ಪಂಚಮಸಾಲಿ ಇತಿಹಾಸ-ಭಾಗ 7: ಸುನಾಮಿಯಂತೆ ಸಮುದಾಯದ ಶಾಸಕರು ವಿಧಾನಸಭೆ ಪ್ರವೇಶಿಸಿದ್ದರು!

Date:

ಸರ್ಕಾರ ರಚಿಸುವ ಸಮಯದಲ್ಲೇ ಅವಘಡ, ‘ಒಂದೇ ಅಲುಗಿನಲ್ಲಿ ಎರಡು ಕತ್ತಿಗಳನ್ನು ಸೇರಿಸಲಾಗದು’ ಎಂಬಂತೆ ಸ್ವತಂತ್ರ ಮನೋಭಾವದ ಜನತಾ ಪಕ್ಷದ ನಾಯಕರನ್ನು ಕೂಡಿಡುವುದು ಕಠಿಣವಾದ ಕೆಲಸ. ಜನತಾ ಪಕ್ಷವು ವಿಭಿನ್ನ ನಿಲುವುಗಳುಳ್ಳ ವಿಚಾರಗಳನ್ನು ಹೊಂದಿದ್ದರೂ ಕೇವಲ ಇಂದಿರಾಗಾಂಧಿಯವರನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಅನೇಕ ನಾಯಕರೆಲ್ಲರೂ ಸೇರಿ ಜನತಾ ಪಕ್ಷವನ್ನು ಸ್ಥಾಪಿಸಿದ್ದರು.

- Advertisement -

ಒಂದು ಕಾಲದಲ್ಲಿ ಸುಮಾರು 180 ಜನ ಲಿಂಗಾಯತ ಶಾಸಕರು ವಿಧಾನಸಭೆಯಲ್ಲಿದ್ದರೆಂದು ನಾನು ಹಿರಿಯರಿಂದ ಕೇಳಿದ್ದೆ. ಸಮಾಜವಾದದ ಸಿದ್ಧಾಂತದ ಪ್ರಭಾವದಿಂದ ಅವರ ಸಂಖ್ಯೆ ಗಣನೀಯವಾಗಿ ಇಳಿದು, ದೇವರಾಜ ಅರಸರ ಕಾಲಕ್ಕೆ ಅತ್ಯಂತ ಕಡಿಮೆ ಲಿಂಗಾಯತ ಶಾಸಕರು ಶಾಸನಸಭೆಯಲ್ಲಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಲಿಂಗಾಯತದ ಒಂದು ಪಂಗಡದ ಮೂವತ್ನಾಲ್ಕು ಶಾಸಕರು ಶಾಸನ ಸಭೆಯಲ್ಲಿರುವುದು ಒಂದು ಐತಿಹಾಸಿಕ ದಾಖಲೆಯಾಗಿತ್ತು. ಅದಕ್ಕೆ ಕಾರಣವು ಇತ್ತೆನ್ನಿ, ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲರನ್ನು ಪ್ರಧಾನಿ ರಾಜೀವ ಗಾಂಧಿಯವರು ಅವಮಾನಿಸಿ ಮುಖ್ಯಮಂತ್ರಿ ಪದದಿಂದ ಕೆಳಗಿಳಿಸಿದ್ದು ಒಂದು ಪ್ರಬಲ ಕಾರಣವಾಗಿದ್ದರೆ, ಲಿಂಗಾಯತರಲ್ಲಿ ಬಹುಸಂಖ್ಯಾತರಾದ ಪಂಚಮಸಾಲಿ ಸಮಾಜದ ಯುವಕರನ್ನು ಗುರುತಿಸಿದ ರಾಮಕೃಷ್ಣ ಹೆಗಡೆಯವರ ಇವರಿಗೆ ‘ಬಿ ಫಾರಂ’ ನೀಡಿ, ಅವರ ಪರವಾಗಿ ಪ್ರಚಾರ ಮಾಡಿ ಅವರೆಲ್ಲರ ಗೆಲುವಿಗೆ ಕಾರಣರಾಗಿದ್ದರು. ಪ್ರಪ್ರಥಮ ಬಾರಿ ಪಂಚಮಸಾಲಿಗರು ತಮ್ಮ ಅಸ್ಮಿತೆಯನ್ನು ಪ್ರದರ್ಶಿಸಿ ಜನತಾದಳವನ್ನು ಸರಳ ಬಹುಮತ ಪಡೆಯವಂತೆ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಸರ್ಕಾರ ರಚಿಸುವ ಸಮಯದಲ್ಲೇ ಅವಘಡ, ‘ಒಂದೇ ಅಲುಗಿನಲ್ಲಿ ಎರಡು ಕತ್ತಿಗಳನ್ನು ಸೇರಿಸಲಾಗದು’ ಎಂಬಂತೆ ಸ್ವತಂತ್ರ ಮನೋಭಾವದ ಜನತಾ ಪಕ್ಷದ ನಾಯಕರನ್ನು ಕೂಡಿಡುವುದು ಕಠಿಣವಾದ ಕೆಲಸ. ಜನತಾ ಪಕ್ಷವು ವಿಭಿನ್ನ ನಿಲುವುಗಳುಳ್ಳ ವಿಚಾರಗಳನ್ನು ಹೊಂದಿದ್ದರೂ ಕೇವಲ ಇಂದಿರಾಗಾಂಧಿಯವರನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಅನೇಕ ನಾಯಕರೆಲ್ಲರೂ ಸೇರಿ ಜನತಾ ಪಕ್ಷವನ್ನು ಸ್ಥಾಪಿಸಿದ್ದರು. ಇವರೆಲ್ಲ ನಾಯಕರು ಸ್ವತಂತ್ರ ಭಾವನೆ ಹೊಂದಿದವರಾಗಿದ್ದರು. ಮೇಲಾಗಿ ನಿಜವಾದ ಪ್ರಜಾಪ್ರಭುತ್ವವಾದಿಗಳು. ಇದೆ ಕಾರಣದಿಂದಲೇ 1977 ರಲ್ಲಿ ಮುರಾರ್ಜಿ ದೇಸಾಯಿಯವರ ಸರ್ಕಾರ ಪಥನವಾಗಿತ್ತು. ತಮ್ಮ ಹಿಂದಿನ ತಪ್ಪನ್ನು ಅರಿತರೂ ಜನತಾದಳದ ನಾಯಕರಾದ ರಾಮಕೃಷ್ಣ ಹೆಗಡೆಯವರು ದೇವೇಗೌಡರು ತಮ್ಮ ಹಠಮಾರಿತನ ತೊರೆದಿರಲಿಲ್ಲ.

ಅಭೂತ ಪೂರ್ವ ಜಯಗಳಿಸಿದರೂ 1994ರ ಸಂತೋಷದ ಸಮಯದಲ್ಲಿ ಒಂದು ಅಹಿತಕರ ಘಟನೆ ಅಂದು ನಡೆದು ಹೋಗಿತ್ತು. ಜನತಾದಳದ ವರಿಷ್ಠ ನಾಯಕರಾದ ರಾಮಕೃಷ್ಣ ಹೆಗಡೆಯವರ ಮೇಲೆ ದೇವೇಗೌಡರ ಹಿಂಬಾಲಕರು ಚಪ್ಪಲಿ ತೂರಿ ಗೌಡರನ್ನು ಮುಖ್ಯಮಂತ್ರಿಯಾಗಿಸಿದ್ದರು!

WhatsApp Image 2026 06 13 at 2.08.19 PM2 1
ಕೆ.ಶರಣಪ್ಪ.ಬಿ.ಎಸ್.ಪಾಟೀಲ ಮನಗೂಳಿ, ಚಂದ್ರಶೇಖರ ಮಾಮಣಿ, ಎಂ.ಸಿ.ಮನಗೂಳಿ, ಸೋಮನಗೌಡ ಪಾಟೀಲ ಮನಗೂಳಿ,ಸಂಗನಗೌಡ ನಾಡಗೌಡ, ಎಂ.ವಿ.ಪಾಟೀಲ ಮತ್ತು ಅಶೋಕ ಬೆಳವಲ.

‘ಒಗ್ಗಟ್ಟಿನಲ್ಲಿ ಬಲವಿದೆ’- ಸಾಮಾನ್ಯರಾದ ನಮ್ಮಂತವರಿಗೆ ಇಂತಹ ಅರಿವು ಇರುತ್ತದೆ. ಅಧಿಕಾರದ ಮದವೇರಿದ ನಾಯಕರಿಗೆ ಸಾಮಾನ್ಯ ಜ್ಞಾನ ಕೆಲವು ಬಾರಿ ಕೈ ಕೊಟ್ಟು ಬಿಡುತ್ತದೆ. ಉತ್ತರ ಕರ್ನಾಟಕದಲ್ಲಿ ಸುನಾಮಿಯಂತೆ ಗೆದ್ದುಬಂದಿದ್ದ ಪಂಚಮಸಾಲಿ ಶಾಸಕರನ್ನು ಒಂದೆಡೆ ಸೇರಿಸಿ ಹಿರಿಯರಿಂದ ಪಾಠ ಮಾಡಿಸುವ ಉದ್ದೇಶದಿಂದ ನಾನು ಇವರನ್ನೆಲ್ಲ ಒಂದೆಡೆ ಸೇರಿಸಲು ಉತ್ಸುಕನಾಗಿದ್ದೆ. ಅದಕ್ಕೆ ಹಿಂದೆ ಪ್ರತಿಫಲವು ಸಿಕ್ಕಿತ್ತು. ಬಿಜಾಪುರ ಜಿಲ್ಲೆಯ ಉತ್ತರ ಭಾಗದಿಂದ ಆರು ಶಾಸಕರು ಚುನಾಯಿತರಾಗಿದ್ದರು. ತಿಕೋಟಾ ಕ್ಷೇತ್ರದಿಂದ ಶಿವಾನಂದ ಪಾಟೀಲ, ಸಿಂದಗಿಯಿಂದ ಎಂ.ಸಿ. ಮನಗೂಳಿ, ಮುದ್ದೇಬಿಹಾಳದಿಂದ ಶ್ರೀಮತಿ ವಿಮಲಾಬಾಯಿ ದೇಶಮುಖರವರು ಜನತಾದಳದಿಂದ ಚುನಾಯಿತರಾಗಿದ್ದರೆ, ಇಂಡಿ ಕ್ಷೇತ್ರದಿಂದ ರವಿಕಾಂತ ಪಾಟೀಲರು ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಇಂದಿನ ‘ಹಿಂದೂ ಹುಲಿ’ ಯತ್ನಾಳ್ ಬಸನಗೌಡರು ಮೊದಲ ಬಾರಿ ವಿಜಾಪುರ ನಗರದಿಂದ ಬಿಜೆಪಿಯ ಶಾಸಕರಾಗಿದ್ದರು. ‘ಸೋಲಿಲ್ಲದ ಸರದಾರ’ರಾದ ಮನಗೂಳಿಯ ಬಿ.ಎಸ್. ಪಾಟೀಲರು ಕಾಂಗ್ರೆಸ್ ಪಕ್ಷದಿಂದ ಆರನೇ ಬಾರಿ ಚುನಾಯಿತರಾಗಿದ್ದರು.

ಜನತಾದಳದಿಂದ ಕೆಳಮನೆಗೆ ಚುನಾಯಿತರಾದ ಮೇಲಿನ ನಾಲ್ವರು ಶಾಸಕರೊಂದಿಗೆ, ಮೇಲ್ಮನೆಯ ಸದಸ್ಯರಾಗಿದ್ದ ಡಾ. ಎಂ. ಪಿ. ನಾಡಗೌಡರು ಇವರೆಲ್ಲರಿಗಿಂತ ಹಿರಿಯರು ಮತ್ತು ರಾಮಕೃಷ್ಣ ಹೆಗಡೆಯವರ ಆಪ್ತರು. ಪ್ರಥಮ ಬಾರಿ ಚುನಾಯಿತರಾದ ಈ ಶಾಸಕರು ನಾಡಗೌಡರ ಹಿರಿಯತನವನ್ನು ಒಪ್ಪಿದ್ದರೆ, ಪ್ರಥಮ ಹಂತದಲ್ಲಿಯೇ ಡಾ. ಎಂ. ಪಿ. ನಾಡಗೌಡರು ಸಚಿವರಾಗಬಹುದಿತ್ತು. ಆದರೆ, ಈ ಹಿರಿತನವನ್ನು ಒಪ್ಪಲು ಯುವ ಶಾಸಕರು ತಯಾರಿರಲಿಲ್ಲ. ಎಲ್ಲರಿಗೂ ಸಚಿವರಾಗುವ ಬಯಕೆ, ಅದರಂತೆ ತಮ್ಮ ತಮ್ಮ ಪ್ರಯತ್ನ ಪ್ರಾರಂಭಿಸಿದ್ದರು.

ಮೂರ್ಖ ಸಲಹೆ

ಇವರೆಲ್ಲರೂ ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಎಲ್ಲರೊಂದಿಗೆ ಚರ್ಚಿಸುತ್ತಾ, “ನಿಮ್ಮಲ್ಲಿ ಯಾರಾದರೊಬ್ಬರು ಸಚಿವರಾಗುತ್ತೀರಿ, ಒಟ್ಟಾಗಿ ಸೇರಿ ಒಬ್ಬರ ಹೆಸರನ್ನು ಸೂಚಿಸಿದರೆ ಖಂಡಿತ ವಿಜಾಪುರ ಜಿಲ್ಲೆಗೆ ಮಂತ್ರಿ ಸ್ಥಾನ ಒಲಿಯಲಿದೆ” ಎಂದು ಹೇಳಿದ್ದೆ ದೇವೇಗೌಡರು ಮುಖ್ಯಮಂತ್ರಿಯಾದಾಗ. ಇದೊಂದು ಮೂರ್ಖತನದ ಮತ್ತು ಶಾಸಕರಿಗೆ ಅಪ್ರಿಯವಾದ ನನ್ನ ಸಲಹೆಯಾಗಿತ್ತು. ‘ಇವನೊಬ್ಬ ಹುಚ್ಚ’ ಎಂದು ಮುಖ ಹುಳ್ಳಗೆ ಮಾಡಿದ್ದರು ನೂತನ ಶಾಸಕರು. ನನ್ನ ಸಲಹೆಯನ್ನು ಯಾರೂ ಪರಿಗಣಿಸಲಿಲ್ಲವೆಂದು ಬೇರೆ ಹೇಳಬೇಕೆ?

ಸಿಗದ ಸಚಿವ ಸ್ಥಾನ ಮಂತ್ರಿಮಂಡಲ ರಚನೆಯಾಯಿತು. ಬಿಜಾಪುರ ಜಿಲ್ಲೆಯಿಂದ ಯಾರೊಬ್ಬರೂ ಸಚಿವರಾಗಲಿಲ್ಲ. ಸಂಪುಟ ವಿಸ್ತರಣೆಯ ನಂತರ ನಾವೆಲ್ಲ ಮತ್ತೊಮ್ಮೆ ಒಂದೆಡೆ ಸೇರಿದೆವು. ಆಗ ಎಲ್ಲರ ಅಹಂ ಇಳಿದಿತ್ತು. “ನಿಮ್ಮ ಮಾತನ್ನು ನಾವು ಕೇಳಬೇಕಾಗಿತ್ತು” ಎಂದಿದ್ದರು ಸಿಂದಗಿಯ ಎಂ.ಸಿ. ಮನಗೂಳಿಯವರು.

ಪ್ರಥಮ ಬಾರಿಗೆ ಒಗ್ಗೂಡಿದ ಸಮಾಜದ ನಾಯಕರು

ವಿಜಾಪುರ ಜಿಲ್ಲೆಯ ಶಾಸಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದ ನಾನು ರಾಜ್ಯಾದ್ಯಂತ ಚುನಾಯಿತರಾದ ಪಂಚಮಸಾಲಿ ಸಮಾಜದ ಎಲ್ಲ ಶಾಸಕರನ್ನು ಒಂದೆಡೆ ಕೂಡಿಸಬಹುದಲ್ಲವೇ? ಎಂಬ ಆಲೋಚನೆ ನನ್ನಲ್ಲಿ ಮೂಡಿತು. ನನ್ನ ಆಸೆಯನ್ನು ಗೆಳೆಯ ನಾಡಗೌಡ ಸಂಗಣ್ಣನಲ್ಲಿ ಹಂಚಿಕೊಂಡೆ. (ಸಂಗನಗೌಡ ಪರುತಗೌಡ ನಾಡಗೌಡರು ಒಬ್ಬ ತರುಣ ಇಂಜಿನಿಯರ್. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಉತ್ತರ ಕರ್ನಾಟಕದ ಅದ್ವಿತೀಯ ನಾಯಕರಾಗಿದ್ದ ಮಾಜಿ ಸಚಿವರು ಹಾಗೂ ಪೂಜ್ಯ ಪಿ. ಎಂ. ನಾಡಗೌಡರ ಚಿರಂಜೀವಿ) ಸಂಗಣ್ಣ ನನ್ನ ವಿಚಾರ ಕೇಳಿ ಉತ್ಸುಕರಾದರು.

WhatsApp Image 2026 06 13 at 2.08.17 PM
ಜಿ ಬಿ ಪಾಟೀಲ

ನಾವಿಬ್ಬರೂ ಸುಮಾರು 35-36 ವಯಸ್ಸಿನವರು. ‘ನಮ್ಮೊಂದಿಗೆ ಹಿರಿಯ ತಲೆಮಾರಿನವರೊಬ್ಬರಿದ್ದರೆ ನಮ್ಮ ಮಾತಿಗೆ ಹೆಚ್ಚು ತೂಕ’ ಎಂದೆ. ಆಗ ನಾಡಗೌಡರಿಗೆ ನೆನಪಾದರು, ತಮಗೆ ಪಾಠ ಮಾಡಿದ್ದ ಪ್ರೊಫೆಸರ್ ಸಿ.ಎಸ್. ನಿಲುಗಲ್ ಸರ್. ಬಾದಾಮಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಪಂಚಮಸಾಲಿ ಪ್ರೊಫೆಸರ್ ಅವರು. ಪ್ರೊಫೆಸರ್‌ಗೆ ಇಸ್ಪೀಟ್ ಆಟವೆಂದರೆ ಪಂಚಪ್ರಾಣ. ಕಾಲೇಜಿನಿಂದ ಹಿಂತಿರುಗಿ, ಮನೆಯಲ್ಲಿ ಊಟ ಮುಗಿಸಿ, ನೇರವಾಗಿ ಕ್ಲಬ್ಬಿಗೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದರು ನಮ್ಮ ಹಿರಿಯರು. “ಪ್ರೊಫೆಸರ್ ಅವರನ್ನು ಕಾಣೋಣ” ಎಂದೆ. “ಅವರು ಮನೆಯಲ್ಲಿ ಸಿಗುವುದಿಲ್ಲ, ಅವರನ್ನು ಕಾಣಬೇಕಾದರೆ ಮಹಾಲಕ್ಷ್ಮೀ ಲೇಔಟ್ ಕ್ಲಬ್ಬಿಗೆ ಹೋಗಬೇಕು” ಎಂದರು ಸಂಗಣ್ಣ. ಅಲ್ಲಿಗೆ ದೌಡಾಯಿಸಿದೆವು. ಸಹಾಯಕನ ಮುಖಾಂತರ ಪ್ರೊಫೆಸರ್ ಹೊರಬರಲು ವಿನಂತಿಸಿಕೊಂಡೆವು. ಗಾಬರಿಯಿಂದ ಹೊರಬಂದರು ಪ್ರೊಫೆಸರ್ ನಿಲುಗಲ್. ಬಂದ ವಿಷಯ ತಿಳಿಸಿದೆವು. ನಿಟ್ಟುಸಿರು ಬಿಟ್ಟರು ಪ್ರೊಫೆಸರ್! “ಇಷ್ಟೇನಾ” ಎಂದರು. ಹಿರಿಯರಾದರೂ ಮಗುವಿನ ಮನಸ್ಸುಳ್ಳವರು ಸಂಗಣ್ಣನ ಮೇಷ್ಟ್ರು. ಬಲು ಉತ್ಸಾಹಿಗಳು. “ಆಗಲಿ, ನಡೀರಿ” ಎಂದರು ಸಣ್ಣ ಮಕ್ಕಳಂತೆ.

ಪ್ರೊಫೆಸರ್ ಸಿ.ಎಸ್. ನಿಲುಗಲ್
ಪ್ರೊಫೆಸರ್ ಸಿ.ಎಸ್. ನಿಲುಗಲ್

ಮೂವತ್ತು ಗ್ರಾಂ ಬಂಗಾರ ಖರೀದಿಸುವಷ್ಟು ಹಣ ಸೇರಿತು

ನಾಲ್ಕು ಸಾವಿರ ರೂಪಾಯಿ ನನ್ನ ಜೇಬಿನಲ್ಲಿದ್ದವು. “ನಿಮ್ಮ ಜೇಬಿನಲ್ಲಿ ಹಣ ಎಷ್ಟಿದೆ ಸಂಗಣ್ಣ?” ಎಂದೆ. “ಯಾಕೆ? ಎಷ್ಟು ಬೇಕು ಹೇಳಿ” ಎಂದರು. “ನಾಲ್ಕು ಸಾವಿರ ಕೊಡಿ” ಎಂದೆ. “ಮೇಷ್ಟ್ರೇ ನೀವು ನಾಲ್ಕು ಸಾವಿರ ಕೊಡಿ” ಎಂದೆ. ಹನ್ನೆರಡು ಸಾವಿರ ರೂಪಾಯಿ ನನ್ನ ಕೈ ಸೇರಿದ್ದವು. ಅಂದರೆ ಅಂದಿನ ದಿನಗಳಲ್ಲಿ ಮೂವತ್ತು ಗ್ರಾಂ ಚಿನ್ನವನ್ನು ಖರೀದಿಸುವಷ್ಟು ಹಣ ನನ್ನಲ್ಲಿ ಜಮೆಯಾಗಿತ್ತು. ಅಂದರೆ ಇಂದಿನ ನಾಲ್ಕುವರೆ ಲಕ್ಷ ರೂಪಾಯಿಗಳಿಗೆ ಸಮನಾದ ಮೊತ್ತದಲ್ಲಿ, ಮೂವತ್ನಾಲ್ಕು ಶಾಸಕರ ಸನ್ಮಾನಿಸಿ, ಪಂಚಮಸಾಲಿಗಳ ಬವಣೆಗಳ ಅವಲೋಕನ ಮಾಡುವುದು ಅಂದಿನ ಗುರಿಯಾಗಿತ್ತು.

ಎಲ್ಲಿ ಸಭೆ ಸೇರಬೇಕು?

ಹನ್ನೆರಡು ಸಾವಿರ ರೂಪಾಯಿಯಲ್ಲಿ ನೂರು ಜನರಿಗೆ ಊಟದ ವ್ಯವಸ್ಥೆ ಎಲ್ಲಿ! ಎಂಬ ಚರ್ಚೆ ಪ್ರಾರಂಭವಾಯಿತು. ಮುಂಬೈಯಲ್ಲಿ ನೌಕರಿ ಮಾಡಿದ ನನಗೆ ಫೈವ್ ಸ್ಟಾರ್ ಕಲ್ಚರ್ ಅಂಟಿಕೊಂಡಿತ್ತು. “ಸಭೆಯನ್ನು ಫೈವ್ ಸ್ಟಾರ್ ಹೋಟೆಲಿನಲ್ಲಿ ಅರೇಂಜ್ ಮಾಡೋಣ” ಎಂದೆ. ಅದಕ್ಕೆ ಕಾರಣವು ಇತ್ತು. ಸಭೆ ನಡೆಯುವ ಸ್ಥಳ ಶಾಸಕ ಭವನಕ್ಕೆ ಹತ್ತಿರವಾಗಿರಬೇಕು, ಸ್ವಚ್ಛ ಹಾಗೂ ಸುಂದರವಾಗಿರಬೇಕೆಂಬ ನನ್ನ ಅಭಿಪ್ರಾಯವನ್ನು ಸಹಮತಿಸಿದರು ಇನ್ನಿಬ್ಬರು. ಸುಮಾರು ನೂರು ಜನಕ್ಕೆ ಊಟ ಹಾಗೂ ಸ್ಥಳ ಸಿಗುವುದು ಪಂಚತಾರಾ ಹೊಟೇಲಿನಲ್ಲಿ ವ್ಯವಸ್ಥೆಮಾಡುವುದು ಕಠಿಣವಾಗಿತ್ತು. ಆ ಕಾಲದಲ್ಲಿ ಹೊಸದೊಂದು ಹೋಟೆಲ್ ಪ್ರಾರಂಭವಾಗಿತ್ತು. ಅದು ಚಿಕ್ಕದಾದರೂ ಅದ್ದೂರಿಯಾಗಿತ್ತು. ರಮಣಶ್ರೀ ಕಂಫರ್ಟ್ಸ್ ಎಂಬ ಥ್ರೀ ಸ್ಟಾರ್ ಹೋಟೆಲ್ ನಮಗೆಲ್ಲ ಪಸಂಧ ಆಯಿತು. ಅಲ್ಲಿಯೇ ಮಾಡುವುದೆಂದು ನಿರ್ಧಾರ ಮಾಡಿದೆವು. ಹೋಟೆಲ್ ಬುಕ್ ಮಾಡುವಾಗ ನಮಗೆ ಬಜೆಟ್ ಕಡಿಮೆ ಬೀಳಲಿದೆ ಎಂಬ ಅನುಭವವಾಯಿತು. ನಮ್ಮೊಂದಿಗೆ ಹೋಟೆಲ್ ನೋಡಲು ಬಂದಿದ್ದ ಟೆಲಿಕಾಂ ಇಂಜಿನಿಯರ್ ಒಬ್ಬರು, “ನಾನು ಸ್ವಲ್ಪ ಹಣ ಸಹಾಯ ಮಾಡುತ್ತೇನೆ” ಎಂದು ನಮ್ಮ ಬವಣೆಯನ್ನು ಕಡಿಮೆ ಮಾಡಿದರು.

ರಾಜಕಾರಣಿಗಳನ್ನು ಒಂದೆಡೆ ಸೇರಿಸುವುದೆಂದರೆ ಕಪ್ಪೆಯನ್ನು ತೂಗಿದಂತೆ ಎಂದು ಹೇಳುತ್ತಿದ್ದರು ಹಿರಿಯರಾದ ಮನಗೂಳಿ ಬಿ. ಎಸ್. ಪಾಟೀಲರು. ನಾವು ಮೂವತ್ತನಾಲ್ಕೂ ಶಾಸಕರನ್ನು ಒಗ್ಗೂಡಿಸಲಿದ್ದೆವು. ಎಲ್ಲರಿಗೂ ಅನಕೂಲವಾದ ಸಮಯವನ್ನು ಹೊಂದಿಸುವುದು ತುಂಬಾ ಕಷ್ಟದ ಕೆಲಸ. ನಾವು ಸಭೆಯ ದಿನಾಂಕ ಹಾಗೂ ಸಮಯ ನಿರ್ಧರಿಸಿಬಿಟ್ಟೆವು. “ಇಂಥ ದಿನ, ಇಂಥ ಸಮಯದಲ್ಲಿ ಸಭೆ ಸೇರಲು ನಿಶ್ಚಯಿಸಲಾಗಿದೆ ನೀವು ಬರಬೇಕು” ಎಂದು ಮಾತ್ರ ಹೇಳಿ ಸಂಧಾನಕ್ಕೆ ಸಿದ್ದರಿಲ್ಲ ಎಂಬಂತೆ ವರ್ತಿಸಲು ನಿರ್ಧರಿಸಿದ್ದೆವು. ಶಾಸಕ ಭವನದಲ್ಲಿದ್ದ ಒಬ್ಬೊಬ್ಬ ಶಾಸಕರನ್ನು ಭೇಟಿಯಾಗುತ್ತಾ ಮುನ್ನಡೆದೆವು.

WhatsApp Image 2026 06 13 at 2.08.19 PM1
ಎಚ್.ಶಿವಪ್ಪ ಅವರನ್ನು ಬರಮಾಡಿಕೊಂಡವರು ಶಿರಿಯಣ್ಣವರ್

ಮೊದಲಿಗೆ ಭೇಟಿಯಾದೆವು ಪರಸಗಡದಿಂದ ಚುನಾಯಿತರಾಗಿದ್ದ ಚಂದ್ರಶೇಖರ ಮಾಮನಿಯವರನ್ನು. ಅದ್ಭುತವಾದ ವ್ಯಕ್ತಿತ್ವವುಳ್ಳವರಾಗಿದ್ದರು ಅವರು. ಆದರದಿಂದ ನಮ್ಮನ್ನು ಬರಮಾಡಿಕೊಂಡು ಮಾತನಾಡುತ್ತಾ, ನನ್ನ ತಮ್ಮನಿಗೆ ಅವರ ಮಗಳನ್ನು ನೋಡಿದ್ದನ್ನು ನಮ್ಮ ಭೇಟಿಯ ಸಮಯದಲ್ಲಿ ನೆನಪಿಸಿದರು. ಬಹಳ ಉತ್ಸಾಹದಿಂದ ಸಭೆಗೆ ಬರುವುದಾಗಿ ತಿಳಿಸಿ, ಬೆನ್ನು ತಟ್ಟಿದರು. ಕಲಘಟಗಿಯಿಂದ ಚುನಾಯಿತರಾದ ಪಿ.ಸಿ. ಸಿದ್ದನಗೌಡರು ಸ್ನೇಹಜೀವಿ. ನಾವು ಬೆಟ್ಟಿಯಾದಾಗ ಅಪಘಾತದಲ್ಲಿ ಸಿಕ್ಕು ಕಾಲು ಮುರಿದುಕೊಂಡಿದ್ದರು. ನಮ್ಮ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ ಸಭೆಗೆ ಬರುವುದಾಗಿ ತಿಳಿಸಿದರು. ಇನ್ನು ವಿಜಾಪುರ ಜಿಲ್ಲೆಯ ಶಾಸಕರೆಲ್ಲರೂ ನನಗು ಹಾಗೂ ಸಂಗಣ್ಣನವರಿಗೂ ಸಂಬಂಧಿಕರೇ ಆಗಿದ್ದರು, ಅವರೆಲ್ಲರನ್ನೂ ಆಹ್ವಾನಿಸಿದೆವು.

ಶಾಸಕರು
ಅಂಬಡಗಟ್ಟಿ, ರವಿ ಪಾಟೀಲ ( ಹಳದಿ ಟೀ ಶರ್ಟ)ಕಾಶಪ್ಪನವರ ಮತ್ತು ಮಾಮಣಿಯವರು
WhatsApp Image 2026 06 13 at 2.08.21 PM6

ಧಾರವಾಡ ಜಿಲ್ಲೆಯ ರೋಣದಿಂದ ಚುನಾಯಿತರಾಗಿದ್ದ ಶ್ರೀಶೈಲಪ್ಪ ಬಿದರೂರರವರು ಪ್ರತಿಜ್ಞಾವಿಧಿ ಸ್ವೀಕರಿಸಿದ ದಿನವೇ ತಾವಾಗಿಯೇ ನಮ್ಮ ಮನೆಗೆ ಊಟಕ್ಕೆ ಬಂದ ಮಹಾ ಸರಳಜೀವಿ. ಶಿರಹಟ್ಟಿಯ ಮಹಾಂತ ಶೆಟ್ಟರ್ ಗ್ರಾಮೀಣ ಭಾಗದ ನಿಜವಾರಸುದಾರ ಎನಿಸಿದರು. ಶಿಗ್ಗಾಂವ ಕ್ಷೇತ್ರದಿಂದ ಮರು ಆಯ್ಕೆಗೊಂಡಿದ್ದ ಕಾಂಗ್ರೆಸ್ ಪಕ್ಷದ, ವಕೀಲರಾದ ಮಂಜುನಾಥ ಕುನ್ನೂರುರವರು ಸಮಾಜಮುಖಿ ಜೀವನ ಮಾಡಿದವರು. ಸಂತೋಷದಿಂದ ನಾವು ಮಾಡುವ ಕಾರ್ಯವನ್ನು ಮೆಚ್ಚಿ ಬರುವುದಾಗಿ ತಿಳಿಸಿದರು. ಅತಿ ಚಿಕ್ಕವಯಸ್ಸಿನ ಕುಂದುಗೊಳದ ಮಲ್ಲಿಕಾರ್ಜುನ ಅಕ್ಕಿಯವರು, ಧಾರವಾಡ ಗ್ರಾಮೀಣದಿಂದ ಆಯ್ಕೆಯಾದ ಯುವ ಪ್ರತಿಭೆ ಶಶಿಕಾಂತ ಅಂಬಡಗಟ್ಟಿಯವರು ಸಂತೋಷದಿಂದ ಭಾಗವಹಿಸುತ್ತೇವೆ ಎಂದಿದ್ದರು. ಕುಷ್ಟಗಿಯ ಕೆ. ಶರಣಪ್ಪ ವಕೀಲರು, ಹರಿಹರದ ಎಚ್. ಶಿವಪ್ಪನವರು, ಕೇವಲ ಹದಿನೇಳು ಸಾವಿರ ಮತ ಪಡೆದು ವಿಧಾನಸಭೆ ಪ್ರವೇಶಿಸಿದ ಕೊಪ್ಪಳದ ಕರಡಿ ಸಂಗಣ್ಣನವರು ಪಂಚಮಸಾಲಿ ಸಮಾವೇಶ ಪರಿಣಾಮವಾಗಿ ಜಯಿಸಿದವರು. ಅವರು ಸಂತೋಷವು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತು. ಚಿಕ್ಕೋಡಿ ಕ್ಷೇತ್ರದ ಪ್ರಕಾಶ ಹುಕ್ಕೇರಿಯವರು ಮಾತ್ರ “ಪಂಚಮಸಾಲಿ ಮತ್ತು ಚತುರ್ಥ ಎಂದು ಏಕೆ ಇಬ್ಬಾಗ ಮಾಡುತ್ತೀರಿ” ಎಂದು ಪ್ರಶ್ನಿಸಿದ್ದರು. ಅಲ್ಲಿಯವರಿಗೂ ನನಗೆ “ಚತುರ್ಥ” ಎನ್ನುವ ಒಂದು ಲಿಂಗಾಯತ ಸಮಾಜವಿದೆ ಎಂಬ ಮಾಹಿತಿ ಇರಲಿಲ್ಲ. ಬೀದರಿನ ಔರಾದ ಕ್ಷೇತ್ರದ ನಾಗಮಾರಪಳ್ಳಿಯವರು, ಸಂಕೇಶ್ವರದ ಎ. ಬಿ. ಪಾಟೀಲರನ್ನು ಎಷ್ಟೇ ಪ್ರಯತ್ನಿಸಿದರೂ ಸಂಪರ್ಕಿಸಲಾಗಲಿಲ್ಲ. ವಿಧಾನಪರಿಷತ್ ಸದಸ್ಯರಾದ ಎಂ. ಪಿ. ನಾಡಗೌಡರು ಮತ್ತು ಇನ್ನಿತರ ಸದಸ್ಯರು ತುಂಬಾ ಆಸ್ತೆವಹಿಸಿ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದರು.

ನಮ್ಮೊಂದಿಗೆ ಕೆಲ ಸ್ನೇಹಿತರು ಸೇರಿಕೊಂಡರು. ಸಭೆ ಸಂಜೆ ಏಳು ಗಂಟೆಗೆ ಪ್ರಾರಂಭವಾಯಿತು. ಎಲ್ಲ ಶಾಸಕರು ಆಗಮಿಸಿ ಆಸನ ಗ್ರಹಣ ಮಾಡಿದರು. ನಾನು ಸ್ವಾಗತ ಭಾಷಣ ಮಾಡುತ್ತಾ ಎಲ್ಲರನ್ನೂ ಸಭೆಗೆ ಬರಮಾಡಿಕೊಂಡೆ. ದಿಕ್ಸೂಚಿ ಭಾಷಣವನ್ನು ಮಾಮನಿ ಸಾಹೇಬರು ಮಾಡಿದರು. ಸಿದ್ದನಗೌಡರು ಸಚಿವರಾಗಿ ಸಭೆಯಲ್ಲಿ ಮಾತನಾಡಿದರು. ಅವರ ಭಾಷಣವು ಕಳಕಳಿಯಿಂದ ತುಂಬಿತ್ತು.

Mamani
ಚಂದ್ರಶೇಖರ ಮಾಮನಿ
WhatsApp Image 2026 06 13 at 2.08.21 PM5
ಸ್ವಾಗತ ಭಾಷಣ ಮಾಡುತ್ತಿರುವರು ಜಿ.ಬಿ.ಪಾಟೀಲ. ಪ್ರೊ ನಿಲುಗಲ್, ಚಂದ್ರಶೇಖರ ಮಾಮಣಿ ಮತ್ತು ಎಸ್.ಆರ್.ಕಾಶಪ್ಪನವರು
WhatsApp Image 2026 06 13 at 2.08.22 PM2
ಎ.ಬಿ. ಪಾಟೀಲ

ರಾಮಕೃಷ್ಣ ಹೆಗಡೆಯವರ ಭಿನ್ನಮತದ ಸಭೆಯಾಗಿ ಕಂಡಿತ್ತು ಸಿಎಂ ದೇವೇಗೌಡರಿಗೆ

ಹದಿನಾರು ಜನತಾದಳದ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ರಾತ್ರೋರಾತ್ರಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರಿಗೆ ಗುಪ್ತದಳದ ಮಾಹಿತಿ ರವಾನೆಯಾಗಿತ್ತು. “ರಾಮಕೃಷ್ಣ ಹೆಗಡೆಯವರ ಪರವಾಗಿ ಪಂಚಮಸಾಲಿ ಶಾಸಕರು ಗುಪ್ತ ಸಭೆ ನಡೆಸಿದ್ದಾರೆ” ಎಂದು ವ್ಯಾಖ್ಯಾನ ಮಾಡಿದ್ದರು ರಾಜ್ಯ ಗುಪ್ತದಳದ ಅಧಿಕಾರಿಗಳು. ಆದರೆ ಸತ್ಯ ಯಾರೂ ಅರಿತಿರಲಿಲ್ಲ. ನಾವು ಯಾರನ್ನೂ ಸಂಪರ್ಕಿಸದೆ, ನಮ್ಮ ಸ್ವಂತ ಇಚ್ಛೆಯಿಂದ, ಸ್ವಂತ ಹಣದಿಂದ ನಮ್ಮ ಸಮಾಜದ ಶಾಸಕರ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದೆವು. ಆದರೆ ಅದಕ್ಕೆ ರಾಜಕೀಯ ಬಣ್ಣ ಬಳಿದಿದ್ದರು ಗುಪ್ತದಳದ ಅಧಿಕಾರಿಗಳು ಮತ್ತು ಪತ್ರಿಕೆಯವರು.

ಮುಂದಿನ ಭಾಗದಲ್ಲಿ….. ಮುಖ್ಯಮಂತ್ರಿಯವರ ಸುಪುತ್ರ ಎಚ್.ಡಿ. ಕುಮಾರಸ್ವಾಮಿ ಎಂಟ್ರಿ

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...