ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೆಪದಲ್ಲಿ ರಾಯಚೂರು ನಗರ ಹಾಗೂ ಗ್ರಾಮೀಣ ವ್ಯಾಪ್ತಿಯ ಹಲವು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ಕೈಬಿಡಬೇಕು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಮತ್ತು ಸಾರ್ವಜನಿಕ ಶಾಲೆ ಉಳಿಸಿ ಸಮಿತಿಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು ಹಾಗೂ ಅಂದ್ರೂನ್ ಖಿಲ್ಲಾ, ಕೋಟೆಯ ಬಾಲಕಿಯರ ಉರ್ದು ಪ್ರೌಢಶಾಲೆ, ಅಸ್ಕಿಹಾಳ, ಆಶ್ರಯ ಕಾಲೋನಿ, ಶ್ರೀರಾಮನಗರ ಕ್ಯಾಂಪ್, ವಿಜಯನಗರ ಕ್ಯಾಂಪ್, ಗೋಲ್ ಮಾರ್ಕೆಟ್, ದೇವರ ಕಾಲೋನಿ, ಕುಲಸುಂಬಿ ಕಾಲೋನಿ, ಮಲಿಯಾಬಾದ್ ಕ್ಯಾಂಪ್ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿದರು.
ಅಸ್ಕಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣವನ್ನು ಕೂಡಲೇ ಆರಂಭಿಸಬೇಕು. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ತರಗತಿಗಳು ನಡೆಯುವಂತೆ ವಾರದೊಳಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿಜಯನಗರ ಕ್ಯಾಂಪ್‌ನಲ್ಲಿರುವ ಶಿಥಿಲಾವ ಸ್ಥೆಯ ಸರ್ಕಾರಿ ಶಾಲೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳದಲ್ಲಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಖಾಲಿ ಇರುವ 5624 ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಜೊತೆಗೆ 266 ಏಕೋಪಾಧ್ಯಾಯ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು. ದುಸ್ಥಿತಿಯಲ್ಲಿರುವ 874 ಶಾಲಾ ಶೌಚಾಲಯಗಳನ್ನು ತುರ್ತು ಆಧಾರದ ಮೇಲೆ ದುರಸ್ತಿಗೊಳಿಸಿ, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸಗೊಬ್ಬರ ಸಮರ್ಪಕ ಪೂರೈಕೆಗೆ ಸೇರಿ ನಾನಾ ಬೇಡಿಕೆಗೆ ಆಗ್ರಹಿಸಿ ಕೆಪಿಆರ್‌ಎಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ಚನ್ನಬಸವ ಜಾನಕಲ್, ಮಹೇಶ್, ಸೂರ್ಯ ನಾರಾಯಣ, ಶಿವಪ್ಪ, ರವಿಕುಮಾರ್, ಬಸವರಾಜ್ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು, ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.




