ಕೋಟಿಗಾನಹಳ್ಳಿ ರಾಮಯ್ಯ ಎಂದಾಕ್ಷಣ ನೆನಪಾಗುವುದು ನಿಂತಲ್ಲಿ ನಿಲ್ಲದ, ಅಲ್ಲಮನಂತೆ ಅಲೆದಾಡುವ, ಚಡಪಡಿಕೆಯ ವ್ಯಕ್ತಿ. ಕವಿ, ಬರೆಹಗಾರ, ನಾಟಕಕಾರ, ಪತ್ರಕರ್ತ, ನಿರ್ದೇಶಕ, ಡಿಎಸ್‌ಎಸ್ ಸಂಘಟಕ, ಅಂಬೇಡ್ಕರ್ ವಾದಿ- ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆ. ಈಗ ಅವರಿಗೆ 70ರ ಹರೆಯ. ಸುಮಾರು 45 ವರ್ಷಗಳ ಕಾಲ ಅವರನ್ನು ಬಲ್ಲ, ಒಡನಾಡಿದ ಎನ್.ಎಸ್. ಶಂಕರ್, ರಾಮಯ್ಯನವರನ್ನು ಕಣ್ಮುಂದೆ ಕೂರಿಸಿದ್ದಾರೆ…
ರಾಮಯ್ಯನನ್ನು ನನಗೆ ಪರಿಚಯ ಮಾಡಿಸಿದ್ದು ಕೆ. ಪುಟ್ಟಸ್ವಾಮಿ. 80ರ ದಶಕದ ಆರಂಭ. ಆಗ ಪುಟ್ಟಸ್ವಾಮಿ ಮತ್ತು ನಾನು ಪ್ರಜಾವಾಣಿ ಸೇರಿದ್ದೆವು. ರಾಮಯ್ಯ ಕೆನರಾ ಬ್ಯಾಂಕಿನ ನೃಪತುಂಗ ರಸ್ತೆಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ‘ಇವನು ಕೋಲಾರದವನು, ಒಳ್ಳೆಯ ಕವಿ, ಅಜ್ಞಾತ ಎಂಬ ಹೆಸರಿನಲ್ಲಿ ಪದ್ಯ ಬರೆಯುತ್ತಾನೆ’ ಎಂದು ಪುಟ್ಟಸ್ವಾಮಿ ವಿವರಿಸಿದ್ದ. ‘ತುಷಾರ’ದಲ್ಲಿ ಅವನು ‘ಅಜ್ಞಾತ’ ಹೆಸರಿನಲ್ಲಿ ಬರೆದ ಒಂದು ಪದ್ಯ ನಾನು ಓದಿದ್ದೆ. ಜೊತೆಗೆ ರಾಮಯ್ಯ ಅಷ್ಟರಲ್ಲಾಗಲೇ ಒಂದು ವರ್ಷ ಬ್ಯಾಂಕಿಗೆ ಚಕ್ಕರ್ ಹೊಡೆದು ‘ಲಂಕೇಶ್ ಪತ್ರಿಕೆ’ಯಲ್ಲಿ ದುಡಿದು ಮತ್ತೆ ಬ್ಯಾಂಕಿಗೇ ಮರಳಿದ್ದ. ಮೇಲಾಗಿ ಅವನು ನೌಕರರ ಸಂಘದಲ್ಲೂ ಸಕ್ರಿಯನಾಗಿದ್ದರಿಂದ ಬ್ಯಾಂಕಿನಲ್ಲಿ ಯಾವ ಮೇಲಧಿಕಾರಿಯೂ ಅವನನ್ನು ತಡವಲು ಬರುತ್ತಿರಲಿಲ್ಲವಂತೆ! ಹೀಗಿರುವಾಗ ನಾವು ‘ಮುಂಗಾರು’ ಪತ್ರಿಕೆ ಸೇರುವ ಹೊಸ್ತಿಲಲ್ಲಿದ್ದೆವು. (ಆಗಿನ್ನೂ ಅದಕ್ಕೆ ‘ಮುಂಗಾರು’ ಎಂಬ ನಾಮಕರಣವಾಗಿರಲಿಲ್ಲ.) ಮೊದಲಿಗೆ ನಾನೇ ರಾಮಯ್ಯನನ್ನು ‘ಮುಂಗಾರು’ ಪತ್ರಿಕೆಗೆ ಆಹ್ವಾನಿಸಿದೆ. ‘ಬಾರೋ, ನೀನೇ ನಮಗೆ ಅರುಣ್ ಶೌರಿ ಇದ್ದಂಗೆ ಬಾ’ ಅಂತ. ಅರುಣ್ ಶೌರಿ ಹವಾ ಜೋರಾಗಿದ್ದ ಕಾಲವದು. ರಾಮಯ್ಯ ಮೊದಲೇ ಚಂಚಲ ವೃತ್ತಿಯ ಮನುಷ್ಯ. ಹೊಸ ಜಾಗ, ಹೊಸ ಸಾಹಸ ಎಂದರೆ ಅವನಿಗೂ ಹುಮ್ಮಸ್ಸು. ಹಾಗಾಗಿ ಅವನನ್ನು ಒಲಿಸಲು ತೀರಾ ಶ್ರಮಪಡಬೇಕಾಗಿರಲಿಲ್ಲ. ಈಗಲೂ ಅವನು ಬ್ಯಾಂಕ್ ನೌಕರಿ ಬಿಡದೆ, ಸುಮ್ಮನೆ ಚಕ್ಕರ್ ಹಾಕಿ ಮಂಗಳೂರಿಗೆ ಬರಲು ತಯಾರಿದ್ದ. ಆದರೆ ಇಂದೂಧರ ಹೊನ್ನಾಪುರ ಅವನಿಗೆ ‘ಅದ್ಯಾವ ಕೆಲಸ ಬಿಟ್ಟು ಬಾರೋಲೋ’ ಅಂತ ಜಬರ್ದಸ್ತು ಮಾಡಿ ಕೆಲಸವನ್ನೇ ಬಿಡಿಸಿಬಿಟ್ಟ…! ರಾಮಯ್ಯ ಅದಾಗಿ ಎಷ್ಟೋ ವರ್ಷ ಕಾಲ ನನ್ನ ಮೇಲೆ ತಪ್ಪು ಹೊರೆಸಿ ಮಾತಾಡುತ್ತಲೇ ಇದ್ದ- ‘ನನ್ಮಗನೇ, ನಿನ್ನಿಂದ ನನ್ನ ಜೀವನ ಎಕ್ಕುಟ್ಟೋಯ್ತು…’ ಅಂತ. ಕೆಲಸ ಬಿಡಿಸಿದ್ದು ಅವನು, ಬೈಸಿಕೊಳ್ಳುವುದು ನಾನು! ಹೇಗಿದೆ?…
ಆದರೂ… That is ರಾಮಯ್ಯ, ಕೋಟಿಗಾನಹಳ್ಳಿ ರಾಮಯ್ಯ.
ಅವನ ದುಸ್ಸಾಹಸ ಪ್ರವೃತ್ತಿಗೆ ನಿದರ್ಶನವಾಗಿ, ನಮ್ಮ ಪರಿಚಯವಾದ ಹೊಸದರಲ್ಲೇ ನಡೆದ ಒಂದು ಘಟನೆ ಹೇಳಬೇಕು.
1983ರ ಡಿಸೆಂಬರ್‌ನಲ್ಲಿ ಧಾರವಾಡದಲ್ಲಿ ದಲಿತ ಸಾಹಿತ್ಯದ ಎರಡನೇ ರಾಜ್ಯ ಸಮ್ಮೇಳನ ನಡೆಯಿತು. ಸಮ್ಮೇಳನ ಧಾರವಾಡದಲ್ಲಿ ನಡೆಯಲಿ ಎಂದು ಚಳವಳಿಯ ನೇತಾರ ಬಿ. ಕೃಷ್ಣಪ್ಪರೇ ನಿಗದಿ ಮಾಡಿದ್ದು. ಆಗ ಪ್ರಜಾವಾಣಿ/ ಡೆಕನ್ ಹೆರಾಲ್ಡ್ ಪರವಾಗಿ ನಾನು ಧಾರವಾಡದಲ್ಲಿದ್ದರೆ, ಶಿವಾಜಿ ಗಣೇಶನ್ ಹುಬ್ಬಳ್ಳಿಯಲ್ಲಿದ್ದರು. ನಾವಿಬ್ಬರೇ ಸಮ್ಮೇಳನದ ಸಂಚಾಲಕರು. ಆ ಸಮ್ಮೇಳನದಲ್ಲಿ ಸಾಕಷ್ಟು ಮಂದಿ ದಲಿತೇತರ ಗಣ್ಯರೂ ಪಾಲ್ಗೊಂಡಿದ್ದರು. ಅದರಲ್ಲಿ ರಾಜೀವ ತಾರಾನಾಥರೂ ಒಬ್ಬರು. ಅವರು ದೈಹಿಕವಾಗಿ ಹುಬ್ಬಳ್ಳಿಗೆ ಬರಲಾಗುತ್ತಿಲ್ಲವೆಂದೂ, ಬೇಕಾದರೆ ತಮ್ಮ ಭಾಷಣ ಯಾರಾದರೂ ಬರೆದುಕೊಂಡು ಪ್ರಸ್ತುತಪಡಿಸಬಹುದೆಂದೂ ಸೂಚಿಸಿದ್ದರು. ಆಗ ನಾನು ಮತ್ತು ರಾಮಯ್ಯ ಜಯನಗರದ ಎರಡನೇ ಬ್ಲಾಕಿನಲ್ಲಿದ್ದ ಅವರ ಮನೆಗೆ ಹೋಗಿ ಅವರ ಮಾತುಗಳನ್ನು ಬರೆದುಕೊಂಡು ಬಂದಿದ್ದೆವು. ಇರಲಿ. ವಿಷಯ ಅದಲ್ಲ. ಎರಡು ದಿನಗಳ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ನಡೆದ ಮೇಲೆ ಬಂದವರೆಲ್ಲ ಅವರವರ ಊರಿಗೆ ಹೋದರು. ಇಂದೂಧರ ಹೊನ್ನಾಪುರ, ರಾಮಯ್ಯ ಮತ್ತು ನಾನು ಗೋವಾ ಪ್ರವಾಸ ಹೋಗಿಬರೋಣ ಎಂಬ ಪ್ಲಾನ್ ಮಾಡಿದೆವು. ಇಂದೂಧರ ಆಗ ‘ಪ್ರಜಾವಾಣಿ’ಗೆ ಹಾಸನದ ಪ್ರತಿನಿಧಿ. ನಾವು ಮೂವರೂ ಧಾರವಾಡದಲ್ಲಿ ಬೆಳಗ್ಗೆ ಬಸ್ ಹತ್ತಿ ಪಣಜಿಯಲ್ಲಿ ಇಳಿಯುತ್ತಿದ್ದಂತೆಯೇ ಮಧ್ಯಾಹ್ನ ಊಟದ ಸಮಯ. ಸೀದಾ ಒಂದು ಹೋಟೆಲಿಗೆ ಹೋಗಿ ಕೂತರೆ ಅದು ಬಾರ್ ಮತ್ತು ಹೋಟೆಲ್! ಗೋವಾದಲ್ಲಿ ಅದು ಸಾಮಾನ್ಯ. ಸರಿ, ಅಲ್ಲಿನ ಕರಾವಳಿ ಧಗೆಗೆ ಬೇಸತ್ತು ಬಿಯರ್‌ಗೆ ಆರ್ಡರ್ ಮಾಡಿದೆವು. ಅಲ್ಲಿ ಪ್ರಖ್ಯಾತವಾದದ್ದು ‘ಅರ್ಲೆಮ್’ ಎಂಬ ಬಿಯರ್. ಒಂದು ಬಾಟಲಿಗೆ ಮೂರು ರೂಪಾಯಿ ಎಂಬ ನೆನಪು. (ಈಗ ಆ ಬ್ರಾಂಡ್ ಇದ್ದಂತಿಲ್ಲ.) ಕುಡಿದು ಊಟ ಮಾಡಿ ಹೊರಗೆ ಬಂದರೆ, ಅಲ್ಲಿನ ವಾತಾವರಣಕ್ಕೆ ಅಮಲೆಲ್ಲ ಬೆವರಿನಲ್ಲೇ ಕೊಚ್ಚಿ ಹೋಗಿ, ಕುಡಿದ ಕುರುಹೇ ಇಲ್ಲ! ಸರಿ ಆಗಿನಿಂದ ನಾವಿದ್ದ ಎರಡು ದಿನವೂ ಊಟ ತಿಂಡಿ ಎಂದರೆ ಮೊದಲಿಗೆ ಅದೇ- ಬಿಯರ್ ಕಡ್ಡಾಯ!… ಎರಡು ದಿನ ಗೊತ್ತು ಗುರಿ ಇಲ್ಲದೆ ಊರೆಲ್ಲ ಸುತ್ತಿ ಮೂರನೇ ದಿನ ಬೆಳಗ್ಗೆ ಧಾರವಾಡಕ್ಕೆ ವಾಪಸಾಗೋಣವೆಂದು ಬಸ್‌ಸ್ಟ್ಯಾಂಡಿಗೆ ಬಂದೆವು. ರಾಮಯ್ಯ ಇದ್ದಕ್ಕಿದ್ದಂತೆ ‘ನಾನು ಇಲ್ಲೇ ಇದ್ದು ನಮ್ಮ ಬ್ಯಾಂಕಿನ ಸಹೋದ್ಯೋಗಿ ಮಿತ್ರರನ್ನು ಭೇಟಿ ಮಾಡಿ ನಂತರ ಬರುತ್ತೇನೆ’ ಅಂದ. ಸರಿ, ಎಲ್ಲ ಒಟ್ಟು ಮಾಡಿ ಅವನ ಊಟ ತಿಂಡಿ, ಬಸ್ ಚಾರ್ಜ್ ಎಲ್ಲ ಲೆಕ್ಕ ಹಾಕಿ ಹನ್ನೆರಡು ರೂಪಾಯಿ ಅವನ ಕೈಯಲ್ಲಿಟ್ಟು ನಾನು ಇಂದೂಧರ ಬಸ್ ಹತ್ತಿ ಬಂದೆವು. ಧಾರವಾಡ ತಲುಪುತ್ತಿದ್ದಂತೆಯೇ, ಇಂದೂಧರನಿಗೆ ಹಾಸನದಿಂದ ಬುಲಾವ್ ಬಂದಿದ್ದ ಸುದ್ದಿ ತಿಳಿಯಿತು. ಅವನು ತಕ್ಷಣ ಹೊರಟುಬಿಟ್ಟ.

ಇತ್ತ ರಾಮಯ್ಯ ಆವತ್ತೆಲ್ಲ ಧಾರವಾಡಕ್ಕೆ ಬರಲೇ ಇಲ್ಲ. ಮರುದಿನವೂ ಅವನ ಸುದ್ದಿಯಿಲ್ಲ. ಮರು ರಾತ್ರಿ ನಾವು ಕೆಲವು ಗೆಳೆಯರು ಬಾಲು ಮಹೇಂದ್ರ ನಿರ್ದೇಶನದ, ಕಮಲ ಹಾಸನ್, ಶ್ರೀದೇವಿ ಅಭಿನಯದ ‘ಸದ್ಮಾ’ ಸಿನಿಮಾ ನೋಡೋಣ ಅಂತ ಸೆಕೆಂಡ್ ಶೋಗಾಗಿ ಥಿಯೇಟರ್ ಬಳಿ ಬಂದೆವು. ರಾತ್ರಿ ಸುಮಾರು 9.30 ಆಗಿರಬೇಕು, ಇದ್ದಕ್ಕಿದ್ದಂತೆ ರಾಮಯ್ಯ ಚಿತ್ರಮಂದಿರದ ಬಳಿ ಪ್ರತ್ಯಕ್ಷನಾದ! ನಾವು ಥಿಯೇಟರ್ ಕಡೆ ಬಂದಿದ್ದೇವೆ, ಅವನು ಮನೆಗೆ ಹೋಗಿ ವಿಚಾರಿಸಿಕೊಂಡು ಸೀದಾ ಇಲ್ಲಿಗೇ ಬಂದಿದ್ದಾನೆ. ಇವನು ಗೋವಾದಲ್ಲಿ ಎರಡು ದಿನ ಖರ್ಚಿಗೆ ಏನು ಮಾಡಿಕೊಂಡನಪ್ಪ ಅಂತ ನಾನು ತಲೆ ಕೆಡಿಸಿಕೊಂಡಿದ್ದರೆ ಇವನು ಜೋಬಿನಿಂದ 555 ಸಿಗರೇಟ್ ಪ್ಯಾಕ್ ತೆಗೆದ, ದುಬಾರಿ ಸಿಗರೇಟು! ‘ಎಲಾ ಇವನ’ ಅಂದುಕೊಳ್ಳುವಷ್ಟರಲ್ಲಿ ಸಿಗರೇಟ್ ಪ್ಯಾಕಿನ ಮುಚ್ಚಳ ತೆಗೆದರೆ ಒಳಗೆ ಭರ್ತಿ ಬೀಡಿಗಳು!…
ಗೋವಾದಲ್ಲಿ ನಮ್ಮಿಂದ ಬೀಳ್ಕೊಂಡವನು ಇವನು ನೇರ ಗೆಳೆಯನ ಬಳಿ ಹೋಗಲಿಲ್ಲ, ಸೀದಾ ಬಾರ್‌ಗೆ ನುಗ್ಗಿದ್ದಾನೆ. ಎಲ್ಲ ದುಡ್ಡು ಕುಡಿದು, ತಿಂದು ಮುಗಿಸಿ ನಂತರ ಖಾಲಿ ಜೋಬಿನಲ್ಲಿ ರಿಕ್ಷಾ ಹಿಡಿದು ಗೆಳೆಯನ ಬ್ಯಾಂಕಿಗೆ ಹೋಗಿದ್ದಾನೆ. ಅಲ್ಲಿ ಆತ ಆವತ್ತು ರಜಾ! ಇವನು ಅದೇ ರಿಕ್ಷಾದಲ್ಲಿ ಅವನ ಮನೆ ಹುಡುಕಿಕೊಂಡು ಹೋಗಿದ್ದಾನೆ. ಪುಣ್ಯಕ್ಕೆ ಅವನು ಸಿಕ್ಕ. ಗೆಳೆಯನೇ ರಿಕ್ಷಾ ಬಾಡಿಗೆ ಕೊಟ್ಟು, ಇವನನ್ನು ಇರಿಸಿಕೊಂಡು ಸತ್ಕರಿಸಿ ಬಸ್‌ಚಾರ್ಜ್ ಕೊಟ್ಟು ಕಳಿಸಿದ್ದಾನೆ. ಅಲ್ಲಿಗೆ ಬಚಾವ್! ಒಂದು ವೇಳೆ ಅವನು ಸಿಕ್ಕದಿದ್ದರೆ ಇವನು ಏನು ಮಾಡಬೇಕಿತ್ತು…?!
ಅದೆಲ್ಲ ಯೋಚನೆ ಮಾಡುವುದು ರಾಮಯ್ಯನ ಜಾಯಮಾನದಲ್ಲಿಲ್ಲ. ಬದುಕಿನೊಂದಿಗೇ ಬಾಜಿ ಕಟ್ಟಿ ಆಡುವುದು ಅವನ ಸ್ವಭಾವ. ಈಗ ಯೋಚಿಸಿ ನೋಡಿದರೆ, ನಮ್ಮಲ್ಲಿ ಹಲವರ ಸ್ವಭಾವ ಅದೇ ಆಗಿತ್ತೇನೋ ಅನಿಸುತ್ತೆ!…
*
ಇನ್ನು ‘ಮುಂಗಾರು’ ದಿನಗಳಿಗೆ ಬಂದರೆ…
ರಾಮಯ್ಯನ ಪ್ರತಿಭೆ, ಹಿರಿತನ ಎಲ್ಲ ಪರಿಗಣಿಸಿ ಅವನಿಗೆ ‘ಮುಂಗಾರು’ ಪತ್ರಿಕೆಯ ವಾರದ ಪುರವಣಿ ಜವಾಬ್ದಾರಿ ವಹಿಸಲಾಗಿತ್ತು. ಅದಕ್ಕೆ ‘ವಾರದ ಮುಂಗಾರು’ ಎಂಬ ಹೆಸರು. ನಾಲ್ಕು ಪುಟಗಳ ಪುರವಣಿ ಅದು. ಮೊದಲ ಪುಟದಲ್ಲಿ ಎರಡು ಲೇಖನಗಳು, ಒಳಗೆ ಕತೆ, ಕವನ, ಮಕ್ಕಳ ಪುಟ, ಕೊನೆ ಪುಟ ಸಿನಿಮಾ- ಇದು ಅದರ ಸ್ಥೂಲ ಸ್ವರೂಪ. ಭಾನುವಾರದ ಪತ್ರಿಕೆಯೊಂದಿಗೆ ಈ ಪುರವಣಿ. ಭಾನುವಾರ ಹೇಗಿದ್ದರೂ ಪುರವಣಿ ಬಂದಿರುತ್ತೆ, ಹಾಗಾಗಿ ಸೋಮವಾರ ರಾಮಯ್ಯನಿಗೆ ಒಂದು ರೀತಿ ಬಿಡುವಿನ ದಿನ. ‘ಮುಂಗಾರು’ ಸಂಪಾದಕೀಯ ವಿಭಾಗಕ್ಕೊಂದು ದೊಡ್ಡ ಹಾಲ್. ನಾವೆಲ್ಲ ಕೂರುತ್ತಿದ್ದುದು ಅಲ್ಲಿ. ಆ ಹಾಲ್ ಪಕ್ಕ ಒಂದು ಪುಟ್ಟ ರೂಂ. ಅದು ರಾಮಯ್ಯನ ಸಾಮ್ರಾಜ್ಯ. ವ್ಯಂಗ್ಯಚಿತ್ರಕಾರ ವಿ. ಮನೋಹರ್‌ಗೂ (ಮುಂದಿನ ಸಂಗೀತ ನಿರ್ದೇಶಕ) ಅಲ್ಲೇ ಜಾಗ. ಮಂಗಳವಾರ ಬೆಳಗ್ಗೆ ನಾನು ರಾಮಯ್ಯನ ಬಳಿ ಬಂದು ‘ಹ್ಞೂಂ, ಈ ವಾರಕ್ಕೇನೋ ರಾಮ?’ ಎಂದು ವಿಚಾರಿಸಿದರೆ ‘ಎರಡನೇ ಲೇಖನ ಆರಿಸಿದ್ದೀನಿ. ಒಂದೆರಡು ಒಳ್ಳೆ ಪದ್ಯ ಬಂದಿದೆ…’ ಅನ್ನುತ್ತಿದ್ದ. ಮತ್ತೆ ಬುಧವಾರ ಬೆಳಗ್ಗೆ: ‘ಈಗ ಕತೆನೂ ಸಿಗ್ತು. ಒಳ್ಳೆ ಮಕ್ಕಳ ಪದ್ಯ ಬಂದಿದೆ. ಅಗ್ರ ಲೇಖನ ಸೆಲೆಕ್ಟ್ ಮಾಡಬೇಕು, ಓದ್ತಾ ಇದ್ದೀನಿ’. ಗುರುವಾರ ಬೆಳಗ್ಗೆ: ‘ಎರಡೂ ಲೇಖನ ರೆಡಿ. ಕತೆ, ಪದ್ಯ ರೆಡಿ. ಮಕ್ಕಳ ಪುಟನೂ ಮುಗೀತು…’ ಶುಕ್ರವಾರ ಬೆಳಗ್ಗೆ ಅವನ ಮುಖಭಾವವೇ ಬದಲಾಗಿತ್ತು. ‘ಯಾಕೋ, ಏನಾಯ್ತೋ?’ ಎಂದು ಕಳಕಳಿಯಿಂದ ವಿಚಾರಿಸಿದರೆ ‘ನನ್ನ ಮಕ್ಕಳಾ! ಏನಿದೆ ಇಲ್ಲಿ? ಈ ವಾರಕ್ಕೆ ಒಂದೂ ಐಟಂ ಸಿಕ್ಕಿಲ್ಲ…’ ಎಂದು ನನ್ನ ಮೇಲೇ ಹರಿಹಾಯಲು ಶುರು ಮಾಡುತ್ತಿದ್ದ! ‘ಮತ್ತೆ ಎಲ್ಲ ರೆಡಿ ಇದೆ ಅಂದ್ಯಲ್ಲೋ?’ ‘ಎಲ್ಲಿದೆ…?’ ನನ್ನ ಸಿಟ್ಟು ನೆತ್ತಿಗೇರಿ ಅಂಥ ಮಗನೇ, ಇಂಥ ಮಗನೇ ಅಂತ ನನಗೆ ಗೊತ್ತಿದ್ದ ಬೈಗುಳಗಳನ್ನೆಲ್ಲ ಬೈದು ಸೀದಾ ಬಂದು ಇಂದೂಧರನ ಮುಂದೆ ವರದಿ ಒಪ್ಪಿಸುತ್ತಿದ್ದೆ. ಅವನು ಇನ್ನು ಮಾತಾಡಿ ಪ್ರಯೋಜನವಿಲ್ಲ ಎಂದು ಸುಮ್ಮನಾಗುತ್ತಿದ್ದ! ಎಷ್ಟೆಂದರೂ ಇಂದೂಧರ ನಿರ್ವಾಹಕ ಸಂಪಾದಕ, ಅಂತಿಮ ಜವಾಬ್ದಾರಿ ಅವನದೇ.

ಇನ್ನು ಶನಿವಾರ ‘ವಾರದ ಮುಂಗಾರು’ ಪ್ರಿಂಟ್ ಆಗಲೇಬೇಕು. ರಾಮಯ್ಯ ಅದೇನು ಮಾಡುತ್ತಿದ್ದನೋ, ಅಂತೂ ಬೆಳಗ್ಗೆಯಿಂದಲೇ ತರಾತುರಿ ಮಾಡುತ್ತ, ಎಲ್ಲವನ್ನೂ ಕಂಪೋಸ್ ಮಾಡಿಸಿ, ಪ್ರೂಫ್ ನೋಡಿ, ಪೇಜ್ ಮಾಡಿಸಿ, ಸಂಜೆ ಹೊತ್ತಿಗೆ ಪ್ರಿಂಟ್‌ಗೆ ತಳ್ಳುತ್ತಿದ್ದ. ಮುಖ್ಯ ಪತ್ರಿಕೆ ಮುದ್ರಿಸುವ ಮೊದಲೇ ಅವನ ಆಟಗಳೆಲ್ಲ ಮುಗಿಯಬೇಕು, ಹೇಗೋ ಕಡೆ ಗಳಿಗೆವರೆಗೆ ಹೊಡೆದಾಡಿ ಕೊನೆಗೂ ಪುರವಣಿ ಸಿದ್ಧಗೊಳಿಸುತ್ತಿದ್ದ. ಅವನ ಶೈಲಿಗೆ ಅದೊಂದು ಪವಾಡವೇ ಸರಿ! ನೋಡಿದರೆ, ಪುರವಣಿ ಚೆನ್ನಾಗೇ ಬಂದಿರುತ್ತಿತ್ತು!!
ಆಯಿತು. ಈ ವಾರವೇನೋ ಆಯಿತು. ಮತ್ತೆ ಮಾರನೆ ವಾರ ಮಂಗಳವಾರ. ‘ಏನಾಗಿದೆಯೋ ರಾಮ? ‘ಅದೇ ಈ ಸಲ ಕತೆ ಮೊದಲೇ ರೆಡಿ ಇದೆ, ಎರಡನೇ ಲೇಖನ ಸೆಲೆಕ್ಟ್ ಮಾಡ್ತಾ ಇದ್ದೀನಿ…’ ಯಥಾಪ್ರಕಾರ ಅದೇ ಕಥೆ! ವಾರ ವಾರವೂ ಅದೇ ಕಥೆ! ಅಂತೂ ಅರಾಜಕತಾವಾದ ಬಲು ಆಕರ್ಷಕ, ದೂರದಿಂದ! ಪಕ್ಕದಲ್ಲೇ ಇಟ್ಟುಕೊಂಡು ಮೆಚ್ಚುವುದು ಕಷ್ಟ!!…
ಹೀಗೆ ಅವನ ಕೆಲಸದ ಶೈಲಿ ಎಷ್ಟೇ ಅಸ್ತವ್ಯಸ್ತವಾಗಿರಲಿ, ಬರವಣಿಗೆ ವಿಚಾರಕ್ಕೆ ಬಂದರೆ ಮಾತ್ರ ಅವನೊಬ್ಬ ದೈತ್ಯನೇ. ಶಶಿಕಪೂರನ ಹೆಂಡತಿ ಜೆನಿಫರ್ ಕೆಂಡಾಲ್ 1984ರ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್‌ಗೆ ಬಲಿಯಾದಾಗ, ರಾಮಯ್ಯ ಪುರವಣಿಗೆ ಒಂದು ಪುಟ್ಟ ವಿದಾಯದ ಲೇಖನ ಬರೆದ. (‘ಮುಂಗಾರು’ ಆರಂಭವಾಗಿದ್ದು 1984ರ ಸೆಪ್ಟೆಂಬರ್ 10ರಂದು,) ಆ ಲೇಖನದ ವಿವರಗಳು ಈಗ ನೆನಪಿಲ್ಲವಾದರೂ, ಅವನ ಆರ್ದ್ರ ಮೋಹಕ ಶೈಲಿಗೆ ಆ ಬರಹ ಸಾಕ್ಷಿಯಾಗಿತ್ತು. ನಾವೆಲ್ಲ ಇನ್ನೂ ದಿನಪತ್ರಿಕೆಗಳ ವರದಿಗಾರಿಕೆಯ ‘ಹೇಳಿದರು, ತಿಳಿಸಿದರು, ಖಂಡಿಸಿದರು’ ಶೈಲಿಯಿಂದ ಹೊರಬರಲು ಹೆಣಗುತ್ತಿದ್ದಾಗ ರಾಮಯ್ಯ ಗದ್ಯವನ್ನು ಕಾವ್ಯದ ಎತ್ತರಕ್ಕೆ ಒಯ್ದಿದ್ದ. ನೇರ ಹೃದಯಕ್ಕೆ ತಾಕುವಂತಿದ್ದ ಅದನ್ನು ಓದಿದ್ದ ನಮ್ಮ ಸಂಪಾದಕರಾದ ವಡ್ಡರ್ಸೆ ರಘುರಾಮಶೆಟ್ಟರು ಕಾರಿನಲ್ಲಿ ಮನೆಗೆ ಹೋಗುವಾಗ ಪಕ್ಕದಲ್ಲೇ ಕೂತಿದ್ದ ರಾಮಯ್ಯನಿಗೆ ‘ತಮ್ಮ, ಎಷ್ಟು ಚಂದ ಬರೆದಿದ್ದೀಯಲ್ಲೋ… ನಿನ್ನ ಹಾಗೇ ಅಪ್ಪಿಕೋಬೇಕು ಅನಿಸುತ್ತೆ ಕಣೋ’ ಎಂದರು. ‘ಹಾಗೆಂದರು. ಆದರೆ ಅವರು ಅಪ್ಪಿಕೊಳ್ಳಲಿಲ್ಲ’ ಎಂದ ರಾಮಯ್ಯ!…
ಇದಕ್ಕಿಂತ ಮಜವಾದ ಕಥೆ ರಾಮಯ್ಯ ಚಿತ್ರನಟಿ ಗೀತಾರನ್ನು ಸಂದರ್ಶನ ಮಾಡಿದ್ದು.
84ರ ನವೆಂಬರ್ ತಿಂಗಳಿನಲ್ಲಿ ‘ಮರೆಯಾದ ಮಾಣಿಕ್ಯ’ ಎಂಬ ಒಂದು ಚಿತ್ರಕ್ಕಾಗಿ ‘ಮುಂಗಾರು’ ಮುದ್ರಣಾಲಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೇಳಿಕೊಂಡು ಬಂದರು. ವಿಜಯ್ ಅದರ ನಿರ್ದೇಶಕರು. (‘ಗಂಧದ ಗುಡಿ’ ಖ್ಯಾತಿ.) ವಿಷ್ಣುವರ್ಧನ್ ಮತ್ತು ಗೀತಾ ತಾರಾಗಣ. ಗೀತಾ ಕನ್ನಡಕ್ಕೆ ಆಗಿನ್ನೂ ತುಸು ಹೊಸಬರೇ. ಒಪ್ಪಿಕೊಂಡೆವು. ಆದರೆ ಮಧ್ಯಾಹ್ನದೊಳಗೆ ಚಿತ್ರೀಕರಣ ಮುಗಿಸುತ್ತೇವೆ ಎಂದವರು ಸಂಜೆವರೆಗೂ ಎಳೆದುಕೊಂಡು ಹೋದರು. ಸಿನಿಮಾ ಕೆಲಸವೇ ಹಾಗೆ! ಆದರೆ ನಮಗೆ ಅದರ ಅಂದಾಜಿರಲಿಲ್ಲ, ಅಷ್ಟೇ. ಇನ್ನು ನಮ್ಮ ಪತ್ರಿಕಾ ಕೆಲಸಕ್ಕೆ ಅಡ್ಡಿಯಾಗುವುದೆಂದು ಅಷ್ಟಕ್ಕೇ ನಿಲ್ಲಿಸಿ ಮರುದಿನ ಬೇಕಾದರೆ ಮುಂದುವರೆಸಬಹುದೆಂದು ಹೇಳಿ ಕಳಿಸಿದೆವು.
ಆಗ ವಾರದ ಪುರವಣಿಗಾಗಿ ಗೀತಾರನ್ನು ಸಂದರ್ಶನ ಮಾಡುವಂತೆ ಇಂದೂಧರ್ ಸೂಚಿಸಿದ ಮೇರೆಗೆ ರಾಮಯ್ಯ ಇಂದೂಧರನ ಚೇಂಬರಿನಲ್ಲಿಯೇ ಅರ್ಧ ಗಂಟೆಗೂ ಹೆಚ್ಚು ಕಾಲ ಆ ಕಲಾವಿದೆಯನ್ನು ಮಾತಾಡಿಸಿದ, ಬರೆದೂಕೊಂಡ. ಅದಾಗಿ ಎಷ್ಟೋ ಹೊತ್ತಾದ ಮೇಲೆ ಇಂದೂಧರ್ ನನ್ನನ್ನು ಕರೆದ. ನಾನು ಅಲ್ಲಿ ಹೋದರೆ ‘ಅವನಿಗೆ ಸಂದರ್ಶನದ ಯಾವ ವಿವರವೂ ನೆನಪಿಲ್ಲವಂತಲ್ಲೋ?’ ಅಂದ. ನಾನು ‘ಮತ್ತೆ ಬರಕೊಂಡ ಅಂದೆಯಲ್ಲ?’ ಎಂದು ಕೇಳಿದರೆ ರಾಮಯ್ಯ ಬರೆದುಕೊಂಡಿದ್ದನ್ನು ಇಂದೂಧರ್ ತೋರಿಸಿದ. ಅಲ್ಲೇನಿದೆ? ಹಾಲು ಅಥವಾ ಮೊಸರು ವರ್ತನೆಗೆ ಬರುವವರು ಗೋಡೆ ಮೇಲೆ ಗೀಟು ಹಾಕಿ ಹೋಗುತ್ತಾರಲ್ಲ, ಹಾಗೆ, ನಾಲ್ಕು ಉದ್ದ ಗೀಟು- ಒಂದು ಅಡ್ಡ ಗೀಟು… ಹಾಗೇ ಉದ್ದಕ್ಕೆ ಗೀಟುಗಳನ್ನು ಹೊಡೆದಿದ್ದ! ಇವನ ಪ್ರಶ್ನೆಗೆ ಆಕೆಯ ಉತ್ತರ ಸ್ವಲ್ಪ ದೀರ್ಘವಾಗಿದ್ದರೆ, ಬಹಳಷ್ಟು ಗೀಟುಗಳು; ಚಿಕ್ಕದಾಗಿದ್ದರೆ ಕಮ್ಮಿ ಗೀಟುಗಳು!…
ನಾನು ರಾಮಯ್ಯನ ಬಳಿ ಹೋದರೆ ಮೋಡ ಕವಿದ ವಾತಾವರಣ! ‘ಏನಾಯ್ತೋ ರಾಮ?’ ಎಂದು ಕೇಳಿದರೆ ‘ನನಗೆ ಏನೇನೂ ನೆನಪಿಲ್ಲ’ ಎಂದ. ನನಗೆ ಸಿಟ್ಟು ಹಂಗಿಂಗೆ ಬರಲಿಲ್ಲ! ‘ಹೆಂಗಾದ್ರೂ ಸಾಯಿ’ ಎಂದು ಶಪಿಸಿ ಬಂದೆ. ಸಂದರ್ಶನ ಮಾಡುವ ಸಮಯದಲ್ಲಿ ಇವನು ಸಾಕಷ್ಟು ‘ಹೈ’ ಆಗಿದ್ದ ಎಂದು ಅದರರ್ಥ!…
ಆದರೂ ಬರೆದ! ಅದೂ ಎಷ್ಟು ಚಂದ ಬರೆದ. ಪುಟ್ಟದಾದ ಆದರೆ ಚೇತೋಹಾರಿಯಾದ ಬರಹ. ಅದರ ಕೊನೆಯ ವಾಕ್ಯ ನನಗಿನ್ನೂ ನೆನಪಿದೆ:
‘ಗೀತಾ ತನ್ನ ಸೀರೆ ಸೆರಗಿನ ನೆರಿಗೆ ಚಿಮ್ಮಿಸಿ ನಡೆದ ಪರಿಗೆ ಕೋಲಾರದ ಬರಪೀಡಿತ ಪ್ರದೇಶದಂತಿದ್ದ ಕಚೇರಿಯ ವಾತಾವರಣ ಒಮ್ಮೆಲೇ ನಳನಳಿಸತೊಡಗಿತು..’ ಕರಾರುವಾಕ್ಕಾಗಿ ಇದೇ ವಾಕ್ಯ ಅಂತಲ್ಲ, ಒಟ್ಟು ಈ ಭಾವ. ಇದು ಕೂಡ ಕಚೇರಿಯಲ್ಲಿ ಸಣ್ಣದೊಂದು ಸುಪ್ತ ವಾಗ್ವಾದಕ್ಕೆ ಕಾರಣವಾಯಿತು! ‘ಕಚೇರಿಯೇನು ಕೋಲಾರದ ಬರಪೀಡಿತ ಪ್ರದೇಶದ ಹಾಗಿದೆಯೇ?’ ಅನ್ನುವ ಪ್ರಶ್ನೆಯನ್ನು ಎತ್ತಿ ದಕ್ಷಿಣ ಕನ್ನಡ ಮೂಲದ ಸಹೋದ್ಯೋಗಿಗಳು ಮುಖ ಕೆಂಪು ಮಾಡಿಕೊಂಡಿದ್ದರು! ಈ ‘ಘಟ್ಟದ ಕೆಳಗಿನ ಮತ್ತು ಘಟ್ಟದ ಮೇಲಿನ’ ಎಂಬ ಉರಿ ಆಫೀಸಿನಲ್ಲಿ ಕಂಡೂ ಕಾಣದಂತೆ ಇದ್ದೇ ಇತ್ತು. ಅಂತೂ… ಹೀಗೂ ಉಂಟು!
ರಾಮಯ್ಯನಿಗೆ ಆ ದಿನಗಳಲ್ಲಿ ವಿಪರೀತ ‘ಗ್ಯಾಸ್ ಟ್ರಬಲ್’. ಎಷ್ಟು ಹೊತ್ತಿನಲ್ಲೂ ಹೊಟ್ಟೆ ಉಬ್ಬರಿಸಿಕೊಂಡಿರುತ್ತಿತ್ತು. ‘ಏವ್, ಏವ್’ ಎಂದು ಪ್ರಯಾಸದಿಂದ ತೇಗುತ್ತಲೇ ಇರುತ್ತಿದ್ದ. ಅದಕ್ಕೇ ನಾನವನಿಗೆ ‘ಅನಿಲ್ ಕುಮಾರ್’ ಅಂತ ಹೆಸರಿಟ್ಟಿದ್ದೆ. ವಿ. ಮನೋಹರನಂತೂ ಹೆಣ್ಣು ದನಿಯಲ್ಲಿ ರಾಗವಾಗಿ ‘ಅನೀಲ್…’ ಅಂತ ಸೆಕ್ಸಿಯಾಗಿ ಕೂಗು ಹಾಕುತ್ತಿದ್ದ. ರಾಮಯ್ಯ ಏನಾದರೂ ತಿನ್ನಬೇಕಾದರೆ ‘ಇದು ಗ್ಯಾಸ್‌ಗೆ ಒಳ್ಳೇದಾ?’ ಎಂದು ನಮ್ಮನ್ನು ವಿಚಾರಿಸುತ್ತಿದ್ದ. ಅದಕ್ಕೆ ನಮ್ಮ ಹಾಸನದ ರಾಮಮೂರ್ತಿ ‘ಏ ಭಾಳಾ ಒಳ್ಳೇದು’ ಎಂದು ಹುರಿದುಂಬಿಸುತ್ತಿದ್ದ. ರಾಮಯ್ಯ ತಿಂದಾದ ಮೇಲೆ ಗ್ಯಾಸ್ ಇನ್ನೂ ಉಲ್ಬಣಿಸುತ್ತಿತ್ತು! ಅವನು ‘ನನ್ನ ಮಕ್ಳಾ, ಗ್ಯಾಸ್‌ಗೆ ಒಳ್ಳೇದು ಅಂದ್ರಲ್ಲೋ?’ ಎಂದು ಹರಿಹಾಯ್ದರೆ ರಾಮಮೂರ್ತಿ ತಣ್ಣಗೆ ‘ಹ್ಞೂಂ, ನೀನು ಕೇಳಿದ್ದೇನು? ಗ್ಯಾಸ್‌ಗೆ ಒಳ್ಳೇದಾ ಅಂತ. ನೀನು ನಿನಗೆ ಒಳ್ಳೇದಾ ಅಂತ ಕೇಳಿದ್ಯಾ?’ ಎಂದು ರೇಗಿಸುತ್ತಿದ್ದ…
ಇದರ ಜೊತೆಗೆ ಕೆ. ಪುಟ್ಟಸ್ವಾಮಿ ಆಗಾಗ ರಾಮಯ್ಯನ ‘ಶ್ರದ್ಧಾಂಜಲಿ ಟಿಪ್ಪಣಿ’ (obituary) ಬರೆಯುತ್ತಿದ್ದ, ರಾಮಯ್ಯ ತೀರಿಕೊಂಡರೆ ಪತ್ರಿಕೆಯಲ್ಲಿ ಏನು ಬರಬೇಕು ಅಂತ! ಆ ಟಿಪ್ಪಣಿಗಳೆಲ್ಲವೂ ‘ರಾಮಯ್ಯನಿಲ್ಲದ ಬದುಕು ಎಷ್ಟು ಶೂನ್ಯ ಅಂದುಕೊಂಡರೂ ಹಾಗಾಗದಿರುವುದು ಎಂಥ ದುರಂತ’ ಎಂದು ಕೊನೆಗೊಳ್ಳುತ್ತಿದ್ದವು! ಒಮ್ಮೆ ಇದನ್ನು ಕೇಳಿಸಿಕೊಂಡ ದೇವನೂರ ಮಹಾದೇವ ‘ಹೌದಲ್ಲ ಮಾರಾಯ, ಎಲ್ಲರ ವಿಷಯದಲ್ಲೂ ಇದು ನಿಜ’ ಎಂದು ಉದ್ಗರಿಸಿದರು.
ಇದನ್ನು ಓದಿದ್ದೀರಾ?: ಯುಎಪಿಎ ಶಾಸನ: ಕತ್ತಲೆಗೆ ನೂರಾರು ತಲೆ
ಒಂದು ಸಲ ರಾಮಯ್ಯನಿಗೆ ಅದೇನು ಉಮೇದು ಬಂತೋ, ‘ನಾನು ಸ್ಮಾರ್ಟ್ ಆಗಿಲ್ವೇನೋ?’ ಅಂತ ನನ್ನನ್ನು ಕೇಳಿದ. ನಾನು ‘ಓ ಮತ್ತೆ? ಚಂದ್ರ ಏನಾದರೂ ಕಪ್ಪಗಿದ್ದಿದ್ರೆ ನಿನ್ನಂಗೇ ಇರ್ತಿದ್ದಿದ್ದು’ ಅಂದೆ!
ಮುಂಗಾರು ದಿನಗಳಲ್ಲಿ ಒಮ್ಮೆ ಕೇರಳದ ಪ್ರಸಿದ್ಧ- ರಾಷ್ಟ್ರಪ್ರಶಸ್ತಿ ವಿಜೇತ- ನಿರ್ದೇಶಕ ಜಾನ್ ಅಬ್ರಹಾಂ (ಅಗ್ರಹಾರತ್ತಿಲ್ ಕಳದೈ, ಅಮ್ಮಾ ಅರಿಯನ್ ಮುಂತಾದ ಚಿತ್ರಗಳ ಖ್ಯಾತಿಯ ನಿರ್ದೇಶಕ) ರಾಮಯ್ಯನನ್ನು ಹುಡುಕಿಕೊಂಡು ಬಂದರು. ಒಂದಷ್ಟು ಹೊತ್ತು ಆಫೀಸಿನಲ್ಲೇ ಹರಟಿದರು. ಆಮೇಲೆ ಜಾನ್ ಅಬ್ರಹಾಂ ನನ್ನ ಬಳಿ ಬಂದು ‘ರಾಮಯ್ಯನನ್ನು ಕರೆದುಕೊಂಡು ಹೋಗಲೇ?’ ಎಂದು ಕೇಳಿದರು. ಆಗ ಇನ್ನೇನು ಸಂಜೆಯಾಗುತ್ತಿತ್ತು. ‘ಆಯಿತು’ ಎಂದೆ. ಇಬ್ಬರೂ ಹೋಗಿ ಕುಡಿದು, ಸೇದಿ, ಹರಟಿ ಹಗುರವಾದರು. ಜಾನ್ ಆವತ್ತು ರಾಮಯ್ಯನೊಟ್ಟಿಗೇ ಮಂಗಳೂರಿನಲ್ಲಿದ್ದು ಮರುದಿನ ಅಲ್ಲಿಂದ ಹೊರಟರು ಅಂತ ಕಾಣಿಸುತ್ತೆ.
ನಾವು ಮುಂದಕ್ಕೆ ‘ಸುದ್ದಿ ಸಂಗಾತಿ’ ಮಾಡುವ ದಿನಗಳಲ್ಲಿ ಇದೇ ಜಾನ್ ಅಬ್ರಹಾಂ ಅಕಾಲ ಮರಣಕ್ಕೀಡಾದರು. ನಮ್ಮ ರಾಮಯ್ಯ ನಾನು ‘ಅವರ ಸಮಾಧಿ ನೋಡಲು ಕೇರಳಕ್ಕೆ ಹೋಗಬೇಕು, ನನಗೆ ರಜಾ ಬೇಕು’ ಅಂದ. ‘ಸಂಗಾತಿ’ಯ ಸಂಪಾದಕ ಇಂದೂಧರ್ ರಜಾ ಕೊಡಲಿಲ್ಲ. ಇವನು ‘ಹಾಗಾದರೆ ನನ್ನ ರಾಜೀನಾಮೆ ತಗೋ’ ಅಂತ ಹೇಳಿ ಕೇರಳಕ್ಕೆ ಹೊರಟೇಬಿಟ್ಟ! ಹೀಗೆ ಅವನು ‘ಸಂಗಾತಿ’ ಬಿಟ್ಟು ಹೋಗುವುದು, ಮತ್ತೆ ಬಂದು ಸೇರುವುದು- ಈ ಥರ ಹಲವು ಬಾರಿ ಮಾಡಿದ್ದಾನೆ. ಬಿಟ್ಟು ಮತ್ತೆ ಬಂದಾಗಲೆಲ್ಲ ಲವಲವಿಕೆಯಿಂದ ಹೊಸ ಹೊಸ ಐಡಿಯಾಗಳನ್ನು ತರುತ್ತಿದ್ದ. ಮತ್ತೆ ಕೆಲವು ದಿನಕ್ಕೆ ಯಥಾಪ್ರಕಾರ! ಅಂದರೆ ಪತ್ರಿಕಾ ಸಂಸ್ಥೆಯೇ ಇರಲಿ, ಯಾವುದೇ ಸಂಸ್ಥೆಯಾಗಿರಲಿ, ಅದಕ್ಕೆ ಅದರದ್ದೇ ಆದ ಸಹಜ ಲಯ ಇರುತ್ತೆ- water level- ಅದು ಆರಕ್ಕೂ ಏರದೆ, ಮೂರಕ್ಕೂ ಇಳಿಯದಂತೆ ಸಂಸ್ಥೆಯನ್ನು ತೂಗಿಸಿಕೊಂಡು ಹೋಗುತ್ತೆ. ಹಾಗೇ ಇವನೂ ವಾಪಸು ಬಂದ ಸ್ವಲ್ಪ ದಿನಕ್ಕೆ ‘ಸಂಗಾತಿ’ಯ ನಿತ್ಯ ಲಯಕ್ಕೆ ಬಾಗಿಬಿಡುತ್ತಿದ್ದ… ಈ ಬಾರಿ ಹೊರಟವನು ಕೇರಳಕ್ಕೂ ಹೋದನಂತೆ, ಆದರೆ ಸಮಾಧಿ ನೋಡಲು ಹೋಗಲೇ ಇಲ್ಲ ಪುಣ್ಯಾತ್ಮ! ಅಂತೂ ಅದೆಲ್ಲೆಲ್ಲಿ ಹೋದನೋ, ಅದೇನೇನು ಮಾಡಿದನೋ, ಆ ರಾಮನಿಗೇ ಗೊತ್ತು!…
ಇದನ್ನು ಓದಿದ್ದೀರಾ?: ʼಅಮ್ಮ ಅರಿಯನ್ʼ ಗೆ ಪುನರ್ಜನ್ಮ ದಕ್ಕಿದ ಕಥೆ- ಕ್ಷಯಿಸುತ್ತಿರುವ ನಮ್ಮ ಚಿತ್ರಗಳ ಕಥೆ- ವ್ಯಥೆ
ಇದು ನಮ್ಮ ರಾಮಯ್ಯನ ವೈಖರಿ.
‘ಸಂಗಾತಿ’ ದಿನಗಳಿಗೆ ಸಂಬಂಧಪಟ್ಟಂತೆ ಇಲ್ಲೇ ಇನ್ನೂ ಎರಡು ನೆನಪು ಹಂಚಿಕೊಳ್ಳಬೇಕು. ರಾಮಯ್ಯನಿಗೆ ಕಾಡುಗೋಡಿಯಲ್ಲಿ ಒಂದು ಸೈಟ್ ಇತ್ತು. ಅಲ್ಲಿ ಮನೆ ಕಟ್ಟಿಸಬೇಕು ಅಂತ ‘ಇಟ್ಟಿಗೆ ಕಲೆಕ್ಟ್ ಮಾಡ್ತಿದೀನಿ’ ಅಂದ! ಆಗ ದೇಶಾದ್ಯಂತ ಅಯೋಧ್ಯೆ ರಾಮಮಂದಿರದ ಹವಾ. ಅವರುಗಳು ದೇಶದ ತುಂಬ ‘ರಾಮಶಿಲೆ’ ಸಂಗ್ರಹಿಸುತ್ತಿದ್ದರು. ಅದಕ್ಕೇ ನಾನು, “ರಾಮ, ನೀನು ‘ಕೆ. ರಾಂ ಶಿಲೆ’ ಕಲೆಕ್ಟ್ ಮಾಡೋ” ಎಂದು ಹುರಿದುಂಬಿಸಿದೆ! ಅವನು ಯಥಾಪ್ರಕಾರ ‘ನನ್ಮಕ್ಳಾ’ ಎಂದು ಬೈದು ಹೋದ.

ಆಗ ‘ಸಂಗಾತಿ’ಯಲ್ಲಿ ದೇವನೂರ ಮಹಾದೇವರ ‘ಕುಸುಮಬಾಲೆ’ಯನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದೆವು. ಮಹಾದೇವ ‘ಅದರ ಪ್ರೂಫ್ ನೀನೇ ನೋಡಬೇಕು’ ಎಂದು ನನಗೆ ಕಟ್ಟಪ್ಪಣೆ ಮಾಡಿದ್ದರು. ನಾನು ಪ್ರೂಫ್ ನೋಡುವಾಗ ಅದನ್ನು ಎಂಜಾಯ್ ಮಾಡುತ್ತ ಓದುವುದಷ್ಟೇ ಅಲ್ಲ, ರಾಮಯ್ಯನಿಗೆ ‘ನೋಡೋ ರಾಂ, ಎಷ್ಟು ಚೆನ್ನಾಗಿದೆ’ ಅಂತ ಕೆಲವು ಭಾಗಗಳನ್ನು ಗಟ್ಟಿಯಾಗಿ ಓದಿಯೂ ಹೇಳುತ್ತಿದ್ದೆ. ರಾತ್ರಿ ಸಾಮಾನ್ಯ ಆ ಹೊತ್ತಿನಲ್ಲಿ ಆಫೀಸಿನಲ್ಲಿ ನಾವಿಬ್ಬರೇ ಇರುತ್ತಿದ್ದೆವು. ಹೀಗೆ ಎರಡು ಮೂರು ಬಾರಿ ನನ್ನ ಓದಿಗೆ ಕಿವಿಯಾದ ರಾಮಯ್ಯ ಒಂದು ದಿನ ‘ಚೆನ್ನಾಗಿ ಓದ್ತೀಯಾ ಕಣೋ. ತಡಿ ಒಂದು ಸೆಷನ್ ಮಾಡೋಣ’ ಅಂದ. ಹಾಗೆ ಒಂದು ರಾತ್ರಿ ಆಫೀಸಿನ ಕೆಲಸ ಮುಗಿದ ಮೇಲೆ ಮನೆಗೆ ಕರೆದುಕೊಂಡು ಹೋದ. ಅವನ ಮನೆ ಆಗ ಬಹುಶಃ ಕಮ್ಮನಹಳ್ಳಿಯಲ್ಲಿತ್ತು. ಅಲ್ಲಿ ರಾಮಯ್ಯನ ಹೆಂಡತಿ ರಾಜೇಶ್ವರಿ, ಅವರ ತಂಗಿ ಚಂಪಾವತಿ, ಪ್ರಜಾವಾಣಿಯಲ್ಲಿದ್ದ ಸಿ.ಜಿ. ಮಂಜುಳಾ, ಮಂಜುಳಾ ಪತಿ ಗು. ಪರಮೇಶ್ವರ್- ಹೀಗೆ ಒಂದಷ್ಟು ಜನ ಕಾಯುತ್ತಿದ್ದರು. ಅಲ್ಲೇ ಬಿಯರ್ ಕುಡಿದು, ಊಟ ಮಾಡಿ, ತತ್ವದ ಪದ ಹಾಡಿ ರಾತ್ರಿಯಿಡೀ ‘ಕುಸುಮಬಾಲೆ’ ಓದಿದೆ! ಮುಂದೆಯೂ ಈ ಥರದ ಮೂರು ನಾಲ್ಕು ಪಾರಾಯಣದ ಸೆಷನ್‌ಗಳಾದವು… ಇದರ ‘ಖ್ಯಾತಿ’ ಅಲ್ಲಿಂದಿಲ್ಲಿಗೆ ಹಬ್ಬಿ ಒಮ್ಮೆ ಮಹಾದೇವ ನನ್ನ ಮನೆಗೇ ಬಂದವರು ‘ಕುಸುಮಬಾಲೆ ಓದ್ತೀಯಂತಲ್ಲಪ್ಪ, ಓದಿ ತೋರಿಸು’ ಅಂದರು. ಅವರ ಮುಂದೆಯೂ ಒಂದು ಭಾಗ ಓದಿದಾಗ ‘ಹ್ಞೂಂ, ಡೈಲಾಗ್ ಪೋರ್ಷನ್ ಚೆನ್ನಾಗಿ ಓದ್ತೀಯಾ’ ಎಂದು ಹೇಳಿ ಹೋದರು…!
*
ಒಟ್ಟಿನಲ್ಲಿ ಯಾವುದೋ ಒಂದರಲ್ಲಿ ತೊಡಗಿಕೊಳ್ಳುವುದು, ಅದನ್ನು ಮಾಡುತ್ತಿರುವಾಗಲೇ ಅಲ್ಲಿಂದ ಪಲಾಯನ ಮಾಡುವುದು ಹೇಗೆಂದು ಚಡಪಡಿಸುವುದು, ಇದು ರಾಮಯ್ಯನ ಜಾಯಮಾನ. ಅದಕ್ಕೇ ಇಂಥ ಚಂಚಲಚಿತ್ತದ ರಾಮಯ್ಯ ‘ತಲಪರಿಗೆ’ ಮಾಡಿದಾಗ ನಾನು ದಂಗು ಬಡಿದುಹೋದೆ. ಅವನ ಸಂಪಾದನೆಯಲ್ಲಿ ಐನೂರು ಪುಟಗಳ ಗ್ರಂಥವಾಗಿ ರೂಪುಗೊಂಡಿರುವ ‘ತಲಪರಿಗೆ’ ಪುಸ್ತಕದ ಬಗ್ಗೆ ನಾನು ನನ್ನದೊಂದು ಅಂಕಣದಲ್ಲಿ ಬರೆದ ಸಾಲುಗಳು:
ಈ ಕೃತಿಯನ್ನು ರೂಪಿಸಿರುವ ಗೆಳೆಯ ಕೋಟಿಗಾನಹಳ್ಳಿ ರಾಮಯ್ಯ, ತಲಪರಿಗೆಯನ್ನು “ಜೀವನದಿಯ ಜಾಡು ಹಿಡಿದು ಅಸ್ಪೃಶ್ಯ ಲೋಕದಲ್ಲೊಂದು ಪಯಣ” ಎಂದು ಕರೆದಿದ್ದಾನೆ. ಮುಖ್ಯವಾಗಿ ಇದು “ಅಸ್ಪೃಶ್ಯಲೋಕದ ತಲ್ಲಣಗಳನ್ನು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಗ್ರಹಿಸುವ ಪ್ರಯತ್ನ… ಅಸ್ಪೃಶ್ಯತೆಯ ಸ್ವರೂಪ- ಆಧುನಿಕ ಪ್ರಕ್ರಿಯೆಗಳೊಂದಿಗೆ ಅನೇಕ ಮಾಯಾರೂಪಗಳನ್ನು ತಾಳುತ್ತ ಸಂಕೀರ್ಣಗೊಂಡಿದ್ದು ಅದನ್ನು ದಾಖಲಿಸಲು ತಕ್ಕ ಅರಿವಾಗಲೀ, ಭಾಷೆಯಾಗಲೀ ಇನ್ನೂ ಸಿದ್ಧಗೊಂಡಿಲ್ಲದಿರುವುದು” ಈ ಪುಸ್ತಕವನ್ನು ರೂಪಿಸುವಾಗಲೇ ತನ್ನ ಅರಿವಿಗೆ ಬಂತೆಂದೂ ರಾಮಯ್ಯ ಬರೆಯುತ್ತಾನೆ…
ನೀವು ಹಕ್ಕಿಯ ಈ ಬಿಳಿ ಪುಕ್ಕ ನೋಡಿರುತ್ತೀರಿ. ಹಗುರವಾಗಿ ಗಾಳಿಯಲ್ಲಿ ಎಲ್ಲೆಂದರಲ್ಲಿ ತೇಲುತ್ತ ಸಾಗುವ ಅದನ್ನು ಚಿಕ್ಕಂದಿನಲ್ಲಿ ನಾವು ಅಶ್ಲೀಲ ಪದ ಬಳಸಿ ‘ಅಜ್ಜಿ ಕೂದಲು’ ಅನ್ನುತ್ತಿದ್ದೆವು. ಅಂಥ ಅಜ್ಜಿ ಕೂದಲಿನ ಹಾಗೆ ತನ್ನ ಪಾಡಿಗೆ ತಾನು ಹಾರಾಡಿಕೊಂಡಿರುತ್ತಿದ್ದ ರಾಮಯ್ಯ ಈ ಪರಿ ಪಟ್ಟಾಗಿ ಕೂತು, ಬರೆದು, ಬರೆಸಿ, ಓಡಾಡಿ ರೂಪಿಸಿರುವ ಈ ತಲಪರಿಗೆ ನೋಡಿದರೆ ಆತನ ಬಗ್ಗೆ ಅಪಾರ ಆಶ್ಚರ್ಯ, ಮೆಚ್ಚುಗೆ ಹುಟ್ಟುತ್ತದೆ…
*
ಹಾಗೇ ಅವನು ಕಟ್ಟಿದ ‘ಆದಿಮ’.
‘ಆದಿಮ’ದ ಹಿಂದಿರುವುದು ‘ತಲಪರಿಗೆ’ ಕೃತಿಗಿಂತಲೂ ನೂರು ಪಟ್ಟು ಹೆಚ್ಚಿನ ಶ್ರಮ ಹಾಗೂ ಕನಸುಗಾರಿಕೆ. ಒಂದಷ್ಟು ಜನ ದಿನಕ್ಕೆ ಒಂದು ರೂಪಾಯಿಯಂತೆ ಕೂಡಿಸಿ ಒಟ್ಟುಗೂಡಿದ ಹಣದಿಂದ ಬೆಟ್ಟದ ಮೇಲೆ ಜಾಗ ಕೊಂಡು, ಮಕ್ಕಳ ರಂಗಭೂಮಿಯಲ್ಲಿ ಕ್ರಾಂತಿಯನ್ನೇ ಮಾಡಿದ ‘ಆದಿಮ’- ತನ್ನಷ್ಟಕ್ಕೇ ಒಂದು ದೊಡ್ಡ ಆಂದೋಲನ. ಅಲ್ಲಿನ ಕುಟೀರಗಳನ್ನು ಕಣ್ಣಾರೆ ಕಂಡ ಡಾ. ಚಂದ್ರಶೇಖರ ಕಂಬಾರರು ‘ಇದೊಂದು ದೊಡ್ಡ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು’ ಎಂದು ಹರಸಿದ್ದುಂಟು. ಆದರೆ ಸ್ವತಃ ರಾಮಯ್ಯನೇ ಅಲ್ಲಿಂದ ಹೊರಬರಬೇಕಾಯಿತು. ಇದರಲ್ಲಿ ರಾಮಯ್ಯನ ಸ್ವಯಂಕೃತಾಪರಾಧವೂ ಇರಬಹುದು, ನನಗೆ ಗೊತ್ತಿಲ್ಲ. ಆದರೆ ಮಕ್ಕಳ ರಂಗಭೂಮಿಯಲ್ಲಿ ರಾಮಯ್ಯನಷ್ಟು ಕೆಲಸ ಮಾಡಿದ ಇನ್ನೊಬ್ಬರನ್ನು ಕರ್ನಾಟಕದಲ್ಲಿ ನಾನಂತೂ ಕಂಡಿಲ್ಲ. ಹಾಗೆಯೇ ಅಂಬೇಡ್ಕರ್ ಪ್ರಜ್ಞೆಯನ್ನು ಬಿತ್ತುವಲ್ಲಿ ಅವನಷ್ಟು ಕಟಿಬದ್ಧರಾದವರನ್ನೂ ನಾನು ನೋಡಿಲ್ಲ.

*
ರಾಮಯ್ಯ ಆಗಾಗ ತಾನು ಹಿಡಿದ ಕೆಲಸದಿಂದ ಓಡಿಹೋಗುವುದು ನಿಜ. ಆದರೆ ದಲಿತ ಚಳವಳಿ ವಿಷಯದಲ್ಲಿ ಮಾತ್ರ ಅವನದು ಅಂದಿನಿಂದ ಇಂದಿನವರೆಗೂ ನಿರಂತರವಾದ ಅಚಲ ನಿಷ್ಠೆ. ಅವನ ಶ್ರದ್ಧೆಯಲ್ಲಿ ದಣಿವು, ಸ್ವಾರ್ಥ, ಗುಪ್ತ ದುರುದ್ದೇಶ ಯಾವುದೂ ಇಲ್ಲ. ಚಳವಳಿಯಲ್ಲಿ ವರ್ಷಗಳು ಕಳೆದಂತೆ ಎಷ್ಟೋ ಧುರೀಣರ ನಾನಾ ಬಗೆಯ ನವರಂಗಿ ಆಟಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ರಾಮಯ್ಯ ಮಾತ್ರ ಆ ವಿಷಯದಲ್ಲಿ ಅಪರಂಜಿ ಚಿನ್ನ.
ನಡುವೆ ಒಮ್ಮೆ ಚಳವಳಿಯ ಕಾವು ತಗ್ಗುತ್ತಿದೆ ಅನಿಸಿದಾಗ ಕೋಲಾರದಿಂದ ಕಲಾಜಾಥಾ ಹೊರಡಿಸಿ ಆಂದೋಲನಕ್ಕೆ ಮರುಜೀವ ಕೊಟ್ಟವನು ರಾಮಯ್ಯ. ಇಂದಿನವರೆಗೂ ದಲಿತ ಚಳವಳಿಯ ದಿಕ್ಕುದೆಸೆಗಳನ್ನು ಕುರಿತು ನಿಷ್ಠುರ ಒಳ ವಿಮರ್ಶಕನಾಗಿ ಹಾಗೂ ಸಾಮಾಜಿಕ ವ್ಯಾಖ್ಯಾನಕಾರನಾಗಿ ಕಾಲಕಾಲಕ್ಕೆ ನಿರ್ದಾಕ್ಷಿಣ್ಯವಾದ ಟೀಕೆಟಿಪ್ಪಣಿಗಳನ್ನು ಮಾಡುತ್ತಲೇ ಬಂದಿದ್ದಾನೆ. ಚಳವಳಿಗೆ ನೇರವಾಗಿ ಸಂಬಂಧಿಸಿದ್ದಲ್ಲವಾದರೂ, ಇಲ್ಲೊಂದು ಮಹತ್ವದ ಪ್ರಸಂಗ ಹೇಳಬೇಕು:
1987ರಲ್ಲಿ ಬೆಳಗಾವಿ ಜಿಲ್ಲೆಯ ಬೆಂಡಿಗೇರಿ ಎಂಬ ಗ್ರಾಮದಲ್ಲಿ ಲಿಂಗಾಯತ ಮುಖಂಡರು ದಲಿತರಿಗೆ ಹೇಲು ತಿನ್ನಿಸಿದ ಹೃದಯವಿದ್ರಾವಕ ಘಟನೆ ನಡೆಯಿತು. ಇದು ರಾಜ್ಯದಲ್ಲಿ ದೊಡ್ಡ ಕೋಲಾಹಲೆಬ್ಬಿಸಿ ತನಿಖೆಗೆಂದು ಡಾ. ಬಿ.ಎಂ. ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ವಿಧಾನಸಭೆಯ ಜಂಟಿ ಸದನ ಸಮಿತಿ ರಚನೆಯಾಯಿತು. ಆ ಸಮಯದಲ್ಲಿ, ರಾಮಯ್ಯನೇ ಹೇಳಿದಂತೆ ಪಿ. ಲಂಕೇಶರು ಈ ಘಟನೆ ನಡೆದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರಂತೆ! ಅಂದರೆ ಘಟನೆ ನಡೆಯಿತೋ ಇಲ್ಲವೋ ಎಂಬ ಬಗ್ಗೆಯೇ ಅವರಿಗೆ ಸಂದೇಹವಿತ್ತಂತೆ. ರಾಮಯ್ಯನ ಪ್ರಕಾರ ಲಂಕೇಶರು ‘ಈ ದಲಿತರನ್ನ ನಂಬಕ್ಕೆ ಆಗಲ್ಲ ಕಣ್ರೀ’ ಎಂದರು! ರಾಮಯ್ಯ ಈ ಮಾತನ್ನು ಡಾ. ತಿಪ್ಪೇಸ್ವಾಮಿಯವರ ಮುಂದೆ ಉಲ್ಲೇಖಿಸಿದಾಗ, ಅವರು ಭಾರತದಲ್ಲಿ ಜಾತಿ ಎಂಬುದು ಹೇಗೆ ಎಳೆದರೂ ಕಿತ್ತು ಬರದ ಚರ್ಮದಂತೆ ಅಂಟಿಕೊಂಡಿರುತ್ತದೆ ಎಂದು ನಿರೂಪಿಸಲು ತಮ್ಮ ಜೀವನದ ಒಂದು ಘಟನೆಯನ್ನು ಪ್ರಸ್ತಾಪಿಸಿದರು. ರಾಮಯ್ಯ ಅದನ್ನೇ ಲಂಕೇಶರ ಕಿವಿಗೆ ಹಾಕಿದಾಗ ಸೃಷ್ಟಿಯಾಗಿದ್ದೇ ‘ಮುಟ್ಟಿಸಿಕೊಂಡವನು’ ಎಂಬ ಮನೋಜ್ಞ ಕತೆ! ಆ ಕತೆ ಓದಿದವರಿಗೆ ನೆನಪಿರುತ್ತದೆ- ತನ್ನ ಕಣ್ಣಿಗೆ ಚಿಕಿತ್ಸೆ ನೀಡಿದಾತ ಒಬ್ಬ ಅಸ್ಪೃಶ್ಯ ವೈದ್ಯನೆಂದು ತಿಳಿದಾಗ, ಆ ವೈದ್ಯನ ಎಚ್ಚರಿಕೆಯನ್ನೂ ಕಡೆಗಾಣಿಸಿ ತಲೆಗೆ ನೀರು ಹೊಯ್ದುಕೊಂಡು ಕಣ್ಣನ್ನೇ ಕಳೆದುಕೊಳ್ಳುವ ಒಬ್ಬ ಲಿಂಗಾಯತ ರೈತನ ಕಥೆಯದು. ಅದೇ ರೈತನಿಗೆ ಮತ್ತೆ ಎರಡನೇ ಕಣ್ಣಿಗೂ ಅದೇ ಬಾಧೆಯಾದಾಗ ವಿಧಿಯಿಲ್ಲದೆ ಆತ ಮತ್ತೆ ಅದೇ ವೈದ್ಯನ ಮೊರೆ ಹೋಗುವ ಹೃದಯಂಗಮ ಕಥನವದು….
ಇದನ್ನು ಓದಿದ್ದೀರಾ?: ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ
ಚಳವಳಿಗೆ ಸಂಬಂಧಪಟ್ಟ ಮತ್ತೊಂದು ವಿದ್ಯಮಾನವೆಂದರೆ, 1985ರ ವಿಧಾನಸಭಾ ಚುನಾವಣೆಗಳಲ್ಲಿ ದಲಿತ ಸಂಘರ್ಷ ಸಮಿತಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ಪ್ರಸ್ತಾವ ದೇವನೂರ ಮಹಾದೇವರಿಂದ ಬಂತು. ಆಗ ಮಹಾದೇವರೇ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರು. ಆಗ ಆ ನಿರ್ಧಾರಕ್ಕೆ ವಿರೋಧ ಸೂಚಿಸಿದವರು ಇಬ್ಬರೇ- ರಾಮಯ್ಯ ಮತ್ತು ನಾನು. ಅದುವರೆಗೆ ದಲಿತ ಸಂಘರ್ಷ ಸಮಿತಿ ಚುನಾವಣಾ ಬಹಿಷ್ಕಾರದಂಥ ನಿಲುವು ತಳೆಯುತ್ತಿತ್ತು, ಇಲ್ಲವೇ ತಟಸ್ಥವಾಗಿರುತ್ತಿತ್ತು. ಅದೇ ತಾನೇ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಗಿತ್ತು (1984 ಅಕ್ಟೋಬರ್‌ನಲ್ಲಿ). ಅದುವರೆಗೆ ಕಣ್ಣು ಮುಚ್ಚಿಕೊಂಡು ಕಾಂಗ್ರೆಸ್ಸಿಗೆ ವೋಟು ಹಾಕುತ್ತಿದ್ದ ದಲಿತರು ಇದೀಗ ಸ್ವತಂತ್ರ ರಾಜಕೀಯ ನಿಲುವು ತಳೆಯುವ ಸಂದರ್ಭ ಬಂದಿದೆ ಎಂಬುದು ಮಹಾದೇವರ ವಿವರಣೆ. ಆದರೆ ದಲಿತ ಚಳವಳಿ ಒಂದು ಒತ್ತಡ ಹೇರುವ ಸಮೂಹವಾಗಿ ಉಳಿದರೆ ಮಾತ್ರ ಪ್ರಭಾವಶಾಲಿಯಾಗಿರಬಹುದು ಎಂಬುದು ನಮ್ಮ ವಾದ… ಕಡೆಗೆ ಎಲ್ಲ ವಾದವಿವಾದಗಳೂ ಮುಗಿದು ದಲಿತ ಚಳವಳಿ ಜನತಾ ಪಕ್ಷಕ್ಕೆ ಸಕ್ರಿಯವಾಗಿ ಬೆಂಬಲ ನೀಡಿದ್ದೂ ಆಯಿತು. ಮುಂದಕ್ಕೆ ಏನೋ ಹೋಗಿ ಏನೋ ಆಗಿ, ಚಳವಳಿ ಯಾವಯಾವುದೋ ದಿಕ್ಕು ಹಿಡಿಯಿತು. ಅಂತೂ ದಲಿತ ಚಳವಳಿ ವಿಘಟನೆಗೊಳ್ಳಲು ಆ ರಾಜಕೀಯ ನಿಲುವೇ ಕಾರಣವಾಯಿತು ಎಂಬುದು ನನ್ನ ಈಗಿನ ಅನಿಸಿಕೆ. ಇರಲಿ. ಆಗ ರಾಮಯ್ಯ ತನ್ನ ನಿಲುವು ವಿವರಿಸಲು ‘ಮೃಗ ಮತ್ತು ಸುಂದರಿ’ಯ ಕಥೆ ಹೇಳುತ್ತಿದ್ದ. ಅದು ಹೀಗಿದೆ:
ಒಮ್ಮೆ ಕಾಡಿನ ರಾಜ ಸಿಂಹನಿಗೆ ಒಬ್ಬ ಸುಂದರಿಯ ಮೇಲೆ ಮನಸ್ಸಾಯಿತು. ಸಿಂಹ ತನ್ನ ಆಸೆಯನ್ನು ನಿವೇದಿಸಿಕೊಂಡಾಗ ಸುಂದರಿ ‘ನಿನ್ನ ಹಲ್ಲು, ಉಗುರು, ಕೇಶ- ಇವನ್ನೆಲ್ಲ ನೋಡಿದರೇ ನನಗೆ ಭಯ’ ಎನ್ನುತ್ತಾಳೆ. ಆಗ ಸಿಂಹ ತನ್ನ ಉಗುರು, ಹಲ್ಲು, ಕೇಸರ ಎಲ್ಲವನ್ನೂ ತೆಗೆದುಹಾಕಿ ಸುಂದರಿಯ ಮುಂದೆ ಪ್ರತ್ಯಕ್ಷವಾದಾಗ, ಅವಳೀಗ ಸಿಂಹವನ್ನು ನೇರಾನೇರ ತಿರಸ್ಕರಿಸಿಬಿಡುತ್ತಾಳೆ! ಸಿಂಹ ‘ನಾನು ಇಷ್ಟವಿಲ್ಲ ಎಂದು ಮೊದಲೇ ಹೇಳಬಾರದಿತ್ತೇ?’ ಎಂದು ಹಲುಬಿದರೆ, ಸುಂದರಿ ಕೊಂಕುನಗೆ ಬೀರುತ್ತ ‘ಮೊದಲೇ ಹೇಳಿದ್ದರೆ ನೀನು ನನ್ನನ್ನು ಕೊಂದು ತಿನ್ನುತ್ತಿದ್ದೆ. ಅದಕ್ಕೇ ನಿನ್ನ ಹಲ್ಲು, ಉಗುರು ಕಿತ್ತುಹಾಕಿ ಬರಲು ಹೇಳಿದ್ದು’ ಎನ್ನುತ್ತಾಳೆ. ಅಲ್ಲಿಗೆ ಸಿಂಹಕ್ಕೆ ಸುಂದರಿಯೂ ದಕ್ಕಲಿಲ್ಲ, ತನ್ನ ‘ಸಿಂಹತನ’ವೂ ಉಳಿಯಲಿಲ್ಲ. ರಾಜಕಾರಣವೆಂಬ ಸುಂದರಿಯ ಮುಂದೆ ಚಳವಳಿ ಎಂಬ ಸಿಂಹದ ಗತಿ ಇದೇ! ಕಡೆಗೆ ದಲಿತ ಚಳವಳಿಯ ಪಾಡೂ ಇದೇ ಆಯಿತಲ್ಲವೇ?…
ಈ ಬಗೆಯ ನೂರಾರು ಅನುಭವಜನ್ಯ ಕತೆಗಳು ರಾಮಯ್ಯನ ಬತ್ತಳಿಕೆಯಲ್ಲಿವೆ. ಈಗ ಅವನಿಗೆ 70 ವರ್ಷ ತುಂಬಿತಂತೆ. ಈಗಾಗಲೇ ಅವನೊಬ್ಬ ಸಾಂಸ್ಕೃತಿಕ ‘ಐಕಾನ್’ ಆಗಿ ರೂಪುಗೊಂಡಿದ್ದಾನೆ. ಆದರೂ, ಇನ್ನೊಂದು ಕಡೆ, ಮತ್ತೊಂದು ಕಡೆ ಜಿಗಿಯುವ ಅವನ ಚಡಪಡಿಕೆ ಮಾತ್ರ ಇನ್ನೂ ನಿಂತಿಲ್ಲ. ನಿಲ್ಲುವುದೂ ಬೇಡ.
Love you Ram!

ಎನ್.ಎಸ್. ಶಂಕರ್
ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ. ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಲಂಕೇಶರ 'ಮುಟ್ಟಿಸಿಕೊಂಡವರು' ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ 'ಮಾನಸೋಲ್ಲಾಸ' ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. 'ಉಲ್ಟಾ ಪಲ್ಟಾ' ಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಅರಸು ಯುಗ, ಚಂಚಲೆ, ರೂಢಿ, ಉಸಾಬರಿ, ಫೂಲನ್ ದೇವಿ, ಮಾಯಾಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.



