ಇತ್ತೀಚೆಗೆ ಮಂಡ್ಯದ ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ತಮ್ಮ ಅವಳಿ ಮಕ್ಕಳಿಗೆ SIR ಪ್ರಕ್ರಿಯೆಯಲ್ಲಿ ನೋಟಿಸ್ ಬಂದಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾರಣ ಕೇಳಿದರೆ ಇನ್ನಷ್ಟು ಆಶ್ಚರ್ಯವಾಗುತ್ತದೆ. ಪೋಷಕರೊಂದಿಗೆ ಜೋಡಣೆ ಮಾಡಿರುವ ಮತ್ತೊಬ್ಬ ಮಗುವಿಗೂ ಇವರಿಗೂ ಇರುವ ವಯಸ್ಸಿನ ಅಂತರ ಒಂಬತ್ತು ತಿಂಗಳಿಗಿಂತ ಕಡಿಮೆ ಇದೆ ಎಂಬುದು ನೋಟಿಸ್‌ಗೆ ಕಾರಣವಾಗಿದೆ. ಅಂದರೆ, ಅವರು ಚುನಾವಣಾ ಪ್ರಾಧಿಕಾರದ ಮುಂದೆ ಹೋಗಿ ಅವಳಿ ಮಕ್ಕಳು ಎಂದು ಸಾಬೀತುಪಡಿಸಬೇಕಾದ ಪರಿಸ್ಥಿತಿ!
ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯು ಕೇವಲ ಕೆಲವು ಹೆಸರುಗಳ ಪಟ್ಟಿ ಅಲ್ಲ. ಅದು ನಾಗರಿಕನ ರಾಜಕೀಯ ಅಸ್ತಿತ್ವದ ಪ್ರಮುಖ ದಾಖಲೆ. ಮತದಾನದ ಹಕ್ಕು ಎಂದರೆ ಕೇವಲ ಒಂದು ದಿನ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಹಕ್ಕಲ್ಲ; ಅದು ಸಂವಿಧಾನ ನೀಡಿರುವ ಸಮಾನತೆ, ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಪ್ರಜಾಪ್ರಭುತ್ವದ ಭಾಗವಾಗಿರುವ ಹಕ್ಕಿನ ಅಭಿವ್ಯಕ್ತಿ.
ಹೀಗಿರುವಾಗ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯೇ ಒಬ್ಬ ಸಾಮಾನ್ಯ ನಾಗರಿಕನಿಗೆ ತನ್ನ ಅಸ್ತಿತ್ವವನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಪರೀಕ್ಷೆಯಾಗಿ ಪರಿಣಮಿಸಿದರೆ, ಪ್ರಶ್ನೆ ಕೇಳಲೇಬೇಕಾಗುತ್ತದೆ. ಈ ಪರಿಶೀಲನೆ ಯಾರಿಗಾಗಿ? ನಾಗರಿಕರ ಅನುಕೂಲಕ್ಕಾಗಿ ಅಥವಾ ನಾಗರಿಕರ ಮೇಲೆಯೇ ಹೊರೆ ಹಾಕುವುದಕ್ಕಾಗಿ?
ಇತ್ತೀಚೆಗೆ ಮಂಡ್ಯದ ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ತಮ್ಮ ಅವಳಿ ಮಕ್ಕಳಿಗೆ SIR ಪ್ರಕ್ರಿಯೆಯಲ್ಲಿ ನೋಟಿಸ್ ಬಂದಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾರಣ ಕೇಳಿದರೆ ಇನ್ನಷ್ಟು ಆಶ್ಚರ್ಯವಾಗುತ್ತದೆ. ಪೋಷಕರೊಂದಿಗೆ ಜೋಡಣೆ ಮಾಡಿರುವ ಮತ್ತೊಬ್ಬ ಮಗುವಿಗೂ ಇವರಿಗೂ ಇರುವ ವಯಸ್ಸಿನ ಅಂತರ ಒಂಬತ್ತು ತಿಂಗಳಿಗಿಂತ ಕಡಿಮೆ ಇದೆ ಎಂಬುದು ನೋಟಿಸ್‌ಗೆ ಕಾರಣವಾಗಿದೆ. ಅಂದರೆ, ಅವರು ಚುನಾವಣಾ ಪ್ರಾಧಿಕಾರದ ಮುಂದೆ ಹೋಗಿ ಅವಳಿ ಮಕ್ಕಳು ಎಂದು ಸಾಬೀತುಪಡಿಸಬೇಕಾದ ಪರಿಸ್ಥಿತಿ!
ಒಮ್ಮೆ ಯೋಚಿಸಿ ನೋಡಿ. ಅವಳಿ ಮಕ್ಕಳು ಒಂದೇ ಗರ್ಭಧಾರಣೆಯಲ್ಲಿ ಜನಿಸುವುದು ಸಹಜ ಜೈವಿಕ ಸಂಗತಿ. ಅದಕ್ಕೆ ಪೋಷಕರು ಯಾವುದೇ ದಾಖಲೆ ಸೃಷ್ಟಿಸಿಲ್ಲ. ಅದು ಮಕ್ಕಳ ಆಯ್ಕೆಯೂ ಅಲ್ಲ, ಪೋಷಕರ ತಪ್ಪೂ ಅಲ್ಲ. ಆದರೆ ಆಡಳಿತಾತ್ಮಕ ದತ್ತಾಂಶದಲ್ಲಿನ ಒಂದು ತಾರ್ಕಿಕ ವ್ಯತ್ಯಾಸದಿಂದಾಗಿ ಮಕ್ಕಳೇ ತಮ್ಮ ಸಹೋದರತ್ವ ಮತ್ತು ಜನನದ ವಾಸ್ತವವನ್ನು ಸಾಬೀತುಪಡಿಸುವ ಪರಿಸ್ಥಿತಿ ಎದುರಾಗುತ್ತದೆ.
ಅವಳಿಯಾಗಿ ಹುಟ್ಟಿದ್ದು ಅವರ ತಪ್ಪೇ? ಅವರನ್ನು ಅವಳಿಯಾಗಿ ಹೆತ್ತಿದ್ದು ಪೋಷಕರ ತಪ್ಪೇ? ಇದು ಕೇವಲ ಒಂದು ಕುಟುಂಬದ ಪ್ರಶ್ನೆಯಲ್ಲ. ದಾಖಲೆ ಆಧಾರಿತ ಆಡಳಿತದಲ್ಲಿ ಮಾನವ ಜೀವನದ ಸಹಜ ವೈವಿಧ್ಯವನ್ನು ಅಂಕಿ-ಅಂಶಗಳ ಮಿತಿಯಲ್ಲಿ ಅಳೆಯುವಾಗ ಎದುರಾಗಬಹುದಾದ ದೊಡ್ಡ ಪ್ರಶ್ನೆಯಿದು.
ಇದರ ಜೊತೆಗೆ ಇನ್ನೊಂದು ಪ್ರಕರಣ ಇನ್ನಷ್ಟು ಗಂಭೀರವಾಗಿದೆ. ಮದ್ದೂರು ತಾಲೂಕಿನ ನಾಗರಿಕರೊಬ್ಬರು ಹೇಳುವಂತೆ 2002ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಕೂಡ, SIR ಪ್ರಕ್ರಿಯೆಯಲ್ಲಿ ಅವರ ಹೆಸರಿನೊಂದಿಗೆ ಹಿಂದಿನ ಮತದಾರರ ಪಟ್ಟಿಯಲ್ಲಿದ್ದ ಅವರದೇ ಹೆಸರನ್ನು ಸಮರ್ಪಕವಾಗಿ ಮ್ಯಾಪಿಂಗ್ ಮಾಡದೆ, ಅವರ ತಾತ-ಅಜ್ಜಿಯ ಹೆಸರಿನೊಂದಿಗೆ ಸಂಬಂಧವನ್ನು ಪರಿಗಣಿಸಲಾಗಿದೆ. ಇದರಿಂದ ಮತದಾರರ ಮತ್ತು ಸಂಬಂಧಿಯ ನಡುವಿನ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇದೆ ಎಂಬ ಕಾರಣವನ್ನು ಆಧಾರವಾಗಿ ತೆಗೆದುಕೊಂಡು ನೋಟಿಸ್ ನೀಡಲಾಗಿದೆ.
ಇಲ್ಲಿ ಮೂಲ ಪ್ರಶ್ನೆಯೇ ಬೇರೆ. ನಾನು ನನ್ನ ಮಾಹಿತಿಯನ್ನು ಮಾತ್ರ ನೀಡಿದ್ದೇನೆ. ಮ್ಯಾಪಿಂಗ್ ಸಂದರ್ಭದಲ್ಲಿ ಅಥವಾ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ನಾನು ನೀಡದ ಮಾಹಿತಿಯ ಆಧಾರದ ಮೇಲೆ ಉಂಟಾದ ವ್ಯತ್ಯಾಸಕ್ಕೆ ನಾನು ಏಕೆ ಹೊಣೆಗಾರನಾಗಬೇಕು? ಎಂಬುದು ಮತದಾರರ ಪ್ರಶ್ನೆ.
ಒಂದು ಆಡಳಿತಾತ್ಮಕ ವ್ಯವಸ್ಥೆಯ ದತ್ತಾಂಶವನ್ನು ಮತ್ತೊಂದು ದತ್ತಾಂಶದೊಂದಿಗೆ ಜೋಡಿಸುವಾಗ ತಾಂತ್ರಿಕ ಅಥವಾ ಪ್ರಕ್ರಿಯಾತ್ಮಕ ವ್ಯತ್ಯಾಸ ಉಂಟಾದರೆ, ಮೊದಲು ಅದನ್ನು ಪರಿಶೀಲಿಸಬೇಕಾದದ್ದು ವ್ಯವಸ್ಥೆಯ ಜವಾಬ್ದಾರಿಯಲ್ಲವೇ? ಬದಲಿಗೆ ಆ ವ್ಯತ್ಯಾಸದ ಪರಿಣಾಮವನ್ನು ಸಂಪೂರ್ಣವಾಗಿ ನಾಗರಿಕನ ಮೇಲೇ ಹಾಕಿ, “ನಿಮ್ಮ ದಾಖಲೆಗಳನ್ನು ಹುಡುಕಿ, ನಿಮ್ಮ ಸಂಬಂಧವನ್ನು ಸಾಬೀತುಪಡಿಸಿ, ನಿಮ್ಮ ನಾಗರಿಕತ್ವವನ್ನು ನಿರೂಪಿಸಿ” ಎನ್ನುವುದು ನ್ಯಾಯಸಮ್ಮತವೇ?
ಇದಲ್ಲದೇ, ಭಾರತೀಯ ಸಮಾಜದಲ್ಲಿರುವ ಸಾಮಾಜಿಕ ವಾಸ್ತವವನ್ನು ಮರೆಯಬಾರದು. ಹಿಂದಿನ ತಲೆಮಾರುಗಳ ಕುಟುಂಬಗಳನ್ನು ಇಂದಿನ ಮಾನದಂಡಗಳಿಂದ ಅಳೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಕುಟುಂಬಗಳಲ್ಲಿ ಹೆಚ್ಚು ಮಕ್ಕಳು ಇರುವುದು ಅಸಾಮಾನ್ಯವಾಗಿರಲಿಲ್ಲ. ಕುಟುಂಬ ಯೋಜನೆ ಕುರಿತು ಇಂದಿನಷ್ಟು ವ್ಯಾಪಕ ಅರಿವು ಇರಲಿಲ್ಲ. ಕುಟುಂಬದ ಗಾತ್ರದ ಬಗ್ಗೆ ಇಂದಿನ ಸಾಮಾಜಿಕ ಮತ್ತು ಆಡಳಿತಾತ್ಮಕ ದೃಷ್ಟಿಕೋನವನ್ನು ಹಿಂದಿನ ತಲೆಮಾರುಗಳ ಮೇಲೆ ಹೇರಲು ಸಾಧ್ಯವಿಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?
ಒಂದು ಕುಟುಂಬದಲ್ಲಿ ಐದು ಮಕ್ಕಳು, ಆರು ಮಕ್ಕಳು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಇದ್ದರೆ, ಅದರಿಂದ ಮಾತ್ರ ಅವರ ಜನನ ಕಾನೂನುಬದ್ಧವಲ್ಲ ಎಂದು ಹೇಗೆ ನಿರ್ಧರಿಸಲಾಗುತ್ತದೆ? ಕುಟುಂಬದ ಗಾತ್ರವು ನಾಗರಿಕತ್ವದ ಸಾಕ್ಷಿಯಲ್ಲ. ಜನನದ ದಿನಾಂಕ, ಜನನದ ದಾಖಲೆ, ಮತದಾರರ ದಾಖಲೆ, ಶಿಕ್ಷಣದ ದಾಖಲೆ ಸೇರಿದಂತೆ ಕಾನೂನುಬದ್ಧ ದಾಖಲೆಗಳೇ ಪರಿಶೀಲನೆಯ ಆಧಾರವಾಗಬೇಕು.
ಆಡಳಿತಾತ್ಮಕ ಪರಿಶೀಲನೆಗೆ ತಾರ್ಕಿಕ ಅಂಶಗಳು ಬೇಕು. ಆದರೆ ತರ್ಕದ ಹೆಸರಿನಲ್ಲಿ ಸಹಜ ಜೀವನವನ್ನೇ ಅನುಮಾನಿಸುವಂತಾಗಬಾರದು. ಇದು ಕೇವಲ ಮತದಾರರ ವಿಷಯವೂ ಅಲ್ಲ. ಕೆಲವೊಮ್ಮೆ ದಾಖಲೆಗಳಲ್ಲಿನ ಸಣ್ಣಪುಟ್ಟ ಕಾಗುಣಿತ ದೋಷಗಳು, ಹೆಸರುಗಳ ವ್ಯತ್ಯಾಸಗಳು, ಸ್ಥಳೀಯ ಭಾಷೆಯ ಹೆಸರುಗಳನ್ನು ಇಂಗ್ಲಿಷ್‌ಗೆ ಪರಿವರ್ತಿಸುವಾಗ ಉಂಟಾಗುವ ವ್ಯತ್ಯಾಸಗಳು ಕೂಡ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತವೆ.
ಭಾರತದಂತಹ ಬಹುಭಾಷಾ, ಬಹುಸಾಂಸ್ಕೃತಿಕ ದೇಶದಲ್ಲಿ ಹೆಸರುಗಳ ಲಿಪ್ಯಂತರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾಗುವುದು ಅಸಹಜವಲ್ಲ. ಒಂದೇ ವ್ಯಕ್ತಿಯ ಹೆಸರನ್ನು ಕನ್ನಡದಲ್ಲಿ ಒಂದು ರೀತಿಯಲ್ಲಿ, ಇಂಗ್ಲಿಷ್‌ನಲ್ಲಿ ಮತ್ತೊಂದು ರೀತಿಯಲ್ಲಿ ಬರೆಯುವುದು ಸಾಮಾನ್ಯ. ಇಂತಹ ಕಾಗುಣಿತ ವ್ಯತ್ಯಾಸವನ್ನು ಮೋಸ ಅಥವಾ ಅಸ್ತಿತ್ವದ ಅನುಮಾನಕ್ಕೆ ಸಮಾನವಾಗಿ ನೋಡುವುದು ಸರಿಯಲ್ಲ.
ಕಾಗುಣಿತ ದೋಷವೇ ವ್ಯಕ್ತಿಯ ಅಸ್ತಿತ್ವದ ದೋಷವಾಗಬಹುದೇ?
ದೇಶದ ವಿಜ್ಞಾನ, ಶಿಕ್ಷಣ ಮತ್ತು ಸಾರ್ವಜನಿಕ ಜೀವನಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ದಾಖಲೆಗಳಲ್ಲಿಯೂ ಕೆಲವೊಮ್ಮೆ ಹೆಸರುಗಳ ಲಿಪ್ಯಂತರ ಅಥವಾ ಕಾಗುಣಿತದಲ್ಲಿ ವ್ಯತ್ಯಾಸಗಳು ಕಂಡುಬಂದರೆ, ಅದನ್ನು ಸರಿಪಡಿಸುವ ವ್ಯವಸ್ಥೆ ಇರಬೇಕು. ಇಂತಹ ಸಣ್ಣಪುಟ್ಟ ದೋಷಗಳನ್ನೇ ಆಧಾರ ಮಾಡಿಕೊಂಡು ಗೌರವಾನ್ವಿತ ನಾಗರಿಕರಿಗೂ ಅನುಮಾನ ವ್ಯಕ್ತಪಡಿಸುವ ಆಡಳಿತಾತ್ಮಕ ಸಂಸ್ಕೃತಿ ಬೆಳೆದರೆ, ಅದು ದಾಖಲೆಗಳ ಶುದ್ಧೀಕರಣಕ್ಕಿಂತ ನಾಗರಿಕರ ಮೇಲಿನ ಅವಿಶ್ವಾಸದ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತದೆ.
ಭಾರತದ ನಾಗರಿಕ ಸಮಾಜವು ದಾಖಲೆಗಳಿಗಿಂತ ದೊಡ್ಡದು. ದಾಖಲೆಗಳು ನಾಗರಿಕನನ್ನು ಗುರುತಿಸಲು ಸಹಾಯ ಮಾಡಬೇಕು; ನಾಗರಿಕನ ಬದುಕನ್ನೇ ದಾಖಲೆಗಳ ಕೈದಿಯಾಗಿಸಬಾರದು.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯ. ನಕಲಿ ಹೆಸರುಗಳು, ಮೃತರ ಹೆಸರುಗಳು, ಸ್ಥಳಾಂತರಗೊಂಡವರ ವಿವರಗಳು ಮತ್ತು ಇತರ ಅಕ್ರಮಗಳನ್ನು ಪತ್ತೆಹಚ್ಚುವುದು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಮುಖ್ಯ. ಆದರೆ ಈ ಕಾರ್ಯದಲ್ಲಿ ಅರ್ಹ ನಾಗರಿಕನ ಹಕ್ಕು ಕಳೆದುಹೋಗದಂತೆ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ.
ಇದನ್ನೂ ಓದಿ IRCTC ಪ್ರಕರಣ: ಲಾಲು ಪ್ರಸಾದ್ ಯಾದವ್, ತೇಜಸ್ವಿ, ರಾಬ್ರಿ ದೇವಿ ವಿರುದ್ಧ ದೋಷಾರೋಪ ಹೊರಿಸಿದ ದೆಹಲಿ ಕೋರ್ಟ್
ಆಡಳಿತದ ತಪ್ಪಿನ ಬೆಲೆ ನಾಗರಿಕನು ಏಕೆ ಕಟ್ಟಬೇಕು? ಇದು SIR ವಿರೋಧಿಸುವುದಕ್ಕಾಗಿ ಮಾತ್ರ ಕೇಳುತ್ತಿರುವ ಪ್ರಶ್ನೆಯಲ್ಲ. ಇದು ಉತ್ತಮ ಆಡಳಿತಕ್ಕಾಗಿ ಕೇಳುತ್ತಿರುವ ಪ್ರಶ್ನೆ. ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಕೇಳುತ್ತಿರುವ ಪ್ರಶ್ನೆ. ನೋಟಿಸ್ ನೀಡುವುದು ಒಂದು ಆಡಳಿತಾತ್ಮಕ ಕ್ರಮವಾಗಿರಬಹುದು. ಆದರೆ, ನೋಟಿಸ್ ಸ್ವೀಕರಿಸುವ ವ್ಯಕ್ತಿಯ ಹಿಂದೆ ಒಂದು ಕುಟುಂಬವಿದೆ, ಒಂದು ಜೀವನವಿದೆ, ಒಂದು ಉದ್ಯೋಗವಿದೆ, ಒಂದು ವಯಸ್ಸಿದೆ, ಒಂದು ಸಾಮಾಜಿಕ ಪರಿಸ್ಥಿತಿಯಿದೆ ಎಂಬ ಮಾನವೀಯ ಸತ್ಯವನ್ನು ವ್ಯವಸ್ಥೆ ಮರೆಯಬಾರದು.
ಇಂದು ಮತದಾರರ ಮುಂದಿರುವ ಪರಿಸ್ಥಿತಿ ಏನೆಂದರೆ—ಹಿಂದಿನ ದಾಖಲೆಗಳನ್ನು ಹುಡುಕಬೇಕು. ಹಳೆಯ ಮತದಾರರ ಪಟ್ಟಿಗಳನ್ನು ಹುಡುಕಬೇಕು. ಸಂಬಂಧದ ದಾಖಲೆಗಳನ್ನು ಹುಡುಕಬೇಕು. ನಾಗರಿಕತ್ವದ ಅಸ್ತಿತ್ವವನ್ನು ಸಮರ್ಥಿಸುವ ದಾಖಲೆಗಳನ್ನು ಸಂಗ್ರಹಿಸಬೇಕು. ಕೊನೆಗೆ ಈ ದೇಶದ ಅರ್ಹ ನಾಗರಿಕ ಎಂಬುದನ್ನು ಮತ್ತೊಮ್ಮೆ ನಿರೂಪಿಸಬೇಕು.
ನಾಗರಿಕನು ತನ್ನ ಬಳಿ ಇರುವ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಿದ್ದರೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ದಾಖಲೆಗಳನ್ನು ಪರಸ್ಪರ ಸಮನ್ವಯಗೊಳಿಸುವ ವ್ಯವಸ್ಥೆ ಯಾರ ಜವಾಬ್ದಾರಿ? ಡಿಜಿಟಲ್ ಆಡಳಿತದ ಯುಗದಲ್ಲಿ ಸಾಮಾನ್ಯ ನಾಗರಿಕನೇ ದಶಕಗಳ ಹಿಂದಿನ ದಾಖಲೆಗಳನ್ನು ಹುಡುಕಿಕೊಂಡು ಓಡಾಡಬೇಕಾದರೆ, ನಾವು ಆಡಳಿತವನ್ನು ಸರಳಗೊಳಿಸಿದ್ದೇವೆಯೇ ಅಥವಾ ಸಂಕೀರ್ಣಗೊಳಿಸಿದ್ದೇವೆಯೇ?
ಹೀಗಾಗಿ ಒಂದು ತಾಂತ್ರಿಕ ದೋಷದಿಂದ ಅವಳಿ ಮಕ್ಕಳನ್ನು ಅನುಮಾನಿಸುವಂತಾಗಬಾರದು. ಒಂದು ಮ್ಯಾಪಿಂಗ್ ದೋಷದಿಂದ ದಶಕಗಳಿಂದ ಮತದಾರರಾಗಿರುವ ವ್ಯಕ್ತಿಯನ್ನು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಒತ್ತಾಯಿಸಬಾರದು. ಒಂದು ಕಾಗುಣಿತ ದೋಷದಿಂದ ನಾಗರಿಕನ ನಿಷ್ಠೆಯನ್ನು ಪ್ರಶ್ನಿಸಬಾರದು. ಒಂದು ಕುಟುಂಬದಲ್ಲಿ ಹೆಚ್ಚು ಮಕ್ಕಳು ಇದ್ದಾರೆ ಎಂಬ ಕಾರಣಕ್ಕೆ ಆ ಕುಟುಂಬದ ನಾಗರಿಕತ್ವದ ಮೇಲೆ ಅನುಮಾನ ಮೂಡಬಾರದು. ದಾಖಲೆಗಳನ್ನು ಕೇಳಬಹುದು. ಪರಿಶೀಲನೆ ನಡೆಸಬಹುದು. ಆದರೆ ಮೊದಲು ನಾಗರಿಕನನ್ನು ಅನುಮಾನಿಸುವ ಬದಲು, ದಾಖಲೆಗಳ ನಡುವಿನ ವ್ಯತ್ಯಾಸವನ್ನು ಪರಿಶೀಲಿಸುವ ಮನೋಭಾವ ಬೆಳೆಯಬೇಕು.
ನಾಗರಿಕನಿಗೆ ತನ್ನ ನಾಗರಿಕತ್ವವನ್ನು ಸಾಬೀತುಪಡಿಸುವ ಅವಕಾಶ ಇರಬೇಕು; ಆದರೆ ವ್ಯವಸ್ಥೆಯ ದೋಷದಿಂದ ಉಂಟಾದ ಪ್ರತಿಯೊಂದು ವ್ಯತ್ಯಾಸಕ್ಕೂ ನಾಗರಿಕನೇ ಅಪರಾಧಿಯಂತೆ ದಾಖಲೆಗಳೊಂದಿಗೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು.

ಪೃಥ್ವಿರಾಜ್ ಬಿ ಎಲ್
ಬೊಪ್ಪಸಮುದ್ರ, ಮಂಡ್ಯ
ಜಾಗೃತ ಕರ್ನಾಟಕ





