ಲೇಖನ ಸರಣಿ | ಪಂಚಮಸಾಲಿ ಇತಿಹಾಸ ಭಾಗ 8 – ಪಂಚಮಸಾಲಿ ಶಾಸಕರ ʼಹೈಜಾಕ್’

Date:

ಅಲ್ಪಸಂಖ್ಯಾತ ಆಯೋಗದವರು ಬೆಂಗಳೂರಿಗೆ ಬರುತ್ತಿದ್ದಾರೆ, ಮೀಸಲಾತಿ ವಿಷಯದಲ್ಲಿ ಸಮುದಾಯಗಳೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯು ನಮಗೆ ತಡವಾಗಿ ದೊರೆಯಿತು. ಅದರಂತೆ ೧೯೯೫ ಫೆಬ್ರವರಿ ತಿಂಗಳ ಮಧ್ಯದಲ್ಲಿ ಎಸ್. ಕೃಷ್ಣನ್ ಬೆಂಗಳೂರಿಗೆ ಬಂದರು. ಆಯೋಗದ ಎದುರು ಸವಾಲ್-ಜವಾಬ್ ಮಾಡಬೇಕಾಗುತ್ತದೆ ಎಂದು ನಮಗೆ ಸಭೆಗೆ ಆಗಮಿಸಿದಾಗಲೇ ತಿಳಿಯಿತು.

- Advertisement -

ಮುಖ್ಯಮಂತ್ರಿಗಳ ಮಗ, ಮೇಲಾಗಿ ತಮ್ಮದೇ ವಯಸ್ಸಿನ ಪ್ರಭಾವಿ ಎಚ್. ಡಿ. ಕುಮಾರಸ್ವಾಮಿಯವರ ಗೆಳತನ ಯಾರಿಗೆ ಬೇಡ? ಪಂಚಮಸಾಲಿ ಸಮಾಜದ ಜನತಾದಳದ ಶಾಸಕರು ಒಬ್ಬೊಬ್ಬರಾಗಿ ಹೆಗಡೆಯವರ ಕ್ಯಾಂಪಿನಿಂದ ದೇವೇಗೌಡರ ಕ್ಯಾಂಪಿಗೆ ಜಿಗಿಯಲಾರಂಭಿಸಿದರು. ಇದಕ್ಕೆ ಪ್ರತಿಫಲವಾಗಿ ಅವರಿಗೆ ಸರ್ಕಾರದಲ್ಲಿ ಆಯಕಟ್ಟಿನ ಜಾಗಗಳು ಲಭಿಸಲಾರಂಭಿಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಜನ ನಾಯಕನಿಗಿಲ್ಲದ ಸಚಿವ ಸ್ಥಾನ

ಉತ್ತರ ಕರ್ನಾಟಕದಲ್ಲಿ ದೇವೇಗೌಡರ ಏಕೈಕ ನಿಕಟವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಸಿಂದಗಿಯ ಶಾಸಕ ಎಂ. ಸಿ. ಮನಗೂಳಿಯವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಜನತಾ ಪರಿವಾರದ ಪ್ರಭಾವಿ ನಾಯಕರಾಗಿದ್ದ ಎಸ್. ಆರ್. ಬೊಮ್ಮಾಯಿಯವರಿಗೆ ಸ್ಥಳೀಯ ಪ್ರತಿಸ್ಪರ್ಧಿಯೊಬ್ಬರನ್ನು ಸೃಷ್ಟಿಸುವ ದೇವೇಗೌಡರ ಸಂಚಿನ ಫಲವಾಗಿ, ಕಲಘಟಗಿಯ ಪಿ. ಸಿ. ಸಿದ್ದನಗೌಡರಿಗೆ ರಾಜ್ಯ ಸಚಿವ ಸ್ಥಾನ ದೊರಕುವುದರೊಂದಿಗೆ ಐದು ಸ್ವತಂತ್ರ ಖಾತೆಗಳು ಲಭಿಸಿದವು. ಸಚಿವ ಸ್ಥಾನದ ನಿಜ ವಾರಸುದಾರರಾಗಿದ್ದ ಚಂದ್ರಶೇಖರ ಎಂ. ಮಾಮಣಿಯವರು ಮಂತ್ರಿಮಂಡಲದಲ್ಲಿ ಇರಲಿಲ್ಲ ಸ್ಥಾನ. ಮಾಮಣಿಯವರಿಲ್ಲದ ಸರ್ಕಾರ ʼಕುದುರೆ ಇಲ್ಲದ ಟಾಂಗಾ’ ದಂತಾಗಬಾರದೆಂದು ಅವರನ್ನು ಉಪಸಭಾಪತಿಯನ್ನಾಗಿಸಿದರು. ಜನನಾಯಕ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಖಾಯಾ ಪಿಯಾ ಕುಚ್ ನಹಿ, ಗ್ಲಾಸ್ ತೋಡಾ ಬಾರಹ ಆನಾ

ನನ್ನ ಕಾಲೇಜು ದಿನಗಳಲ್ಲಿ ಹಿರಿಯರೊಬ್ಬರು “ಮನಿ ಕೂಳ ತಿಂದು ಮಿಂಡಗಾರನ ಚಾಕರಿ ಮಾಡುವುದೆಂದರೆ ಸಮಾಜ ಸಂಘಟನೆ” ಎಂದಿದ್ದರು. ಇದೇ ಮಾತನ್ನು ಹಿಂದಿ ಸಿನಿಮಾಗಳಲ್ಲಿ, “ಖಾಯಾ ಪಿಯಾ ಕುಚ್ ನಹಿ, ಗ್ಲಾಸ್ ತೋಡಾ ಬಾರಹ ಆನಾ” (ತಿಂದಿದ್ದು ಕುಡಿದಿದ್ದು ಏನೂ ಇಲ್ಲ, ಆದರೆ, ಗ್ಲಾಸ್ ಒಡೆದಿದ್ದಕ್ಕೆ ಹನ್ನೆರಡು ಆಣೆ ದಂಡ) ಎಂದು ಹೇಳುತ್ತಾರೆ. ಇದು ಅಕ್ಷರಶಃ ಸಮಾಜದ ಸಂಘಟನಾಕಾರರಿಗೆ ಸಮರ್ಪಿಸಬೇಕಾದ ನುಡಿ.

ಇತಿಹಾಸದಲ್ಲಿ ಕಂಡಿದ್ದೇವೆ; ವಚನ ಪಿತಾಮಹ ಪ. ಗು. ಹಳಕಟ್ಟಿಯವರು ಲಿಂಗೈಕ್ಯರಾದಾಗ ಅವರ ಅಂತಿಮ ದರ್ಶನಕ್ಕೆ ಬರಬೇಕಾದ ಜನವೇ ಬಂದಿರಲಿಲ್ಲವಂತೆ! ಬಸವನ ಬಾಗೇವಾಡಿಯಲ್ಲಿ ಬಸವಣ್ಣನವರ ಬೃಹತ್ ದೇವಸ್ಥಾನ ಕಟ್ಟಿದ ಸಿಂಹಾಸನ ಮಾಮಲೇದಾರರ ಸಮಾಧಿಗೆ ಸ್ಥಳ ಕೊಡಲಿಲ್ಲವಂತೆ! ಇದು ಲಿಂಗಾಯತ ಸಮಾಜ. ಇಂತಹ ಸಮಾಜದಲ್ಲಿ ಸಮಾಜ ಸಂಘಟನಾಕಾರರಿಗೆ ತಮ್ಮ ಸಮಾಜದವರಿಂದಾಗಲಿ ಅಥವಾ ಅದೇ ಸಮಾಜದ ರಾಜಕೀಯ ಧುರೀಣರಿಂದಾಗಲಿ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಸಮಾಜ ಸಂಘಟನೆಯಾದರೆ, ಆ ಸಂಘಟನೆಯ ಲಾಭವನ್ನು ಮೊದಲು ಪಡೆಯುವವರು ರಾಜಕಾರಣಿಗಳು. ಇವರ ತರುವಾಯ ಜಾತಿಯ ಹೆಸರು ಹೇಳಿಕೊಂಡು ಪೋಸ್ಟಿಂಗ್ ಪಡೆಯುವ ಭ್ರಷ್ಟ ಅಧಿಕಾರಿಗಳು. ಸಂಘಟನೆಯ ನಿಜ ಲಾಭ ಸಲ್ಲಬೇಕಾದ ಅಸಂಘಟಿತ ವಲಯಕ್ಕೆ ಸಂಘಟನೆಯಿಂದ ಎಂದೂ ಸಹಾಯವಾಗಿಲ್ಲ.

ಈ ಕಟು ಸತ್ಯ ಇಲ್ಲಿಯ ಸಂಘಟನೆಕಾರರಿಗೂ ಅರಿವಾಗತೊಡಗಿತ್ತು. ಸಂಘಟನೆಯನ್ನು ಹುಟ್ಟುಹಾಕಿ, ಸ್ವಂತ ಹಣ ಖರ್ಚು ಮಾಡಿ, ಊರೂರು ಅಲೆದಾಡಿದವರನ್ನು ಹೊಸದಾಗಿ ಚುನಾಯಿತರಾದ ಜನಪ್ರತಿನಿಧಿಗಳು ನಿರ್ಲಕ್ಷಿಸಿಬಿಟ್ಟರು. ಸಾಮಾನ್ಯವಾಗಿ ಜನಪ್ರತಿನಿಧಿಗಳನ್ನು ‘ಜೀ ಹುಜೂರ್’ಗಳು, ‘ಹೊಗಳುಭಟ್ಟರು’ ಮತ್ತು ‘ವಿಷಯ ಲಂಪಟ’ರು ಸುತ್ತುವರಿದು, ಬೇರೆಯವರು ಒಳಸೇರದಂತೆ ಬೇಲಿ ಹಾಕಿಬಿಡುತ್ತಾರೆ. ಇದರಿಂದ ಸ್ವಾಭಿಮಾನಿ ಹಿಂಬಾಲಕರಿಗೆ ಮತ್ತು ಸಂಘಟನಾಕಾರರಿಗೆ ಇರಿಸುಮುರುಸುಂಟಾಗಿ ಅಂತಹ ನಾಯಕರಿಂದ ದೂರವಾಗಲಾರಂಭಿಸುತ್ತಾರೆ. ಹೊಸದಾಗಿ ಚುನಾಯಿತರಾದ ಬಹುತೇಕ ಪಂಚಮಸಾಲಿ ಶಾಸಕರು ಇದಕ್ಕೆ ಹೊರತಾಗಿರಲಿಲ್ಲ.

