ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹುಟ್ಟಿ ಬೆಳೆದ ಪರಿಸರ, ಶಿಕ್ಷಣ, ಪ್ರತಿಭೆ, ಸ್ಪಷ್ಟತೆ, ಅರಿವು, ಸ್ಪಂದನೆ, ಕೆಚ್ಚು ಹದವಾಗಿ ಬೆರೆತಲ್ಲಿ ಸಾಧಕರ ಕೆಲಸಗಳು ದಾಖಲೆಯಾಗಿ ನಿಲ್ಲುತ್ತವೆ. ಹಲವು ವಿಶಿಷ್ಟತೆಗಳ ಪ್ರತಿಭೆ ಶ್ವೇತಾ ರಾಣಿ ಎಚ್.ಕೆ. ದೇಶಾದ್ಯಂತ 3500 ನಾಟಕಗಳನ್ನು ಪ್ರದರ್ಶಿಸಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ- ರಾಜ್ಯದಲ್ಲೇ ರಂಗಶಾಲೆಗೆ ಸಂಬಂಧಿಸಿದಂತೆ ಮೊದಲ ಮಹಿಳಾ ಪ್ರಾಂಶುಪಾಲರಾಗಿ, 40 ವರ್ಷಗಳ ಇತಿಹಾಸವುಳ್ಳ ನೀನಾಸಂ ತಿರುಗಾಟದ ಮೊದಲ ನಿರ್ದೇಶಕಿಯಾಗಿ, ನಿರಂತರ ಸೇವೆಯ ಮೂಲಕ ಸಮಾಜದ ಮೇಲೆ ಗಮನಾರ್ಹ ಪರಿಣಾಮ ಬೀರುವವರಿಗಾಗಿ ನೀಡುವ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ಪ್ರಶಸ್ತಿ- 2025 ಗಳಿಸಿ, ಶಂಕರ್‌ನಾಗ್ ರಂಗ ಪ್ರಶಸ್ತಿ ಗಳಿಸಿದ ಇಬ್ಬರೇ ಕನ್ನಡತಿಯರಲ್ಲಿ ಒಬ್ಬರಾಗಿ ಅವರು ಸಾಗಿ ಬಂದ ದಾರಿ ಅನ್ವೇಷಣಾರ್ಹ.
11 ನವೆಂಬರ್ 1988ರಲ್ಲಿ ಹಾಸನ ನಗರದ ಪೆನ್ಷನ್ ಮೊಹಲ್ಲಾದಲ್ಲಿ ಹುಟ್ಟಿದ ಶ್ವೇತಾ, ದಲಿತ ಸಂಘರ್ಷ ಸಮಿತಿಯ ಮುಖಂಡ, ಸಂದೇಶ್ ಎಚ್.ಕೆ. ಅವರ ಮಗಳು. ಶ್ವೇತಾ ಅವರು ಜಾತಿ ದಬ್ಬಾಳಿಕೆಯನೆಂದೂ ನೇರವಾಗಿ ಅನುಭವಿಸಿರಲಿಲ್ಲ. ಜಾತಿ ವ್ಯವಸ್ಥೆಯನ್ನು ನಗರಗಳು ಪ್ರೋತ್ಸಾಹಿಸುವುದಿಲ್ಲ ಎಂದು ಭಾವಿಸಿದ್ದ ಅವರಿಗೆ, ನಗರಕ್ಕೆ ಸಮೀಪವೇ ಇದ್ದ ಅಜ್ಜಿಯ ಊರಿಗೆ ಭೇಟಿ ನೀಡಿದ್ದಾಗ ಜಾತಿ ತಾರತಮ್ಯದ ಅನುಭವವಾಗುತ್ತದೆ. ”ಪಕ್ಕದ ಮನೆಗಳಿಗೆ ಹೋದಾಗ ಟಿವಿಯನ್ನು ನಾವು ಹೊರಗೆ ಕುಳಿತು ನೋಡಬೇಕಿತ್ತು, ಹಳ್ಳಿಬಾವಿಯ ನೀರಿಗಾಗಿ ಹೋದಾಗ ಸಮಾಜದಲ್ಲಿ ಮೇಲ್ಜಾತಿ ಎಂದು ಗುರುತಿಸಲ್ಪಡುವ ಮಹಿಳೆಯರು ಹೊರಡುವವರೆಗೂ ಕಾಯಬೇಕಾಗುತ್ತಿತ್ತು. ಈ ಅನುಭವಗಳು ನನ್ನ ದೃಷ್ಟಿಕೋನವನ್ನು ರೂಪಿಸಿದವು. ನಮ್ಮನ್ನು ಮಾತ್ರ ಭಿನ್ನವಾಗಿ ನಡೆಸಿಕೊಳ್ಳಲು ನಾವೇಕೆ ಬಿಡಬೇಕು ಎಂದು ಯೋಚಿಸಿದೆ. ನಾನು ತಾರತಮ್ಯವಿಲ್ಲದ ಉತ್ತಮ ಭವಿಷ್ಯದ ಕನಸು ಕಾಣುತ್ತೇನೆ” ಎನ್ನುವ ಅವರೆದೆಯಲ್ಲಿ ಭವ್ಯ ಭರವಸೆಗಳು ತುಂಬಿಕೊಂಡಿವೆ. ತಾಯಿ ಧನಲಕ್ಷ್ಮಿಯವರ ರಾಜಿರಹಿತ ಮನೋಭಾವ ಮೆಚ್ಚುವ ಶ್ವೇತಾ, ಸ್ನೇಹದ ಮಹತ್ವ ಮತ್ತು ಸಕಾರಾತ್ಮಕ ವಿಧಾನವನ್ನು ಅವರಿಂದ ಕಲಿತಿರುವುದಾಗಿ ಸ್ಮರಿಸುತ್ತಾರೆ.
ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ
ಹೀಗಿರುವಾಗ, ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶ್ವೇತಾರವರು ಐಚ್ಛಿಕ ಇಂಗ್ಲಿಷ್ ಪದವಿ ಓದುವಾಗ ಅಧ್ಯಾಪಕಿಯೊಬ್ಬರ ಆಸ್ಥೆಯಿಂದ ಸಹಪಾಠಿಗಳೊಂದಿಗೆ ಸೇರಿ ಮ್ಯಾಕ್ ಬೆತ್ ನಾಟಕ ಮಾಡಿದ್ದರು. ಅದೊಂದು ಉರು ಹೊಡೆಯುವ ಪ್ರಕ್ರಿಯೆಯಾಗಿತ್ತೇ ಹೊರತು ಯಾವುದೇ ಅರ್ಥ ಧ್ವನಿಸಿರಲಿಲ್ಲ. ಧಾರವಾಡದ ಮಹಾದೇವ್ ಹಡಪದ ಅವರ ಆಟ-ಮಾಟ ತಂಡ ಮತ್ತು ಹಾಸನದ ಶಾಡ್ರಾಕ್ ಅವರ ರಂಗಸಿರಿ ತಂಡ ಸೇರಿ ಆಯೋಜಿಸಿದ್ದ ಕಾಲೇಜು ರಂಗೋತ್ಸವದ ಸಮಯದಲ್ಲಿ ಶ್ವೇತಾರಿಗೆ ರಂಗಭೂಮಿಯ ಅಂತರಾಳ ಪರಿಚಯವಾಗುತ್ತದೆ. ಮುಂದೆ, ಮನೆಯವರ ಇಚ್ಛೆಯಂತೆ ಮಾನಸ ಗಂಗೋತ್ರಿಯಲ್ಲಿ ಎಂಎಸ್‌ಡಬ್ಲ್ಯೂ ಸೇರುತ್ತಾರೆ. ಅಲ್ಲಿ ರಂಗಾಯಣಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಅವರಿಗೆ, ಹವ್ಯಾಸಿ ತಂಡದವರನ್ನು ಒಳಗೊಳ್ಳದಂತಿದ್ದ ಅಲ್ಲಿನ ಪರಿಸರ ವಿಚಿತ್ರವೆನಿಸಿತ್ತು. ಆದರೆ ಅದೇ ಕಲಾಮಂದಿರದ ಆವರಣದಲ್ಲಿ ನಡೆದ ಹವ್ಯಾಸಿ ತಂಡದ ‘ಬೆಳಕು’ ನಾಟಕದಲ್ಲಿ ಸಾವಿತ್ರಿ ಬಾ ಫುಲೆಯವರ ಪಾತ್ರವನ್ನು ಶ್ವೇತಾ ನಿರ್ವಹಿಸುತ್ತಾರೆ. ಈ ನಾಟಕಕ್ಕಾಗಿ ಇಡೀ ಭಿತ್ತಿಯನ್ನು ಕರಿಹಲಗೆಯಿಂದಲೇ ಮಾಡಿದ್ದ ವಿನ್ಯಾಸ ಅವರ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಹೀಗೆ ಮೂಲ ವ್ಯಕ್ತಿಗಳ ಇತಿಹಾಸ ತೆಗೆದು ನೋಡುವ, ಓದುವ, ಅದನ್ನು ನಾಟಕದ ಮೂಲಕ ತಲುಪಿಸಿದರೆ ಆಗಬಲ್ಲ ಪರಿಣಾಮದ ಕುರಿತು ಅವರಿಗೆ ಅರಿವು ಮೂಡುತ್ತದೆ. ಒಮ್ಮೆ ನಾಟಕ ರಚನಕಾರ ಸೋಸಲೆ ಗಂಗಾಧರಯ್ಯರು ಮಹಿಳಾ ಸಂಘಕ್ಕೆ ಮಾಡುತ್ತಿದ್ದ ಲೋಗೋ ಒಂದನ್ನು ತೋರಿಸಿ ‘ಹೆಂಗಸರು ಎಷ್ಟೋ ಕಷ್ಟಪಟ್ಟು ದುಡಿದು ಗಳಿಸಿ, ಗಳಿಸಿದ್ರಲ್ಲಿ ಉಳಿಸಿ ಜೇನು ನೊಣಗಳ ಹಾಗೆ ಕೂಡಿಡ್ತಾರೆ, ಅವರಿಗೆ ಈ ಲೋಗೋ ಅಲ್ಲದೆ ಮತ್ತಾವುದು ಸೂಕ್ತ ಆಗುತ್ತೆ ಹೇಳು’ ಎಂದದ್ದನ್ನು ನೆನೆಸಿಕೊಂಡು, ‘ಅರ್ಥ ಹೊರಡಿಸದ ಯಾವುದೇ ಕೃತಿ, ಕಲೆ- ಆಲಂಕಾರಿಕ ಸಾಧನವಾಗಷ್ಟೇ ಉಳಿಯುತ್ತದೇ ಹೊರತು ಮತ್ತಾವುದಕ್ಕೂ ಉಪಯೋಗಕ್ಕೆ ಬರೋದಿಲ್ಲ’ ಎಂದು ಶ್ವೇತಾ ತರ್ಕಿಸುತ್ತಾರೆ.
ನಂತರ ಇದೇ ತಂಡದೊಡನೆ ಹಾಸನದ ಕಲಾಭವನದಲ್ಲಿ ನಡೆದ ದಲಿತ ಸಮಾವೇಶವೊಂದರಲ್ಲಿ ‘ಬುದ್ದನೆಡೆಗೆ’ ನಾಟಕದಲ್ಲಿ ನಟಿಸಿ, ಕಡೆಯಲ್ಲಿ ಶ್ವೇತಾ ತಮ್ಮ ಪಾತ್ರ ಪರಿಚಯ ಮಾಡಿಕೊಳ್ಳುವಾಗ ಮುಂದಿನ ಆಸನದಲ್ಲೇ ತಂದೆ ಕುಳಿತಿದ್ದುದನು ಕಂಡು, ಭಯಗೊಂಡು, ಮನೆಗೆ ಭೇಟಿ ನೀಡದೆ ತಂಡದ ಜೊತೆ ಮೈಸೂರಿಗೆ ವಾಪಸಾಗುತ್ತಾರೆ. ಆದರೆ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣದ ರೀತಿಗೆ ಹೊಂದಿಕೊಳ್ಳಲು ಕಷ್ಟಪಟ್ಟು- ವ್ಯಕ್ತಿ, ವ್ಯಕ್ತಿತ್ವ ಅರಳಲು ಪೂರಕ ಪರಿಸರ ಒದಗಿಸುವ ನಾಟಕದ ಸೆಳೆತದಿಂದಲೂ, ಮನೆಯವರಿಗೆ ತಿಳಿಸದೇ ಕಾಲೇಜನ್ನು ಸಂಪೂರ್ಣ ತೊರೆದು, ಇದೇ ತಂಡದೊಂದಿಗೆ ಮಂಡ್ಯದ ಹಳ್ಳಿಯೊಂದರಲ್ಲಿ ‘ಆರ್ಯ- ದ್ರಾವಿಡ’ ಎಂಬ 9 ಗಂಟೆಗಳ ನಾಟಕ ಮಾಡುವ ಉತ್ಸಾಹ ತೋರುತ್ತಾರೆ. ‘ನಮ್ಮ ಹುಚ್ಚು ಆವೇಶದಿಂದ ವಿವೇಚನೆ ಮರೆಯಾಗಿತ್ತು, ಅಲ್ಲಾವುದೋ ಗುಡ್ಡದಲ್ಲಿ ನಾವೇ ಮಣ್ಣು ಅಗೆದು ಗುಡಿಸಲು, ವೇದಿಕೆ ಕಟ್ಟಿಕೊಂಡು, ಊಟ ಇದ್ದರೆ ಊಟ ಮಾಡಿ, ಇಲ್ಲದಿದ್ದಾಗ ಆಟ ಆಡಿಕೊಂಡು, ಮೂರು-ನಾಲ್ಕು ತಿಂಗಳು ಯಾವುದೋ ಕ್ರಾಂತಿಗೆ ತಯಾರಾಗುತ್ತಿದ್ದೇವೇನೋ, ತಂದೆ ದಲಿತ ಸಂಘರ್ಷ ಸಮಿತಿಯಲ್ಲಿ ಹೋರಾಟಕ್ಕೆ ತೊಡಗಿಸಿಕೊಂಡಿದ್ದಾರೆ, ನಾನು ಮಾಡ್ತಿರೋದು ಸಾಂಸ್ಕೃತಿಕ ಹೋರಾಟ. ನಮ್ಮ ಹೋರಾಟದ, ಇತಿಹಾಸದ ಕತೆಗಳನ್ನು ಹೇಳುತ್ತಿರುವ ನಾವು ಕ್ರಾಂತಿಕಾರಿಗಳು ಎಂದು ಭಾವಿಸಿ ರೋಮಾಂಚನವಾಗಿತ್ತು’ ಎಂದು ಅಂದಿನ ಅವರ ಮನೋಭಾವ, ಆಲೋಚನೆಗಳ ಕುರಿತು ಹಂಚಿಕೊಳ್ಳುತ್ತಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು
ಹಲವು ಅರ್ಥಗಳ ಹೊಮ್ಮಿಸಬಲ್ಲ, ಸಾಧ್ಯತೆಗಳ ಮಾಧ್ಯಮ ರಂಗಭೂಮಿಯೆಂದು ಕಂಡುಕೊಂಡ ಶ್ವೇತಾರಿಗೆ ಅದಕ್ಕೂ ಮಿಗಿಲಾಗಿ ತಾಗಿದ್ದು- ಮತ್ತಾವ ಕ್ಷೇತ್ರದಲ್ಲೂ ಕಾಣದ, ರಂಗಭೂಮಿಯಲ್ಲಿ ತೊಡಗಿಕೊಂಡಾಗ ಮಾತ್ರ ಅನುಭವಕ್ಕೆ ಬರುವ ಸ್ವತಂತ್ರ, ಸಮಾನತೆ ಮತ್ತು ಮೈತ್ರಿ ಭಾವಗಳು. ಮಾನವೀಯ ಸಂಬಂಧಗಳನ್ನು ಅದರ ಸಹಜ ನೆಲೆಯಲ್ಲಿ ಅನುಭವಿಸಬಹುದಾದ, ಜಾತಿ-ಲಿಂಗ, ಬಣ್ಣ, ದೇಹಗಳ ಕುರಿತಾಗಿ ಸುಪ್ತ ಮನಸ್ಸಿನಲ್ಲಿರಬಹುದಾದ ಎಲ್ಲ ಕೀಳರಿಮೆಗಳನ್ನು ಕಳೆದುಕೊಳ್ಳುತ್ತ, ಹಗುರಾಗಿಸಿ ಆಕಾಶಕ್ಕೇ ಚಿಮ್ಮಿಸಬಲ್ಲ ಚಿಮ್ಮು ಹಲಗೆ ರಂಗಭೂಮಿ ಎಂಬ ಒಳನೋಟ ಪಡೆದ ಶ್ವೇತಾ ತಾವು ಕಂಡುಕೊಂಡ ಸತ್ಯವನ್ನು ಅನುಸರಿಸುತ್ತಾ, ಶರಣರ ತತ್ವಗಳನ್ನು ಸಾರುವ ಉದ್ದೇಶವುಳ್ಳ ಸಾಣೇಹಳ್ಳಿಯ ಶಿವಸಂಚಾರ ರಂಗತಂಡದೊಂದಿಗೆ ನಟಿಯಾಗಿ ಒಂದು ವರ್ಷ ತೊಡಗಿಕೊಳ್ಳುತ್ತಾರೆ. ಅಲ್ಲಿ ಎನ್‌ಎಸ್‌ಡಿ ಪದವೀಧರರಾದ ಮೂವರು ಮಹಿಳೆಯರ ನಿರ್ದೇಶನದಲ್ಲಿ ಮೂರು ನಾಟಕಗಳನ್ನೂ ಮಾಡುತ್ತಾರೆ- ಭಾಗೀರಥಿ ಬಾಯಿ ಕದಂ, ಮಲ್ಲಿಕಾ ಪ್ರಸಾದ್, ಸವಿತಾರ ನಿರ್ದೇಶನದಲ್ಲಿ ಕ್ರಮವಾಗಿ- ಹೇಮರೆಡ್ಡಿ ಮಲ್ಲಮ್ಮ, ದಾರಿಯೋ ಪೋ ಅವರ ‘ಕಾಂಟ್ ಪೇ ವೋಂಟ್ ಪೇ’ ಮತ್ತು ಯಹೂದಿ ಹುಡುಗಿ ನಾಟಕಗಳಲ್ಲಿ ಶ್ವೇತಾ ನಟಿಸುತ್ತಾರೆ. ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಾಗದಷ್ಟು ಸೆಳೆಯುವ ರಂಗಭೂಮಿಯೇ ತನ್ನ ಕ್ಷೇತ್ರ ಎಂದು ಅವರು ಗುರುತಿಸಿಕೊಳ್ಳುತ್ತಾರೆ. ‘ಕ್ಲಾಸ್‌ರೂಮಲ್ಲಿ ಬೆಂಚಿನ ಮೇಲೆ ನಿಲ್ಲೋದು ಪನಿಷ್ಮೆಂಟು, ಆದರೆ ರಂಗಭೂಮಿಯಲ್ಲಿ ಕ್ಲಾಸ್ ರೂಮಿನ ಅದೇ ಬೆಂಚಿನ ಮೇಲೆ, ಅದೇ ವಿದ್ಯಾರ್ಥಿ ನಿಂತರೆ ಅವರು ರಾಣಿ ಅಥವಾ ರಾಜ ಆಗಿರ್ತಾರೆ. ಮನಸ್ಥಿತಿ ಮತ್ತು ಗ್ರಹಿಕೆ ಎರಡನ್ನೂ ಬದಲಾಯಿಸುವ, ಮಾಯಿಸುವ, ಗುಣಪಡಿಸುವ ಗುಣಾತ್ಮಕ ಶಕ್ತಿ ರಂಗಭೂಮಿಗಿದೆ.’ ಎಂಬ ರಂಗ ನಿರ್ದೇಶಕ ಶ್ರೀಪಾದ್ ಭಟ್ ಅವರ ಮಾತುಗಳನ್ನು ನೆನೆಯುತ್ತಾ ರಂಗಭೂಮಿಗಿರುವ ಶಕ್ತಿಯನ್ನು ಪರಿಚಯಿಸುತ್ತಾರೆ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಮುಂದೆ, ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಥಿಯೇಟರ್ ಆರ್ಟ್ ಡಿಪ್ಲೋಮಾ ಸೇರಿ ಜನಮನದಾಟ ಪೂರೈಸುವುದರ ಜೊತೆಗೆ, ನೀನಾಸಂ ತಿರುಗಾಟಕ್ಕಾಗಿ ಆ ಲಯ ಈ ಲಯ ಎಂಬ ನಾಟಕ ನಿರ್ದೇಶಿಸುವ ಮೂಲಕ ತಿರುಗಾಟದ ಇತಿಹಾಸದಲ್ಲೇ ಮೊದಲ ನಿರ್ದೇಶಕಿಯಾಗುತ್ತಾರೆ ಶ್ವೇತಾ. ಆಫ್ರಿಕಾದ ಲೂಯಿ ನಕೋಸಿ ರಚಿತ ರಿದಮ್ ಆಫ್ ವೈಲೆನ್ಸ್ ನಾಟಕದ ಅನುವಾದವಾದ ಈ ನಾಟಕ ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯ ಕುರಿತಾಗಿದ್ದು, ಭಾರತದ ಸಾಮಾಜಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಇದರ ರಂಗಪಠ್ಯವನ್ನು ಮಾರ್ಪಡಿಸಲಾಗಿತ್ತು. ಈ ನಾಟಕ ಕರ್ನಾಟಕದಾದ್ಯಂತ ಸುಮಾರು 30ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿತ್ತು. ನಾಟಕದ ತೀಕ್ಷ್ಣ ರಾಜಕೀಯ ನಿಲುವು-ನೋಟಗಳನ್ನು ಸಹಿಸದ ಸಂಪ್ರದಾಯವಾದಿಗಳು ನಾಟಕ ಹೆಚ್ಚು ಪ್ರದರ್ಶನ ಕಾಣದ ಹಾಗೆ ನೋಡಿಕೊಂಡರು ಎನ್ನುತ್ತಾರೆ ಶ್ವೇತಾ. ದಲಿತ ಪ್ರಜ್ಞೆಯನ್ನು ಎಚ್ಚರಿಸುವ ಹಾಗೂ ಯುವಮನಸ್ಸುಗಳಿಗೆ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕೆಲಸವನ್ನು ಇಡೀ ದೇಶದಾದ್ಯಂತ ಬಹಳ ಬದ್ಧತೆಯಿಂದ ಮಾಡುತ್ತಾ ಬರುತ್ತಿರುವ ಶ್ವೇತಾರ ಕುರಿತು ‘ನಿರ್ದೇಶನವೇ ಇರಲಿ, ನಟನೆ ಇರಲಿ, ಶ್ವೇತಾ ಒಬ್ಬ ಅತ್ಯಂತ ಬದ್ಧತೆಯುಳ್ಳ ಶ್ರಮಶೀಲ ವ್ಯಕ್ತಿ. ಜೊತೆಗೆ, ನಿರ್ದೇಶನ ಮತ್ತು ನಟನೆಯಲ್ಲಿ ಅವರು ನವೀನ ವಿಧಾನಗಳನ್ನು ಪ್ರಯೋಗಿಸುತ್ತಿದುದರಿಂದ ನೀನಾಸಂಗೆ ನಿರ್ದೇಶನ ಮಾಡಲು ಅವರನ್ನು ಆಯ್ಕೆ ಮಾಡಲಾಯಿತು’ ಎಂದು ನೀನಾಸಂ ಮುಖ್ಯಸ್ಥರಾದ ಕೆ.ವಿ.ಅಕ್ಷರ ಹೇಳುತ್ತಾರೆ. ಆನಂತರದಲ್ಲಿ ಶ್ವೇತಾ, ಗುರುಗಳಾದ ರಘುನಂದನ್ ಹಾಗೂ ಕೆ.ವಿ.ಅಕ್ಷರ ಅವರ ಸಲಹೆಯಂತೆ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಸೇರಿ 2014-17ರಲ್ಲಿ ಪದವಿ ಮುಗಿಸುತ್ತಾರೆ.

ಈ ಎರಡು ವರ್ಷಗಳ ಅವಧಿಯು ಅವರನ್ನು ಹಲವು ರೀತಿಯಲ್ಲಿ ಬದಲಾಯಿಸಿದುದಲ್ಲದೆ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ತೆರೆದುಕೊಳ್ಳುತ್ತಾ, ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಅವರಿಗೆ ನೆರವಾಯಿತು. ಅಲ್ಲಿಂದ ಮರಳಿ ಶ್ವೇತಾ ಅವರು ಕರ್ನಾಟಕದಾದ್ಯಂತ ವಿವಿಧ ರಂಗಭೂಮಿ ತಂಡಗಳೊಂದಿಗೆ ಕೆಲಸ ಮಾಡಿ, ಮೂರು ವರ್ಷಗಳ ಕಾಲ ಪ್ರತಿಷ್ಠಿತ ನೀನಾಸಂ ರಂಗಭೂಮಿ ಸಂಸ್ಥೆಯಲ್ಲಿ ರಂಗಶಿಕ್ಷಕಿಯಾಗಿ-ನರಗುಂದದ ಭಾಸ್ಕರ, ತಪ್ಪಿದ ಎಳೆ, ಪ್ಯಾಲೆಸ್ತೇನಿನ ಕಥೆಗಳು ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಮಾಂಟೋ ಕತೆಗಳು, ಫೀದ್ರಾ, ತಪ್ಪಿದ ಎಳೆ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಇನ್ನೂ ಹಲವು ನಾಟಕಗಳಿಗೆ ಪರಿಕರ, ವಸ್ತ್ರ, ಪ್ರಸಾದನ, ರಂಗ ವಿನ್ಯಾಸಕರಾಗಿ ಕಾರ್ಯನಿರ್ವಹಿಸುವ ಅವರು ಅನೇಕ ನಿರ್ಮಾಣಗಳಿಗೆ ನವೀನ ದೃಶ್ಯ ಆಯಾಮಗಳನ್ನು ನೀಡಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಭಿನಯದ ತರಬೇತಿ ನೀಡುತ್ತಾರೆ. ಸಾಣೇಹಳ್ಳಿಯ ರಂಗಶಾಲೆಯಲ್ಲಿ ಪ್ರಾಂಶುಪಾಲರಾಗಿ ಒಂದು ವರ್ಷ ಸೇವೆ ಸಲ್ಲಿಸುತ್ತಾರೆ. ಕರ್ನಾಟಕದಾದ್ಯಂತ, ರಂಗಾಯಣ, ನಿರ್ದಿಗಂತ ಮೈಸೂರು, ಮಣಿಪಾಲ್ ಮುಂತಾದ ಕಡೆ ಅಭಿನಯ ಕಾರ್ಯಾಗಾರಗಳನ್ನು ನಡೆಸಿ ನಟರಿಗೆ ತರಬೇತಿ ನೀಡಿದ್ದಾರೆ. ಪ್ರಸ್ತುತ- ಶ್ವೇತಾ ರಾಣಿ ನಟಿ, ನಿರ್ದೇಶಕಿ ಮತ್ತು ಶಿಕ್ಷಕಿಯಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ
ನಾಟಕಕ್ಕಾಗಿ ಮೂಲ ಮತ್ತು ಸಾರ್ವತ್ರಿಕ ವಿಷಯಗಳನ್ನು ಹೊಂದಿರುವ ಕಥೆಗಳನ್ನು ಹುಡುಕುವ ಶ್ವೇತಾ ಅವರು ಜಾಗತಿಕ ಮಟ್ಟದ ಅತೀ ಸೂಕ್ಷ್ಮ ರಾಜಕಾರಣದ ವಿಷಯವನ್ನು ಕೇಂದ್ರವಾಗಿಸಿಕೊಂಡು, ಅದನ್ನು ಈ ನೆಲದ ಬದುಕಿನ ಅಸ್ಮಿತೆಯ ಜತೆಗೆ ಸಮೀಕರಿಸಿ ಕಟ್ಟುವ ಅವರ ಕ್ರಮ ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಇವರು ಬೇರೆ ಬೇರೆ ನಾಟಕಗಳಿಗೆ ಬೇರೆ ಬೇರೆಯದೇ ಆದ ಪ್ರಕ್ರಿಯೆಯನ್ನು ಕಂಡುಕೊಂಡಿದ್ದು ಆ ಮೂಲಕ ನವೀನ ರಂಗ ಸಾಧ್ಯತೆಗಳನ್ನು ಕಟ್ಟಿಕೊಡುತ್ತಾರೆ. ಕನ್ನಡ ರಂಗಭೂಮಿಯನ್ನು ಈ ನೆಲದ ನಂಟಿನೊಂದಿಗೆ ಬೆಸೆಯುತ್ತಾ ಜಾಗತಿಕ ಮಟ್ಟದಲ್ಲಿ ಅಂತರ್ ಸಂಬಂಧ ಸೃಷ್ಟಿಸಲು ಬೇಕಾದ ಎಲ್ಲಾ ಮಾದರಿಗಳನ್ನು ಇವರು ಸದಾ ಧ್ಯಾನಿಸುತ್ತಾ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಒಟ್ಟು 31 ನಾಟಕಗಳಲ್ಲಿ ಶ್ವೇತಾ ಅವರು ನಟಿಯಾಗಿ ಅಭಿನಯಿಸಿದ್ದು, 13 ನಾಟಕಗಳನ್ನು ನಿರ್ದೇಶಿಸಿದ್ದಾರೆ ಹಾಗೂ 9 ನಾಟಕಗಳಿಗೆ ವಸ್ತ್ರ ಹಾಗೂ ರಂಗ ವಿನ್ಯಾಸವನ್ನೂ ಮಾಡಿದ್ದಾರೆ. ದೆಹಲಿಯ ಇಂಟರ್ ನ್ಯಾಷನಲ್ ಆರ್ಟ್ ಫೆಸ್ಟಿವಲ್, ಅನ್ ಬಾಕ್ಸ್ ಬೆಂಗಳೂರು ಹಬ್ಬ ಸೇರಿದಂತೆ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ಇವರ ನಿರ್ದೇಶನದ ನಾಟಕಗಳು ಪ್ರದರ್ಶನಗೊಂಡಿವೆ. ಜಂಗಮ ಕಲೆಕ್ಟಿವ್ ತಂಡಕ್ಕೆ ಇವರು ವಸ್ತ್ರ ವಿನ್ಯಾಸ ಮಾಡಿದ ದಕ್ಲಾಕಥಾದೇವಿ ಕಾವ್ಯ ನಾಟಕಕ್ಕೆ ವಸ್ತ್ರ ವಿನ್ಯಾಸ ವಿಭಾಗದಲ್ಲಿ ಹಾಗೂ ‘ಬಾಬ್ ಮಾರ್ಲೆ ಫ್ರಮ್ ಕೋಡಿಹಳ್ಳಿ’ ನಾಟಕದಲ್ಲಿನ ನಟನೆಗಾಗಿ, ಪ್ರತಿಷ್ಠಿತ ಮೆಟಾ ಅವಾರ್ಡ್‌ಗಾಗಿ ಕ್ರಮವಾಗಿ 2023, 2025ರಲ್ಲಿ ನಾಮನಿರ್ದೇಶನಗೊಂಡಿದ್ದರು. ಹಾಸನ ಜಿಲ್ಲಾ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ಇವರು ಕೆಲಸ ಮಾಡಿರುವ, ನಟಿಸಿರುವ ಕೆ.ಬಿ.ಸಿದ್ದಯ್ಯನವರ ಕಾವ್ಯಾಧಾರಿತ ನಾಟಕ ದಕ್ಲಕಥಾ ದೇವಿಕಾವ್ಯ, ಭಾರತದ ಸಂವಿಧಾನ ಆಧಾರಿತ ನಾಟಕ ‘ವೀ ದ ಪೀಪಲ್ ಆಫ್ ಇಂಡಿಯಾ’ ಪ್ರದರ್ಶನಗೊಂಡಿದೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
”ಎಲ್ಲ ಕ್ಷೇತ್ರಗಳಂತೆ ರಂಗಭೂಮಿಯಲ್ಲೂ ಮಹಿಳಾ ನಿರ್ದೇಶಕಿಯರು ಕಡಿಮೆ, ಕಾರಣ ಹಲವಾರು. ನಿರ್ದೇಶಕಿಯರ ಸಂಖ್ಯೆ ಹೆಚ್ಚಬೇಕು. ಶಾಲಾ-ಕಾಲೇಜುಗಳಲ್ಲಿ ರಂಗಭೂಮಿ ಪಠ್ಯೇತರ ಚಟುವಟಿಕೆಯಾಗಿ ಕಾಲೇಜ್ ಫೆಸ್ಟ್‌ಗೊಂದು ನಾಟಕ, ಬೀದಿ ನಾಟಕಗಳಿಗೆ ಸೀಮಿತವಾಗದೆ, ಅದೊಂದು ವಿಷಯವಾಗಿಯೇ ಬರಬೇಕು. ಇಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಮಾಡಲು ಆರ್ಥಿಕ ಭದ್ರತೆಯೂ ಅಷ್ಟೇ ಮುಖ್ಯ, ಮೊದಲನೆಯದಾಗಿ ಈ ಕ್ಷೇತ್ರ ಆರ್ಥಿಕವಾಗಿ ಸುರಕ್ಷಿತವಾಗಿಲ್ಲ, ಪುರುಷರ ಪಾರುಪತ್ಯದಲ್ಲಿ ನಮ್ಮ ಪ್ರತ್ಯೇಕ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಬಡಿದಾಡಬೇಕಾಗುತ್ತದೆ. ಶ್ರಮ, ಸಮಯ ಎಲ್ಲವನ್ನೂ ವ್ಯಯಿಸಬೇಕಾಗುತ್ತದೆ. ಹಿರಿಯ ರಂಗಕರ್ಮಿಗಳ ನೆರಳಿನಿಂದ ತಪ್ಪಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು. ಹಿರಿಯ-ಕಿರಿಯ, ಹೆಣ್ಣು-ಗಂಡು, ಆ ಜಾತಿ ನಾಟಕ-ಈ ಜಾತಿ ನಾಟಕ, ಈ ಬಣದ ನಾಟಕ-ಆ ಬಣದ ನಾಟಕ, ನಿತ್ಯ ಬದುಕಿನ ನಾಟಕಗಳೆಲ್ಲದರೊಟ್ಟಿಗೆ ಏಗುತ್ತಾ ಯಾವುದೇ ರಾಜಿ-ಮುಲಾಜಿಗೊಳಗಾಗದೇ ಸಾಗುವುದೇ ದೊಡ್ಡ ಗುರಿಯಾಗಿದೆ” ಎಂದು ಸಾದ್ಯಂತವಾಗಿ ವಿಶ್ಲೇಷಿಸುವ ರಂಗ ತಪಸ್ವಿನಿ ಶ್ವೇತಾ ಅವರು ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ದಲಿತ ಚಳವಳಿಯ ನಡುವೆ ಬೆಳೆದ ಪ್ರಮುಖ ಹೊಸ ಪೀಳಿಗೆಯ ನಿರ್ದೇಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿ, ಕರ್ನಾಟಕ ರಂಗಭೂಮಿಯಲ್ಲಿ ಅನೇಕ ಬದಲಾವಣೆಗಳಿಗೂ ಕಾರಣರಾಗಿದ್ದಾರೆ.
-ರೇಖಾ ಹೊಸಹಳ್ಳಿ




