“ಮೀಸಲಾತಿಯು ಕೇವಲ ಆರ್ಥಿಕ ಅಥವಾ ಉದ್ಯೋಗದ ಸೌಲಭ್ಯವಲ್ಲ; ಇದು ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಮತ್ತು ಮುಖ್ಯವಾಹಿನಿಯಿಂದ ವಂಚಿತರಾದ ಸಮುದಾಯಗಳಿಗೆ ನೀಡುವ ಸಾಮಾಜಿಕ ಗೌರವ, ರಾಜಕೀಯ ಪ್ರಾತಿನಿಧ್ಯ ಮತ್ತು ಮಾನವನಿಗೆ ಆತ್ಮವಿಶ್ವಾಸವನ್ನು ತಂದುಕೊಡುವ ಒಂದು ಸಾಮಾಜಿಕ ಕ್ರಾಂತಿಯಾಗಿದೆ…”
“ಎಸ್ ಕೃಷ್ಣನ್ ಆಯೋಗದ ಎದುರು ಜಟಾಪಟಿ” ಎಂಬ ಪದಗಳೊಂದಿಗೆ ಪಂಚಮಸಾಲಿ ಇತಿಹಾಸ ಭಾಗ -8 ಅಂತ್ಯಗೊಳಿಸಿದ್ದೆ. ಭಾಗ-9 ಇಂದಿನ ವರೆಗೂ ಬರೆಯಲಾಗಿರಲಿಲ್ಲ. ಕಾರಣ ಸಣ್ಣದೊಂದು ವಿದೇಶ ಪ್ರವಾಸ, ಸಾಮಾಜಿಕ ಜವಾಬ್ದಾರಿಗಳು ಮೇಲಾಗಿ ಅನಾರೋಗ್ಯದ ಕಾರಣಗಳಿಗಾಗಿ ಭಾಗ-9 ತಡವಾಗಿ ನಿಮ್ಮ ಮುಂದಿದೆ. ಕ್ಷಮೆ ಇರಲಿ.
ಮೀಸಲಾತಿಗೆ ಅರ್ಹರನ್ನು ಗುರುತಿಸಲು 1995ರಲ್ಲಿ ಕೇಂದ್ರ ಸರ್ಕಾರವು (31 ವರ್ಷಗಳ ಹಿಂದೆ) ಒಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿಯ ಸದಸ್ಯರಾಗಿದ್ದ ಎಸ್. ಕೃಷ್ಣನ್ ಅವರು ಸಾರ್ವಜನಿಕ ಅಹವಾಲನ್ನು ಪಡೆಯಲು ಕರ್ನಾಟಕಕ್ಕೂ ಭೇಟಿ ನೀಡಿದ್ದರು. ಆ ಆಯೋಗದ ಎದುರು “ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕು” ಎಂದು ನಾನು ವಾದ ಮಂಡಿಸಿದ್ದೆ.
ಅಂದಿನ ದಿನಗಳಲ್ಲಿ ನಾನು ಮಾಡಿಟ್ಟುಕೊಂಡಿದ್ದ ಹಳೆಯದೊಂದು ಚಿಕ್ಕ ಟಿಪ್ಪಣಿ ಇಂದು ಕೈ ಸೇರಿ ನೆನಪನ್ನು ತಾಜಾಗೊಳಿಸಿ ಇದನ್ನು ಬರೆಯಲು ಪ್ರೇರೇಪಿಸಿತು. ಅತ್ಯಂತ ಕಡು ಬಡವ ಪಂಚಮಸಾಲಿಗಳನ್ನು ನಾನು ಕಣ್ಣಾರೆ ನೋಡಿದ್ದೆ. ಒಂದಾನೊಂದು ಕಾಲದಲ್ಲಿ ಸಣ್ಣ ಭೂ ಹಿಡುವಳಿದಾರರಾಗಿದ್ದ ಇವರು ತಲೆ ತಲಾಂತರದಿಂದ ಭೂಮಿ ವಿಭಜನೆಗೊಳ್ಳುತ್ತ ಹೋಗಿ ಇಂದು ಭೂರಹಿತ ಕೃಷಿ ಕಾಯಕದವರಾಗಿದ್ದನ್ನು ಕಣ್ಣಾರೆ ಕಂಡಿದ್ದೆ. ಇರುವ ಅರ್ಧ- ಮುಕ್ಕಾಲು ಎಕರೆಯಲ್ಲಿ ಜೀವನ ನಿರ್ವಹಣೆ ಕಷ್ಟವಾಗಿ ಇಂದು ಇವರು ಕೃಷಿ ಕೂಲಿಗಳಾಗಿದ್ದಾರೆ. ಮಳೆಯಾಧಾರಿತ ಕೃಷಿ ಕೂಲಿ ನಿರಂತರವಾಗಿರದು. ಕಾರಣ ಜೀವನ ನಿರ್ವಹಣೆಗೆ ಕಟ್ಟಡ ಕಾರ್ಮಿಕರಾಗಿ ಮುಂಬೈ ಬೆಂಗಳೂರಿನ ಬೃಹತ್ ನಗರಗಳಲ್ಲಿ ನರಕಸದೃಶ ಜೀವನ ಸಾಗಿಸುತ್ತಿದ್ದಾರೆ.
ಕೇವಲ ಹುಟ್ಟಿನ ಆಧಾರದಲ್ಲಿ ಮೀಸಲಾತಿ ನೀಡುವ ಬದಲು ಆರ್ಥಿಕ ಆಧಾರದಲ್ಲಿ ಮೀಸಲಾತಿ ನೀಡಬೇಕೆಂದು ನನ್ನ ನಿಲುವಾಗಿತ್ತು. ಇವರಿಗೂ ಓದಿನಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ ಇವರು ಸಮಾಜದ ಮುಖ್ಯ ಭೂಮಿಕೆಯಲ್ಲಿ ಒಂದಾಗುತ್ತಾರೆ, ಎಂಬ ಆಸೆಯಿಂದ ಇವರಿಗೂ ಮೀಸಲಾತಿ ನೀಡಬೇಕು ಎಂದು ನನ್ನ ನಿಲುವಾಗಿತ್ತು.
ನಾನು ನನ್ನ ವಾದವನ್ನು ಪೀಠಿಕೆಯೊಂದಿಗೆ ಪ್ರಾರಂಭಿಸುತ್ತ; “ಮೀಸಲಾತಿ ಎಂಬುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಮುಂದುವರಿದ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿಯೂ ಇದೆ, ಉದಾಹರಣೆಯಾಗಿ ಅಮೆರಿಕ, ಕೆನಡಾ, ನಾರ್ವೆ, ಜರ್ಮನಿ, ಫ್ರಾನ್ಸ್ ಗಳಲ್ಲದೆ ದಕ್ಷಿಣ ಆಫ್ರಿಕಾ, ಮಲೇಷ್ಯಾಗಳೊಂದಿಗೆ ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ನೇಪಾಳಗಳಲ್ಲಿಯೂ ಮೀಸಲಾತಿ ಇದೆ”. ಮೀಸಲಾತಿಯ ಮೂಲ ಉದ್ದೇಶಗಳನ್ನು ಹೇಳುತ್ತಾ “ನಾವು ಕೇಳುತ್ತಿರುವುದು ಸಮರೂಪತೆಯ ಸಿದ್ಧಾಂತ (Substantive Equality Principle) ಮಾತ್ರ. ಎಲ್ಲರೂ ಒಂದೇ ರೇಖೆಯಲ್ಲಿದ್ದಾಗ ಮಾತ್ರ ಸಮಾನತೆ ಅರ್ಥಪೂರ್ಣವಾಗುತ್ತದೆ” ಎಂದು ವಾದ ಮುಂದುವರೆಸಿದೆ. “ಪಂಚಮಸಾಲಿ ಲಿಂಗಾಯತರು ಕೃಷಿಕರು ಮತ್ತು ಕೃಷಿಕಾರ್ಮಿಕರು. ಅವರಲ್ಲಿ ಬಹುಪಾಲು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಿಗೂ ಸಮಾನವಾಗಿ ಬದಕುವ ಹಕ್ಕಿದೆ, ಆ ಹಕ್ಕನ್ನು ನಾನಿಲ್ಲಿ ಪ್ರತಿಪಾದಿಸುತ್ತಿದ್ದೇನೆ” ಎಂಬ ಪ್ರಾರಂಭಿಕ ಪೀಠಿಕೆ ಹಾಕಿ ಆಯೋಗದ ನ್ಯಾಯವಾದಿಗಳ ಪಾಟೀ ಸವಾಲಿಗೆ ತಯಾರಾದೆ.
ಆಯೋಗದ ವಕೀಲರನ್ನಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಚಂದನಗೌಡರನ್ನು ನೇಮಿಸಿಕೊಂಡಿತ್ತು. ನನ್ನ ವಾದಕ್ಕೆ ಪ್ರತಿವಾದ ಮಾಡಲು ಚಂದನಗೌಡರು ಎದ್ದು ನಿಂತರು. ನಾನು ಲಾ ಓದಿದ್ದರೂ ಪ್ರಾಕ್ಟೀಸ್ ಮಾಡುವ ಲಾಯರ್ ಅಲ್ಲ. ಮೇಲಾಗಿ ವೃತ್ತಿಯಲ್ಲಿ ನಾನೊಬ್ಬ ಉದ್ಯಮಿ ಮತ್ತು ಹವ್ಯಾಸಿ ಸಾಮಾಜಿಕ ಕಾರ್ಯಕರ್ತ, ಎದುರಿಗೆ ಪ್ರಸಿದ್ಧ ನ್ಯಾಯವಾದಿ ಚಂದನಗೌಡರು! ಆದರೂ ಎದೆಗುಂದಲಿಲ್ಲ.
“ಸಾಮಾಜಿಕ ನ್ಯಾಯ ಎಂದರೇನು” ಎಂದು ಮೊದಲನೇ ಪ್ರಶ್ನೆ ಕೇಳಿದರು. ಅವರ ಪ್ರಶ್ನೆಗೆ ಉತ್ತರಿಸುತ್ತ, “ಸಾಮಾಜಿಕ ನ್ಯಾಯ ಎಂದರೆ ಬದುಕುವ ಮಾನವರೆಲ್ಲರೂ ಸಮಾನರು ಎಂದು ತಿಳಿಯುವುದೆ ಸಾಮಾಜಿಕ ನ್ಯಾಯವಲ್ಲವೆ? ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯನ್ನು ಸಮಾನ ರೂಪಕ್ಕೆ ತರಲಾಗುವ ಪ್ರಯತ್ನವೆ ಮೀಸಲಾತಿ ಅಲ್ಲವೆ? ಎಂದು ಮರು ಪ್ರಶ್ನೆ ಹಾಕಿದೆ. ಮೀಸಲಾತಿಯು ಸಮಾನತೆ ಮತ್ತು ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಉದ್ದೇಶದಿಂದ ಜಾರಿಗೆ ಬಂದ ಒಂದು ಪ್ರಮುಖ ಆಡಳಿತಾತ್ಮಕ ಮತ್ತು ಸಾಂವಿಧಾನಿಕ ಪರಿಕಲ್ಪನೆಯಾಗಿದೆ”.
“ಮೀಸಲಾತಿಯು ಕೇವಲ ಆರ್ಥಿಕ ಅಥವಾ ಉದ್ಯೋಗದ ಸೌಲಭ್ಯವಲ್ಲ; ಇದು ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಮತ್ತು ಮುಖ್ಯವಾಹಿನಿಯಿಂದ ವಂಚಿತರಾದ ಸಮುದಾಯಗಳಿಗೆ ನೀಡುವ ಸಾಮಾಜಿಕ ಗೌರವ, ರಾಜಕೀಯ ಪ್ರಾತಿನಿಧ್ಯ ಮತ್ತು ಮಾನವನಿಗೆ ಆತ್ಮವಿಶ್ವಾಸವನ್ನು ತಂದುಕೊಡುವ ಒಂದು ಸಾಮಾಜಿಕ ಕ್ರಾಂತಿಯಾಗಿದೆ. ಭಾರತದಲ್ಲಿ ಇದು ಕೇವಲ ಕಲ್ಯಾಣ ಯೋಜನೆಯಲ್ಲ, ಸಂವಿಧಾನದ ಮೂಲಭೂತ ಆಶಯವಾದ ‘ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ’ ವನ್ನು (Social, Economic, and Political Justice) ಎತ್ತಿಹಿಡಿಯುವ ಮೂಲಭೂತ ಹಕ್ಕಿನ ಒಂದು ಭಾಗ. ನಾನು ಪ್ರಸ್ತುತ ಪಡಿಸುತ್ತಿರುವ ಪಂಚಮಸಾಲಿ ಸಮಾಜವು ಜಾತಿಯಲ್ಲಿ ಸ್ಪರ್ಶರಾದರೂ ಆರ್ಥಿಕತೆಯಲ್ಲಿ ಅಸ್ಪೃಶ್ಯರೆ ಆಗಿದ್ದಾರೆ. ಇವರಿಗೂ ಕೂಡ ಸಮಸಮಾಜದ ಹಕ್ಕನ್ನು ನೀಡಬೇಕು. ಸ್ಪರ್ಶ ಅಥವಾ ಅಸ್ಪೃಶ್ಯದಿಂದ ಹೊಟ್ಟೆ ತುಂಬುವುದಿಲ್ಲ. ಕಲ್ಯಾಣ ರಾಜ್ಯದಲ್ಲಿ ಎಲ್ಲರ ಕಲ್ಯಾಣವಾದಾಗ ಮಾತ್ರ ಸದೃಡ ಸಮಾಜ ನಿರ್ಮಿಸಲು ಸಾಧ್ಯ, ಆದರೂ ನಾವು ರಾಜಕೀಯ ಪ್ರತಿನಿಧಿತ್ವ ಕೇಳುತ್ತಿಲ್ಲ, ಕೇವಲ ಬಡ ಮಕ್ಕಳಿಗೆ ಶಿಕ್ಷಣ ಮತ್ತು ಬಡ ಪ್ರತಿಭಾವಂತರಿಗೆ ಉದ್ಯೋಗದ ಮೀಸಲಾತಿ ಕೇಳುತ್ತಿದ್ದೇವೆ ಎಂದುತ್ತರಿಸಿದೆ. (ನಾನು ಮೀಸಲಾತಿಯ ಮೂಲ ಉದ್ದೇಶ ಹೇಳದೆ ಹೋಗಿದ್ದರೆ ನನ್ನ ವಾದಕ್ಕೆ ಯಾವುದೇ ಬೆಲೆ ಬರುತ್ತಿರಲಿಲ್ಲ.)
“ಗೌಡರು ಚೆನ್ನಾಗಿ ವಾದ ಮಾಡುತ್ತಿದ್ದಾರೆ” ಎಂದು ಹುರುದುಂಬಿಸಿದರು ಹಿರಿಯ ನ್ಯಾಯವಾದಿಗಳು.
“ಗೌಡ್ರೆ ಮೀಸಲಾತಿಯ ಮೂಲ ಉದ್ದೇಶವನ್ನು ಸಹ ಹೇಳಿಬಿಡಿ” ಎಂದರು ಪರಿಣಿತ ನ್ಯಾಯವಾದಿಗಳು. ಅವರು ನನ್ನನ್ನು ನನ್ನ ಮಾತಿನ ಜಾಲದಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದರು.
“ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶ್ರೇಣಿಕೃತ ಅಸಮಾನತೆ ಜಾರಿಯಲ್ಲಿದೆ. ಜಾತಿಯ ಆಧಾರದ ಮೇಲೆ ಮೇಲು-ಕೀಳು ಎಂದು ಸಮಾಜವನ್ನು ವಿಂಗಡಿಸಲಾಗಿದೆ. ಇಂದು ಹಿಂದುಳಿದ ಸಮಾಜಗಳು ಮುಖ್ಯವಾಹಿನಿಗೆ ಬರಬೇಕಾದರೆ ಎಲ್ಲರಿಗೂ ಸಮನಾದ ಬದುಕುವ ಹಕ್ಕು ನೀಡಬೇಕು” ಎಂದು ಮೀಸಲಾತಿಯ ಮೂಲ ಉದ್ದೇಶ ಹೇಳಿದೆ.
“ಪಾಟೀಲರೆ ನಾವೆಲ್ಲರೂ ಗೌರವಿಸುವ ಕಿತ್ತೂರ ರಾಣಿ ಚೆನ್ನಮ್ಮ ಯಾವ ಸಮಾಜದವರು” ಎಂದರು ನುರಿತ ವಕೀಲರು. ಆನೆಯನ್ನು ಖೆಡ್ಡಾಗೆ ಕೆಡುವುವ ಮುನ್ಸೂಚನೆ ನನಗೆ ಸಿಕ್ಕಿತು. ನಾನು ಮುಜುಗರವನ್ನು ತೋರಿಸಿಕೊಳ್ಳದೆ, “ಅವರು ಪಂಚಮಸಾಲಿ ಸಮಾಜದವರು” ಎಂದೆ. “ಹಾಗಿದ್ದರೆ ಬೆಳವಡಿ ಮಲ್ಲಮ್ಮ ಯಾರು” ಎಂದರು. “ಅವರು ಮತ್ತು ಅವರ ಪತಿ ಈಶಪ್ರಭು ಕೂಡ ಪಂಚಮಸಾಲಿ ಸಮಾಜದವರು” ಎಂದೆ. “ಹಂದಿಗನೂರು ದೇಸಾಯಿಗಳು, ಗೋವೆಯ ರಾಜರು, ಕೆ.ಎಲ್.ಇ ಸಂಸ್ಥೆ ಕಟ್ಟಿದ ರಾಜಾ ಲಖಮಗೌಡ ಸರ್ ದೇಸಾಯಿಯವರು, ಧಾರವಾಡ ಜಿಲ್ಲೆಯ ಹಂದಿಗನೂರು ದೇಸಾಯಿಯವರು, ಬಿಜಾಪುರ ಜಿಲ್ಲೆಯ ಆಲಮೇಲ ಶಿವಲಿಂಗರಾವ ದೇಶಮುಖರು, ಈಗ ಮಂತ್ರಿಯಾಗಿರುವ ನಾಲತವಾಡ ದೇಶಮುಖರು ಯಾವ ಸಮಾಜದವರು” ಎಂದರು. ಯಾಕೋ ಈ ಪ್ರಶ್ನೆ ನನ್ನನ್ನೇ ಮುಳುಗಿಸುವ ಪ್ರಯತ್ನಕ್ಕೆ ಇಳಿಯುವಂತಿದೆ ಎನಿಸತೊಡಗಿತು. ಸತ್ಯವನ್ನು ಬಾಯಿ ಬಿಡಲೇಬೇಕಿತ್ತು.
“ಇವರೆಲ್ಲರೂ ಪಂಚಮಸಾಲಿ ಸಮಾಜದವರು” ಎಂದೆ.
“ಪಾಟೀಲರೆ ತಾವು ಕರ್ನಾಟಕದಲ್ಲಿ ರಾಜ್ಯವಾಳಿದ ಅರಸರಾದ ಕೆಳದಿ ಅರಸರು, ಸೋದೆಯ ಅರಸರು, ಹಾಗಲವಾಡಿ ಅರಸರು, ಕೊಡಗಿನ ಅರಸರು, ಕಿತ್ತೂರಿನ ಅರಸರಲ್ಲದೆ ಕಾಗತಿಯ ದೇಸಗತಿ, ಸಿರಸಂಗಿ ದೇಸಗತಿ,ತಲ್ಲೂರ ದೇಸಗತಿಯ ಇತಿಹಾಸವನ್ನು ಓದಿರಬಹುದು, ಅಥವಾ ನಿಮ್ಮ ಜಿಲ್ಲೆಯವರಾದ ಆಲಮೇಲ ದೇಶಮುಖರ ಜೀವನ ಚರಿತ್ರೆಯನ್ನಾದರೂ ಓದಿರಬಹುದು. ಅದೂ ಇಲ್ಲದೇ ಹೋದರೆ ಬೆಳಗಾವಿ ಜಿಲ್ಲೆಯ ರಾಜಾಲಖಮಗೌಡರ ಚರಿತ್ರೆಯನ್ನಾದರು ಓದಿರಬಹುದು. ಆ ಚರಿತ್ರೆಗಳಲ್ಲಿ ಈ ಎಲ್ಲ ಸಂಸ್ಥಾನಗಳು ಮತ್ತು ದೇಸಗತಿ ಮನೆತನಗಳು ಸುಮಾರು ಹದಿನೈದನೆಯ ಶತಮಾನದಿಂದಲೇ ರಾಜ ಸನ್ಮಾನವನ್ನು ಪಡೆದು ಆದಿಲ್ ಶಾಹಿ ರಾಜರಿಂದ ದೇಸಗತಿ (ಜಮೀನ್ದಾರಿ) ಪಡೆದಿರುವ ದಾಖಲೆಗಳಿವೆ. ಅಂದಿನ ಕಾಲದಿಂದಲೂ ಇವರು ಜಮೀನ್ದಾರರಾಗಿ ತಮ್ಮ ತಮ್ಮ ಪ್ರದೇಶಗಳನ್ನು ಕಾಪಾಡಿಕೊಂಡು, ಬ್ರಿಟಿಷರು ಹೋಗುವವರೆಗೆ ತಮ್ಮ ದೇಸಗತಿಗಳನ್ನು ಸಾಗಿಸಿಕೊಂಡು ಹೋಗಿದ್ದಾರೆ. ಈ ಎಲ್ಲ ಜಮೀನ್ದಾರರು ಕನಿಷ್ಠ ಪಕ್ಷ ತಮ್ಮ ತಮ್ಮ ಅಧಿಕಾರದಲ್ಲಿರುವ ಸಮಯದಲ್ಲಾದರೂ, ಸಮಾಜದ ಅನಿಷ್ಠ ಪದ್ಧತಿಯಾದ ಅಸ್ಪೃಶ್ಯತೆ, ಮೇಲು-ಕೀಳುಗಳನ್ನು ಕೊನೆಗಾಣಿಸಬಹುದಾಗಿತ್ತಲ್ಲವೇ?” ಎಂದು ನನ್ನ ಉತ್ತರವನ್ನು ಆಲಿಸಲು ಕುಳಿತುಕೊಂಡರು.
“ನೀವು ಕೇವಲ ಇವರನ್ನು ಮಾತ್ರ ಏಕೆ ಗುರಿಪಡಿಸುತ್ತಿರುವಿರಿ? ಇವರು ಕೇವಲ 300-500 ಹಳ್ಳಿಗಳನ್ನಾಳಿದ ಜಮೀನ್ದಾರರಾಗಿರಬಹುದು. ಬ್ರಿಟಿಷರ ಕಾಲದಲ್ಲಿ 565 ಸಂಸ್ಥಾನಗಳಿದ್ದವು, ಭಾರತದ ಸಮಸ್ತ ಆಂತರಿಕ ಆಡಳಿತ ಇವರ ಕೈಯಲ್ಲಿತ್ತು. ಇಂತಹ ಅನಿಷ್ಠ ಪದ್ಧತಿಯನ್ನು ಅಂದೇ ಕೊನೆಗಾಣಿಸಿದ್ದರೆ ಇಂದು ಮೀಸಲಾತಿಯ ಕೂಗೇ ಇರುತ್ತಿರಲಿಲ್ಲವಲ್ಲ! ಅದೇಕೆ ನಮ್ಮದೆ ರಾಜ್ಯದ ಪ್ರತಿಷ್ಠಿತ ಮೈಸೂರು ರಾಜರೂ ಈ ಕಾರ್ಯ ಮಾಡಬಹುದಾಗಿತ್ತಲ್ಲ?” ಎಂದೆ. ಹಿರಿಯ ವಕೀಲರು ಕ್ಷಣಕಾಲ ಸ್ತಂಭೀಭೂತರಾದರು.
ನಾನು, “ಸರ್, ಇತಿಹಾಸದಲ್ಲಿ ಪಂಚಮಸಾಲಿ ಸಮಾಜವು ತನ್ನೊಂದಿಗಿರುವ ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿರುವ ದಾಖಲೆಗಳಿವೆ. ಈ ಸಮಾಜವು ಎಂಟು ಹಿಟ್ಟು ಎಂದು ಕರೆದುಕೊಳ್ಳುವ ಹದಿನೆಂಟು ಜಾತಿಗಳನ್ನು ಸಮನಾಗಿ ಕಂಡಿರುವ ದಾಖಲೆಗಳಿವೆ. ಮೇಲಾಗಿ ಈ ಹದಿನೆಂಟು ಸಮಾಜಗಳು ಕೃಷಿಕಾರ್ಯಕ್ಕೆ ಪೂರಕವಾದ ಸಮಾಜಗಳಾಗಿದ್ದರಿಂದ ಈ ನಾಡನಾಳಿದ ದೇಸಗತಿ ಮನೆತನಗಳು, ಅವರವರ ಕಾಯಕಕ್ಕೆ ತಕ್ಕಂತೆ ತಮ್ಮ ಪ್ರಜೆಗಳಿಗೆ ಉಳಲು ಭೂಮಿಯನ್ನು ನೀಡಿದ ದಾಖಲೆಗಳಿವೆ. ಉದಾಹರಣೆಗೆ ನಮ್ಮೂರ ವಾಲಿಕಾರನೊಬ್ಬನಿಗೆ ಅರವತ್ತು ಎಕರೆ ಜಮೀನಿದೆ. ನಮ್ಮ ಮನೆಯಲ್ಲಿ ದೇವರ ಪೂಜೆ ಮಾಡುವ ಮಠಪತಿಗೆ 45 ಎಕರೆ ಜಮೀನಿದೆ, ನಮ್ಮೂರಲ್ಲಿ ಹೂಕಟ್ಟುವ ಹೂಗಾರನು ಕೂಡ ಜಮೀನ್ದಾರನೇ, ಅಂದು ಈ ಎಲ್ಲ ಸಮಾಜಗಳು ಒಂದಾಗಿ ಸಮನಾಗಿ ಬದುಕುತ್ತಿದ್ದವು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳಿವೆ” ಎಂದೆ.
ನಮ್ಮ ವಾದವೂ ದೀರ್ಘವಾಗುತ್ತಿರುವುದನ್ನು ಗಮನಿಸುತ್ತಿದ್ದ ಎಸ್. ಕೃಷ್ಣನ್ ಅವರು ಮಧ್ಯಪ್ರವೇಶಿಸಿ, “ವಿಷಯಕ್ಕೆ ಬನ್ನಿ” ಎಂದರು. “ಕ್ಷಮಿಸಿ ಸರ್” ಎಂದು ಕ್ಷಮೆ ಕೇಳಿದರು ಹಿರಿಯ ನ್ಯಾಯವಾದಿಗಳು.
“ಪಾಟೀಲರೆ ಪಂಚಮಸಾಲಿ ಸಮಾಜದವರು ಎಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ?” ಎಂದು ಮತ್ತೊಂದು ಪ್ರಶ್ನೆ ಮುಂದಿಟ್ಟರು. “ಈ ಪ್ರಶ್ನೆಗೆ ನಾನು ಉತ್ತರಿಸುವ ಅವಶ್ಯಕತೆ ಇಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜಾತಿ ಆಧಾರಿತ ಚುನಾವಣೆ ನಡೆಯುವುದಿಲ್ಲ. ಯಾರಿಗೆ ನಾಯಕತ್ವದ ಗುಣ ಇರುತ್ತದೆಯೋ ಅವರು ಶಾಸಕ, ಮಂತ್ರಿ ಅಥವಾ ಮುಖ್ಯಮಂತ್ರಿಯಾಗುತ್ತಾರೆ. ಮುಖ್ಯಮಂತ್ರಿಯಾಗಲು ಪಂಚಮಸಾಲಿಗಳಿಗೇನು ರಿಸರ್ವೇಶನ್ ನೀಡಿಲ್ಲವಲ್ಲ” ಎಂದೆ ಖಾರವಾಗಿ.
ಹಿರಿಯ ವಕೀಲರಿಗೆ ಆಘಾತವಾದಂತಾಗಿತ್ತು. ಅವರಿಗೆ ಪಂಚಮಸಾಲಿ ಸಮಾಜವು ಸಮಾಜದ ಮುಖ್ಯವಾಹಿನಿಯಲ್ಲಿ ತೇಲುತ್ತಿರುವ ಶ್ರೇಷ್ಠ ಸಮಾಜವೆಂದು ನಿರೂಪಿಸಬೇಕಾಗಿತ್ತು. ಮೀಸಲಾತಿಯ ಮೂಲ ಕಾರಣವನ್ನು ಹೇಳುತ್ತಲೇ ವಾದ ಮಂಡಿಸುತ್ತಲಿದ್ದೆ. (ನಾನು ಬಾಬಾಸಾಹೇಬರ ಮೀಸಲಾತಿಯ ಮೂಲ ಆಶಯವನ್ನು ಪ್ರತಿನಿಧಿಸುತ್ತಿಲ್ಲವೆಂದು ಒಳಮನಸ್ಸು ನುಡಿಯುತ್ತಿತ್ತು. ಕೃಷಿಕರಾದ ಪಂಚಮಸಾಲಿಗಳಿಗೆ ಖಂಡಿತವಾಗಿಯೂ ಮೀಸಲಾತಿಯ ಅವಶ್ಯವಿದೆ. ಆದರೆ ಅವರ ಬೇಡಿಕೆ ಮೀಸಲಾತಿಯ ಮೂಲ ಉದ್ದೇಶವನ್ನು (core issue) ಸಮರ್ಪಿಸುವುದಿಲ್ಲ. ಭಾರತದಲ್ಲಿ ಮೀಸಲಾತಿಯ ಮೂಲ ಉದ್ದೇಶ ಆರ್ಥಿಕ ಅಸಮಾನತೆಯನ್ನಷ್ಟೇ ಹೋಗಲಾಡಿಸುವುದಲ್ಲ, ಸಾಮಾಜಿಕ ಪರಿವರ್ತನೆ ತರುವ ಉದ್ದೇಶ ಅದಕ್ಕಿದೆ. ಎಲ್ಲರೂ ಒಂದೇ ರೇಖೆಯಲ್ಲಿದ್ದಾಗ ಮಾತ್ರ ‘ಸಮಾನತೆ’ ಅರ್ಥಪೂರ್ಣವಾಗುತ್ತದೆ. ಅಸಮಾನರ ನಡುವೆ ಸಮಾನ ಸ್ಪರ್ಧೆ ಏರ್ಪಡಿಸುವುದು ಅನ್ಯಾಯ. ಆದ್ದರಿಂದ, ಹಿಂದಿರುವವರನ್ನು ಮುಂದಕ್ಕೆ ತರಲು ವಿಶೇಷ ನೆರವು ಬೇಕು, ಇದು ಮೀಸಲಾತಿಯ ಮೂಲ ತತ್ವ. ಶತಶತಮಾನಗಳ ಕಾಲ ಸಮಾಜದ ಕೆಲವರಿಂದ ಶೋಷಣೆಗೆ ಒಳಗಾದ ಜನರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಆಳುವ ಸರ್ಕಾರದ ಮೇಲಿರುತ್ತದೆ. ಒಂದು ದೇಶದ ಆಡಳಿತ, ಶಿಕ್ಷಣ ಮತ್ತು ಅಧಿಕಾರದಲ್ಲಿ ಸಮಾಜದ ಎಲ್ಲ ವರ್ಗಗಳ ಜನಸಂಖ್ಯೆಗೆ ತಕ್ಕಂತೆ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶ್ರೇಣೀಕೃತ ಅಸಮಾನತೆ (Graded Inequality) ಜಾರಿಯಲ್ಲಿದೆ. ಮನುಷ್ಯರನ್ನು ಜಾತಿ ಆಧಾರದ ಮೇಲೆ ಮೇಲು-ಕೀಳು ಎಂದು ವಿಂಗಡಿಸಲಾಗಿದೆ. ಸಮಾಜದ ಒಂದು ವರ್ಗದವರ ಸ್ಪರ್ಶ, ನೆರಳು ಅಥವಾ ಧ್ವನಿಯೂ ಅಪವಿತ್ರ ಎಂಬ ಅಮಾನುಷ ನಂಬಿಕೆಯಿಂದಾಗಿ ಕೋಟ್ಯಂತರ ಜನರನ್ನು ಶಿಕ್ಷಣ, ಆರ್ಥಿಕ ಸಂಪತ್ತು ಮತ್ತು ಮಾನವನ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಲಾಗಿರುವ ವಿಷಯ ಒಂದು ಕ್ಷಣ ತಲೆಯಲ್ಲಿ ಬಂದು ನನ್ನನ್ನು ಅಧೀರನನ್ನಾಗಿ ಮಾಡಿತ್ತು.)
ನನ್ನ ಮನದಲ್ಲಿ ಎದ್ದಿರುವ ತುಮುಲಗಳನ್ನು ಗ್ರಹಿಸಿದವರಂತೆ ನುರಿತ ವಕೀಲರು ಮತ್ತೊಂದು ಪ್ರಶ್ನೆಯನ್ನು ಕೇಳಿದರು. “ಪಾಟೀಲರೆ ನಿಮ್ಮ ಊರಲ್ಲಿ ಪಂಚಮಸಾಲಿಗಳಾದ ನಿಮ್ಮಲ್ಲಿ ಮತ್ತು ಲಿಂಗಾಯತ ಕ್ಷೌರಿಕರ ಮಧ್ಯೆ ಏನಾದರೂ ಸಾಮಾಜಿಕ ವ್ಯತ್ಯಾಸಗಳಿವೆಯೇ?” ಎಂಬ ಘಾತಕ ಪ್ರಶ್ನೆ ಕೇಳಿದರು.
ಇದನ್ನೂ ಓದಿ ಲೇಖನ ಸರಣಿ | ಪಂಚಮಸಾಲಿ ಇತಿಹಾಸ ಭಾಗ 8 – ಪಂಚಮಸಾಲಿ ಶಾಸಕರ ʼಹೈಜಾಕ್’
“ನನ್ನ ಹಾಗೂ ನಮ್ಮೂರಿನ ಕ್ಷೌರಿಕನ ಮಧ್ಯೆ ಸಾಮಾಜಿಕ ಅಸಮಾನತೆ ಇದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇತರ ಪಂಚಮಸಾಲಿ ರೈತ ಕುಟುಂಬದವರು ಅವನನ್ನು ತಮ್ಮ ಸಮಾನನೆಂದೇ ಪರಿಗಣಿಸುತ್ತಾರೆ. ಅಲ್ಲದೆ ಅವನನ್ನು ಗೌರವಪೂರ್ವಕವಾಗಿ ‘ಅಣ್ಣ’ನೆಂದೇ ಸಂಬೋಧಿಸುತ್ತಾರೆ” ಎಂದೆ.
“ಪಾಟೀಲರೆ ನೀವು ಜಮೀನ್ದಾರರು, ನೀವು ಕಣ (ಒಕ್ಕಲು) ಮಾಡಿದಾಗ ನಿಮ್ಮೂರ ಕ್ಷೌರಿಕನು ನಿಮ್ಮಲ್ಲಿ ಆಯಕ್ಕಾಗಿ (ದಾನಕ್ಕಾಗಿ) ಬರುತ್ತಾನೆಯೇ?” ಎಂದು ಮತ್ತೊಂದು ಸವಾಲು ಹಾಕಿದರು ಹಿರಿಯ ನ್ಯಾಯವಾದಿ.
“ಹೌದು, ನಾವು ರಾಶಿ ಮಾಡಿದಾಗ, ಅವನು ಬಂದು ತನ್ನ ಆಯ ತೆಗೆದುಕೊಂಡು ಹೋಗುತ್ತಾನೆ” ಎಂದೆ. “ನಿಮ್ಮೂರಲ್ಲಿ ಎಲ್ಲ ಆಯಗಾರರಿಗೆ ಜಮೀನುಗಳಿವೆ ಎಂದು ಹೇಳಿದ್ದೀರಿ, ಅಲ್ಲವೇ?” ಎಂಬ ಮತ್ತೊಂದು ಪ್ರಶ್ನೆ ಅವರಿಂದ. “ಹೌದು ಹೇಳಿದ್ದೇನೆ.” ಉತ್ತರಿಸಿದೆ. “ಹಾಗಿದ್ದಲ್ಲಿ, ನಿಮ್ಮೂರ ಕ್ಷೌರಿಕನು ತನ್ನ ಹೊಲದಲ್ಲಿ ಬೆಳೆ ಬೆಳೆದು ರಾಶಿ ಮಾಡಿದಾಗ ಪಂಚಮಸಾಲಿಗಳು ಅವನಲ್ಲಿ ಆಯ ಕೇಳಲು ಹೋಗುತ್ತಾರೆಯೆ?” ಉತ್ತರಿಸಲಾಗದ ಪ್ರಶ್ನೆಯ ಬಾಂಬ್ ಎಸೆದಿದ್ದರು ವಕೀಲರು.
ನಾನು ನಿರುತ್ತರನಾದೆ. ನಾನು ಎಂತಹ ತಪ್ಪು ಮಾಡುತ್ತಿದ್ದೇನೆ ಎಂಬ ಅರಿವಾಗಿ ಮುಖ ಕೆಳಗೆ ಹಾಕಿದೆ. ಪಾಟೀಸವಾಲು ಮುಕ್ತಾಯವಾಗಿತ್ತು.
“Next…. Call Reddy Lingayats” ಎಂದರು ಎಸ್. ಕೃಷ್ಣನ್.

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ



