ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹಾಸನ ಜಿಲ್ಲೆಯು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು ಸಂಗೀತ, ನಾಟ್ಯ, ನಾಟಕ, ಜಾನಪದ, ಸಿನಿಮಾ ರಂಗ, ಸಾಹಿತ್ಯ ಹೀಗೆ ಅನೇಕ ರಂಗಗಳಲ್ಲಿ ದಿಗ್ಗಜ ಮಹಿಳೆಯರನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತಿಯಿದೆ. ಸಂಗೀತ ಜ್ಞಾನಮು ಭಕ್ತಿ ವಿನಾ ಸನ್ಮಾರ್ಗಮು… ಎಂಬಂತೆ ಸಂಗೀತವು ಅದ್ವಿತೀಯವಾದ ಅಪೂರ್ವ ನಾದ ಪ್ರಕಾರ. ಸರ್ವರೋಗಗಳಿಗೂ ಸಂಜೀವಿನಿ, ಪ್ರಾಕೃತಿಕವಾಗಿ ಸಕಲ ಚರಾಚರಗಳ ಶಬ್ದವು ಸುಮಧುರ ಸಂಗೀತವೇ ಆಗಿದೆ. ಜನಸಾಮಾನ್ಯರನ್ನು ಸುಲಭವಾಗಿ ತಲುಪುವ ಸಾಧನ ಇದಾಗಿದೆ. ಸಂಗೀತದಿಂದ ದೀಪ ಬೆಳಗಿಸಿದ, ಮಳೆ ಸುರಿಸಿದ ಉದಾಹರಣೆಗಳನ್ನು ಇತಿಹಾಸದಿಂದ ತಿಳಿಯಬಹುದು. ಗಾನಕೆ ಒಲಿಯದ ಮನಸೇ ಇಲ್ಲಾ, ಗಾನಕೆ ಮಣಿಯದ ದೇವರೇ ಇಲ್ಲಾ. ಎಲ್ಲೆಡೆ ಗಾನವೇ ಗಾನ.
ಇಂತಹ ಅಭೂತಪೂರ್ವ ಸಂಗೀತಕ್ಕೆ ಅತ್ಯದ್ಭುತ ಮಹಿಳಾ ಮಣಿಗಳನ್ನು ಕೊಡುಗೆ ನೀಡಿರುವುದು ನಮ್ಮ ಹಾಸನ ಜಿಲ್ಲೆ. ಹಾಸನದ ಸಂಗೀತ ಕ್ಷೇತ್ರದ ಪ್ರಮುಖ ಹೆಣ್ಣು ಬೇರುಗಳೆೆಂದರೆ- ವಿದುಷಿಯರಾದ ವೀಣಾ ವೆಂಕಟರಮಣಯ್ಯ, ಡಾ.ಆರ್.ಎನ್.ಶ್ರೀಲತಾ, ವಸಂತಲಕ್ಷ್ಮಿ, ಟಿ.ಎಸ್.ಸತ್ಯವತಿ, ವಸಂತ ಮಾಧವಿ, ಜಾಹ್ನವಿ ಜಯಪ್ರಕಾಶ್, ಉಮಾ ಗೋಪಾಲಸ್ವಾಮಿ, ವಸುಂಧರ, ಲಕ್ಷ್ಮಿ, ಗಂಗಾ ಸುಬ್ಬಣ್ಣ, ಕೌಶಿಕದ ಸುಕನ್ಯಾ ಪ್ರಭಾಕರ್, ರಾಜಲಕ್ಷ್ಮಿ, ಸಾವಿತ್ರಿ ಸುಬ್ರಹ್ಮಣ್ಯ, ಗಾಯಿತ್ರಿ, ಎಲ್.ಜಿ.ಸುಮಿತ್ರಾ… ಮುಂತಾದವರು. ಈ ಬೇರುಗಳ ಆಧಾರದಲ್ಲಿ ಮುಂದಿನ ಪೀಳಿಗೆ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆ. ಈ ಸಂಗೀತ ವಿದುಷಿಯರು ಅನೇಕ ಮಂದಿ ಶಿಷ್ಯಂದಿರನ್ನು ಬೆಳೆಸಿದ್ದಾರೆ. ಹಲವಾರು ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೇವಲ ಹಾಸನ ಮಾತ್ರವಲ್ಲ ಇಡೀ ನಾಡಿನ ಸಂಗೀತ ಕ್ಷೇತ್ರವನ್ನು ಸಮೃದ್ಧಗೊಳಿಸುತ್ತಾ ಬಂದಿದ್ದಾರೆ.
ಮುಂದೆ- ಚನ್ನರಾಯಪಟ್ಟಣದ ಕರ್ನಾಟಕ ಸಂಗೀತ ಪ್ರತಿಭೆ ಎಂ.ಎಸ್.ಶೀಲಾರವರು. ಮೊದಲ ಸಂಗೀತ ಪಾಠ ತಾಯಿ ಎಂ.ಎನ್.ರತ್ನರವರಿಂದ ನಂತರದಲ್ಲಿ ಆರ್.ಕೆ.ಶ್ರೀಕಂಠನ್‌ರವರಿಂದ ಕಲಿಕೆಯನ್ನು ಮುಂದುವರೆಸಿದರು. ಇವರು ಶಾಸ್ತ್ರೀಯ/ಸುಗಮ, ಭಕ್ತಿಗೀತೆಗಳ ಗಾಯಕಿ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದೆ. 2019ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮದ್ರಾಸ್ ಸಂಗೀತ ಅಕಾಡೆಮಿಯಿಂದ ಸಂಗೀತ ಕಲಾ ಆಚಾರ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಗಾನಕಲಾ ಪರಿಷತ್ತಿನ ಗಾನಕಲಾಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿರುತ್ತಾರೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರ ಶ್ರೀ ವಿದ್ಯಾದರ್ಶನ, ಶ್ರೀ ವೀಣೆ ಶೇಷಣ್ಣನವರ ನಿನಾದ ಮತ್ತು ಶ್ರೀ ಮೈಸೂರು ಸದಾಶಿವರಾವ್‌ರವರ ಸದಾಶಿವ ಮಾಧುರ್ಯ ಇಂತಹ ಸರಣಿ ಆಲ್ಬಂಗಳಲ್ಲಿ ಇವರು ಹಾಡಿದ್ದಾರೆ. ಇವರು ಅನೇಕ ಸಂಗೀತ ಕಾರ್ಯಾಗಾರಗಳನ್ನು ಆಯೋಜಿಸಿ, ಹಂಸಧ್ವನಿ ಪುರಸ್ಕಾರ ನೀಡುವ ಮೂಲಕ ಸಂಗೀತ ಕ್ಷೇತ್ರದ ಶ್ರೇಷ್ಠ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ರತ್ನಮಾಲಾ ಪ್ರಕಾಶ್‌ರವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣ ಗ್ರಾಮದ ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ವಿಶ್ವಮಾನ್ಯರಾದ ಆರ್.ಕೆ.ಶ್ರೀಕಂಠನ್‌ರವರ ಪುತ್ರಿ. ರತ್ನಮಾಲಾ ಪ್ರಕಾಶ್‌ರವರು ಸುಗಮ ಸಂಗೀತ, ಚಲನಚಿತ್ರ ಗೀತೆಗಳ ಹಿನ್ನೆಲೆ ಗಾಯಕಿ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದೆಯಾಗಿರುತ್ತಾರೆ. ದಿವಂಗತ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕಂಪು, ಭಾವಸಂಗಮ ಹೀಗೆ ಹತ್ತು ಹಲವಾರು ಭಾವಗೀತೆಗಳ ಆಲ್ಬಂಗಳಲ್ಲಿ ಹಾಡಿ ಜಿಲ್ಲೆಯ ಕಂಪನ್ನು ನಾಡಿನಾದ್ಯಂತ ಪಸರಿಸಿರುವ ಸಂಗೀತ ಕಲಾವಿದೆ. 2016ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೊಂದಿಗೆ ಹಲವಾರು ಪ್ರಶಸ್ತಿಗಳ ಗರಿಗಳನ್ನು ಹೊಂದಿರುವ ನಮ್ಮ ಜಿಲ್ಲೆಯ ಭಾವಗೀತೆಗಳ ಜೀವನಾಡಿ ಹೆಣ್ಣುಮಗಳಿವರು.
ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಅಗ್ರಹಾರ ಗ್ರಾಮದ ವೇದಬ್ರಹ್ಮ ಚಂದ್ರಶೇಖರ ಶರ್ಮ ಅವಧಾನಿಗಳು ಮತ್ತು ಶಾಂತಲಕ್ಷ್ಮಿ ಇವರ ಸುಪುತ್ರಿ ಶಶಿಚಂದ್ರಿಕಾರವರು. ಹಾಸನದ ಖ್ಯಾತ ಸಂಗೀತ ಗಾಯಕರಾದ ಬಿ.ಎನ್.ಎಸ್.ಮುರುಳಿಯವರ ಪತ್ನಿಯಾಗಿರುತ್ತಾರೆ. ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪಡೆದಿರುವ ಇವರು, ಹಾಸನ ನಗರದ ತಮ್ಮ ಮನೆಯಲ್ಲಿಯೇ ಸಪ್ತಸ್ವರ ಕಲಾಕೇಂದ್ರವನ್ನು ನಡೆಸುತ್ತಿದ್ದು, ನೂರಾರು ಸಂಗೀತಾಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿರುತ್ತಾರೆ. ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, 2021ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸುಮಾರು 200 ಗೇಯ ಗೀತೆಗಳನ್ನು ಸಂಸ್ಕೃತ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ರಚನೆ ಮಾಡಿದ್ದು, ಸಂಗೀತದೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪಕಳೆಗಳು(ಗೀತ ಸಂಕಲನ), ಸಂಘರ್ಷವೋ ಸಮ್ಮತಿಯೋ(ಕಥಾ ಸಂಕಲನ), ರಸೋ ವೈ ಸಃ, ಲೇಖನ, ಪ್ರಬಂಧಗಳನ್ನು ಬರೆದ ಬಹುಮುಖ ಪ್ರತಿಭೆಯ ಸಾಧಕಿಯಾಗಿದ್ದಾರೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಜಿಲ್ಲೆಯ ಮೊತ್ತ ಮೊದಲ ಮಹಿಳಾ ಹಾರ‍್ಮೋನಿಯಂ ಪ್ರವೀಣೆ ಮತ್ತು ಪೌರಾಣಿಕ ಸಂಗೀತ, ನಾಟಕ ನಿರ್ದೇಶನ ಮಾಡಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನೇರಲಕೆರೆಯವರಾದ ಸವಿತಾಕುಮಾರ ಅವರು ಎಂದು ದಾಖಲೆಗಳು ಹೇಳುತ್ತವೆ. ಜಾನಪದ ಕಲಾ ಪ್ರಕಾರವಾದ ಏಕತಾರಿಯನ್ನು ನುಡಿಸುವ ಲಕ್ಷ್ಮಮ್ಮ ಹಾಗೂ ದಮ್ಡಿ ನುಡಿಸುವ ಪುಟ್ಟಮ್ಮ ಅವರನ್ನು ಕೂಡ ನಾವು ನೆನೆಯಲೇಬೇಕಿದೆ. ಖ್ಯಾತ ನೃತ್ಯ ಕಲಾವಿದೆಯರೂ ವಿದುಷಿಯರೂ ಆದ- ಅಂಬಳೆ ರಾಜೇಶ್ವರಿ, ಉಷಾ ದಾತಾರ್, ವಾಣಿಶ್ರೀ, ಭಾನು ಚಿದಾನಂದ್, ಡಾ.ರಮ್ಯ ಸಿ.ಆರ್, ಡಾ.ಸೌಮ್ಯ ಸಿ.ಎಸ್, ಹಂಸ ನಟರಾಜ್… ಮುಂತಾದವರು ತಮ್ಮ ನೃತ್ಯ ಕ್ಷೇತ್ರದ ಸಾಧನೆಯೊಂದಿಗೆ ಸಂಗೀತದಲ್ಲೂ ಅದ್ವಿತೀಯ ಸಾಧಕರು ಎನಿಸಿದ್ದಾರೆ. ಹಾಗೆ ಸಂಗೀತವಿಲ್ಲದೇ ನೃತ್ಯ ಕಲೆ ಜೀವಂತವಿರಲೂ ಸಾಧ್ಯವಿಲ್ಲವಲ್ಲ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನವರಾದ ಜಿ.ಆರ್.ಶ್ರೀನಿವಾಸ್ ಮತ್ತು ರಾಜಮ್ಮ ದಂಪತಿಗಳ ಪುತ್ರಿ ಜಿ.ಎಸ್.ಕಲಾವತಿ ಮಧುಸೂದನರವರು, ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ವೀಣೆಯಲ್ಲಿ ಸೀನಿಯರ್ ಮುಗಿಸಿ ಶ್ರೀ ಗಣೇಶ ಉಡುಪರಲ್ಲಿ ಗಮಕ, ದೇವರನಾಮವನ್ನು ಅಭ್ಯಾಸ ಮಾಡಿರುತ್ತಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ಇದುವರೆಗೆ ನೀಡಿರುತ್ತಾರೆ. ಆಸಕ್ತರಿಗೆ ಶುಲ್ಕರಹಿತವಾಗಿ ಸಂಗೀತ ಕಲಿಸುತ್ತಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭೂಷಣ, ಗಾನ ಕೋಗಿಲೆ, ಸೇವಾ ರತ್ನ ಕಾಯಕ ಯೋಗಿ, ಸಂಗೋಳ್ಳಿ ರಾಯಣ್ಣ ರಾಷ್ಟ್ರೀಯ ಸದ್ಭಾವನಾ, ಸಾಹಿತ್ಯರತ್ನ, ಮಹಿಳಾ ರತ್ನ ಮತ್ತು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವನ್ನು ಮುಡಿಗೇರಿಸಿಕೊಂಡಿರುತ್ತಾರೆ.
ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ
ಮೈಸೂರಿನ ಡಾ.ಎಂ.ಡಿ.ವಸಂತರಾಜ್ ಮತ್ತು ರತ್ನಾವಳಿ ಇವರ ಪುತ್ರಿ ಎಂ.ವಿ.ಪ್ರಭಾಮಣಿ ಮಂಜುನಾಥ್, ಹಾಸನಕ್ಕೆ ಸೊಸೆಯಾಗಿ ಬಂದವರು. ಖ್ಯಾತ ಗಾಯಕಿಯರಾದ ವಿಲಾಸಕುಮಾರಿ, ಹೆಚ್.ಆರ್.ಲೀಲಾವತಿ, ವೆಂಕಟಾಚಲಯ್ಯನವರಲ್ಲಿ ಶಾಸ್ತ್ರೀಯ ಸಂಗೀತ ಕಲಿತಿರುತ್ತಾರೆ. ಇವರು ಆಕಾಶವಾಣಿಯ ಬಿ-ಗ್ರೇಡ್ ಕಲಾವಿದೆ, ದೂರದರ್ಶನ ಮತ್ತು ಇತರೆ ವಾಹಿನಿಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಹಾಸನದಲ್ಲಿ ದಿವ್ಯಧ್ವನಿ ಶಾಲೆಯನ್ನು ನಡೆಸುತ್ತಿದ್ದು, ನೂರಾರು ಶಿಷ್ಯರು ಸುಗಮ/ಶಾಸ್ತ್ರೀಯ/ದೇವರನಾಮ/ಜಾನಪದ ಗೀತೆಗಳನ್ನು ಕಲಿಯುತ್ತಿದ್ದಾರೆ. ಪಡೆದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಜೊತೆಗೆ ಸಂಗೀತ ಸ್ಪರ್ಧೆಗಳ ನಿರ್ಣಾಯಕಿಯಾಗಿ, ಮೌಲ್ಯಮಾಪನಾಧಿಕಾರಿಯಾಗಿ ಕೆಲಸ ನಿರ್ವಹಿಸಿರುತ್ತಾರೆ. ಇವರ ಮಗಳು ಸ್ಪೂರ್ತಿ ಜೈನ್ ಕೂಡ ಒಳ್ಳೆಯ ಹಾಡುಗಾರ್ತಿಯಾಗಿದ್ದು, ಬಹುಮುಖ ಪ್ರತಿಭಾವಂತೆಯಾಗಿದ್ದಾರೆ.
ಅನಂತಸುಬ್ಬರಾಯರು ಮತ್ತು ಸರೋಜಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ಯಾಮಲಾ ಚಿಕ್ಕಮೇನಹಳ್ಳಿ ರ‍್ಯಾಂಕ್ ಜೊತೆಗೆ ಬಿಇ ಪದವಿ ಪಡೆದರು. 70ರ ದಶಕದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯೊಂದಿಗೆ ಎಂಟೆಕ್ ಮತ್ತು ಪಿಹೆಚ್.ಡಿ ಮಾಡಿದವರು. ವೃತ್ತಿಗಾಗಿ ಅಮೆರಿಕಾಕ್ಕೆ ತೆರಳಿ, ಅಲ್ಲಿಯೇ ಸಾಧನೆ ಮಾಡುತ್ತಾ ಶೈಕ್ಷಣಿಕ ಪಯಣದೊಂದಿಗೆ ತಮ್ಮಿಷ್ಟದ ಸುಗಮಸಂಗೀತವನ್ನು ಅಭ್ಯಸಿಸುತ್ತಾ ಪರೀಕ್ಷೆ ಪಾಸು ಮಾಡಿ, ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 64 ವರ್ಷದ ಶ್ಯಾಮಲಾ ಅವರು, ಹಾಲಿ ಫಿನೀಕ್ಸ್‌ನಲ್ಲಿ ‘ವಂದನಾ’ ಎಂಬ ಸಂಸ್ಥೆ ಸ್ಥಾಪಿಸಿ ಎಲ್ಲಾ ವಯೋಮಾನದವರಿಗೂ ಸಂಗೀತ ತರಬೇತಿ ನೀಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ
ನಾಗೇಂದ್ರ ಗುಪ್ತ ಮತ್ತು ಮಾಲಾ ನಾಗೇಂದ್ರ(ವೀಣಾ ವಾದಕಿ) ಇವರ ಸುಪುತ್ರಿಯಾದ ಶ್ರೀಮತಿ ವಾಣಿ ನಾಗೇಂದ್ರರವರು(ಪತಿ ಸಿ.ಎನ್.ನಾಗೇಂದ್ರ), ಹಾಸನದ ಒಳ್ಳೆಯ ಸಂಗೀತಗಾರ್ತಿ, ಚಿಕ್ಕ ವಯಸ್ಸಿನಿಂದಲೇ ಶಿಕ್ಷಣದೊಂದಿಗೆ ಶಾಸ್ತ್ರೀಯ, ಸುಗಮ, ರಂಗಗೀತೆ, ಜಾನಪದ ಗೀತೆಗಳನ್ನು ಹಾಡುವಲ್ಲಿ ಮೇಲುಗೈಯಾಗಿದ್ದು, ಇದುವರೆಗೂ 1000ಕ್ಕೂ ಮೀರಿ ಅಧಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿರುತ್ತಾರೆ. ಇವರ ಮಗಳು ಸೃಷ್ಟಿ ಕೂಡ ಯುವ ಸಂಗೀತಗಾರ್ತಿ. ವಾಣಿಯವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಸೌರಭ, ಆತ್ಮೂತಿ ಸೋಮಯಾಜುಲು ರಾಜ್ಯ ಪ್ರಶಸ್ತಿ, ಕನ್ನಡ ಕೌಸ್ತುಭ ಪ್ರಶಸ್ತಿ, ಸಂಗೀತ ಭೂಷಣ ಪ್ರಶಸ್ತಿ, ಸಾಧಕ ಮಹಿಳೆ ಪ್ರಶಸ್ತಿ, ಕರ್ನಾಟಕ ನೈಟಿಂಗೇಲ್… ಹೀಗೆ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.
ಇವರಲ್ಲದೇ ವಿದುಷಿಯರಾದ- ಹೇಮ ಗಣೇಶ್, ಸುಧಾ ನಟರಾಜ್, ನಾಗಶ್ರೀ ವಿನಯ್, ಪದ್ಮಶ್ರೀ ಪ್ರಸಾದ್, ಪದ್ಮಾವತಿ ಎಚ್.ಎಸ್, ಪದ್ಮಶ್ರೀ, ಬನುಮಾ ಗುರುದತ್… ಅವರುಗಳು, ಜೊತೆಗೆ ಸಂಗೀತಗಾರ್ತಿಯರಾದ ಗೀತಾ ಶ್ರೀಕಾಂತ್ ಹಾಸನ, ನಾಗಶ್ರೀ ಚನ್ನರಾಯಪಟ್ಟಣ, ನಂದಿನಿ ಹಾಸನ, ನವರತ್ನಕುಮಾರಿ ಬೇಲೂರು, ರಾಧಾ ಕೃಷ್ಣಸ್ವರೂಪ, ಶ್ವೇತ ಕಂದಿಗೆ, ಶೈಲಸ್ವಾಮಿ, ಶ್ರೀ ಲಕ್ಷ್ಮಿ ಎ.ಆರ್, ಸ್ವಪ್ನ ಹಾಸನ, ಸುಜಾತ ನರೇಂದ್ರ ಹಾಸನ… ಮುಂತಾದ ಹಲವಾರು ಮಹಿಳೆಯರು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವುದು ಚಿರಸ್ಥಾಯಿಯಾಗಿದೆ. ಇತ್ತೀಚಿನ ಪೀಳಿಗೆಯವರಲ್ಲಿ ಗಾಯಕಿ ಇಂಚರಾ ನಾಗೇಶ್, ಜೀ ಕನ್ನಡ ನಡೆಸುವ ಸರಿಗಮಪ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಸಂಗೀತ, ಸುಗಮ ಸಂಗೀತ, ಚಲನಚಿತ್ರ ಗೀತೆಗಳ ಗಾಯಕಿಯಾಗಿ ಹೆಸರು ಗಳಿಸಿ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಕೇವಲ ಸಂಗೀತ ಮಾತ್ರವಷ್ಟೇ ಅಲ್ಲ, ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವ ಕಲಾವಿದೆಯರೂ ಹಾಸನ ಮಣ್ಣಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ-ಹಿರಿಯ ವೀಣಾವಾದಕರಾದ ರುಕ್ಮಿಣಮ್ಮ, ಪುಷ್ಪ ಬೇಲೂರು, ಸಾವಿತ್ರಿ ಸುಬ್ರಹ್ಮಣ್ಯ ಅವರು. ಜೊತೆಗೆ ವಯೋಲಿನ್ ವಾದಕರಾದ ಗಾಯಿತ್ರಿ, ಕೊಳಲು ವಾದಕರಾದ ಸಮೀಕ್ಷಾ- ಈ ಮೇಲಿನೆಲ್ಲಾ ವಿದುಷಿಯರು, ಸಂಗೀತಗಾರ್ತಿಯರು ಅನೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸಿ ಸಾವಿರಾರು ಸಂಗೀತಗಾರರನ್ನು ಸೃಷ್ಟಿಸಿರುವುದು ಆರೋಗ್ಯಕರ ಸಮಾಜದ ಲಕ್ಷಣವಾಗಿದೆ.
ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ
ನನಗೆ ಸಿಕ್ಕ ಚಿಕ್ಕ ಸಮಯಾವಕಾಶದಲ್ಲಿ, ಲೇಖನದ ಮಿತಿಯಲ್ಲಿ, ಗಮನಕ್ಕೆ ಬಂದ ಸಂಗೀತಗಾರ್ತಿಯರನ್ನಷ್ಟೇ ಇಲ್ಲಿ ನಮೂದಿಸಲಾಗಿದೆ. ನನ್ನ ಗಮನಕ್ಕೆ ಬಾರದ ಅನೇಕ ಹೆಣ್ಣುಮಕ್ಕಳು ಹಾಸನದವರಾಗಿದ್ದು, ಹೊರಗೆ ನೆಲೆಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಹಾಸನದಾದ್ಯಂತ ಸಂಗೀತದ ಮೂಲಕ ಹೆಚ್ಚಿನ ಸಾಧನೆ ಮಾಡುತ್ತಾ, ಸಂಗೀತದ ವಾತಾವರಣವನ್ನು ಉಂಟು ಮಾಡುತ್ತಾ, ಆಸಕ್ತಿಯನ್ನು ಹೆಚ್ಚಿಸುತ್ತಾ ಹಾಸನದ ಮಣ್ಣಿನ ಬೇರುಗಳನ್ನು ಗಟ್ಟಿಗೊಳಿಸುತ್ತಿರುವ ಮಹಿಳಾ ಗಾಯಕ ಸಾಧಕಿಯರಿಗೆ ಹೆಮ್ಮೆಯ ವಂದನೆಗಳು.
-ಬಿ.ಎನ್. ಗಿರಿಜಾಂಬ




