ಇಂದಿರಾ ಲಂಕೇಶ್‌ | ವೈಯಕ್ತಿಕ ನೋವನ್ನು ದ್ವೇಷದ ವಿರುದ್ಧದ ಹೋರಾಟವಾಗಿ ಬದಲಿಸಿಕೊಂಡ ದಿಟ್ಟೆ

Date:

ಇಂದಿರಾ ಅವರಿಗೆ ರಾಹುಲ್‍ಗಾಂಧಿಯವರ ಜತೆ ಹೆಜ್ಜೆ ಹಾಕಬೇಕು ಎಂದು ಯಾಕನಿಸಿತೊ ಸ್ಪಷ್ಟವಿಲ್ಲ. ಅವರಿಗೆ ಯಾವುದೇ ರಾಜಕೀಯ ಆಕಾಂಕ್ಷೆ ಇರಲಿಲ್ಲ. ಲಂಕೇಶರ ಪತ್ನಿಯಾಗಿ ನೂರಾರು ದೊಡ್ಡ ಮನುಷ್ಯರನ್ನು ನೋಡಿರುವ ಅವರಿಗೆ ಜನಪ್ರಿಯ ರಾಜಕಾರಣಿಯ ಜತೆ ಗುರುತಿಸಿಕೊಳ್ಳುವ ವಾಂಛೆಯೂ ಇರಲಿಲ್ಲ. ಆದರೆ ಕತ್ತರಿಸುವ ದ್ವೇಷಿಸುವ ಕೊಲ್ಲುವ ಮೂಲಕ ಭಾರತವನ್ನು ಕಟ್ಟುವ ಸಿದ್ಧಾಂತಕ್ಕೆ, ಪ್ರೀತಿಯ ಮೂಲಕ ದೇಶಕಟ್ಟುವ ಪ್ರಯತ್ನದೊಂದಿಗೆ ಗುರುತಿಸಿಕೊಳ್ಳುವ ತವಕವಿತ್ತು.

- Advertisement -

ರಾಹುಲ್ ಗಾಂಧಿಯವರು `ಭಾರತ್‍ ಜೋಡೊ ಯಾತ್ರೆʼಯಲ್ಲಿ ಭಾರತದ ನೂರಾರು ಲೇಖಕರ ಕಲಾವಿದರ ಕಾರ್ಮಿಕರ ಜತೆ ಕೈಹಿಡಿದು ಹೆಜ್ಜೆಹಾಕಿದ ಪಟಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಇಂದಿರಾ ಲಂಕೇಶ್ ಅವರ ಕೈಯನ್ನು ಹಿಡಿದುಕೊಂಡು ನಡೆಯುತ್ತಿರುವ ಒಂದು ಪಟವು ವಿಶಿಷ್ಟವಾಗಿದೆ. ರಾಜಕುಮಾರನಾಗಿ ಹುಟ್ಟಿದ ರಾಹುಲ್‍ಗೆ, ಭಾರತವನ್ನು ಜೋಡಿಸುವ ಯಾತ್ರೆಯು ಕೋಮುವಾದವನ್ನು ಮುಖಾಮುಖಿ ಮಾಡುವುದಕ್ಕೆ ಬೇಕಾದ ತಾತ್ವಿಕ ಸ್ಪಷ್ಟತೆಯನ್ನು ಪಡೆದುಕೊಳ್ಳುವುದರ ಭಾಗವಾಗಿತ್ತು. ಭಾರತ  ದೇಶವನ್ನು ಸಾಮಾನ್ಯ ಸ್ತರಕ್ಕೆ ಇಳಿದು ಅರಿಯಲು ಎಲೈಟ್ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಮಾಡಿಕೊಂಡ ಡಿಕ್ಲಾಸಿಫಿಕೇಶನ್ ಯತ್ನದಂತಿತ್ತು. ಹಲವರನ್ನು ಒಳಗೊಳ್ಳುವ ಭಾರತದ ಪರಿಕಲ್ಪನೆಯನ್ನು ರೂಪಿಸುವ ಪ್ರಯತ್ನದಂತೆಯೂ ಅದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಇಂದಿರಾ ಅವರಿಗೆ ರಾಹುಲ್‍ಗಾಂಧಿಯವರ ಜತೆ ಹೆಜ್ಜೆ ಹಾಕಬೇಕು ಎಂದು ಯಾಕನಿಸಿತೊ ಸ್ಪಷ್ಟವಿಲ್ಲ. ಅವರಿಗೆ ಯಾವುದೇ ರಾಜಕೀಯ ಆಕಾಂಕ್ಷೆ ಇರಲಿಲ್ಲ. ಲಂಕೇಶರ ಪತ್ನಿಯಾಗಿ ನೂರಾರು ದೊಡ್ಡ ಮನುಷ್ಯರನ್ನು ನೋಡಿರುವ ಅವರಿಗೆ ಜನಪ್ರಿಯ ರಾಜಕಾರಣಿಯ ಜತೆ ಗುರುತಿಸಿಕೊಳ್ಳುವ ವಾಂಛೆಯೂ ಇರಲಿಲ್ಲ. ಆದರೆ ಕತ್ತರಿಸುವ ದ್ವೇಷಿಸುವ ಕೊಲ್ಲುವ ಮೂಲಕ ಭಾರತವನ್ನು ಕಟ್ಟುವ ಸಿದ್ಧಾಂತಕ್ಕೆ, ಪ್ರೀತಿಯ ಮೂಲಕ ದೇಶಕಟ್ಟುವ ಪ್ರಯತ್ನದೊಂದಿಗೆ ಗುರುತಿಸಿಕೊಳ್ಳುವ ತವಕವಿತ್ತು. ದ್ವೇಷದ ಸಿದ್ಧಾಂತಕ್ಕೆ ಮಗಳನ್ನು ಕಳೆದಕೊಂಡ ಅಸಹಾಯಕ ತಾಯೊಬ್ಬಳು, ಎಲ್ಲರೂ  ಜತೆಗೂಡಿ ಬದುಕುವ ಸಮಾಜವು ನಿರ್ಮಾಣವಾಗಬೇಕು ಎಂಬ  ಹಂಬಲವಿತ್ತು. ವೈಯಕ್ತಿಕ ನೋವನ್ನು ದ್ವೇಷದ ವಿರುದ್ಧದ ಹೋರಾಟವಾಗಿ ಬದಲಿಸಿಕೊಂಡ ಮಹಿಳೆಯೊಬ್ಬಳ ತಾತ್ವಿಕ ರೂಪಾಂತರದಂತಿತ್ತು. ಇಂದಿರಾ ಅವರು ತಮ್ಮ ಈ ನಡಿಗೆಯ ಮೂಲಕ ಮತ್ತು ಗೌರಿ ಸ್ಮರಣೆಯ ಕಾರ್ಯಕ್ರಮಗಳ ಮೂಲಕ, ಲಂಕೇಶ್ ಮತ್ತು ಗೌರಿಯರ ಹೋರಾಟ ಪ್ರಜ್ಞೆಯನ್ನು ತಮ್ಮದೇ ವಿಧಾನದಲ್ಲಿ  ಮುಂದುವರೆಸುತ್ತಿದ್ದರು. ಭಾರತ ಜೋಡೊ ಯಾತ್ರೆಯು ತಾತ್ವಿಕವಾಗಿ ರಾಹುಲ ಗಾಂಧಿಯವರ ರಾಜಕೀಯ ಮರುಹುಟ್ಟಿನ ನಡಿಗೆ ಆಯಿತೊ ಇಲ್ಲವೊ, ಅದು ಬೇರೆ ಚರ್ಚೆಯ ವಿಷಯ. ಆದರೆ ಆ ನಡಿಗೆಯಲ್ಲಿ ಭಾಗವಹಿಸಿದ ಇಂದಿರಾ ತರಹ ಅನೇಕರ ದೇಶದ ಪರಿಕಲ್ಪನೆಯ ಪ್ರಕಟಣೆಯ ಭಾಗವೂ ಆಗಿತ್ತೆಂದು ನನಗೆ ಅನಿಸುತ್ತದೆ.

ಇಂದಿರಾ ಅವರ ಆತ್ಮಕಥೆಯನ್ನು ಓದಿದರೆ, ಅವರು ಪ್ರಸಿದ್ಧ ಲೇಖಕರ ತೆರೆಮರೆಯಲ್ಲಿ ಬದುಕನ್ನು ಮಾಡಿದ ಅಜ್ಞಾತ ಮಡದಿಯರ ಸಾಲಿನಲ್ಲಿ ಸೇರುವವರಲ್ಲ ಎಂದು ಮೊದಲಿಗೆ ಗೊತ್ತಾಗುತ್ತದೆ. ಅವರೊಬ್ಬ ಉದ್ಯಮಶೀಲ ಮಹಿಳೆಯಾಗಿ ತನ್ನ ಆರ್ಥಿಕ ಬದುಕನ್ನು ತಾನೇ ಕಟ್ಟಿಕೊಳ್ಳುವ ಛಾತಿಯನ್ನು ತೋರಿದವರು. ಲಂಕೇಶ್ ವಿಶ್ವವಿದ್ಯಾಲಯಕ್ಕೆ ರಾಜಿನಾಮೆ ಕೊಟ್ಟಾಗ, ತಮ್ಮ ದುಡಿಮೆಯಿಂದ ಮನೆಯನ್ನು ಸಂಭಾಳಿಸಿದವರು. ಇದುವೇ ಕನ್ನಡದಲ್ಲಿ ಪ್ರಸಿದ್ಧ ಲೇಖಕರ ಮಡದಿಯರು ಬರೆದ ಆತ್ಮಕಥೆಗಳಿಗೂ `ಹುಳಿಮಾವಿನ ಮರ ಮತ್ತು ನಾನುʼ ನಡುವಣ ತಾತ್ವಿಕ ವ್ಯತ್ಯಾಸವನ್ನು ನಿರ್ಮಿಸಿತು. ಗಣ್ಯವ್ಯಕ್ತಿಯ ಮಕ್ಕಳು ಮಡದಿಯರು ಬರೆಯುವ ಆತ್ಮಕಥನಾತ್ಮಕ ಜೀವನ ಚರಿತ್ರೆಗಳು (ಈ ಪ್ರಕಾರದಲ್ಲಿ ತೇಜಸ್ವಿ ಮತ್ತು ತಾರಿಣಿಯವರ ಕೃತಿಗಳೂ ಬರುತ್ತವೆ.) ಸಾರ್ವಜನಿಕವಾಗಿ ಗಣ್ಯರಾದವರ ಜೀವನದ, ಸಾರ್ವಜನಿಕರಿಗೆ ಅಪರಿಚಿತವಾದ ಆಯಾಮವನ್ನು ಕಾಣಿಸುತ್ತವೆ ಎಂಬ ಕಾರಣಕ್ಕೆ ಕುತೂಹಲ ಹುಟ್ಟಿಸುತ್ತವೆ ನಿಜ. ಆದರೆ ಅದಕ್ಕಿಂತ ಮುಖ್ಯವಾದುದು, ಈ ಇಂತಹ ಕೃತಿಗಳಲ್ಲಿ ಲೇಖಕರು ಗತಿಸಿದ ಗಣ್ಯರ ಜೀವನವನ್ನು ಕುರಿತು ಯಾವ ನಿಲುವನ್ನು ತಾಳುತ್ತಾರೆ ಎನ್ನುವುದು.

ಬಹುತೇಕ ಆತ್ಮಕಥನಾತ್ಮಕ ಜೀವನಚರಿತ್ರೆಗಳಲ್ಲಿ, ಗಣ್ಯರ ಸಾಧನೆ ಪ್ರತಿಭೆ ಗುಣಗಳನ್ನು ಭಾವುಕವಾಗಿ ಕೀರ್ತಿಸುವ ಧಾಟಿಯೇ ಪ್ರಧಾನವಾಗಿರುತ್ತದೆ.  ಅವರ ಜೀವನ ವಿಧಾನದ ಬಗ್ಗೆ ವಿಮರ್ಶೆ ಕ್ಷೀಣವಾಗಿರುತ್ತದೆ. ಇದಕ್ಕೆ ಪ್ರತಿಯಾಗಿ, ತಮ್ಮನ್ನು ಮನುಷ್ಯರಾಗಿ ನಡೆಸಿಕೊಳ್ಳದ ಪಶುಸದೃಶ ವ್ಯಕ್ತಿಯ ಜತೆ ಉಸಿರು ಕಟ್ಟುವಂತೆ ಬದುಕುವಾಗ ಪಟ್ಟ ಮಾನಸಿಕ ದೈಹಿಕ ಹಿಂಸೆಯನ್ನು ಚಿತ್ರಿಸುವ ಮಹಿಳೆಯರ ಆತ್ಮಕಥೆಗಳಲ್ಲಿ, ಜೀವನ ಸಂಗಾತಿಯ ಬಗ್ಗೆ ಕೇವಲ ತಿರಸ್ಕಾರವಿರುತ್ತದೆ. ಇಂದಿರಾ ಅವರ ಆತ್ಮಕಥೆ ಈ ಎರಡೂ ಮಾದರಿಗಳದ್ದಲ್ಲ. ಅದು ತಮ್ಮ ಜೀವನ ಜೀವನ ಸಂಗಾತಿಯ ಜತೆಗಿನ ತನ್ನ ಸಂಬಂಧವನ್ನು  ವಿಮರ್ಶಾತ್ಮಕವಾಗಿ ಚಿತ್ರಿಸುತ್ತದೆ ಮತ್ತು ಜೀವನದ ಮೌಲ್ಯಮಾಪನವನ್ನು ಮಾಡುತ್ತದೆ. ಇಂದಿರಾ ಅವರಲ್ಲಿ, ಲಂಕೇಶ್ ಜತೆಗಿನ ವಿವಾಹವಾದ ಮೊದಲ ವರ್ಷಗಳಲ್ಲಿ ಮತ್ತು ಕೊನೆಯ ವರ್ಷಗಳಲ್ಲಿ ಇದ್ದ ಸಂಬಂಧದ ಅಪಾರವಾದ ಪ್ರೀತಿ ಒಲುಮೆಗಳು ಪ್ರಕಟವಾಗಿವೆ. ಆದರೆ ನಡುವಣ ಘಟ್ಟದಲ್ಲಿ ಲಂಕೇಶರ ಬಗ್ಗೆ ನಿಷ್ಠುರವಾದ ದನಿಯ ವಿಮರ್ಶೆಯಿದೆ. ಲಂಕೇಶ್ ಆದರ್ಶ ಗಂಡನಾಗಿರಲಿಲ್ಲ ಎಂಬ ಮಾತನ್ನು ಅವರು ನೇರವಾಗಿ ಬರೆಯುತ್ತಾರೆ.

ಈ ನಿಷ್ಠುರ ನಿಲುವಿಗೆ, ಲೇಖಕಿ ಗಂಡನನ್ನು ಆರ್ಥಿಕವಾಗಿ ಅವಲಂಬಿಸದೆ, ವ್ಯಾಪಾರ ಮಾಡುತ್ತ ಸ್ವಂತಕಾಲಲ್ಲಿ ನಿಂತು, ಸ್ವತಂತ್ರವಾಗಿ ಬಾಳಿದ್ದು ಕೂಡ ಒಂದು ಕಾರಣ. ಆತ್ಮಕಥೆಯಲ್ಲಿ ಸುಳ್ಳನ್ನು ಹೇಳಬಾರದು ಎಂಬ ಸರಳವಾದ ನೇರವಾದ ನಿಷ್ಠುರತೆ ಇನ್ನೊಂದು ಕಾರಣ. ಈ ವಿಮರ್ಶಾತ್ಮಕ ನಿಲುವು ಇಂದಿರಾ ಅವರ ವ್ಯಕ್ತಿತ್ವಕ್ಕೆ ಹೊಸ ಹೊಳಪನ್ನು ಕೊಟ್ಟಿದೆ. ಅವರ ಬರೆಹಕ್ಕೆ ಹೊಸ ದೃಷ್ಟಿಕೋನವನ್ನು ಒದಗಿಸಿದೆ. ಹಾಗೆ ಕಂಡರೆ ಅವರು ತಮ್ಮ ಹುಳಿಮಾವಿನ ಮರದ ಬಗ್ಗೆ ಬರೆದಿರುವುದಕ್ಕಿಂತ, ಲಂಕೇಶ್ ತಮ್ಮ ಮಕ್ಕಳ ಜತೆ ಅಥವಾ ಗೌರಿ ಮತ್ತು ಕವಿತಾ ತನ್ನ ಅಪ್ಪನೊಟ್ಟಿಗೆ ಹೊಂದಿದ್ದ ಆಪ್ತವಾದ ಲವಲವಿಕೆ ಹಾಸ್ಯಪ್ರಜ್ಞೆಯಿಂದ ಕೂಡಿದ ಸಂಬಂಧಗಳ ಬಗ್ಗೆ ಬರೆದಿರುವ ಭಾಗಗಳೇ ಹೆಚ್ಚು ಜೀವಂತವಾಗಿವೆ. ಇದು ಈ ಪುಸ್ತಕದೊಳಗೆ ಒಳಪ್ರವಾಹವಾಗಿ ಹರಿದಿರುವ ತಾಯ್ತನ. ಈ ತಾಯ್ತನವೇ ವಿಸ್ತರಣೆಯಾಗಿ, ಈ ದೇಶದ ಎಲ್ಲ ಮಕ್ಕಳಿಗೂ ಹಂಚಿಕೆಯಾಗುವಂತೆ, ಇಂದಿರಾ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ನಡಿಗೆ ಮಾಡಿದರು ಎಂದು ನನಗೆ ಅನಿಸುತ್ತದೆ.

Rahamath tarikere 1
ಡಾ ರಹಮತ್‌ ತರೀಕೆರೆ
+ posts

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು.ಕನ್ನಡದ ಪ್ರಮುಖ ಸಂಶೋಧಕ, ಬರಹಗಾರ, ವಿಮರ್ಶಕ.

ಪೋಸ್ಟ್ ಹಂಚಿಕೊಳ್ಳಿ:

ಡಾ ರಹಮತ್‌ ತರೀಕೆರೆ
ಡಾ ರಹಮತ್‌ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು.ಕನ್ನಡದ ಪ್ರಮುಖ ಸಂಶೋಧಕ, ಬರಹಗಾರ, ವಿಮರ್ಶಕ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದಿಂದ ನಾಡಿಗೆ ಮುಕ್ತಿ ಸಿಗಲಿ: ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಶೀಘ್ರವೇ ಮುಕ್ತಿ ಸಿಗಲಿ ಹಾಗೂ...

ಕಾನೂನುಬಾಹಿರ ನೇಮಕದ ಆರೋಪ: ಚಂದ್ರಶೇಖರನ್ ಬೆನ್ನಿಗೆ ನಿಂತ ಮಂಡಳಿ, ವಿರೋಧಿಸಿದ ನೊಯೆಲ್ ಟಾಟಾ

ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...

‘ಕಠಿಣ ಆದೇಶಕ್ಕೆ ಆಹ್ವಾನ ನೀಡದಿರಿ’: ಮಣಿಪುರ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಮನೆ ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ...