ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯ. ಗೆಳೆಯರು ಸೇರಿದರು ಎಂದೋ ಅಥವಾ ಶಿಕ್ಷಣ ಸಂಸ್ಥೆಗಳ ಆಕರ್ಷಕ ಜಾಹೀರಾತುಗಳಿಗೆ ಮರುಳಾಗಿಯೋ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ.
ಫೈರ್ & ಸೇಫ್ಟಿ ಡಿಪ್ಲೊಮಾ ಎಂಬ ಹೆಸರು ಕೇಳಿದ ತಕ್ಷಣ ಹೆಚ್ಚಿನವರು ಇದು ಅಗ್ನಿಶಾಮಕ ದಳದ (Fire Service) ಕೆಲಸಕ್ಕೆ ಬೇಕಾದ ಕೋರ್ಸ್ ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ಅಗ್ನಿಶಾಮಕ ದಳಕ್ಕೂ ಮತ್ತು ಇಂಡಸ್ಟ್ರಿಯಲ್ ಸೇಫ್ಟಿ ಡಿಪ್ಲೊಮಾಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಸರ್ಕಾರಿ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡಲು ಕಠಿಣವಾದ ದೈಹಿಕ, ಲಿಖಿತ ಪರೀಕ್ಷೆ ಮತ್ತು ತರಬೇತಿಗಳ ಅಗತ್ಯವಿರುತ್ತದೆ. ಆದರೆ ಖಾಸಗಿ ಸಂಸ್ಥೆಗಳು ನೀಡುವ ಈ ‘ಫೈರ್ ಅಂಡ್ ಸೇಫ್ಟಿ’ ಕೋರ್ಸ್‌ಗಳಿಗೆ ಅಂತಹ ಯಾವುದೇ ಕಠಿಣ ಮಾನದಂಡಗಳಿಲ್ಲ ಎಂದು ಸಂಸ್ಥೆಯವರು ಹೇಳಿದರೂ, ಭವಿಷ್ಯದಲ್ಲಿ ಕೆಲಸ ಹುಡುಕುವಾಗ ವಿದ್ಯಾರ್ಹತೆಯ ಮಾನದಂಡಗಳು ಅತಿ ಮುಖ್ಯವಾಗುತ್ತವೆ.
ಇದನ್ನು ಓದಿದ್ದೀರಾ? ಕಲ್ಯಾಣ ಕರ್ನಾಟಕದ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು : ಕೃಷಿಕರ ಮಕ್ಕಳಿಗೆ ಶೇ.50 ಸೀಟು ಮೀಸಲು
ಅರ್ಹತೆ ಏನಿರಬೇಕು?
ನೀವು ‘Diploma in Fire and Safety (HSE)’ ಕೋರ್ಸ್ ಮಾಡಬೇಕೆಂದಿದ್ದರೆ, ಕನಿಷ್ಠ ಯಾವುದಾದರೂ ಒಂದು ಪದವಿ (Degree) ಅಥವಾ ಮೂರು ವರ್ಷಗಳ ಟೆಕ್ನಿಕಲ್ ಡಿಪ್ಲೊಮಾ ಮಾಡಿರಲೇಬೇಕು. SSLC ಅಥವಾ PUC ಮುಗಿಸಿದ ಕೂಡಲೇ ಈ ಕೋರ್ಸ್ ಮಾಡುವುದು ಖಂಡಿತ ಸೂಕ್ತವಲ್ಲ. ಕನಿಷ್ಠ ಪಕ್ಷ ಬಿ.ಎ (BA) ಪದವಿಯನ್ನಾದರೂ ಮುಗಿಸಿರುವುದು ಕ್ಷೇಮ.
ಈ ಕೋರ್ಸಿನಲ್ಲಿ ಏನು ಕಲಿಸುತ್ತಾರೆ?
ಈ ಕೋರ್ಸ್‌ನಲ್ಲಿ ಕೇವಲ ಬೆಂಕಿ ನಂದಿಸುವುದನ್ನು ಮಾತ್ರ ಕಲಿಸುವುದಿಲ್ಲ, ಬದಲಾಗಿ ಅವಘಡಗಳು ಸಂಭವಿಸಲು ಮೂಲ ಕಾರಣವೇನು (Root Cause), ಅದನ್ನು ತಡೆಗಟ್ಟುವುದು ಹೇಗೆ ಮತ್ತು ನಿರ್ವಹಣೆ ಮಾಡುವ ಬಗ್ಗೆ ಕಲಿಸಿಕೊಡಲಾಗುತ್ತದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ (Construction sites) ಅಪಘಾತಗಳಾಗದಂತೆ ಜನರು ಸುರಕ್ಷಿತವಾಗಿ ಕೆಲಸ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ‘Industrial and Construction Safety’ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ.
HSE ಎಂದರೆ ಏನು?
HSE ಎಂದರೆ Health, Safety, and Environment. ಕೆಲಸದ ಸ್ಥಳದಲ್ಲಿ ನೌಕರರ ಆರೋಗ್ಯ ಮತ್ತು ಸುರಕ್ಷತೆಯ ಮೇಲ್ವಿಚಾರಣೆ ಮಾಡುವುದು ಇದರ ಉದ್ದೇಶ. ಈ ಜವಾಬ್ದಾರಿಯನ್ನು ನಿರ್ವಹಿಸುವವರನ್ನು ಸೇಫ್ಟಿ ಆಫೀಸರ್ ಅಥವಾ HSE Officer ಎಂದು ಕರೆಯುತ್ತಾರೆ.
ಉದ್ಯೋಗಾವಕಾಶಗಳು ಹೇಗಿವೆ?
ಕೇವಲ ಈ ಬೇಸಿಕ್ ಕೋರ್ಸ್ ಮಾಡಿದ ತಕ್ಷಣ ನೌಕರಿ ಸಿಗುವುದು ಕಷ್ಟ. ನೀವು ವಿದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಬೇಕೆಂದರೆ NEBOSH (UK based) ಎಂಬ ಅಂತರಾಷ್ಟ್ರೀಯ ಪರೀಕ್ಷೆಯನ್ನು ಪೂರೈಸಬೇಕಾಗುತ್ತದೆ. ಈ ಸರ್ಟಿಫಿಕೇಟ್ ಇದ್ದರೆ ಮಾತ್ರ ನಿಮಗೆ ಉತ್ತಮ ಸಂಬಳದ ನೌಕರಿ ಸಿಗುವ ಸಾಧ್ಯತೆ ಹೆಚ್ಚು. ಈಗಾಗಲೇ ಫೀಲ್ಡ್‌ನಲ್ಲಿ ಅನುಭವ ಇರುವ ಇಂಜಿನಿಯರ್‌ಗಳು, ಸೂಪರ್ ವೈಸರ್ಗಳು ನೇರವಾಗಿ NEBOSH ಪರೀಕ್ಷೆ ಬರೆಯಬಹುದು.
ವಿದ್ಯಾರ್ಥಿಗಳಿಗೆ ಕಿವಿಮಾತು:
ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯ. ಗೆಳೆಯರು ಸೇರಿದರು ಎಂದೋ ಅಥವಾ ಶಿಕ್ಷಣ ಸಂಸ್ಥೆಗಳ ಆಕರ್ಷಕ ಜಾಹೀರಾತುಗಳಿಗೆ ಮರುಳಾಗಿಯೋ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಇಂದಿನ ದಿನಗಳಲ್ಲಿ ಯಾವುದೇ ಕಂಪನಿಗೆ ಸ್ಟಾಫ್ ಆಗಿ ಸೇರಲು ‘ಪದವಿ’ (Degree) ಕನಿಷ್ಠ ಅರ್ಹತೆಯಾಗಿದೆ. ಆದ್ದರಿಂದ ಮೊದಲು ನಿಮ್ಮ ಪದವಿಯನ್ನು ಪೂರ್ಣಗೊಳಿಸಿ, ನಂತರ ಇಂತಹ ವಿಶೇಷ ಕೋರ್ಸ್‌ಗಳತ್ತ ಗಮನಹರಿಸಿ.

ಅಲ್ ಅಮೀನ್ ಕೆ.ಪಿ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಕಡೇ ಶಿವಾಲಯ ನಿವಾಸಿ. ಫೈರ್ ಆಂಡ್ ಸೇಪ್ಟಿ ಇಂಜಿನಿಯರಿಂಗ್ ಪದವೀಧರ. ಕಳೆದ 14 ವರುಷಗಳಿಂದ ಅಬುಧಾಬಿಯ ಹಲವು ಖಾಸಗಿ ಕಂಪೆನಿಗಳ ತೈಲ ಘಟಕದಲ್ಲಿ ಸುರಕ್ಷತಾ ಅಧಿಕಾರಿ ಹಾಗು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಫೋಟೋಗ್ರಫಿ ಹಾಗು ಸುರಕ್ಷತಾ ವಿಷಯಗಳನ್ನು ಅಧ್ಯಯನ ಮಾಡಿ ಜನರಿಗೆ ಮಾಹಿತಿ ನೀಡುವುದು ಆಸಕ್ತಿ.



