ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಯಲಬುರ್ಗಾ ಪಟ್ಟಣಕ್ಕೆ ತಲುಪಿದಾಗ ಸಮಯ ರಾತ್ರಿ ೮:೩೦. ಆದರೂ ಲಕ್ಷಾಂತರ ಜನ ಕದಲದೆ ಕಾಯುತ್ತಿದ್ದರು. ಪಂಚಮಸಾಲಿಗರು ತಮ್ಮ ಶಕ್ತಿಯನ್ನು ರಾಜ್ಯ ಸರ್ಕಾರಕ್ಕೆ ಪ್ರದರ್ಶನ ಮಾಡಬೇಕಿತ್ತು. ಅಪಾರ ಜನಸಾಗರವನ್ನು ಕಂಡು ವೀರಪ್ಪ ಮೊಯ್ಲಿಯವರು ಸ್ತಬ್ಧರಾದರು. ವೇದಿಕೆಯೇರುತ್ತಿದ್ದಂತೆ, “ನನಗೆ ತಪ್ಪು ಮಾಹಿತಿ ಸಿಕ್ಕಿತ್ತು, ನನ್ನನ್ನು ಕ್ಷಮಿಸಿ” ಎಂದು ಸಭೆಯ ಅಧ್ಯಕ್ಷರ ಬಳಿ ಕೇಳಿಕೊಂಡರು.
ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರನ್ನೇ ಸ್ತಬ್ಧಗೊಳಿಸಿತ್ತು ಪಂಚಮಸಾಲಿಗಳ ಅಬ್ಬರ! ಅದು ೧೯೯೪ರ ಆಗಸ್ಟ್ ೮. ಮಧ್ಯಾಹ್ನ ಸೂರ್ಯನ ಪ್ರಖರತೆಯ ನಡುವೆ ಯಲಬುರ್ಗಾದ ಮೈದಾನದಲ್ಲಿ ಅಕ್ಷರಶಃ ಜನಸಾಗರವೇ ಹರಿದು ಬಂದಿತ್ತು. “ಇಂದಿನಂತೆ ಅಂದು ಕಾರುಗಳ ಐಷಾರಾಮಿ ಸೌಕರ್ಯವಿರಲಿಲ್ಲ. ಆದರೆ, ರೈತರ ಸಾವಿರಾರು ಟ್ರಾಕ್ಟರುಗಳು ಯಲಬುರ್ಗಾವನ್ನು ಸುತ್ತುವರಿದಿದ್ದವು” ಎಂದು ಹಿರಿಯರಾದ ಶಿವಪ್ಪ ಹೆಬ್ಸೂರ ಅವರು ಅಂದಿನ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ರಾಜಕೀಯ ಪಿತೂರಿ ಮತ್ತು ಅನಿಶ್ಚಿತತೆ
ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಕಾರ್ಯಕ್ರಮಗಳು ಕೊಪ್ಪಳ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಆಯೋಜನೆಗೊಂಡಿದ್ದವು. ಹುನಗುಂದ ಕ್ಷೇತ್ರದಿಂದ ಮೊದಲ ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಆರ್. ಕಾಶಪ್ಪನವರು, ತಮ್ಮದೇ ಸರ್ಕಾರದ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಲೆಕ್ಕಿಸದೆ ತಮ್ಮ ಸಮಾಜದ ಸಮಾವೇಶಕ್ಕೆ ನಿಗದಿತ ಸಮಯಕ್ಕೆ ಹಾಜರಾಗಿದ್ದರು. ಆದರೆ ಸಮಾಜದ ಏಕೈಕ ಸಚಿವರಾದ ಬಿ. ಎಸ್. ಪಾಟೀಲ ಮನಗೂಳಿಯವರು ಸಭೆಯತ್ತ ಸುಳಿಯದೆ ಅಂತರ ಕಾಯ್ದುಕೊಂಡಿದ್ದರು.
ಜನತಾದಳದ ಸ್ಥಳೀಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿ, ಪಂಚಮಸಾಲಿ ಸಮಾಜದ ಸಭೆಗೆ ಬಾರದೆ ಕಿನ್ನಾಳದ ಕಾರ್ಯಕ್ರಮಕ್ಕೆ ತೆರಳಿದ್ದರು. ಅವರ ಈ ಗೈರುಹಾಜರಿಯ ಹಿಂದಿನ ಮರ್ಮವನ್ನು ಹಿರಿಯರಾದ ಸಿದ್ದಪ್ಪ ಸಾಹುಕಾರರು ಹೀಗೆ ಬಿಚ್ಚಿಡುತ್ತಾರೆ: ”ನಮ್ಮ ಸಮಾಜ ಸಂಘಟನೆಯ ಕರೆಗೆ ಇಷ್ಟೊಂದು ಬೆಂಬಲ ಸಿಗುತ್ತದೆಂದು ಅವರು ಭಾವಿಸಿರಲಿಲ್ಲ. ನಾಲ್ಕಾರು ಸಾವಿರ ಜನ ಸೇರಬಹುದೆಂದು ಅಂದುಕೊಂಡಿದ್ದರು. ಆದರೆ, ಅಪಾರ ಪ್ರಮಾಣದ ಜನ ಸೇರುತ್ತಲೇ ಅವರಿಗೆ ತಮ್ಮ ಮುಂದಿನ ರಾಜಕೀಯ ಸ್ಥಾನಮಾನದ ಚಿಂತೆ ಶುರುವಾಗಿ, ಸಭೆಯನ್ನು ಅಸ್ತವ್ಯಸ್ತಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸಿದರು.”
ಸಂಘಟನೆಯ ಕಿಚ್ಚು ಯುವ ನಾಯಕರ ಶಕ್ತಿ
ಮುಖ್ಯಮಂತ್ರಿಗಳು ಸಭೆಯಿಂದ ದೂರ ಉಳಿಯಲು ಪ್ರಯತ್ನಿಸುತ್ತಿರುವುದು ಅಧ್ಯಕ್ಷ ಶ್ರೀಪಾದಪ್ಪ ಅಧಿಕಾರಿಯವರಿಗೆ ಮುಜುಗರ ತಂದಿತ್ತು. ಮೇಲಾಗಿ ಅವರು ಈ ಸಭೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿದ್ದರು. ಇವರೊಂದಿಗೆ ಸಂಗಣ್ಣ ಕರಡಿ, ಶ್ರೀಶೈಲಪ್ಪ ಬಿದರೂರ, ಕೆ. ಶರಣಪ್ಪ, ಮಲ್ಲಿಕಾರ್ಜುನ ಅಕ್ಕಿ, ಪಿ.ಸಿ. ಸಿದ್ದನಗೌಡರು, ಶ್ರೀಕಾಂತ ಅಂಬಡಗಟ್ಟಿ, ಮಂಜುನಾಥ ಕುನ್ನೂರ, ಗಂಗಣ್ಣ ಮಹಾಂತಶೆಟ್ಟರ್ ಅವರಂತಹ ಯುವ ನಾಯಕರು ಭದ್ರ ಬುನಾದಿ ಹಾಕಿದ್ದರು. (ಇವರೆಲ್ಲರೂ ಮುಂದೆ ೧೯೯೪ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು).
ಕೊನೆಯ ಪ್ರಯತ್ನ ಮತ್ತು ಸಿದ್ನಾಳರ ಅಸಮಾಧಾನ
ಮುಖ್ಯಮಂತ್ರಿಗಳು ಬರುವುದು ಅನುಮಾನ ಎಂದು ತಿಳಿಯುತ್ತಿದ್ದಂತೆ, ಶಾಸಕ ಕಾಶಪ್ಪನವರು ನೇರವಾಗಿ ಕಿನ್ನಾಳಕ್ಕೆ ಧಾವಿಸಿದರು. “ಲಕ್ಷಾಂತರ ಜನ ನಿಮಗಾಗಿ ಕಾಯುತ್ತಿದ್ದಾರೆ, ನೀವು ಬರದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ಬೀಳುವುದು ಗ್ಯಾರಂಟಿ” ಎಂದು ಮನವೊಲಿಸಲು ಪ್ರಯತ್ನಿಸಿದರು. ಅಂತಿಮವಾಗಿ ವೀರಪ್ಪ ಮೊಯ್ಲಿಯವರು ಸಭೆಗೆ ಬರಲು ಒಪ್ಪಿದರು. “ವೀರಪ್ಪ ಮೊಯ್ಲಿಯವರು ಜನನಾಯಕ ಆಗಿರಲಿಲ್ಲ, ಹೈಕಮಾಂಡ್‌ನಿಂದ ನೇಮಿಸಲ್ಪಟ್ಟ ಕೇಂದ್ರದ ಏಜೆಂಟರಂತಿದ್ದರು” ಎಂದು ೧೯೯೪ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಸಂಸದ ಎಸ್. ಬಿ. ಸಿದ್ನಾಳರು ಅವರ ಕಾರ್ಯವೈಖರಿಯನ್ನು ಟೀಕಿಸಿದ್ದರು.
ತಡರಾತ್ರಿಯ ದೃಶ್ಯ: ಮೊಯ್ಲಿ ಬಂದರು, ಗರಬಡಿದಂತಾದರು
ಮುಖ್ಯಮಂತ್ರಿಗಳು ಯಲಬುರ್ಗಾ ಪಟ್ಟಣಕ್ಕೆ ತಲುಪಿದಾಗ ಸಮಯ ರಾತ್ರಿ ೮:೩೦. ಆದರೂ ಲಕ್ಷಾಂತರ ಜನ ಕದಲದೆ ಕಾಯುತ್ತಿದ್ದರು. ಪಂಚಮಸಾಲಿಗರು ತಮ್ಮ ಶಕ್ತಿಯನ್ನು ರಾಜ್ಯ ಸರ್ಕಾರಕ್ಕೆ ಪ್ರದರ್ಶನ ಮಾಡಬೇಕಿತ್ತು. ಅಪಾರ ಜನಸಾಗರವನ್ನು ಕಂಡು ವೀರಪ್ಪ ಮೊಯ್ಲಿಯವರು ಸ್ತಬ್ಧರಾದರು. ವೇದಿಕೆಯೇರುತ್ತಿದ್ದಂತೆ, “ನನಗೆ ತಪ್ಪು ಮಾಹಿತಿ ಸಿಕ್ಕಿತ್ತು, ನನ್ನನ್ನು ಕ್ಷಮಿಸಿ” ಎಂದು ಸಭೆಯ ಅಧ್ಯಕ್ಷರ ಬಳಿ ಕೇಳಿಕೊಂಡರು.
ಮುಖ್ಯಮಂತ್ರಿಗಳಿಗೆ ಫರ್ಮಾನು ಹೊರಡಿಸಿದ ಮಂಡಲ ಪಂಚಾಯತ್ ಅಧ್ಯಕ್ಷ
ಸಭೆಯ ಅತ್ಯಂತ ರೋಚಕ ಘಟನೆ ನಡೆದದ್ದು ಇಲ್ಲಿಯೇ. ಜನಸಾಗರದ ಮಧ್ಯದಿಂದ ಎದ್ದು ಬಂದ ಸೂಡಿಯ ಶ್ರೀಶೈಲಪ್ಪ ಬಿದರೂರ ಅವರು ಮುಖ್ಯಮಂತ್ರಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, “ಮುಖ್ಯಮಂತ್ರಿಗಳೇ, ನಿಮಗಾಗಿ ನಮ್ಮ ಜನರು ಎಂಟು ಗಂಟೆ ಕಾಯ್ದಿದ್ದಾರೆ. ನೀವು ಸಭೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲುವಂತಿಲ್ಲ!” ಎಂದು ಫರ್ಮಾನು ಹೊರಡಿಸಿದರು. ನೆರೆದಿದ್ದ ಜನತೆ ಹರ್ಷೋದ್ಗಾರ ಮಾಡಿದರು. ಯುವಕರ ಕರತಾಡನ ಮುಗಿಲು ಮುಟ್ಟಿತು. ಮುಖ್ಯಮಂತ್ರಿಗಳು ಕಕ್ಕಾಬಿಕ್ಕಿಯಾದರು. ಪಕ್ಕದಲ್ಲಿದ್ದ ಎಚ್. ಕೆ. ಪಾಟೀಲ ಅವರು ಅಪ್ರತಿಭರಾದರು. ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದ ಭಿಮಣ್ಣ ಖಂಡ್ರೇ ಮುಗುಳು ನಕ್ಕರು. ಒಬ್ಬ ಮಂಡಲ ಪಂಚಾಯಿತಿ ಅಧ್ಯಕ್ಷ ಮುಖ್ಯಮಂತ್ರಿಗೆ ಫರ್ಮಾನು ಹೊರಡಿಸಿದ್ದು ಇತಿಹಾಸದಲ್ಲೇ ಮೊದಲಾಗಿತ್ತು. ಸಮಾಜದ ಸಂಘಟನೆ ಆ ಯುವ ನಾಯಕನಿಗೆ ಅಪಾರ ನೈತಿಕ ಸ್ಥೈರ್ಯ ತುಂಬಿತು.
ಸೃಷ್ಟಿಯಾದ ಇತಿಹಾಸ
ಈ ಸಮಾವೇಶ ಕೇವಲ ಒಂದು ಸಭೆಯಾಗಿರಲಿಲ್ಲ; ಇದು ಮುಂದಿನ ರಾಜಕೀಯ ಬದಲಾವಣೆಯ ಸಂಕೇತವಾಗಿತ್ತು. ನಂತರ ನಡೆದದ್ದು ಇತಿಹಾಸ ೧೯೯೪ರ ಚುನಾವಣೆಯಲ್ಲಿ ೩೨ಕ್ಕೂ ಹೆಚ್ಚು ಪಂಚಮಸಾಲಿ ಶಾಸಕರು ವಿಧಾನ ಸೌಧವನ್ನು ಪ್ರವೇಶಿಸಲು ಈ ಯಲಬುರ್ಗಾ ಸಮಾವೇಶವೇ ಹೆದ್ದಾರಿಯಾಗಿತ್ತು.
ಮುಂದುವರಿಯುವುದು…

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ



