ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ವಿಜಯಪುರ ನಗರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ಮಹಿಳಾ ಶಿಕ್ಷಣದ ಜೊತೆಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಯ ಬೆಳವಣಿಗೆಗೆ ವಿಶ್ವವಿದ್ಯಾಲಯ ಬದ್ಧವಾಗಿದೆ. ಕನ್ನಡದಲ್ಲಿ ಸಂಶೋಧನೆ, ಆಡಳಿತದಲ್ಲಿ ಕನ್ನಡ ಬಳಕೆ ಹಾಗೂ ಕನ್ನಡದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಎಲ್ಲರೂ ಆದ್ಯತೆ ನೀಡಬೇಕು. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು” ಎಂದರು.
ಪ್ರಾಧ್ಯಾಪಕಿ ಪ್ರೊ. ವಿಜಯಾದೇವಿ ಮಾತನಾಡಿ, “ನಾಡು-ನುಡಿಯ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದರೂ ಇತಿಹಾಸದಲ್ಲಿ ಅವರ ಸಾಧನೆಗಳನ್ನು ಕಡೆಗಣಿಸಿರುವುದು ವಿಷಾದನೀಯ. ನಾಡಗೀತೆಯಲ್ಲಿ ಮಹಿಳೆಯರ ಉಲ್ಲೇಖವಿಲ್ಲದಿರುವುದು ಲಿಂಗ ತಾರತಮ್ಯಕ್ಕೆ ಉದಾಹರಣೆಯಾಗಿದೆ” ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ-ಕರ್ನಾಟಕ ಕುರಿತ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರು ವಂದೇ ಮಾತರಂ ಹಾಗೂ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕುಲಸಚಿವ ಡಾ. ವಿಜಯಕುಮಾರ ಅಜೂರ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




