ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ ಅನ್ಯಾಯದ ವಿರುದ್ಧ ನಿಲ್ಲುವ ಬದಲಿಗೆ ಬಲಾಢ್ಯರ ಪರ ನಿಂತು ಸೌಜನ್ಯಪರ ಹೋರಾಟವನ್ನು ʼಧರ್ಮಸ್ಥಳದ ವಿರುದ್ಧದ ಹೋರಾಟʼ ಎಂದು ಬಿಂಬಿಸಲು ಶ್ರಮಿಸಿದವು. ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆ ನಿಂತುಬಿಟ್ಟಿದ್ದವು. ಅದಕ್ಕೆಂದೇ ಹೊಸ ಹೊಸ ಪೇಜ್‌ಗಳು, ಯುಟ್ಯೂಬ್ ಚಾನೆಲ್‌ಗಳು ಹುಟ್ಟಿಕೊಂಡವು.
2012ರ ಅಕ್ಟೋಬರ್‌ನಲ್ಲಿ ಧರ್ಮಸ್ಥಳದ ಸೌಜನ್ಯ ಎಂಬ ಪಿಯುಸಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ಪರಿಣಾಮ ಪ್ರಕರಣ ಇನ್ನೂ ಜೀವಂತವಾಗಿದೆ. ಆ ಪ್ರಕರಣಕ್ಕೊಂದು ತಾರ್ತಿಕ ನ್ಯಾಯಯುತ ಅಂತ್ಯ ಕಾಣಿಸುವುದು ಸರ್ಕಾರಕ್ಕೆ, ತನಿಖಾ ಸಂಸ್ಥೆಗಳಿಗೆ, ರಾಜಕಾರಣಿಗಳಿಗೆ ಬೇಕಾಗಿರಲಿಲ್ಲ. ಅದರ ಪ್ರತಿಫಲವೇ ಈಗಲೂ ಸೌಜನ್ಯ ಪ್ರಕರಣ ಆಗಾಗ ಸದ್ದು ಮಾಡುತ್ತಿರುತ್ತದೆ. ಭಾರೀ ಹೋರಾಟದ ಮಧ್ಯೆಯೂ ಸೌಜನ್ಯ ಪ್ರಕರಣ ಹಳ್ಳ ಹಿಡಿಯುವುದರಲ್ಲಿ ಕರ್ನಾಟಕದ ಮಾಧ್ಯಮಗಳೂ ಕಾರಣ ಎಂದು ನಿಸ್ಸಂದೇಹವಾಗಿ ಹೇಳಲೇಬೇಕಾಗಿದೆ.
ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಈ ದುರ್ಘಟನೆ, ಅಲ್ಲಿವರೆಗೆ ಹತ್ತಾರು ಹೆಣ್ಣುಮಕ್ಕಳ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ನೋಡುತ್ತಾ ಬಂದ ಸ್ಥಳೀಯರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿತ್ತು. ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಇದನ್ನೊಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಗಳು ನಡೆದುವು. ಆಗ ಇದ್ದ ಬಿಜೆಪಿ ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೆ, ಅದಕ್ಕೂ ಮುನ್ನ ಅಂದ್ರೆ ಸೌಜನ್ಯಳ ಶವ ಸಿಕ್ಕ ತಕ್ಷಣವೇ ಸಾಕ್ಷಿ ನಾಶದ ಪ್ರಕ್ರಿಯೆ ವ್ಯವಸ್ಥಿತವಾಗಿ ಆರಂಭಗೊಂಡಿತ್ತು. ಊರಿನ ಮುಖ್ಯಸ್ಥರು, ಪೊಲೀಸರು, ರಾಜಕಾರಣಿಗಳು ಎಲ್ಲರೂ ಸೇರಿ ಪ್ರಕರಣವನ್ನು ತಮಗೆ ಬೇಕಾದಂತೆ ಪೋಸ್ಟ್ ಮಾರ್ಟಂ ಮಾಡಿ ಬಿಟ್ಟಿದ್ದರು.
ಸೌಜನ್ಯ ಮೃತದೇಹ ಸಿಕ್ಕ ಸ್ಥಳದಲ್ಲಿ ಅತ್ಯಾಚಾರ ನಡೆದಿರುವ ಯಾವ ಗುರುತೂ ಇರಲಿಲ್ಲ. ಆಕೆಯ ಕಾಲೇಜು ಬ್ಯಾಗು ಬೆನ್ನಿನಲ್ಲಿಯೇ ಇತ್ತು, ಕೈಯನ್ನು ಚಿಕ್ಕದೊಂದು ಗಿಡಕ್ಕೆ ಬಿಗಿಯಲಾಗಿತ್ತು, ಒಂದು ಕಾಲಿನ ಚಪ್ಪಲಿ ಇರಲಿಲ್ಲ, ಆಕೆ ಸುರಿಯುವ ಮಳೆಯಲ್ಲಿ ಕೊಡೆ ಹಿಡಿದು ನಡೆದು ಹೋಗಿದ್ದಳು ಎಂಬುದನ್ನು ನೋಡಿದವರಿದ್ದರು, ಆದರೂ ಆಕೆಯ ಮೃತದೇಹ ಸಿಕ್ಕ ಜಾಗದಲ್ಲಿ ಕೊಡೆ ಇರಲಿಲ್ಲ. ಮುಖ್ಯವಾಗಿ ಆಕೆಯ ಒಳ ಉಡುಪು ಇರಲಿಲ್ಲ. ಬಿಟ್ಟೂಬಿಡದೆ ಮಳೆ ಸುರಿದರೂ ಸೌಜನ್ಯಳ ಬ್ಯಾಗಿನೊಳಗಿನ ಪುಸ್ತಕಗಳು ಒದ್ದೆಯಾಗಿರಲಿಲ್ಲ. ಆ ಜಾಗದಲ್ಲಿ ಕೃತ್ಯ ನಡೆದಿಲ್ಲ ಎಂಬುದನ್ನು ಗ್ರಹಿಸಲು ಇಷ್ಟೊಂದು ಪುರಾವೆಗಳು ಸಾಕಿತ್ತು. ಸೌಜನ್ಯ ಕುಟುಂಬದವರು ಊರಿನ ಜನರೊಂದದಿಗೆ ರಾತ್ರಿಯೆಲ್ಲ ಹುಡುಕಾಡಿದ ಜಾಗದಲ್ಲಿ ಮುಂಜಾನೆ ಪೊದೆಯಲ್ಲಿ ಶವ ಸಿಗುತ್ತದೆ. ಅದು ಅಲ್ಲಿ ನಡೆದಿರಲ್ಲ, ಕಿಡ್ನಾಪ್ ಮಾಡಿ ಬೇರೆಡೆ ಅತ್ಯಾಚಾರ ಮಾಡಿ ಕೊಂದು ತಂದು ಆ ಜಾಗದಲ್ಲಿ ಹಾಕಿದ್ದಾರೆ ಎಂಬ ಅನುಮಾನ ಎಲ್ಲರಿಗೂ ಇತ್ತು. ಆದರೆ ತನಿಖಾಧಿಕಾರಿಗಳು ಯಾರ ಒತ್ತಡದಲ್ಲಿದ್ದರೋ ಏನೋ… ಸ್ಥಳ ಮಹಜರು ಸಾಕ್ಷ್ಯ ಸಂಗ್ರಹ ಮಾಡುವ ಬದಲು ಸಾಕ್ಷ್ಯ ನಾಶದಲ್ಲಿಯೇ ಹೆಚ್ಚು ಆಸಕ್ತರಾಗಿದ್ದರು ಅನ್ನಿಸುತ್ತದೆ. ಅತ್ಯಾಚಾರದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಒಂದು ಸಾಕ್ಷ್ಯ ಅದು ಪೋಸ್ಟ್‌ಮಾರ್ಟಂ ವರದಿ. ಅತ್ಯಾಚಾರಕ್ಕೊಳಗಾದ ಯುವತಿಯ ಗುಪ್ತಾಂಗದ ಸ್ವ್ಯಾಬ್ ಸಂಗ್ರಹ. ಆ ಸ್ಯಾಂಪಲ್‌ಗಳನ್ನು ತಕ್ಷಣ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸದೇ ಪೊಲೀಸರು ವಿಳಂಬ ಮಾಡಿದ್ದು ಆಕಸ್ಮಿಕವೇನಲ್ಲ. ಮಹತ್ವದ ಸಾಕ್ಷಿ ಸಿಗಬಹುದಾಗಿದ್ದ ಸ್ಯಾಂಪಲ್‌ಗಳು ಹೈದರಾಬಾದ್‌ನ ಲ್ಯಾಬ್‌ಗೆ ತಲುಪಲು ಒಂದು ವಾರ ಬೇಕಾಗಿತ್ತೇ, ಅದನ್ನು ಕೆಡದಂತೆ ಕಾಪಾಡುವುದು ತನಿಖಾಧಿಕಾರಿಯ ಕರ್ತವ್ಯ ಅಲ್ಲವೇ… ಸೌಜನ್ಯ ಕಾಣೆಯಾದ ರಾತ್ರಿಯಿಂದ ಮುಂಜಾನೆ ಶವ ಸಿಗುವ ವೇಳೆಗಾಗಲೇ ಸಾಕ್ಷಿನಾಶದ ನೀಲನಕ್ಷೆ ಸಿದ್ಧವಾಗಿತ್ತೇನೋ ಎಂಬ ಅನುಮಾನ ಬರುತ್ತದೆ.
ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಮುಖ್ಯಮಂತ್ರಿಯಾಗಿದ್ದವರು ಡಿ ವಿ ಸದಾನಂದ ಗೌಡ. ಗೃಹಸಚಿವ ಆರ್ ಅಶೋಕ್ ಅವರು ಸೌಜನ್ಯ ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗ ದಕ್ಷಿಣ ಕನ್ನಡಕ್ಕೆ ಬಂದವರು ಸೌಜನ್ಯ ಮನೆಗೆ ಸೌಜನ್ಯದ ಭೇಟಿ ನೀಡುವ ಬದಲು ಅವರು ಹೋಗಿದ್ದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲು. ಇದೊಂದು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ ಪ್ರಕರಣ ಎಂಬ ಅನುಮಾನ ಬರಲು ಇವಿಷ್ಟೇ ಬೆಳವಣಿಗೆಗಳು ಸಾಕು.
ಸಂಜೆ ವೇಳೆಗೆ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಬೆಳಕಿಲ್ಲದಿದ್ದರೂ ತರಾತುರಿಯಲ್ಲಿ ಪೋಸ್ಟ್‌ಮಾರ್ಟಂ ಮುಗಿಸಲಾಗಿತ್ತು. ಮಗಳು ಹೀಗೆ ಅತ್ಯಾಚಾರಗೊಂಡು ಹೆಣವಾದ ಆಘಾತದಲ್ಲಿದ್ದ ಕುಟುಂಬ ಹೀಗೊಂದು ಸಾಕ್ಷ್ಯ ನಾಶದ ಷಡ್ಯಂತ್ರ ನಡೆಯುತ್ತಿದೆ ಎಂಬ ಪರಿವೆಯೇ ಇಲ್ಲದೇ ಸಂಜೆಯೇ ಅಂತ್ಯಕ್ರಿಯೆ ಮಾಡಿ ಮುಗಿಸಿತ್ತು. ಅಮಾಯಕ ಕುಟುಂಬ ಪೋಸ್ಟ್ ಮಾರ್ಟಂ ವರದಿಯಲ್ಲಿ ಎಲ್ಲ ಸಾಕ್ಷ್ಯ ಸಿಕ್ಕಿ ಪಾತಕಿಗಳ ಪತ್ತೆಗೆ ನೆರವಾಗುತ್ತದೆ ಎಂದೇ ನಂಬಿತ್ತು. ಆದರೆ ಆನಂತರ ಆಗಿದ್ದೇ ಬೇರೆ.
ಮರುದಿನ ಇಡೀ ಪ್ರಕರಣಕ್ಕೆ ರೋಚಕ ಟ್ವಸ್ಟ್ ಸಿಕ್ಕಿತ್ತು. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಸಂತೋಷ್ ರಾವ್ ಎಂಬ ವ್ಯಕ್ತಿಯೊಬ್ಬನನ್ನು ಧರ್ಮಸ್ಥಳ ದೇವಸ್ಥಾನ ಸಿಬ್ಬಂದಿಗಳು ಹಿಡಿದು ಈತನೇ ಸೌಜನ್ಯಳ ಕೊಲೆಗಾರನಿರಬೇಕು ಎಂದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಅಲ್ಲಿಂದ ನಿಜವಾದ ಡ್ರಾಮಾ ಶುರು ಮಾಡಿದ್ದರು. ಶೃಂಗೇರಿಯ ಹೋಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಕಳದ ಸಂತೋಷ್ ರಾವ್ ಎಂಬ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ನಂತರ ಧರ್ಮಸ್ಥಳಕ್ಕೆ ಬಂದಿದ್ದ. ಕತ್ತಲಾಗಿದ್ದ ಕಾರಣ ಆತ ಕಾರ್ಕಳದ ಮನೆಗೆ ಹೋಗದೇ ಬಾಹುಬಲಿ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ. ವಶಕ್ಕೆ ಪಡೆದ ಪೊಲೀಸರು ಆತನಿಗೆ ಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದರು. “ನಾನೇ ಸೌಜನ್ಯಳನ್ನು ಕೊಂದಿದ್ದೇನೆ” ಎಂದು ಸಂತೋಷನಿಂದ ಹೇಳಿಕೆ ಪಡೆದುಕೊಂಡು ಶವ ಸಿಕ್ಕ ಸ್ಥಳದಿಂದ ಸ್ವಲ್ಪ ದೂರದಲ್ಲಿ ಆತ ಟೆಂಟ್ ಹಾಕಿ ಕುಳಿತಿದ್ದ ಎಂದೂ, “ಸೌಜನ್ಯಳ ಒಳ ಉಡುಪುಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದೇನೆ” ಎಂದಿದ್ದಾನೆ ಎಂದು ತಿಳಿಸಿದ ಪೊಲೀಸರು ಸೌಜನ್ಯಳ ಮನೆಯಿಂದ ಒಳ ಉಡುಪುಗಳನ್ನು ತಂದು ಮಣ್ಣಿನಲ್ಲಿ ಹೂತಿಟ್ಟು ಸಂತೋಷನಿಂದ ಹೊರತೆಗೆಸುವ ನಾಟಕ ಮಾಡಿದ್ದರು.
ನಂತರ ಸಿಐಡಿ ತನಿಖೆಯನ್ನು ಅರ್ಧದಲ್ಲಿಯೇ ನಿಲ್ಲಿಸಿದ ಸಿದ್ದರಾಮಯ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಆಗಲೂ ಸಂತೋಷ್ ರಾವ್ ಆರೋಪಿ ಎಂಬ ನಿಟ್ಟಿನಲ್ಲಿ ಮಾತ್ರ ಹನ್ನೆರಡು ವರ್ಷಗಳ ಕಾಲ ತನಿಖೆ ನಡೆಸಿದ್ದರು. ಸೌಜನ್ಯ ಕುಟುಂಬ ಅನುಮಾನಿಸುತ್ತಿರುವ ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಲೇ ಇಲ್ಲ. ಅವರ ಬ್ರೈನ್ ಮ್ಯಾಪಿಂಗ್ ನಡೆಸಲಾಗಿದೆ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ದಾಖಲೆ ಒದಗಿಸಿಲ್ಲ. ಸೌಜನ್ಯ ಕುಟುಂಬದ ಪರ ಹೋರಾಟಗಾರರು ಈ ತನಿಖೆಗಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ಸಿಬಿಐ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಆಗಾಗ ಹೋರಾಟಗಾರರು ಧ್ವನಿ ಎತ್ತುತ್ತಲೇ ಬಂದಿದ್ದರು. ಅಂತೂ 2023ರಲ್ಲಿ ಸಿಬಿಐ ಕೋರ್ಟ್ “ಸಂತೋಷ್ ರಾವ್ ನಿರ್ದೋಷಿ, ಆತನನ್ನು ಅಪರಾಧಿ ಎನ್ನಲು ಯಾವುದೇ ಸಾಕ್ಷ್ಯ ಇಲ್ಲ” ಎಂದು ತೀರ್ಪು ನೀಡಿತ್ತು. ಅದಾದ ನಂತರ ರಾಜ್ಯದಲ್ಲಿ ಹತ್ತು ತಿಂಗಳ ಕಾಲ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆದುವು. ಸೌಜನ್ಯ ತಾಯಿ ಕುಸುಮಾವತಿ ಅವರ ಮರುತನಿಖೆಗೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡ ನಂತರ ಎಲ್ಲವೂ ತಣ್ಣಗಾಗಿತ್ತು. ಆದರೆ ಚಿನ್ನಯ್ಯನ ಪ್ರವೇಶದ ನಂತರ ಕುಸುಮಾವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ಗೆ ಈ ಪ್ರಕರಣದ ತನಿಖೆಯಲ್ಲಿ ಆದ ಲೋಪದೋಷಗಳ ಬಗ್ಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಹಾಗಾಗಿಯೇ ಮರುತನಿಖೆಗೆ ಆದೇಶ ನೀಡಿದೆ.
ಸೌಜನ್ಯಪರ ಹೋರಾಟಗಾರರ ಚಾರಿತ್ರ್ಯಹರಣಕ್ಕಿಳಿದ ಮಾಧ್ಯಮಗಳು
ಸೌಜನ್ಯ ಪ್ರಕರಣದಲ್ಲಿ ಅಪರಾಧಿಗಳು ಯಾರೆಂದು ಗೊತ್ತಿದ್ದೂ ಪೊಲೀಸರು ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಯಾವುದೇ ಸಾಕ್ಷ್ಯಗಳ ಸಂಗ್ರಹಿಸದೇ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ ಅನ್ಯಾಯದ ವಿರುದ್ಧ ನಿಲ್ಲುವ ಬದಲಿಗೆ ಬಲಾಢ್ಯರ ಪರ ನಿಂತು ಸೌಜನ್ಯಪರ ಹೋರಾಟವನ್ನು ಧರ್ಮಸ್ಥಳದ ವಿರುದ್ಧದ ಹೋರಾಟ ಎಂದು ಬಿಂಬಿಸಲು ಶ್ರಮಿಸಿದವು. ಟಿ ವಿ ಮಾಧ್ಯಮಗಳಂತೂ ಧರ್ಮಸ್ಥಳದ ಪರ ಇರುವವರಿಗೆ ವೇದಿಕೆ ಕಲ್ಪಿಸಿ ಸೌಜನ್ಯ ಕುಟುಂಬ, ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆ ಅನುವು ಮಾಡಿಕೊಟ್ಟಿದ್ದವು. ಅದಕ್ಕೆಂದೇ ಹೊಸ ಹೊಸ ಪೇಜ್‌ಗಳು, ಯುಟ್ಯೂಬ್ ಚಾನೆಲ್‌ಗಳು ಹುಟ್ಟಿಕೊಂಡವು. ಸೋಷಿಯಲ್ ಇನ್‌ಫ್ಲುಯೆನ್ಸರ್‌ಗಳೂ ಸೇರಿಕೊಂಡರು. ಸುದ್ದಿ ಮಾಧ್ಯಮ ವರದಿಗಾರರು, ಸ್ಟುಡಿಯೋದಲ್ಲಿ ಕೂತ ಸಂಪಾದಕರುಗಳು ಎಲ್ಲರೂ ಸೇರಿ ಸೌಜನ್ಯಪರ ಹೋರಾಟಗಾರರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸಿದ್ದರು. ವಿದೇಶದ ಫಂಡ್ ಬರುತ್ತಿದೆ, ಧರ್ಮಸ್ಥಳದ ವಿರುದ್ಧ ಜಿಹಾದಿಗಳ ಟೂಲ್‌ಕಿಟ್ ಎಂದೆಲ್ಲ ತಮ್ಮದೇ ನರೇಷನ್‌ಗಳನ್ನು ಹರಿಯಬಿಟ್ಟಿದ್ದರು.
ಅತ್ಯಂತ ನಿರಾಶಾದಾಯಕ ಸಂಗತಿಯೆಂದರೆ ಸೌಜನ್ಯ ತಾಯಿ ಕುಸುಮಾವತಿಯವರನ್ನು ಆಕೆಯ ಹೋರಾಟ ಮನೋಭಾವವನ್ನು ಅನುಮಾನಿಸಲಾಯಿತು. ತಕ್ಕಮಟ್ಟಿಗೆ ಅನುಕೂಲಸ್ಥರಾಗಿರುವ ಕೃಷಿಕರಾಗಿರುವ ಸೌಜನ್ಯ ಮನೆಯವರು ಕಟ್ಟಿದ ಹೊಸ ಮನೆಯನ್ನು, ಮಗಳ ಹೆಸರು ಹೇಳುತ್ತಾ ಹಣ ಸಂಪಾದಿಸಿ ಕಟ್ಟಿದ ಮನೆ ಎಂದು ಅಪಪ್ರಚಾರ ಮಾಡಲಾಯಿತು. ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಧಕ್ಕೇ ನಿಂತ ಮನೆಯನ್ನೂ ಸೌಜನ್ಯ ಹೋರಾಟದಲ್ಲಿ ದೇಣಿಗೆ ಸಂಗ್ರಹಿಸಿ ಕಟ್ಟಿದ ಮನೆ ಎಂದು ಬಿಂಬಿಸಲಾಯಿತು. ಪ್ರತಿಭಟನೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗಿದೆ. ಸಂತೋಷ್ ರಾವ್ ಅತ್ಯಾಚಾರಿ ಎಂದು ಗೊತ್ತಿದ್ದರೂ ಆತನನ್ನು ಸೌಜನ್ಯ ಕುಟುಂಬದವರೇ ಬಚಾವ್ ಮಾಡಿದ್ದಾರೆ. ಯಾಕೆಂದರೆ ಅವರ ಟಾರ್ಗೆಟ್ ಧರ್ಮಸ್ಥಳ ಎಂದೆಲ್ಲ ಪುಕಾರು ಹಬ್ಬಿಸಲಾಯಿತು. ಅದೂ ಮುಖ್ಯವಾಹಿನಿ ಮೀಡಿಯಾಗಳಲ್ಲಿ. ಇನ್ನೂ ಮುಂದುವರಿದು ಕುಸುಮಾವತಿಯವರ ಸೋದರ ವಿಠಲನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದರು. ಇವೆಲ್ಲ ಧರ್ಮಸ್ಥಳದ ಪರ ಎಂದು ಹೇಳಿಕೊಂಡವರ ಹುಸಿ ನಿರೂಪಣೆಗಳು.
ಸಿಬಿಐ ಕೋರ್ಟ್ ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ತೀರ್ಪು ಕೊಟ್ಟ ನಂತರವೂ, ಸೌಜನ್ಯ ಕುಟುಂಬ ಅಪರಾಧಿ ಸಂತೋಷ್ ಎಂಬುದನ್ನು ಗೊತ್ತಿದ್ದೂ ಧರ್ಮಸ್ಥಳದ ವೀರೇಂದ್ರೆ ಹೆಗ್ಗಡೆ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಆತನನ್ನು ಬಚಾವ್ ಮಾಡಿದ್ದಾರೆ. ವಿಠಲನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದರು. ಸಂತೋಷ್ ರಾವ್ ವಿರುದ್ಧವೇ ಮರು ತನಿಖೆಯಾಗಬೇಕು ಎಂದವರಿಗೆ ಮಾಧ್ಯಮಗಳು ಬೆಂಬಲವಾಗಿ ನಿಂತವು. ಸ್ಟುಡಿಯೋದಲ್ಲಿ ಕೂರಿಸಿಕೊಂಡು ಅವರ ವಿತಂಡವಾದಕ್ಕೆ ಭರಪೂರ ಸಮಯ ಕೊಟ್ಟಿವೆ.
ಕನ್ನಡದ ಒಂದು ಸುದ್ದಿವಾಹಿನಿಯ ಸಂಪಾದಕ ಕ್ಯಾಮೆರಾ ಮುಂದೆ ಕೂತು ಬಹಿರಂಗವಾಗಿ ಸೌಜನ್ಯಪರ ಹೋರಾಟಗಾರರನ್ನು ಅಶ್ಲೀಲ ಪದ ಬಳಸಿ ನಿಂದಿಸಿದ್ದ. ಹೋರಾಟಗಾರ ಹೆಣ್ಣುಮಕ್ಕಳ ವಿರುದ್ಧ ಮಾನಹಾನಿಕರ ಪದ ಬಳಕೆ ಮಾಡಿದ್ದರು. ಕ್ಯಾಮೆರಾ ಮುಂದೆ ಕೂತು, ಆ ಮಗ ಈ ಮಗ… ಎಂದು ಸೌಜನ್ಯಪರ ಹೋರಾಟಗಾರರನ್ನು ಯಾವುದೇ ಲಜ್ಜೆ ಇಲ್ಲದೇ ನಿಂದಿಸಿದ್ದ ಸಂಪಾದಕ ಹತ್ತಾರು ಕೋಟಿ ಬೆಲೆಯ ಮನೆ ಕಟ್ಟಿಕೊಂಡು ಅದ್ದೂರಿಯಾಗಿ ಗೃಹಪ್ರವೇಶ ಮಾಡಿಕೊಂಡ ಎಂದು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಬೇಕಾಯ್ತು. ಥ್ರಡ್‌ಬೇರ್ ಇನ್ವೆಸ್ಟಿಗೇಷನ್ ಮಾಡಿದ್ದೇನೆ ಎಂದು 2012ರಿಂದಲೂ ಹೇಳುತ್ತಾ ಬಂದಿರುವ ಕ್ರೈಮ್ ಪತ್ರಕರ್ತನದ್ದೂ ಅದೇ ಕತೆ. ಅಲ್ಲೊಮ್ಮೆ ಇಲ್ಲೊಮ್ಮೆ ನ್ಯಾಯದ ಪರ ಧ್ವನಿ ಎತ್ತಿದ್ದ ಸುದ್ದಿ ವಾಹಿನಿಗಳ ಸಂಪಾದಕರು ನಂತರ ಪ್ರೊಪಗಾಂಡ ಜೀವಿಗಳಿಗೆ ವೇದಿಕೆ ಒದಗಿಸಿ ಋಣ ಸಂದಾಯ ಮಾಡಿಕೊಂಡಿದ್ದರು. ಅನಾಥ ಶವ ಹುಡುಕುವ ಎಸ್‌ಐಟಿ ಕಾರ್ಯಾಚರಣೆ ಹಲವರ ಮುಖವಾಡಗಳನ್ನು ಕಳಚಿತ್ತು. ತನಿಖೆ ನಡೆದು ಸತ್ಯ ಹೊರ ಬಿದ್ದರೆ ದೊಡ್ಡವರ ಮಾನ ಹರಾಜಾಗುತ್ತದೆ ಎಂಬ ಭಯದಿಂದ ಧರ್ಮದ ಪತಾಕೆಯನ್ನು ಹಿಡಿದು ನಿಂತವರೇ ಹೆಚ್ಚು.
ಧರ್ಮಸ್ಥಳದಲ್ಲಿ ಹಲವು ದಶಕಗಳಿಂದ ದೇವಸ್ಥಾನಕ್ಕೆ ಬಂದ ಪರವೂರಿನ ಮತ್ತು ಸ್ಥಳೀಯ ಹರೆಯದ ಹೆಣ್ಣುಮಕ್ಕಳು ನಾಪತ್ತೆಯಾಗುವುದು, ಶವವಾಗಿ ಪತ್ತೆಯಾಗುವುದು, ನೇತ್ರಾವತಿಯಲ್ಲಿ ಶವ ತೇಲುವುದು ಸಾಮಾನ್ಯ ಸುದ್ದಿಯಾಗಿ ಅಲ್ಲಿಗೇ ಮುಚ್ಚಿ ಹೋಗುತ್ತಿತ್ತು. ವೇದವಲ್ಲಿ, ಪದ್ಮಲತಾ ಪ್ರಕರಣ ಹಾಗೂ ಸೌಜನ್ಯ ಕೊಲೆಗೆ ಹತ್ತು ದಿನಗಳ ಹಿಂದೆ ಮಾವುತ ಮತ್ತು ಆತನ ಸಹೋದರಿಯ ಕೊಲೆ ಪ್ರಕರಣದಲ್ಲೂ ಪೊಲೀಸರು ಯಾವುದೇ ತನಿಖೆ ನಡೆಸದೇ ಮುಚ್ಚಿ ಹಾಕಿದ್ದಾರೆ. ಬಹುತೇಕ ಪ್ರಕರಣಗಳು ಅತ್ಯಾಚಾರ ಮತ್ತು ಭೂ ವ್ಯವಹಾರದ ಸುತ್ತಲೇ ಇವೆ. ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧಪಟ್ಟವರ ಚಿತಾವಣೆಯಿಂದ ಈ ಎಲ್ಲಾ ಪ್ರಕರಣಗಳಲ್ಲಿ ಅಪರಾಧಿಗಳಯ ಬಚಾವ್ ಆಗುತ್ತಿದ್ದರು. ಆದರೆ ಸೌಜನ್ಯ ಕೊಲೆಯಾದ ನಂತರ ಜನರ ಆಕ್ರೋಶ ಕಟ್ಟೆಯೊಡೆದಿತ್ತು. ಎರಡೆರಡು ತನಿಖೆ ನಡೆದರೂ ನ್ಯಾಯ ಸಿಗದಿದ್ದಾಗಲೂ ಕೈ ಚೆಲ್ಲದೇ ಬಲಿಷ್ಠ ವ್ಯಕ್ತಿಗಳ ಎಲ್ಲ ಚಿತಾವಣೆಗಳಿಗೆ ಭಯಪಡದೇ ಸುಪ್ರೀಂ ಮೊರೆ ಹೋಗಿದ್ದರು. ಹದಿನಾಲ್ಕು ವರ್ಷಗಳವರೆಗೂ ವಿವಿಧ ಸಂಘಟನೆಗಳು, ಸೌಜನ್ಯ ಕುಟುಂಬದವರು ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಅದರ ಪರಿಣಾಮವಾಗಿ ಧರ್ಮಸ್ಥಳ ಪ್ರದೇಶದಲ್ಲಿ ಹೆಣ್ಣುಮಕ್ಕಳ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆಯಾಗಿವೆ.
ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಮಾಧ್ಯಮಗಳು ಪ್ರಭಾವಿಗಳ ಆಮಿಷಕ್ಕೋ, ಹಂಗಿಗೋ ಬಿದ್ದು ತಮ್ಮ ನಿಷ್ಠೆಯನ್ನು ಅವರ ಕಡೆಗೆ ತೋರಿಸಿ ಮಾಧ್ಯಮ ಧರ್ಮಕ್ಕೆ ಎಳ್ಳುನೀರು ಬಿಟ್ಟಿವೆ. ಇದೀಗ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶ ನೀಡಿರುವುದು ಮತ್ತೆ ಸೌಜನ್ಯ ಪ್ರಕರಣ ಚರ್ಚೆಗೆ ಕಾರಣವಾಗಿದೆ. ಈಗಲೂ ಮಾಧ್ಯಮಗಳು ಸೌಜನ್ಯ ಹೋರಾಟಗಾರರ ವಿರುದ್ಧ ಸುಳ್ಳು ನರೇಟಿವ್ ಹಬ್ಬಿಸಿದ್ದ, ಅನ್ಯಾಯಕಾರರ ಪರವಿದ್ದವರಿಂದ ಅಭಿಪ್ರಾಯ ಪಡೆಯುತ್ತಿವೆ.
ಕಳೆದ ವರ್ಷ ಚಿನ್ನಯ್ಯ ಎಂಬ ವ್ಯಕ್ತಿ ಬೆಳ್ತಂಗಡಿ ಪೊಲೀಸರ ಮುಂದೆ ಹಾಜರಾಗಿ ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅನಾಥ ಶವ ಹೂತು ಹಾಕುವ ಕೆಲಸ ಮಾಡಿಕೊಂಡಿದ್ದೆ. ಆ ಶವಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಶ್ಚತ್ತಾಪದಿಂದ ದೂರು ನೀಡುವುದಾಗಿ ಹೇಳಿಕೊಂಡು, ನಂತರ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ. ಆ ಪ್ರಕಾರ ಸರ್ಕಾರ ಎಸ್‌ಐಟಿ ರಚನೆ ಮಾಡಿ ನೇತ್ರಾವತಿ ನದಿ ದಡದಲ್ಲಿ ನಡೆದಿದ ಕಾರ್ಯಾಚರಣೆ, ಆ ಸಂದರ್ಭದಲ್ಲಿಯೇ ಚಿನ್ನಯ್ಯ ಹಣದ ಆಮಿಷಕ್ಕೋ, ಬೆದರಿಕೆಗೋ ಬಲಿಯಾಗಿ ಇಡೀ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸಿ, ನಂತರ ತಾನು ಸೌಜನ್ಯಪರ ಹೋರಾಟಗಾರರ ಷಡ್ಯಂತ್ರದ ಭಾಗವಾಗಿ ಸುಳ್ಳು ಹೇಳಿದ್ದೇನೆ ಎಂದು ಉಲ್ಟಾ ಹೊಡೆದಿದ್ದ.
ಈ ಮಧ್ಯೆ ಸೌಜನ್ಯಪರ ಹೋರಾಟಗಾರರ ಮೇಲೆ ನಾನಾ ಬಗೆಯ ದೂರುಗಳು ದಾಖಲಾದವು. ಮಹೇಶ್ ಶೆಟ್ಟಿ ತಿಮರೋಡಿಯವರ ಮೇಲೆ ಗಡಿ ಪಾರಿಗ ಆದೇಶಗಳು ಪದೇ ಪದೇ ಜಾರಿಯಾದವು. ಸೌಜನ್ಯಪರ ಹೋರಾಟ ಮುಗಿದೇ ಹೋಯ್ತು ಎಂಬ ಆತಂಕ ಶುರುವಾಗಿತ್ತು. ಎಸ್‌ಐಟಿಯ ಕಣ್ಗಾವಲಿನಲ್ಲಿ ಇದ್ದಾಗಲೇ ಚಿನ್ನಯ್ಯನನ್ನು ಧರ್ಮಸ್ಥಳದ ಪರ ಇರುವ ವ್ಯಕ್ತಿಗಳು ಆತನ ಪತ್ನಿಯ ಮೂಲಕ ಸಂಪರ್ಕಿಸಿ ಹಣದ ಆಮಿಷ ಒಡ್ಡಿದ್ದರು. ಒಪ್ಪದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಇದೇ ಸಮಯದಲ್ಲಿ ಸೌಜನ್ಯ ಮತ್ತು ಇತರ ಹೆಣ್ಣುಮಕ್ಕಳ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂಬ ಕೂಗು ರಾಜ್ಯದೆಲ್ಲೆಡೆ ಅನುರಣಿಸಿತ್ತು. ಕೊಂದವರು ಯಾರು? ಎಂಬ ಜನಪರ, ಮಹಿಳಾಪರ ಹೋರಾಟಗಾರರ ತಂಡದ ಆಂದೋಲನ ರೂಪುಗೊಂಡು ಕುಸುಮಾವತಿಯವರಿಗೆ ಬೆಂಬಲವಾಗಿ ನಿಂತಿತ್ತು. ಬೆಳ್ತಂಗಡಿ ಸುತ್ತಮುತ್ತ ನಡೆದ ಎಲ್ಲ ಹೆಣ್ಣುಮಕ್ಕಳ ಅಸಹಜ ಸಾವುಗಳ ತನಿಖೆ ಕೋರಿ ಸರ್ಕಾರಕ್ಕೆ ಒತ್ತಾಯಿಸುವುದು, ಮಹಿಳೆಯರ ಸಹಿ ಸಂಗ್ರಹ, ಸೋನಿಯಾ ಗಾಂಧಿ ಅವರಿಗೆ ಪತ್ರ, ಬೆಳ್ತಂಗಡಿ ಚಲೋ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ಹೀಗೆ ಹಲವು ಹಂತದಲ್ಲಿ ಒತ್ತಾಯಗಳು ಹೆಚ್ಚಾದವು. ಇದರ ಮಧ್ಯೆ ಸುಪ್ರೀಂ ಕೋರ್ಟ್‌ಗೆ ಕುಸುಮಾವತಿ ಅರ್ಜಿ ಸಲ್ಲಿಸಿದ್ದರು. ಕೆಲವೇ ಕೆಲವು ಸ್ವತಂತ್ರ ಡಿಜಿಟಲ್ ಮಾಧ್ಯಮಗಳು ಸೌಜನ್ಯ ಹೋರಾಟದ ಜೊತೆಗಿದ್ದು ಸತ್ಯದ ಜೊತೆಗೆ ನಿಂತವು.
ಅನಾಥ ಶವಗಳನ್ನು ಹೂತು ಹಾಕಿರುವ ಪ್ರಕರಣದ ಎಸ್‌ಐಟಿ ತನಿಖೆ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಬೆಂಬಲ ಎಂದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನವರು ಧರ್ಮಸ್ಥಳಕ್ಕೆ ಯಾತ್ರೆ ಹೋಗಿದ್ದರು. ಅವರಾರೂ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದವರು ಯಾರೆಂದು ತನಿಖೆ ನಡೆಯಲಿ ಎಂದು ಒತ್ತಾಯಿಸಲೇ ಇಲ್ಲ. ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರು ಬಹಿರಂಗವಾಗಿಯೇ “ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ನಡೆದಿದೆ. ಹೆಗ್ಗೆಡೆಯವರ ಜೊತೆಗೆ ನೂರು ಡಿಕೆ ಶಿವಕುಮಾರ್ ಇದ್ದಾರೆ” ಎಂದು ಹೇಳಿದ್ದರು. ಸೌಜನ್ಯ ಕುಟುಂಬದ ಮನವಿಗೂ ಸರ್ಕಾರ ಕ್ಯಾರೆ ಅಂದಿರಲಿಲ್ಲ. ಈಗ ಅವರೇ ಮುಖ್ಯಮಂತ್ರಿ. ಎಸ್‌ಐಟಿ ರಚನೆ ಮಾಡಿ ಪಾರದರ್ಶಕ ತನಿಖೆ ನಡೆಸುವ ಹೊಣೆ ಅವರ ಮೇಲಿದೆ. ಹಾಗೆಯೇ ಮಾಧ್ಯಮಗಳು ಇನ್ನಾದರೂ ಸತ್ಯದ ಪರ, ನೊಂದ ಕುಟುಂಬಗಳ ಪರ ನಿಲ್ಲುವ ಮೂಲಕ ಪತ್ರಿಕಾಧರ್ಮವನ್ನು ಗೌರವಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.



