ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗಾಗಿ ಬೃಹತ್ ಪ್ರಮಾಣದ ಅರಣ್ಯ ಭೂಮಿಯನ್ನು ಹಸ್ತಾಂತರಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅರಣ್ಯ ಸಲಹಾ ಸಮಿತಿ (FAC) ತಾತ್ವಿಕ ಅನುಮೋದನೆ ನೀಡಿದೆ. ಇದು ಪರಿಸರವಾದಿಗಳು ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಉತ್ತರ ಕರಣಪುರ ಕಲ್ಲಿದ್ದಲು ಕ್ಷೇತ್ರದಲ್ಲಿರುವ Ashok Expansion Opencast Coal Mining Project (OCP – ಅಶೋಕ್ ವಿಸ್ತರಣಾ ತೆರೆದ ಕಲ್ಲಿದ್ದಲು ಗಣಿಗಾರಿಕೆ ಯೋಜನೆ)ಗಾಗಿ ಚತ್ರಾ ದಕ್ಷಿಣ ಅರಣ್ಯ ವಿಭಾಗಕ್ಕೆ ಸೇರಿದ 928.03 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಯೋಜನೆಯು ವಾರ್ಷಿಕ 20 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿ ಹೊಂದಿದೆ. ಈ ಯೋಜನೆಯ ಅನುಷ್ಠಾನದಿಂದಾಗಿ ಪರಿಸರ ವ್ಯವಸ್ಥೆಗೆ ಅತ್ಯಂತ ಮುಖ್ಯವಾದ 2.43 ಲಕ್ಷ ಸಾಲ್ ಮರಗಳು ಸೇರಿದಂತೆ ಬರೋಬ್ಬರಿ 5.67 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಈ ಪ್ರದೇಶವು ಅಧಿಕೃತವಾಗಿ ‘ಸಂರಕ್ಷಿತ ಪ್ರದೇಶ’ ವ್ಯಾಪ್ತಿಗೆ ಬರದಿದ್ದರೂ, ಇಲ್ಲಿ ಆನೆಗಳು, ಕತ್ತೆಕಿರುಬ , ನರಿಗಳು, ಬಂಗಾಳದ ನರಿಗಳು ಮತ್ತು ಹೆಬ್ಬಾವುಗಳಂತಹ ಅಪರೂಪದ ವನ್ಯಜೀವಿಗಳು ನೆಲೆಸಿದ್ದು, ಅವುಗಳ ಆವಾಸಸ್ಥಾನಕ್ಕೆ ದೊಡ್ಡ ಕುತ್ತು ಎದುರಾಗಿದೆ.
ಜಾರ್ಖಂಡ್ ರಾಜ್ಯವು ಈಗಾಗಲೇ ತೀವ್ರತರವಾದ ಮಾನವ-ಆನೆ ಸಂಘರ್ಷವನ್ನು ಎದುರಿಸುತ್ತಿದ್ದು, ಅರಣ್ಯ ನಾಶ, ಗಣಿಗಾರಿಕೆ ಮತ್ತು ಕೃಷಿ ಭೂಮಿಯ ವಿಸ್ತರಣೆಯಿಂದಾಗಿ ಆನೆಗಳ ಆವಾಸಸ್ಥಾನಗಳು ಛಿದ್ರಗೊಂಡಿವೆ. ಭಾರತೀಯ ವನ್ಯಜೀವಿ ಸಂಸ್ಥೆಯ 2000 ರಿಂದ 2023ರವರೆಗಿನ ದೀರ್ಘಕಾಲೀನ ಅಧ್ಯಯನದ ಪ್ರಕಾರ, ರಾಜ್ಯದ 22 ಅರಣ್ಯ ವಿಭಾಗಗಳಲ್ಲಿ 1,740 ಮಾನವ-ಆನೆ ಸಂಘರ್ಷ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1,340 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 400 ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ, 2026ರ ಆರಂಭಿಕ ತಿಂಗಳುಗಳಲ್ಲೇ ಆನೆ ದಾಳಿಗೆ 20 ಮಂದಿ ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 928 ಹೆಕ್ಟೇರ್ ಅರಣ್ಯ ನಾಶವಾದರೆ ಆನೆಗಳ ಸಂಚಾರ ಮಾರ್ಗಕ್ಕೆ ಮತ್ತಷ್ಟು ಅಡ್ಡಿಯಾಗಿ ಸಾವು-ನೋವುಗಳು ಇನ್ನಷ್ಟು ಹೆಚ್ಚಾಗುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ಆರಂಭಿಸುವ ಮುನ್ನ ಜಾರ್ಖಂಡ್‌ನ ಮುಖ್ಯ ವನ್ಯಜೀವಿ ಪರಿಪಾಲಕರ ಅನುಮೋದನೆಯೊಂದಿಗೆ ಸ್ಥಳೀಯ ಹಾಗೂ ಗ್ರಾಮ ಮಟ್ಟದ ವನ್ಯಜೀವಿ ನಿರ್ವಹಣಾ ಯೋಜನೆಯನ್ನು ರೂಪಿಸಬೇಕು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯಿಂದ ದೀರ್ಘಕಾಲೀನ ಮೇಲ್ವಿಚಾರಣೆ ನಡೆಸಬೇಕು ಎಂದು ಸಮಿತಿ ಷರತ್ತು ವಿಧಿಸಿದ್ದು, ಇದರ ಸಂಪೂರ್ಣ ವೆಚ್ಚವನ್ನು ಗಣಿಗಾರಿಕೆ ಸಂಸ್ಥೆಯೇ ಭರಿಸಬೇಕಾಗಿದೆ.
ಇದೇ ರೀತಿಯ ಮತ್ತೊಂದು ಬೆಳವಣಿಗೆಯಲ್ಲಿ, ಪರಿಸರ ಸಚಿವಾಲಯದ ಮಹಾನಿರ್ದೇಶಕ ಸಂತೋಷ್ ತಿವಾರಿ ನೇತೃತ್ವದ ಸಮಿತಿಯು ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಮಚ್ಚರೇವಾ ನೀರಾವರಿ ಯೋಜನೆಗಾಗಿ 492.579 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಮೊದಲ ಹಂತದ ಅನುಮೋದನೆ ನೀಡಿದೆ. ಹುಲಿ, ಚಿರತೆ, ಕರಡಿ ಮತ್ತು ನರಿಗಳ ಆವಾಸಸ್ಥಾನವಾಗಿರುವ ಈ ಅರಣ್ಯ ಪ್ರದೇಶವೂ ನೀರಾವರಿ ಯೋಜನೆಯಿಂದ ನಾಶವಾಗುವ ಹಂತದಲ್ಲಿದೆ. ದೇಶದ ಇಂಧನ ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇಂತಹ ಯೋಜನೆಗಳು ಅನಿವಾರ್ಯ ಎಂದು ಸರ್ಕಾರಗಳು ಪ್ರತಿಪಾದಿಸಿದರೂ, ಲಕ್ಷಾಂತರ ಮರಗಳ ಮಾರಣಹೋಮ ಮತ್ತು ವನ್ಯಜೀವಿಗಳ ಆವಾಸಸ್ಥಾನದ ನಾಶವು ದೀರ್ಘಾವಧಿಯಲ್ಲಿ ಹವಾಮಾನ ವೈಪರೀತ್ಯ ಹಾಗೂ ಮಾನವ-ವನ್ಯಜೀವಿ ಸಂಘರ್ಷವನ್ನು ತೀವ್ರಗೊಳಿಸುತ್ತದೆ. ಆದ್ದರಿಂದ ಕೇವಲ ಕಾಗದದ ಮೇಲಿನ ನಿರ್ವಹಣಾ ಯೋಜನೆಗಳಿಗಿಂತ, ಅವುಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಪರ್ಯಾಯ ಅರಣ್ಯೀಕರಣದತ್ತ ಸರ್ಕಾರಗಳು ಗಂಭೀರ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ.



