ನಿರಂತರ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳು ಇಂದು ಪ್ರತಿಯೊಂದು ಮನೆಯ ಡ್ರಾಯಿಂಗ್ ರೂಮ್‌ಗಳ ಪ್ರಮುಖ ಚರ್ಚೆಯ ವಿಷಯವಾಗಿವೆ. ಯುವಜನರ ತಾಳ್ಮೆ ನಶಿಸುತ್ತಿರುವುದನ್ನು ಅರಿತಿರುವ ನಾಯಕರು, ಮುಂಬರುವ ಚುನಾವಣೆಗಳಲ್ಲಿ ಆಗಬಹುದಾದ ರಾಜಕೀಯ ಹಾನಿಯನ್ನು ತಪ್ಪಿಸಿಕೊಳ್ಳಲು ಯುವಶಕ್ತಿ ಓಲೈಕೆಯ ತಂತ್ರಕ್ಕೆ ಮೊರೆಹೋಗಿದ್ದಾರೆ.
ಭ್ರಷ್ಟಾಚಾರ, ನಿರುದ್ಯೋಗ, ಪರೀಕ್ಷಾ ಅಕ್ರಮಗಳು ಹಾಗೂ ನಿರಂತರ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದಾದ್ಯಂತ ಯುವಜನರ ಆಕ್ರೋಶದ ಕಟ್ಟೆ ಒಡೆದಿದೆ. ದೆಹಲಿಯ ಜಂತರ್ ಮಂತರ್‌ನಿಂದ ಹಿಡಿದು ಜಾರ್ಖಂಡ್‌ನ ರಾಂಚಿಯವರೆಗೂ ಬೀದಿಗಿಳಿದು ಪ್ರತಿಭಟಿಸುತ್ತಿರುವ ಯುವಕರ ಆಕ್ರೋಶದ ಜ್ವಾಲೆ, ರಾಜಕೀಯ ನಾಯಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವ ಸಮುದಾಯ ಈಗ ಭ್ರಷ್ಟ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದು, ಈ ಅಸಮಾಧಾನ ಮುಂಬರುವ ಚುನಾವಣೆಗಳಲ್ಲಿ ತಮ್ಮ ಬುಡಕ್ಕೆ ಬಿಸಿ ಮುಟ್ಟಿಸಬಹುದು ಎಂಬ ಆತಂಕ ಹಾಗೂ ಎಚ್ಚರಿಕೆ ಇದೀಗ ಅಧಿಕಾರದಲ್ಲಿರುವ ಪ್ರತಿಯೊಬ್ಬ ನಾಯಕನನ್ನೂ ಕಾಡತೊಡಗಿದೆ.
ಯುವಜನರ ಈ ಸಿಟ್ಟನ್ನು ತಣಿಸುವ ಸ್ಪಷ್ಟ ಹಾಗೂ ಅನಿವಾರ್ಯ ಪ್ರಯತ್ನ ಈ ಬಾರಿಯ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಎದ್ದು ಕಾಣುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ದೇಶದ ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಭಾಷಣದ ಕೇಂದ್ರಬಿಂದು ‘ಯುವಶಕ್ತಿ’ ಮತ್ತು ‘ಯುವಜನರ ಕಲ್ಯಾಣ’ವಾಗಿತ್ತು. ಕೇವಲ ಸಾಂಪ್ರದಾಯಿಕ ಘೋಷಣೆಗಳಾಚೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸುಧಾರಣೆ ಹಾಗೂ ಪಾರದರ್ಶಕ ಉದ್ಯೋಗ ಸೃಷ್ಟಿಯ ಸಾಲು ಸಾಲು ಯೋಜನೆಗಳನ್ನು ಪ್ರಕಟಿಸಿ ಯುವಕರನ್ನು ಓಲೈಸುವ ಕಸರತ್ತು ಜೋರಾಗಿಯೇ ನಡೆಯಿತು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಜೆನ್-ಝೆಡ್’ (Gen-Z) ಮತ್ತು ‘ಜೆನ್-ಆಲ್ಫಾ’ (Gen-Alpha) ಪೀಳಿಗೆಯೇ ರಾಜ್ಯದ ಅತಿದೊಡ್ಡ ಶಕ್ತಿ ಎಂದು ಬಣ್ಣಿಸಿದ್ದಾರೆ. ನಕಲು ಮತ್ತು ನೇಮಕಾತಿ ಮಾಫಿಯಾ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಅವರು, ಕೃತಕ ಬುದ್ಧಿಮತ್ತೆ (ಎಐ), ಸೆಮಿಕಂಡಕ್ಟರ್, ರೊಬೊಟಿಕ್ಸ್ ಮತ್ತು ಸೈಬರ್ ಭದ್ರತೆಯಂತಹ ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೈ-ಟೆಕ್ ಉದ್ಯೋಗ ಸೃಷ್ಟಿಯ ಭರವಸೆ ನೀಡಿದರು. ಅಲ್ಲದೆ, 16ರಿಂದ 35 ವರ್ಷದ ಯುವಕರಿಗಾಗಿ ಹೊಸ ಯುವ ನೀತಿಯನ್ನು ಘೋಷಿಸಿದ ಅವರು, ‘ಯುವ ಉದ್ಯಮಿ ಯೋಜನೆ’ಯಡಿ ಬಡ್ಡಿರಹಿತ ಹಾಗೂ ಗ್ಯಾರಂಟಿ ರಹಿತ ಸಾಲ ನೀಡಿ, ಯುವಕರನ್ನು ಕೇವಲ ಉದ್ಯೋಗಾಕಾಂಕ್ಷಿಗಳ ಬದಲಾಗಿ ಉದ್ಯೋಗದಾತರನ್ನಾಗಿ ಮಾಡುವ ಆಶಯ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು 2027ನೇ ವರ್ಷವನ್ನು ‘ಯುವ ವರ್ಷ’ ಎಂದು ಘೋಷಿಸುವ ಮೂಲಕ ಯುವಕರ ವಿಶ್ವಾಸ ಗಳಿಸಲು ಯತ್ನಿಸಿದ್ದಾರೆ. ಪ್ರತಿವರ್ಷ ಒಂದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ, ಐಟಿಐ ಮೂಲಕ ಮತ್ತೊಂದು ಲಕ್ಷ ಯುವಕರಿಗೆ ಕೌಶಲ ತರಬೇತಿ ಹಾಗೂ ಗ್ಲೋಬಲ್ ಸ್ಕಿಲ್ ಪಾರ್ಕ್‌ನಲ್ಲಿ 10 ಸಾವಿರ ಯುವಕರಿಗೆ ತರಬೇತಿ ನೀಡುವ ಬೃಹತ್ ಭರವಸೆ ನೀಡಿದ್ದಾರೆ. ಕೇವಲ ಕೈಗಾರಿಕೆಗಳಷ್ಟೇ ಅಲ್ಲದೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲೂ ಉದ್ಯೋಗ ಕಂಡುಕೊಳ್ಳಲು ಯುವಕರಿಗೆ ಕರೆ ನೀಡಿದ ಅವರು, ಪ್ರತಿ ಜಿಲ್ಲೆಯಲ್ಲೂ ನೂತನ ಎಂಎಸ್‌ಎಂಇ (MSME) ಪಾರ್ಕ್‌ಗಳ ಸ್ಥಾಪನೆ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ನೇಮಕಾತಿಗಳು ಹಾಗೂ ರೋಗಿಗಳ ಡಿಜಿಟಲ್ ದಾಖಲಾತಿ ವ್ಯವಸ್ಥೆಯ ಭರವಸೆ ನೀಡಿದ್ದಾರೆ.
ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು 7 ಕೋಟಿ ರೂ. ವೆಚ್ಚದ ‘ಮುಖ್ಯಮಂತ್ರಿ ಯುವ ಭವಿಷ್ಯ ನಿರ್ಮಾಣ ಯೋಜನೆ’ ಪ್ರಕಟಿಸಿದ್ದಾರೆ. ಇದರ ಮೊದಲ ಹಂತದಲ್ಲಿ 11 ಮತ್ತು 12ನೇ ತರಗತಿಯ 10,000 ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್ ನೀಡಲಾಗುವುದು. ಜೊತೆಗೆ ‘ಯುವ ಆಯೋಗ’ ರಚನೆ, ಮಕ್ಕಳಿಗಾಗಿ ‘ಬಾಲ ವೀರ್ತಾ ಪುರಸ್ಕಾರ’ ಹಾಗೂ 18ರಿಂದ 30 ವರ್ಷದೊಳಗಿನ ಯುವಕರಿಗೆ ಸ್ವಯಂ ಉದ್ಯೋಗ ಯೋಜನೆ ಘೋಷಿಸಿದ್ದಾರೆ. ಇತ್ತ ಗೋವಾದಲ್ಲಿ ಸಿಎಂ ಪ್ರಮೋದ್ ಸಾವಂತ್, ರಾಜ್ಯ ಸಿಬ್ಬಂದಿ ಆಯ್ಕೆ ಆಯೋಗದ ಮೂಲಕ ತಕ್ಷಣವೇ 2,000 ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಭ್ರಷ್ಟಾಚಾರದ ನೇರ ಬಿಸಿ ಅನುಭವಿಸುತ್ತಿರುವ ಬಿಹಾರ ಮತ್ತು ಜಾರ್ಖಂಡ್‌ನಲ್ಲೂ ಯುವಕರನ್ನು ಸಮಾಧಾನಪಡಿಸುವ ಯತ್ನಗಳು ಜೋರಾಗಿವೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಜೆಪಿಎಸ್‌ಸಿ (JPSC) ಮತ್ತು ಜೆಎಸ್‌ಎಸ್‌ಸಿ (JSSC) ಪರೀಕ್ಷಾ ಅಕ್ರಮಗಳ ಕುರಿತು ಕಠಿಣ ಕ್ರಮದ ಭರವಸೆ ನೀಡಿದ್ದಲ್ಲದೆ, ಯುವಕರ ಕನಸುಗಳನ್ನು ಕಾಪಾಡುವುದು ತಮ್ಮ ವೈಯಕ್ತಿಕ ಜವಾಬ್ದಾರಿ ಎಂದಿದ್ದಾರೆ. ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲು ‘ಛಾತ್ರೋನ್ ಕೀ ಬಾತ್ – ಛಾತ್ರೋನ್ ಕೆ ಸಾಥ್’ ಎಂಬ ವಿನೂತನ ಕಾರ್ಯಕ್ರಮ ಘೋಷಿಸಿದ್ದಾರೆ. ಇತ್ತ ಬಿಹಾರ ಸರ್ಕಾರವು ಪರೀಕ್ಷಾ ವ್ಯವಸ್ಥೆಯನ್ನು ಶುದ್ಧೀಕರಿಸಲು ಪ್ರತ್ಯೇಕ ಸುಧಾರಣಾ ಸಮಿತಿ ರಚನೆ ಹಾಗೂ 30 ದಿನಗಳೊಳಗೆ ವಿದ್ಯಾರ್ಥಿಗಳ ಕುಂದುಕೊರತೆ ಬಗೆಹರಿಸಲು ಪ್ರತ್ಯೇಕ ‘ವಿದ್ಯಾರ್ಥಿ ಬೆಂಬಲ ಪೋರ್ಟಲ್’ ಆರಂಭಿಸುವ ನಿರ್ಧಾರ ಪ್ರಕಟಿಸಿದೆ.
ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪೊಲೀಸ್ ನೇಮಕಾತಿ ಪರೀಕ್ಷೆ ಪೇಪರ್ ಲೀಕ್ ಹಗರಣವನ್ನು ನೆನಪಿಸಿ, ತಮ್ಮ ಸರ್ಕಾರ ಕಳಂಕಿತ ನೇಮಕಾತಿ ಮಂಡಳಿಯನ್ನು ವಿಸರ್ಜಿಸಿ ಪಾರದರ್ಶಕತೆ ತಂದಿದೆ ಹಾಗೂ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದೆ ಎಂದು ಸಮರ್ಥಿಸಿಕೊಂಡರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಾಶ್ಚಿಮಾತ್ಯ ‘ಜೆನ್-ಝೆಡ್’ ಪರಿಕಲ್ಪನೆಯನ್ನು ತಳ್ಳಿಹಾಕಿ, ಯುವಜನರನ್ನು ತಮ್ಮ ‘ಮಕ್ಕಳು’ ಎಂದು ಬಣ್ಣಿಸುವ ಮೂಲಕ ‘ಯುವ ಸಬಲೀಕರಣ ಮತ್ತು ಅಭಿವೃದ್ಧಿ ಇಲಾಖೆ’ ತೆರೆಯುವುದಾಗಿ ತಿಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಸಿಎಂ ವಿಷ್ಣುದೇವ್ ಸಾಯ್ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕರಿಗೆ ಆರ್ಥಿಕ ಮತ್ತು ಪೂರಕ ನೆರವು ನೀಡಲು ‘ಸಿಜಿ ಅಸಿಸ್ಟೆಂಟ್ ಫಾರ್ ಕಾಂಪಿಟೇಟಿವ್ ಎಕ್ಸಾಮ್’ ಯೋಜನೆ ಪ್ರಕಟಿಸಿದ್ದಾರೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಮೀಸಲಾತಿ ವ್ಯಾಪ್ತಿಯ ಯುವಕರಿಗೆ ವಿದೇಶಿ ವ್ಯಾಸಂಗದ ಸಾಲದ ವಾರ್ಷಿಕ ಆದಾಯ ಮಿತಿಯನ್ನು 6 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದಾರೆ. ಇತ್ತ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಬಿಕಾನೇರ್‌ನಲ್ಲಿ ನೇರವಾಗಿ ಯುವಕರೊಂದಿಗೆ ಸಂವಾದ ನಡೆಸಿ ಭರವಸೆ ತುಂಬುವ ಯತ್ನ ಮಾಡಿದ್ದಾರೆ.
ನಿರಂತರ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳು ಇಂದು ಪ್ರತಿಯೊಂದು ಮನೆಯ ಡ್ರಾಯಿಂಗ್ ರೂಮ್‌ಗಳ ಪ್ರಮುಖ ಚರ್ಚೆಯ ವಿಷಯವಾಗಿವೆ. ಯುವಜನರ ತಾಳ್ಮೆ ನಶಿಸುತ್ತಿರುವುದನ್ನು ಅರಿತಿರುವ ನಾಯಕರು, ಮುಂಬರುವ ಚುನಾವಣೆಗಳಲ್ಲಿ ಆಗಬಹುದಾದ ರಾಜಕೀಯ ಹಾನಿಯನ್ನು ತಪ್ಪಿಸಿಕೊಳ್ಳಲು ಈ ಓಲೈಕೆಯ ತಂತ್ರಕ್ಕೆ ಮೊರೆಹೋಗಿದ್ದಾರೆ. ಯುವಜನರ ಓಲೈಕೆಯ ಸುತ್ತ ಗಿರಕಿ ಹೊಡೆಯುತ್ತಿರುವ ಈ ಸಾಲು ಸಾಲು ಹೊಸ ಯೋಜನೆಗಳು ಮತ್ತು ಆಕರ್ಷಕ ಭಾಷಣಗಳು, ಯುವಕರ ಆಕ್ರೋಶದ ಕಟ್ಟೆಯನ್ನು ಭವಿಷ್ಯದಲ್ಲಿ ಎಷ್ಟರಮಟ್ಟಿಗೆ ತಡೆಹಿಡಿಯಲಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ .




