ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಜಿಲ್ಲೆಯ ಉತ್ತಮ- ಕನ್ನಡ ಭಾಷಾ ಶಿಕ್ಷಕಿ, ವಾಗ್ಮಿ, ನಿರೂಪಕಿ, ಸಂಘಟಕಿ, ಲೇಖಕಿ, ಶರಣ ತತ್ವ ಪ್ರಚಾರಕಿ ಎಂದು ಹೆಸರು ಮಾಡಿದವರು ಸುಶೀಲಾ ಸೋಮಶೇಖರ್. ಸೂಕ್ಷ್ಮ ಸಂವೇದನೆಯ ಕವಯಿತ್ರಿಯಾಗಿರುವ ಇವರು ತಮ್ಮ ಜೀವನದಲ್ಲಿ ಕಂಡು ಅನುಭವಿಸಿದ ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ಬದುಕಿನ ಅನೇಕ ತಲ್ಲಣ, ತುಮುಲಗಳನ್ನು ಕಟ್ಟಿಕೊಡುವ, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅನೇಕ ಕವನಗಳು, ಕೃತಿಗಳು, ವಚನಾಮೃತಗಳನ್ನು ಸರಳವಾದ ಕನ್ನಡ ಭಾಷೆಯಲ್ಲಿ ರಚಿಸಿ ಸಮಾಜಕ್ಕೆ ನೀಡಿದ್ದಾರೆ. ಸಾಹಿತ್ಯ ಮತ್ತು ಮನುಷ್ಯನ ಬದುಕು ಒಂದು ಹಾಳೆಯ ಎರಡು ಬದಿಗಳಿದ್ದಂತೆ, ಒಂದನ್ನು ಬಿಟ್ಟು ಮತ್ತೊಂದಿಲ್ಲ ಎನ್ನುವ ಸುಶೀಲಾ ಅವರು ‘ನಮ್ಮ ಜೀವನಾನುಭವಗಳ ಕ್ರೋಡೀಕರಣವೇ ಸಾಹಿತ್ಯ’ವೆನ್ನುತ್ತಾರೆ.
ಇದನ್ನು ಓದಿದ್ದೀರಾ?: ಚಂದನವನದ ಬಾನಲ್ಲಿ ಹಾಸನದ ತಾರೆಯರು
ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದಲ್ಲಿ 1955ರ ಜೂನ್ 10ರಂದು ಜನಿಸಿದ ಸುಶೀಲಾ ಸೋಮಶೇಖರ್ ಅವರು ಕನ್ನಡ ಭಾಷಾ ಶಿಕ್ಷಕಿಯಾಗಿ, ಸಕಲೇಶಪುರದ ಚೇತನ ಪ್ರೌಢಶಾಲೆಯಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ತಂದೆ ತಮ್ಮಣ್ಣಗೌಡರು, ತಾಯಿ ನಂಜಮ್ಮರ ಮಗಳಾಗಿ ಜನಿಸಿದ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಸೋಮಶೇಖರರು ಇವರ ಬಾಳಸಂಗಾತಿಯಾಗಿದ್ದಾರೆ. ಪದವಿ ಶಿಕ್ಷಣದವರೆಗೆ ಹಾಸನದಲ್ಲಿ ಓದಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಇವರು ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕುಟುಂಬ, ವೃತ್ತಿ, ಸಂಘಟನೆ, ಬರವಣಿಗೆ ಹೀಗೆ ಹಲವು ಕ್ಷೇತ್ರಗಳನ್ನು ಒಟ್ಟಾಗಿ ಸಮರ್ಥವಾಗಿ ನಿಭಾಯಿಸಿದವರು.
ಆರನೆಯ ತರಗತಿಯಲ್ಲಿದ್ದಾಗ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಗೀತೆಗಳಿಗೆ ಮನಸೋತು ಅವನ್ನು ಬರೆಯುವ ಬಗೆ ಹೇಗೆ ಎಂದು ಅವರು ಯೋಚಿಸಿದ್ದಿದೆ. ಪಿಯುಸಿ ಓದುತ್ತಿದ್ದಾಗ ಗೆಳತಿಯೊಬ್ಬರು ಮದುವೆಯಾಗಿ ಕೆಲ ತಿಂಗಳಲ್ಲೇ ಬಾಳಸಂಗಾತಿಯನ್ನು ಕಳೆದುಕೊಂಡಾಗ ದುಃಖ, ನೋವಿನ ಭಾವಗಳನ್ನು ಅನುಭವಿಸಿ ಸುಶೀಲಾರು ‘ವಿಧವೆ’ ಎಂಬ ಕವನವನ್ನು ಮೊದಲ ಬಾರಿಗೆ ರಚಿಸಿದರು. ಪದವಿಯ ನಂತರ ಸಾಹಿತ್ಯ ಕುರಿತ ಮಂಥನ ಇವರೊಳಗೇ ನಡೆಯುತ್ತಿತ್ತಾದರೂ, ವೃತ್ತಿ, ಮದುವೆಗಳೊಳಗೆ ತೊಡಗಿ, ಮಕ್ಕಳು ದೊಡ್ಡವರಾದಾಗ ಕೊಂಚ ಬಿಡುಗಡೆ ದೊರೆತಂತೆನಿಸಿ, 36ರ ವಯಸ್ಸಿನಲ್ಲಿ ಮನಸಿನ ಭಾವನೆಗಳಿಗೆ ಒತ್ತು ಕೊಟ್ಟು ಸಾಹಿತ್ಯ ಕ್ಷೇತ್ರಕ್ಕೆ ಅಡಿ ಇಡಲು ನಿರ್ಧರಿಸಿದಾಗ ಮನೆಯವರೆಲ್ಲರಿಂದ ಪ್ರೋತ್ಸಾಹ ದೊರೆತಿತು.
ಇದನ್ನು ಓದಿದ್ದೀರಾ?: ಕೃಷಿಯನ್ನೇ ಖುಷಿಯಾಗಿಸಿಕೊಂಡಿರುವ- ಹೇಮಾ ಅನಂತ್
ಮೊದಲಿಗೆ, ಸಾಧ್ಯವಿರುವಷ್ಟು ಸಾಹಿತ್ಯದ ಅರಿವು ಪಡೆಯಬೇಕೆಂದು ಸಾಹಿತ್ಯಾಧ್ಯಯನಕ್ಕೆ ಮುಂದಾದರು. ಇವರ ಮನಸನ್ನು ಬಹಳವಾಗಿ ಪ್ರಭಾವಿಸಿದ್ದ ವಚನ ಸಾಹಿತ್ಯ, ಗ್ರಾಮೀಣ ಪರಿಸರದಲ್ಲಿ ಬೆಳೆದ ಫಲವಾಗಿ ಮನಸಿಗೆ ಹತ್ತಿರವಾಗಿದ್ದ ಜನಪದ ಸಾಹಿತ್ಯಗಳು ಹೆಚ್ಚಿನ ಓದಿಗೆ ಪ್ರೇರಣೆಯಾದವು. ಓದಿನ ಪರಿಣಾಮದ ಜೊತೆಗೆ ಸಮಾಜದಲ್ಲಿ ನಡೆದ ಹಲವಾರು ಘಟನೆಗಳು ಇವರ ಮನಸಲ್ಲಿ ಮಥಿಸಿ, ಒಳಗೇ ಘರ್ಷಣೆಗಳೂ ನಡೆದ ಫಲವಾಗಿ ಅವರ ಒಳಗು ಬರಹಕ್ಕಿಳಿದವು. ಇದಾಗಿ 1998ರಲ್ಲಿ ಇವರ ಮೊದಲ ಕವನ ಸಂಕಲನ ‘ನಕ್ಕು ಬಿಡೆ ಗೆಳತಿ’ ಹೊರಬಂದಿತು. ನಂತರದ 9 ವರ್ಷಗಳ ಕಾಲ ಇವರಿಗೆ ಯಾವ ಕೃತಿಯನ್ನೂ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಸಂಘ, ಸಂಸ್ಥೆಗಳಲ್ಲಿ ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಹೀಗಿರುವಾಗ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಾದ ನಿಕಟ ಸಂಪರ್ಕದಿಂದ ಹಲವು ಅವಕಾಶಗಳು ದೊರೆತು ಮತ್ತೆ ಬರವಣಿಗೆಯಲ್ಲಿ ತೊಡಗಿಕೊಂಡು, ಅವರ ಎರಡನೇ ಕವನ ಸಂಕಲನ ‘ಅಂಗಳ ಅನಾಥವಲ್ಲ’ ಹೊರಬಂದಿತು. ಹಾಸನ ಆಕಾಶವಾಣಿಯಲ್ಲಿ 15 ವರ್ಷಗಳಿಂದ ಇವರು ನಡೆಸಿಕೊಡುತ್ತಿರುವ ಚಿಂತನ ಕಾರ್ಯಕ್ರಮ ಎರಡು ಸಂಕಲನವಾಗಿ ಪ್ರಕಟವಾಗಿದೆ.
ಇದನ್ನು ಓದಿದ್ದೀರಾ?: ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ವಚನ ಸಾಹಿತ್ಯದಿಂದ ಪ್ರಭಾವಿತರಾಗಿ, ಜೀವನದ ಪಥದಲ್ಲಿ ಅನುಸರಿಸಬೇಕಾದ ಸಮಯ ಮತ್ತು ಸತ್ಯಮಾರ್ಗವನ್ನು ತಮ್ಮ ಸಾಹಿತ್ಯದ ಮೂಲಕ ಓದುಗ, ಆಸಕ್ತರಿಗೆ ತಲುಪಿಸುವ ಪ್ರಯತ್ನ ಅವರದ್ದಾಗಿದೆ. ಬಿಡಿ-ಬಿಡಿಯಾದ ಮಲ್ಲಿಗೆಯ ಹೂಗಳಂತೆ ಮಧುರವಾಗಿರುವ ಪರಿಮಳ ಸೂಸುವ ಸಾಹಿತ್ಯದ ಪದಗುಚ್ಛಗಳ ಕಟ್ಟಿಕೊಡುವ ಪ್ರಯತ್ನ ಸುಶೀಲಾರದ್ದು. ಅವರ ಸಾಹಿತ್ಯವು ಸತ್ಯ ಸಂದೇಶ, ಕಾವ್ಯಾತ್ಮಕ ಧ್ವನಿ, ವಿನ್ಯಾಸದ ಅಭಿವ್ಯಕ್ತಿಗಳನ್ನು ಒಳಗೊಂಡಿವೆ. ಇವರ ಕೃತಿಗಳ ಪಟ್ಟಿ ಹೀಗಿದೆ- ವಚನ ಸಂವಹನ(ವಚನಾ ವಿಮರ್ಶಾ ಕೃತಿ), ಮಳೆ ಪುರುಷ(ಕವನ ಸಂಕಲನ), ಚಿಗುರು(ಮಕ್ಕಳ ಕವನಗಳು ಸಂಪಾದಿತ), ನುಡಿ ಜ್ಯೋತಿರ್ಲಿಂಗ ಹಾಗೂ ಚಿಂತನಾನುಭವ(ಆಕಾಶವಾಣಿ ಚಿಂತನ ಲೇಖನ ಕೃತಿ), ನಗುವ ನಕ್ಷತ್ರಗಳು(ಮಕ್ಕಳ ಕವನಗಳು), ಶರಣ ಸಂಸ್ಕೃತಿ ಪ್ರಸ್ತುತ ತಲ್ಲಣಗಳು, ಶರಣ ಶರಣೆಯರ ಜೀವಪರ ನಿಲುವುಗಳು, ವಚನ ಧರ್ಮ ವೈವಿಧ್ಯ, ವಚನ ವಿಚಾರಧಾರೆ, ವಚನ ಮಂದಾರ- ಭಾಗ-1 ಮತ್ತು ಭಾಗ-2(ಒಟ್ಟು 1024 ಆಧುನಿಕ ವಚನಗಳ ಕೃತಿಗಳು), ಒಳಗೊಂದು ತಣ್ಣನೆಯ ನದಿ, ನಕ್ಕು ಬಿಡೆ ಗೆಳತಿ, ಅಂಗಳ ಅನಾಥವಲ್ಲ, ಸದ್ದಿಲ್ಲದ ನಗು, ಅರಳುವ ಹೂಗಳು, ಸಾಧಕರ ಸುಳುಹುಗಳು, ಕಾವ್ಯಾನುಭವ, ಭಾವಾಂತರಂಗ, ನೆನಪಿನ ಅಂಗಳ- ಕಥಾ ಸಂಕಲನ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಇವರ ಕಥೆ, ಕವನ, ಲೇಖನಗಳು ಹಲವಾರು ರಾಜ್ಯಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಾಸನದ ಜೇನುಗಿರಿ ಪತ್ರಿಕೆಯಲ್ಲಿ ‘ಕಾಲಾನು ಕಾಲಕ್ಕೆ’ ಎಂಬ ಅಂಕಣದಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಚಂದನ ಟಿವಿಯ ‘ಬೆಳಗು’ ಕಾರ್ಯಕ್ರಮ, ಕಸ್ತೂರಿ ಟಿವಿಯಲ್ಲಿ ಜಾಣರ ಜಗುಲಿ, ಸುವರ್ಣ ಟಿವಿಯ ಕವಿಗೋಷ್ಠಿಯಲ್ಲಿ ಇವರು ಭಾಗವಹಿಸಿದ್ದು, 25 ವರ್ಷಗಳಿಂದ ಹಾಸನ ಆಕಾಶವಾಣಿಯಲ್ಲಿ ಇವರ ಲೇಖನಗಳು, ಭಾಷಣಗಳು, ಕವನಗಳು, ಸಂದರ್ಶನಗಳು, ಚಿಂತನಗಳು ಪ್ರಸಾರವಾಗಿವೆ. 19-20ನೇ ಶತಮಾನದ ಕವಿಗಳ ಸುಮಾರು 250ಕ್ಕೂ ಹೆಚ್ಚು ವರ್ಣರಂಜಿತ ಭಾವಚಿತ್ರಗಳು ಹಾಗೂ ಕಿರು ಪರಿಚಯವನ್ನೊಳಗೊಂಡ ಮಾಹಿತಿ ಸಂಗ್ರಹ ಇವರಲ್ಲಿವೆ.
ಸುಶೀಲಾ ಅವರಿಗೆ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸನ್ಮಾನವಾಗಿದ್ದು, 2020ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಇವರ ‘ಅರಳುವ ಹೂವು’ ಎಂಬ ಮಕ್ಕಳ ಕವನ ಸಂಕಲನಕ್ಕೆ ‘ಮಕ್ಕಳ ಪುಸ್ತಕ ಸೊಗಸು’ ಬಹುಮಾನ ನೀಡಿದೆ. 2024ರಲ್ಲಿ ‘ಒಳಗೊಂದು ತಣ್ಣನೆಯ ನದಿ’ ಎಂಬ ಹನಿಗವನ ಸಂಕಲನಕ್ಕೆ ಕವಿ ಜರಗನಹಳ್ಳಿ ಶಿವಶಂಕರ್ ಹನಿಗವನ ಸಾಹಿತ್ಯ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗದಗಿನ ಪಂಡಿತ ಪುಟ್ಟರಾಜ ಸಾಹಿತ್ಯ ಅಭಿನಂದನಾ ಪ್ರಶಸ್ತಿಗಳೂ ಲಭಿಸಿವೆ. ಇವರ ಅಂಗಳ ಅನಾಥವಲ್ಲ ಕವನ ಸಂಕಲನಕ್ಕೆ ನೀಲಗಂಗಾ ದತ್ತಿ ಬಹುಮಾನ, ನುಡಿ ಜ್ಯೋತಿರ್ಲಿಂಗ ಚಿಂತನ ಕೃತಿಗೆ ಅಡೈಸರ್ ಪ್ರಶಸ್ತಿ, ಕಾವ್ಯ ಶ್ರೀ ಪ್ರಶಸ್ತಿ, ನಗುವ ನಕ್ಷತ್ರಗಳು ಮಕ್ಕಳ ಕವನ ಸಂಕಲನಕ್ಕೆ ಗುಣಸಾಗರಿ ನಾಗರಾಜದತ್ತಿ ಪ್ರಶಸ್ತಿ, 2024ರಲ್ಲಿ ವಚನ ಮಂದಾರ ಆಧುನಿಕ ವಚನ ಸಾಹಿತ್ಯ ಕೃತಿಗೆ ‘ರಮಣಶ್ರೀ ಶರಣ ಪ್ರಶಸ್ತಿ’, ಚಿಂತನಾನುಭವ ಚಿಂತನ ಕೃತಿಗೆ ‘ಗೀತಾ ದೇಸಾಯಿ’ ಪ್ರಶಸ್ತಿ ದೊರೆತಿವೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಸುಶೀಲಾ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಕಲೇಶಪುರ ತಾಲೂಕು ಶಿಕ್ಷಣ ಇಲಾಖೆ ಹಾಗೂ ಆಡಳಿತ ವತಿಯಿಂದ ಜನ ಮೆಚ್ಚಿದ ಶಿಕ್ಷಕಿ, ರಾಜ್ಯಮಟ್ಟದ ಮಹಿಳಾ ಪ್ರಶಸ್ತಿ, ತುಮಕೂರು ಶ್ರೀಮಠದ ವತಿಯಿಂದ ಸಂಘ ಸಿರಿ ಪ್ರಶಸ್ತಿ, ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಡಾ.ಎಸ್.ಕೆ ಕರೀಂ ಖಾನ್ ಪ್ರಶಸ್ತಿ, ತುಮಕೂರಿನ ರೋಟರಿ ಸೇವಾರತ್ನ, ಕರ್ನಾಟಕ ಲೇಖಕಿಯರ ಸಂಘದಿಂದ ಶಾರದಾ ರಾಮಲಿಂಗಪ್ಪ ದತ್ತಿ ಬಹುಮಾನ, ಜರಗನಹಳ್ಳಿ ಸಿದ್ದಮ್ಮ ನಂಜುಂಡಪ್ಪ ಶರಣ ದತ್ತಿ ಪ್ರಶಸ್ತಿ, ಪಂಡಿತ ಪುಟ್ಟರಾಜ ಗವಾಯಿ ಪ್ರಶಸ್ತಿ, 2025ರಲ್ಲಿ ಲೇಖಿಕಾ ಸಾಹಿತ್ಯ ವೇದಿಕೆವತಿಯಿಂದ ರಾಜ್ಯಮಟ್ಟದ ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಮಹಿಳಾ ಸಾಧಕಿ ಪ್ರಶಸ್ತಿ… ಇತ್ಯಾದಿ ಇಪ್ಪತ್ತೈದಕ್ಕೂ ಹೆಚ್ಚು ಪ್ರಶಸ್ತಿಗಳು ದೊರಕಿವೆ. ವಿವಿಧ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿವೆ. ಸಾಹಿತ್ಯಾಭಿಮಾನಿಗಳು ಹಾಗೂ ನೆಚ್ಚಿನ ವಿದ್ಯಾರ್ಥಿಗಳು 2020ರಲ್ಲಿ ಹೊರತಂದ ‘ಸಹೃದಯಿ’ ಎಂಬ ಅಭಿನಂದನಾ ಗ್ರಂಥದಲ್ಲಿ ಅವರ ಮೇಲಿನ ಮಾತೃಪ್ರೇಮ, ಸಾಹಿತ್ಯ ಪ್ರೇಮ ರಸಧಾರೆಯನ್ನು ಹರಿಸಿದ್ದಾರೆ.
ಸಂಘ ಸಂಸ್ಥೆಗಳಲ್ಲಿಯೂ ಕಾರ್ಯ ನಿರ್ವಹಿಸಿರುವ ಸುಶೀಲಾ ಅವರು ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷರಾಗಿ ಮತ್ತು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಪ್ರಸ್ತುತ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿರುವ ರಾಜ್ಯ ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ, ಆಂಧ್ರಪ್ರದೇಶದ ಆದೋನಿ, ಮುಂಬೈನ ಬಸವೇಶ್ವರ ಫಿಲಾಸಫಿಕಲ್ ಅಂಡ್ ಕಲ್ಚರ್ ಸೊಸೈಟಿಯ ಬಸವ ಜಯಂತಿಯಂದು… ಮುಂತಾದ ವಿಶೇಷ ಉಪನ್ಯಾಸಕ್ಕೆ ಆಹ್ವಾನಿಸಿ ಗೌರವಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ 2004ನೇ ಸಾಲಿನಲ್ಲಿ ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನದ ನೆನಪಿಗೆ ‘ವಚನ ಸಿರಿ’ ಸ್ಮರಣ ಸಂಚಿಕೆ, ಅಲ್ಲದೆ ‘ವಚನಾಮೃತ’, ‘ವೃಷಭ ಪುಷ್ಪ ಸಿದ್ಧ ಶ್ರೀ’, ಮೈಸೂರು ವಿಭಾಗೀಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ‘ಚಿಣ್ಣರ ಚಿತ್ತಾರ’ ಸಂಚಿಕೆ ಹಾಗೂ 840ನೇ ಸಿದ್ಧರಾಮ ಜಯಂತಿ ಸಮಾರಂಭದ ನೆನಪಿನ ‘ಸಿದ್ಧಸಿರಿ-ಪುಷ್ಪಗಿರಿ’ ಎಂಬ ಸ್ಮರಣ ಸಂಚಿಕೆಗಳು ಮೂಡಿಬಂದಿವೆ. ಶರಣೆಯರ, ವಚನಾಸಕ್ತರ ಅತ್ಯುತ್ತಮ ಸಂಘಟನೆಯನ್ನು ಮಾಡುತ್ತಾ ಮಹಿಳೆಯರ ಸಬಲೀಕರಣದಲ್ಲಿಯೂ ಇವರು ತೊಡಗಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
‘ಮನುಷ್ಯ ಏನೇ ಮಾಡಲಿ, ನಡೆದ ದಾರಿಗಿಂತ ನಡೆಯುವ ದಾರಿ ದೀರ್ಘವಾದದ್ದು. ಆ ದೀರ್ಘವಾದ ದಾರಿ ಯಾವತ್ತೂ ಕೂಡ ನಮ್ಮನ್ನು ಸ್ವಾಗತಿಸುತ್ತಿರುತ್ತದೆ. ನಾವು ಮಾಡಿರುವ ಕೆಲಸ ಅಲ್ಪವಾದರೂ ಕೂಡ ನಾವು ಅಷ್ಟಕ್ಕೇ ತೃಪ್ತಿ ಹೊಂದದೇ, ಉತ್ತಮವಾದ ಕೆಲಸಗಳನ್ನು ಇನ್ನಷ್ಟು ಮಾಡಬೇಕೆಂಬ ಅಭಿಲಾಷೆಯೊಂದಿಗೆ ಯಾವುದೇ ಸಾಹಿತಿ ಮುಂದುವರೆಯುವ ರೀತಿಯಲ್ಲಿ ನಾನು ಕೂಡ ಮುಂದುವರಿಯುತ್ತಿರುವೆ’ ಎನ್ನುತ್ತಾರೆ ಈಗ 70ರ ಹರೆಯದಲ್ಲಿರುವ ಸುಶೀಲಾರವರು.
-ಮೀನಾಕ್ಷಿ ಖಾದರ್




