ಭಯವನ್ನೇ ಬಳಸಿಕೊಂಡು ಹಾರರ್ ಸಿನಿಮಾ ಮಾಡುವವರು ತಮ್ಮ ಬೊಕ್ಕಸ ತುಂಬಿಸಿಕೊಂಡಿದ್ದಾರೆ. ಆದರೆ ಇಂತಹ ಸಿನಿಮಾದ ಪ್ರಭಾವದಿಂದಾಗಿ ಅಮೆರಿಕ ಮತ್ತು ಬ್ರಿಟನ್ನಲ್ಲಿ ಅದೆಷ್ಟೋ ಜೋಕರ್ಗಳು ತಮ್ಮ ವೃತ್ತಿಜೀವನವನ್ನೇ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಮೆರಿಲ್ಯಾಂಡ್ನ ಪ್ರಸಿದ್ಧ ವೃತ್ತಿಪರ ಜೋಕರ್ 'ಲೋ ಲೋ' ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಕ್ಲೀವ್ಲ್ಯಾಂಡ್ ಕ್ಲಿನಿಕ್ ಮತ್ತು ಜಾಗತಿಕ ಆರೋಗ್ಯ ಸಂಸ್ಥೆಗಳ ವರದಿಗಳ ಪ್ರಕಾರ, 'ಪೆಡಿಯೋಫೋಬಿಯಾ'ಕ್ಕೆ ಒಳಗಾಗುವವರಲ್ಲಿ ಬಹುಪಾಲು ಜನರು ಬಾಲ್ಯದಲ್ಲಿ 'ಹಾರರ್' ಸಿನಿಮಾಗಳಲ್ಲಿ ಗೊಂಬೆಗಳು ಕಟುಕತನ ಪ್ರದರ್ಶಿಸುವುದನ್ನು ನೋಡಿರುತ್ತಾರೆ.
ಸಿನಿಮಾ ರಂಗದಲ್ಲಿರುವ ವಿವಿಧ ಜಾನರ್ ಚಿತ್ರಗಳದ್ದು ಒಂದು ಇತಿಹಾಸವಾದರೆ, ‘ಹಾರರ್’ ಅಥವಾ ಭಯಾನಕ ಪ್ರಕಾರಕ್ಕೇ (Genre) ಇನ್ನೊಂದು ತೆರನಾದ ದೀರ್ಘ ಇತಿಹಾಸವಿದೆ. ಸಾಮಾನ್ಯವಾಗಿ ಈ ಹಿಂದೆ ಹಾರರ್ ಸಿನಿಮಾ ಎಂದರೆ ಕತ್ತಲ ಕೋಣೆ, ಹಳೆಯ ಪಾಳುಬಿದ್ದ ಬಂಗಲೆ, ವಿಚಿತ್ರ ಶಬ್ದ ಹಾಗೂ ಮೈ ಜುಂ ಎನಿಸುವ ಹಿನ್ನೆಲೆ ಸಂಗೀತ ಇವಿಷ್ಟೇ ಆ ಸಿನಿಮಾದ ವಸ್ತುವಿಷಯಗಳು ಎನ್ನುವಂತಿತ್ತು. ಆದರೆ, ಇಂದಿನ ಹಾರರ್ ಸಿನಿಮಾಗಳು ಪ್ರೇಕ್ಷಕರನ್ನು ಹೆದರಿಸಲು ಕತ್ತಲೆಯನ್ನಷ್ಟೇ ನಂಬಿಕೊಂಡಿಲ್ಲ. 1896ರಲ್ಲಿ ಫ್ರೆಂಚ್ ಚಲನಚಿತ್ರ ನಿರ್ಮಾಪಕ ಜಾರ್ಜಸ್ ಮೆಲೀಸ್ ನಿರ್ದೇಶಿಸಿದ ವಿಶ್ವದ ಮೊದಲ ಹಾರರ್ ಸಿನಿಮಾ “ಲೆ ಮ್ಯಾನೊರ್ ಡು ಡಯಾಬಲ್” (Le Manoir du Diable- The House of the Devil)ನಿಂದ ಹಿಡಿದು ಇತ್ತೀಚಿನ ‘ದೀ ಮಂಕಿ’ಯವರೆಗೂ ಹಲವು ಭಯಂಕರ ಸಿನಿಮಾಗಳು ಪ್ರೇಕ್ಷಕರನ್ನ ತರಗುಟ್ಟಿಸಿವೆ.
ಚಿತ್ರದಲ್ಲಿ ವಿಭಿನ್ನತೆ ತರುವ ಧಾವಂತದಲ್ಲಿ ಹಾರರ್ ಸಿನಿಮಾಗಳ ಅದರಲ್ಲೂ ಇತ್ತೀಚಿನ ಹಾರರ್ ಸಿನಿಮಾಗಳ ಕಥಾವಸ್ತುಗಳು ಎಷ್ಟು ಬದಲಾಗುತ್ತಿದೆಯೆಂದರೆ, ನಿತ್ಯ ನೋಡುವ, ಬಳಸುವ ಸಾಮಾನ್ಯ ವಸ್ತುಗಳನ್ನೇ ದೆವ್ವಗಳಂತೆ ಬಿಂಬಿಸಿ ಭಯಪಡುವಂತೆ ಮಾಡಲಾಗುತ್ತಿದೆ. ಸುಂದರವಾದ ಜಾಗಗಳು, ಮನೆಗಳು, ಮುದ್ದು ಮುದ್ದಾದ ಗೊಂಬೆಗಳು, ನಗುತರಿಸುವ ಜೋಕರ್ ಮುಖಗಳೇ ಇಂದಿನ ಹಾರರ್ ಸಿನಿಮಾಗಳ ಭೂತಗಳು. ಅವುಗಳು ನೋಡುಗರನ್ನ ಎಷ್ಟು ಪ್ರಭಾವಿಸುತ್ತವೆ ಎಂದರೆ, ಸಿನಿಮಾ ನೋಡಿ ಕೆಲ ದಿನಗಳು ಕಳೆದರೂ, ಪಕ್ಕದಲ್ಲಿ ಕೂತಿರುವ ಚಿಕ್ಕ ಆಟಿಕೆ ಈಗಲೋ ಆಗಲೇ ಎದ್ದು ಬಂದು ನಮ್ಮನ್ನ ತಿವಿದುಬಿಡುತ್ತದೇನೋ ಎನಿಸುವಷ್ಟು! ಈ ಹೊಸ ಮಾದರಿಯ ಭಯ ಸೃಷ್ಟಿಸುವ ಸಿನಿಮಾಗಳಿಗೆ ಒಂದು ಪ್ರೇಕ್ಷಕ ವರ್ಗವೇ ಇದೆ.
ಇದನ್ನು ಓದಿದ್ದೀರಾ? ಮಾಸ್ ಸಿನಿಮಾಗಳ ನಡುವೆ ʼಭೂತ್ಬಂಗ್ಲಾʼ ಆಗಲಿದೆಯಾ ಹಾರರ್ ಹಿಟ್?
ಇಟ್ (IT – 2017)
ಈ ಸಿನಿಮಾಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಖ್ಯಾತ ಹಾರರ್ ಲೇಖಕ ಸ್ಟೀಫನ್ ಕಿಂಗ್ (Stephen King) ಅವರ ಕಾದಂಬರಿ ಆಧಾರಿತ ಚಿತ್ರ ʼಇಟ್ʼ (IT). ಸರ್ಕಸ್ಗಳಲ್ಲಿ ಬಣ್ಣ ಬಳಿದುಕೊಂಡು ಬರುವ ಜೋಕರ್ನನ್ನು ಕಂಡರೆ ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಈ ಪಾತ್ರವನ್ನು ಇಡೀ ವಿಶ್ವವೇ ಭಯದಿಂದ ನೋಡುವಂತೆ ಮಾಡಿದ್ದು ಈ ಸಿನಿಮಾ. ಮಕ್ಕಳು ಜೋಕರ್ನ ಆ ವಿಚಿತ್ರ ನಗು ಮತ್ತು ಅಚ್ಚ ಬೆಳ್ಳಗಿನ ಮುಖದ ಹಿಂದಿನಿಂದ ಏನೋ ತೂರಿ ಬರುತ್ತದೆ ಎಂದುಕೊಂಡು ಹೆದರುತ್ತಿದ್ದರು.

ಈ ಸಿನಿಮಾ ಎಷ್ಟು ಪ್ರಭಾವ ಬೀರಿತ್ತೆಂದರೆ, ನಿಜ ಜೀವನದಲ್ಲಿ ಸರ್ಕಸ್ ಅಥವಾ ಪಾರ್ಟಿಗಳಲ್ಲಿ ಜೋಕರ್ ವೇಷ ಹಾಕುವವರ ವೃತ್ತಿಗೆ ಹೊಡೆತ ಬಿದ್ದಿತ್ತು. 2017ರಲ್ಲಿ ‘IT’ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಜಗತ್ತಿನ ಅತಿ ದೊಡ್ಡ ಜೋಕರ್ಗಳ ಒಕ್ಕೂಟವಾದ ವಿಶ್ವ ಜೋಕರ್ ಸಂಸ್ಥೆ – World Clown Association (WCA) ಅಧಿಕೃತ ಪ್ರಕಟಣೆ ಹೊರಡಿಸಿತ್ತು. WCA ಅಧ್ಯಕ್ಷರಾಗಿದ್ದ ಪ್ಯಾಮ್ ಮೂಡಿ ಹಲವು ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ, “ಹಲವು ವೃತ್ತಿಪರ ಜೋಕರ್ಗಳ ಬುಕಿಂಗ್ಗಳು ರದ್ದಾಗುತ್ತಿವೆ. ಶಾಲೆಗಳಿಗೆ ಹೋಗಿ ಕಾರ್ಯಕ್ರಮ ನೀಡಲು ಹೋದಾಗ ಮಕ್ಕಳನ್ನು ಹೆದರಿಸದಂತೆ ನಮಗೆ ನಿರ್ಬಂಧ ಹೇರಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
ಸಿನಿಮಾದ ಪ್ರಭಾವದಿಂದಾಗಿ ಅಮೆರಿಕ ಮತ್ತು ಬ್ರಿಟನ್ನಲ್ಲಿ ಅದೆಷ್ಟೋ ಜೋಕರ್ಗಳು ತಮ್ಮ ವೃತ್ತಿಜೀವನವನ್ನೇ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಮೆರಿಲ್ಯಾಂಡ್ನ ಪ್ರಸಿದ್ಧ ವೃತ್ತಿಪರ ಜೋಕರ್ ‘ಲೋ ಲೋ’ (ನಿಜವಾದ ಹೆಸರು ರೋನಿ ರೋಜಾಸ್) ಮಾಧ್ಯಮಗಳ ಮುಂದೆ, “ನಾವು ಜನರನ್ನು ನಗಿಸಲು ಕಷ್ಟಪಡುತ್ತೇವೆ. ಆದರೆ ಈ ಸಿನಿಮಾ ನಮ್ಮ ಇಡೀ ವೃತ್ತಿ ಜೀವನವನ್ನೇ ಹಾಳುಮಾಡುತ್ತಿದೆ. ಪೋಷಕರು ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದರು. ಬಳಿಕ ಬಿಡುಗಡೆಯಾದ ಜೋಕರ್ ಸಿನಿಮಾ ಕೂಡ ಜನರಲ್ಲಿ ಭಯ ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು.
ದಿ ಕಂಜ್ಯೂರಿಂಗ್ (The Conjuring) ಮತ್ತು ಚಕ್ಕಿ (Chucky)
ದಿ ಕಂಜ್ಯೂರಿಂಗ್ (The Conjuring) ಸಿನಿಮಾ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಆ ಭಯಾನಕ ಗೊಂಬೆ — ಅನ್ನಬೆಲ್ಲೆ (Annabelle). ಸಾಮಾನ್ಯವಾಗಿ ಮಕ್ಕಳು ಇಷ್ಟಪಡುವ, ಮುದ್ದಾಡುವ ಗೊಂಬೆಗಳನ್ನು ಇಡೀ ಜಗತ್ತೇ ನೋಡಿ ಹೆದರುವಂತೆ ಮಾಡಿದ್ದು ಈ ಸರಣಿ ಸಿನಿಮಾ. ನಿರ್ದೇಶಕ ಜೇಮ್ಸ್ ವಾನ್ ಅತ್ಯಂತ ಸಾಮಾನ್ಯವಾದ ಆಟದ ವಸ್ತುವನ್ನು ಒಂದು ಪರಮ ಭಯಾನಕ ಸಂಕೇತವಾಗಿ ಬದಲಾಯಿಸಿದ್ದರು. ತುಂಬಾ ಮುದ್ದಾಗಿದ್ದ ‘ರಾಗೆಡಿ ಆನ್’ (Raggedy Ann) ಎಂಬ ಬಟ್ಟೆಯ ಗೊಂಬೆಯನ್ನು ಈ ಸಿನಿಮಾದಲ್ಲಿ ದೆವ್ವವಾಗಿಸಲಾಗಿದೆ. ಚಕ್ಕಿ ಸಿನಿಮಾದಲ್ಲಿ ಗುಡ್ ಗೈ ಬ್ರಾಂಡ್ನ ಮುದ್ದಾದ ಗೊಂಬೆಯೊಂದನ್ನು ವಿಚಿತ್ರವಾಗಿ ಮತ್ತು ಭಯಾನಕವಾಗಿ ತೋರಿಸಲಾಗಿದೆ.

ಮಕ್ಕಳ ಮುಗ್ಧತೆಯ ಸಂಕೇತವಾದ ಗೊಂಬೆಯನ್ನು ದೆವ್ವದಂತೆ ತೋರಿಸಿದ್ದು ಪ್ರೇಕ್ಷಕರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಒಂದು ರೀತಿಯ ‘ಪೆಡಿಯೋಫೋಬಿಯಾ’ (Pediophobia – ಗೊಂಬೆಗಳನ್ನು ಕಂಡರೆ ಭಯ ಬೀಳುವುದು) ಸೃಷ್ಟಿಸಲು ಕಾರಣವಾಯಿತು. ಮನೋವಿಜ್ಞಾನದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಅವರು 1919ರಲ್ಲಿ ಬರೆದ ‘ದ ಅನ್ಕ್ಯಾನಿ’ (The Uncanny / Das Unheimliche) ಎಂಬ ಪ್ರಬಂಧದಲ್ಲಿ ಈ ವಿದ್ಯಮಾನವನ್ನು ದಾಖಲಿಸಿದ್ದಾರೆ. ಅವರ ಪ್ರಕಾರ ನಮಗೆ ಅತ್ಯಂತ ಪರಿಚಿತವಾಗಿರುವ ಮತ್ತು ಸುರಕ್ಷಿತ ಎನಿಸುವ ವಸ್ತುಗಳನ್ನು (ಉದಾಹರಣೆಗೆ ಗೊಂಬೆಗಳು) ಇದ್ದಕ್ಕಿದ್ದಂತೆ ಅಪರಿಚಿತ ಅಥವಾ ಜೀವಂತವಾಗಿರುವಂತೆ ಬಿಂಬಿಸಿದಾಗ ಮಾನವನ ಮೆದುಳು ತೀವ್ರ ಆತಂಕಕ್ಕೆ ಒಳಗಾಗುತ್ತದೆ. ಗೊಂಬೆಗಳಿಗೆ ಮನುಷ್ಯನ ತರಹದೇ ಕಣ್ಣು, ಮೂಗು ಮುಖವಿದ್ದರೂ ಅವುಗಳಲ್ಲಿ ಜೀವವಿರುವುದಿಲ್ಲ. ಆದರೆ ಹಾರರ್ ಸಿನಿಮಾಗಳಲ್ಲಿ ಅವು ಕಣ್ಣು ಮಿಟುಕಿಸುವುದು ಅಥವಾ ಚಲಿಸುವುದನ್ನು ತೋರಿಸಿದಾಗ, ಮೆದುಳು ಅದನ್ನು ‘ಅಸಹಜ’ ಎಂದು ಗುರುತಿಸಿ ಭಯ (Phobia) ಸೃಷ್ಟಿಸುತ್ತದೆ.
ಇನ್ನು ಕ್ಲೀವ್ಲ್ಯಾಂಡ್ ಕ್ಲಿನಿಕ್ ಮತ್ತು ಜಾಗತಿಕ ಆರೋಗ್ಯ ಸಂಸ್ಥೆಗಳ ವರದಿಗಳ ಪ್ರಕಾರ, ಪೆಡಿಯೋಫೋಬಿಯಾಕ್ಕೆ ಒಳಗಾಗುವವರಲ್ಲಿ ಬಹುಪಾಲು ಜನರು ಬಾಲ್ಯದಲ್ಲಿ ಹಾರರ್ ಸಿನಿಮಾಗಳಲ್ಲಿ ಗೊಂಬೆಗಳು ಕ್ರೂರತನ ಪ್ರದರ್ಶಿಸುವುದನ್ನು ನೋಡಿರುತ್ತಾರೆ. ದೃಶ್ಯ ಮಾಧ್ಯಮಗಳು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರುವುದರಿಂದ, ಅಲ್ಲಿ ನೋಡುವ ಹಾರರ್ ಗೊಂಬೆ, ರಾತ್ರಿಯಿಡೀ ತಮ್ಮನ್ನು ನೋಡುತ್ತಿವೆ ಅಥವಾ ತಮಗೆ ಹಾನಿ ಮಾಡುತ್ತವೆ ಎಂಬುದನ್ನೇ ಅವರ ಸುಪ್ತ ಮನಸ್ಸು ಯೋಚಿಸುತ್ತಿರುತ್ತದೆ. ಈ ಭಯ ಮಕ್ಕಳಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ ಎನ್ನುತ್ತಾರೆ ಮನೋವೈದ್ಯರು.
ದಿ ನನ್ (The Nun)
1970ರ ದಶಕದಿಂದಲೂ ಹಾರರ್ ಸಿನಿಮಾಗಳಲ್ಲಿ ಕ್ರೈಸ್ತ ಸನ್ಯಾಸಿನಿಯರನ್ನು ನಕಾರಾತ್ಮಕವಾಗಿ ತೋರಿಸುವ ಪ್ರವೃತ್ತಿ ಬೆಳೆದುಬಂದಿದೆ. The Nunನಂತಹ ಹಾರರ್ ಸಿನಿಮಾಗಳು ನೋಡುಗರಿಗೆ ಥ್ರಿಲ್ ನೀಡುವುದರ ಜತೆಗೆ ಬಾಕ್ಸ್ ಆಫಿಸ್ನಲ್ಲೂ ಯಶಸ್ವಿಯಾಗುತ್ತವೆ. ಹಾಗಾಗಿ ಬಹುತೇಕ ಸಿನಿಮಾ ಮೇಕರ್ಸ್ ಜನರನ್ನು ಹೆದರಿಸಲು ಭಯಪಡುವುದಿಲ್ಲ. ಈ ನಿಟ್ಟಿನಲ್ಲಿ ಆ ಸಿನಿಮಾಗಳು ಒಂದು ವರ್ಗದ ಕಡೆಯಿಂದ ಓಕೆ ಎನಿಸಿಕೊಂಡರೂ ಸಮಾಜದಲ್ಲಿ ಒಂದು ರೀತಿಯ ನಕಾರಾತ್ಮಕ ಮತ್ತು ತಪ್ಪು ಕಲ್ಪನೆಯನ್ನು ಬಿತ್ತಿ ಹೋಗಿರುವುದು ಸುಳ್ಳಲ್ಲ. ವಾಸ್ತವದಲ್ಲಿ ಬಹುತೇಕ ಕ್ರೈಸ್ತ ಸನ್ಯಾಸಿನಿಯರು ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಈ ಸಿನಿಮಾ ಅವರ ಸಾಂಪ್ರದಾಯಿಕ ಉಡುಪು ಮತ್ತು ಶಾಂತ ವಾತಾವರಣವನ್ನೇ ಬಳಸಿಕೊಂಡು, ಅದಕ್ಕೊಂದು ಕರಾಳ ರೂಪ ನೀಡಿ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.

ಚಲನಚಿತ್ರ ವಿಮರ್ಶಕರು ಮತ್ತು ಸಂಶೋಧಕರ ಪ್ರಕಾರ, ಸಮಾಜದಲ್ಲಿ ಅತ್ಯಂತ ಪವಿತ್ರ, ಶಾಂತ ಮತ್ತು ಶಿಸ್ತಿನ ಸಂಕೇತವಾಗಿ ಕಾಣುವ ಉಡುಪು ಅಥವಾ ವ್ಯಕ್ತಿತ್ವವನ್ನು ಇದ್ದಕ್ಕಿದ್ದಂತೆ ಭಯಾನಕವಾಗಿ ತೋರಿಸಿದಾಗ ಪ್ರೇಕ್ಷಕರಲ್ಲಿ ಆಘಾತ ಮತ್ತು ಭಯ ದುಪ್ಪಟ್ಟಾಗುತ್ತದೆ.
ಇನ್ನು ಇಂತಹ ಸಿನಿಮಾಗಳು ಮಕ್ಕಳ ಸುಪ್ತ ಮನಸ್ಸಿನ ಮೇಲೆ ಬೀರುವ ಪ್ರಭಾವದ ಕುರಿತು ಜಾಗತಿಕವಾಗಿ ಹಲವು ಸಂಶೋಧನೆಗಳು ನಡೆದಿವೆ. ಅಮೆರಿಕನ್ ಅಕಾಡೆಮಿ ಆಫ್ ಚೈಲ್ಡ್ ಅಂಡ್ ಅಡೋಲಸೆಂಟ್ ಸೈಕಿಯಾಟ್ರಿ (AACAP) ವರದಿ ಪ್ರಕಾರ ಮಕ್ಕಳು ಹಾರರ್ ಸಿನಿಮಾಗಳನ್ನು ನೋಡಿದಾಗ, ಅದರಲ್ಲಿರುವ ಪಾತ್ರಗಳನ್ನು ನಿಜ ಜೀವನದ ವ್ಯಕ್ತಿಗಳೊಂದಿಗೆ ಹೋಲಿಸಿ ನೋಡಲು ಆರಂಭಿಸುತ್ತಾರೆ. ಇದು ಅವರಲ್ಲಿ ದೀರ್ಘಕಾಲದ ಭಯ (Phobia) ಆತಂಕ ಮತ್ತು ನಿದ್ದೆಯಿಲ್ಲದ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಣ ಗಳಿಸುವ ಉದ್ದೇಶದಿಂದ ಈ ಕಾಲ್ಪನಿಕ ಚಿತ್ರವನ್ನು ಮಾಡಿದ್ದರೂ ಇದು ಸಮಾಜದಲ್ಲಿ ಮತ್ತು ಮಕ್ಕಳ ಮನಸ್ಸಿನಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿರುವುದು ಮಾತ್ರ ಸತ್ಯ.
The Nun ಸಿನಿಮಾದ ಪ್ರಚಾರದ ಸಮಯದಲ್ಲಿ ಯೂಟ್ಯೂಬ್ನಲ್ಲಿ ಹಾಕಲಾಗಿದ್ದ ಅತ್ಯಂತ ಭಯಾನಕ ‘ಜಂಪ್ಸ್ಕೇರ್’ (Jump-scare) ಜಾಹೀರಾತನ್ನು ಮಕ್ಕಳ ಮತ್ತು ವೀಕ್ಷಕರ ತೀವ್ರ ಆಕ್ಷೇಪಣೆಯ ನಂತರ ಯೂಟ್ಯೂಬ್ ಸಂಸ್ಥೆಯು ತನ್ನ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಅಧಿಕೃತವಾಗಿ ಡಿಲೀಟ್ ಮಾಡಿತ್ತು. ಇದು ಈ ಸಿನಿಮಾ ಮಕ್ಕಳ ಮೇಲೆ ಬೀರಿದ ನಕಾರಾತ್ಮಕ ಪ್ರಭಾವಕ್ಕೆ ದೊಡ್ಡ ಉದಾಹರಣೆ. ಈ ಸಿನಿಮಾ ಬಿಡುಗಡೆಯಾದಾಗ ಜಾಗತಿಕವಾಗಿ ಮತ್ತು ಭಾರತದಲ್ಲೂ ಹಲವು ಕ್ರೈಸ್ತ ಧಾರ್ಮಿಕ ಮುಖಂಡರು ಮತ್ತು ಸಂಘಟನೆಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದವು.
ದಿ ಮಂಕಿ (The Monkey)
ಪ್ರಖ್ಯಾತ ಹಾರರ್ ಕಥೆಗಾರ ಸ್ಟೀಫನ್ ಕಿಂಗ್ ಅವರ ಸಣ್ಣ ಕಥೆಯನ್ನು ಆಧರಿಸಿ ಬಂದ “ದಿ ಮಂಕಿ” ಸಿನಿಮಾದ ಹೀರೋ ಕೈಯಲ್ಲಿ ತಾಳ (cymbals) ಹಿಡಿದು ಬಡಿಯುವ ಮುದ್ದಾದ ಒಂದು ಮಂಕಿ. ಈ ಕೋತಿಯನ್ನೆ ಅತ್ಯಂತ ಭಯಾನಕವಾಗಿ ತೋರಿಸಲಾಗಿದೆ. ಕೋತಿಯ ಬೊಂಬೆ ತನ್ನಷ್ಟಕ್ಕೆ ತಾನೇ ತಾಳ ಬಡಿಯಲು ಶುರು ಮಾಡಿದಾಗಲೆಲ್ಲಾ, ಅದರ ಸುತ್ತಮುತ್ತ ಇರುವ ಯಾರೋ ಒಬ್ಬರು ಅತ್ಯಂತ ಭೀಕರವಾಗಿ ಸಾವನ್ನಪ್ಪುವಂತೆ ತೋರಿಸಲಾಗಿದೆ.

ಈ ಸಿನಿಮಾ ಮತ್ತು ಅದರ ಟ್ರೇಲರ್ ಬಿಡುಗಡೆಯಾದಾಗ ಪ್ರಪಂಚದಾದ್ಯಂತ ಅನೇಕ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಾವು ಚಿಕ್ಕ ವಯಸ್ಸಿನಿಂದಲೂ ಪ್ರೀತಿಯಿಂದ ನೋಡಿಕೊಂಡು ಬಂದಿರುವ, ಸರ್ಕಸ್ ಅಥವಾ ಹಬ್ಬಗಳಲ್ಲಿ ಮಕ್ಕಳನ್ನು ರಂಜಿಸುವ ಕೋತಿಯನ್ನು ರಕ್ತಪಿಪಾಸು ಯಮನಂತೆ ತೋರಿಸಿರುವುದಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. “ಮಕ್ಕಳ ನೆನಪುಗಳು ಮತ್ತು ಮುಗ್ಧ ಆಟದ ಸಾಮಾನುಗಳನ್ನು ಹಾರರ್ ಕಂಟೆಂಟ್ ಆಗಿ ಬಳಸಿ ವಿಕೃತಿ ಮೆರೆಯಬಾರದು” ಎಂಬುದು ಹಲವರ ವಾದ.
ಇಷ್ಟೇ ಅಲ್ಲ, ಆಪ್ತಮಿತ್ರ, ಕಲ್ಪನಾ/ಕಾಂಚನಾ, ಮಾಯಾ, ಆಪ್ತರಕ್ಷಕ, ಆಕ್ಯುಲಸ್, ಮಿರರ್ ಹೀಗೆ ಹಾರರ್ ಚಿತ್ರಗಳ ಪಟ್ಟಿ ಭಾರೀ ಉದ್ದವೇ ಇದೆ. ಕೆಲವು ಸಿನಿಮಾಗಳಲ್ಲಿ ಕನ್ನಡಿಯನ್ನು ಭಯ ಹುಟ್ಟಿಸುವ ಪ್ರಮುಖ ವಸ್ತುವನ್ನಾಗಿ ಅಥವಾ ದೆವ್ವದ ಸಂಕೇತವಾಗಿ ಬಳಸಿಕೊಂಡರೆ, ಒನ್ ಮಿಸ್ಡ್ ಕಾಲ್, ಕೌಂಟ್ಡೌನ್, ಅನ್ಪ್ರೆಂಡೆಡ್, ರಿಂಗ್ ಮೊದಲಾದ ಸಿನಿಮಾಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಭಯಾನಕವಾಗಿ ತೋರಿಸಲಾಗಿದೆ. ಇನ್ನು ಭಾರತೀಯ ಸಿನಿಮಾಗಳಲ್ಲಿ ಕುರ್ಚಿ, ಮಂಚ, ಹಳೆಯ ಬಟ್ಟೆ, ಒಡವೆಗಳು, ಗೋಡೆ ಗಡಿಯಾರ, ವಾಹನ, ವಿವಿಧ ಕರಕುಶಲ ವಸ್ತುಗಳು -ಹೀಗೆ ಬಹುತೇಕ ಎಲ್ಲವೂ ದೆವ್ವವಾಗುತ್ತದೆ! ದ ಸ್ಟಫ್, ಅಟ್ಯಾಕ್ ಆಫ್ ದ ಕಿಲ್ಲರ್ ಟೊಮೆಟೊಸ್, ಜಿಂಜರ್ಬ್ರೆಡ್ ಮ್ಯಾನ್ ಆಹಾರವನ್ನೇ ಹಾರರ್ಗಾಗಿ ಬಳಸಿಕೊಂಡಿದೆ.
ಇವೆಲ್ಲವನ್ನೂ ಮೀರಿ ಕತ್ತಲೆಯ ದೃಶ್ಯಗಳೇ ಇಲ್ಲದೆ, ಸ್ವೀಡನ್ನ ಅತ್ಯಂತ ಸುಂದರವಾದ, ಹಸಿರು ತುಂಬಿದ, ಹೂವುಗಳಿಂದ ಅಲಂಕೃತಗೊಂಡ ಹಳ್ಳಿಯಲ್ಲಿ, ಪ್ರಕಾಶಮಾನವಾದ ಹಗಲಿನ ಬೆಳಕಿನಲ್ಲೇ ನಡೆಯುವ ಆಚರಣೆಗಳು ಪ್ರೇಕ್ಷಕರನ್ನು ಭಯದ ತುತ್ತತುದಿಗೆ ಕೊಂಡೊಯ್ಯುವಂತೆ ಮಾಡಿರುವುದು ಮಿಡ್ಸೊಮರ್ ಸಿನಿಮಾ. ಸೌಂದರ್ಯದ ಹಿಂದಿನ ಕ್ರೌರ್ಯವನ್ನು ಈ ಸಿನಿಮಾ ತೋರಿಸಿದೆ.
ಕೊನೆಯದಾಗಿ ಹೇಳಬೇಕೆಂದರೆ, ಹಾರರ್ ಸಿನಿಮಾಗಳು ನಮ್ಮನ್ನು ಹೆದರಿಸುವುದು ಕೇವಲ ರಕ್ತಪಾತ ಅಥವಾ ಅಸ್ಥಿಪಂಜರಗಳಿಂದಲ್ಲ. ಬದಲಿಗೆ ನಮ್ಮ ದೈನಂದಿನ ಜೀವನದ ಅತ್ಯಂತ ಸಾಮಾನ್ಯ ವಸ್ತುಗಳನ್ನೇ ಅತಿಮಾನುಷ ಶಕ್ತಿಗಳಾಗಿ ಬದಲಾಯಿಸುವ ಮೂಲಕ. ಈ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ, ಮಕ್ಕಳ ಮನಸ್ಸಿನಲ್ಲಿ ಎಷ್ಟೇ ಆತಂಕವನ್ನು ಸೃಷ್ಟಿಸಿದರೂ, ಯಶಸ್ವಿಯಾಗುತ್ತಿದೆ. ಈ ಯಶಸ್ಸಿಗೆ ಅಂತಹ ಸಿನಿಮಾವನ್ನೇ ಹುಡುಕಿ ನೋಡುವ ನಾವು ನೀವುಗಳೇ ಕಾರಣ ಎಂದರೆ ತಪ್ಪಾಗಲಾರದು!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



