ ಪ್ರೇಮಿಗಳಂತೆ ಪೋಸು ಕೊಡುತ್ತಿದೆ. ಇದನ್ನು ಪ್ರತಿಭಟನಾನಿರತ ನಾಗರಿಕರು ಅರ್ಥ ಮಾಡಿಕೊಳ್ಳಬೇಕಿದೆ.

ಹಾಗೆಯೇ ನಾಗರಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿಯವರು, ‘ಲಾಲ್‌ಬಾಗ್‌ಗೆ ಸುರಂಗ ಕೊರೆಯುವ ಮೂಲಕ ಬೆಂಗಳೂರಮ್ಮನಿಗೆ ಚೂರಿ ಹಾಕಿ ಅಮ್ಮನ ಕಣ್ಣಲ್ಲಿ ನೀರು ಮಾತ್ರವಲ್ಲ ರಕ್ತ ಬರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರ ಜನಸಾಮಾನ್ಯರ ಧ್ವನಿಯನ್ನು ಆಲಿಸಿ, ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಈ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಸರ್ಕಾರದ ವಿರುದ್ಧ ಆಕ್ರೋಶಭರಿತರಾಗಿಯೇ ಮಾತನಾಡಿದ್ದಾರೆ.

89ರ ಹರೆಯದ ಯಲ್ಲಪ್ಪ ರೆಡ್ಡಿಯವರ ಆಕ್ರೋಶಕ್ಕೆ ಅರ್ಥವಿದೆ. ಅವರ ಪರಿಸರ ಪ್ರೇಮ ಇವತ್ತಿನದಲ್ಲ. ಅವರು ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದಾಗಲೇ, ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಪರಿಸರದ ಮಹತ್ವ ಕುರಿತು ಪಾಠ ಮಾಡಿದವರು. ಅದಕ್ಕೊಂದು ಉತ್ತಮ ಉದಾಹರಣೆಯಾಗಿ ಈ ಪ್ರಸಂಗವನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಬೇಲಿ ನುಗ್ಗಿದ ಸಿಎಂ

1979ರಲ್ಲಿ, ಬೆಂಗಳೂರಿಗೆ ವರ್ಗವಾಗಿ ಅರಣ್ಯ ಕೃಷಿಕನ ಹುದ್ದೆಯಲ್ಲಿ ಸಂಶೋಧನೆ ಮಾಡುತ್ತಿದ್ದೆ. ಆಗ ಐಐಎಂ ಎದುರಿನ ದೊರೆಸಾನಿ ಪಾಳ್ಯದ, ಅರಣ್ಯ ಇಲಾಖೆಗೆ ಸೇರಿದ, ನರ್ಸರಿಯಿದ್ದ 80 ಎಕರೆ ಜಾಗವನ್ನು ನಗರಾಭಿವೃದ್ಧಿ ಸಚಿವ ಬಿ. ಬಸವಲಿಂಗಪ್ಪನವರು ಬಿಡಿಎಗೆ ಕೊಟ್ಟು ಸೈಟ್ ಮಾಡಲು ಪ್ಲಾನ್ ಮಾಡಿದ್ದರು. ಅದಕ್ಕೆ ಅರಣ್ಯ ಸಚಿವರಾದ ಎಂ.ಸಿ. ನಾಣಯ್ಯನವರ ಒಪ್ಪಿಗೆಯನ್ನೂ ಪಡೆದಿದ್ದರು. ಆ ಜಾಗದಲ್ಲಿ ಅಪರೂಪದ ಜಾಲಾರಿ ಮರಗಳಿದ್ದವು. ಅವು ಪೈಂಟ್‌ನಂತಹ ವಿರಳ ವಸ್ತುವಿನ ಉತ್ಪಾದನೆಗೆ ಬೇಕಾದ ಅಪರೂಪದ ಜಾತಿಗೆ ಸೇರಿದ್ದವು. ಜೊತೆಗೆ ಆ ಪ್ರದೇಶ, ಬೆಳೆಯುತ್ತಿದ್ದ ಬೆಂಗಳೂರಿನ ಸ್ವಾಸ್ಥ ಕಾಪಾಡುತ್ತಿದ್ದ ಹಸಿರು ಪ್ರದೇಶವಾಗಿತ್ತು. 

ನಾನು ನೇರವಾಗಿ ಬಾಲಬ್ರೂಯಿಗೆ ಹೋಗಿ ಅರಸರನ್ನು ಕಂಡು, ‘ಬೆಂಗಳೂರು ಈಗಾಗಲೇ ಕಾಂಕ್ರೀಟ್ ಕಾಡಾಗಿದೆ, ಹಸಿರು ಕಣ್ಮರೆಯಾಗ್ತಿದೆ, ದಯವಿಟ್ಟು ನೀವೊಂದು ಸಲ ಸ್ಪಾಟ್ ಇನ್ಸ್‌ಸ್ಪೆಕ್ಷನ್ ಮಾಡಿ ನಂತರ ನಿರ್ಧರಿಸಿ’ ಎಂದೆ. ಆಗಲಿ ಎಂದು ದಿನ ಗೊತ್ತು ಮಾಡಿದರು. ಹೇಳಿದ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿ ದೇವರಾಜ ಅರಸು ಬಂದರು. ಅವರ ಹಿಂದೆ ಅರಣ್ಯ, ನಗರಾಭಿವೃದ್ಧಿ ಸಚಿವರೂ ಇದ್ದರು. ಅರಸರಿಗೆ ‘ಸರ್, ಸ್ವಲ್ಪ ದೂರ ನಡೆಯಬೇಕು’ ಎಂದೆ. ‘ಆಗಲಿ’ ಎಂದವರೆ ಕಾರು ಬಿಟ್ಟು ಕಚ್ಚಾ ರಸ್ತೆಯಲ್ಲಿ, ಪಂಚೆ ಎತ್ತಿಕೊಂಡು ನಡೆಯತೊಡಗಿದರು. ನಾನು ‘ಸರ್, ಈ ಕಡೆಯಿಂದ ಹೋದರೆ ದೂರ ಕಮ್ಮಿಯಾಗುತ್ತದೆ’ ಎಂದು ಬೇಲಿ ತೋರಿಸಿದೆ. ‘ಆಗಲಿ’ ಎಂದರು. ನಾನು ತಂತಿ ಬೇಲಿಯನ್ನು ಎತ್ತಿ ಹಿಡಿದೆ, ಅವರು ಬಗ್ಗಿ ನುಸುಳಿದರು. ದೂರದಲ್ಲಿ ನಿಂತಿದ್ದ ಮಂತ್ರಿಗಳು, ‘ಇವನ್ಯಾರ್‍ರಿ, ಮುಖ್ಯಮಂತ್ರಿಗಳನ್ನೇ ಬೇಲಿ ನುಗ್ಗಿಸುತ್ತಿದ್ದಾನೆ’ ಎಂದು ಸಿಟ್ಟಾದರು. ಆದರೂ ಅರಸರ ಹಿಂದೆ ಅವರೂ ಬಂದರು.

ನಾನು ಪರಿಸರ ಮಾಲಿನ್ಯ, ಹಸಿರು ಮನೆ ನಿರ್ಮಾಣ, ಭೂಮಿಯಲ್ಲಿ ಏರುವ ತಾಪಮಾನಗಳ ಬಗ್ಗೆ ಹೇಳುತ್ತಲೇ ನಗರ ವಿಸ್ತರಣೆಯಂತಹ ಯೋಜನೆಯಲ್ಲಿ ಶ್ರೀಮಂತರ ಭೋಗವಸ್ತುಗಳ ಮೂಲಕ ಉತ್ಪತ್ತಿಯಾಗುವ ವಿಲಾಸಿ ಮಾಲಿನ್ಯ ಮತ್ತು ಬಡತನದಿಂದಾಗಿ ಉಂಟಾಗುವ ಕೊಳಕು, ಕಾಯಿಲೆಗಳ ಗರೀಬಿ ಮಾಲಿನ್ಯದ ಬಗ್ಗೆ ಭಾವನಾತ್ಮಕವಾಗಿ ವಿವರಿಸಿ, ‘ಇಂಥ ಜಾಗಗಳನ್ನು ಬಿಟ್ಟುಕೊಡಬಾರದು ಸರ್, ಇಂಥವು ನಗರದ ಮಾಲಿನ್ಯವನ್ನು ಹೀರಿಕೊಳ್ಳುವ ಶ್ವಾಸಕೋಶಗಳು’ ಎಂದೆಲ್ಲ ವಿವರಿಸಿದೆ.

ಅಲ್ಲಿದ್ದ ನಗರಾಭಿವೃದ್ಧಿ ಸಚಿವರು, ‘ನೀವ್ಯಾರ್‍ರಿ, ಇಷ್ಟೆಲ್ಲ ಮಾತನಾಡೋಕೆ?’ ಎಂದರು. ಅರಸು ಅವರು ಸಾವಧಾನವಾಗಿ, ‘ಅವರು ಹೇಳೋದನ್ನು ಕೇಳಪ್ಪಾ… ಓಜೋನ್, ಸೆಕೆಂಡರಿ ಪಲ್ಯೂಟೆಂಟ್ಸ್ ಹೇಗಾಗುತ್ತೆ ಅಂತ ಹೇಳ್ತಿದಾರೆ, ವಿಷಯ ತಜ್ಞರು ಹೇಳ್ತಿದಾರೆ ಕೇಳೋದ್ರಲ್ಲಿ ತಪ್ಪೇನಿದೆ. ಆಮೇಲೆ ಬೇಕಾದ್ರೆ ತೀರ್ಮಾನ ತಗೊಳ್ಳೋಣ. ಮೊದಲು ಕೇಳಿ’ ಎಂದರು. ಸಚಿವರು ಸುಮ್ಮನಾದರು.

Yellappa reddy and Devaraj urs
ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಮತ್ತು ದೇವರಾಜ ಅರಸು

ಆ ನಂತರ ನನ್ನನ್ನು ಪ್ಯಾಲೆಸ್ ಗೆಸ್ಟ್ ಹೌಸ್‌ಗೆ ಕರೆದು, ‘ನಗರದ ಸುತ್ತಮುತ್ತಲ ಈ ರೀತಿಯ ಜಾಗಗಳನ್ನು ಗುರುತು ಮಾಡಿ ತೆಗೆದುಕೊಂಡು ಬಾ ಗ್ರೀನ್ ಬೆಲ್ಟ್ ಎಂದು ಮಾರ್ಕ್ ಮಾಡಿ ಅರಣ್ಯ ಇಲಾಖೆ ನಿರ್ವಹಣೆಗೆ ಒಪ್ಪಿಸೋಣ’ ಎಂದರು. ಹೇಳಿದಂತೆಯೇ ಬಹಳ ಮುಖ್ಯವಾದ ಗ್ರೀನ್ ಬೆಲ್ಟ್ ಕಾಯ್ದೆಯನ್ನು ಜಾರಿಗೆ ತಂದರು.

ಇವತ್ತು ಅದೇ ಗ್ರೀನ್ ಬೆಲ್ಟ್ ಏರಿಯಾಗಳನ್ನು ಆಸೆಬುರುಕ ಅಧಿಕಾರಿಗಳು ಮತ್ತು ಸ್ವಾರ್ಥ ರಾಜಕಾರಣಿಗಳು ಒಂದಾಗಿ ನೋಟಿಫೈ, ಡಿ ನೋಟಿಫೈ, ರೀಡೂ ನೆಪದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಸಸ್ಪೆಂಡ್ ಆದರೆ, ಮಂತ್ರಿಗಳು-ಮುಖ್ಯಮಂತ್ರಿಗಳು ಜೈಲು ಸೇರಿದ್ದನ್ನು ನೋಡುತ್ತಿದ್ದೇವೆ. ಅರಸು ವ್ಯಕ್ತಿಯೋ, ಶಕ್ತಿಯೋ, ಕ್ರಾಂತಿಕಾರಿಯೋ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕೆನಿಸುತ್ತದೆ… ಎಂದಿದ್ದರು.

ಇದನ್ನು ಓದಿದ್ದೀರಾ?: ತೇಜಸ್ವಿ ಸೂರ್ಯ | ಟನಲ್ ವಿರುದ್ಧ ಹುಲಿ – ಮೋದಿ ಬಳಿ ಅನುದಾನ ಕೇಳಲಾಗದ ಇಲಿ!

ಅಂದು ನಗರವನ್ನು ಕಾಂಕ್ರೀಟ್ ಕಾಡಿನಿಂದ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳನ್ನು ಸ್ಪಾಟ್ ಇನ್ಸ್‌ಸ್ಪೆಕ್ಷನ್‌ಗೆ ಕರೆಸಿದ, ಅವರಿಗೆ ಪರಿಸರದ ಪಾಠ ಮಾಡಿದ, ತಿಳಿವಳಿಕೆ ತುಂಬಿದ ಯಲ್ಲಪ್ಪ ರೆಡ್ಡಿಯವರು, ಇಂದು ಅದೇ ಉದ್ದೇಶಕ್ಕಾಗಿ 89ರ ಹರೆಯದಲ್ಲೂ ಬೀದಿಗಿಳಿದಿದ್ದಾರೆ. ನಗರದ ನಾಗರಿಕರೂ ಸ್ಪಂದಿಸಿದ್ದಾರೆ. ಅದು ಸಾರ್ವಜನಿಕ ಆಸ್ತಿ ಉಳಿಸುವ ನಿಟ್ಟಿನಲ್ಲಿ ಬಹಳ ಮುಖ್ಯ ನಡೆಯಾಗಿದೆ.

ನಾಗರಿಕರ ಪ್ರತಿಭಟನೆಯ ಫಲವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 1ರಂದು ಉದ್ಯಾನ ಪರಭಾರೆ ವಿಧೇಯಕವನ್ನು ಮರುಪರಿಶೀಲಿಸಲು ಮತ್ತು ಚರ್ಚೆಗಾಗಿ ಸದನದಲ್ಲಿ ಮತ್ತೆ ಮಂಡಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಇದು ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ತಕ್ಷಣದ ತಂತ್ರವಾಗದೆ, ಅಂದು ಅರಸು ಮಾಡಿದಂತೆ, ಇಂದು ಡಿಕೆ ಕೂಡ ಉದ್ಯಾನ ಪರಭಾರೆ ಕೈಬಿಟ್ಟರೆ- ಮುಂದಿನ ತಲೆಮಾರು ಡಿ.ಕೆ. ಶಿವಕುಮಾರ್ ಅವರನ್ನು ಸ್ಮರಿಸಲಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ...