ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಪುರುಷರಿಗೆ ಸಮಾನವಾದ ಅವಕಾಶಗಳು ಹೆಣ್ಣುಮಕ್ಕಳಿಗೂ ಸಿಗಬೇಕೆನ್ನುವ ಕಾರಣಕ್ಕಾಗಿಯೇ ಮಹಿಳೆಯರಿಗೆ ವಿಶೇಷ ಸವಲತ್ತು, ಮೀಸಲಾತಿಗಳು ಹೋರಾಟದ ಮೂಲಕ ಸಿಕ್ಕಿದ್ದು. ಆದರೂ ಇಂದಿಗೂ ಸಾಕಷ್ಟು ಓರೆಕೋರೆಗಳಿವೆ. ಕೆಲವು ಸರ್ಕಾರಿ ಇಲಾಖೆಗಳಲ್ಲಿ ತಾರತಮ್ಯ ಹೋಗಲಾಡಿಸಲಾಗಿಲ್ಲ. ನಿರ್ಧಾರ ತೆಗೆದುಕೊಳ್ಳುವಲ್ಲಿ ಹಾಗೂ ಅವಕಾಶಗಳನ್ನು ಪಡೆಯುವಲ್ಲಿ ಪುರುಷ ಪಾರಮ್ಯವೇ ಕಾಣುತ್ತದೆ. ಇಂತಹ ವ್ಯವಸ್ಥೆಯನ್ನು ಬದಲಿಸಲು ಹೋರಾಟ ಅನಿವಾರ್ಯ. ಈ ಹಿನ್ನೆಲೆಯಲ್ಲಿ ದುಡಿವ ಸ್ಥಳದಲ್ಲಿ ಸಾಮಾಜಿಕ ನ್ಯಾಯ, ಗೌರವ ಹಾಗೂ ಕನಿಷ್ಠ ಸವಲತ್ತುಗಳಿಗಾಗಿ ಸಹೋದ್ಯೋಗಿ ಹೆಣ್ಣುಮಕ್ಕಳೊಂದಿಗೆ ಸಂಘಟನೆ ಮಾಡಿಕೊಂಡು ಹೋರಾಟ ನಡೆಸುತ್ತಿರುವವರು ಎಂ.ಬಿ. ಪುಷ್ಪ.
ಪುಷ್ಪ ಅವರು ಅಂಗನವಾಡಿ ಶಿಕ್ಷಕಿ. ಆ ಸಮುದಾಯದ ಶಕ್ತಿ ಮತ್ತು ದನಿ ಎನ್ನಬಹುದು. ಇವರು ಅಂಗನವಾಡಿ ಶಿಕ್ಷಕಿಯರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದ ಕಥೆ ಸಾಮಾನ್ಯವಾದುದೇನೂ ಅಲ್ಲ. ಮಧ್ಯಮ ವರ್ಗದ ಪುಷ್ಪ ಅವರು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿದ್ದರೂ, ಬದುಕಿನ ಪಾಠಗಳನ್ನು ಹೋರಾಟದ ಹಾದಿಯಲ್ಲಿ ವಿಪುಲವಾಗಿ ಕಲಿತಿದ್ದಾರೆ. ತನ್ನ ಕರ್ತವ್ಯದ ಹೊಣೆಗಾರಿಕೆಯನ್ನು ಅರಿತು, ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಧೈರ್ಯದಿಂದ ಪ್ರಶ್ನಿಸುವ ಗುಣ ಇವರನ್ನು ಗುರುತಿಸುವಂತೆ ಮಾಡಿದೆ. ಸಮಾಜದ ಮುಂದೆ ನಿಂತು ದಿಟ್ಟತನದಿಂದ ಹೆಣ್ಣುಮಕ್ಕಳ ಸಂಕಷ್ಟಗಳನ್ನು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಮರ್ಥವಾಗಿ ತಲುಪಿಸಿದ ನಾಯಕಿ ಇವರು. ಪ್ರಸ್ತುತ ಇವರು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷೆಯಾಗಿ ಹಾಗೂ ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಬೇಲೂರು ತಾಲ್ಲೂಕಿನ ಮುಗುಳುವಳ್ಳಿಯ ಮಣ್ಣಿನಲ್ಲಿ 1968ರ ಜೂನ್ ಒಂದರಂದು ಅರಳಿದ ಕುಸುಮ ಈ ಪುಷ್ಪ. ತಂದೆ ಬೋರಣ್ಣಗೌಡ ಮತ್ತು ತಾಯಿ ಚೆನ್ನಮ್ಮ ಅವರ ಪ್ರೀತಿಯ ಮಗಳಾಗಿ ಬೆಳೆದ ಇವರು, ಮುಂದೆ ಮಾಳೇಗೆರೆಯ ಸೊಸೆಯಾಗಿ ಹೋದರು. ಇವರ ಪತಿ ಚಂದ್ರೇಗೌಡ, ಬೇಕರಿ ನಡೆಸುತ್ತಿದ್ದರು. ಸಂಸಾರದ ಜವಾಬ್ದಾರಿ, ಸಂಘಟನೆಯ ಹಾದಿ ಮತ್ತು ವೃತ್ತಿ ಬದುಕು ಎಂಬ ಮೂರು ದೋಣಿಗಳಲ್ಲಿ ಏಕಕಾಲಕ್ಕೆ ಸಾಗಿ, ಪುಷ್ಪ ಎಲ್ಲರ ಪ್ರೀತಿ-ವಿಶ್ವಾಸದ ನೆಲೆಗಟ್ಟಾದರು.
1988ರಲ್ಲಿ ಮನೆಯವರ ವಿರೋಧದ ಅಲೆಗಳ ನಡುವೆಯೂ, ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲದಿಂದ ವೃತ್ತಿ ಬದುಕಿನ ಕಡಲಿಗೆ ಧುಮುಕಿದರು. ಆದರೆ ಅಲ್ಲಿ ಎದುರಾದದ್ದು ಗೌರವದ ಹೂಮಳೆಯಲ್ಲ, ಬದಲಾಗಿ ‘ಕಡಿಮೆ ಓದಿದವರು, ಕಡಿಮೆ ವೇತನ ಪಡೆಯುವವರು’ ಎಂಬ ಅಧಿಕಾರಿಗಳ ತಾತ್ಸಾರ ಮತ್ತು ಕಟುವಾದ ನಿಂದನೆಗಳು. ಪ್ರತಿಯೊಂದು ಸಲ ಸ್ವಾಭಿಮಾನಕ್ಕೆ ಗಾಯವಾದಾಗಲೂ, ನೊಂದ ಮನಸ್ಸು ಮೌನವಾಗಿ ಅಳಲಿಲ್ಲ; ಬದಲಾಗಿ ಅದು ಕೆಂಡವಾಗಿ ಮಾರ್ಪಟ್ಟು ಹೋರಾಟದ ಕಿಚ್ಚನ್ನು ಹಚ್ಚಿತು.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಸಂಘಟನೆಯ ನೇತಾರರಾಗಿದ್ದ ರಾಧಾ ಸುಂದರೇಶ್ ಅವರು ಮೊದಮೊದಲು ಅಂಗನವಾಡಿ ಅಮ್ಮಂದಿರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಅವರ ಮರಣದ ನಂತರ ಸಂಘಟನೆ ದುರ್ಬಲಗೊಂಡಾಗ, ಸಿಐಟಿಯು ರಾಜ್ಯ ಪ್ರಧಾನ ಸಂಘಟಕಿ ವರಲಕ್ಷ್ಮಿ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ 1989ರಲ್ಲಿ ಪುಷ್ಪ ಅವರು ಸಂಘಟನೆಯ ದೊಡ್ಡ ಜವಾಬ್ದಾರಿ ವಹಿಸಿಕೊಂಡರು. ಎಐಟಿಯುಸಿಯಲ್ಲಿ ಹೋರಾಟದ ಬದುಕು ಆರಂಬಿಸಿದ ಪುಷ್ಪ ನಂತರ ಸಿಐಟಿಯು ಮೂಲಕ ನಾಯಕತ್ವದ ರೂಪದಲ್ಲಿ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡಿದರು. ಇದು ಇವರ ದಕ್ಷತೆಗೆ ಸಂದ ಗೌರವ.
2018ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ನಡೆದ ‘ದಿಲ್ಲಿ ಚಲೋ’ ಚಳವಳಿಯಲ್ಲಿ ಭಾಗವಹಿಸಿದ್ದು ಒಂದು ದೊಡ್ಡ ಅನುಭವ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಪಡಿಸುವಂತೆ ಒತ್ತಾಯಿಸಿದ ಆ ಹೋರಾಟದ ಫಲವಾಗಿ ಕಾರ್ಮಿಕರ ವೇತನದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಯಿತು.
ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…
ಅಂಗನವಾಡಿ ಶಿಕ್ಷಕಿಯರಿಗೆ ಬೇಸಿಗೆ ರಜೆ ಪಡೆಯುವ ಸಲುವಾಗಿ 2008ರಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಐತಿಹಾಸಿಕ ಚಳವಳಿಯಲ್ಲಿ ಲಾಠಿ ಚಾರ್ಜ್ ಎದುರಿಸಿಯೂ ಹೋರಾಟ ಮುಂದುವರಿಸಿದರು. 2013ರಲ್ಲಿ ಗ್ರಾಚ್ಯುಟಿಗಾಗಿ 10 ದಿನಗಳ ಕಾಲ ಬೀದಿಯಲ್ಲಿ ಮಲಗಿ ಹೋರಾಟ ಮಾಡಿದರು. ಅಕ್ಷರ ದಾಸೋಹ(ಬಿಸಿಯೂಟ) ನೌಕರರನ್ನು ಕೇವಲ 300 ರೂಪಾಯಿ ವೇತನಕ್ಕೆ ದುಡಿಸಿಕೊಂಡು ನಂತರ ಅವರನ್ನು ಕೈಬಿಟ್ಟು, ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾದಾಗ, ಶಿಕ್ಷಣ ಸಚಿವರಿಗೆ ಮುತ್ತಿಗೆ ಹಾಕಿ ಆದೇಶ ಹಿಂಪಡೆಯುವಂತೆ ಮಾಡಿದ್ದು ಹಾಗೂ ಅವರ ವೇತನ ಹೆಚ್ಚಳ ಮಾಡಿಸಿದ್ದು ಪುಷ್ಪ ಮತ್ತು ಅವರ ಸಂಗಡಿಗರ ದೊಡ್ಡ ಸಾಧನೆ.
ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾರ್ಮಿಕರಿಗೆ ಕನಿಷ್ಠ ಕೂಲಿ 6 ಸಾವಿರ ರೂ. ನಿಗದಿ ಮಾಡುವಂತೆ 12 ದಿನಗಳ ಕಾಲ ಅನಿಶ್ಚಿತಾವಧಿ ಹೋರಾಟ ನಡೆಸಿದ್ದು ಐತಿಹಾಸಿಕ ದಾಖಲೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಅಡುಗೆ ಮಾಡಿ, ಅಲ್ಲಿಯೇ ಮಲಗಿ ಹಕ್ಕುಗಳಿಗಾಗಿ ಆಗ್ರಹಿಸಿದರು. 2018ರಲ್ಲಿ ಮೆಜೆಸ್ಟಿಕ್ ರಸ್ತೆ ಬಂದ್ ಮಾಡಿ ಕಡು ಬಡವರಿಗಾಗಿ ನಿವೇಶನ ಮಂಜೂರಾತಿಗಾಗಿ ಹೋರಾಡಿದ ಸಂದರ್ಭದಲ್ಲಿ- ‘ನಮ್ಮ ಬ್ಯಾರಿಕೇಡ್ ಹಾರಿ ಬಂದು ನಮ್ಮನ್ನು ಅರೆಸ್ಟ್ ಮಾಡಿದ್ದರು. ಆದರೂ ಧೈರ್ಯದಿಂದ ಹೋರಾಟ ನಿಲ್ಲಿಸದೆ ಮುಂದುವರಿಸಿದ್ದೇವೆ’ ಎಂದು ತಮ್ಮ ಹೋರಾಟದ ವಿವಿಧ ಮಜಲುಗಳನ್ನು ತೆರೆದಿಡುತ್ತಾರೆ ಪುಷ್ಪ.
ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ
ಕಾರ್ಮಿಕರಿಗೆ ಮತ್ತು ಬಿಸಿಯೂಟ ನೌಕರರಿಗೆ ಕಾನೂನಿನ ಅರಿವಿಲ್ಲದ ಕಾರಣ ಅವರನ್ನು ಸಂಘಟಿಸುವುದು ಸುಲಭದ ಮಾತಲ್ಲ. ಮನೆ-ಮಠ ತೊರೆದು ಸ್ವಂತ ಖರ್ಚಿನಲ್ಲಿ ರಾಜಧಾನಿಯ ಬೀದಿಗಳಲ್ಲಿ ಮಳೆ-ಚಳಿ ಎನ್ನದೆ ಎರಡು, ಮೂರು ಕೆಲ ವೇಳೆ ನಾಲ್ಕು ದಿನಗಳವರೆಗೂ ಹೋರಾಡುವ ಮನಸ್ಥಿತಿ ರೂಪಿಸುವುದು ಸುಲಭದ ಕೆಲಸವಲ್ಲ, ಅದನ್ನು ಸಂಘಟನೆಗಳ ತರಬೇತಿಗಳ ಮೂಲಕ ರೂಪಿಸುವುದು ದೊಡ್ಡ ಸಾಹಸದ ಕಾರ್ಯ ಎನ್ನುತ್ತಾರೆ ಪುಷ್ಪ. ‘ಇಷ್ಟೆಲ್ಲಾ ಸಾಹಸ ಮಾಡಿ ಹೋರಾಟದಲ್ಲಿ ಪಾಲ್ಗೊಳಿಸಿದಾಗ ಕೆಲವೊಮ್ಮೆ ನೋವು, ಬೇಸರ, ನಿರಾಸೆಯ ಭಾವ ಮೂಡುವುದು ಸಹಜವಾದರೂ ಹೋರಾಟಕ್ಕೆ ಜಯ ಸಿಕ್ಕಾಗ ಬರುವ ಹುಮ್ಮಸ್ಸು ಇದೆಯಲ್ಲ- ಅದು ಆನೆಬಲ ನೀಡುತ್ತದೆ’ ಎಂಬುದು ಪುಷ್ಪ ಅವರ ವ್ಯಕ್ತಿತ್ವ ವಿಕಸನಗೊಂಡ ಮಾತು.
‘ಬರೀ ಹೆಣ್ಣುಮಕ್ಕಳೇ ಇರುವ ಈ ಸಂಘಟನೆಯಲ್ಲಿ ನೂರಾರು ಸಂಕಷ್ಟಗಳಿವೆ. ನಮ್ಮ ಹಕ್ಕು ಮತ್ತು ಸುರಕ್ಷತೆಗಾಗಿ ನಾವೇ ಧ್ವನಿ ಎತ್ತದಿದ್ದರೆ ಇಲಾಖೆಗಳು ನಮ್ಮನ್ನು ಕಡೆಗಣಿಸುತ್ತವೆ. ಇದಕ್ಕಾಗಿಯೇ ನಮ್ಮ ಸಂಘಟನೆ(ಅಂಗನವಾಡಿ ನೌಕರರ ಸಂಘ) ಹುಟ್ಟಿಕೊಂಡಿದೆ. ನಂತರ ಸಿಐಟಿಯು ಮೂಲಕ ಹೋರಾಟದ ಹಾದಿಯನ್ನು ಸ್ಪಷ್ಟವಾಗಿ ಕಲಿತೆವು’ ಎನ್ನುತ್ತಾರೆ ಪುಷ್ಪ.
ಬಾಲ್ಯದಿಂದಲೂ ತಪ್ಪನ್ನು ನೇರವಾಗಿ ಪ್ರಶ್ನಿಸುವ, ಕೇಳುವ ಖಂಡಿಸುವ ಗುಣ ಇವರಲ್ಲಿ ಇದ್ದುದರಿಂದ ‘ನೌಕರಿಗೆ ಸೇರಿದ ಒಂದೇ ವರ್ಷದಲ್ಲಿ(1989) ತಮ್ಮ ಕಾರ್ಯದಕ್ಷತೆ, ನಾಯಕತ್ವ ಗುಣದ ಆಧಾರದಲ್ಲಿ ಸರ್ಕಲ್ ಲೀಡರ್ ಆಗಿ, ಮಹಿಳೆಯರ ಹಕ್ಕುಗಳ ಹೋರಾಟದ ಭಾಗವಾಗಿ ಕಾರ್ಮಿಕರ ಹಕ್ಕುಗಳನ್ನು ರೂಢಿಸುವ ಕಲೆಗಾರಿಕೆಯನ್ನು- ಹಕ್ಕುಗಳ ಹೋರಾಟದ ಮುಂಚೂಣಿ ನಾಯಕರುಗಳೊಂದಿಗೆ ಸೇರಿಕೊಂಡು ಅನುಭವಗಳನ್ನು ಪಡೆದುಕೊಳ್ಳುತ್ತಾ ಹೋದೆ’ ಎನ್ನುವ ಪುಷ್ಪ ಅವರು ಈ ಹಾದಿಯಲ್ಲಿ ಸಾಗಲು ನೆರವಾದ ಎಐಟಿಯು ಹಾಗೂ ಸಿಐಟಿಯು ನೇತಾರರನ್ನು ಸ್ಮರಿಸುತ್ತಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ತಮ್ಮ ಸಂಘಟನೆಯ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಅವರು ಪ್ರಯತ್ನಿಸಿದ್ದಾರೆ. ‘ವೃತ್ತಿಯ ಆರಂಭದಲ್ಲಿ ಮಕ್ಕಳ ತೂಕ ಮಾಡಲು ಹೋದಾಗ ತಾಯಂದಿರು ಮೂಢನಂಬಿಕೆಯಿಂದ ಅಡ್ಡಿಪಡಿಸುತ್ತಿದ್ದ ದಿನಗಳಿದ್ದವು. ಆದರೂ ಎದೆಗುಂದದೆ ಅವರೊಳಗಿನ ಮೌಢ್ಯ ಹಾಗೂ ಅನೈರ್ಮಲ್ಯ ದೂರ ಮಾಡಲು ಸಂಘಟನಾತ್ಮಕವಾಗಿ ಶ್ರಮಪಟ್ಟಿದ್ದೇವೆ. ಅದರ ಭಾಗವಾಗಿ ಇಂದು ಗರ್ಭಿಣಿಯರ, ಬಾಣಂತಿಯರ ಆಲೋಚನಾ ಕ್ರಮ, ಆಹಾರ ಕ್ರಮ ಮತ್ತು ಸ್ವಚ್ಛತೆಯ ವಿಚಾರದಲ್ಲಿ ಆಗಿರುವ ಬದಲಾವಣೆ ಮಾತ್ರವಲ್ಲ, ಅವರುಗಳನ್ನು ಸ್ವ-ಸಹಾಯ ಸಂಘಗಳಲ್ಲಿ ಪಾಲ್ಗೊಳಿಸಲು ಅಂಗನವಾಡಿ ಶಿಕ್ಷಕಿಯರ ಶ್ರಮ ಅಪಾರವಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಗುಡಿಸಲುಗಳಲ್ಲಿ ಕೇಂದ್ರಗಳನ್ನು ನಡೆಸುತ್ತಿದ್ದೆವು. ಆಹಾರದ ಮೂಟೆಗಳನ್ನು ಹೊತ್ತು ತಂದು, ಮನೆಮನೆಗೆ ಹೋಗಿ ಸೌದೆ ಬೇಡಿ ತಂದು ಅಡುಗೆ ಮಾಡುತ್ತಿದ್ದೆವು. ಇಂದು ನಮ್ಮ ಹೋರಾಟದ ಫಲವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ವಂತ ಕಟ್ಟಡಗಳನ್ನು ಪಡೆದಿದ್ದೇವೆ. ಜೊತೆಗೆ ಗ್ರಾಮಗಳಲ್ಲಿ ಕೆಲವರ ದೌರ್ಜನ್ಯಗಳನ್ನು ಸಹಿಸಿಕೊಂಡು ಗಟ್ಟಿಯಾಗಿ ನೆಲೆಯೂರಿ, ನೌಕರರಿಗೆ ವೇತನ ಭದ್ರತೆ, ಸೇವಾ ಭದ್ರತೆ ಹಾಗೂ ಸುರಕ್ಷತೆಯನ್ನು ಪಡೆದಿದ್ದೇವೆ. ಸರ್ಕಾರ ಹೋರಾಟವಿಲ್ಲದೆ ಯಾವುದನ್ನೂ ಕೊಟ್ಟ ಉದಾಹರಣೆ ಇಲ್ಲ’ ಎಂದು ಪುಷ್ಪ ಅವರು ಸಂಘಟನೆಯ ಶಕ್ತಿಯನ್ನು ಎತ್ತಿ ಹಿಡಿಯುತ್ತಾರೆ.
ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ
ಹಾಸನ ಜಿಲ್ಲೆಯಲ್ಲಿ ಪ್ರಸ್ತುತ 2548 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿವೆ. ಇನ್ನುಳಿದ 1886 ಕೇಂದ್ರಗಳಿಗೆ ಕಟ್ಟಡದ ಅಗತ್ಯವಿದೆ. ಪಂಚಾಯಿತಿ ಕೊಠಡಿ, ಸಮುದಾಯ ಭವನ, ಬಾಡಿಗೆ ಕಟ್ಟಡ ಹೀಗೆ ವಿವಿಧೆಡೆ ಕೇಂದ್ರಗಳು ನಡೆಯುತ್ತಿವೆ. ‘ಅಂಗನವಾಡಿ ಕೆಲಸವೆಂದರೆ ಕೇವಲ ಮಕ್ಕಳನ್ನು ನೋಡಿಕೊಳ್ಳುವುದು’ ಎಂದು ಸುಲಭವಾಗಿ ಮಾತನಾಡುವವರು ಒಂದು ದಿನ ಅಲ್ಲಿ ಕಳೆದು ನೋಡಬೇಕು. ನಿರಂತರವಾಗಿ ಅಳುವ, ಚೇಷ್ಟೆ ಮಾಡುವ ಮುಗ್ಧ ಮಕ್ಕಳನ್ನು ಸಂಭಾಳಿಸಿ ಅವರಿಗೆ ಶಿಕ್ಷಣ ನೀಡುವುದು ತಾಯ್ತನದ ಹೃದಯಕ್ಕೆ ಮಾತ್ರ ಸಾಧ್ಯ.
ಇಂತಹ ತಾಯ್ತನದ ಹೊಣೆಗಾರಿಕೆಯ ಜೊತೆಜೊತೆಗೆ ಸಮಾಜಕಲ್ಯಾಣ ಇಲಾಖೆ ಕೊಡ ಮಾಡುವ ತರತರದ ಕೆಲಸಗಳು, ಬಗೆಬಗೆಯ ಲೆಕ್ಕಾಚಾರಗಳು ಮತ್ತು ಜವಾಬ್ದಾರಿಗಳು ಅಗಾಧ. ಇವುಗಳನ್ನು ಜಾಣತನದಿಂದ ನಿಭಾಯಿಸುತ್ತಾ, ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲು ಪುಷ್ಪ ಅವರಂತಹ ನಾಯಕತ್ವದ ಅಗತ್ಯವಿದೆ. ಅವರ ಪತಿ ತೀರಿಕೊಂಡು ಈಗ 16 ವರ್ಷಗಳೇ ಕಳೆದಿವೆ. ಇಬ್ಬರು ಗಂಡುಮಕ್ಕಳು ಓದಿ ಕೆಲಸಕ್ಕೆ ಹೋಗುತ್ತಿದ್ದಾರೆ. ಪುಷ್ಟ ಅವರ ಹೋರಾಟದ ಹಾದಿ ಹೀಗೆಯೇ ಮುಂದುವರಿಯಲಿ ಮತ್ತು ಸದಾ ಜಯ ಸಿಗಲಿ ಎಂದು ಹಾರೈಸೋಣ.
-ವನಜಾಕ್ಷಿ ಬೆಟ್ಟದಾಲೂರು




