ವಿಶ್ವದ ದೊಡ್ಡಣ್ಣ ಅಮೆರಿಕ. ಈ ದೊಡ್ಡಣ್ಣನ ನೆಲದಲ್ಲಿ ಕನ್ನಡದ ಹೆಮ್ಮೆಯ ದೊಡ್ಡಕ್ಕಳೊಬ್ಬಳಿದ್ದಾಳೆ — ಅದೇ ಅಮೆರಿಕ ಕನ್ನಡ ಕೂಟಗಳ ಒಕ್ಕೂಟ (AKKA – Association of Kannada Kootas of America)!
ಉತ್ತರ ಅಮೆರಿಕದಾದ್ಯಂತ ಹರಡಿಕೊಂಡಿರುವ ಈ ಅಕ್ಕನ ಬಳಗ ಅತಿ ವಿಶಾಲವಾದುದು. 40ಕ್ಕೂ ಹೆಚ್ಚು ಪ್ರಾದೇಶಿಕ ಕನ್ನಡ ಕೂಟಗಳ ಮೂಲಕ ಎರಡು ಲಕ್ಷಕ್ಕೂ ಅಧಿಕ ಕನ್ನಡಿಗರನ್ನು ತಲುಪಿರುವ ಈ ಸಂಸ್ಥೆ, ಕರುನಾಡಿನಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ ಕನ್ನಡದ ಕಂಪನ್ನು ಪಸರಿಸುತ್ತ ಬಂದಿದೆ.
2026ರಲ್ಲಿ ‘ಅಕ್ಕ’ ತನ್ನ 25ನೇ ವಾರ್ಷಿಕೋತ್ಸವದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸೆಪ್ಟೆಂಬರ್ 4, 5 ಮತ್ತು 6ರಂದು ಅಮೆರಿಕದ ಐತಿಹಾಸಿಕ ಫಿಲಡೆಲ್ಫಿಯಾ ನಗರದಲ್ಲಿ ನಡೆಯಲಿರುವ ಈ ಮಹಾಸಂಭ್ರಮಕ್ಕೆ ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ‘ಅಕ್ಕ’ ಸಜ್ಜಾಗಿದೆ. ಸಮ್ಮೇಳನವು Philadelphia ದಲ್ಲಿರುವ Pennsylvania Convention Centerನಲ್ಲಿ ನಡೆಯಲಿದೆ.
ತವರುಮನೆ ಅಂದರೆ ಈ ಅಕ್ಕನಿಗೆ ಅಚ್ಚುಮೆಚ್ಚು. ಪ್ರತಿ ಎರಡು ವರ್ಷಗಳಿಗೊಮ್ಮೆ ತನ್ನವರೊಂದಿಗೆ ನಕ್ಕು-ನಲಿಯಲು, ತವರಿನವರನ್ನು ತನ್ನ ಅಂಗಳಕ್ಕೆ ಆಹ್ವಾನಿಸುತ್ತಾಳೆ. ಅಕ್ಕನ ಹೃದಯ ಅತಿ ದೊಡ್ಡದು; ತನ್ನವರು ದೂರದೇಶದಿಂದ ಬಂದಾಗ ಅವರಿಗೆ ಆಸರೆಯಾಗಿ ನಿಲ್ಲುತ್ತಾಳೆ, ಪ್ರೀತಿಯ ಕೈತುತ್ತು ನೀಡಿ ಸೋದರತ್ವವನ್ನು ಮೆರೆಯುತ್ತಾಳೆ. ಉಣಿಸಿ, ಉಡಿಸಿ, ತನ್ನೂರಿನ ಸಂಸ್ಕೃತಿಯನ್ನು ಪರಿಚಯಿಸಿ, ಎಲ್ಲರೊಂದಿಗೆ ಕುಣಿದು ಕುಪ್ಪಳಿಸಿ ಸಂತಸಪಡುವುದು ಈ ಅಕ್ಕನ ಹೆಗ್ಗಳಿಕೆ.
ಇಡೀ ಉತ್ತರ ಅಮೆರಿಕವನ್ನೇ ಸಾಂಸ್ಕೃತಿಕವಾಗಿ ಬೆಸೆಯುತ್ತಿರುವ ಈ ಅಕ್ಕ, ತನ್ನ ರಜತ ಮಹೋತ್ಸವಕ್ಕೆ ವಿಶ್ವದಾದ್ಯಂತ ಇರುವ ಸಾವಿರಾರು ಕನ್ನಡಿಗರನ್ನು ಬರಮಾಡಿಕೊಳ್ಳುತ್ತಿದೆ. ಅಮೆರಿಕ, ಕೆನಡಾ ಹಾಗೂ ತವರುಮನೆಯಾದ ಕರ್ನಾಟಕದಿಂದ ಸುಮಾರು ಸಂಖ್ಯೆಯ ಕನ್ನಡಿಗರು ಈ ಮಹಾಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ರಜತ ಮಹೋತ್ಸವದ ಸಮಾರಂಭಕ್ಕೆ ನೀವೂ ಬರಬೇಕು; ಅಲ್ಲದೆ, ನಿಮ್ಮದೊಂದು ಲೇಖನವು ರಜತ ಮಹೋತ್ಸವದ ಸ್ಮರಣ ಸಂಚಿಕೆಯಲ್ಲಿರಬೇಕೆಂದು ಸಂಘಟಕರು ಕೋರಿದರು. ಅವರ ಕರೆಗೆ ಸಂತೋಷ ವ್ಯಕ್ತಪಡಿಸಿ ಲೇಖನ ಕಳುಹಿಸುವುದಾಗಿ ಹೇಳುತ್ತಾ ಮಾತಿಗಿಳಿದೆ. ದೂರದ ಊರಿನಲ್ಲಿ ನಡೆಯಲಿರುವ ಸಮಾರಂಭದ ಸಿದ್ಧತೆ ಕುರಿತು ಕುತೂಹಲ ತಣಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು.
ಅಮೆರಿಕದ ‘ಅಕ್ಕ’ ಸಂಸ್ಥೆಯ ಹಣಕಾಸಿನ ಗುರುತರ ಜವಾಬ್ದಾರಿ ಹೊತ್ತಿರುವ ಸಹೋದರ ಚಂದ್ರು ಆರಾಧ್ಯ ಅವರಿಗೆ, “ನೀವು ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದೀರಿ. ಪ್ರತಿ ಕ್ಷಣವೂ ನಿಮಗೆ ಮುಖ್ಯ. ಈ ಸಂದರ್ಭದಲ್ಲಿ ನಾಲ್ಕಾರು ಕುತೂಹಲದ ಪ್ರಶ್ನೆಗಳನ್ನು ಕೇಳಬಹುದೇ?” ಎಂದೆ.
“ಧಾರಾಳವಾಗಿ ಕೇಳಿ,” ಎಂದರು ಉತ್ಸಾಹದ ಚಿಲುಮೆಯಾದ ಚಂದ್ರು ಆರಾಧ್ಯರು.

ಪ್ರಶ್ನೆ: ವಿಶ್ವದಾದ್ಯಂತ ನೆಲೆಸಿರುವ ಸಾವಿರಾರು ಕನ್ನಡಿಗರನ್ನು ಆಹ್ವಾನಿಸುತ್ತಿರುವುದಾಗಿ ಕೇಳಿರುವೆ. ಅಷ್ಟೊಂದು ಜನರಿಗೆ ಊಟ, ಉಪಚಾರ, ವಸತಿ ಒದಗಿಸುವುದು, ಮತ್ತು ಇವೆಲ್ಲಕ್ಕೂ ಬೇಕಾಗುವ ಸ್ವಯಂಸೇವಕರನ್ನು ಒಗ್ಗೂಡಿಸುವುದು ಅಮೆರಿಕದಂತಹ ದೇಶದಲ್ಲಿ ಕಠಿಣವಲ್ಲವೇ?
ಚಂದ್ರು ಆರಾಧ್ಯ: 13ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ‘ಅಕ್ಕ’ ನಾಯಕತ್ವದಲ್ಲಿ ಫಿಲಡೆಲ್ಫಿಯಾ ಮತ್ತು ಸುತ್ತಮುತ್ತಲಿನ ಕನ್ನಡ ಸಮುದಾಯ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಇಲ್ಲಿರುವ ಪ್ರಾದೇಶಿಕ ಕನ್ನಡ ಸಂಘಟನೆಗಳು, ವಿವಿಧ ಸಮಿತಿಗಳು ಹಾಗೂ ಉತ್ತರ ಅಮೆರಿಕದ ನೂರಾರು ಸ್ವಯಂಸೇವಕರು ಕೈಜೋಡಿಸಿದ್ದಾರೆ.
ಮೂರು ದಿನಗಳಲ್ಲಿ ಸಾವಿರಾರು ಜನರಿಗೆ ದಿನಕ್ಕೆ ಹಲವು ಬಾರಿ ಊಟ ನೀಡುವುದು ಬಹುದೊಡ್ಡ ಕೆಲಸ. ಆಹಾರ, ಆತಿಥ್ಯ, ಮೂಲಸೌಕರ್ಯ, ಊಟ ವಿತರಿಸುವ ಕೌಂಟರ್‌ಗಳು, ಆಸನಸಾಮರ್ಥ್ಯ, ಜನಸಂದಣಿ ನಿರ್ವಹಣೆ, ವಿತರಣೆಯ ವೇಳಾಪಟ್ಟಿ ಸೇರಿದಂತೆ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಗಮನಿಸಿ ಆಯೋಜಿಸಲಾಗುತ್ತಿದೆ. ಇದಕ್ಕೆಲ್ಲ ಸ್ವಯಂಸೇವಕರ ಒಂದು ದೊಡ್ಡ ತಂಡ ಸಜ್ಜಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಿ ಕಾರ್ಯನಿರ್ವಹಿಸಲು ಸಿದ್ಧಗೊಳಿಸಲಾಗಿದೆ.
ಪ್ರಶ್ನೆ: ಇದು ‘ಅಕ್ಕ’ನ ರಜತ ಮಹೋತ್ಸವದ ಮಹತ್ವದ ವರ್ಷ. ಇಂತಹ ಸಂತೋಷದ ಗಳಿಗೆಗಳನ್ನು ಹೇಗೆ ಆಚರಿಸುತ್ತೀರಿ?
ಚಂದ್ರು ಆರಾಧ್ಯ: ಫಿಲಡೆಲ್ಫಿಯಾ ಒಂದು ಐತಿಹಾಸಿಕ ನಗರ. 1776ರಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಗೆ ಸಂಬಂಧಿಸಿದ ಐತಿಹಾಸಿಕ ಘಟನೆಗಳ ಪ್ರಮುಖ ಕೇಂದ್ರವಾಗಿದ್ದ ನಗರವಿದು. 2026ರಲ್ಲಿ ಅಮೆರಿಕ ತನ್ನ 250ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ. ಕಾಕತಾಳೀಯವೆಂಬಂತೆ ಇದೇ ವರ್ಷ ‘ಅಕ್ಕ’ ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಇಂತಹ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಅನಿವಾಸಿ ಕನ್ನಡಿಗರಾದ ನಾವು ಕನ್ನಡ ಸಂಗೀತ, ಕನ್ನಡ ಸಾಹಿತ್ಯ, ಕನ್ನಡ ರಂಗಭೂಮಿ, ಕನ್ನಡ ಸಿನಿಮಾ, ಕನ್ನಡ ಕಲಾವಿದರು ಹಾಗೂ ಸ್ಥಳೀಯ ಕಲಾವಿದರೆಲ್ಲರೂ ಸೇರಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ.
ಕರ್ನಾಟಕದ ಕನ್ನಡ ಸಂಘಟನೆಗಳು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಪಾರವಾಗಿ ಶ್ರಮಿಸಿವೆ. ಅನಿವಾಸಿ ಕನ್ನಡಿಗರಾದ ನಾವು ಈ ಸಂಸ್ಕೃತಿಯನ್ನು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಹಾಗೂ ಇಲ್ಲಿ ಜನಿಸಿದ ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆಯನ್ನೂ ಹೊತ್ತಿದ್ದೇವೆ.
ಇದರೊಂದಿಗೆ ವಿಜ್ಞಾನ, ತಂತ್ರಜ್ಞಾನ, ನಾಯಕತ್ವ ಹಾಗೂ ಹೊಸ ಆಲೋಚನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದೇವೆ.
ಪ್ರಶ್ನೆ: ಭಾರತದಲ್ಲಿ ಜನ್ಮತಳೆದು ಅಮೆರಿಕದ ನಿವಾಸಿಗಳಾದ ತಾವು, ತಾಯ್ನುಡಿಯನ್ನು ಮರೆಯದೆ ಅದಕ್ಕೆ ವಿಶ್ವದರ್ಜೆಯ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ತುತ್ಯರ್ಹ. ಹೊಸ ತಲೆಮಾರಿನ ಅನಿವಾಸಿ ಕನ್ನಡಿಗರಿಗೆ ಇವೆಲ್ಲದರ ಬಗ್ಗೆ ಆಸಕ್ತಿ ಕಡಿಮೆಯಾಗಿರಬಹುದು. ಅವರಿಗಾಗಿ ವಿಭಿನ್ನವಾದ ಕಾರ್ಯಕ್ರಮಗಳೇನಾದರೂ ಹಾಕಿಕೊಂಡಿದ್ದೀರಾ?
ಚಂದ್ರು ಆರಾಧ್ಯ: ಬಹಳ ಮುಖ್ಯವಾದ ಪ್ರಶ್ನೆ. ಆದರೆ ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ. ಅನಿವಾಸಿ ಭಾರತೀಯ ಯುವಪೀಳಿಗೆ ಭಾರತೀಯ ಸಂಸ್ಕೃತಿಯ ಪ್ರತೀಕದಂತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ. ಹತ್ತು ಸಾವಿರ ಮೈಲುಗಳಾಚೆ ಇದ್ದರೂ ಇವರು ಭಾರತೀಯ ಪರಂಪರೆಯನ್ನು ಗೌರವಿಸುತ್ತಾ, ಹೊಸ ಆವಿಷ್ಕಾರಗಳಿಗೂ ಹೊಂದಿಕೊಳ್ಳುತ್ತಿದ್ದಾರೆ.
‘ಅಕ್ಕ’ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಅವರಿಗಾಗಿ ‘HACK4Good – ಅಕ್ಕ ಹ್ಯಾಕಥಾನ್’ ಎಂಬ ನವೀನ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ ಮತ್ತು ಸಮುದಾಯದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪ್ರಯತ್ನಗಳು ಅಡಕವಾಗಿವೆ.
ಇನ್ನೊಂದು ‘ಅಕ್ಕ ಟೀಮ್ ಒಲಿಂಪಿಕ್ಸ್. ಇದರಲ್ಲಿ ನಾಯಕತ್ವ, ತಂಡವಾಗಿ ಕೆಲಸ ಮಾಡುವ ಕೌಶಲ್ಯ, ಸಂವಹನ, ಸವಾಲುಗಳನ್ನು ಮೆಟ್ಟಿ ನಿಂತು ಸಾಧಿಸುವ ಮನೋಭಾವ ಬೆಳೆಸುವಂತಹ ವಿಶೇಷ ಕಾರ್ಯಕ್ರಮಗಳಿವೆ.
ಈ ಬಾರಿ ನಾವು ಯುವಜನತೆಗಾಗಿಯೇ ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತಿದ್ದೇವೆ. ಅಲ್ಲಿ ಅವರ ಆಲೋಚನೆ ಮತ್ತು ಅಭಿರುಚಿಗಳಿಗೆ ತಕ್ಕಂತೆ ಹಲವು ಕಾರ್ಯಕ್ರಮಗಳು ಇರಲಿವೆ.
ಪ್ರಶ್ನೆ: ‘ಉಳ್ಳವರು ಶಿವಾಲಯ ಕಟ್ಟುವರು, ಬಡವನಾದ ನಾನೇನು ಮಾಡಲಯ್ಯ?’ ಎಂಬಂತೆ ‘ಅಕ್ಕ ಸಮ್ಮೇಳನ ಉಳ್ಳವರ ಸಮ್ಮೇಳನ’ ಎಂಬ ವಾದವೂ ಇದೆ. ಈ ವಾದದ ಬಗ್ಗೆ ತಮ್ಮ ಅಭಿಪ್ರಾಯವೇನು?
ಚಂದ್ರು ಆರಾಧ್ಯ: ಪೂಜ್ಯ ಬಸವಣ್ಣನವರ ಪೂರ್ಣ ವಚನವನ್ನು ನೀವು ಹೇಳಲಿಲ್ಲ. ಆ ವಚನದಲ್ಲಿರುವ ಕೊನೆಯ ನುಡಿಗಳನ್ನು ನಾವು ಪಾಲಿಸುತ್ತೇವೆ.
ಸಮಾಜದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವ ನಾಟಕ, ಸಿನಿಮಾ, ಜಾನಪದ ಮತ್ತು ತತ್ವಪದ ಕಲಾವಿದರನ್ನು ‘ಅಕ್ಕ’ ಆಹ್ವಾನಿಸುತ್ತದೆ. ಲಕ್ಷಾಂತರ ರೂಪಾಯಿಗಳ ವಿಮಾನಯಾನದ ವೆಚ್ಚವನ್ನು ನಾವೇ ವಹಿಸಿಕೊಂಡು ಅವರಿಗೆ ನಾಲ್ಕು ದಿನಗಳ ಆತಿಥ್ಯವನ್ನು ನೀಡುತ್ತೇವೆ. ಇಲ್ಲಿಗೆ ಬರುವ ಕಲಾವಿದರೆಲ್ಲರೂ ಉಳ್ಳವರೇ? ಬೆಂಗಳೂರನ್ನೇ ನೋಡದ ಕೆಲ ಕಲಾವಿದರನ್ನು ‘ಅಕ್ಕ’ ಅಮೆರಿಕಕ್ಕೆ ಕರೆಸಿದ ಅನೇಕ ಉದಾಹರಣೆಗಳಿವೆ.ಆದರೆ ಕೆಲವು ಚಿಂತಕರು, ಗಣ್ಯರು, ಶ್ರೀಮಂತ ಕಲಾವಿದರು ಹಾಗೂ ರಾಜಕೀಯ ನಾಯಕರು ಸ್ವಂತ ಖರ್ಚಿನಲ್ಲಿ ಬಂದು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಅವರಿಗೆ ನಾವು ಆತಿಥ್ಯ ಮಾತ್ರ ನೀಡುತ್ತೇವೆ.
ಅಲ್ಲದೆ, ‘ಪಂಕ್ತಿಯಲ್ಲಿ ಪರಪಂಕ್ತಿ’ ಎಂಬ ಭೇದಭಾವವನ್ನು ನಾವು ಎಂದೂ ಮಾಡಿಲ್ಲ. ಬರುವ ಎಲ್ಲ ಗಣ್ಯರನ್ನು, ಕಲಾವಿದರನ್ನು, ಚಿಂತಕರನ್ನು ಸಮಾನ ದೃಷ್ಟಿಯಿಂದ ಕಂಡು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡುತ್ತೇವೆ. ಮೇಲಾಗಿ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತೇವೆ.
ಪ್ರಶ್ನೆ: ಸಾಮಾನ್ಯ ಕನ್ನಡಿಗರಿಗೆ ‘ಅಕ್ಕ’ ಸಂಸ್ಥೆಯ ಉಗಮ ಮತ್ತು ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತಿಳಿಸಿ. ಇದೊಂದು ಅನಿವಾಸಿ ಭಾರತೀಯ ಶ್ರೀಮಂತರ ಒಕ್ಕೂಟವೇ?
ಚಂದ್ರು ಆರಾಧ್ಯ: ಮೊದಲನೆಯ ಪ್ರಶ್ನೆಗೆ ಉತ್ತರಿಸುವುದಾದರೆ, AKKA — Association of Kannada Kootas of America — ಅನಿವಾಸಿ ಕನ್ನಡಿಗರಿಗಾಗಿ ಕಟ್ಟಲ್ಪಟ್ಟ ಸಂಸ್ಥೆ.
1998ರ ಫೆಬ್ರವರಿ 13ರಿಂದ 15ರವರೆಗೆ ಅರಿಜೋನಾದ ಫೀನಿಕ್ಸ್‌ನಲ್ಲಿ ನಡೆದ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಉತ್ತರ ಅಮೆರಿಕದ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವ ಕೇಂದ್ರ ಸಂಸ್ಥೆಯ ಅಗತ್ಯದ ಬಗ್ಗೆ ಚಿಂತನೆ ಮೂಡಿತು. ಅದೇ ಸಂದರ್ಭದಲ್ಲಿ ‘ಅಕ್ಕ’ ಸಂಸ್ಥೆಯನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರ ಪ್ರಾರಂಭಿಕ ಉದ್ದೇಶ ಉತ್ತರ ಅಮೆರಿಕದ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವುದು, ಅವುಗಳ ನಡುವೆ ಪರಸ್ಪರ ಸಹಕಾರ ಬೆಳೆಸುವುದು, ತಾಯಿಭಾಷೆಯನ್ನು ಬೆಳೆಸುವುದು ಹಾಗೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ, ಬೆಳೆಸಿ, ವಿಶ್ವದಾದ್ಯಂತ ಪಸರಿಸುವಂತೆ ಮಾಡುವುದು.
ಇದರ ಅಂಗವಾಗಿ 2000ರಲ್ಲಿ ಹ್ಯೂಸ್ಟನ್ ನಗರದಲ್ಲಿ ಮೊದಲ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ ನಡೆಯಿತು.
‘ಅಕ್ಕ’ನ ಮೂಲ ಮಂತ್ರ ‘ಕನ್ನಡ’ ಮತ್ತು ‘ನಾವು ಕನ್ನಡಿಗರು’. ಇದೇ ಅಕ್ಕನ ಶಕ್ತಿ. ಇಂದು ‘ಅಕ್ಕ’ ಅಮೆರಿಕ ಮತ್ತು ಕೆನಡಾದಲ್ಲಿರುವ 40ಕ್ಕೂ ಹೆಚ್ಚು ಕನ್ನಡ ಕೂಟಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತು ಉತ್ತರ ಅಮೆರಿಕದ ಎರಡು ಲಕ್ಷಕ್ಕೂ ಅಧಿಕ ಕನ್ನಡಿಗರನ್ನು ತಲುಪಿದೆ.
ಕೆಲವರು ‘ಅಕ್ಕ’ ಎಂದರೆ ವಿಶ್ವ ಕನ್ನಡ ಸಮ್ಮೇಳನ ಮಾತ್ರ ಎಂದು ಭಾವಿಸುತ್ತಾರೆ. ಸಮ್ಮೇಳನವು ನಮ್ಮ ಅತ್ಯಂತ ದೊಡ್ಡ ಮತ್ತು ಎಲ್ಲರಿಗೂ ಕಾಣುವ ಕಾರ್ಯಕ್ರಮ. ಆದರೆ ‘ಅಕ್ಕ’ ಎಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಮೂರು ದಿನಗಳ ಸಂಭ್ರಮದ ಜಾತ್ರೆ ಮಾತ್ರವಲ್ಲ.
ಉತ್ತರ ಅಮೆರಿಕದ ಕನ್ನಡಿಗರು ಮತ್ತು ಕನ್ನಡ ಕೂಟಗಳನ್ನು ಸಂಪರ್ಕಿಸುವುದು, ಒಗ್ಗೂಡಿಸುವುದು, ಪರಸ್ಪರ ಸಹಕಾರ ಬೆಳೆಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು — ಇವೇ ಅಕ್ಕನ ಮೂಲ ಧ್ಯೇಯಗಳು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಶಿಕ್ಷಣ, ಯುವಜನರ ಅಭಿವೃದ್ಧಿ, ವೃತ್ತಿಪರ ಮತ್ತು ಉದ್ಯಮ ಕ್ಷೇತ್ರದ ಸಂಪರ್ಕ, ಸಾಂಸ್ಕೃತಿಕ ವಿನಿಮಯ, ಸಾಹಿತ್ಯ ಮತ್ತು ಕಲೆ ಹಾಗೂ ವಿವಿಧ ಕನ್ನಡ ಸಂಘಟನೆಗಳ ನಡುವಿನ ಸಹಕಾರ — ಇವೆಲ್ಲವೂ ಇದರ ಭಾಗ.
ಯುವಜನರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಯಲು ಅವಕಾಶ ಕಲ್ಪಿಸುವುದು, ಕನ್ನಡ ಪುಸ್ತಕಗಳ ಲಭ್ಯತೆ ಹೆಚ್ಚಿಸುವುದು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕ ಬೆಳೆಸುವುದು ಹಾಗೂ ಗ್ರಾಮೀಣ ಸಮುದಾಯಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಕೂಡ ‘ಅಕ್ಕ’ನ ಉದ್ದೇಶಗಳಲ್ಲಿ ಸೇರಿವೆ.
‘ಅಕ್ಕ’ ಅಮೆರಿಕವು ಕರ್ನಾಟಕದಲ್ಲಿ ಅನೇಕ ಮಾನವೀಯ ಹಾಗೂ ಸೇವಾ ಕಾರ್ಯಗಳಿಗೆ ಬೆಂಬಲ ನೀಡಿದೆ.
ನಾವು ನಂಬಿರುವುದು ಮೂರು ಸೇತುವೆಗಳಲ್ಲಿ:
ಕನ್ನಡಿಗರಿಂದ ಕನ್ನಡಿಗರಿಗೆ,
ಉತ್ತರ ಅಮೆರಿಕದಿಂದ ಕರ್ನಾಟಕಕ್ಕೆ,
ಇಂದಿನ ಪೀಳಿಗೆಯಿಂದ ಮುಂದಿನ ಪೀಳಿಗೆಗೆ.
ಈ ಮೂರು ಸೇತುವೆಗಳ ಮೇಲೆ ನಡೆಯಲು ನಾವು ಇಚ್ಛಿಸುತ್ತೇವೆ.
ನಿಮ್ಮ ಎರಡನೆಯ ಪ್ರಶ್ನೆಗೆ ಉತ್ತರಿಸುವುದಾದರೆ, ಅಕ್ಕನಿಗೆ ಕನ್ನಡಿಗರನ್ನು ಒಗ್ಗೂಡಿಸುವ ಗುರಿಯೇ ಮುಖ್ಯ. ಅಕ್ಕನಿಗೆ ಶ್ರೀಮಂತ-ಬಡವ ಎಂಬ ತಾರತಮ್ಯವಿಲ್ಲ. ಸಮಾಜದ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳನ್ನು ಒಂದೇ ವೇದಿಕೆಯಲ್ಲಿ ತಂದು ‘ಕನ್ನಡವನ್ನು ಜಪಿಸುವ’ ವೇದಿಕೆ ಇದಾಗಿದೆ.
ಸಮಾಜದ ಮುಖ್ಯ ಸ್ತರದಲ್ಲಿರುವ ವ್ಯಕ್ತಿಯನ್ನು ಕೇವಲ ಅವನ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೋಡಲಾಗದು. ಧಾರ್ಮಿಕ ಕ್ಷೇತ್ರದಲ್ಲಿರುವ ಪೂಜ್ಯರನ್ನು ಅವರ ಮಠದ ವ್ಯಾಪ್ತಿ ಮತ್ತು ಆದಾಯದ ಮೇಲೆ ನಿರ್ಣಯಿಸಲಾಗದು. ಒಬ್ಬ ಕಲಾವಿದನನ್ನು ಬಡವ-ಶ್ರೀಮಂತ ಎಂದು ಎಣಿಸದೆ, ಅವನ ಕಲೆಯ ಸಾಮರ್ಥ್ಯವನ್ನು ಪರಿಗಣಿಸಿ ‘ಕಲಾವಿದ’ ಎಂದು ಗೌರವಿಸಲಾಗುತ್ತದೆ.
ನಮ್ಮ ಇತಿಮಿತಿಯಲ್ಲಿ ಈ ಮೂರು ಸ್ತರಗಳ ವ್ಯಕ್ತಿಗಳಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಕೆಲವರನ್ನು ಮಾತ್ರ ಆಹ್ವಾನಿಸುತ್ತೇವೆ. ಇನ್ನು ಕೆಲವು ಶ್ರೀಮಂತ ಭಾರತೀಯರು ಅಮೆರಿಕ ಪ್ರವಾಸದೊಂದಿಗೆ ಅಮೆರಿಕದ ಉದ್ದಗಲದಲ್ಲಿರುವ ಪ್ರೀತಿಪಾತ್ರರೆಲ್ಲರನ್ನೂ ಒಂದೇ ಸ್ಥಳದಲ್ಲಿ ಭೇಟಿಯಾಗಿ, ಎಲ್ಲರೊಂದಿಗೆ ಒಗ್ಗೂಡಿ ಸಂತೋಷಪಡಲು ಬರುತ್ತಾರೆ.
ಕನ್ನಡದ ನೆಪದಲ್ಲಿ ಎಲ್ಲ ಕುಟುಂಬಗಳೂ ಒಂದೆಡೆ ಸೇರುವ ಸ್ಥಳವೇ ‘ಅಕ್ಕ’ ಎಂಬ ವೇದಿಕೆ.
ಪ್ರಶ್ನೆ: ಹದಿಮೂರನೆಯ ಅಕ್ಕ ಸಮ್ಮೇಳನದ ಆಯೋಜಕರು ಯಾರು? ನಿಮ್ಮ ಸಂಸ್ಥೆಯ ಪದಾಧಿಕಾರಿಗಳ ಪರಿಚಯ ಮಾಡಿಕೊಡಿ.
ಚಂದ್ರು ಆರಾಧ್ಯ: “ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವದೂ ಯಃಕಶ್ಚಿತವಲ್ಲ” ಎಂಬ ಕುವೆಂಪು ಅವರ ನುಡಿ ಅಕ್ಕನ ಧ್ಯೇಯವಾಕ್ಯ.
ಹದಿಮೂರನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಅಕ್ಕನ ನಾಯಕತ್ವದಲ್ಲಿ ನಡೆಯುತ್ತಿದೆ. ಇದನ್ನು ಫಿಲಡೆಲ್ಫಿಯಾ ಮತ್ತು ಸುತ್ತಮುತ್ತಲಿನ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಉದಾಹರಣೆಗೆ, ನವೋದಯ ಫಿಲಡೆಲ್ಫಿಯಾ, ಹೊಯ್ಸಳ ಡೆಲವೇರ್, ತ್ರಿವೇಣಿ ಹಾಗೂ ನ್ಯೂಜೆರ್ಸಿಯ ಬೃಂದಾವನ ಸೇರಿದಂತೆ ಅನೇಕ ಸಂಘಟನೆಗಳು ಕೈಜೋಡಿಸಿವೆ.
ಸಾವಿರಾರು ಜನ ಸೇರುವ ಸಮ್ಮೇಳನವನ್ನು ಕೇವಲ ಒಂದು ಕನ್ನಡ ಕೂಟ ಅಥವಾ ಕೆಲ ವ್ಯಕ್ತಿಗಳ ಪರಿಶ್ರಮದಿಂದ ನಡೆಸಲು ಸಾಧ್ಯವಿಲ್ಲ. ಈಗಾಗಲೇ ಹೇಳಿದಂತೆ, ಇದಕ್ಕೆ ‘ಅಕ್ಕ’ನ ನಾಯಕತ್ವವಿದೆ. ಆದರೆ ಪ್ರಾದೇಶಿಕ ಕನ್ನಡ ಸಂಘಟನೆಗಳಲ್ಲದೆ ವಿವಿಧ ಸಮಿತಿಗಳು ಮತ್ತು ಉತ್ತರ ಅಮೆರಿಕದ ನೂರಾರು ಸ್ವಯಂಸೇವಕರ ಪರಿಶ್ರಮವೂ ಇದೆ.
ಯಾವುದೇ ಸಂಘಟನೆಗೆ ನಾಯಕತ್ವ ಬೇಕೇಬೇಕು. ಪ್ರಸ್ತುತ ‘ಅಕ್ಕ’ನ ಪ್ರಮುಖ ಜವಾಬ್ದಾರಿಗಳಲ್ಲಿ ಡಾ. ಅಮರನಾಥ ಗೌಡ — ಚೇರ್ಮನ್, ಮಧು ರಂಗಯ್ಯ — ಅಧ್ಯಕ್ಷರು, ಡಾ. ನವೀನ್ ಕೃಷ್ಣ — ಕಾರ್ಯದರ್ಶಿ ಹಾಗೂ ನಾನು ಚಂದ್ರು ಆರಾಧ್ಯ — ಖಜಾಂಚಿ, ನಮ್ಮೊಂದಿಗೆ ದೊಡ್ಡ ಬಳಗವಿದೆ. ಬೋರ್ಡ್ ಆಫ್ ಟ್ರಸ್ಟೀಸ್, ಬೋರ್ಡ್ ಆಫ್ ಡೈರೆಕ್ಟರ್ಸ್, ವಿವಿಧ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೂರಾರು ಸ್ವಯಂಸೇವಕರು ನಮ್ಮೊಂದಿಗೆ ಇದ್ದಾರೆ.
ನಮ್ಮಲ್ಲಿ ಹುದ್ದೆಗಿಂತ ಸೇವಾ ಮನೋಭಾವ ಮುಖ್ಯ. ನಮ್ಮೆಲ್ಲರಿಗೂ ಒಂದೇ ಹುದ್ದೆ — ‘ಕನ್ನಡ ಮತ್ತು ಅಕ್ಕ ಸ್ವಯಂಸೇವಕ’ — ಎಂಬುದೇ ಅತಿ ಗೌರವದ ಹುದ್ದೆ.
ಪ್ರಶ್ನೆ: ಸಾವಿರಾರು ಜನರನ್ನು ಒಂದೇಡೆ ಸೇರಿಸುವುದು, ದೇಶ-ವಿದೇಶಗಳಿಂದ ಬರುವ ಅತಿಥಿಗಳು ಅಥವಾ ಸದಸ್ಯರಿಗೆ ವಸತಿ, ಊಟ, ಉಪಚಾರ ಒದಗಿಸುವುದು ಅಮೆರಿಕದಂತಹ ದೇಶದಲ್ಲಿ ಒಂದು ಸವಾಲಿನ ಕೆಲಸ. ಈ ದುಬಾರಿ ದೇಶದಲ್ಲಿ ಇದಕ್ಕೆ ಸಂಪನ್ಮೂಲಗಳನ್ನು ಒದಗಿಸುವ ಬಹುದೊಡ್ಡ ಜವಾಬ್ದಾರಿ ತಮ್ಮದಾಗಿದೆ. ಅದನ್ನು ಹೇಗೆ ನಿಭಾಯಿಸುತ್ತೀರಿ?
ಚಂದ್ರು ಆರಾಧ್ಯ: 2016ರ ಅಕ್ಕ ಸಮ್ಮೇಳನದ ಸಮಯದಲ್ಲಿ ನಾನು ಈ ಕರ್ತವ್ಯವನ್ನು ನಿರ್ವಹಿಸಿದ್ದೆ. ಹತ್ತು ವರ್ಷಗಳ ತರುವಾಯ, ಮೇಲಾಗಿ ರಜತ ವರ್ಷದ ಅಕ್ಕ ಸಮ್ಮೇಳನದ ಸಮಯದಲ್ಲಿ ನನಗೆ ಮತ್ತೆ ಈ ಜವಾಬ್ದಾರಿ ದೊರೆತಿರುವುದು ನನ್ನ ಸೌಭಾಗ್ಯವೇ ಹೌದು. ಇದು ಸಂಘಟಕರು ನನ್ನ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವೆಂದು ಭಾವಿಸುತ್ತೇನೆ.
ಖಜಾಂಚಿಯ ಕೆಲಸ ಕೇವಲ ಲೆಕ್ಕಪತ್ರ ಇಡುವ ಒಬ್ಬ ಅಧಿಕಾರಿಯ ಕೆಲಸ ಮಾತ್ರವಲ್ಲ. ಈ ಸಮ್ಮೇಳನಕ್ಕೆ ದೇಣಿಗೆಯಾಗಿ ಬರುವ ಒಬ್ಬೊಬ್ಬ ಚಂದಾದಾರನ ಒಂದೊಂದು ಡಾಲರ್ ಕೂಡ ಸದ್ವಿನಿಯೋಗವಾದಾಗ ಮಾತ್ರ ಅವರು ಕೊಟ್ಟ ಕಾಣಿಕೆ ಸತ್ಪಾತ್ರಕ್ಕೆ ಸಲ್ಲಿದಂತೆ.
ಖಜಾಂಚಿಯ ಕೆಲಸ ಬಹಳ ನಿಷ್ಠುರತೆಯನ್ನು ಕೇಳುತ್ತದೆ. ಅನೇಕರ ಅವಕೃಪೆಗೂ ತುತ್ತಾಗಬೇಕಾಗುತ್ತದೆ. ಆದರೆ ‘ಸಂಘಟನೆಯ ಕೆಲಸ ದೇವರ ಕೆಲಸ’ ಎಂದು ಭಾವಿಸುವ ನಾನು ಶರಣರ ಈ ವಚನದಲ್ಲಿ ನಂಬಿಕೆ ಇಟ್ಟವನು:
“ಮಾಡುವ ಭಕ್ತಂಗೆಯೂ
ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ.
ಮಾಡಿ ಭೋ, ಮಾಡಿ ಭೋ.
ಎನಗೆ ಲೇಸಾಯಿತ್ತು, ಹೋಯಿತ್ತೆಂಬ ಚಿಂತೆ ಬೇಡ,
ಇದಿತ್ತೆಂಬ ಸಂತೋಷ ಬೇಡ,
ಸಕಳೇಶ್ವರ ದೇವನವರನರಿದು ಸಲುಹುವನಾಗಿ.”
ಕನ್ನಡಿಗನ ಒಂದು ಡಾಲರ್ ಕೂಡ ನನಗೆ ಸಾವಿರ ಡಾಲರ್‌ಗಳಿಗೆ ಸಮ. ಅದು ಪೋಲಾಗದಂತೆ, ಅನಾವಶ್ಯಕವಾಗಿ ಖರ್ಚಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನನ್ನದು ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿದ್ದೇನೆ.
ನಮ್ಮದು ಸಾಮಾಜಿಕ ಜವಾಬ್ದಾರಿಯುಳ್ಳ, ಲಾಭ-ನಷ್ಟದ ಉದ್ದೇಶದಿಂದ ಹೊರತಾದ ಸಾರ್ವಜನಿಕ ಸಂಸ್ಥೆ. ಮೂಲತಃ ಸದಸ್ಯರ ಚಂದಾ ಹಣ ಮತ್ತು ಡೆಲಿಗೇಶನ್ ನೋಂದಣಿ ಶುಲ್ಕದಿಂದ ಬರುವ ಹಣವೇ ನಮ್ಮ ಮೂಲ ಆದಾಯ. ಕೆಲವು ಸಹೃದಯಿಗಳು ಕೈ ಎತ್ತಿ ಕೈತುಂಬ ನೀಡುತ್ತಾರೆ. ಕೆಲವರು ಕಾರ್ಯಕ್ರಮಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ. ಕೆಲವರು ಪ್ರೇಕ್ಷಕರಾಗಿ ಬರುತ್ತಾರೆ. ಎಲ್ಲರಿಂದಲೂ ನಿರೀಕ್ಷೆ ಮಾಡಲಾಗುವುದಿಲ್ಲ. ಬರುವವರೆಲ್ಲರೂ ನಮ್ಮವರೇ ಅಲ್ಲವೇ!
ನಾವು ಹೆಚ್ಚಿನ ಹಣವನ್ನು ಕಾರ್ಯಕ್ರಮ ನಿರ್ವಹಣೆ, ಕಲಾವಿದರ ಮೂಲಸೌಕರ್ಯ, ವಸತಿ ಮತ್ತು ಊಟಕ್ಕಾಗಿ ವಿನಿಯೋಗಿಸುತ್ತೇವೆ. ಇದರೊಂದಿಗೆ ಸಾರಿಗೆ, ವಿಮೆ, ಭದ್ರತೆ, ಮತ್ತು ಸಮ್ಮೇಳನದ ಇತರ ಖರ್ಚು-ವೆಚ್ಚಗಳೂ ಇವೆ. ಅಮೆರಿಕದಂತಹ ದೇಶದಲ್ಲಿ ಇವೆಲ್ಲವೂ ಬಹಳ ದುಬಾರಿ. ಇದೆಲ್ಲವೂ ಬಹುದೊಡ್ಡ ತಲೆಬಿಸಿಯ ಹೊಣೆಗಾರಿಕೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ ಕ್ಕೆ ಬಂದವರೆಲ್ಲರಿಗೂ, “ನಾವು ನಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಬಂದಿದ್ದೇವೆ” ಎಂಬ ಆತ್ಮೀಯ ಭಾವನೆ ಬರಬೇಕು.
ಕನ್ನಡಿಗರು ಅತಿಥಿ ಸತ್ಕಾರಪ್ರಿಯರು. ಅದು ನಮ್ಮ ಸಂಸ್ಕೃತಿಯ ಒಂದು ಭಾಗ. ಬರುವ ಎಲ್ಲರಿಗೂ ಮತ್ತೊಮ್ಮೆ ಆತ್ಮೀಯ ಸ್ವಾಗತ ಕೋರುತ್ತೇನೆ.


ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ



