ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವರು ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳ ವೈದ್ಯ ಅವರ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸಿದ ಪ್ರಸ್ತಾಪಕ್ಕೆ ಸದನವು ಧ್ವನಿಮತದ ಮೂಲಕ ಸರ್ವಾನುಮತದ ಒಪ್ಪಿಗೆ ನೀಡಿತು. ಬಳಿಕ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಮಂಕಾಳ ಸುಬ್ಬಾ ವೈದ್ಯ ಅವರು ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿದರು.
ನೂತನ ಉಪಸಭಾಧ್ಯಕ್ಷರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಶಾಸಕರು ಅಭಿನಂದನೆ ಸಲ್ಲಿಸಿದರು. ಬಿಜೆಪಿ ಶಾಸಕರಾದ ದಿನಕರ ಶೆಟ್ಟಿ, ಹರೀಶ್ ಪೂಂಜಾ, ಯಶಪಾಲ್ ಸುವರ್ಣ, ಆರ್.ವಿ. ದೇಶಪಾಂಡೆ, ಎಚ್.ಡಿ. ತಮ್ಮಯ್ಯ ಹಾಗೂ ಅರವಿಂದ ಬೆಲ್ಲದ್ ಅವರು ಮಂಕಾಳ ವೈದ್ಯ ಅವರ ರಾಜಕೀಯ ಹಾದಿ ಹಾಗೂ ಸಾರ್ವಜನಿಕ ಸೇವೆಯನ್ನು ಸದನದಲ್ಲಿ ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹನೂರು ರೈತರ ಎನ್ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ ’ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಮಂಕಾಳ ವೈದ್ಯ ಅವರು, ತಮ್ಮ ಬಾಲ್ಯದ ಕಷ್ಟದ ದಿನಗಳಿಂದ ಹಿಡಿದು ರಾಜಕೀಯ ಜೀವನದ ಏಳು-ಬೀಳುಗಳನ್ನು ನೆನಪಿಸಿಕೊಂಡರು.“ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ. ನಾನು ಬೆಂಗಳೂರಿಗೆ ಬಂದು ಅನೇಕ ಕೆಲಸ ಮಾಡಿದ್ದೇನೆ. ಹೋಟೆಲ್‌ನಲ್ಲಿ ಕೆಲಸ ಮಾಡಿದ್ದೇನೆ. ನಂತರ ಊರಿಗೆ ಹೋಗಿ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಮಾಡಿದೆ,” ಎಂದು ತಮ್ಮ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡರು.
ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗ ನಾಮಪತ್ರ ವಾಪಸ್ ಪಡೆಯುವಂತೆ ಹಲವರು ಒತ್ತಡ ಹೇರಿದ್ದರು. ಆದರೆ ತಾನು ಇಡಗುಂಜಿ ಗಣೇಶನನ್ನು ನಂಬಿದವನು ಎಂದು ಹೇಳಿದ ವೈದ್ಯ, ದೇವರ ಮೇಲೆ ನಂಬಿಕೆ ಇಟ್ಟು ಚುನಾವಣೆಗೆ ಸ್ಪರ್ಧಿಸಿದ್ದಾಗಿ ಹೇಳಿದರು.“ನಾನು ಇಡಗುಂಜಿ ಗಣೇಶನನ್ನು ನಂಬಿದವನು. ಅವನನ್ನು ನಂಬಿ ಕೆಲಸ ಮಾಡುವವನು. ಅಲ್ಲಿ ಭೇಟಿ ಕೊಟ್ಟು ನಾಮಿನೇಷನ್ ಹಾಕಿದೆ. 180 ವೋಟಿನಿಂದ ನಾನು ಗೆದ್ದೆ. ಸೋತೆ ಅಂತ ಹಲವರು ಹೇಳಿದರು. ನಾನು ಮನೆಗೆ ಹೊರಟಿದ್ದೆ. ಆಗ ನನಗೆ 180 ವೋಟಿನಿಂದ ಗೆದ್ದಿದ್ದು ಹೇಳಿದರು. ಮತ್ತೆ ಹೋಗಿ ಪ್ರಮಾಣ ಪತ್ರ ತಗೊಂಡೆ,” ಎಂದು ತಮ್ಮ ಮೊದಲ ಚುನಾವಣೆಯ ಅನುಭವವನ್ನು ಹಂಚಿಕೊಂಡರು.
ಆರ್.ವಿ. ದೇಶಪಾಂಡೆ ಪಕ್ಷಕ್ಕೆ ಕರೆತಂದರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದರು ಎಂದು ಮಂಕಾಳ ವೈದ್ಯ ಹೇಳಿದರು. ಆದರೆ ರಾಜಕೀಯದಲ್ಲಿ ಮುಂದುವರಿಯುವ ಸಂದರ್ಭದಲ್ಲಿ ಹಲವು ಬಾರಿ ಟಿಕೆಟ್‌ಗಾಗಿ ಹೋರಾಡಬೇಕಾಯಿತು ಎಂದು ಹೇಳಿದರು.
ಜಾಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರೂ ಸಿಗಲಿಲ್ಲ. ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಗೆದ್ದಿದ್ದಾಗಿ ವೈದ್ಯ ವಿವರಿಸಿದರು. ನಂತರ ಮತ್ತೆ ಟಿಕೆಟ್ ಸಿಗದ ಸಂದರ್ಭದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 1,800 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾಗಿ ನೆನಪಿಸಿಕೊಂಡರು.
2013ರ ವಿಧಾನಸಭಾ ಚುನಾವಣೆಯಲ್ಲೂ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾಗಿ ಹೇಳಿದರು. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸುಮಾರು 5,000 ಮತಗಳ ಅಂತರದಿಂದ ಸೋತಿದ್ದರು. ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಧೈರ್ಯವನ್ನು ವೈದ್ಯ ಸದನದಲ್ಲಿ ಸ್ಮರಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ-ಫಾರಂ ದೊರಕಿತು. ಪಕ್ಷದ ವತಿಯಿಂದ ಹಲವು ರೀತಿಯ ಸಹಕಾರವೂ ದೊರಕಿತು ಎಂದು ವೈದ್ಯ ತಿಳಿಸಿದರು.
ಚುನಾವಣೆಯಲ್ಲಿ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆದ್ದು, ಮೂರು ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿದರು. ’ಸಚಿವರಾಗಿದ್ದ ಅವಧಿಯಲ್ಲಿ ತಾವು ನಿರೀಕ್ಷಿಸಿದ ರೀತಿಯಲ್ಲಿ ಪೂರ್ಣ ಪ್ರಮಾಣದ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು.“ನನ್ನ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಿಲ್ಲ. ಅದಕ್ಕೆ ಬೇರೆ ಬೇರೆ ಕಾರಣ ಇದೆ. ಅದನ್ನು ಸದನದಲ್ಲಿ ಹೇಳಲಾರೆ,” ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಏನೂ ಆಸೆ ಇಲ್ಲದ ನನಗೆ, ನನ್ನ ಕ್ಷೇತ್ರದ ಜನ ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ಈಗ ಉಪಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಸಹಾಯ ಆಗುವ ಕೆಲಸ ಮಾಡ್ತೇನೆ. ತಮ್ಮ ಬಗ್ಗೆ ಹಲವು ಶಾಸಕರು ಸದನದಲ್ಲಿ ಮಾತನಾಡಿ ಅಭಿನಂದನೆ ಸಲ್ಲಿಸಿರುವುದಕ್ಕೂ ವೈದ್ಯ ಕೃತಜ್ಞತೆ ಸಲ್ಲಿಸಿದರು.“ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ,” ಎಂದು ಹೇಳಿದರು.
ಕಷ್ಟದ ಬದುಕಿನಿಂದ ಆರಂಭವಾಗಿ ಜಿಲ್ಲಾ ಪಂಚಾಯಿತಿ ರಾಜಕೀಯ, ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು, ಹಲವು ಬಾರಿ ಟಿಕೆಟ್‌ಗಾಗಿ ಹೋರಾಟ, ವಿಧಾನಸಭೆ ಪ್ರವೇಶ, ಸಚಿವ ಸ್ಥಾನ ಹಾಗೂ ಇದೀಗ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ—ಮಂಕಾಳ ವೈದ್ಯ ಅವರ ರಾಜಕೀಯ ಪಯಣ ಹಲವು ಏಳು-ಬೀಳುಗಳನ್ನು ಕಂಡಿದೆ. ಇದೀಗ ಹೊಸ ಜವಾಬ್ದಾರಿಯೊಂದಿಗೆ ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸುವಲ್ಲಿ ಸಭಾಧ್ಯಕ್ಷರಿಗೆ ಸಹಕಾರ ನೀಡುವ ಹೊಣೆಗಾರಿಕೆ ಅವರ ಮೇಲಿದೆ.




