ಅರಾವಳಿ ಪರ್ವತ ಶ್ರೇಣಿಯ ನಿಖರವಾದ ವ್ಯಾಪ್ತಿ (ಅದು ಎಲ್ಲೆಲ್ಲಿ ಹರಡಿದೆ ಎಂಬ ಮಾಹಿತಿ) ಎಷ್ಟು ಎಂಬುದನ್ನು ತಜ್ಞರ ಸಮಿತಿಯು ನಿರ್ಧರಿಸುವವರೆಗೂ, ಅಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಗ್ಚಿ ಅವರನ್ನುಗೊಂಡ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.
ಅರಾವಳಿ ಬೆಟ್ಟಗಳ ನಿಖರವಾದ ಗಡಿ ಅಥವಾ ವ್ಯಾಪ್ತಿ ಎಷ್ಟು ಎಂಬುದನ್ನು ತಜ್ಞರ ಸಮಿತಿಯೊಂದು ನಿರ್ಧರಿಸುವವರೆಗೂ, ಅಲ್ಲಿನ ಒಂದೇ ಒಂದು ಇಂಚು ಜಾಗದಲ್ಲಿಯೂ ಯಾವುದೇ ರೀತಿಯ ಗಣಿಗಾರಿಕೆ ನಡೆಯುವಂತಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಗಣಿಗಾರಿಕೆ ಮಾಡುವ ಗುತ್ತಿಗೆದಾರರು, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಗುತ್ತಿಗೆಗಳನ್ನು ಮುಂದುವರಿಸಲು ಮತ್ತು ಹೊಸ ಗುತ್ತಿಗೆಗಳನ್ನು ಪಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ನ್ಯಾಯಪೀಠವು ಈ ಮನವಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಹೊಸ ಸಮಿತಿಯ ವರದಿ ಬರುವವರೆಗೆ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.
ಇದನ್ನು ಓದಿದ್ದೀರಾ? ನಿರುದ್ಯೋಗಿಗಳು ‘ಜಿರಳೆಗಳ’ ಹಾಗೆ; ಮಾಧ್ಯಮ, RTI ಕಾರ್ಯಕರ್ತರಾಗಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ: ಸಿಜೆಐ ಸೂರ್ಯ ಕಾಂತ್
ಅರಾವಳಿ ಬೆಟ್ಟಗಳನ್ನು “ವಾಯುವ್ಯ ಭಾರತದ ಹಸಿರು ಶ್ವಾಸಕೋಶ” ಎಂದು ಕರೆಯಲಾಗುತ್ತದೆ. ಆದರೆ, ಪ್ರಭಾವಿ ಗಣಿಗಾರಿಕೆ ಮಾಫಿಯಾದಿಂದಾಗಿ ಈ ಸುಂದರ ನೈಸರ್ಗಿಕ ಪರಿಸರಕ್ಕೆ ಬಹಳ ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಜ್ಞರ ವರದಿ ಬಂದು ಪರಿಸರ ರಕ್ಷಣೆಯ ಬಗ್ಗೆ ಕೋರ್ಟ್‌ಗೆ ಸಮಾಧಾನವಾಗುವವರೆಗೆ ಯಾವ ಚಟುವಟಿಕೆಗೂ ಅಲ್ಲಿ ಜಾಗವಿಲ್ಲ ಎಂದಿದ್ದಾರೆ.
ಇದಕ್ಕೂ ಮೊದಲು, ಕೇವಲ ‘100-ಮೀಟರ್ ಎತ್ತರವಿರುವ ಪ್ರದೇಶಗಳನ್ನು’ ಮಾತ್ರ ಅರಾವಳಿ ಎಂದು ಪರಿಗಣಿಸುವ ವಿವಾದಾತ್ಮಕ ತೀರ್ಮಾನವೊಂದು ಆಗಿತ್ತು. ಇದರಿಂದ ಅರಾವಳಿ ಪರಿಸರ ನಾಶವಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದಾಗ, ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತಾನಾಗಿಯೇ ಮುಂದೆ ಬಂದು ಆ ಆದೇಶಕ್ಕೆ ತಡೆ ನೀಡಿತ್ತು. ಅಂದಿನಿಂದಲೇ ಅಲ್ಲಿನ ಎಲ್ಲ ಗಣಿಗಾರಿಕೆಗಳನ್ನು ನಿಲ್ಲಿಸಲಾಗಿದೆ.
ಈಗ ಅರಾವಳಿ ಬೆಟ್ಟಗಳ ನೈಸರ್ಗಿಕ ಪರಿಸರವನ್ನು ಉಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಒಂದು ‘ವಿಷಯ ತಜ್ಞರ ಸಮಿತಿ’ಯನ್ನು ರಚಿಸಲಿದೆ. ಈ ಸಮಿತಿಯು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಅರಾವಳಿ ಪರ್ವತಗಳ ಗಡಿಯನ್ನು ಹೊಸದಾಗಿ ಗುರುತಿಸಲಿದೆ. ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ರಚನೆಯಾಗುವ ಈ ಸಮಿತಿಯ ಅಂತಿಮ ನಿರ್ಧಾರ ಬರುವವರೆಗೂ ಅರಾವಳಿ ಪ್ರದೇಶದಲ್ಲಿ ಯಾರಿಗೂ ಕಲ್ಲು, ಮಣ್ಣು ತೆಗೆಯಲು ಅಥವಾ ಗಣಿಗಾರಿಕೆ ಮಾಡಲು ಅವಕಾಶವಿರುವುದಿಲ್ಲ.