ಈ ಮಧ್ಯೆ ಅಧ್ಯಕ್ಷ ಹನುಮನಾಳ ಗುರುಗಳಿಗೂ, ಸಮಾಜದ ಚಿಂತಕರಾಗಿದ್ದ ಬ್ಯಾಳಿ ಮೇಷ್ಟ್ರಿಗೂ ಭಿನ್ನಾಭಿಪ್ರಾಯಗಳು ಮೂಡಿ ಬಿಸಿ ಬಿಸಿ ವಾಗ್ವಾದಗಳು ನಡೆದವಂತೆ. ವಿಷಯ ಸ್ಥಳೀಯ ಶಾಸಕರಾದ ಸಂಗಣ್ಣ ಕರಡಿಯವರನ್ನು ತಲುಪಿತು. ಇದು ಶಾಸಕರಿಗೆ ನುಂಗಲಾರದ ತುತ್ತಾಯಿತು, ಆದರೂ ಎಲ್ಲರನ್ನೂ ಸಮಾಧಾನಪಡಿಸುತ್ತಲೇ ಬಂದಿದ್ದರು. ಆದರೆ ಇದು ಸಂಘಟನೆಯ ಮೇಲೆ ಪರಿಣಾಮ ಬೀರತೊಡಗಿತು. ಸಂಘ ಪ್ರಾರಂಭವಾಗಿ ಅನೇಕ ತಿಂಗಳುಗಳು ಕಳೆದರೂ, ಸದಸ್ಯರ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ. ಪದಾಧಿಕಾರಿಗಳ ಭಿನ್ನಾಭಿಪ್ರಾಯದ ವರದಿಗಳು ಸಂಗಣ್ಣ ಕರಡಿಯವರಿಗೆ ತಲೆನೋವು ತರಲಾರಂಭಿಸಿದವು.

ಕೊಪ್ಪಳದ ಶಾಸಕ ಕರಡಿ ಸಂಗಣ್ಣನವರು ಸಹೃದಯಿ. ಅವರ ಸರಳ ಸ್ವಭಾವ ನಮ್ಮೆಲ್ಲರಿಗೂ ಇಷ್ಟವಾಯಿತು. ಅವರ ಹಾಗೂ ನಮ್ಮ ಮಧ್ಯೆ ಒಡನಾಟ ಹೆಚ್ಚಾಯಿತು. ಅವರಿಗೂ ಸಹಜವಾಗಿ ನಮ್ಮ ಮೇಲೆ ವಿಶ್ವಾಸ ಹುಟ್ಟಿಕೊಂಡಿರಬಹುದು. ಕೊಪ್ಪಳದಲ್ಲಿದ್ದ ಸಂಘವನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ನಮಗೆ ಸಲಹೆ ನೀಡುತ್ತಾ, “ಅಣ್ಣಾ, ನನಗೆ ತಲೆಬಿಸಿಯಾಗಿದೆ. ಈ ಸಂಘವನ್ನು ಕೊಪ್ಪಳದಿಂದ ಕಿತ್ತಿ ಬೆಂಗಳೂರಿಗೆ ಒಯ್ದು ಬಿಡ್ರೀ” ಎಂದರು.

ಪಂಚಮಸಾಲಿ ಸಂಘದ ಪ್ರಧಾನ ಕಚೇರಿ ಬೆಂಗಳೂರಿಗೆ ಬಂತು

ಸಂಘಟನೆ ಆಳವಾಗಿ ಇಳಿಯಬೇಕಾದಲ್ಲಿ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆಯಾಗಬೇಕು. ಆದರೂ ಕೇಂದ್ರ ಕಚೇರಿ ರಾಜಧಾನಿಯಲ್ಲಿರುವುದು ಸ್ವಾಭಾವಿಕ. ಕೊಪ್ಪಳ ಶಾಸಕರ ಇಚ್ಛೆಯಂತೆ ನಾವು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಪ್ರಾರಂಭಿಸಲು ಯೋಚಿಸಿದೆವು. ಕಚೇರಿಯ ಬಾಡಿಗೆ, ಸಿಬ್ಬಂದಿ ಖರ್ಚು ಭರಿಸುವುದು ಹೇಗೆ? ಎಂಬ ಪ್ರಶ್ನೆ ದುತ್ತೆಂದು ಎದುರಾಯಿತು.

WhatsApp Image 2026 06 18 at 10.54.43 AM
ಸಂಗಣ್ಣ ಕರಡಿ,ಡಾ.ಎಂ.ಪಿ.ನಾಡಗೌಡ, ಬೇಲಿಮಠದ ಶ್ರೀಗಳು, ಸಚಿವ ಎ.ಬಿ.ಪಾಟೀಲ, ಸಂಘದ ಅಧ್ಯಕ್ಷ ಬಿ.ಎಂ.ಹನುಮನಾಳ, ಸಭೆಯ ಅಧ್ಯಕ್ಷ ಡಾ.ಆಲೂರ,ಎಂ.ಎಸ್.ಪಾಟೀಲ, ಜಿ.ಬಿ.ಪಾಟೀಲ, ಪ್ರೊ.ನಿಲುಗಲ್.

ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಬಸವರಾಜ ಅಡೂರ ಅವರು ಈ ಸಮಸ್ಯೆಯನ್ನು ಬಗೆಹರಿಸಿದರು. ಲಿಂಕ್ ರಸ್ತೆಯಲ್ಲಿರುವ ಅವರ ಕಚೇರಿ ಸ್ವಲ್ಪ ವಿಶಾಲವಾಗಿತ್ತು. “ನಾಲ್ಕಾರು ಟೇಬಲ್‌ಗಳಲ್ಲಿ ಒಂದು ಟೇಬಲ್ ನ್ನು ಸಮಾಜದ ಕೆಲಸಕ್ಕೆ ಮೀಸಲಾಗಿರಿಸಿ” ಎಂದೆವು. ಅವರು ನಮ್ಮ ಮನವಿಗೆ ಸ್ಪಂದಿಸಿ ಸ್ಥಳ ನೀಡಿದರು. ಇನ್ನು ಸದಸ್ಯತ್ವದ ಅರ್ಜಿ, ರಸೀದಿ ಪುಸ್ತಕಗಳನ್ನು ಮುದ್ರಿಸಬೇಕಾಗಿತ್ತು. ಅವೆಲ್ಲವನ್ನೂ ಮುದ್ರಿಸಿ, ಮುದ್ರಣದ ವೆಚ್ಚವನ್ನು ನಮ್ಮ ನಮ್ಮಲ್ಲಿಯೇ ಹಂಚಿಕೊಂಡು ಕಚೇರಿಯನ್ನು ಪ್ರಾರಂಭಿಸಿದೆವು. ದಿನನಿತ್ಯದ ಕೆಲಸಗಳನ್ನು ನೋಡಿಕೊಳ್ಳಲು ನಾವು ಪ್ರತಿದಿನ ಸಂಜೆ ಅಲ್ಲಿಗೆ ಹೋಗುತ್ತಿದ್ದೆವು. ಲೆಕ್ಕಪತ್ರಗಳನ್ನು ನಿರ್ವಹಿಸಲು ಒಬ್ಬ ಪರಿಣಿತರ ಅವಶ್ಯಕತೆ ಉಂಟಾಗಬಹುದೆಂದು ಊಹಿಸಿ, ಕರ್ನಾಟಕ ಲ್ಯಾಂಡ್ ಬ್ಯಾಂಕಿನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಅಧಿಕಾರಿ ಭರಮಗೌಡರಲ್ಲಿ ವಿನಂತಿಸಿಕೊಂಡಾಗ, “ನಾನೇ ನೋಡಿಕೊಳ್ಳುತ್ತೇನೆ” ಎಂದರು. ಬಿ.ಇ.ಎಲ್. ಕಾರ್ಖಾನೆಯಲ್ಲಿ ಕಾಯಕದಾರಿಯಾದ ಪಾಲಾಕ್ಷ ಬಾಣದ, ಎನ್.ಜಿ.ಇ.ಎಫ್. ಕಾರ್ಖಾನೆಯಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಪೊಲೀಸ್ ಪಾಟೀಲರು ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾರಂಬಿಸಿದರು. ಹೀಗೆ ಸವಾಲುಗಳ ಮಧ್ಯೆ ನಾವು ಸಂಘಟನೆಯನ್ನು ಉಳಿಸಿ, ಬೆಂಗಳೂರಿನಲ್ಲಿ ಮರುಸ್ಥಾಪನೆ ಮಾಡಿದೆವು.

