ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಾದ 1952ರ ಚುನಾವಣೆಯಲ್ಲಿ, ಹಿಂದೂ ಮಹಾಸಭಾ ಬ್ರಿಟಿಷರ ಸಹಾಯ ಕೋರಿದ್ದ ರಹಸ್ಯ ಪತ್ರ ಬಹಿರಂಗವಾಗಿದೆ. 'ದಿ ಪ್ರೀಟ್' ಈ ಸಂಬಂಧ ಲೇಖನ ಪ್ರಕಟಿಸಿದೆ.
ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಾದ 1952ರ ಚುನಾವಣೆಯಲ್ಲಿ, ಹಿಂದೂ ಮಹಾಸಭಾ ಬ್ರಿಟಿಷರ ಸಹಾಯ ಕೋರಿದ್ದ ರಹಸ್ಯ ಪತ್ರ ಬಹಿರಂಗವಾಗಿದೆ. ಹೆಚ್ಚುತ್ತಿದ್ದ ಕಮ್ಯುನಿಸ್ಟ್ ಪ್ರಭಾವವನ್ನು ತಡೆಯಲು ಹಿಂದೂ ಮಹಾಸಭಾವೂ ಬ್ರಿಟಿಷರ ಸಹಾಯವನ್ನು ಕೋರಿತ್ತು ಎಂಬ ಅಂಶವು ಯುನೈಟೆಡ್ ಕಿಂಗ್‌ಡಮ್‌ನ ‘ಕೇವ್‌ನಲ್ಲಿರುವ ನ್ಯಾಷನಲ್ ಆರ್ಕೈವ್ಸ್’ನಲ್ಲಿರುವ ರಹಸ್ಯ ರಾಜತಾಂತ್ರಿಕ ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದು ‘ದಿ ಪ್ರೀಟ್’ ಲೇಖನ ತಿಳಿಸಿದೆ.
ಹಿಂದೂ ಮಹಾಸಭಾವು 1951ರ ಆಗಸ್ಟ್ 27ರಂದು ರಹಸ್ಯವಾಗಿ ಪತ್ರ ಬರೆಯುವ ಮೂಲಕ ಬ್ರಿಟಿಷರ ಸಹಾಯಕ್ಕಾಗಿ ಮನವಿ ಮಾಡಿತ್ತು. ಆ ಸಮಯದಲ್ಲಿ ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿದ್ದ ಆಶುತೋಷ್ ಲಾಹಿರಿ ಅವರು ಕೋಲ್ಕತ್ತಾದಲ್ಲಿದ್ದ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್‌ಗೆ ಈ ಪತ್ರವನ್ನು ತಲುಪಿಸಿದ್ದರು.
ಲಾಹಿರಿ ಅವರ ಪತ್ರದಲ್ಲಿ ಹೀಗೆ ಉಲ್ಲೇಖಿಸಲಾಗಿತ್ತು: “ಈ ಪ್ರಾಂತ್ಯವನ್ನು ಕಮ್ಯುನಿಸ್ಟ್ ಬೆಂಬಲಿತ ಶಕ್ತಿಗಳ ನಿಶ್ಚಿತ ಗೆಲುವಿನಿಂದ ರಕ್ಷಿಸಲು, ಮುಂಬರುವ ಚುನಾವಣೆಯಲ್ಲಿ ಬಹುದೊಡ್ಡ ಮಟ್ಟದ ಯಶಸ್ಸಿನ ಭರವಸೆ ಹೊಂದಿರುವ ಅಥವಾ ಇತರ ಕಮ್ಯುನಿಸ್ಟ್ ವಿರೋಧಿ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಂಡು ಕಮ್ಯುನಿಸ್ಟ್ ಬೆಂಬಲಿತ ಸರ್ಕಾರ ರಚನೆಯಾಗುವುದನ್ನು ತಡೆಯಬಲ್ಲ ಏಕೈಕ ಪಕ್ಷದ ಬೆನ್ನಿಗೆ ನೀವು ಸಕ್ರಿಯವಾಗಿ ನಿಲ್ಲಬೇಕಾಗಿದೆ”


ಇದರಲ್ಲೇ ಬ್ರಿಟಿಷರಿಗೆ “ಪೂರ್ಣ ಪ್ರಮಾಣದ ಬೆಂಬಲ”ಕ್ಕೆ ಕರೆ ನೀಡಲಾಗಿತ್ತು. “ಮುಂಬರುವ ಸಾರ್ವತ್ರಿಕ ಚುನಾವಣೆಯ ಹಾದಿಯ ಮೇಲೆ ಪ್ರಭಾವ ಬೀರುವಲ್ಲಿ ತಾವೂ ಭಾಗಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಬ್ರಿಟಿಷ್ ಸರ್ಕಾರವೇ ನಿರ್ಧರಿಸಬೇಕು,” ಎಂದು ಲಾಹಿರಿ ಬರೆದಿದ್ದರು. “ನಿಮ್ಮ ಪ್ರಭಾವದ ಸಂಪೂರ್ಣ ಬಲವನ್ನು ನಮಗೆ ನೀಡಿ ಹಾಗೂ ನಿಮ್ಮ ಪೂರ್ಣ ಮನಸ್ಸಿನ ಬೆಂಬಲವನ್ನು ನಮಗೆ ನೀಡಿ ಎಂದು ನಾನು ನಿಮಗೆ ಮನವಿ ಮಾಡುತ್ತೇನೆ,” ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಕೇಳಿಬರುವ ಹೆಸರುಗಳಲ್ಲಿ ಆಶುತೋಷ್ ಲಾಹಿರಿ ಹೆಸರು ಕೂಡ ಒಂದು. 1915ರಿಂದ 1922ರವರೆಗೆ ಅಂಡಮಾನ್ ದ್ವೀಪದಲ್ಲಿ ಜೈಲುವಾಸ ಅನುಭವಿಸಿದ್ದವರು ಲಾಹಿರಿ. ಬಳಿಕ 1924ರಲ್ಲಿ ಹಿಂದೂ ಮಹಾಸಭಾವನ್ನು ಸೇರಿದರು. ಅದಾದ ನಂತರ 1932ರಲ್ಲಿ ಕೋಲ್ಕತ್ತಾದ ‘ಸ್ಟೇಟ್ಸ್‌ಮನ್’ ಪತ್ರಿಕೆಯ ಸಂಪಾದಕರಾಗಿದ್ದ ಆಲ್ಫ್ರೆಡ್ ವ್ಯಾಟ್ಸನ್ ಅವರ ಹತ್ಯೆಯ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಹಿರಿ ಬಂಧನವಾಗಿತ್ತು. ಆದರೆ ವಿಚಾರಣೆಗೆ ಒಳಪಡದೆಯೇ ಬಿಡುಗಡೆಗೊಂಡಿದ್ದರು. 1950ರಲ್ಲಿ ಕೋಮು ದ್ವೇಷವನ್ನು ಪ್ರಚೋದಿಸಿದ ಆರೋಪದ ಮೇಲೆ ಈ ಹಿಂದೂ ಮಹಾಸಭಾ ನಾಯಕನನ್ನು ಮುನ್ನೆಚ್ಚರಿಕೆ ಬಂಧನ ಕಾಯ್ದೆ (ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್) ಅಡಿಯಲ್ಲಿ ಮತ್ತೆ ಬಂಧಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಬಂಧನವನ್ನು ರದ್ದುಗೊಳಿಸಿತ್ತು.
ಬ್ರಿಟಿಷ್ ಹೈಕಮಿಷನ್ ಅಧಿಕಾರಿಗಳು 1951ರ ಸೆಪ್ಟೆಂಬರ್ 4ರಂದು ಬರೆದ ಟಿಪ್ಪಣಿಯಲ್ಲಿ “ಪಕ್ಷೀಯ ರಾಜಕೀಯದಲ್ಲಿ ಭಾಗವಹಿಸುವ ಸ್ಥಿತಿಯಲ್ಲಿ ಹೈಕಮಿಷನ್ ಇಲ್ಲ” ಎಂದು ಸಂಕ್ಷಿಪ್ತವಾಗಿ ಪ್ರತ್ಯುತ್ತರ ನೀಡಿದ್ದರು.
ಬ್ರಿಟಿಷ್ ಹೈಕಮಿಷನ್‌ಗೆ ಪತ್ರ ಬರೆಯುವುದಕ್ಕೂ ಐದು ತಿಂಗಳ ಮುನ್ನ, ಲಾಹಿರಿ ಅಮೆರಿಕದ ಕಾನ್ಸುಲ್-ಜನರಲ್ ಇವಾನ್ ವಿಲ್ಸನ್ ಮತ್ತು ವೈಸ್-ಕಾನ್ಸುಲ್ ಎನ್‌ಜಿ ಥ್ಯಾಚರ್ ಅವರನ್ನು ಭೇಟಿಯಾಗಿದ್ದರು ಎಂದು ಈ ದಾಖಲೆಗಳು ತೋರಿಸುತ್ತವೆ. 1951ರ ಮಾರ್ಚ್ 13ರಂದು ನಡೆದ ಅವರ ಸಂಭಾಷಣೆಯ ಜ್ಞಾಪನ ಪತ್ರವನ್ನು ಬ್ರಿಟಿಷ್ ಹೈಕಮಿಷನ್‌ನೊಂದಿಗೆ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಲಾಹಿರಿ ಅವರು ಹಿಂದೂ ಮಹಾಸಭಾದ ‘ಕೇಸರಿ’ ಪತ್ರಿಕೆಗೆ ಅಮೆರಿಕದ ಸಂಸ್ಥೆಗಳಿಂದ ಜಾಹೀರಾತುಗಳನ್ನು ಕೋರಿದ್ದರು ಎಂದು ಉಲ್ಲೇಖಿಸಲಾಗಿದೆ.


CIA ಏಜೆಂಟ್‌ಗಳಾದ ಸ್ವಾತಂತ್ರ್ಯ ಹೋರಾಟಗಾರರು!
ವಿದೇಶಿ ಹಸ್ತಕ್ಷೇಪವನ್ನು ಬಹಿರಂಗವಾಗಿ ಖಂಡಿಸುತ್ತಲೇ, ನವಭಾರತದ ರಾಜಕೀಯ ಪಕ್ಷಗಳು ಯುನೈಟೆಡ್ ಕಿಂಗ್‌ಡಮ್ (ಯುಕೆ) ಹಾಗೂ ಅಮೆರಿಕವನ್ನು ಬೆಂಬಲ ಕೋರಿ ಸಂಪರ್ಕಿಸುವುದನ್ನು ಮುಂದುವರಿಸಿದ್ದವು ಎಂಬುದನ್ನು ಕೆಲವು ಸಂಶೋಧನೆಗಳು ತೋರಿಸಿಕೊಟ್ಟಿವೆ. ಇದರ ಬೆನ್ನಲ್ಲೇ, ಹಿಂದೂ ಮಹಾಸಭಾವು ಭಾರತದ ವಸಾಹತುಶಾಹಿ ಆಡಳಿತಗಾರರಾಗಿದ್ದ ಬ್ರಿಟಿಷರ ಸಹಾಯವನ್ನು ಕೋರಿತ್ತು ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಆ ಕಾಲಘಟ್ಟದ ಇತರ ಎರಡು ಪ್ರಮುಖ ಪಕ್ಷಗಳಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕೂಡ ವ್ಯಾಪಕವಾದ ವಿದೇಶಿ ಬೆಂಬಲವನ್ನು ಪಡೆದುಕೊಂಡಿದ್ದವು ಎಂದು ಆರ್ಕೈವ್ ಸಂಶೋಧನೆಗಳು ತಿಳಿಸಿವೆ.
ಸ್ವಾತಂತ್ರ್ಯ ಬಂದ ತಕ್ಷಣವೇ ಆರಂಭವಾದ ತೆಲಂಗಾಣ ಸಶಸ್ತ್ರ ಬಂಡಾಯಕ್ಕೆ ವಿದೇಶದಿಂದ ಹೆಚ್ಚಿನ ಪ್ರಮಾಣದ ನೆರವು ಸಿಗುತ್ತಿದೆ ಎಂದು ಸಿಐಎ ನಂಬಿತ್ತು. ಅಲ್ಲದೆ, ಸ್ಲಾವಿಕ್ ಉಚ್ಚಾರಣೆ (Slavic accents) ಹೊಂದಿದ್ದ ಆಪರೇಟರ್‌ಗಳು ವೈರ್‌ಲೆಸ್ ಪ್ರಸಾರಗಳನ್ನು ಮಾಡುತ್ತಿದ್ದರು ಎಂದು ರಹಸ್ಯ ತಂತಿಸಂದೇಶವೊಂದು (Secret cable) ಉಲ್ಲೇಖಿಸಿತ್ತು.
ಕಾಂಗ್ರೆಸ್ ನಾಯಕರು ಕೂಡ ಇದನ್ನು ಒಪ್ಪಿಕೊಂಡಿದ್ದರು. ಯುಕೆ ಹಾಗೂ ಅಮೆರಿಕದ ಗೂಢಚಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಿದ್ದರು. 1949ರ ಕೊನೆಯಲ್ಲಿ, ಸಿಪಿಐ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಅನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ಹೈದರಾಬಾದ್‌ನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುತ್ತಿರುವುದಾಗಿ ಕಾಂಗ್ರೆಸ್ ಸಿಐಎಗೆ ತಿಳಿಸಿತ್ತು. ಇನ್ನು ಗುಪ್ತಚರ ದಳವು (ಇಂಟೆಲಿಜೆನ್ಸ್ ಬ್ಯೂರೋ) ಕೇರಳದ ಮಲಬಾರ್ ಪ್ರದೇಶದಲ್ಲಿ ರಹಸ್ಯ ಕಮ್ಯುನಿಸ್ಟ್ ವಿರೋಧಿ ಗುಂಪೊಂದನ್ನು ಸ್ಥಾಪಿಸಿತಲ್ಲದೆ, ಅದರ ಪ್ರಗತಿಯ ಬಗ್ಗೆ ಸಿಐಎಗೆ ನಿಯಮಿತವಾಗಿ ಮಾಹಿತಿ ನೀಡಿತ್ತು.
ನವದೆಹಲಿಯ ಅಮೆರಿಕದ ಮಾಜಿ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ತಮ್ಮ ಆತ್ಮಚರಿತ್ರೆಯಲ್ಲಿ, 1959ರಲ್ಲಿ ಕೇರಳದಲ್ಲಿದ್ದ ಕಮ್ಯುನಿಸ್ಟ್ ವಿರೋಧಿ ಪಕ್ಷಗಳಿಗೆ ಸಿಐಎ ಹಣಕಾಸಿನ ನೆರವು ನೀಡಿತ್ತು ಎಂದು ಒಪ್ಪಿಕೊಂಡಿದ್ದಾರೆ.
“ನಾವು ಭಾರತೀಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ, ರಾಜಕೀಯ ಪಕ್ಷವೊಂದಕ್ಕೆ ಹಣಕಾಸಿನ ನೆರವು ನೀಡಿದ್ದು ಕೇವಲ ಎರಡೇ ಎರಡು ಬಾರಿ. ರಾಜ್ಯ ಚುನಾವಣೆಯಲ್ಲಿ ಕಮ್ಯುನಿಸ್ಟರು ಗೆಲ್ಲುವ ಸಾಧ್ಯತೆ ಇದ್ದಂತಹ ಸಂದರ್ಭಗಳಲ್ಲಿ ಮಾತ್ರ ಈ ರೀತಿ ಮಾಡಲಾಗಿತ್ತು; ಒಮ್ಮೆ ಕೇರಳದಲ್ಲಿ ಮತ್ತು ಇನ್ನೊಮ್ಮೆ ಪಶ್ಚಿಮ ಬಂಗಾಳದಲ್ಲಿ,” ಎಂದು ಅವರು ಬರೆದಿದ್ದಾರೆ.

“ಹಣದ ಒಂದು ಕಂತನ್ನು ಆಗ ಪಕ್ಷದ ಮುಖ್ಯಸ್ಥರಾಗಿದ್ದ (ಮಾಜಿ ಪ್ರಧಾನಿ ಇಂದಿರಾ) ಶ್ರೀಮತಿ ಗಾಂಧಿ ಅವರಿಗೇ ನೀಡಲಾಗಿತ್ತು,” ಎಂದು ಮೊಯ್ನಿಹಾನ್ ಪ್ರತಿಪಾದಿಸಿದ್ದರು.
ತನ್ನ ಭಾಗವಾಗಿ ಸೋವಿಯತ್ ಯೂನಿಯನ್, ಭಾರತದಲ್ಲಿ ಪ್ರಚಾರ ಕಾರ್ಯಗಳಿಗಾಗಿ ನಿಯಮಿತವಾಗಿ ಹಣಕಾಸಿನ ನೆರವು ನೀಡುತ್ತಿತ್ತು. ಆದರೆ, ಹಣದ ಅಭಾವದಿಂದಾಗಿ ಸೋವಿಯತ್ ಯೂನಿಯನ್‌ನ ಪ್ರಭಾವ ಸೀಮಿತವಾಗಿತ್ತು. 1924ರಷ್ಟು ಹಿಂದೆಯೇ, “ಭಾರತದಲ್ಲಿ ಉತ್ತಮ ಹಣಕಾಸಿನ ನೆರವು ಹೊಂದಿರುವ ಯಾವುದೇ [ಕಮ್ಯುನಿಸ್ಟ್] ಸಂಘಟನೆ ಇಲ್ಲ” ಎಂದು ಬ್ರಿಟಿಷ್ ಇಂಡಿಯನ್ ಇಂಟೆಲಿಜೆನ್ಸ್ ಬ್ಯೂರೋ ವರದಿ ಮಾಡಿತ್ತು.
ಬ್ರಿಟಿಷ್ ಹೈಕಮಿಷನ್ ಇಂತಹ ಮನವಿಗಳಿಂದ ಅಂತರ ಕಾಯ್ದುಕೊಂಡಿದ್ದರೂ, ಯುಕೆಯ ರಹಸ್ಯ ಗುಪ್ತಚರ ಸಂಸ್ಥೆಯಾದ ಎಂಐ6 (MI6) ಯಾವುದೇ ಹಿಂಜರಿಕೆಯನ್ನು ತೋರಿಸಿರಲಿಲ್ಲ ಎಂದು ಇತಿಹಾಸಕಾರ ಪಾಲ್ ಮೆಕ್‌ಗಾರ್ ಬರೆದಿದ್ದಾರೆ.
1948-1949ರ ಅವಧಿಯಲ್ಲಿ ಎಂಐ6, “ಭಾರತ ಮತ್ತು ಮಧ್ಯಪ್ರಾಚ್ಯದಲ್ಲಿ ರಹಸ್ಯ ಪ್ರಚಾರಕ್ಕಾಗಿ £350,000 (3.5 ಲಕ್ಷ ಪೌಂಡ್‌ಗಳು- ₹46.6 ಲಕ್ಷ ರೂಪಾಯಿಗಳು) ಖರ್ಚು ಮಾಡಿತ್ತು” ಎಂದು ಮೆಕ್‌ಗಾರ್ ಉಲ್ಲೇಖಿಸಿದ್ದಾರೆ.
“ಈ ಹಣದ ಬಹುಭಾಗವನ್ನು ಪ್ರಚಾರ ಸಾಮಗ್ರಿಗಳ ಮುದ್ರಣ ಮತ್ತು ಪ್ರಕಟಣೆಗೆ, ಸ್ಥಳೀಯ ರಾಜಕಾರಣಿಗಳು ಸೋವಿಯತ್ ಯೂನಿಯನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದಾರೆ ಎಂದು ಬಹಿರಂಗಪಡಿಸುವ ‘ರಹಸ್ಯ ವದಂತಿ ಪ್ರಚಾರಗಳಿಗೆ’ (whispering campaigns) ಮತ್ತು ಸ್ಥಳೀಯ ಕಮ್ಯುನಿಸ್ಟ್ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಕಾರ್ಯಾಚರಣೆಗಳಿಗೆ ವೆಚ್ಚ ಮಾಡಲಾಗಿತ್ತು,” ಎಂದು ಮೆಕ್‌ಗಾರ್ ಗಮನಿಸಿದ್ದಾರೆ.
1947ರಲ್ಲಿ ಭಾರತದ ಬ್ರಿಟಿಷ್ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಅರ್ಚಿಬಾಲ್ಡ್ ನೈ, ತೆಲಂಗಾಣ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕಮ್ಯುನಿಸ್ಟ್ ಚಳವಳಿಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ಹತೋಟಿಗೆ ತಂದಿದ್ದನ್ನು ಮೆಚ್ಚಿಕೊಂಡಿದ್ದರು.
“ನಾವು ಕೂಡ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಈ ದೇಶದಲ್ಲಿ ಎಂದೂ ತೋರದಿದ್ದಂತಹ ದೃಢತೆ, ಅಷ್ಟೇ ಏಕೆ ಅತ್ಯಂತ ಕೌರ್ಯ ಮತ್ತು ಕ್ರೂರತೆಯಿಂದ ಅವರು ಕಮ್ಯುನಿಸ್ಟರನ್ನು ನಿಯಂತ್ರಿಸಿದ್ದಾರೆ,” ಎಂದು ನೈ ಬರೆದಿದ್ದರು.
ಮೂಲ: ದಿ ಪ್ರಿಂಟ್



