ಪಂಚಮಸಾಲಿ ಇತಿಹಾಸ- ಭಾಗ 6 | “ಸಮಕಾಲೀನ ಇತಿಹಾಸ ಬರೆಯುವುದೆಂದರೆ ಜೇನಿನ ಗೂಡಿಗೆ ಕಲ್ಲೆಸೆದಂತೆ…”

Date:

ಅತ್ಯಂತ ವ್ಯವಸ್ಥಿತವಾಗಿ ಸಂಘಟನೆ ಮಾಡಿ, ಯಲಬುರ್ಗಾ ಸಮಾವೇಶವನ್ನು ಯಶಸ್ವಿಗೊಳಿಸಿದ ಸಂಘಟನಕಾರ ಶ್ರೀಪಾದಪ್ಪ ಅಧಿಕಾರಿಯವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಲು ವಿರೋಧಿಗಳು ಷಡ್ಯಂತ್ರ ರೂಪಿಸಿದರು. ತೆರೆಮರೆಯಲ್ಲಿ ಪಂಚಮಸಾಲಿಯ ಕೆಲವು ಅತೃಪ್ತರನ್ನು ಪ್ರಚೋದಿಸಿದರು. ಅನ್ಯ ಸಮಾಜದ ವಿರೋಧಿಗಳ ಅಂತರಂಗವನ್ನು ಅರಿಯದ ಮುಗ್ಧ ಪಂಚಮಸಾಲಿಗರು ಈ ಷಡ್ಯಂತ್ರಕ್ಕೆ ಬಲಿಯಾದರು.

- Advertisement -


“ಈಗಿರುವ ಸ್ನೇಹಿತರಿಂದ ದೂರವಾಗಿ, ವಿರೋಧಿಗಳನ್ನು ಸೃಷ್ಟಿಸಿಕೊಳ್ಳುವುದಾದರೆ ಮಾತ್ರ ನೀವು ಸಮಕಾಲೀನ ಇತಿಹಾಸ ಬರೆಯಬಹುದು” ಎಂದರು ಒಬ್ಬ ಸ್ನೇಹಿತರು. “ಸಮಕಾಲೀನ ಇತಿಹಾಸ ಬರೆಯುವುದೆಂದರೆ ಜೇನುಗೂಡಿಗೆ ಕಲ್ಲೆಸೆದಂತೆ” ಎಂಬ ಇನ್ನೊಬ್ಬ ಸ್ನೇಹಿತನ ನುಡಿಗಳು ನನ್ನನ್ನು ಅತೀಂದ್ರಿಯಗೊಳಿಸಿದವು. ‘ವರ್ತಮಾನದ ಸಂಗತಿಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸದಿದ್ದಲ್ಲಿ ಅದು ಇತಿಹಾಸಕ್ಕೆ ಬಗೆಯುವ ಅಪಚಾರವಲ್ಲವೇ?’ ಎಂದು ನನ್ನ ಒಳಮನಸ್ಸು ಕೇಳಿತ್ತು. ಇದಕ್ಕೆ ಪೂರಕವಾಗಿ ಅನೇಕ ಹಿರಿ-ಕಿರಿಯ ಪಂಚಮಸಾಲಿ ಬಾಂಧವರು, “ನಮ್ಮ ಸಮಾಜದ ಇತಿಹಾಸ ನಮಗೆ ಬೇಕೇಬೇಕು. ನೀವು ಅದಕ್ಕೆ ನ್ಯಾಯ ಒದಗಿಸಬಲ್ಲಿರಿ, ನೀವು ಅದಕ್ಕೆ ಅಕ್ಷರ ರೂಪ ನೀಡಬೇಕು” ಎಂದು ಒತ್ತಾಯಿಸಿದರು. ನಿಮ್ಮೆಲ್ಲರ ಒತ್ತಾಸೆಯ ಮೇರೆಗೆ ಈ ಬರವಣಿಗೆಯನ್ನು ಮುಂದುವರಿಸುತ್ತಿದ್ದೇನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಅಂತ್ಯವಾದ ಯಲಬುರ್ಗಾ ಸಮಾವೇಶ; ಪ್ರಾರಂಭವಾದ ಒಳಪಂಗಡಗಳ ಅಸೂಯೆ

‘ನಭೂತೋ ನಭವಿಷ್ಯತಿ’ ಎಂಬಂತಿತ್ತು ಪಂಚಮಸಾಲಿ ಸಮಾಜದ ಪ್ರಪ್ರಥಮ ಯಲಬುರ್ಗಾ ಸಮಾವೇಶ. ಅದು ಮುಂದಿನ ದಿನಗಳಲ್ಲಿ ರಾಜಕೀಯ ಸುನಾಮಿಯನ್ನೇ ಸೃಷ್ಟಿಸಲಿದೆ ಎಂಬ ಅರಿವು ಅಂದೇ ಆಗಿತ್ತು. ಪಂಚಮಸಾಲಿ ಸಮಾಜ ಜಾಗೃತವಾದರೆ ಇತರ ಲಿಂಗಾಯತ ಉಪಪಂಗಡಗಳ ರಾಜಕೀಯ ನಾಯಕರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಕಠಿಣವಾಗಬಹುದೆಂಬ ಲೆಕ್ಕಾಚಾರ ಶುರುವಾಯಿತು. ಯಲಬುರ್ಗಾದ ಯಶಸ್ಸು ಅವರಿಗೆ ಸಹ್ಯವಾಗಿರಲಿಲ್ಲ. “ಅಖಂಡ ಲಿಂಗಾಯತ ಸಮಾಜ ಒಡೆದು ಹೋಗುತ್ತದೆ” ಎಂದು ಕೆಲವು ರಾಜಕಾರಣಿಗಳು ಹುಯಿಲೆಬ್ಬಿಸಿದರು. ಆದರೆ ಸತ್ಯ ಬೇರೆಯೇ ಇತ್ತು. ಇಂಥ ಹೇಳಿಕೆ ನೀಡಿದ ನಾಯಕರೇ ತಮ್ಮ ತಮ್ಮ ಸಮಾಜದ ಸಂಘಗಳನ್ನು ಸ್ಥಾಪಿಸಿ ನೊಂದಾಯಿಸಿಕೊಂಡಿದ್ದರು.

WhatsApp Image 2026 06 10 at 11.26.45 AM
ಪಿ ಸಿ ಸಿದ್ದನಗೌಡ

“ಹೀಗೆ ಹೇಳುವವರು ಈಗಾಗಲೇ ತಾವು ತೆರೆದಿರುವ ಅಂಗಡಿಗಳ ಬಾಗಿಲುಗಳನ್ನು ಮುಚ್ಚಲಿ, ಅವರು ಮುಚ್ಚಿದ ಅರ್ಧಗಂಟೆಯಲ್ಲಿ ನಾವೂ ನಮ್ಮ ಬಾಗಿಲು ಮುಚ್ಚುತ್ತೇವೆ” ಎಂದು ಗುಡುಗಿದ್ದರು ಕಲಘಟಗಿಯ ಶಾಸಕರಾಗಿದ್ದ ಪಿ. ಸಿ. ಸಿದ್ದನಗೌಡರು. ಸಿದ್ದನಗೌಡರು ಸಂಜ್ಞೆಯ ಮೂಲಕ ಬಣಜಿಗ ಸಮಾಜಕ್ಕೆ “ಬುಷ್” ಎಂದೂ, ಪಂಚಮಸಾಲಿ ಸಮಾಜಕ್ಕೆ “ಫಿಲಿಪ್ಸ” ಎಂದು ಕೋಡ್ ವರ್ಡ್ ಬಳಸಲು ಆರಂಭಿಸಿದರು.

ಮರೆತು ಹೋದ ಲಿಂಗಾಯತ ಸಿದ್ಧಾಂತ

ಬಸವಣ್ಣನವರು ಪ್ರತಿಪಾದಿಸಿದ ತತ್ವಗಳಿಂದ ಪಂಚಮಸಾಲಿ ಸಮಾಜ ದೂರವಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಲಿಂಗಾಯತ ಧರ್ಮ ಸಿದ್ಧಾಂತಗಳಿಂದ ಸಮಾಜವನ್ನು ದೂರವಿಡಲು ಶ್ರಮಪಟ್ಟಿದ್ದವು. ಲಿಂಗಾಯತ ಸಮಾಜದ ಉಪಪಂಗಡಗಳನ್ನು ಬೇರೆ ಬೇರೆ ಜಾತಿಗಳೆಂದು ಗುರುತಿಸಿ, ಅವರೆಲ್ಲರ ಮಧ್ಯೆ ಒಡೆಯಲಾಗದ ಗೋಡೆಯನ್ನು ಹದಿನೈದನೇ ಶತಮಾನದಿಂದಲೇ ಕಟ್ಟಲಾರಂಭಿಸಿದ್ದರು. ಲಿಂಗಾಯತ ಸಿದ್ಧಾಂತಗಳನ್ನು ಮರೆಮಾಚುವ ಅನೇಕ ಹೊಸ ಆಚರಣೆಗಳನ್ನು ಶತಮಾನಗಳ ಹಿಂದೆಯೇ ಜಾರಿಗೆ ತಂದಿದ್ದರು. ಉಪಪಂಗಡಗಳ ನಡುವೆ ವೈವಾಹಿಕ ಸಂಬಂಧಗಳನ್ನು ಕಡಿದು ಹಾಕಿದ್ದರು. ಅಷ್ಟೇ ಏಕೆ, ಉಪಪಂಗಡಗಳ ನಡುವೆ ಸಹಭೋಜನವೂ ನಿಷಿದ್ಧವಾಗಿತ್ತು. ಇದನ್ನು ಕಂಡು ಆಲಮೇಲದ ಶಿವಲಿಂಗರಾವ್ ದೇಶಮುಖರು ಮರುಗಿದ್ದರು. “ಆಗ (೧೯೧೧) ಲಿಂಗಾಯತ ಸಮಾಜದಲ್ಲಿಯೇ ಒಳಪಂಗಡಗಳ ಮಧ್ಯೆ ಊಟ ಮಾಡುವುದು ನಿಷಿದ್ಧವಾಗಿತ್ತು. ಅದು ಬಹುಕಾಲದಿಂದ ಬಂದ ರೂಢಿಯಾಗಿತ್ತು. ನಾನೊಮ್ಮೆ ಕೊಲ್ಹಾರದ ಗುರುಸಿದ್ದಪ್ಪ ದೇಸಾಯಿಯವರ (ಗಾಣಿಗರು) ಮನೆಯಲ್ಲಿ ಆತಿಥ್ಯ ಸ್ವೀಕರಿಸಬೇಕಿತ್ತು. ನಮ್ಮ ಊಟವನ್ನು ಮಠದಲ್ಲಿ ವ್ಯವಸ್ಥೆ ಮಾಡಿರುವುದಾಗಿ ದೇಸಾಯಿಯವರು ತಿಳಿಸಿದರು. ಆದರೆ ನಾನು ಈ ಪದ್ಧತಿಗೆ ತಿಲಾಂಜಲಿ ನೀಡಬೇಕೆಂಬ ನಿರ್ಧಾರ ಮಾಡಿದ್ದೆ. ನಾನು ಅವರಿಗೆ ‘ನಾನು ನಿಮ್ಮ ಮನೆಯಲ್ಲಿ, ನಿಮ್ಮ ಜೊತೆಯಲ್ಲೇ ಊಟ ಮಾಡುತ್ತೇನೆ’ ಎಂದೆ. ಇದು ಅವರನ್ನು ಆಶ್ಚರ್ಯಚಕಿತಗೊಳಿಸಿತು. ಈ ಪದ್ಧತಿಯನ್ನು ನಾವು ಸಡಿಲಗೊಳಿಸಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು” ಎಂದು ದೇಶಮುಖರು ಬರೆಯುತ್ತಾರೆ.

ಬಸವಣ್ಣನವರ ‘ಕಳಬೇಡ, ಕೊಲಬೇಡ’ ಎಂಬ ಆಶಯಗಳಿಗೆ ವಿರುದ್ಧವಾದ ಪ್ರಾಣಿವಧೆ ಲಿಂಗಾಯತ ಆಚಾರವಾಗಿತ್ತು. ಇದನ್ನು ದೇಶಮುಖರು ತಮ್ಮ ಆತ್ಮಕಥನದಲ್ಲಿ ಹೀಗೆ ವಿವರಿಸಿದ್ದಾರೆ: “ಆಲಮೇಲದಲ್ಲಿ ಪ್ರಪ್ರಥಮವಾಗಿ ದಸರಾ ಆಚರಣೆಯ ಸಂದರ್ಭದಲ್ಲಿ ಅತ್ಯಂತ ಭೀಭತ್ಸ ದೃಶ್ಯವೊಂದನ್ನು ಕಂಡೆ. ನನ್ನ ಕುದುರೆ ವಾಡೆ ಪ್ರವೇಶ ಮಾಡುವ ಮೊದಲು ಮೆರವಣಿಗೆಯಲ್ಲಿ ತಂದ ಕುರಿಮರಿಯೊಂದನ್ನು ಕುದುರೆಯ ಎದುರಿಗೆ ಕಡಿದು, ಎರಡು ತುಂಡು ಮಾಡಿದ ಮೇಲೆ, ಕುದುರೆಗೆ ಆರತಿ ಬೆಳಗಿದ ನಂತರವೇ ವಾಡೆಯೊಳಗೆ ಪ್ರವೇಶ ಮಾಡಬೇಕಿತ್ತು!”

ಹನ್ನೆರಡನೇ ಶತಮಾನದಲ್ಲಿಯೇ ಹೆಣ್ಣಿಗೆ ಸಮಾನ ಸ್ಥಾನ ನೀಡಿದ್ದ ಲಿಂಗಾಯತ ಧರ್ಮದ ವಿರುದ್ಧವಾಗಿ, ಘೋಷಾ ಪದ್ಧತಿಯನ್ನು ರೂಢಿಸಲಾಗಿತ್ತು. “ನಮ್ಮ ಘರಾಣೆಯಲ್ಲಿ ಘೋಷಾ ಪದ್ಧತಿ ಪಾಲಿಸುತ್ತಿದ್ದರು. ಇದು ಸಮಾಜದ ಮೇಲ್ವರ್ಗದ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ಮುಸ್ಲಿಮರಂತೆ ಎಲ್ಲ ವತನದಾರ/ಇನಾಮದಾರ ಘರಾಣೆಗಳಲ್ಲೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು” ಎಂದು ಸ್ವಾತಂತ್ರ್ಯ ಪೂರ್ವದ ಲಿಂಗಾಯತ ಹೆಣ್ಣುಮಕ್ಕಳ ಮೇಲಿನ ಸಂಕೋಲೆಗಳ ಬಗ್ಗೆ ಶಿವಲಿಂಗರಾವ್ ದೇಶಮುಖರು ದಾಖಲಿಸುತ್ತಾರೆ. ಎಲ್ಲರೂ ಸಮಾನರು ಎಂದಿದ್ದ ಲಿಂಗಾಯತ ಧರ್ಮವು ಹರಿದು ಹಂಚಿ ಹೋಗಿತ್ತು. ಪ್ರತಿ ಪಂಗಡವೂ ತಮ್ಮ ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದವು. ಪಂಚಮಸಾಲಿ ಸಮಾಜಕ್ಕೆ ನಾಯಕರಿಲ್ಲದೆ ‘ಎತ್ತಿಕೊಂಡವರ ಕೂಸು’ ಎನ್ನುವಂತಾಗಿತ್ತು.

ಸವಾಲಿನ ಕಾರ್ಯ

ಇಂತಹ ಹಿನ್ನೆಲೆಯುಳ್ಳ ಸಮಾಜದ ಸಂಘಟನೆಯು ಸವಾಲಿನ ಕೆಲಸವಾಗಿತ್ತು. ಈ ಕಾರ್ಯಕ್ಕೆ ಶ್ರೀಯುತರಾದ ಸಂಗಪ್ಪ ಸೊರಟೂರ, ಶ್ರೀಪಾದಪ್ಪ ಅಧಿಕಾರಿ ಅವರು ಪ್ರಥಮ ಹೆಜ್ಜೆಯನ್ನಿಟ್ಟರು. ಇವರೊಂದಿಗೆ ಬಿನ್ನಾಳದ ಕೊಟ್ರಪ್ಪನವರು, ಬಸಪ್ಪ ಭೂತೆಯವರು, ಮುನಿಯಪ್ಪ ಹುಬ್ಬಳ್ಳಿಯವರು, ಶೇಖರಗೌಡ ಉಳ್ಳಾಗಡ್ಡಿಯವರು, ಬಿ. ಜಿ. ಕೊಟ್ರೇಶರವರು ಇದ್ದರು. ಇವರಿಗೆ ಯಲಬುರ್ಗಾ ತಾಲ್ಲೂಕಿನ ಅಂದಾನಪ್ಪ ಬೆಣಕಲ್, ಶರಣಪ್ಪ ಕೊತಬಾಳ, ಬಸವರಾಜ ಪಲ್ಲೇದ ಮುಂತಾದವರು ಮತ್ತು ಕೊಪ್ಪಳ ಜಿಲ್ಲೆಯ ಹಿರಿಯರು ಕೈಜೋಡಿಸಿದರು.

ಜಾಗೃತವಾದ ವಿರೋಧಿ ಪಡೆ

ಅತ್ಯಂತ ವ್ಯವಸ್ಥಿತವಾಗಿ ಸಂಘಟನೆ ಮಾಡಿ, ಯಲಬುರ್ಗಾ ಸಮಾವೇಶವನ್ನು ಯಶಸ್ವಿಗೊಳಿಸಿದ ಸಂಘಟನಕಾರ ಶ್ರೀಪಾದಪ್ಪ ಅಧಿಕಾರಿಯವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಲು ವಿರೋಧಿಗಳು ಷಡ್ಯಂತ್ರ ರೂಪಿಸಿದರು. ತೆರೆಮರೆಯಲ್ಲಿ ಪಂಚಮಸಾಲಿಯ ಕೆಲವು ಅತೃಪ್ತರನ್ನು ಪ್ರಚೋದಿಸಿದರು. ಅನ್ಯ ಸಮಾಜದ ವಿರೋಧಿಗಳ ಅಂತರಂಗವನ್ನು ಅರಿಯದ ಮುಗ್ಧ ಪಂಚಮಸಾಲಿಗರು ಈ ಷಡ್ಯಂತ್ರಕ್ಕೆ ಬಲಿಯಾದರು. ಪಕ್ಷ ರಾಜಕಾರಣವನ್ನು ಮುನ್ನೆಲೆಗೆ ತಂದು, “ಕಾಂಗ್ರೆಸ್ ಪಕ್ಷದ ಶ್ರೀಪಾದಪ್ಪ ಅಧಿಕಾರಿಯವರು ಈ ಸಮಾಜವನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಲಿದ್ದಾರೆ, ಅವರನ್ನು ಅಧ್ಯಕ್ಷಗಿರಿಯಿಂದ ಇಳಿಸಬೇಕು” ಎಂಬ ರಾಜಕೀಯ ದಾಳ ಉರುಳಿಸಿದರು. ವಿಷಯ ಅಧ್ಯಕ್ಷರವರೆಗೆ ತಲುಪಿತು. ಮುಂಬರುವ ದಿನಗಳ ಅರಿವಿದ್ದ ಶ್ರೀಪಾದಪ್ಪ ಅಧಿಕಾರಿಯವರು, “ನಾನು ಅಧ್ಯಕ್ಷ ಪದವಿಯಲ್ಲಿ ಸುತಾರಾಂ ಮುಂದುವರಿಯುವುದಿಲ್ಲ” ಎಂದು ಹೇಳಿ ಹೊರನಡೆದರು. “ರಾಜಕಾರಣಿಗಳ ಆಕಾಂಕ್ಷೆಗಳಿಗೆ ಒಳಪಡುವ ಸಂಘಗಳು ಪಕ್ಷಾತೀತವಾಗಿರಲಾರವು. ಸಾಮಾಜಿಕ ಉನ್ನತೀಕರಣದ ಉದ್ದೇಶ ಹೊಂದಿರುವ ಪಂಚಮಸಾಲಿ ಸಂಘವು ರಾಜಕೀಯ ನಾಯಕರ ಕೈಗೊಂಬೆಯಾಗಬಾರದು” ಎಂದರು ಚಿಂತಕರಾದ ಬ್ಯಾಳಿ ಮೇಷ್ಟ್ರು.

ಹನುಮನಾಳ ಗುರುಗಳ ಆಯ್ಕೆ

ಯಲಬುರ್ಗಾ ಸಮಾವೇಶಕ್ಕೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬಾಂಧವರು ಭಾಗವಹಿಸಿದ್ದರೂ, ಸಂಘದ ಆಗುಹೋಗುಗಳಿಗೆ ಅವರು ಹೆಚ್ಚು ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಸಂಘವು ಕೊಪ್ಪಳ ಜಿಲ್ಲೆಗೆ ಸೀಮಿತವಾಗಿತ್ತು. ಕೊಪ್ಪಳ ನಗರದ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಹೈಸ್ಕೂಲ್ ಮುಖ್ಯ ಶಿಕ್ಷಕರಾಗಿದ್ದ ಹನುಮನಾಳ ಗುರುಗಳು ಹಿರಿಯರೂ ಮತ್ತು ಪಕ್ಷಪಾತವಿಲ್ಲದವರೂ ಆಗಿದ್ದರು. ಅವರೇ ಅಧ್ಯಕ್ಷರಾಗಲಿ ಎಂದರು ಬ್ಯಾಳಿ ಮೇಷ್ಟ್ರು. ಅಧ್ಯಕ್ಷರ ಬದಲಾವಣೆಯಾಗುವುದಾದರೆ ಸಂಘದ ನೊಂದಣಿಯಾಗಲಿ ಎಂದರು ತರಣ ಶರಣಪ್ಪ ರಾಂಪೂರ. ಎಲ್ಲರ ಆಸೆಯಂತೆ ಬೆಂಗಳೂರಿನ ಗಾಂಧಿನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ೧೯೯೪ರ ಸೆಪ್ಟೆಂಬರ್ ತಿಂಗಳಲ್ಲಿ “ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ”ವು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆಯಡಿ (ರಿ. ನಂ. ೪/೩೨/೯೪-೯೫) ನೋಂದಾಯಿಸಲ್ಪಟ್ಟಿತು. ಇದಕ್ಕೆ ಎಂ. ಪಿ. ಪ್ರಕಾಶರವರ ಆಪ್ತ ಸಹಾಯಕರಾಗಿದ್ದ ಕೊಟ್ರಪ್ಪನವರ ಸಹಾಯ ಮರೆಯುವಂತಿಲ್ಲ.

ಬಂದೇ ಬಿಟ್ಟಿತು ಪಂಚಮಸಾಲಿಗರ ಪರೀಕ್ಷಾ ಕಾಲ

ಯಲಬುರ್ಗಾ ಸಮಾವೇಶದ ಎರಡು ತಿಂಗಳ ನಂತರ, ನವೆಂಬರ್ ೨೯ರ ವಿಧಾನಸಭಾ ಚುನಾವಣೆಯತ್ತ ರಾಜ್ಯದ ಗಮನವಿತ್ತು. ಪಂಚಮಸಾಲಿ ಸಮಾಜವು ಜಾಗೃತಿಯ ಗಂಟೆಯನ್ನು ಈಗಾಗಲೇ ಬಾರಿಸಿತ್ತು. ಶತಮಾನಗಳಿಂದ ಸಮಾಜದ ನಾಯಕರಾಗಿ ಮೆರೆದ ಪಂಚಮಸಾಲಿಗಳಿಗೆ ರಾಜಕೀಯ ಪ್ರಜ್ಞೆ ಅಪಾರ. ಇದು ವರವೂ ಹೌದು, ಶಾಪವೂ ಹೌದು. ಲಿಂಗಾಯತರು, ಅದರಲ್ಲೂ ಪಂಚಮಸಾಲಿಗಳು ಮೂಲತಃ ಸಂಸ್ಥಾ ಕಾಂಗ್ರೆಸ್ಸಿನ ಅನುಯಾಯಿಗಳು. ಸ್ವಾತಂತ್ರ್ಯ ಹೋರಾಟಗಾರ ಎಸ್. ನಿಜಲಿಂಗಪ್ಪನವರು ಈ ಸಮಾಜದವರು. ಸ್ವಾತಂತ್ರ್ಯ ಪೂರ್ವದ ದೇಶಮುಖ, ದೇಸಾಯಿ, ಪಾಟೀಲ, ಗೌಡರು ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ವಿಭಜನೆಯಾದಾಗ ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್ ಬೆಂಬಲಿಗರಾಗಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಅಲೆ, ದೇವರಾಜ ಅರಸು ಅವರ ನಾಯಕತ್ವದಲ್ಲಿ ಬಂದ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯು ಇವರ ಜಮೀನುಗಳನ್ನು ಕೊಚ್ಚಿಕೊಂಡು ಹೋಗಿತ್ತು. ಇದು ಈ ಸಮಾಜದ ಅನೇಕ ಜಮೀನ್ದಾರರನ್ನು ನಿಷ್ಕ್ರಿಯಗೊಳಿಸಿತ್ತು. ಇದರೊಂದಿಗೆ ಎಸ್. ನಿಜಲಿಂಗಪ್ಪನವರು ಮತ್ತು ವೀರೇಂದ್ರ ಪಾಟೀಲರು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದರು. ಇದು ಲಿಂಗಾಯತರಿಗೆ ತೀವ್ರ ನೋವನ್ನುಂಟು ಮಾಡಿತ್ತು. “ಲಿಂಗಾಯತರ ವಿರೋಧಿ ಕಾಂಗ್ರೆಸ್” ಎಂಬ ಅಲೆ ಸೃಷ್ಟಿಯಾಗಿತ್ತು. ೧೯೯೪ರ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಪಂಚಮಸಾಲಿಗರು ಪ್ರತಿರೋಧ ತೋರಲು ಅಣಿಯಾದರು. ಜನತಾದಳದಲ್ಲಿ ಜೆ. ಎಚ್. ಪಟೇಲರು ಪ್ರಬಲರಾಗಿ ಬೆಳೆದಿದ್ದರು.

೧೯೯೪ ಚುನಾವಣೆಯಲ್ಲಿ ಪಂಚಮಸಾಲಿ ಯುವನಾಯಕರ ಜಯ

ಉತ್ತರ ಕರ್ನಾಟಕದಲ್ಲಿ ಇದು ಕಾಂಗ್ರೆಸ್ vs ಜನತಾದಳದ ಚುನಾವಣೆಯಾಗಿರದೆ, ಪಂಚಮಸಾಲಿ vs ಅನ್ಯ ಸಮಾಜಗಳ ಚುನಾವಣೆಯಾಗಿ ಮಾರ್ಪಟ್ಟಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಪಂಚಮಸಾಲಿ ಸಮಾಜದ ಬೆಂಬಲದಿಂದ ಜನತಾದಳವು ಸರಳ ಬಹುಮತ (೧೧೫) ಪಡೆಯಿತು. ಇಡೀ ಸದನದ ೧/೧೦ ಭಾಗ ಪಂಚಮಸಾಲಿ ಸಮಾಜದವರೇ ಆಗಿದ್ದರು. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ, ತಿಕೋಟಾ, ಇಂಡಿ, ಸಿಂದಗಿ, ಬಿಜಾಪುರ ಪಟ್ಟಣ ಕ್ಷೇತ್ರಗಳಲ್ಲಿ ಯುವಕರು ಮೊದಲ ಬಾರಿ ಶಾಸಕರಾದರು.

WhatsApp Image 2026 06 10 at 11.26.25 AM

ಬಸವನ ಬಾಗೇವಾಡಿಯಲ್ಲಿ ಬಿ. ಎಸ್. ಪಾಟೀಲ ಮನಗೂಳಿ ಆರನೇ ಬಾರಿ, ಹುನಗುಂದದ ಎಸ್. ಆರ್. ಕಾಶಪ್ಪನವರು ಎರಡನೇ ಬಾರಿ ಆಯ್ಕೆಯಾದರು. ಬೆಳಗಾವಿ ಜಿಲ್ಲೆಯ ಸೌದತ್ತಿಯಲ್ಲಿ ಚಂದ್ರಶೇಖರ ಮಾಮಣಿ ಮೂರನೇ ಬಾರಿ ಗೆದ್ದರು. ಧಾರವಾಡ ಜಿಲ್ಲೆಯಲ್ಲಿ ಶಿರಹಟ್ಟಿ, ರೋಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕರು ಪ್ರಪ್ರಥಮ ಬಾರಿ ಗೆಲುವು ಸಾಧಿಸಿದರು. ಕಲಘಟಗಿಯಲ್ಲಿ ಪಿ. ಸಿ. ಸಿದ್ದನಗೌಡರು ಸತತ ಮೂರನೇ ಬಾರಿ ಶಾಸಕರಾದರು. ಒಟ್ಟಾರೆಯಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸಮಾಜವು ೩೪ ಶಾಸಕರನ್ನು ಹೊಂದಿತು. ಇವರೆಲ್ಲರ ನಾಯಕ ಜೆ. ಎಚ್. ಪಟೇಲರು ಮುಂದೆ ಮುಖ್ಯಮಂತ್ರಿಗಳಾದರು.

WhatsApp Image 2026 06 10 at 11.27.31 AM1
ಚಂದ್ರಶೇಖರ ಮಾಮಣಿ

(ಕೊಲ್ಹಾರ ದೇಸಾಯಿಯವರು ಲಿಂಗಾಯತ ಗಾಣಿಗ ಸಮಾಜದವರು ಮತ್ತು ಆಲಮೇಲದ ಶಿವಲಿಂಗರಾವ್ ದೇಶಮುಖರು ಪಂಚಮಸಾಲಿ ಸಮಾಜದವರು. ಉಲ್ಲೇಖ: ಆಲಮೇಲ ಶಿವಲಿಂಗರಾವ್ ದೇಶಮುಖರ ಆತ್ಮಕಥನ)

ಮುಂದುವರಿಯುವುದು…

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...