WhatsApp Image 2026 06 18 at 10.56.59 AM

ರಾಜಧಾನಿಯಲ್ಲಿ ಉದ್ಘಾಟನೆಗೊಂಡ ಪಂಚಮಸಾಲಿ ಸಂಘ

ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಸಮಾಜ ಬಾಂಧವರಿಗೆ ಸಂತಸ ತಂದಿತ್ತು. ಆದರೂ ಸಂಘದ ಚಟುವಟಿಕೆಗಳು ಪ್ರತಿಯೊಬ್ಬ ಸಮಾಜ ಬಾಂಧವನಿಗೂ ತಲುಪಿರಲಿಲ್ಲ. ಸಂಘಟನೆಗಳು ಬೆಳೆಯಬೇಕಾದರೆ ಅವು ಸದಾಕಾಲ ಚಲನೆಯಲ್ಲಿರಬೇಕು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಂಚಮಸಾಲಿ ಸಭೆ, ಸಮಾರಂಭಗಳು ಜರುಗುತ್ತಿದ್ದವು. ಕೇಂದ್ರ ಕಚೇರಿಯಿಂದ ನಾವು ಯಾರಾದರೊಬ್ಬರು ಭಾಗವಹಿಸಿ ಸ್ಥಳೀಯರನ್ನು ಹುರುದುಂಬಿಸುತ್ತಿದ್ದೆವು. ಬೆಂಗಳೂರಿನಲ್ಲಿ ಕಚೇರಿ ಪ್ರಾರಂಭವಾಗಿತ್ತು, ಅದರ ಉದ್ಘಾಟನಾ ಸಮಾರಂಭ ಮಾಡಿ, ಪ್ರಚಾರ ಕೊಡಲು ಯೋಜನೆ ಹಾಕಿಕೊಂಡೆವು. ಸಾವಿರಾರು ಜನರನ್ನು ಸೇರಿಸಿ ಸಭೆ ಮಾಡಲು ಇಚ್ಛಿಸಿದ್ದೆವು. ಖರ್ಚು-ವೆಚ್ಚಕ್ಕೆ ಮಾಡುವುದೇನು? ನಮ್ಮ ನಮ್ಮಲ್ಲಿಯೇ ಹಣ ಹೊಂದಿಸಿ ರಾಜಧಾನಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲು ನಿಶ್ಚಯಿಸಿದೆವು.

ಸಾವಿರಾರು ಜನರಿಗೆ ಊಟ, ದೂರದಿಂದ ಬಂದ ಅತಿಥಿಗಳಿಗೆ ತಂಗಲು ವ್ಯವಸ್ಥೆ, ಇನ್ನಿತರೆ ಖರ್ಚುಗಳಿದ್ದವು. ಪ್ರಸಾದ ವ್ಯವಸ್ಥೆಯ ಬಗ್ಗೆ ಚಿಂತಿಸುತ್ತಿರುವಾಗಲೆ ನೆನಪಾದವರು ಹಿರಿಯರಾದ ಬಿ. ಎಂ. ಪಾಟೀಲ ಸಾಹೇಬರು. ಅವರು ಎ. ಪಿ. ಎಂ. ಸಿ. ಕೇಂದ್ರ ಕಚೇರಿಯಲ್ಲಿ ಅಡಿಷನಲ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮಂತ ಯುವಕರೆಂದರೆ ಆ ಹಿರಿಯರಿಗೆ ಪಂಚಪ್ರಾಣ. ಅವರಲ್ಲಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡೆವು. ಅವರ ಒಂದು ಕರೆ ಸಾವಿರಾರು ಸಮಾಜ ಬಾಂಧವರಿಗೆ ಭರ್ಜರಿ ಊಟ ಒದಗಿಸಲಿತ್ತು. “ಅದರ ಕಾಳಜಿ ಬಿಡ್ರಿ” ಎಂದರು ಸಾಹೇಬರು. ಬೆಂಗಳೂರಿನ ಹೃದಯಭಾಗದಲ್ಲಿದ್ದ ಜಯದೇವ ಹಾಸ್ಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಅಂದು ಸಚಿವ ಸಂಪುಟದಲ್ಲಿದ್ದ ಎ. ಬಿ. ಪಾಟೀಲರನ್ನು ಮುಖ್ಯ ಅತಿಥಿಗಳಾಗಿ ಬರಲು ವಿನಂತಿಸಿಕೊಂಡೆವು. ಅವರು ಸ್ವಲ್ಪ ಅನುಮಾನಿಸಿದರು. “ಪಂಚಮಸಾಲಿ ಸಂಘಟನೆಯಲ್ಲಿ ಭಾಗವಹಿಸಿದರೆ ಚುನಾವಣಾ ರಾಜಕೀಯ ಕಷ್ಟ” ಎಂಬುದು ಅವರ ನಿಲುವಾಗಿತ್ತು. ನಮ್ಮೆಲ್ಲರ ಒತ್ತಾಯಕ್ಕೆ ಕಟ್ಟುಬಿದ್ದು ಅವರು ಸಭೆಯಲ್ಲಿ ಭಾಗವಹಿಸಲು ಒಪ್ಪಿಕೊಂಡರು. ಗದುಗಿನ ಡಾ. ಆಲೂರ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿ ಎಂದೆವು. ಸಮಾಜ ಕಟ್ಟಿದ ಗಣ್ಯರಿಗೆ ಕೃತಜ್ಞತೆ ಅರ್ಪಿಸಿ ಅವರನ್ನು ಗೌರವಿಸುವ ಆಸೆ ನಮ್ಮದಾಗಿತ್ತು. ಹನುಮನಾಳ ಗುರುಗಳು, ಗದುಗಿನ ಸುಪ್ರಸಿದ್ಧ ವೈದ್ಯರಾಗಿದ್ದ ಆಲೂರರು, ಯಲಬುರ್ಗಾದ ಸಂಗಪ್ಪ ಸೊರಟೂರ ಸೇರಿದಂತೆ ಸಮಾಜದ ಸಂಘಟನೆ ಪ್ರಾರಂಭಿಸಿದ ಸಂಘಟಕರಿಗೆ ಸಭೆಗೆ ಬರಲು ವಿನಂತಿಸಿಕೊಂಡೆವು. ಶ್ರೀಪಾದಪ್ಪ ಅಧಿಕಾರಿಯವರು ಸಂಘಟನೆಯಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದರು.

ಅದ್ದೂರಿಯಾಗಿ ಸಮಾವೇಶಗೊಂಡ ಸಭೆ

ಸರಿಯಾದ ಸಮಯಕ್ಕೆ ಸಭೆ ಸಮಾವೇಶಗೊಂಡಿತ್ತು. ಬೆಂಗಳೂರಿನಲ್ಲಿ ಸಭೆ ಮಾಡಿ ಜನ ಸೇರಿಸುವುದು ಅತ್ಯಂತ ಕಠಿಣವಾದ ಕಾರ್ಯ. ಅದಕ್ಕೆ ಅಪವಾದವೆನ್ನುವಂತೆ ಸಾವಿರಾರು ಜನ ಸೇರಿದ್ದರು. ನಾವೆಲ್ಲರೂ ಆಶ್ಚರ್ಯಪಡುವಂತೆ ಸಮಾರಂಭಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ನಮ್ಮೆಲ್ಲರ ಹುಬ್ಬೇರಿಸಿತ್ತು. ಬೇಲಿಮಠದ ಪೂಜ್ಯರ ಘನ ಉಪಸ್ಥಿತಿಯಲ್ಲಿ ಸಭೆ ಪ್ರಾರಂಭವಾಯಿತು. ಸಭೆಯಲ್ಲಿ ಡಾ. ಎಂ. ಪಿ. ನಾಡಗೌಡರು, ಎ. ಬಿ. ಪಾಟೀಲರು, ಸಂಗಣ್ಣ ಕರಡಿಯವರು, ವಿಜಾಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಎಂ. ಎಸ್. ಪಾಟೀಲರು ಮತ್ತು ಡಾ. ಆಲೂರ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದ ಹನುಮನಾಳ ಸರ್ ಉಪಸ್ಥಿತರಿದ್ದರು. ಪ್ರೊ. ನಿಲುಗಲ್ ಸ್ವಾಗತ ಕೋರಿದ್ದರು. ನಾನು ಪ್ರಾಸ್ತಾವಿಕ ನುಡಿಗಳನ್ನಾಡಿದ್ದೆ. ಇಲ್ಲೊಂದು ಅಪರೂಪದ ಘಟನೆ ಜರುಗಿತು. ಹರಿಹರ ಪೀಠದಲ್ಲಿ ಇಂದು ಬಹುಚರ್ಚಿತ ವ್ಯಕ್ತಿಯಾಗಿರುವ ಬಸವರಾಜ ದಿಂಡೂರರವರು ಅಂದಿನ ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗಿಯಾಗಿ ನಂತರ ನಡೆದ ಘಟನೆ ಅವರ ವ್ಯಕ್ತಿತ್ವದಂತೆಯೇ ಕುತೂಹಲಕಾರಿಯಾಗಿದೆ.

WhatsApp Image 2026 06 18 at 10.57.33 AM
ಡಾ.ಎಂ.ಪಿ.ನಾಡಗೌಡ,
WhatsApp Image 2026 06 18 at 10.57.58 AM
ಸಂಗಣ್ಣ ಕರಡಿ
WhatsApp Image 2026 06 18 at 10.58.23 AM
ಸಚಿವ ಎ.ಬಿ.ಪಾಟೀಲ
WhatsApp Image 2026 06 18 at 10.58.49 AM
ಡಾ.ಆಲೂರ

ಐದು ಸಾವಿರ ರೂಪಾಯಿ; ಎರಡು ನಿಮಿಷ ಭಾಷಣ

ಜೆ. ಸಿ. ಸಂಸ್ಥೆಯ ಅಧ್ಯಕ್ಷರಾಗಿದ್ದ ಬಸವರಾಜ ದಿಂಡೂರರವರಿಗೆ ಭಾಷಣದ ಖಯಾಲಿ ಬಹಳ. ಅವರ ಕ್ರಾಸ್ ಬದ್ಧ ಮಾತುಗಳು ಯುವ ಜನರನ್ನು ಆಕರ್ಷಿಸುತ್ತಿದ್ದುವಂತೆ. ಪ್ರಪ್ರಥಮವಾಗಿ ಅವರು ಬೆಂಗಳೂರು ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಪ್ರೇಕ್ಷಕರಾಗಿ ಆಗಮಿಸಿದ್ದರು. ಸಭೆ ನಡೆಯುವ ಸಮಯದಲ್ಲಿ ನನ್ನನ್ನು ಪರಿಚಯಿಸಿಕೊಂಡ ಅವರು, “ನಾನು ಎರಡು ನಿಮಿಷ ಈ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕು. ಐದು ಸಾವಿರ ರೂಪಾಯಿಗಳನ್ನು ಸಂಘಕ್ಕೆ ಕಾಣಿಕೆ ನೀಡುತ್ತೇನೆ, ಅವಕಾಶ ಮಾಡಿಕೊಡಿ” ಎಂದರು. “ನಾವು ಯಾರಿಂದಲೂ ಹಣ ಪಡೆದು ಸಮಾರಂಭ ಏರ್ಪಡಿಸಿಲ್ಲ. ನೀವು ಸಮಾಜ ಬಾಂಧವರು, ನೀವು ಮಾತನಾಡಿ” ಎಂದು ಅವರನ್ನು ಸಭೆ ಉದ್ದೇಶಿಸಿ ಮಾತನಾಡಲು ಆಹ್ವಾನಿಸಿದೆ. ಬಹುಮುಖ ವ್ಯಕ್ತಿತ್ವದ ಬಸವರಾಜ ದಿಂಡೂರ ಅವರು ನಮ್ಮವರಲ್ಲಿ ಒಬ್ಬರಾಗಿ, ಮುಂದೆ ಸಮಾಜ ಸಂಘಟನೆ ಇಬ್ಬಾಗ ಮಾಡುವವರೆಗೆ ನಮ್ಮೊಂದಿಗೆ ಇದ್ದವರು.

ರಾಜಕೀಯ ಸ್ಥಿತಿಗತಿ; ಕೃಷ್ಣನ್ ಆಯೋಗ; ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡಿಕೆ

ಕೇಂದ್ರದಲ್ಲಿ ನರಸಿಂಹ ರಾವ್ ಸರ್ಕಾರ ಅಧಿಕಾರದಿಂದ ಕೆಳಗಿಳಿದಿತ್ತು. ಇಡೀ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ತಲೆ ಎತ್ತಿ ಅನೇಕ ರಾಜ್ಯಗಳಲ್ಲಿ ತಮ್ಮ ತಮ್ಮ ಸರ್ಕಾರಗಳನ್ನು ಸ್ಥಾಪಿಸಿದ್ದವು. ಅಧಿಕಾರದ ಧ್ರುವೀಕರಣ ಪ್ರಾರಂಭವಾಗಿತ್ತು. ಕರ್ನಾಟಕದಲ್ಲಿ ಜನತಾದಳದ ದೇವೇಗೌಡರು ಮುಖ್ಯಮಂತ್ರಿಯಾದರೆ, ಆಂಧ್ರದಲ್ಲಿ ಎನ್. ಟಿ. ರಾಮರಾವ್ ಮುಖ್ಯಮಂತ್ರಿಯಾಗಿದ್ದರು. ಉತ್ತರ ಭಾರತದ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಅಧಿಕಾರದಲ್ಲಿದ್ದರೆ, ಬಿಹಾರದಲ್ಲಿ ಲಾಲು ಪ್ರಸಾದ ಯಾದವ್ ಮುಖ್ಯಮಂತ್ರಿಯಾಗಿದ್ದರು. ಓಡಿಶಾದಲ್ಲಿ ಬಿಜು ಪಟ್ನಾಯಕ್, ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮುಖ್ಯಮಂತ್ರಿಗಳಾಗಿದ್ದರು. ಸಮಾಜವಾದದ ಗಾಳಿ ದೇಶದೆಲ್ಲೆಡೆ ಬೀಸಲಾರಂಭಿಸಿತ್ತು. ಇಂತಹ ಸಮಯದಲ್ಲಿ ಹದಿನಾರು ಸಂಸದರನ್ನು ಚುನಾಯಿಸಿದ ದೇವೇಗೌಡರು ದೆಹಲಿಯ ಗದ್ದುಗೆಯನ್ನೇರಿದ್ದರು.

ದೇಶಕ್ಕೆ ಏನಾದರೂ ಹೊಸದನ್ನು ನೀಡಬೇಕು ಎಂಬ ತುಡಿತದಲ್ಲಿದ್ದ ಈ ನಾಯಕರಿಗೆ ತಳ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣದ ಬಗ್ಗೆ ಚಿಂತನೆಗಳಿದ್ದವು. ಈ ಸಮುದಾಯಗಳ ಬಲದಿಂದ ಅಧಿಕಾರದ ಸೂತ್ರ ಹಿಡಿದ ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲು ಯಾದವ್‌ಗೆ ಈ ಸಮುದಾಯಗಳ ಕಲ್ಯಾಣ ಮುಖ್ಯವಾಗಿತ್ತು.
ಇದಕ್ಕೆ ಕಾರಣವೂ ಇತ್ತು. ೯೪-೯೫ರ ಸಮಯದಲ್ಲಿ ಕೇವಲ ಮತಬ್ಯಾಂಕ್ ಆಗಿ ಉಳಿಯಲು ಇಚ್ಛಿಸದ ವಿವಿಧ ಸಮುದಾಯಗಳು ಮೀಸಲಾತಿ ಮತ್ತು ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಘಟಿತವಾಗಲು ಪ್ರಾರಂಭಿಸಿದ್ದವು. ಹೀಗಾಗಿ ಈ ಸಮುದಾಯಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದ್ದವು. ಇಂತಹ ಸಂದಿಗ್ಧ ಸಮಯದಲ್ಲಿ ಎಸ್. ಕೃಷ್ಣನ್ ಅವರು ಅಲ್ಪಸಂಖ್ಯಾತ ಆಯೋಗದಲ್ಲಿದ್ದರು. ಇವರ ದೃಷ್ಟಿಕೋನ ವಿಶಾಲವಾಗಿತ್ತು. ಇವರು ಕೇವಲ ‘ಧಾರ್ಮಿಕ ಅಲ್ಪಸಂಖ್ಯಾತರ’ ಬಗ್ಗೆ ಮಾತ್ರ ಚಿಂತಿಸುತ್ತಿರಲಿಲ್ಲ. “ಅಲ್ಪಸಂಖ್ಯಾತ” ಎಂಬ ವ್ಯಾಖ್ಯಾನವನ್ನು ವಿಶಾಲವಾಗಿಟ್ಟುಕೊಂಡು, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಲಿಂಗಾಯತ ಪಂಚಮಸಾಲಿ ಸೇರಿದಂತೆ ವಿವಿಧ ಪಂಗಡಗಳ ವಿಚಾರಗಳನ್ನು ಆಲಿಸಲು ಮುಕ್ತ ಅವಕಾಶ ನೀಡಿದ್ದರು.

ಇದನ್ನೂ ಓದಿ ಪಂಚಮಸಾಲಿ ಇತಿಹಾಸ- ಭಾಗ 7: ಸುನಾಮಿಯಂತೆ ಸಮುದಾಯದ ಶಾಸಕರು ವಿಧಾನಸಭೆ ಪ್ರವೇಶಿಸಿದ್ದರು!

ಬೆಂಗಳೂರಿಗೆ ಬಂದರು ಎಸ್. ಕೃಷ್ಣನ್

ಅಲ್ಪಸಂಖ್ಯಾತ ಆಯೋಗದವರು ಬೆಂಗಳೂರಿಗೆ ಬರುತ್ತಿದ್ದಾರೆ, ಮೀಸಲಾತಿ ವಿಷಯದಲ್ಲಿ ಸಮುದಾಯಗಳೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯು ನಮಗೆ ತಡವಾಗಿ ದೊರೆಯಿತು. ಅದರಂತೆ ೧೯೯೫ ಫೆಬ್ರವರಿ ತಿಂಗಳ ಮಧ್ಯದಲ್ಲಿ ಎಸ್. ಕೃಷ್ಣನ್ ಬೆಂಗಳೂರಿಗೆ ಬಂದರು. ಆಯೋಗದ ಎದುರು ಸವಾಲ್-ಜವಾಬ್ ಮಾಡಬೇಕಾಗುತ್ತದೆ ಎಂದು ನಮಗೆ ಸಭೆಗೆ ಆಗಮಿಸಿದಾಗಲೇ ತಿಳಿಯಿತು.

“ನನಗೆ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಲು ಬರುವುದಿಲ್ಲ, ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಸುವ ಪ್ರೊಫೆಸರ್, ನೀವೇ ಸೂಕ್ತ, ಹೋಗಿ” ಎಂದರು ಪ್ರೊ. ನಿಲುಗಲ್.


ಮುಂದಿನ ಸಂಚಿಕೆಯಲ್ಲಿ
ಎಸ್. ಕೃಷ್ಣನ್ ಆಯೋಗದಲ್ಲಿ ಜಟಾಪಟಿ

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ ರಾಜಕೀಯ ತಂತ್ರ

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ....

6ನೇ ತರಗತಿಯಿಂದ ಮೂರು ಭಾಷಾ ನೀತಿ ಅನುಷ್ಠಾನ ಪರಿಶೀಲಿಸಿ: ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್‌ ಸೂಚನೆ

ಸಿಬಿಎಸ್‌ಇ ಶಾಲೆಗಳಲ್ಲಿ ಮೂರು ಭಾಷಾ ನೀತಿಯನ್ನು ಜಾರಿಗೆ ತರುವ ವಿಷಯಕ್ಕೆ ಸಂಬಂಧಿಸಿದಂತೆ...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ...