ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಪ್ರಾರಂಭಿಸಿದಾಗಿನಿಂದ, ಏಷ್ಯಾದ ಬಹುತೇಕ ದೇಶಗಳ ಕರೆನ್ಸಿಯ ಮೌಲ್ಯ ಡಾಲರ್ ಮುಂದೆ ಕುಸಿದಿವೆ. ಅದರಲ್ಲೂ ನಮ್ಮ ರೂಪಾಯಿ ಸ್ಥಿತಿಯಂತೂ ತುಂಬ ಶೋಚನೀಯವಾಗಿದೆ. ಯುದ್ಧ ಶುರು ಆಗೋ ಹಿಂದಿನ ದಿನ ಫೆಬ್ರವರಿ 27ಕ್ಕೆ 91.01 ರೂಪಾಯಿ ಇದ್ದದ್ದು, ಮಾರ್ಚ್ 28ರ ಶನಿವಾರದ ಹೊತ್ತಿಗೆ 94.86 ರೂಪಾಯಿಗೆ ಇಳಿದಿದೆ.

ಪ್ರೊ. ಪ್ರಭಾತ್ ಪಟ್ನಾಯಕ್ (Prabhat Patnaik) ಅವರು ಭಾರತದ ಪ್ರಸಿದ್ಧ ಆರ್ಥಿಕ ತಜ್ಞ, ಚಿಂತಕ ಮತ್ತು ಲೇಖಕರಾಗಿದ್ದು, Jawaharlal Nehru University ನಲ್ಲಿ ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮುಖ್ಯವಾಗಿ ಮಾರ್ಕ್ಸಿಸ್ಟ್ ಆರ್ಥಿಕ ಚಿಂತನೆ, ಜಾಗತೀಕರಣದ ಪರಿಣಾಮಗಳು ಮತ್ತು ಭಾರತದ ಆರ್ಥಿಕ ನೀತಿಗಳ ಕುರಿತು ವಿಶ್ಲೇಷಣೆ ಮಾಡುವುದರಿಂದ ಪ್ರಸಿದ್ಧರಾಗಿದ್ದಾರೆ. ಸಾಮಾನ್ಯ ಜನರ ಬದುಕಿನ ಮೇಲೆ ಆರ್ಥಿಕ ವ್ಯವಸ್ಥೆಗಳ ಪರಿಣಾಮವನ್ನು ತೀಕ್ಷ್ಣವಾಗಿ ವಿಮರ್ಶಿಸುವ ಅವರು, ಅನೇಕ ಪುಸ್ತಕಗಳು ಮತ್ತು ಲೇಖನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ.
ಈ ರೂಪಾಯಿ ಮೌಲ್ಯ ಇಷ್ಟೊಂದು ಬೀಳೋಕೆ ತಕ್ಷಣದ ಕಾರಣ ಸರಳ ನಮಗೆ ಬೇಕಿರೋ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್‌ಗಾಗಿ ನಾವು ಬೇರೆ ದೇಶಗಳನ್ನೇ ನಂಬಿಕೊಂಡಿದ್ದೇವೆ. ಇವೆಲ್ಲಾ ಹೆಚ್ಚಾಗಿ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದು ಬರಬೇಕು. ಒಂದು ವೇಳೆ ಅದು ಬಂದ್ ಆದ್ರೆ ನಮಗೆ ತೈಲ ಸಿಗೋದು ಕಷ್ಟ ಆಗುತ್ತೆ. ಅಷ್ಟೇ ಅಲ್ಲ ನಮ್ಮ ದೇಶದ ಪಾವತಿ ಶಿಲ್ಕಿನ ಸಮತೋಲನ ತಪ್ಪುತ್ತದೆ. ಹಾಗಾಗಿ ರೂಪಾಯಿಯ ಕಿಮ್ಮತ್ತು ಕಮ್ಮಿಯಾಗುತ್ತದೆ. ಇದರ ಜೊತೆಗೆ, ವಿದೇಶಗಳಲ್ಲಿರೋ ನಮ್ಮವರು ಇಲ್ಲಿಗೆ ಕಳಿಸ್ತಿದ್ದ ಹಣ ಕೂಡ ಕಮ್ಮಿ ಆಗುತ್ತದೆ. ಹೀಗೆ ಅವರು ಕಳುಹಿಸುತ್ತಿದ್ದ ಹಣ ನಮ್ಮ ಪಾವತಿ ಶಿಲ್ಕಿನ ಸಮತೋಲನವನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬರುತ್ತಿತ್ತು.
ನಮ್ಮ ಚಾಲ್ತಿ ಖಾತೆ ಕೊರತೆ ದಿಢೀರನೆ ಹದಗೆಟ್ಟದ್ದಲ್ಲ. ಕೇವಲ ಮೂರು ವಾರಗಳ ಯುದ್ಧದಿಂದ ನಮ್ಮ ಚಾಲ್ತಿ ಖಾತೆಯ ಕೊರತೆ ಅಷ್ಟೊಂದು ತೀವ್ರವಾಗಿ ಬಿಡುವುದಿಲ್ಲ. ನಿಜವಾದ ಕಾರಣ ಅಂದರೆ ಮುಂದೆ ಪರಿಸ್ಥಿತಿ ಇನ್ನೂ ಹದಗೆಡಬಹುದು ಅನ್ನೋ ನಿರೀಕ್ಷೆಯಿಂದ ಜನ ಹಣವನ್ನು ಜಗತ್ತಿನ ಬೇರೆ ಕಡೆಗೆ ಸಾಗಿಸುತ್ತಿದ್ದಾರೆ.
ಈ ಯುದ್ಧಕ್ಕೆ ಅಮೆರಿಕದ ಆಕ್ರಮಣಕಾರಿ ಧೋರಣೆಯೇ ಕಾರಣ. ಈ ಯುದ್ಧ ಪ್ರಾರಂಭಿಸಿದ್ದೂ ಅಮೇರಿಕೆ. ಆದರೂ ವಿಪರ್ಯಾಸವೆಂದರೆ ಎಲ್ಲರೂ ಸುರಕ್ಷತೆಗೆ ಡಾಲರನ್ನೇ ಆಶ್ರಯಿಸುತ್ತಿದ್ದಾರೆ. ಇದೊಂದು ವಿಚಿತ್ರ ವಿದ್ಯಮಾನ: ತೈಲದ ಮುಂದೆ ಡಾಲರ್ ಮೌಲ್ಯ ಕಳೆದುಕೊಂಡರೆ, ಅದೇ ಡಾಲರ್ ಮುಂದೆ ಜಗತ್ತಿನ ಇತರ ದೇಶಗಳ (ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ) ಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತವೆ!
ನಮ್ಮ ರೂಪಾಯಿ ಮೌಲ್ಯ ಬಿದ್ದರೆ, ನಾವು ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಹೆಚ್ಚುತ್ತದೆ. ಅಂತಿಮವಾಗಿ ಜನ ಸಾಮಾನ್ಯರು ಈ ಹೆಚ್ಚಿದ ಬೆಲೆಯ ಹೊರೆಯನ್ನು ಹೊರಬೇಕಾಗುತ್ತದೆ. ದುಡಿಯೋ ಜನರ ಆದಾಯ ಅಷ್ಟೇ ಇದ್ದರೂ ಸಾಮಾನುಗಳ ರೇಟ್ ಮಾತ್ರ ಆಕಾಶಕ್ಕೆ ಏರುತ್ತೆ. ಒಂದು ವೇಳೆ ಬೆಲೆ ಏರಿಕೆಗೆ ತಕ್ಕಂತೆ ಸಂಬಳನೂ ಜಾಸ್ತಿ ಆಗ್ತಾ ಹೋದ್ರೆ, ಬೆಲೆ ಇನ್ನಷ್ಟು ಏರುತ್ತದೆ. ಹಣದುಬ್ಬರ ನಿಲ್ಲದೆ ಮುಂದುವರಿಯುತ್ತದೆ.
ಹೀಗಾಗಿ, ಡಾಲರ್ ಲೆಕ್ಕದಲ್ಲಿ ತೈಲದ ಬೆಲೆ ಹೆಚ್ಚಾದರೆ ನಮ್ಮಂತಹ ಜಾಗತಿಕ ದಕ್ಷಿಣದ ದೇಶಗಳಿಗೆ ಎರಡು ಕಡೆಯಿಂದ ಹೊಡೆತ ಬೀಳುತ್ತೆ. ಮೊದಲನೆಯದಾಗಿ, ಡಾಲರ್ ಜೊತೆಗಿನ ನಮ್ಮ ರೂಪಾಯಿಯ ನಮ್ಮ ವಿನಿಮಯ ದರದಲ್ಲಿ ಬದಲಾವಣೆಯಾಗದಿದ್ದರೂ ಅಂದರೆ ರೂಪಾಯಿ ಮೌಲ್ಯ ಕುಸಿಯದಿದ್ದರೂ, ಡಾಲರ್ ಲೆಕ್ಕದಲ್ಲಿ ತೈಲದ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ನಮ್ಮನ್ನು ತಟ್ಟುತ್ತದೆ.
ಇನ್ನು ಎರಡನೇ ಹೊಡೆತ ಅಂದ್ರೆ, ಡಾಲರ್ ಎದುರು ನಮ್ಮ ರೂಪಾಯಿ ಮೌಲ್ಯ ಕುಸಿಯುವುದರಿಂದ ಆಗುವ ಹಣದುಬ್ಬರ. ಇದರಿಂದ ನಾವು ಹೊರಗಿನಿಂದ ತರುವ ಬೇರೆ ಎಲ್ಲಾ ವಸ್ತುಗಳ ಬೆಲೆಗಳು ಏರುತ್ತವೆ.
ಜೊತೆಗೆ ರೂಪಾಯಿ ಮೌಲ್ಯ ಕುಸಿಯುವುದರಿಂದ ತೈಲದ ಆಮದು ಬೆಲೆ ಇನ್ನೂ ಹೆಚ್ಚುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ತೈಲ ಬೆಲೆ 10% ಏರಿ ಅಲ್ಲಿನ ಜನರಿಗೆ 5% ನಷ್ಟು ಬೆಲೆ ಏರಿಕೆ ತಟ್ಟಿದರೆ, ನಮ್ಮಂತಹ ದೇಶಗಳಲ್ಲಿ ರೂಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಸೇರಿಕೊಳ್ಳುವುದರಿಂದ ಬೆಲೆ 5% ಗಿಂತ ಹೆಚ್ಚು ಹೆಚ್ಚುತ್ತದೆ. ಇದನ್ನೇ ಹಣದುಬ್ಬರದ ಗುಣಕ [inflation multiplier] ಎನ್ನಬಹುದು. ಅಂದ್ರೆ, ದೊಡ್ಡ ದೇಶಗಳಲ್ಲಿ ಆಗುವ ಸಣ್ಣ ಮಟ್ಟದ ಬೆಲೆ ಏರಿಕೆ. ನಮ್ಮಂತಹ ಅಂಚಿನಲ್ಲಿರುವ ದೇಶಗಳಿಗೆ ಬರುವಷ್ಟರಲ್ಲಿ ವಿಪರೀತವಾಗಿರುತ್ತದೆ.
ಮಾರುಕಟ್ಟೆಯಲ್ಲಿ ರೂಪಾಯಿ ಬಗ್ಗೆ ಎಷ್ಟು ನೆಗೆಟಿವ್ ಅಭಿಪ್ರಾಯ [speculative sentiment] ಮೂಡಿದೆ ಅಂದರೆ, ರಿಸರ್ವ್ ಬ್ಯಾಂಕ್ ಎಷ್ಟೇ ಪ್ರಯತ್ನ ಪಟ್ಟರೂ ರೂಪಾಯಿ ಮೌಲ್ಯ ಬೀಳುವುದನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಇರಾನ್ ಯುದ್ಧ ಶುರುವಾದಾಗಿನಿಂದ ರೂಪಾಯಿ ಮೌಲ್ಯವನ್ನು ಸ್ಥಿರವಾಗಿಡುವುದಕ್ಕಾಗಿ ಆರ್‌ಬಿಐ ಬರೋಬ್ಬರಿ 20 ಬಿಲಿಯನ್ ಡಾಲರ್ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿದೆ ಎನ್ನುವ ವರದಿಗಳಿವೆ. ಆದರೂ ರೂಪಾಯಿಯ ತೀವ್ರ ಕುಸಿತವನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ. ನಿಜ, ಒಂದು ವೇಳೆ ಆರ್‌ಬಿಐ ಈ ರೀತಿ ಮಧ್ಯ ಪ್ರವೇಶ ಮಾಡದಿದ್ದರೆ ರೂಪಾಯಿ ಇನ್ನೂ ತೀವ್ರವಾಗಿ ಕುಸಿಯುತ್ತಿದ್ದಿರಬಹುದು. ಆದರೆ ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ರೂಪಾಯಿ ಮೌಲ್ಯ ಕುಸಿಯುತ್ತಿದೆ ಅಂದರೆ, ಮಾರ್ಕೆಟ್‌ನಲ್ಲಿ ರೂಪಾಯಿ ಬಗ್ಗೆ ಇರೋ ಆ ನೇತ್ಯಾತ್ಮಕ ಭಾವನೆಗಳು ಎಷ್ಟೊಂದು ಬಲವಾಗಿದೆ ಎನ್ನುವುದು ಅರ್ಥವಾಗುತ್ತದೆ.
ಈ ನೇತ್ಯಾತ್ಮಕ ಭಾವನೆ ಇಷ್ಟೊಂದು ಬಲವಾಗಿರುವುದಕ್ಕೆ ನಿಜವಾದ ಕಾರಣವೆಂದರೆ, ರೂಪಾಯಿಯ ಕುಸಿತ ಯುದ್ಧ ಪ್ರಾರಂಭವಾಗುವುದಕ್ಕಿಂತ ಮೊದಲೇ ಪ್ರಾರಂಭವಾಗಿತ್ತು. ಇರಾನ್ ಮೇಲಿನ ಯುದ್ಧ ಪ್ರಾರಂಭವಾಗಿದ್ದು ಫೆಬ್ರವರಿ 28ರಂದು. ಆದರೆ ಅದಕ್ಕಿಂತ ಮುಂಚೆಯೇ ಡಾಲರ್ ಎದುರು ರೂಪಾಯಿ ಕುಸಿಯುವುದಕ್ಕೆ ಪ್ರಾರಂಭವಾಗಿತ್ತು. ಅಂದರೆ ಜನವರಿ 1, 2026 ರಂದು 89.94 ಇದ್ದ ರೂಪಾಯಿ ಮೌಲ್ಯ, ಕೇವಲ ಎರಡು ತಿಂಗಳಲ್ಲಿ ಅಂದ್ರೆ ಫೆಬ್ರವರಿ 27ರ ಹೊತ್ತಿಗೆ 91.01 ಕ್ಕೆ ಕುಸಿದಿತ್ತು.
ಈಗ ರೂಪಾಯಿ ಮೌಲ್ಯ ಇಷ್ಟೊಂದು ತೀವ್ರವಾಗಿ ಕುಸಿಯುತ್ತಿರುವುದಕ್ಕೆ ಒಂದು ಮುಖ್ಯ ಕಾರಣವೆಂದರೆ ಯುದ್ದದಿಂದ ತೈಲ ಬೆಲೆಯ ಏರಿಕೆ ಮತ್ತು ಜನರೆಲ್ಲಾ ಡಾಲರ್ ಅನ್ನು ಸುರಕ್ಷಿತ ಎಂದುಕೊಂಡು ಅದನ್ನು ಹಿಂಬಾಲಿಸುತ್ತಿರುವುದು. ಇವೆರಡೂ ಈಗಾಗಲೇ ಪ್ರಾರಂಭವಾಗಿದ್ದ ರೂಪಾಯಿಯ ಕುಸಿತದ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ನಿಜ ಹೇಳಬೇಕೆಂದರೆ ಆರ್‌ಬಿಐ ಬಳಿಯಲ್ಲಿ ಸುಮಾರು 700 ಬಿಲಿಯನ್ ಡಾಲರ್‌ನಷ್ಟು ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಮೀಸಲು ಇದ್ದರೂ ಸಹ, ಮುಂದಿನ ದಿನಗಳಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 95ಕ್ಕಿಂತ ಕೆಳಗೆ ಹೋಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಮಾರುಕಟ್ಟೆ ವಿಶ್ಲೇಷಕರಿದ್ದಾರೆ.
ಇಲ್ಲೊಂದು ಅಚ್ಚರಿಯ ವಿಷಯ ಅಂದ್ರೆ, ನಮ್ಮಲ್ಲಿ ಎಷ್ಟೇ ದೊಡ್ಡ ಪ್ರಮಾಣದ ವಿದೇಶಿ ಹಣದ ಮೀಸಲಿದ್ದರೂ, ಈ ಸಟ್ಟಾ ವ್ಯಾಪಾರಿಗಳು [speculators] ರೂಪಾಯಿ ವಿರುದ್ಧ ತಿರುಗಿಬಿದ್ದಾಗ, ಕರೆನ್ಸಿಯ ಮೌಲ್ಯದ ಕುಸಿತವನ್ನು ತಡೆಯುವುದಕ್ಕೆ ರಿಸರ್ವ್ ಬ್ಯಾಂಕಿಗೂ ಸಾಧ್ಯವಾಗುತ್ತಿಲ್ಲ. ಜನರು ಕರೆನ್ಸಿಯ ಮೌಲ್ಯ ಕುಸಿಯುತ್ತದೆ ಎಂಬ ನಿರೀಕ್ಷೆಯಲ್ಲಿ, ಅಥವಾ ಇನ್ಯಾವುದೋ ಕಾರಣಕ್ಕೆ ಹಣವನ್ನು ಹೊರಗಡೆ ತೆಗೆದುಕೊಂಡು ಹೋಗುವುದಕ್ಕೆ ಪ್ರಾರಂಭಿಸಿದರೆ, ಆರ್‌ಬಿಐ ತನ್ನ ಮೀಸಲನ್ನು ಬಳಸಿ, ಹೊರಹರಿವನ್ನು ತಡೆಯುವುದಕ್ಕೆ ಪ್ರಯತ್ನಿಸಿದರೆ, ಜನರಿಗೆ ಮೀಸಲು ಖಾಲಿ ಆಗುತ್ತಿದೆ ಅನ್ನುವ ಭಯ ಪ್ರಾರಂಭವಾಗುತ್ತದೆ. ರೂಪಾಯಿ ಮೌಲ್ಯ ಇನ್ನೂ ಕುಸಿಯುತ್ತದೆ ಅನ್ನುವ ನಿರೀಕ್ಷೆ ಹೆಚ್ಚುತ್ತದೆ. ಇದನ್ನ ಅರಿತ ರಿಸರ್ವ್ ಬ್ಯಾಂಕ್ ಕೂಡ ಇಂತಹ ಸಂದರ್ಭದಲ್ಲಿ ಮೀಸಲನ್ನು ಬಳಸುವುದಕ್ಕೆ ಮುನ್ನ ಹತ್ತು ಸಲ ಯೋಚಿಸುತ್ತದೆ.
ಹಾಗಾಗಿ, ಒಂದು ದೇಶದಲ್ಲಿ ಎಷ್ಟೇ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಮೀಸಲು ಇದ್ದರೂ, ಕರೆನ್ಸಿಯ ಮೌಲ್ಯ ಕುಸಿಯುತ್ತಾ ಹೋಗಬಹುದು. ವಿದೇಶಿ ವಿನಿಮಯ ಮೀಸಲು ನಿಧಿಯಿದ್ದರೆ ಸಾಲದ ಮರುಪಾವತಿಗೆ ಅನುಕೂಲವಾಗಬಹುದು. ಅಥವಾ [Balance of Payments] ಚಾಲ್ತಿ ಖಾತೆ ಕೊರತೆಯನ್ನು ಸರಿದೂಗಿಸಲು ಪ್ರಯೋಜನವಾಗಬಹುದು. ಅಂದರೆ ಆರ್ಥಿಕತೆಯ ದ್ರವ್ಯತೆಯ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗುತ್ತದೆ. ಆದರೆ ಮಾರುಕಟ್ಟೆಯ ನೇತ್ಯಾತ್ಮಕ ಮನೋಭಾವದಿಂದ ರೂಪಾಯಿ ಬೆಲೆ ಕುಸಿಯುತ್ತಿದ್ದರೆ, ರೂಪಾಯಿ ಮೌಲ್ಯವನ್ನು ಮೀಸಲು ಹಣ ಬಳಸಿ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಇನ್ನೊಂದು ಮುಖ್ಯವಾದ ವಿಷಯವನ್ನು ನಾವು ಗಮನಿಸಬೇಕು. ನಮ್ಮಲ್ಲಿರುವ ವಿದೇಶಿ ಹಣದ ಮೀಸಲನ್ನು ಹೇಗೆ ಸಂಗ್ರಹಿಸಿಲಾಗಿದೆ ಎಂಬುದನ್ನು ನೋಡಬೇಕು. ಇದು ನಮ್ಮ ದೇಶದ ಚಾಲ್ತಿ ಖಾತೆಯ ಮಿಗುತಾಯದಿಂದ ಅಂದರೆ ಸ್ವಂತ ವ್ಯಾಪಾರದ ಲಾಭದಿಂದ ಬಂದಿರಬಹುದು ಅಥವಾ ವಿದೇಶಿ ಬಂಡವಾಳಿಗರು ನಮ್ಮಲ್ಲಿ ಹೂಡಿಕೆ ಮಾಡಿರಬಹುದು. ಒಂದು ವೇಳೆ ಇದು ವಿದೇಶಿಗರ ಹೂಡಿಕೆಯಾಗಿದ್ದರೆ ನಾವು ಅದಕ್ಕೆ ಹೆಚ್ಚಿನ ಬಡ್ಡಿ ತೆರುತ್ತಿರುತ್ತೇವೆ. ಆದರೆ ಅದರಿಂದ ನಮಗೆ ಸಿಗುವ ಬಡ್ಡಿ ತುಂಬಾ ಕಡಿಮೆ ಇರುತ್ತದೆ. ಅಂದರೆ, ಸಾಲದ ರೂಪದಲ್ಲಿ ಹೀಗೆ ದೊಡ್ಡ ಪ್ರಮಾಣದ ವಿದೇಶಿ ಹಣವನ್ನು ಕೂಡಿಡುವುದು ಎಷ್ಟು ಸರಿ? ಹೀಗೆ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಲ್ಲವೆ ಎನ್ನುವ ಅನುಮಾನ ಬರುವುದು ಸಹಜ.
ಉದಾಹರಣೆಗೆ ಭಾರತವನ್ನೇ ನೋಡಿ. ಆರ್‌ಬಿಐ ಹತ್ತಿರ ಇರುವ ವಿದೇಶಿ ಹಣಕ್ಕೆ ಬರುವ ಬಡ್ಡಿ ಹೆಚ್ಚೆಂದರೆ 1.5% ಅಷ್ಟೇ. ಆದರೆ ಅದೇ ಹಣವನ್ನು ನಮ್ಮ ದೇಶದಲ್ಲಿ ಹೂಡಿಕೆ ಮಾಡುವವರಿಗೆ ನಾವು ಶೇಕಡ 7 ರಿಂದ 8 ರಷ್ಟು ಬಡ್ಡಿ (ಬಂಡವಾಳದ ಹೆಚ್ಚಳವು ಸೇರಿದಂತೆ) ತೆರಬೇಕಾಗುತ್ತದೆ.
ಹೊರಗಿನಿಂದ ಹರಿದುಬರುವ ಹಣದ ಮೂಲಕ ನಾವು ವಿದೇಶಿ ಮೀಸಲನ್ನು ಸಂಗ್ರಹಿಸಿದರೆ, ಅದು ‘ಹೆಚ್ಚು ಬಡ್ಡಿ ತೆತ್ತು ಸಾಲ ತೆಗೆದುಕೊಂಡು ಕಡಿಮೆ ಬಡ್ಡಿಗೆ ಸಾಲ ಕೊಟ್ಟಂತೆ’ ಆಗುತ್ತದೆ. ಅಂದರೆ, ನಾವು ಅತಿ ದುಬಾರಿಯಾಗಿ ಹಣವನ್ನು ಪಡೆದು, ಅಗ್ಗವಾಗಿ ಬೇರೆಯವರಿಗೆ ನೀಡುತ್ತಿರುತ್ತೇವೆ. ಇಂತಹ ಹಣದ ಮೀಸಲು ಹೆಚ್ಚಾದಷ್ಟೂ, ನಮ್ಮ ದೇಶದಿಂದ ಹೊರಹರಿಯುವ ಹಣದ ಪ್ರಮಾಣ ಹೆಚ್ಚಾಗುತ್ತದೆ.
ಸಾಲದ ಹಣದಿಂದ ಈ ರೀತಿ ದೊಡ್ಡ ಮಟ್ಟದ ವಿದೇಶಿ ಮೀಸಲು ಸಂಗ್ರಹ ಮಾಡುವುದಕ್ಕೆ ಅದರದೇ ಆದ ಸಮಸ್ಯೆಗಳಿವೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ‘ಮುಕ್ತ’ ವ್ಯಾಪಾರ ಮತ್ತು ಬಂಡವಾಳ ನೀತಿಯಲ್ಲಿರುವ ಲೋಪದೋಷಗಳು. ಇಂತಹ ವ್ಯವಸ್ಥೆಯಲ್ಲಿ ಆಮದು ಸುಂಕಗಳು [tariffs] ಮತ್ತು ವ್ಯಾಪಾರದ ಪ್ರಮಾಣದ ಮೇಲಿನ ಎಲ್ಲಾ ಮಿತಿಗಳನ್ನು ಸಂಪೂರ್ಣ ತೆಗೆಯಲಾಗುತ್ತದೆ. ಹಣವು ದೇಶದ ಒಳಗೆ ಮತ್ತು ಹೊರಗೆ ಮುಕ್ತವಾಗಿ ಹರಿಯುವುದಕ್ಕೆ ಬಂಡವಾಳಕ್ಕೆ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆ. ಕೆಲವು ಅಂತರರಾಷ್ಟ್ರೀಯ ಸಟ್ಟಾ ವ್ಯಾಪಾರಿಗಳು ಮನಸೋ ಇಚ್ಛೆ ಆಡುವ ಆಟಕ್ಕೆ ನಮ್ಮ ವಿನಿಮಯ ದರ ಮತ್ತು ಲಕ್ಷಾಂತರ ದುಡಿಯುವ ಜನರ ಬದುಕು ಸಿಲುಕಿ ನಲುಗಿಹೋಗುತ್ತದೆ. ಇವೆಲ್ಲಾ ನವ-ಉದಾರವಾದಿ ಆರ್ಥಿಕತೆಯ ಲಕ್ಷಣಗಳು, ಭಾರತದಲ್ಲಿ ಈಗ ಅದರ ಕೆಟ್ಟ ಪರಿಣಾಮವನ್ನು ರೂಪಾಯಿ ಮೌಲ್ಯದ ಕುಸಿತದ ರೂಪದಲ್ಲಿ ನಾವು ನೋಡುತ್ತಿದ್ದೇವೆ.
ಡೊನಾಲ್ಡ್ ಟ್ರಂಪ್ ಅವರ ಈ ‘ಸುಂಕದ ಆಕ್ರಮಣಕಾರಿ ನೀತಿಯಿಂದ’ ಭಾರತವೂ ಸೇರಿದಂತೆ ಇತರ ದೇಶಗಳಿಗೆ ಒಂದು ದಾರಿ ತೆರೆದುಕೊಂಡಿದೆ. ತಮ್ಮ ಚಾಲ್ತಿ ಖಾತೆ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ಸಹ ತಮ್ಮದೇ ಆದ ಸುಂಕಗಳನ್ನು ವಿಧಿಸಬಹುದು.” ಅಮೇರಿಕೆಯ ಸುಂಕಕ್ಕೆ ಗುರಿಯಾಗಿರುವ ಹಲವು ದೇಶಗಳು ಭಾರತದಂತಹ ಇತರ ದೇಶಗಳೊಂದಿಗೆ ಕೈಜೋಡಿಸಿ ತಮ್ಮದೇ ಆದ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಬಹುದು.
ಆದರೆ ವ್ಯವಹಾರವನ್ನು ನಡೆಸುವುದಕ್ಕೆ ಮತ್ತು ಪಾವತಿ ಕೊರತೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಅಮೇರಿಕೆಯ ಡಾಲರನ್ನು ಬಳಸಬಾರದು. ಅದರ ಬದಲು, ದೇಶಗಳು ತಮ್ಮದೇ ಆದ ಹಣವನ್ನು ಬಳಸಬೇಕು. ಅವುಗಳ ನಡುವೆ ಒಂದು ಸ್ಥಿರವಾದ ವಿನಿಮಯ ದರವನ್ನು ಕಂಡುಕೊಳ್ಳಬೇಕು. ಒಂದು ವೇಳೆ ಈ ವರ್ಷದ ವ್ಯವಹಾರದಲ್ಲಿ ಬಾಕಿ ಉಳಿದರೆ, ಅದನ್ನು ಮುಂದಿನ ವರ್ಷಕ್ಕೆ ಸೇರಿಸಬಹುದು. ಆ ಬಾಕಿಯನ್ನು ಹಣದ ರೂಪದಲ್ಲಿ ಕೊಡುವ ಬದಲು, ಪರಸ್ಪರ ಸಾಮಾನುಗಳನ್ನು ಕೊಳ್ಳುವ ಮೂಲಕ ಸರಿದೂಗಿಸಬಹುದು. ಹೀಗೆ ಮಾಡುವುದರಿಂದ ಡಾಲರ್ ಅವಶ್ಯಕತೆಯೇ ಇರುವುದಿಲ್ಲ. ಆಗ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಅಗತ್ಯವೂ ಇರಲ್ಲ, ಮುಖ್ಯವಾಗಿ, ನಮ್ಮ ಆರ್ಥಿಕತೆಯು ಸಾಮ್ರಾಜ್ಯಶಾಹಿ ದೇಶದ ಅಣತಿಯಂತೆ ನಡೆಯುವುದು ತಪ್ಪುತ್ತದೆ. ಇದು ನಮ್ಮ ಉದ್ದೇಶವಾಗಬೇಕು.
ಆದರೆ ಮೋದಿ ಸರ್ಕಾರ ಈಗ ಸಂಪೂರ್ಣ ಬೇರೆಯದೇ ದಾರಿಯಲ್ಲಿ ಸಾಗುತ್ತಿದೆ. ಇದು ಪ್ರಪಂಚದ ಹಲವು ದೇಶಗಳ ಜೊತೆ ಹಲವಾರು ಮುಕ್ತ ವ್ಯಾಪಾರ ಒಪ್ಪಂದಗಳನ್ನು [FTAs] ಮಾಡಿಕೊಳ್ಳುತ್ತಿದೆ. ಇದರಿಂದ ಹೆಚ್ಚಂದರೆ ವ್ಯಾಪಾರದ ಪ್ರಮಾಣ ಹೆಚ್ಚಾಗಬಹುದು. ಆದರೆ ಇದರಿಂದ ನಮ್ಮ ರಫ್ತು ಹೆಚ್ಚಾಗುತ್ತದೆ ಅಥವಾ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಮುಖ್ಯವಾಗಿ, ಇಂತಹ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಆರ್ಥಿಕತೆಯನ್ನು ಜಾಗತಿಕ ಹಣಕಾಸು ಬಂಡವಾಳದ ಹಿಡಿತದಿಂದ ಮುಕ್ತಗೊಳಿಸುವುದಿಲ್ಲ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





